ಅಭಿವ್ಯಕ್ತಿ
ಮಾರುತೀಶ್ ಅಗ್ರಾರ
ದಿನ ಕಳೆದಂತೆ ಉಕ್ರೇನ್ ರಷ್ಯಾದಿಂದ ದೂರವಾಗುತ್ತ, ನ್ಯಾಟೋ ದೇಶಗಳೊಂದಿಗೆ ಸ್ನೇಹ ಮಾಡುತ್ತ ಮುಕ್ತ ಪ್ರಜಾಪ್ರಭುತ್ವದ ಕಡೆ ಹೆಜ್ಜೆ ಹಾಕುತ್ತಿದೆ. ಉಕ್ರೇನ್ ಈಗ ವಿಶ್ವದ ಬಲಾಢ್ಯ ದೇಶಗಳೊಂದಿಗೆ ಸ್ನೇಹ ಬೆಳೆಸುತ್ತಿದೆ. ಅಷ್ಟೇ ಅಲ್ಲ ಅಮೆರಿಕ, ನ್ಯಾಟೋ ದೇಶಗಳ ಜೊತೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದೆ.
ಸದ್ಯಕ್ಕೆ ಇಡೀ ಜಗತ್ತೇ ಉಕ್ರೇನಿನ ಕಡೆ ನೋಡುತ್ತಿದೆ. ರಷ್ಯಾದ ದಾಳಿಗೆ ಉಕ್ರೇನಿನ ರಸ್ತೆ ಗಳು ರಕ್ತದಿಂದ ತೋಯ್ದಿವೆ! ಸಾವಿರಾರು ನಾಗರಿಕರು, ಉಕ್ರೇನ್ ಸೈನಿಕರು, ಮಕ್ಕಳು, ವೃದ್ಧರು ರಷ್ಯಾ ದಾಳಿಗೆ ಬಲಿಯಾಗಿದ್ದಾರೆ.
ಉಕ್ರೇನ್‌ನ ಆಸ್ಪತ್ರೆಗಳು, ಶಾಲಾ-ಕಾಲೇಜು ಗಳು, ಹಾಸ್ಟೆಲ್, ಬಹುಮಹಡಿ ಕಟ್ಟಡ, ಸರಕಾರಿ ಆಫೀಸುಗಳು, ಅಣುಸ್ಥಾವರ ಕೇಂದ್ರ, ಮಿಲಿಟರಿ ಕೇಂದ್ರ ಹೀಗೆ ನಾನಾ ರೀತಿಯ ಸ್ಥಳಗಳ ಮೇಲೆ ರಷ್ಯಾ ಶೆಲ್ ದಾಳಿ, ಬಾಂಬ್ ದಾಳಿ ಹಾಗೂ ರಾಕೆಟ್ ದಾಳಿ ಮಾಡಿದೆ. ರಷ್ಯಾ ಸೈನಿಕರು ಕಂಡ ಕಂಡವರ ಮೇಲೆ ಗುಂಡಿನ ಮಳೆ ಸುರಿಸಿದ್ದಾರೆ. ಅದರಲ್ಲೂ ಉಕ್ರೇನಿನ ಬುಚಾ ನಗರದಲ್ಲಿ ರಷ್ಯಾ ಸೈನಿಕರು ಅಕ್ಷರಶಃ ಅಟ್ಟಹಾಸ ಮೆರೆದಿದ್ದಾರೆ. ರಾಜಧಾನಿ ಕಿವ್, ಖಾರ್ಕಿವ್, ಖೇರ್ಸನ್ ನಗರ, ಮರಿಯುಪೋಲ್, ಒಡೆಸಾ, ಉತ್ತರದ ಶೆರಿನಿಯೇವ್ ಇನ್ನು ಅನೇಕ ಪ್ರದೇಶಗಳ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸುವ ಮೂಲಕ ಇಡೀ ಉಕ್ರೇನ್‌ನನ್ನು ಸಂಪೂರ್ಣ ರಕ್ತಮಯ ಮಾಡಿದೆ.
ಅನೇಕ ಕಡೆ ರಷ್ಯಾ ಸೈನಿಕರು ನೆಲಬಾಂಬ್ ಇಟ್ಟಿರುವ ಕಾರಣ ಉಕ್ರೇನಿನ ಬೀದಿಗಳಲ್ಲಿ ಸಿಗುತ್ತಿರುವ ಅನಾಥ ಹೆಣಗಳ ಸಂಖ್ಯೆ ಜಾಸ್ತಿ ಯಾಗುತ್ತಿದೆ! ಪರಿಣಾಮ ಈಗ ಉಕ್ರೇನ್ ಅಕ್ಷರಶಃ ಸ್ಮಶಾನದಂತೆ ಕಾಣಿಸುತ್ತಿದೆ. ವಿಶ್ವ ಸಂಸ್ಥೆಯ ಒಂದು ವರದಿಯ ಪ್ರಕಾರ ಇದುವರೆಗೂ ಉಕ್ರೇನ್ ಬಿಟ್ಟು ಹೋದವರ ಸಂಖ್ಯೆ ನಲವತ್ತೈದು ಲಕ್ಷ ದಾಟಿದೆಯಂತೆ.
ಇನ್ನು ರಷ್ಯಾ ದಿನೇ ದಿನೇ ದಾಳಿಯ ತೀವ್ರತೆಯನ್ನುಚ್ಚಿಸುತ್ತಿದೆ. ಜೊತೆಗೆ ಉಕ್ರೇನಿನ ಮೇಲೆ ನಾನಾ ಒತ್ತಡಗಳನ್ನು ಹಾಕುತ್ತಿದೆ. ಆದರೂ ಉಕ್ರೇನ್ ರಷ್ಯಾಗೆ ಹೆದರುತ್ತಿಲ್ಲ ಹಾಗು ಸುಲಭವಾಗಿ ಬಗ್ಗುತ್ತಾನೂ ಇಲ್ಲ! ಅತ್ಯಾಧುನಿಕ ಶಸಾಸಗಳನ್ನು ರಷ್ಯಾ ಹೊಂದಿದ್ದರೂ ಯುದ್ಧ ಆರಂಭವಾಗಿ ಒಂದುವರೆ ತಿಂಗಳು ಕಳೆದರೂ ಉಕ್ರೇನಿನ ಯಾವೊಂದು ಪ್ರದೇಶವನ್ನು ಸಂಪೂರ್ಣವಾಗಿ ತನ್ನ ಕೈವಶ ಮಾಡಿ ಕೊಳ್ಳುವುದಕ್ಕೆ ರಷ್ಯಾಗೆ ಸಾಧ್ಯವಾಗಿಲ್ಲ ಎಂದರೆ ಉಕ್ರೇನಿನ ಪ್ರತಿರೋಧ ಹೇಗಿರಬೇಕು ಯೋಚಿಸಿ.
ಫೆ.೨೪ರಂದು ರಷ್ಯಾ ಉಕ್ರೇನ್ ಮೇಲೆ ದಾಳಿ ಆರಂಭಿಸಿದಾಗ ಉಕ್ರೇನ್ ರಷ್ಯಾಕ್ಕೆ ಸುಲಭವಾಗಿ ಶರಣಾಗಬಹುದೆಂದೇ ಎಲ್ಲರೂ ಭಾವಿಸಿದ್ದರು. ಯಾಕೆಂದರೆ ಬಲಾಢ್ಯ ರಷ್ಯಾ ಎದುರು ಹೋರಾಡುವ ಕ್ಷಮತೆ ಉಕ್ರೇನ್‌ಗೆ ಎಲ್ಲಿದೆ? ಅದೊಂದು ಬಡ ರಾಷ್ಟ್ರ. ಹಾಗಾಗಿ
ರಷ್ಯಾಗೆ ಸರಿಸಮಾನವಾಗಿ ನಿಲ್ಲುವ ಶಕ್ತಿ ಉಕ್ರೇನಿಗಿಲ್ಲ ಎಂಬುದೇ ಅನೇಕರ ವಾದವಾಗಿತ್ತು. ರಷ್ಯಾ ಆರ್ಥಿಕವಾಗಿಯೂ, ರಕ್ಷಣಾ ಕ್ಷೇತ್ರದಲ್ಲಿಯೂ, ಮಿಲಿಟರಿ ಶಕ್ತಿಯಲ್ಲೂ ಹಾಗೂ ಇನ್ನು ಅನೇಕ ಕ್ಷೇತ್ರಗಳಲ್ಲಿ ಸಾಕಷ್ಟು ಮುಂದುವರೆದಿದೆ.
ಅದರಲ್ಲೂ ರಷ್ಯಾ ರಕ್ಷಣಾ ಕ್ಷೇತ್ರದಲ್ಲಿ ಜಗತ್ತಿನ ಮೊದಲ ಐದು ರಾಷ್ಟ್ರಗಳ ಜತೆ ಸ್ಥಾನ ಗಳಿಸುವ ಮೂಲಕ ಬಲಿಷ್ಠ ರಾಷ್ಟ್ರ ಎನಿಸಿಕೊಂಡಿದೆ. ಜತೆಗೆ ರಷ್ಯಾ, ಭಾರತವೂ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದೆ. ಇಷ್ಟೆ ಸೂಪರ್ ಪವರ್ ದೇಶ ವಾಗಿರುವ ರಷ್ಯಾಗೆ ಉಕ್ರೇನ್ ಎನ್ನುವ ಒಂದು ಬಡ ದೇಶ ಯುದ್ಧಕ್ಕು ಮುಂಚೆ ಸೊಳ್ಳೆಯಂತೆ ಕಂಡಿತು.
ರಷ್ಯಾದ ಸೇನಾ ಜನರಲ್‌ಗಳು, Zಡಿ ಅಧಿಕಾರಿಗಳು ಇನ್ನು ಅನೇಕರು ಅಧ್ಯಕ್ಷ ಪುಟಿನ್‌ಗೆ ಉಕ್ರೇನ್ ಮೇಲೆ ಯುದ್ಧಕ್ಕಿಳಿದರೆ ಅದು (ಉಕ್ರೇನ್) ನಮಗೆ ಲೆಕ್ಕವೇ ಅಲ್ಲ, ಉಕ್ರೇನ್ ಸುಲಭವಾಗಿ ನಮ್ಮ ವಶ ಆಗೋದು ಗ್ಯಾರೆಂಟಿ ಎನ್ನುವ ಅತಿಯಾದ ಆತ್ಮವಿಶ್ವಾಸ ತುಂಬಿದ್ದರು. ತಕ್ಷಣವೇ ಉಕ್ರೇನಿನ ಗಡಿ ಅಂಚಿಗೆ ಸೈನ್ಯವನ್ನು ಭಾರೀ ಪ್ರಮಾಣದಲ್ಲಿ ನಿಯೋಜಿಸಿದ ಪುಟಿನ್ ಪರೋಕ್ಷವಾಗಿ ಉಕ್ರೇನ್‌ಗೆ
ಯುದ್ಧದ ಸುಳಿವು ಕೊಟ್ಟರು. ಉಕ್ರೇನ್ ಮೇಲಿನ ಪುಟಿನ್ನರ ಯುದ್ಧೋನ್ಮಾದ ನಡೆಗೆ ಕೆರಳಿ ಕೆಂಡವಾದ ಅಮೆರಿಕ, ಬ್ರಿಟನ್ ಹಾಗೂ ನ್ಯಾಟೋ ದೇಶಗಳು ರಷ್ಯಾ ವಿರುದ್ಧ ತಿರುಗಿ ಬಿದ್ದವು.
ಒಂದು ವೇಳೆ ರಷ್ಯಾ ಉಕ್ರೇನ್ ಮೇಲೆ ಯುದ್ಧಕ್ಕೆ ನಿಂತರೆ ನಾವೆಲ್ಲ ಉಕ್ರೇನ್‌ಗೆ ಬೆಂಬಲವಾಗಿ ನಿಲ್ಲುತ್ತೇವೆ ಎಂದು ಅಮೆರಿಕ, ಬ್ರಿಟನ್, ಫ್ರಾನ್ಸ್ ಹಾಗೂ ನ್ಯಾಟೋ ದೇಶಗಳು ಉಕ್ರೇನ್‌ಗೆ ಬೆಂಬಲ ಘೋಷಿಸಿದವು. ರಷ್ಯಾ ಅಂದುಕೊಂಡಂತೆ ಈಗ ಯಾವುದು ನಡೆಯುತ್ತಿಲ್ಲ! ಒಂದು ವರದಿಯ ಪ್ರಕಾರ ಉಕ್ರೇನ್ ಸೈನಿಕರು ರಷ್ಯಾದ ನಾಲ್ವರು ಸೇನಾ ಜನರಲ್‌ಗಳನ್ನೇ ಕೊಂದು ಹಾಕಿದ್ದಾರೆ ಎನ್ನುವ ಮಾತುಗಳು ಕೇಳಿ ಬರು ತ್ತಿವೆ. ಉಭಯ ದೇಶಗಳ ನಡುವೆ ಸಾವಿರಾರು ಸಾವು ನೋವುಗಳು, ಆರ್ಥಿಕ ಪರಿಸ್ಥಿತಿ ತೀರಾ ಹದಗೆಡುತ್ತಿದ್ದರೂ ಕದನ ವಿರಾಮಕ್ಕೆ ಉಭಯ ದೇಶಗಳು ಮುಂದಾಗುತ್ತಿಲ್ಲ.
ರಷ್ಯಾ ಕದನ ವಿರಾಮ ಘೋಷಿಸಿದರೆ ಜಾಗತಿಕವಾಗಿ ತನ್ನ ವರ್ಚಸ್ಸನ್ನು ಕಳೆದುಕೊಳ್ಳುವ ಭೀತಿಯಿಂದ ಯುದ್ಧ ಮುಂದುವರೆಸುತ್ತಿದೆ. ಇನ್ನು ಉಕ್ರೇನ್‌ಗೆ ಇಷ್ಟೆ ಹೋರಾಡಿ ಈಗ ರಣರಂಗದಿಂದ ಹಿಂದೆ ಸರಿಯುವುದು ಇಷ್ಟವಿಲ್ಲ. ಮಾಡು ಇಲ್ಲವೇ ಮಡಿ ಎಂಬ ಹೋರಾಟ
ಉಕ್ರೇನಿನದ್ದು. ಉಕ್ರೇನ್ ಈಗಾಗಲೇ ಸಾಕಷ್ಟು ಹಾನಿಗೀಡಾಗಿದ್ದರೂ ರಣಭೂಮಿಯಿಂದ ಹೊರಬರದೆ ರಷ್ಯಾಗೆ ಪ್ರಬಲ ಪ್ರತಿರೋಧ ಒಡ್ಡುತ್ತಿರುವ ರೀತಿಯನ್ನು ಯಾರೇ ಆದರೂ ಮೆಚ್ಚಬೇಕಾದದ್ದೇ. ಇಂಥ ಸಂಕಷ್ಟದ ಸಮಯದಲ್ಲೂ ದೇಶವನ್ನು ಮುನ್ನಡೆಸುತ್ತಿರುವ
ಉಕ್ರೇನ್ ಪ್ರಧಾನಿ ವೊಲೋಡಿಮಿರ್ ಜೆಲೆನ್ಸ್ಕಿ ಅವರ ಧೈರ್ಯವನ್ನು ಹಾಗು ಯಾವುದೇ ಕಾರಣಕ್ಕೂ ರಷ್ಯಾ ಮುಂದೆ ತನ್ನ ದೇಶ ಮಂಡಿಯೂರಬಾರದೆನ್ನುವ ಅವರ ದೇಶಪ್ರೇಮದ ಹೋರಾಟವನ್ನು ಮೆಚ್ಚಲೇಬೇಕು.
ರಷ್ಯಾ ದಾಳಿಗೆ ಸಾವಿರಾರು ಸೈನಿಕರು, ನಾಗರಿಕರು, ಮಕ್ಕಳು ಹತರಾದರು ಹಾಗೂ ಅಪಾರ ಪ್ರಮಾಣದ ಆರ್ಥಿಕ ನಷ್ಟ ಸಂಭವಿಸಿದ್ದರೂ ಎದೆಗುಂದದೆ ತನ್ನ ದೇಶದ ಪ್ರಜೆಗಳಲ್ಲಿ ಹೋರಾಟದ ಕಿಚ್ಚು ಹೊತ್ತಿಸಿ ರಷ್ಯಾಗೆ ಸರಿಯಾಗಿಯೇ ತಿರುಗೇಟು ನೀಡುತ್ತಿದ್ದಾರೆ ಜೆಲೆನ್ಸ್ಕಿ.
ಆದಾಗ್ಯೂ ರಷ್ಯಾ ಉಕ್ರೇನ್ ಪ್ರಧಾನಿ ಜೆಲೆನ್ಸ್ಕಿ ದೇಶ ಬಿಟ್ಟು ಪರಾರಿಯಾಗಿದ್ದಾರೆ ಎಂದು ಆರೋಪಿಸಿದಾಗ ಇದ್ದ ಸ್ಥಳದಿಂದಲೇ ವಿಡಿಯೋ ಒಂದನ್ನು ಬಿಡುಗಡೆ ಮಾಡಿ, ನಾನು ಹಾಗೂ ನಮ್ಮ ಅಽಕಾರಿಗಳು ಎಲ್ಲರೂ ಉಕ್ರೇನಿನ ಇದ್ದೇವೆ.
“ನಮ್ಮ ತಾಯ್ನಾಡಿನ ಸ್ವಾತಂತ್ರ್ಯವನ್ನು ಕಾಪಾಡಲು ಹೋರಾಡುತ್ತಿದ್ದೇವೆ. ಈ ಹೋರಾಟವನ್ನು ನಾವು ಮುಂದುವರೆಸುತ್ತೇವೆ ಎನ್ನುವ
ಮೂಲಕ ರಷ್ಯಾದ ಆರೋಪವನ್ನು ತಳ್ಳಿಹಾಕಿದ್ದರು. ಈ ಮಧ್ಯೆ ಉಕ್ರೇನ್ ಬಂಡುಕೋರರ ಗುಂಪು ಪ್ರಧಾನಿ ಜೆಲೆನ್ಸ್ಕಿಯ ಹತ್ಯೆ ಮಾಡುವ ಸಂಚು ರೂಪಿಸಿ ಮೂರು ಬಾರಿಯೂ ವಿಫಲವಾಯಿತು. ಆದರೆ ವ್ಲಾದಿಮಿರ್ ಪುಟಿನ್ ಮಾತ್ರ ಉಕ್ರೇನ್ ನಮ್ಮ ಶರತ್ತುಗಳಿಗೆ ಒಪ್ಪದಿದ್ದರೆ ಉಕ್ರೇನ್ ದೇಶವಾಗಿ ಉಳಿಯುವುದೇ ಅನುಮಾನ ಎನ್ನುವ ಮಾತುಗಳನ್ನಾಡುತ್ತಿದ್ದರೆ ಈ ಕಡೆ ಜೆಲೆನ್ಸ್ಕಿ, “ರಷ್ಯಾಕ್ಕೆ ನಾವೀಗ ದುಃಸ್ವಪ್ನ ವಾಗಿದ್ದೇವೆ ಹಾಗೂ ಅದು ನಮ್ಮೆದುರು ಸೋಲುವ ಭೀತಿಯಲ್ಲಿದೆ ಎನ್ನುತ್ತಿದ್ದಾರೆ.
ಉಕ್ರೇನ್ ಯಾವ ರೀತಿ ರಷ್ಯಾವನ್ನು ಭಯಭೀತಿ ಗೊಳಿಸಿದೆಯೆಂದರೆ, ರಷ್ಯಾದ ೧೯,೮೦೦ ಸೈನಿಕರು ಉಕ್ರೇನಿನ ಪ್ರತಿದಾಳಿಗೆ ಹತರಾಗಿದ್ದಾರೆ ಎಂದು ವರದಿಗಳು ಹೇಳುತ್ತಿವೆ. ಇಷ್ಟೆ ಅಲ್ಲ, ರಷ್ಯಾದ ೫೬ ವಿಮಾನಗಳು, ೫೨ ಹೆಲಿಕಾಪ್ಟರ್, ೨೮೫ ಟ್ಯಾಂಕರ್, ೨
ಹಡಗುಗಳು, ೪೫೦ ಕಾರುಗಳು, ೬೦ ಇಂಧನ ಟ್ಯಾಂಕರ್ ಗಳು, ನೂರಾರು ಮಿಲಿಟರಿ ವಾಹನಗಳು ಹಾಗೂ ಡ್ರೋನ್‌ಗಳನ್ನು ನಾಶ ಮಾಡಿರುವುದಾಗಿ ಉಕ್ರೇನ್ ಹೇಳಿದೆ. ಉಕ್ರೇನಿನ ಈ ಪ್ರತಿರೋಧ ಅನೇಕರ ಹುಬ್ಬೇರಿಸುವಂತೆ ಮಾಡಿದೆ. ಈ ಎಲ್ಲಾ ಘಟನೆಗಳಿಂದ ವಿಚಲಿತರಾಗಿರುವ ಪುಟಿನ್ ಯುದ್ಧ ಆರಂಭವಾಗಿ ಒಂದುವರೆ ತಿಂಗಳು ಕಳೆದರೂ ಉಕ್ರೇನ್‌ನನ್ನು ಸಂಪೂರ್ಣವಾಗಿ ವಶಪಡಿಸಿ ಕೊಳ್ಳಲು ವಿಫಲವಾಗಿರುವ ಹಿನ್ನೆಲೆಯಲ್ಲಿ ರಷ್ಯಾದ ಎಂಟು ಮಂದಿ ಸೇನಾ ಜನರಲ್‌ಗಳನ್ನೇ ಹುದ್ದೆಯಿಂದ ಕಿತ್ತೊಗೆದಿದ್ದಾರೆ ಎನ್ನುವ ಮಾತುಗಳು ಸಹ ಕೇಳಿಬರುತ್ತಿವೆ. ಏತನ್ಮಧ್ಯೆ ಉಕ್ರೇನ್‌ಗೆ ಬ್ರಿಟನ್, ಅಮೆರಿಕ, ಫ್ರಾನ್ಸ್ ಹಾಗೂ ನ್ಯಾಟೋ ದೇಶಗಳು ಸಂಪೂರ್ಣ
ಬೆಂಬಲ ಕೊಡುತ್ತಿರುವುದರಿಂದ ಉಕ್ರೇನ್ ಆತ್ಮವಿಶ್ವಾಸ ಹಿಮ್ಮಡಿಯಾಗಿದೆ.
ಇನ್ನೊಂದು ಕಡೆ ರಷ್ಯಾ ಮಾಧ್ಯಮವೊಂದು ಉಕ್ರೇನ್ ಪರವಾದ ವರದಿ ಪ್ರಸಾರ ಮಾಡಿದ್ದಕ್ಕೆ ಆ ಕಾರ್ಯಕ್ರಮದ ನಿರೂಪಕಿಯನ್ನೇ ಬಂಧಿಸಿ, ಗುಪ್ತ ಸ್ಥಳದಲ್ಲಿ ಇಡಲಾಗಿದೆಯೆಂದರೆ ರಷ್ಯಾ ಯಾವ ರೀತಿ ಹತಾಶೆಗೆ ಒಳಗಾಗಿದೆ ಎನ್ನುವುದು ಗೊತ್ತಾಗುತ್ತದೆ. ೧೯೯೧ರಲ್ಲಿ ಸೋವಿಯತ್ ರಷ್ಯಾ ಒಡೆದು ಚೂರು ಚೂರಾದಾಗ ಉಕ್ರೇನ್ ಕೂಡ ಅದರಿಂದ ಹೊರಬಂದು ಸ್ವಾತಂತ್ರ್ಯ ರಾಷ್ಟ್ರವಾಯಿತು. ಅಲ್ಲಿಯ ವರೆಗೂ ರಷ್ಯಾದ ಕಮ್ಯುನಿಸಂನ ಕಟು ಸಿದ್ಧಾಂತಗಳಿಂದಾಗಿ ಬೇಸತ್ತು ಹೋಗಿದ್ದ ಉಕ್ರೇನಿಯನ್ನರು ರಷ್ಯಾದ ನಿಯತ್ರಣದಿಂದ ಹೊರಬಂದು ನಿಟ್ಟುಸಿರು ಬಿಟ್ಟರು.
ದಿನ ಕಳೆದಂತೆ ಉಕ್ರೇನ್ ರಷ್ಯಾದಿಂದ ದೂರವಾಗುತ್ತ, ನ್ಯಾಟೋ ದೇಶಗಳೊಂದಿಗೆ ಸ್ನೇಹ ಮಾಡುತ್ತ ಮುಕ್ತ ಪ್ರಜಾಪ್ರಭುತ್ವದ ಕಡೆ ಹೆಜ್ಜೆ ಹಾಕುತ್ತಿದೆ. ಉಕ್ರೇನ್ ಈಗ ವಿಶ್ವದ ಬಲಾಢ್ಯ ದೇಶಗಳೊಂದಿಗೆ ಸ್ನೇಹ ಬೆಳೆಸುತ್ತಿದೆ. ಅಷ್ಟೇ ಅಲ್ಲ ಅಮೆರಿಕ, ನ್ಯಾಟೋ ದೇಶಗಳ ಜೊತೆ ಅವಿನಾಭಾವ ಸಂಬಂಧ ಇಟ್ಟುಕೊಂಡಿದೆ. ಇದು ರಷ್ಯಾಗೆ ಸಹಿಸಲು ಆಗುತ್ತಿಲ್ಲ. ಯಾಕೆಂದರೆ ತನ್ನ ಪಕ್ಕದ ಹೆಚ್ಚುತ್ತಿರುವ ಅಮೆರಿಕ, ಬ್ರಿಟನ್ ಹಾಗೂ ನ್ಯಾಟೋ ದೇಶಗಳ ಪ್ರಭಾವವನ್ನು ರಷ್ಯಾ ಸಹಿಸಿಕೊಳ್ಳಲು ಸುತಾರಾಂ ಸಿದ್ಧವಿಲ್ಲ. ಹಾಗಾಗಿ ರಷ್ಯಾ ಗುಬ್ಬಿ ಮೇಲೆ ಬ್ರಹ್ಮಾಸ್ತ್ರವೆಂಬಂತೆ ಉಕ್ರೇನ್ ಮೇಲೆ ಮುಗಿಬಿದ್ದಿದೆ. ಆದರೆ ಉಕ್ರೇನಿಯನ್ನರು ತಮ್ಮ ನೆಲದ ರಕ್ಷಣೆಗಾಗಿ ಪ್ರಾಣದ ಹಂಗು ತೊರೆದು ಹೋರಾಡುತ್ತಿದ್ದಾರೆ. ಜೊತೆಗೆ ಬಲಾಢ್ಯ ರಷ್ಯಾ ದಾಳಿಯನ್ನು ಉಕ್ರೇನ್ ಸಮರ್ಥವಾಗಿ ಎದುರಿಸುತ್ತಿದೆ.
ಆದರೆ ರಣರಂಗದಲ್ಲಿ ಯಾರ ಕೈ ಮೇಲಾಗುತ್ತದೆ ಎನ್ನುವುದನ್ನು ಕಾದು ನೋಡಬೇಕು. ಆದರೆ ಒಂದಂತೂ ಸತ್ಯ. ಅದೇನು ಗೊತ್ತೆ? ಬಲಿಷ್ಠ ರಷ್ಯಾಗೆ ಮುಟ್ಟಿ ನೋಡಿಕೊಳ್ಳುವ ಹಾಗೆ ಟಕ್ಕರ್ ಕೊಡುತ್ತಿರುವ ಉಕ್ರೇನ್ ಹೋರಾಟ! ಕೇವಲ ಐದಾರು ಕೋಟಿ ಜನಸಂಖ್ಯೆ
ಇರುವ ಪುಟ್ಟ ಬಡ ರಾಷ್ಟ್ರವೊಂದು ವಿಶ್ವದ ಪ್ರಬಲ ದೇಶವೆಂದು ಕರೆಯಿಸಿಕೊಂಡಿರುವ ರಷ್ಯಾವನ್ನು ಎದುರಿಸಿ ನಿಂತಿರುವ ಪರಿ ಅದ್ಭುತ! ಹಾಗಾಗಿಯೇ ಉಕ್ರೇನ್‌ನ ಈ ಹೋರಾಟ ಈಗ ಜಾಗತಿಕವಾಗಿ ಪ್ರಶಂಸೆಗೆ ಪಾತ್ರವಾಗಿದೆ.