Thursday, 12th December 2024

ಈ ಸ್ಥಿತಿಯಿಂದ ಹೊರಬರಲು ಕೈ ಮಾಡಬೇಕಾದ್ದೇನು ?

ವಿಶ್ಲೇಷಣೆ

ಪ್ರೊ.ಆರ್‌.ಜಿ.ಹೆಗಡೆ

ಕಾಂಗ್ರೆಸ್ ಕಳವಳಪಡಬೇಕಾದ್ದು ಉತ್ತರ ಪ್ರದೇಶ ಮತ್ತು ಪಂಜಾಬ್‌ಗಳಲ್ಲಿ ಸೋತ ಅಸಾಧಾರಣ ರೀತಿಗೆ ಮತ್ತು ಕಾರಣಗಳಿಗೆ. ಉತ್ತರ ಪ್ರದೇಶ ಏಕೆ ಮಹತ್ವದ್ದು ಎನ್ನುವುದು ಗೊತ್ತಿರುವ ವಿಷಯ. ಪಾರ್ಲಿಮೆಂಟರಿ ಚುನಾವಣೆಯಲ್ಲಿ ಅತಿ ಹೆಚ್ಚು ಸೀಟ್ ಹೊಂದಿದ ರಾಜ್ಯ. ಅಲ್ಲಿ ಯಾರು ಗೆಲ್ಲುತ್ತಾರೋ ಅವರು ಉತ್ತರ ಭಾರತವನ್ನು ಗೆಲ್ಲುತ್ತಾರೆ.

ಉತ್ತರ ಭಾರತ ಗೆದ್ದವರು ದೇಶವನ್ನು ಗೆಲ್ಲುತ್ತಾರೆ. ಇಂತಹ ರಾಜ್ಯದಲ್ಲಿ ಕಾಂಗ್ರೆಸ್ ಸೋತಿರುವ ರೀತಿ ಪಕ್ಷ ಶಾಕ್ ಆಗುವಂತಹುದು. ವಿಧಾನಸಭೆಯ ೪೦೩ ಸೀಟುಗಳಲ್ಲಿ ಪಕ್ಷ ಕೇವಲ ಎರಡನ್ನು ಗೆದ್ದಿದೆ. ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಕ್ಷೇತ್ರ ಇಂದಿರಾ ಗಾಂಽಯವರದೇ ಭದ್ರಕೋಟೆಯಾಗಿದ್ದ ರಾಯ್ ಬರೇಲಿಯಲ್ಲಿ ಅದು ಒಂದೂ ಸ್ಥಾನಗಳಿಸಿಲ್ಲ. ಭಾರೀ ದೊಡ್ಡ ಸಂಖ್ಯೆಯಲ್ಲಿ ಶೇ. 97ರಷ್ಟು ಪಕ್ಷದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದಾರೆ. ಮತ್ತೆ ಸೋಲು ಆಘಾತಕರ ವಿಷಯಗಳನ್ನು ಹೇಳಿ ಹೋಗಿದೆ. ಏನೆಂದರೆ ಬಹುಸಂಖ್ಯಾತ ಸಮಾಜ ಅಲ್ಲಿ ಸದ್ಯಕ್ಕಂತೂ ಪೂರ್ತಿಯಾಗಿ ಪಕ್ಷದ ‘ಕೈ’ ಬಿಟ್ಟಿದೆ.

ಅಷ್ಟೇ ಅಲ್ಲ. ಅಲ್ಪ ಸಂಖ್ಯಾತ ಮತ್ತು ಹಿಂದುಳಿದ ವರ್ಗಗಳು ಕೂಡ ದೂರ ಸರಿದುಬಿಟ್ಟಿವೆ. ಅಂದರೆ ಇಂದಿನ ದಿನಗಳಲ್ಲಿ ಅಲ್ಲಿ ಕಾಂಗ್ರೆಸ್‌ಅನ್ನು ಬೆಂಬಲಿಸುವವರೇ ಇದ್ದಂತಿಲ್ಲ. ಮತ್ತೆ ಪಂಜಾಬ್. ಅಲ್ಲಿ ಬಿ.ಜೆ.ಪಿ. ಬೇಡವೇ ಬೇಡವಾದವರಿಗೂ ಕೂಡ ಕಾಂಗ್ರೆಸ್ ಬೇಡ. ಅಂದರೆ ಹಿಂದುತ್ವ ರಾಜಕೀಯ ವನ್ನು ಮೆಚ್ಚಿಕೊಳ್ಳದ ಉಪಸಂಸ್ಕೃತಿ ಗಳಿಗೂ ಕಾಂಗ್ರೆಸ್ ಕುರಿತು ಒಲವಿಲ್ಲ. ಹಾಗಾಗಿಯೇ ಪಂಜಾಬ್ ಮೂರನೆಯ ಪಕ್ಷವೊಂದಕ್ಕೆ ಮತ ನೀಡಿದ್ದು. ಅಂದರೆ ಅಂತಹ ಸಂಸ್ಕೃತಿಗಳು ಬಲವಾಗಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರ ಪ್ರದೇಶ, ಮಹಾರಾಷ್ಟ್ರಗಳಲ್ಲಿ ಕೂಡ ಬಿಜೆಪಿ ಸೋತರೂ ಕಾಂಗ್ರೆಸ್ ಕುರಿತು ಜನರಿಗೆ ಆಸಕ್ತಿಯಿಲ್ಲ. ಅಂದರೆ ಕಾಂಗ್ರೆಸ್ ಸಂಪೂರ್ಣವಾಗಿ ಬಿದ್ದುಹೋಗುವ ಹಂತದಲ್ಲಿದೆ.

ನೆಹರು ಗಾಂಧಿ ಕುಟುಂಬದ ಕೊನೆಯ ಅಸ ಪ್ರಿಯಾಂಕಾ ಕೂಡ ಕ್ಲಿಕ್ ಆಗುತ್ತಿಲ್ಲ. ಜನರಿಗೆ ಮತ್ತು ಪಕ್ಷಕ್ಕೆ ಸಂವಹನ ಬಿದ್ದು ಹೋಗಿದೆ. ಹೀಗಾಗಿ ಮುಂದಿನ ಲೋಕಸಭಾ ಚುನಾವಣೆಗಳಲ್ಲಿ ನಲವತ್ತು ಸ್ಥಾನಗಳಿಗಿಂತಲೂ ಕೆಳಗೆ ಪಕ್ಷ ಇಳಿದರೂ ಆಶ್ಚರ್ಯವಿಲ್ಲ.

ಇಂತಹ ಹಿನ್ನೆಲೆಯಲ್ಲಿ ಮಹತ್ವದ  ಅಕಾಡೆಮಿಕ್ ಪ್ರಶ್ನೆ: ದೀರ್ಘ ಇತಿಹಾಸ ಹೊಂದಿರುವ, ದೇಶವನ್ನು ಐವತ್ತು ವರ್ಷಗಳಿಗಿಂತಲೂ ಹೆಚ್ಚಿನ ಕಾಲ ಆಳಿದ ಪಕ್ಷಕ್ಕೆ ಇಂತಹ ಸ್ಥಿತಿ ಏಕೆ ಬಂತು? ಮತ್ತು ಕಠಿಣ ಪರಿಸ್ಥಿತಿಯಿಂದ ಹೊರಬರಲು ಅದು ಏನು ಮಾಡಬಹುದು? ಮೊದಲನೆಯ ಪ್ರಶ್ನೆಗೆ ಕಾರಣ ಗಳು ಸ್ಪಷ್ಟವಾಗಿಯೇ ಇವೆ. ಒಂದನೆಯದು ಬಹುಶಃ ೧೯೮೪ರ ಈಚೆಗಿನ ಪಕ್ಷದ ಸೈದ್ಧಾಂತಿಕ ಗೊಂದಲ. ಎರಡನೆಯದು ಪಕ್ಷಕ್ಕಿರುವ ನಾಯಕತ್ವದ, ಸಂಘಟನಾತ್ಮಕ ಸಮಸ್ಯೆಗಳು. ಮೂರನೆಯದು ಪಕ್ಷದ ಹೊರಗೆ ಮತ್ತು ಒಳಗೆ ಸಂವಹನದ ಸಮಸ್ಯೆ.

ಎಂಭತ್ತರ ದಶಕದ ಮಧ್ಯಭಾಗದ ತನಕವೂ ಕಾಂಗ್ರೆಸ್ ಸ್ಪಷ್ಟ ಸಿದ್ಧಾಂತವನ್ನು ಹೊಂದಿತ್ತು. ಕಾಂಗ್ರೆಸ್‌ಗೆ ಸಮಸ್ಯೆ ಆರಂಭವಾಗಿದ್ದು ಆರ್ಥಿಕ  ಉದಾರೀ ಕರಣದ ಗಾಳಿ ಭಾರತಕ್ಕೆ ತಾಗಿದಂದಿ ನಿಂದ. ಮುಕ್ತ ಆರ್ಥಿಕ ನೀತಿಯ ಅನಿವಾರ್ಯತೆ ದೇಶಕ್ಕೆ ಇದ್ದುದನ್ನು ಗಮನಿಸಿದ್ದ ರಾಜೀವ್ ಗಾಂಧಿ ಪಕ್ಷವನ್ನು ಆ
ದಾರಿಯಲ್ಲಿ ಕೊಂಡೊಯ್ದರು. ಈ ಆರ್ಥಿಕ ನೀತಿಯಲ್ಲಿದ್ದ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ಹಿನ್ನೆಲೆಯಲ್ಲಿ ಪಕ್ಷ ಆರಂಭಿಸಿದ ಕ್ರಮ ಗಳಿಂದಾಗಿ ದೇಶಕ್ಕೆ ಒಳ್ಳೆಯದಾಯಿತು.

ರಾಜೀವ್ ತುಳಿದಿದ್ದ ಉದಾರೀಕರಣದ ನೀತಿಗೆ ನರಸಿಂಹರಾವ್ ಬೆಂಬಲಕೊಟ್ಟರು. ಹೊಸ ಆರ್ಥಿಕ ನೀತಿಗೆ ರೂಪುಕೊಟ್ಟ ಅವರು ಮತ್ತು ಅಂದಿನ ಹಣಕಾಸು ಸಚಿವ ಮನಮೋಹನ್ ಸಿಂಗ್ ಆಗ ದೇಶದ ಮಧ್ಯಮ ವರ್ಗದ ಹೀರೋಗಳಾಗಿ ಬಿಟ್ಟರು. ಇದರಿಂದ ಬಂದ ಜನಪ್ರಿಯತೆಯಿಂದಾಗಿಯೇ
ಮನಮೋಹನ್ ಸಿಂಗ್ ನಂತರ ಪ್ರಧಾನಿಯಾಗಿದ್ದು. ಆದರೆ ಉದಾರೀಕರಣದ ನೀತಿ ಹಿಂದುಳಿದ ವರ್ಗಕ್ಕೆ ಸರಿಬರಲಿಲ್ಲ. ಸಮಾಜವಾದದಿಂದ ಮತ್ತು ಸಬ್ಸಿಡಿ ರಾಜಕೀಯದಿಂದ ದೂರವಾಗಬೇಕಾಗಿ ಬಂದ ಕಾಂಗ್ರೆಸ್ ಬಹುಶಃ ಬಡವರ ಪಕ್ಷ ಎಂದು ತನಗಿದ್ದ ಇಮೇಜನ್ನು ಕಳೆದುಕೊಂಡು ಬಿಟ್ಟಿತು. ನೀತಿಯನ್ನು ವಿರೋಧಿಸಿ ಪ್ರಾದೇಶಿಕ ‘ಸಮಾಜವಾದಿ’ ಪಕ್ಷಗಳು ಹುಟ್ಟಿಕೊಂಡವು.

ಕೆಲವು ರಾಜ್ಯಗಳಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿತು. ಈಗ ಕಾಂಗ್ರೆಸ್ ಏಕಾಏಕಿ ತನ್ನ ಆರ್ಥಿಕ ನೀತಿಯಲ್ಲಿ ಉಲ್ಟಾ ಹೊಡೆದು ಮತ್ತೆ ಸಮಾಜ ವಾದದ ಮಾತನಾಡಲಾರಂಭಿಸಿತು. ಆರ್ಥಿಕ ನೀತಿಯಲ್ಲಿ ಗೊಂದಲಕ್ಕೆ ಬಿದ್ದುಬಿಟ್ಟಿತು. ಬಹುಶಃ ಗೊಂದಲದಿಂದಾಗಿ ಹಿಂದುಳಿದ ವರ್ಗಗಳು ಹಾಗೆಯೇ ನವಮಧ್ಯಮ ವರ್ಗ ಕಾಂಗ್ರೆಸ್ ಮೇಲೆ ವಿಶ್ವಾಸ ಕಳೆದುಕೊಂಡು ಬಿಟ್ಟವು. ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳು ಪ್ರಾದೇಶಿಕ ಪಕ್ಷಗಳನ್ನು ಹುಡುಕಿಕೊಂಡು ಹೋದವು.

ಮಧ್ಯಮ ವರ್ಗ ಮತ್ತು ಉದ್ಯಮ ವರ್ಗ ಬಿ.ಜೆ.ಪಿ. ಜತೆ ಭದ್ರವಾಗಿ ನಿಂತುಬಿಟ್ಟವು. ಕಾಂಗ್ರೆಸ್ ಹಿಂದುತ್ವದ ವಿಷಯದಲ್ಲೂ ಗೊಂದಲಕ್ಕೆ ಬಿತ್ತು. ರಾಮ ಮಂದಿರದ ಬಾಗಿಲು ತೆಗೆದವರು ರಾಜೀವ್ ಗಾಂಧಿ. ನಂತರ ಬಿ.ಜೆ.ಪಿ. ಮಂದಿರವನ್ನು ತನ್ನ ಅಜೆಂಡಾದಲ್ಲಿ ಸೇರಿಸಿ ಬೃಹತ್ ಆಂದೋಲನ ಆರಂಭಿಸಿದ ನಂತರ, ಬಹುಶಃ ಕಾಂಗ್ರೆಸ್ ಇಲ್ಲಿಯೂ ಉಲ್ಟಾ ತಿರುಗಿಬಿಟ್ಟಿತು. ಅಂದರೆ ಆಂದೋಲನದ ವಿರೋಧಿಯಾಗಿ ಗುರುತಿಸಿಕೊಂಡು ಬಿಟ್ಟಿತು. ಮತ್ತೆ ಬಾಬರಿ ಸ್ಟ್ರಕ್ಚರ್ ಧ್ವಂಸಗೊಂಡಿದ್ದು ಕಾಂಗ್ರೆಸ್ ಅಧಿಕಾರಾವಧಿಯಲ್ಲೇ. ಇಂತಹ ವಿಶ್ವಾಸದ್ರೋಹವನ್ನು ಮೈನಾರಿಟಿಗಳು ಉತ್ತರ ಭಾರತದಲ್ಲಿ ಮರೆಯಲೇ ಇಲ್ಲ. ಮುಂದೆಯೂ ಗೊಂದಲದಲ್ಲೇ ಮುಂದುವರಿದ ಪಕ್ಷ ಬಹುಶಃ ಖುಷಿ ಪಡಿಸುವ ರಾಜಕೀಯಕ್ಕೆ ಇಳಿದುಬಿಟ್ಟಿತು. ಸಾಫ್ಟ್ ಹಿಂದುತ್ವದಲ್ಲಿ ತೊಡಗಿ ಕೊಂಡಿತು.

ಹೀಗಾಗಿ ಬಹುಶಃ ಒಂದು ಕಡೆಯಿಂದ ಹಿಂದೂ ಸಮಾಜ ಮತ್ತು ಇನ್ನೊಂದು ಕಡೆಯಿಂದ ಮುಸ್ಲಿಂ ಸಮಾಜ ಇವೆರಡೂ ಕಾಂಗ್ರೆಸ್ ಮೇಲೆ ವಿಶ್ವಾಸ ಕಳೆದುಕೊಂಡುಬಿಟ್ಟವು. ಪ್ರಾದೇಶಿಕ ಪಕ್ಷಗಳು ಮುಸ್ಲಿಂ ಮತಗಳನ್ನು ಕಾಂಗ್ರೆಸ್‌ನಿಂದ ಕಿತ್ತುಕೊಂಡವು. ಬಹುತೇಕ ಬಹುಸಂಖ್ಯಾತರು ಬಿ.ಜೆ.ಪಿ.ಯನ್ನು ಬೆಂಬಲಿಸಿದರು. ಕಾಂಗ್ರೆಸ್ ಹೆಚ್ಚು ಕಡಿಮೆ ಅನಾಥವಾಗಿ ಹೋಯಿತು. ಈಗ ಪಕ್ಷ ಸೋತಿದ್ದೂ ಬಹುಶಃ ಸೈದ್ಧಾಂತಿಕ ಗೊಂದಲದಿಂದಾಗಿಯೇ. ಮುಕ್ತ ಆರ್ಥಿಕ ನೀತಿಯನ್ನು ಬಳಸಿ ಹಿಂದೆ ಕಾಂಗ್ರೆಸ್‌ಗೆ ಹೆಸರು ತಂದಿದ್ದ ಹಿರಿಯ ನಾಯಕರು ಮೌನವಾಗಿ ಬಿಟ್ಟರು. ಕೆಲವರು ಖುಷಿ ಪಡಿಸುವ ರಾಜಕೀಯ ದಲ್ಲಿ ತೊಡಗಿಕೊಂಡರು.

ಸಾಫ್ಟ್ ಹಿಂದುತ್ವದಲ್ಲಿ ತೊಡಗಿದರು. ಹೀಗೆ ಪಕ್ಷ ಏಕಕಾಲಕ್ಕೆ ಹಲವು ಧ್ವನಿಗಳಲ್ಲಿ ಮಾತನಾಡಲಾರಂಭಿಸಿತು. ಬಹುಶಃ ಪಕ್ಷದ ಉನ್ನತ ನಾಯಕತ್ವವೂ ತಾನು ನಾಯಕತ್ವ ವಹಿಸಬೇಕೇ ಬೇಡವೇ, ರಾಜಕೀಯದಲ್ಲಿ ತೊಡಗಿಕೊಳ್ಳಬೇಕೇ ಬೇಡವೇ ಇತ್ಯಾದಿ ಗೊಂದಲಗಳಲ್ಲಿ ಸಿಕ್ಕಿಬಿದ್ದು ನಾಯಕತ್ವವೇ
ಗಂಭೀರವಾಗಿಲ್ಲ ಎನ್ನುವ ಭಾವನೆ ಬಹುಶಃ ಕಾರ್ಯಕರ್ತರಲ್ಲಿ ಮೂಡಿಹೋಯಿತು. ಉತ್ತರ ಪ್ರದೇಶ ಮತ್ತು ಪಂಜಾಬ್ ಗಳಲ್ಲಿ ಕಾಂಗ್ರೆಸ್‌ನ ಅಸಾ ಧಾರಣ ಪರಾಭವದ ಕಾರಣ ಇದು. ಈಗ ಪಕ್ಷ ಎದ್ದು ನಿಲ್ಲುವುದು ಹೇಗೆ? ಕಾಂಗ್ರೆಸ್‌ಗೆ ಕೆಲವು ಐತಿಹಾಸಿಕ ಶಕ್ತಿಗಳಿವೆ. ದೇಶದ ಪ್ರತಿಯೊಂದು ವ್ಯಕ್ತಿಗೂ ಕಾಂಗ್ರೆಸ್ ಗೊತ್ತಿದೆ. ಅದರ ಚಿಹ್ನೆ ಗೊತ್ತಿದೆ. ಹಾಗಾಗಿ ಪಕ್ಷವನ್ನು ಹೊಸದಾಗಿ ಪರಿಚಯಿಸುವ ಸಮಸ್ಯೆ ಇಲ್ಲ.

ಪಕ್ಷಕ್ಕೆ ದೇಶಾದ್ಯಂತ ಕೋಟಿಗಟ್ಟಲೆ ಕಾರ್ಯಕರ್ತರಿದ್ದಾರೆ. ಸದ್ಯದಲ್ಲಿ ಅವರು ನಿರುತ್ಸಾಹದಲ್ಲಿರಬಹುದು. ಆದರೆ ಅವರು ಇದ್ದಾರೆ. ದೇಶಾದ್ಯಂತ ನೂರಾರು ಒಳ್ಳೆಯ ನಾಯಕರುಗಳೂ ಇದ್ದಾರೆ. ಅಂದರೆ ನೆಟ್‌ವರ್ಕ್ ಇದೆ. ದೇಶದ ಜನ ಪರಂಪರಾಗತವಾಗಿ ಬೆನಿಫಿಟ್ ಆಫ್ ಡೌಟ್‌ಅನ್ನು ನೀಡುವುದು ಕಾಂಗ್ರೆಸ್‌ಗೆ. ಅಂದರೆ ಎಲ್ಲ ಪಕ್ಷಗಳ ಕುರಿತು ಬೇಸರವಿದ್ದರೆ ಜನ ವೋಟ್ ಹಾಕುವುದು ಕಾಂಗ್ರೆಸ್‌ಗೆ. ೧೯೮೦ರ ಮತ್ತು ೨೦೦೪ರ ಪಾರ್ಲಿಮೆಂಟರಿ  ಚುನಾ ವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದ್ದು ಹೀಗೆ.

ಕಾಂಗ್ರೆಸ್ ಸರಿಯಾಗಿರಬೇಕೆಂದೇನೂ ಇಲ್ಲ. ಬೇರೆ ಪಕ್ಷಗಳು ತಪ್ಪು ಮಾಡಿದರೂ ಕಾಂಗ್ರೆಸ್ ಗೆಲ್ಲುತ್ತದೆ. ನಕಾರಾತ್ಮಕ ಮತಗಳ ಪ್ರಯೋಜನ ಕಾಂಗ್ರೆಸ್‌ಗೆ ಸಿಗುವಷ್ಟು ಬೇರೆ ಯಾವ ಪಕ್ಷಕ್ಕೂ ಸಿಗುವುದಿಲ್ಲ. ಬಿಜೆಪಿ ಗೆಲ್ಲುವುದು ಸಕಾರಾತ್ಮಕ ಮತ ಅಂದರೆ ಜನರ ಎಚ್ಚರದ ನಿರ್ಧಾರದಿಂದಲೇ. ಕಾಂಗ್ರೆಸ್‌ಗೆ ಹಾಗಿಲ್ಲ. ಬಿಜೆಪಿ ತಪ್ಪು ಮಾಡಿಬಿಟ್ಟರೆ ಲಾಭ ಕಾಂಗ್ರೆಸ್‌ಗೆ ಹೋಗಿ ಬಿಡುತ್ತದೆ. ಕಳೆದ ವರ್ಷ ನಡೆದ ಚುನಾವಣೆಗಳಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ನಂತರ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸಾಧನೆ ಉತ್ತಮವಾಗಿದ್ದ ಕಾರಣ ಇದು.

ಪಕ್ಷ ಬಹುಶಃ ಈಗ ಆಮ್ ಆದ್ಮಿ ಪಕ್ಷದಿಂದ ಕಲಿತುಕೊಳ್ಳಬೇಕು. ಆಮ್ ಆದ್ಮಿ ಪಕ್ಷ ಬಿ.ಜೆ.ಪಿಯ ವಿರುಧ್ದ ಸೈದ್ಧಾಂತಿಕ ವಿಷಯಗಳ ಕುರಿತು ಮಾತನಾಡುವುದೇ ಇಲ್ಲ. ಅದರ ಫೋಕಸ್ ಇರುವುದು ಬರೇ ಒಳ್ಳೆಯ ಅಡಳಿತ ನೀಡುವುದರತ್ತ. ಅದಕ್ಕೆ ಮಧ್ಯಮ ವರ್ಗದ ಬೆಂಬಲವಿದೆ. ಕಾಂಗ್ರೆಸ್
ಅಧಿಕಾರಕ್ಕೆ ಮರಳಲು ಬೇಕಿರುವುದು ಈ ವರ್ಗದ ಬೆಂಬಲ. ಅದರ ಜತೆ ಬಿ.ಜೆ.ಪಿ.ವಿರೋಽ ವರ್ಗಗಳು ಸೇರಿಕೊಂಡರೆ ಚುನಾವಣೆ ಗೆಲ್ಲಲು ಸಾಧ್ಯವಾಗುತ್ತದೆ. ಬಿಜೆಪಿ ಕೇಂದ್ರಕ್ಕೆ ಮರಳಿದ ಕಾರಣ ಗುಜರಾತ್‌ನಲ್ಲಿ ಮೋದಿ ನೀಡಿದ ಅತ್ಯುತ್ತಮ ಆಡಳಿತ. ಒಂದು ರಾಜ್ಯವನ್ನು ಮಾದರಿಯಾಗುವ ರೀತಿಯಲ್ಲಿ ಅಭಿವೃದ್ಧಿಪಡಿಸಿರುವುದರಿಂದ ಅವರು ಕೇಂದ್ರಕ್ಕೆ ಬಂದರು.

ಹಾಗಾಗಿ ಈಗ ಕಾಂಗ್ರೆಸ್‌ಗೆ ಇರುವ ಉಪಾಯ ಒಂದೇ. ಏನೆಂದರೆ ತನ್ನ ಆಳ್ವಿಕೆಯ ರಾಜ್ಯದಲ್ಲಿ ಸೈದ್ಧಾಂತಿಕತೆಯ ಗೋಜಿಗೆ ಹೋಗದೆ ಮೌನವಾಗಿ ಅಸಾಧಾರಣ ಕೆಲಸ ಮಾಡಿ ಗಮನ ಸೆಳೆಯುವುದು. ಹಾಗೆಯೇ ಪಕ್ಷ ಅರ್ಥ ಮಾಡಿಕೊಳ್ಳಬೇಕು. ಈಗ ಬಿ.ಜೆ.ಪಿ ಯ ಸಮಯ. ದಿನ ನಿತ್ಯ ಬೊಬ್ಬೆ ಹೊಡೆದರೂ ಬಿ.ಜೆ.ಪಿ. ಯನ್ನು ಸೋಲಿಸಲಾಗುವುದಿಲ್ಲ. ಅಂತಹ ಪ್ರಯತ್ನ ಮತ್ತೆ ಕಾಂಗ್ರೆಸ್ ತಲೆಯ ಮೇಲೆಯೇ ತಿರುಗಿ ಬೀಳುತ್ತದೆ. ಹಾಗಾಗಿ ಈಗ ಅದು ಕಡಿಮೆ ಮಾತನಾಡಿದಷ್ಟು ಒಳ್ಳೆಯದು. ಅದು ಬಿ.ಜೆ.ಪಿ.ತಪ್ಪು ಮಾಡುವುದಕ್ಕೆ ಕಾಯಬೇಕು. ಬಹುಶಃ ತನ್ನ ನಾಯಕತ್ವದ ಮಾನಸಿಕ ಪ್ರೌಢತೆ ಯನ್ನು ಸಾಬೀತು ಪಡಿಸಬೇಕು.