– ಬಿಜೆಪಿ ಕಾರ್ಯಕಾರಣಿಗೆ ಮುತ್ತಿಗೆ ಹಾಕಲು ಮುಂದಾದ ಕಾಂಗ್ರೆಸ್
– 40% ಕಮಿಷನ್ ತಿನ್ನುವುದು ನಾಚಿಕೆಗೇಡಿನ ಸಂಗತಿ: ಪಾಟೀಲ್
ಹೊಸಪೇಟೆ(ವಿಜಯನಗರ): ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪ ಹೊತ್ತು ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ ಕೆ.ಎಸ್. ಈಶ್ವರಪ್ಪ ಅವರನ್ನು ಬಂಧಿಸು ವಂತೆ ಆಗ್ರಹಿಸಿ ಮಾಜಿ ಸಚಿವ ಎಚ್.ಕೆ. ಪಾಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಗೆ ಮುತ್ತಿಗೆ ಹಾಕಲು ಮುಂದಾದರು.
ಶನಿವಾರ ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಗೆ ಮುತ್ತಿಗೆ ಹಾಕುವ ಉದ್ದೇಶದಿಂದ ಪ್ರತಿಭಟನಾಕಾರರು ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಿಂದ ರ‌್ಯಾಲಿ ಆರಂಭಿಸಿದರು. ಕಾಂಗ್ರೆಸ್ ಕಾರ್ಯಕರ್ತರನ್ನು ನಗರದ ಕನಕದಾಸ ವೃತ್ತದಲ್ಲಿ ಪೊಲೀಸರು ತಡೆದರು. ಕಪ್ಪು ಬಾವುಟ ಹಿಡಿದು ಕೆ.ಎಸ್. ಈಶ್ವರಪ್ಪ ಅವರನ್ನು ಬಂಧಿಸಬೇಕು. ಸಂತೋಷ್ ಸಾವಿನ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಚಿವ ಎಚ್.ಕೆ. ಪಾಟೀಲ್, ನ ಖಾವುಂಗಾ ನ ಖಾನೇ ದೂಂಗಾ ಎಂದ ಪ್ರಧಾನಿ ಮೋದಿ ರಾಜ್ಯದಲ್ಲಿ ಅವರದ್ದೇ ಪಕ್ಷದ ಸಚಿವರಾದವರು ಶೇ. 40ರಷ್ಟು ಕಮೀಷನ್ ಗೆ ಒತ್ತಡ ಹಾಕಿದ ಆರೋಪ ಎದುರಿಸುತ್ತಿದ್ದು ತನಿಖೆಗೆ ಪ್ರತ್ಯೇಕ ತನಿಖಾ ತಂಡ ರಚಿಸಲಿ. ಬಿಜೆಪಿ ಸರಕಾರ ಶೇ.40ರಷ್ಟು ಕಮೀಷನ್ ಸರಕಾರ ಎಂಬುದು ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಯಿಂದ ಬಯಲಾಗಿದೆ. ಪ್ರಾಮಾಣಿಕ ಎಂದು ಪ್ರಧಾನಿ ಮೋದಿ ಬಿಂಬಿಸಿಕೊಳ್ಳುತ್ತಿದ್ದು, ಈಗಲಾದರೂ ತಮ್ಮ ಪಕ್ಷದ ನಾಯಕರ ವಿರುದ್ಧ ಕ್ರಮಕ್ಕೆ ಮುಂದಾಗಲಿ ಎಂದು ಒತ್ತಾಯಿಸಿದರು.
ಬಿಜೆಪಿ ರಾಜ್ಯ ಸರ್ಕಾರ ಕಮಿಷನ್ ದಂಧೆಯಲ್ಲಿ ಮುಳುಗಿದೆ. ಧ್ವನಿ ಎತ್ತಿದವರನ್ನು ಬೆದರಿಸುತ್ತಿದ್ದಾರೆ. ಕಮಿಷನ್ ದಂಧೆ ಬಗ್ಗೆ ಮಾತನಾಡಿದ ಸಂತೋಷ್ ಆತ್ಮಹತ್ಯೆಯು ಪೂರ್ವ ನಿಯೋಜಿತವಾಗಿದೆ. ಮಾಜಿ ಸಚಿವ ಈಶ್ವರಪ್ಪ ಅವರನ್ನು ಕೂಡಲೇ ಬಂಧಿಸಬೇಕು. ಸಂತೋಷ್ ಸಾವಿನ ತನಿಖೆಯನ್ನು ಕೇಂದ್ರ ತನಿಖಾ ದಳಕ್ಕೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ರಾಜ್ಯಸಭಾ ಸದಸ್ಯ ಸೈಯದ್ ನಾಸೀರುದ್ದೀನ್, ಶಾಸಕ ಬಿ. ನಾಗೇಂದ್ರ, ಭೀಮಾನಾಯ್ಕ್, ತುಕಾರಾಂ, ಎಂಎಲ್ ಸಿ ಅಲ್ಲಂ ವೀರಭದ್ರಪ್ಪ, ಮಾಜಿ ಸಂಸದ ಉಗ್ರಪ್ಪ, ಮಾಜಿ ಸಚಿವ ಸಂತೋಷ್ ಲಾಡ್, ಕೆಪಿಸಿಸಿ ಮಾಜಿ ಕಾರ್ಯದರ್ಶಿ ರಘು ಗುಜ್ಜಲ್, ಮಾಜಿ ಶಾಸಕ ಸಿರಾಜ್ ಶೇಕ್ , ಕೊಪ್ಪಳ ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್ ಸೇರಿ ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಇದ್ದರು.
ಬಂಧನ, ಬಿಡುಗಡೆ..
ರಾಜ್ಯ ಬಿಜೆಪಿ ಕಾರ್ಯಕಾರಣಿ ಸಭೆಗೆ ಮುತ್ತಿಗೆ ಹಾಕಲು ಮುಂದಾದ ಕಾಂಗ್ರೆಸ್ ಕಾರ್ಯಕರ್ತರನ್ನು ಕನಕದಾಸ ವೃತ್ತದಲ್ಲಿ ಬಂಧಿಸಿ ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಕರೆದೊಯ್ದರು. ಪ್ರತಿಭಟನೆ ಬಗ್ಗೆ ಮೊದಲೇ ಮಾಹಿತಿ ಇದ್ದ ಪೊಲೀಸರು ಕನಕದಾಸ ವೃತ್ತದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಿದ್ದರು. ಪ್ರತಿಭಟನಾಕಾರರನ್ನು ಬಂಧಿಸಿ, ನಂತರ ಬಿಡುಗಡೆಗೊಳಿಸಿದರು.