Thursday, 12th December 2024

ಈಶ್ವರಪ್ಪ ಪ್ರಕರಣದಲ್ಲಿ ಡಿಕೆಶಿ ಉತ್ಸವಮೂರ್ತಿ

ಮೂರ್ತಿ ಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಈ ಪ್ರಕರಣದಲ್ಲೂ ಮೇಲ್ನೋಟಕ್ಕೆ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ತಳುಕು ಹಾಕಲಾಗುತ್ತಿದೆಯಾದರೂ ಹಿಂದೆ ಕಾಣುತ್ತಿರುವುದು
ಯಥಾಪ್ರಕಾರ ಮಹಾನಾಯಕರೇ. ಯಾಕೆಂದರೆ ಈಶ್ವರಪ್ಪ ಅವರ ಪದಚ್ಯುತಿಯಿಂದ ಡಿ.ಕೆ.ಶಿವಕುಮಾರ್ ಅವರಿಗಾಗುವ ಲಾಭ ಅಷ್ಟರ ಇದೆ.

ಕಮಿಷನ್ ಸುಳಿಗೆ ಸಿಲುಕಿ ಮಂತ್ರಿ ಈಶ್ವರಪ್ಪ ಕೆಳಗಿಳಿದಿದ್ದಾರೆ. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬರೆದಿದ್ದಾರೆ ಎನ್ನಲಾದ ಡೆತ್‌ನೋಟ್ ಈಶ್ವರಪ್ಪ ಅವರ ಮಂತ್ರಿ ಸ್ಥಾನಕ್ಕೆ ಮುಳುವಾಗಿದೆ.

ಅಷ್ಟೇ ಅಲ್ಲ ಹಿಜಾಬ್, ಹಲಾಲ್ ವರ್ತುಲಕ್ಕೆ ಸಿಲುಕಿ ಮಂಕಾಗಿದ್ದ ಪ್ರತಿಪಕ್ಷ ಕಾಂಗ್ರೆಸ್ ಪಾಲಿಗೆ ಟಾನಿಕ್ ಆಗಿ ಪರಿಣಮಿಸಿದೆ. ಅಂದ ಹಾಗೆ ಸಚಿವ ಸ್ಥಾನವನ್ನು ಕಳೆದು ಕೊಂಡರು ಎಂದ ಮಾತ್ರಕ್ಕೆ ಈಶ್ವರಪ್ಪ ಅಪರಾಧಿಯಾಗಿ ಹೊರಹೊಮ್ಮುತ್ತಾರೆ ಎಂದೇನಲ್ಲ. ಯಾಕೆಂದರೆ ಈ ಪ್ರಕರಣದ ತನಿಖೆ ನಡೆಸುವುದು ರಾಜ್ಯ ಸರಕಾರವೇ ಆದ್ದರಿಂದ ಫಲಿತಾಂಶ ಏನಾಗುತ್ತದೆ? ಅನ್ನುವುದು ಎಲ್ಲರಿಗೂ ಗೊತ್ತೇ ಇದೆ.

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನಡೆದ ಗಣಪತಿ ಆತ್ಮಹತ್ಯೆ ಪ್ರಕರಣ ಗೃಹ ಸಚಿವ ಜಾರ್ಜ್ ರಾಜೀನಾಮೆಗೆ ಕಾರಣವಾಯಿತು. ಆದರೆ ಕೆಲವೇ ದಿನಗಳಲ್ಲಿ ಪ್ರಕರಣದ ತನಿಖೆಯಾಗಿ ಪೂರ್ಣವಾಗಿ ಜಾರ್ಜ್ ನಿರಪರಾಧಿ ಎಂದು ಘೋಷಿಸಲಾಯಿತು.

ಪರಿಣಾಮ? ಜಾರ್ಜ್ ಪುನಃ ಮಂತ್ರಿಯಾದರು. ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದ ಫಲಿತಾಂಶ ಹೆಚ್ಚು ಕಡಿಮೆ ಹೀಗೇ ಇರುತ್ತದೆ. ಈಶ್ವರಪ್ಪ ನಿರಪರಾಧಿಯಾಗಿ ಹೊರಹೊಮ್ಮುತ್ತಾರೆ. ಆದರೆ ಜಾರ್ಜ್ ಅವರಂತೆ ಈಶ್ವರಪ್ಪ ಮರಳಿ ಮಂತ್ರಿ ಮಂಡಲಕ್ಕೆ ಸೇರುತ್ತಾರಾ? ಎನ್ನುವುದೇ ಬಾಕಿ ಇರುವ ಪ್ರಶ್ನೆ. ಗಮನಿಸಬೇಕಾದ ಸಂಗತಿ ಎಂದರೆ ರಾಸಲೀಲೆ ಪ್ರಕರಣಕ್ಕೆ ಸಿಲುಕಿ ಈ ಹಿಂದೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ರಮೇಶ್ ಜಾರಕಿಹೊಳಿ ಮೊನ್ನೆ ಒಂದು ಹೇಳಿಕೆ ನೀಡಿದರು.

ನಾನು ರಾಜೀನಾಮೆ ನೀಡಲು ಯಾವ್ಯಾವ ಶಕ್ತಿಗಳು ಕಾರಣವಾಗಿದ್ದವೋ ಅವೇ ಶಕ್ತಿಗಳು ಈಶ್ವರಪ್ಪ ಪ್ರಕರಣದಲ್ಲೂ ಕೈಗೂಡಿಸಿವೆ ಎಂಬುದು ಅವರ ಹೇಳಿಕೆ. ಅಷ್ಟೇ ಅಲ್ಲ, ಈ ಪ್ರಕರಣದಲ್ಲಿ ಒಬ್ಬ ಮಹಾ ನಾಯಕರಿದ್ದಾರೆ. ಅವರು ಯಾರು ಅಂತ ಮುಂದಿನ ದಿನಗಳಲ್ಲಿ ಹೇಳುತ್ತೇನೆ ಅಂತಲೂ ಹೇಳಿದರು. ಸ್ವತಃ ತಾವೇ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುವಾಗಲೂ ರಮೇಶ್ ಜಾರಕಿಹೊಳಿ ಇದೇ ಮಹಾನಾಯಕನ ಬಗ್ಗೆ ಪ್ರಸ್ತಾಪಿಸಿದ್ದರು.

ಅವತ್ತು ಅವರು ಮಹಾನಾಯಕನ ಬಗ್ಗೆ ಪ್ರಸ್ತಾಪಿಸಿದ ಸಂದರ್ಭದಲ್ಲಿ ಎಲ್ಲರ ಗಮನ ತಿರುಗಿದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಕಡೆ. ರಮೇಶ್ ಜಾರಕಿಹೊಳಿ ಮತ್ತು ಡಿ.ಕೆ.ಶಿವಕುಮಾರ್ ಅವರಿಗೆ ಯಾವ ವಿಷಯದಲ್ಲಿ ವೈರತ್ವ ಶುರುವಾಯಿತೋ ಗೊತ್ತಿಲ್ಲ. ಆದರೆ ಡಿ.ಕೆ.ಶಿವಕುಮಾರ್ ಅವರನ್ನು ಕಂಡರೆ ರಮೇಶ್ ಜಾರಕಿಹೊಳಿ ಕುದಿಯುತ್ತಿದ್ದರು ಎಂಬುದಂತೂ ಮೇಲ್ನೋಟಕ್ಕೆ ಗೋಚರ ವಾಗುತ್ತಿತ್ತು. ಈ ಕಾರಣಕ್ಕಾಗಿ ರಮೇಶ್ ಜಾರಕಿಹೊಳಿ ಪ್ರಸ್ತಾಪಿಸಿದ ಮಹಾನಾಯಕ ಡಿ.ಕೆ.ಶಿವಕುಮಾರ್ ಅವರೇ ಇರಬೇಕು ಅಂತ
ಹಲವರು ಭಾವಿಸಿದ್ದರು.

ಆದರೆ ಇಂತಹ ಅನುಮಾನಗಳ ನಡುವೆ ಡಿ.ಕೆ.ಶಿವಕುಮಾರ್ ಮಾತ್ರ ರಮೇಶ್ ಜಾರಕಿಹೊಳಿ ಮಾತುಗಳನ್ನು ಕೇಳಿಯೂ ಕೇಳಿಸಿ ಕೊಳ್ಳದವರಂತೆ ನಿರ್ಲಿಪ್ತರಾಗಿದ್ದರು. ಅದರರ್ಥ, ರಮೇಶ್ ಜಾರಕಿಹೊಳಿ ಪ್ರಕರಣ ಪಡೆಯಬೇಕಾದ ತಿರುವುಗಳ ಬಗ್ಗೆ ಡಿ.ಕೆ.ಶಿವಕುಮಾರ್ ಆಸ್ಥೆ ವಹಿಸಿರಬಹುದಾದರೂ ರಮೇಶ್ ಜಾರಕಿಹೊಳಿ ಪ್ರಕರಣ ರಾಜೀನಾಮೆಯ ಮಟ್ಟಕ್ಕೆ ತಲುಪಲಿ ಎಂಬ ನಿರೀಕ್ಷೆ ಮತ್ತೊಬ್ಬರಿಗೆ ಇತ್ತು. ಈಗ ರಮೇಶ್ ಜಾರಕಿಹೊಳಿ ಪ್ರಸ್ತಾಪಿಸುತ್ತಿರುವ ಮಹಾನಾಯಕರೇ ಅವರು. ಅಂದ ಹಾಗೆ ರಮೇಶ್ ಜಾರಕಿಹೊಳಿ
ರಾಜೀನಾಮೆ ಕೊಡಲೇಬೇಕು ಎಂದು ಈ ಮಹಾನಾಯಕರು ಭಾವಿಸಿದ್ದಕ್ಕೆ ಕಾರಣವಿತ್ತು. ಅದೆಂದರೆ, ತಾವು ನೋಡಿಕೊಳ್ಳುತ್ತಿದ್ದ ಜಲಸಂಪನ್ಮೂಲ ಖಾತೆಯ ವ್ಯವಹಾರಗಳಲ್ಲಿ ಮತ್ತೊಬ್ಬರು ಮಧ್ಯೆ ಪ್ರವೇಶಿಸುವುದನ್ನು ರಮೇಶ್ ಜಾರಕಿಹೊಳಿ ಇಷ್ಟಪಡುತ್ತಿರಲಿಲ್ಲ.

ತಮ್ಮ ಗಮನಕ್ಕೆ ಬಾರದೆ ನೀರಾವರಿ ಯೋಜನೆಗಳ ಟೆಂಡರುಗಳು ಹೈಜಾಕ್ ಆಗಲು ಬಿಡುತ್ತಿರಲಿಲ್ಲ. ಪರಿಣಾಮವಾಗಿ ಜಲಸಂಪನ್ಮೂಲ ಇಲಾಖೆಯ ಟೆಂಡರುಗಳು ತಾವು ಬಯಸಿದವರಿಗೆ ದಕ್ಕಬೇಕೆಂದರೆ ರಮೇಶ್ ಜಾರಕಿಹೊಳಿ ಈ ಜಾಗದಲ್ಲಿರಬಾರದು ಎಂಬುದು ಈ ಮಹಾನಾಯಕರ ಮತ್ತು ಅವರ ಆಪ್ತರ ಬಯಕೆಯಾಗಿತ್ತು. ಹಾಗಂತ ರಮೇಶ್ ಜಾರಕಿಹೊಳಿ ಅವರಿಗೆ ನೀಡಿದ್ದ ಖಾತೆಯನ್ನು ಕಿತ್ತುಕೊಳ್ಳು ವುದೂ ಕಷ್ಟವಾಗಿತ್ತು.

ಯಾಕೆಂದರೆ ಸಮ್ಮಿಶ್ರ ಸರಕಾರವನ್ನು ಉರುಳಿಸಿ ಬಿಜೆಪಿ ಸರಕಾರವನ್ನು ತರಲು ನೆರವಾದ ರಮೇಶ್ ಜಾರಕಿಹೊಳಿ ತಮಗೆ ಇಂಧನ ಮತ್ತು ಜಲಸಂಪನ್ಮೂಲ ಖಾತೆಗಳನ್ನು ಒಳಗೊಂಡ ಉಪಮುಖ್ಯಮಂತ್ರಿ ಹುದ್ದೆ ಬೇಕು ಅಂತ ಕರಾರು ಹಾಕಿದ್ದರು. ಹೀಗೆ ಕರಾರು ಹಾಕುವಾಗ ಅವರ ಕಣ್ಣ ಮುಂದಿದ್ದುದು ಡಿ.ಕೆ.ಶಿವಕುಮಾರ್. ತಮಗೆ ಕಿರಿಕಿರಿ ಮಾಡಿದ ಡಿ.ಕೆ.ಶಿವಕುಮಾರ್ ಅವರು ಮೈತ್ರಿಕೂಟ ಸರಕಾರದಲ್ಲಿ ಎಷ್ಟು ಪವರ್ ಫುಲ್ ಆಗಿದ್ದರೋ ಅದಕ್ಕಿಂತ ಪವರ್ ಫುಲ್ ಆಗುವುದು ರಮೇಶ್ ಜಾರಕಿಹೊಳಿ ಅವರ ಮಹತ್ವಾಕಾಂಕ್ಷೆ
ಯಾಗಿತ್ತು. ಬಿಜೆಪಿ ಸರಕಾರ ರಚನೆಯಾದಾಗ ಅವರ ಈ ಮಹತ್ವಾಕಾಂಕ್ಷೆ ಈಡೇರದಿದ್ದರೂ ಕನಿಷ್ಟ ಪಕ್ಷ ಜಲಸಂಪನ್ಮೂಲ ಖಾತೆ ಯನ್ನು ಕೊಡಲಾಗಿತ್ತು.

ಹೀಗಿರುವಾಗ ಅದನ್ನೂ ಕಿತ್ತು ಕೊಳ್ಳುವುದು ಹೇಗೆ? ಹೀಗಾಗಿ ಅವರ ಪದಚ್ಯುತಿಯೊಂದೇ ಮಹಾನಾಯಕ ಮತ್ತವರ ಆಪ್ತರಿಗೆ ಅನಿವಾರ್ಯವಾಗಿತ್ತು. ಮತ್ತದನ್ನು ಅವರು ನಿರಾಯಾಸವಾಗಿ ಸಾಧಿಸಿದರು. ಈಗ ಗ್ರಾಮೀಣಾಭಿವೃದ್ದಿ ಸಚಿವ ಈಶ್ವರಪ್ಪ ರಾಜೀ
ನಾಮೆಯ ಹಿಂದೆ ಇರುವುದೂ ಈ ಮಹಾನಾಯಕನ ಪಾತ್ರ ಎಂಬ ರಮೇಶ್ ಜಾರಕಿಹೊಳಿಯವರ ಮಾತುಗಳನ್ನು ಈ ಹಿನ್ನೆಲೆಯಲ್ಲಿ ನೋಡಬೇಕು. ಈ ಪ್ರಕರಣದಲ್ಲೂ ಮೇಲ್ನೋಟಕ್ಕೆ ಡಿ.ಕೆ.ಶಿವಕುಮಾರ್ ಅವರ ಹೆಸರನ್ನು ತಳುಕು ಹಾಕಲಾಗುತ್ತಿದೆಯಾದರೂ ಹಿಂದೆ ಕಾಣುತ್ತಿರುವುದು ಯಥಾಪ್ರಕಾರ ಮಹಾನಾಯಕರೇ.

ಯಾಕೆಂದರೆ ಈಶ್ವರಪ್ಪ ಅವರ ಪದಚ್ಯುತಿಯಿಂದ ಡಿ.ಕೆ.ಶಿವಕುಮಾರ್ ಅವರಿಗಾಗುವ ಲಾಭ ಅಷ್ಟರ ಇದೆ. ಯಾವ ದೃಷ್ಟಿಯಿಂದ ನೋಡಿದರೂ ಡಿ.ಕೆ.ಶಿವಕುಮಾರ್ ಮತ್ತು ಈಶ್ವರಪ್ಪ ಅವರ ರಾಜಕಾರಣ ಬೇರೆ ಬೇರೆ ನೆಲೆಯದ್ದು. ಈಶ್ವರಪ್ಪ ಅವರ ರಾಜಕಾರಣ ಪಕ್ಷದ
ನೆಲೆಯಗಲೀ, ಜಿಯ ನೆಲೆಯಗಲೀ, ಉತ್ತರಾಧಿಕಾರಿಗಳ ನೆಲೆಯ ಆಗಲಿ. ಅದು ಡಿ.ಕೆ.ಶಿವಕುಮಾರ್ ಅವರಿಗೆ ಸ್ಪರ್ಧೆ ನೀಡುವಂತಹದ್ದಲ್ಲ. ಹೋಗಲಿ ಎಂದರೆ ವೈಯಕ್ತಿಕ ನೆಲೆಯಲ್ಲೂ ಈಶ್ವರಪ್ಪ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಹಿತಾಸಕ್ತಿಯ ಸಂಘರ್ಷವಿಲ್ಲ. ಅದರರ್ಥ, ಮಹಾನಾಯಕನ ಹಿತಕ್ಕೆ ಪೂರಕವಾಗಿ ಈಶ್ವರಪ್ಪ ವಿರುದ್ಧ ಡಿ.ಕೆ.ಶಿವಕುಮಾರ್ ಮುಗಿಬಿದ್ದಿದ್ದಾರೆ. ಹೀಗೆ ಮುಗಿಬಿದ್ದಿರುವುದರಿಂದ ಅವರಿಗೆ, ಆ ಮೂಲಕ ಅವರ ಪಕ್ಷಕ್ಕೆ ಲಾಭವಿದೆ.

ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾದ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಶಕ್ತಿ ಏರುಮುಖವಾಗಿತ್ತು. ಅದು ಉಪ ಚುನಾವಣೆ ಗಳಿರಬಹುದು, ವಿಧಾನಪರಿಷತ್ತಿನ ಇಪ್ಪತೈದು ಸ್ಥಾನಗಳಿಗೆ ನಡೆದ ಚುನಾವಣೆ ಇರಬಹುದು, ಹಲವು ಸ್ಥಳೀಯ ಸಂಸ್ಥೆಗಳಿಗೆ ನಡೆದ ಚುನಾವಣೆಗಳಿರಬಹುದು. ಅಲ್ಲ ಕಾಂಗ್ರೆಸ್ ಪಕ್ಷದ ಸಾಧನೆ ಏರುಮುಖವಾಗುತ್ತಾ ನಡೆದಿತ್ತು. ಆದರೆ ಯಾವಾಗ ಹಿಜಾಬ್ ವಿವಾದ ಶುರುವಾಯಿತೋ ಅಲ್ಲಿಂದ ಮುಂದೆ ಕಾಂಗ್ರೆಸ್‌ನ ಗ್ರಾಫ್ ಇಳಿಮುಖವಾಯಿತು. ಈ ಪರಿಸ್ಥಿತಿ ಎಲ್ಲಿಗೆ ಹೋಗಿ ಮುಟ್ಟಿತ್ತೆಂದರೆ ಬಿಜೆಪಿಯ ಅಸ್ತ್ರಗಳನ್ನು ಯಾವ ರೀತಿ ಮುಟ್ಟಲು ಹೋದರೂ ಕಾಂಗ್ರೆಸ್ ಪಕ್ಷದ ಗುಡ್ ದಾ ಅಲುಗಾಡುತ್ತಿತ್ತು.

ತುಂಬ ದೂರ ಹೋಗುವುದೇನೂ ಬೇಡ. ಕೆಲವೇ ದಿನಗಳ ಹಿಂದೆ ಹಿಜಾಬ್ ವಿವಾದದ ಸಂದರ್ಭದಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒಂದು ಹೇಳಿಕೆ ನೀಡಿದರು. ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್‌ಅನ್ನು ಮುಖಕ್ಕೆ ಸುತ್ತಿಕೊಳ್ಳುವ ಹಾಗೆ ನಮ್ಮಲ್ಲಿ ಹೆಣ್ಣು ಮಕ್ಕಳು ತಲೆಗೆ ಸೆರಗು ಮುಚ್ಚಿಕೊಳ್ಳುತ್ತಾರೆ. ಅದೇ ರೀತಿ ಸ್ವಾಮೀಜಿಗಳೂ ತಲೆಗೆ ವಸ್ತ್ರ ಹೊದಿಯುತ್ತಾರೆ ಎಂಬುದು ಸಿದ್ದರಾಮಯ್ಯ ಅವರ ಮಾತು. ಅವರಾಡಿದ ಈ ಮಾತು ಯಾವ ಮಟ್ಟದಲ್ಲಿ ಸೌಂಡು ಮಾಡಿತು ಎಂದರೆ ಸಿದ್ದರಾಮಯ್ಯ ಅವರು ನಾಡಿನ ಸ್ವಾಮೀಜಿಗಳನ್ನು ಅವಮಾನಿ
ಸಿದ್ದಾರೆ.

ಇದು ಅಕ್ಷಮ್ಯ ಎಂದು ಆರೋಪಿಸುವ ಮಟ್ಟಕ್ಕೆ ಹೋಯಿತು. ಈ ಬೆಳವಣಿಗೆಯಿಂದ ರಾಜ್ಯ ಕಾಂಗ್ರೆಸ್ ನಾಯಕರು ಯಾವ ಲೆವೆಲ್ಲಿನಲ್ಲಿ ಗಾಬರಿಗೊಂಡಿದ್ದರೆಂದರೆ, ಸಿದ್ದರಾಮಯ್ಯನವರ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಖುದ್ದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡಾ ಹಿಂಜರಿದರು. ಇದರಿಂದ ಅಸಮಾಧಾನಗೊಂಡ ಸಿದ್ದರಾಮಯ್ಯ ಪಕ್ಷದ ಸಭೆಯೊಂದರಲ್ಲಿ ಬಿಜೆಪಿಯ ಕೋಮುವಾದವನ್ನು
ಎದುರಿಸಲು ಯಾರೂ ಹಿಂಜರಿಯಬೇಕಿಲ್ಲ ಎಂದು ಹೇಳಬೇಕಾಯಿತು.

ಹೀಗೆ ಕಾಂಗ್ರೆಸ್ ಪಾಳಯದ ಮೇಲೆ ಮಂಕು ಆವರಿಸಿದ ಕಾಲದ ಈಶ್ವರಪ್ಪ ಪ್ರಕರಣ ಆ ಪಕ್ಷದ ಪಾಲಿಗೆ ಟಾನಿಕ್ ಆಗಿ ದಕ್ಕಿದೆ. ಬಿಜೆಪಿಯ ಧರ್ಮಾಸಗಳಿಗೆ ಪ್ರತಿಯಾಗಿ ಯಾವ ಅಸ್ತ್ರ ಪ್ರಯೋಗಿಸಬೇಕು? ಎಂಬುದು ಅರ್ಥವಾಗದೆ ಪರದಾಡುತ್ತಿದ್ದ ಅದರ ಬತ್ತಳಿಕೆಗೆ ಪ್ರಬಲ ಅಸ್ತ್ರವೊಂದು ದಕ್ಕಿದಂತಾಗಿದೆ. ದಿನಬಳಕೆ ವಸ್ತುಗಳ ಬೆಲೆ ದಿನಕಳೆದಂತೆ ಗಗನಕ್ಕೇರುತ್ತಿರುವ ಪರಿಯಿಂದ ಬಡ-ಮಧ್ಯಮ ವರ್ಗದ ಜನ
ಕಂಗಾಲಾಗಿದ್ದಾರೆ.

ಇಂತಹ ಕಾಲಘಟ್ಟದಲ್ಲಿ ಆಡಳಿತಾರೂಢ ಪಕ್ಷದ ಭ್ರಷ್ಟಾಚಾರದ ವಿಷಯಗಳನ್ನು ಕೇಳಿದಂತೆಲ್ಲ ಅವರ ಸಿಟ್ಟು ನೆತ್ತಿಗೇರತೊಡಗುತ್ತದೆ. ಇಂತಹ ಸಂದರ್ಭದಲ್ಲಿ, ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್‌ಗೆ ನೈತಿಕ ಹಕ್ಕಿಲ್ಲ ಎಂದು ಬಿಜೆಪಿ ಅರಚಾಡಿದಂತೆಲ್ಲ ಭ್ರಷ್ಟಾಚಾರ ಮಾಡಲು ಜನ ಈಗ ಕಮಲ ಪಾಳಯಕ್ಕೆ ಲೈಸೆನ್ಸ್ ಕೊಟ್ಟಿದ್ದಾರೆ ಎಂದಂತೆ ಅವರಿಗೆ ಭಾಸವಾಗುತ್ತಿದೆ. ಪರಿಣಾಮ? ಈಶ್ವರಪ್ಪ ಮಾತ್ರ ವಲ್ಲ, ಹಗರಣಗಳ ಆರೋಪ ಬಂದು ಮತ್ತಷ್ಟು ಮಂದಿ ಮಂತ್ರಿಗಳ ತಲೆದಂಡವಾಗಲಿ ಎಂದು ಬಯಸುವ ಮಟ್ಟಕ್ಕೆಗಿದೆ. ಅರ್ಥಾತ್, ಬೆಲೆ ಏರಿಕೆ ಪ್ಲಸ್ ಭ್ರಷ್ಟಾಚಾರ ಎಂಬುದು ಜನಾಕ್ರೋಶಕ್ಕೆ ತಿರುಗಿ ಕಾಂಗ್ರೆಸ್ ಬತ್ತಳಿಕೆಗೆ ಹೊಸ ಅಸ್ತ್ರವಾಗಿ ಸೇರಿದೆ. ಈಶ್ವರಪ್ಪ ಪ್ರಕರಣದಿಂದ ಕಾಂಗ್ರೆಸ್ ಗಾಗುವ ಲಾಭ ಇದು.

ಈ ಮಧ್ಯೆ ಪರಿಸ್ಥಿತಿಯ ಲಾಭ ಪಡೆದು ತಮ್ಮ ವಿರೋಧಿಗಳನ್ನು ಹಣಿಯುತ್ತಿರುವ ಮಹಾನಾಯಕ ಮುಂದಿನ ವಿಧಾನಸಭಾ ಚುನಾವಣೆಯ ವೇಳೆಗೆ ಕೋಡುಗಲ್ಲಿನ ಮೇಲೆ ನಿಂತಿರುತ್ತಾರೆ. ಅವರನ್ನು ದೂರೀಕರಿಸಿ ಯುದ್ಧ ಮಾಡುವುದು ಬಿಜೆಪಿಗೆ ನಿಶ್ಚಿತವಾಗಿಯೂ ಸಾಧ್ಯವಿಲ್ಲ. ಹೀಗಾಗಿ ಈಶ್ವರಪ್ಪ ವಿರುದ್ಧ ಪ್ರಯೋಗವಾದ ಅಸ ಇನ್ನೂ ಹಲ ಹಂತಗಳಲ್ಲಿ ಕೆಲಸ ಮಾಡುತ್ತದೆ. ಈಗಾಗಲೇ ಕಾಂಗ್ರೆಸ್ ಬತ್ತಳಿಕೆಗೆ ಬಂದು ಸೇರಿಕೊಂಡಿರುವ ಹಲ ಅಸಗಳು ಇದಕ್ಕೆ ಉದಾಹರಣೆ.

ರಾಜ್ಯ ಗುತ್ತಿಗೆದಾರರ ಸಂಘದ ಪ್ರಮುಖರಾದ ಕೆಂಪಣ್ಣ ಅವರ ಕೈಲಿದ್ದ ಈ ಅಸಗಳು ಕಾಂಗ್ರೆಸ್ ಬತ್ತಳಿಕೆಗೆ ಸೇರಿ ಮತ್ತಷ್ಟು ಹರಿತವಾಗಿ ಕಾಣುತ್ತಿವೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಇವನ್ನು ಪ್ರಯೋಗಿಸುವುದೂ ನಿಜ. ಅದನ್ನೆದುರಿಸಲು ಬಿಜೆಪಿ ಸಜ್ಜಾಗಬೇಕಿರುವುದೂ ನಿಜ. ಮುಂದೆ ಏನೇನಾಗುತ್ತದೋ ನೋಡಬೇಕು.