ವಿಶ್ವವಾಣಿ ಸಂದರ್ಶನ: ರಂಜಿತ್ ಎಚ್.ಅಶ್ವತ್ಥ
ಜೆಡಿಎಸ್ ನೂತನ ರಾಜ್ಯಾಧ್ಯಕ್ಷ: ಸಿ.ಎಂ.ಇಬ್ರಾಹಿಂ
ಜೋಳಿಗೆ ಹಾಕಿ ಜೆಡಿಎಸ್ ಸಂಘಟಿಸುವೆ, ಮುಸ್ಲಿಮರಿಗೆ ಅನ್ಯಾಯವಾಗದು: ಇಬ್ರಾಹಿಂ
ಜೆಡಿಎಸ್ ಅನ್ನು ಅಪ್ಪ-ಮಕ್ಕಳ ಪಕ್ಷ ಎನ್ನುವುದಾದರೆ, ಕಾಂಗ್ರೆಸ್ ಅನ್ನು ಅವ್ವ-ಮಕ್ಕಳ ಪಕ್ಷ ಎನ್ನಬಹುದೇ? ಹಾಗೆಂದು ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪ್ರಶ್ನಿಸಿದ್ದಾರೆ. ಕಾಂಗ್ರೆಸಿಗರು ತಮ್ಮ ಪಕ್ಷದ ಬಗ್ಗೆ ಮೊದಲು ಯೋಚಿಸಲಿ. ಅಲ್ಲಿ ಪ್ರಜಾಪ್ರಭುತ್ವ ಸತ್ತು ಹೋಗಿದೆ. ಆದ್ದರಿಂದಲೇ ಜೆಡಿಎಸ್ಗೆ ಮರಳಿದ್ದೇನೆ. ಈಗ ಮನಸು ನಿರಾಳವಾಗಿದೆ ಎಂದರು ಇಬ್ರಾಹಿಂ.ಜೆಡಿಎಸ್ಗೆ ಮರಳಿ, ಪಕ್ಷದ ರಾಜ್ಯಾಧ್ಯಕ್ಷರಾದ ಬಳಿಕ ‘ವಿಶ್ವವಾಣಿ’ಜತೆ ಮಾತನಾಡಿದ ಅವರು, ಕಾಂಗ್ರೆಸ್ನಿಂದ ಹೊರಬರಲು ಕಾರಣವಾದ ಸಂಗತಿಗಳು, ಜೆಡಿಎಸ್ನ ನ್ಯೂನತೆ ಹಾಗೂ ಶಕ್ತಿ, ಅಲ್ಪಸಂಖ್ಯಾತರಿಗೆ ರಾಜಕೀಯ ಪ್ರಾತಿನಿಧ್ಯ ಸೇರಿ ಹಲವು ವಿಷಯ ಗಳನ್ನು ಪ್ರಸ್ತಾಪಿಸಿದ್ದಾರೆ.
? ಕುಟುಂಬ ರಾಜಕಾರಣ ನಿಲ್ಲಲು ಸಾಧ್ಯವೇ?
ದೇಶದ ಯಾವ ಪಕ್ಷದಲ್ಲಿ ಕುಟುಂಬ ರಾಜಕಾರಣವಿಲ್ಲ? ಕಾಂಗ್ರೆಸ್ ಮಾತ್ರವಲ್ಲ, ಸಮಾಜವಾದಿ, ಎನ್ಸಿಪಿ ಸೇರಿ ಬಹುತೇಕ ಪಕ್ಷಗಳಲ್ಲಿ ತಂದೆಯ ನಂತರ ಮಕ್ಕಳ ರಾಜಕೀಯ ಪ್ರವೇಶ ಸರ್ವೇ ಸಾಮಾನ್ಯ. ಅದೇ ರೀತಿ ಜೆಡಿಎಸ್ನಲ್ಲಿಯೂ ಇದೆ. ಬಿಜೆಪಿಯಲ್ಲಿ ಕೆಲವರು ಮದುವೆಯಾಗಿಲ್ಲ. ಆದ್ದರಿಂದ ಮಕ್ಕ ಳನ್ನು ತಂದಿಲ್ಲ. ಆದರೆ ರಾಜನಾಥ್ ಸಿಂಗ್ನಂಥ ಅನೇಕರು ತಮ್ಮ ಮಕ್ಕಳನ್ನು ರಾಜಕೀಯಕ್ಕೆ ತಂದಿಲ್ಲವೇ? ಒಂದು ವೇಳೆ ಅಪ್ಪನ ಹೆಸರಲ್ಲಿ ಅಧಿಕಾರಕ್ಕೇರಿ, ದೇಶಕ್ಕೆ ಆತಂಕ ಒಡ್ಡುವ ಕೆಲಸಕ್ಕೆ ಕೈಹಾಕಿದಾಗ ಕುಟುಂಬ ರಾಜಕಾರಣ ವಿರೋಧಿಸೋಣ. ಜೆಡಿಎಸ್ ನಲ್ಲಿ ದೇವೇಗೌಡ, ಕುಮಾರ ಸ್ವಾಮಿ, ರೇವಣ್ಣ ಅವರನ್ನು ಜನ ಒಪ್ಪಿಕೊಂಡಿದ್ದಾರೆ. ಇನ್ನು ಇಡೀ ಜೆಡಿಎಸ್ ಒಂದು ಕುಟುಂಬ ವಿದ್ದಂತೆ. ಇಲ್ಲಿ ಜಾತಿ, ಧರ್ಮದ ಸಂಘರ್ಷವಿಲ್ಲ. ಆದ್ದರಿಂದ ಈ ವಿಷಯ ಹೆಚ್ಚು ಮಹತ್ವ ಪಡೆಯುವುದಿಲ್ಲ.
? ಅಲ್ಪಸಂಖ್ಯಾತರಿಗೆ ಸ್ಥಾನ ಕೊಡಿಸುವ ವಿಶ್ವಾಸವಿದೆಯೇ?
ನೂರಕ್ಕೆ ನೂರು ವಿಶ್ವಾಸವಿದೆ. ನಾನು ಸಹ ಮುಸ್ಲಿಂ ಅಲ್ಲವೇ? ನಾನು ಬರುತ್ತಿದ್ದಂತೆ ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನೀಡಿ ಗೌರವದಿಂದ ನೋಡಿ ಕೊಂಡಿದ್ದಾರೆ. ಮನೆಯ ಹೆಬ್ಬಾಗಿಲ ಬೀಗದ ಕೀಲಿಯನ್ನೇ ನನಗೆ ನೀಡಿರುವಾಗ, ಅಲ್ಪಸಂಖ್ಯಾ ತರನ್ನು ಕಡೆಗಣಿಸುತ್ತಾರೆ ಎಂದು ಹೇಗೆ ಹೇಳಲು ಸಾಧ್ಯ? ಟಿಕೆಟ್ ನೀಡುವ ವಿಷಯದಲ್ಲಿಯೂ ಮುಸ್ಲಿಂ ಆಕಾಂಕ್ಷಿಗಳಿಗೆ ನ್ಯಾಯ ದೊರಕಿಸಲಾಗುವುದು. ಆದರೆ, ಟಿಕೆಟ್ ಹಂಚಿಕೆ ಧರ್ಮ, ಜಾತಿ ಮೇಲೆ ಎನ್ನುವುದಕ್ಕಿಂತ ಪಕ್ಷದ ಸಿದ್ಧಾಂತ, ಗೆಲು ವಿನ ಲೆಕ್ಕಾಚಾರದ ಮೇಲಾಗುತ್ತದೆ. ಎಚ್.ಕೆ.ಕುಮಾರಸ್ವಾಮಿ ನೇತೃತ್ವದ ಸಂಸದೀಯ ಮಂಡಳಿ ಸಭೆಯಲ್ಲಿ ನಾನು, ಎಚ್. ಡಿ.ಕುಮಾರಸ್ವಾಮಿ ಸೇರಿದಂತೆ ಪ್ರಮುಖರು ಚರ್ಚಿಸಿ ವರಿಷ್ಠದೇವೇಗೌಡರೊಂದಿಗೆ ಮಾತನಾಡಿ ಅಭ್ಯರ್ಥಿಗಳ ಪಟ್ಟಿ ಅಂತಿಮ ಗೊಳಿಸುತ್ತೇನೆ.
? ತವರಿನಲ್ಲಿ ಜವಾಬ್ದಾರಿಯೂ ಹೆಚ್ಚಿದೆ. ಹೇಗನಿಸುತ್ತದೆ?
ಮನದ ಭಾರ ಇಳಿದಿದೆ. ತಂಪು ವಾತಾವರಣದಲ್ಲಿ ಕೂತ ಅನುಭವವಾಗುತ್ತಿದೆ. ಇಷ್ಟು ದಿನವಿದ್ದ ಸಂಕೋಲೆ ಬಿಡಿಸಿಕೊಂಡು ನೆಮ್ಮದಿಯಾಗಿದ್ದೇನೆ. ಆದರೆ, ಜವಾಬ್ದಾರಿ ಹೆಚ್ಚಾಗಿದೆ. ಕೆಲಸದ ಹೊರೆ ಹೆಚ್ಚಾದರೂ, ಖುಷಿಯಿದೆ. ಏಕೆಂದರೆ ಅಸಮಾನತೆಯ ಭಾರ ಹೋಗಿದೆ. ಸಮಾನತೆಯ ಭಾರ ಹೆಚ್ಚಾಗಿದೆ.
? ಕಾಂಗ್ರೆಸ್ಗ ಹೋಗುವಾಗ ಈ ವಾತಾವರಣ ಇರಲಿಲ್ಲವೇ?
ಇಲ್ಲ. ಸಿದ್ದರಾಮಯ್ಯ ಜತೆ ನಾನು ಹೋಗಲೇ ಇಲ್ಲ. ಎರಡು ವರ್ಷದ ಬಳಿಕ ಹೋದ ಮೇಲೆ ಗೊತ್ತಾಯಿತು ಕಾಂಗ್ರೆಸ್ನಲ್ಲಿ ಪ್ರಜಾಪ್ರಭುತ್ವವಿಲ್ಲ ಎಂದು. ಅಲ್ಲಿ ಪ್ರಧಾನ ಕಾರ್ಯ ದರ್ಶಿಯೇ ಎಲ್ಲವೂ. ಅವರ ವರದಿಯೇ ಅಂತಿಮ. ಅದನ್ನೇ ವರಿಷ್ಠರು ಒಪ್ಪು ವುದು. ಆದ್ದರಿಂದ ಪ್ರಧಾನ ಕಾರ್ಯದರ್ಶಿಯನ್ನು ಚೆನ್ನಾಗಿ ಇಟ್ಟು ಕೊಂಡು ಹೋಗಬೇಕು. ಯಾರನ್ನೋ ಓಲೈಸುವ ಮನಃಸ್ಥಿತಿ ನಮಗಿಲ್ಲ.
? ಕಾಂಗ್ರೆಸ್ ಬಿಟ್ಟಿದ್ದು ಸ್ಥಾನಕ್ಕಾಗಿಯೋ? ಸಿದ್ಧಾಂತಕ್ಕಾಗಿಯೋ?
ಸ್ಥಾನ ಮತ್ತು ಮಾನ ಬರುವುದು ಸಿದ್ಧಾಂತದಿಂದ. ಅಲ್ಲಿ ಸಿದ್ಧಾಂತವೇ ಇಲ್ಲ. ಅಲ್ಲಿರುವ ಒಂದೇ ಒಂದು ಸಿದ್ಧಾಂತವೆಂದರೆ ಅದು ‘ಹೈಕಮಾಂಡ್’. ಗೆದ್ದರೆ ಹೈಕಮಾಂಡ್ ಕಾರಣ. ಸೋತರೆ ಬೇರೆಯವರು. ವಿಧಾನಪರಿಷತ್ನ ೨೧ ಜನರ ಪೈಕಿ ೧೯ ಮಂದಿ ನನ್ನನ್ನು ಪ್ರತಿಪಕ್ಷ ನಾಯಕನ ಮಾಡಬೇಕು ಎಂದರು. ಆದರೆ ನನಗಿಂತ ಕಿರಿಯ, ಇಲ್ಲಿಯವರೆಗೆ ಯಾವ ಚುನಾವಣೆಯನ್ನೂ ಗೆದ್ದಿಲ್ಲದ ವ್ಯಕ್ತಿಗೆ ಆ ಸ್ಥಾನ ಕೊಟ್ಟರು. ಅದನ್ನು ಯಾರಿಗೆ ಕೇಳುವುದು? ಚುನಾವಣೆಗೆ ನನ್ನನ್ನು ಬಳಸಿಕೊಳ್ಳುವವರು ಈಗ ಏಕೆ ಕೈ ಬಿಟ್ಟರು? ನನಗೆ ಸ್ಥಾನ ಸಿಗದೇ ಇರಲು ಕಾರಣ ನಾನು ಮುಸ್ಲಿಂ ಎಂಬುದು ಅಷ್ಟೆ. ಅಂದರೆ
ಕಾಂಗ್ರೆಸ್ನದ್ದು ಸಾ- ಹಿಂದುತ್ವ. ಅದಕ್ಕೇ ಬಿಟ್ಟು ಬಂದೆ.
? ಅಧಿಕಾರಕ್ಕಾಗಿ ಪಕ್ಷ ಬಿಟ್ಟಿದ್ದಾರೆ ಎನ್ನುತ್ತಿದ್ದಾರಲ್ಲ?
ಹಾಗಾದರೆ ಕಾಂಗ್ರೆಸಿಗರಿಗೆ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂದು ಖಾತ್ರಿಯಾಗಿದೆ ಎಂದಾಯಿತಲ್ಲ. ಇನ್ನೂ ಮೂರು ವರ್ಷ ಅಧಿಕಾರವಧಿ ಇದ್ದಿದ್ದ ಪರಿಷತ್ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿ ಬಂದಿದ್ದೇನೆ. ನನಗೆ ನೀಡಿರುವ ರಾಜ್ಯಾಧ್ಯಕ್ಷ ಹುದ್ದೆ ಅಧಿಕಾರವಲ್ಲ. ಬದಲಿಗೆ ಜೋಳಿಗೆ ಹಾಕಿಕೊಂಡು ರಾಜ್ಯಾದ್ಯಂತ ತಿರುಗುವ ಕೆಲಸ. ಇಲ್ಲಿ ಸ್ಥಾನವಿಲ್ಲ ದಿದ್ದರೂ, ಮಾನವಿದೆ. ಇಲ್ಲಿ ಒಳ್ಳೆಯ ಜನರಿದ್ದಾರೆ. ಸಂಸ್ಕೃತಿಯಿದೆ. ಗೌರವದಿಂದ ಕಾಣುತ್ತಾರೆ. ಅವರಂತೆ ‘ಹಾ-ಹು’ ಎಂದು ಕೂಗಾಡುವುದಿಲ್ಲ. ಸಿದ್ದರಾಮಯ್ಯ ಆ ಹಾರಾಟವನ್ನು ಹೇಗೆ ತಡೆದುಕೊಂಡಿದ್ದಾರೋ ಗೊತ್ತಿಲ್ಲ.
? ಅಲ್ಪಸಂಖ್ಯಾತರಿಗೆ ಸ್ಥಾನ ಸಿಗುವ ವಿಶ್ವಾಸವಿದೆಯೇ?
ಕಾಂಗ್ರೆಸ್ನಲ್ಲಿ ಕೋಣೆ ಕೊಡಲು ಹಿಂದೇಟು ಹಾಕುತ್ತಿದ್ದರು. ಆದರೆ ಇಲ್ಲಿ ಮನೆಯ ಕೀಲಿಯನ್ನೇ ಕೊಟ್ಟಿದ್ದಾರೆ. ಒಂದು ರುಪಾಯಿಗೆ ಜಳಗವಾಡಿದರೆ ನಾಕಾಣೆಯಾದರೂ ಸಿಗುವ ವಿಶ್ವಾಸವಿದೆ. ಅಲ್ಲಿದ್ದರೆ ವಿಮಾನದ ಖರ್ಚು ಹಾಕಿ ಕೊಂಡು ದೆಹಲಿಗೆ ಹೋಗಿ, ಕಂಬಗಳನ್ನು ಸುತ್ತಿ. ಆಯಮ್ಮ ಯಾರೆಂದು ಹುಡುಕಬೇಕಿತ್ತು. ಆದರೆ ಜೆಡಿಎಸ್ನಲ್ಲಿ ಹಾಗಿಲ್ಲವಲ್ಲ. ನಮ್ಮ ವರಿಷ್ಠರು ಇಲ್ಲೇ ಪದ್ಮನಾ ಭನಗರದಲ್ಲಿ ಇದ್ದಾರೆ. ಅವರು ಎಲ್ಲಿಗೂ ತಪ್ಪಿಸಿಕೊಂಡು ಹೋಗುವುದಿಲ್ಲ, ನಾವೂ ಹೋಗು ವುದಿಲ್ಲ. ಇಲ್ಲೇ ಎಲ್ಲವೂ ನಿರ್ಧಾರವಾಗುತ್ತದೆ.
? ಬಿಜೆಪಿಯ ಬಿ.ಟೀಂ ಎನ್ನುವ ಆರೋಪವಿದೆಯಲ್ಲ?
ಉತ್ತರ ಪ್ರದೇಶ, ಗುಜರಾತ್ನಲ್ಲಿ ಬಿಜೆಪಿಯ ಬಿ. ಟೀಂ ಆಗಿ ವರ್ತಿಸಿರೋದು ಕಾಂಗ್ರೆಸ್ಸೇ ಹೊರತು ಜೆಡಿಎಸ್ ಅಲ್ಲ. ದೇಶದಲ್ಲಿ ಬಿಜೆಪಿ ತಳವೂರಲು ಬುನಾದಿ ಹಾಕಿದ್ದು, ಜೆಡಿಎಸ್ ಪಕ್ಷವೋ ಅಥವಾ ಕಾಂಗ್ರೆಸೋ ಎನ್ನುವುದನ್ನು ಅವರು ಅರ್ಥ ಮಾಡಿಕೊಳ್ಳಲಿ. ಸ್ವತಃ ಪ್ರಿಯಾಂಕಾ ಗಾಂಧಿ ಅವರೇ ಹೋಗಿದ್ದಕ್ಕೆ ಉತ್ತರ ಪ್ರದೇಶದಲ್ಲಿ ಕೇವಲ ಎರಡು ಸೀಟು ಪಡೆದುಕೊಂಡಿದ್ದು. ನಾವು ಹೋಗಿಲ್ಲ.
? ಧರ್ಮ ಸಂಘರ್ಘ ನಿಜಕ್ಕೂ ಅಗತ್ಯವಿದೆಯೇ?
ಈ ಧರ್ಮ ಸಂಘರ್ಷಗಳನ್ನೆಲ್ಲಾ ಮಾಡಿಸುತ್ತಿರುವುದೇ ಬಿಜೆಪಿಯವರು. ಆದರೆ, ಇವರು ಏನೇ ಮಾಡಿಸಿದರೂ, ಇದೆಲ್ಲ ಜನರ ತಲೆಗೆ ಹೋಗುವುದಿಲ್ಲ. ಹಿಂದೂಗಳು ಎಂದಿಗೂ ಮುಸ್ಲಿಮರಾಗಲ್ಲ. ಯಾರು ಜಾತಿ ನೋಡಿ ಪ್ರೀತಿ ಮಾಡಲ್ಲ. ಗುಣ ನೋಡಿ ಪ್ರೀತಿಸುತ್ತಾರೆ. ನಮ್ಮದು ಸರ್ವ ಜನಾಂಗದ ಶಾಂತಿಯ ನೋಟ. ಇಲ್ಲಿ ಮಾನವೀಯತೆ, ಪ್ರೇಮ ಎನ್ನುವುದು ಗೋಕರ್ಣದಲ್ಲಿ ಆತ್ಮಲಿಂಗ ದಂತೆ ಬೇರೂರಿದೆ. ಇದ್ಯಾವುದು ಇಲ್ಲಿ ನಡೆಯುವುದಿಲ್ಲ.
? ಪಕ್ಷದಲ್ಲಿ ನಾಯಕ ಕೊರತೆ ಇದೆಯಾ?
೧೯೯೫ರಲ್ಲಿ ನಾಯಕರ ದಂಡಿತ್ತು. ಈಗಿಲ್ಲ ಎಂದು ಕೆಲವರು ಹೇಳುತ್ತಾರೆ. ಆದರೆ, ನಾವು ಹೊಸ ನಾಯಕರನ್ನು ಸೃಷ್ಟಿಸುತ್ತೇವೆ. ನಾವು ರೈತರ ಮಕ್ಕಳು. ೫೦ ಆಕಳು ಕಟ್ಟಿದರೂ, ಒಂದೇ ಹೋರಿಯನ್ನು ಕಟ್ಟುವುದು. ನಮ್ಮಲ್ಲಿ ದೇವೇಗೌಡ, ಕುಮಾರಸ್ವಾಮಿ, ನಾನು, ಬಂಡೆಪ್ಪ ಕಾಶೆಂಪೂರ, ಎಚ್.ಕೆ. ಕುಮಾರಸ್ವಾಮಿ ಇದ್ದೇವೆ. ಇಷ್ಟು ಸಾಕು. ಕಾಂಗ್ರೆಸ್ನಲ್ಲಿ ಇರೋದೇ ಇಬ್ಬರು. ಸಿದ್ದರಾಮಯ್ಯ ಹಾಗೂ ಶಿವಕುಮಾರ್. ಅವರಿಬ್ಬರೂ ಹೊಡೆದಾಡಿ ಕೊಂಡಿದ್ದಾರೆ. ಇವರನ್ನು ಬಿಟ್ಟರೆ ಐದು ವೋಟು ತರಬಲ್ಲ ಮೂರನೇ ನಾಯಕನನ್ನು ತೋರಿಸಿ. ಜೆಡಿಎಸ್ನಲ್ಲಿ ವೋಟು ತರುವ ಮಷಿನ್ಗಳಿವೆ.
? ಎಷ್ಟು ಸೀಟಿನ ಮೇಲೆ ಕಣ್ಣು?
ಈಗಾಗಲೇ ಹೇಳಿದ್ದೇನೆ, ೧೨೩ ಸೀಟುಗಳ ಮೂಲಕ ಸ್ಪಷ್ಟ ಬಹುಮತ ಪಡೆಯುತ್ತೇವೆ. ಈ ಹಿಂದೆ ಬೆಳೆ ಬೆಳೆದರೂ ರಾಶಿ ಹಾಕುತ್ತಿರಲಿಲ್ಲ. ಆದರೆ ಈ ಬಾರಿ ಹಾಗಲ್ಲ. ಖಂಡಿತವಾಗಿ ಗೆಲ್ಲುತ್ತೇವೆ.
? ದುಡ್ಡಿಲ್ಲದೇ ಚುನಾವಣೆ ಸಾಧ್ಯವೇ?
ಹೌದು, ಅಲ್ಲಿ ನಮಗೆ ಸಮಸ್ಯೆಯಾಗಬಹುದು. ಕೆಲವು ಭಾಗದಲ್ಲಿ ಸೋತಿದ್ದೇವೆ ಸಹ. ಆದರೆ, ಈಗ ಜನ ಬದಲಾಗುತ್ತಿದ್ದಾರೆ. ಬಿಜೆಪಿ, ಕಾಂಗ್ರೆಸ್ ಬದಲಾಗಿ ಜೆಡಿಎಸ್ ಬೇಕೇಬೇಕು ಎನ್ನುವ ವಾತವಾರಣವನ್ನು ಸೃಷ್ಟಿಸುತ್ತೇವೆ. ಅದಕ್ಕಾಗಿ ನಾವು ಜನರೊಂದಿಗೆ ಸಂಪರ್ಕ ಸಾಧಿಸುತ್ತೇವೆ.
? ಪಠ್ಯದಿಂದ ಟಿಪ್ಪು ವಿಷಯ ತಗೆಯುವ ಬಗ್ಗೆ ನಿಮ್ಮ ಅಭಿಪ್ರಾಯ?
ಟಿಪ್ಪು ಸುಲ್ತಾನನ ಬಗ್ಗೆ ನಾನು ಮಾತನಾಡಿದರೆ, ‘ಇವನು ಸಾಬ’, ಅದಕ್ಕೆ ಪರವಾಗಿ ಮಾತನಾಡುತ್ತಾನೆ ಎಂದು ಹೇಳುತ್ತಾರೆ. ಬಿಜೆಪಿಯವರು ಟಿಪ್ಪುವಿನ ಬಗ್ಗೆ ತೀರ್ಮಾನ ಕೈಗೊಳ್ಳುವ ಮೊದಲು, ಶೃಂಗೇರಿ ಮಠದ ಸ್ವಾಮೀಜಿಗಳನ್ನು, ಸುತ್ತೂರು ಶ್ರೀಗಳನ್ನು ಕೇಳಲಿ. ಟಿಪ್ಪು ಸಾವಿರಾರು ಬ್ರಾಹ್ಮಣರಿಗೆ ನಿತ್ಯ ದಾಸೋಹ ಮಾಡಿದ್ದಕ್ಕೆ ಇತಿಹಾಸವಿದೆ. ಬ್ರಿಟಿಷರ ವಿರುದ್ಧ ಟಿಪ್ಪು ಹೋರಾಡಿದರೂ, ಆತನ ಸಮಾಧಿಗೆ ಅವಕಾಶ ಮಾಡಿಕೊಟ್ಟರು. ಬಿಜೆಪಿಗರು ಬ್ರಿಟೀಷರಿಗಿಂತ ಕಡೆಯಾಗಿದ್ದಾರೆ. ಈ ಬಗ್ಗೆ ನಾನು ವೈಯಕ್ತಿಕವಾಗಿ ಹೈಕೋರ್ಟ್ನಲ್ಲಿ
ಅರ್ಜಿ ಸಲ್ಲಿಸುತ್ತೇನೆ. ಟಿಪ್ಪು ಸುಲ್ತಾನ್, ಶಿವಾಜಿ, ರಾಣಿ ಚೆನ್ನಮ್ಮ ಇವರೆಲ್ಲ ದೇಶಕ್ಕೆ ಮಾದರಿ. ಇವರ ಹೆಸರಲ್ಲಿ ರಾಜಕೀಯ ಮಾಡುವುದು ನಾಚಿಕೆಗೇಡಿನ ಸಂಗತಿ.
***
ರಾಜಕಾರಣದಲ್ಲಿ ಹಣ ಬಲವೇ ಮುಖ್ಯ. ಇಂದಿನ ಚುನಾವಣಾ ರಾಜಕೀಯದಲ್ಲಿ ಮಹಾತ್ಮ ಗಾಂಽಯೇ ನಿಂತರೂ ೧೦ ಕೋಟಿ ರು. ವ್ಯಯಿಸಬೇಕಾದ ಪರಿಸ್ಥಿತಿಯಿದೆ. ಇದನ್ನು ಬದಲಾಯಿಸುವ ಅಗತ್ಯವಿದೆ. ಆ ಸ್ಥಿತಿ ಬದಲಾಯಿಸುವುದೇ ಜೆಡಿಎಸ್ನ ಮುಖ್ಯ ಧ್ಯೇಯ.
– ಸಿ.ಎಂ. ಇಬ್ರಾಹಿಂ ಜೆಡಿಎಸ್ ರಾಜ್ಯಾಧ್ಯಕ್ಷ
ಸಾಫ್ಟ್ ಕಾರ್ನರ್ ಏಕೆ?
ಹಾಗೆ ನೋಡಿದರೆ ಬಿಜೆಪಿಯನ್ನು ಹೆಚ್ಚು ನಿಂದಿಸುತ್ತಿರುವುದು ಕಾಂಗ್ರೆಸ್ನವರು. ಎಚ್.ಡಿ.ಕುಮಾರಸ್ವಾಮಿ ಅವರನ್ನು ಅಧಿಕಾರದಿಂದ ತಗೆದವರೇ ಕಾಂಗ್ರೆಸ್ನವರು. ಆದ್ದರಿಂದ
ಸ್ವಾಭಾವಿಕವಾಗಿಯೇ ಅವರಿಗೆ ಕಾಂಗ್ರೆಸ್ ಮೇಲೆ ಸಿಟ್ಟಿದೆ. ರಾಜ್ಯದಲ್ಲಿದ್ದ ಸಮ್ಮಿಶ್ರ ಸರಕಾರವನ್ನು ಬೀಳಿಸಿದ್ದು ಯಾರು? ಬಿಜೆಪಿ ಜತೆ ಓಡಿ ಹೋದ ಶಾಸಕರನ್ನು ಕಳುಹಿಸಿದ್ದು ಕಾಂಗ್ರೆಸ್ ನಾಯಕ ರಲ್ಲವೇ? ಅದು ಮೋಸ ತಾನೇ? ಬಿಜೆಪಿಯ ಜನಕನೇ ಕಾಂಗ್ರೆಸ್. ಕಾಂಗ್ರೆಸ್ ಗಟ್ಟಿಯಾಗಿದ್ದರೆ ಬಿಜೆಪಿ ಏಕೆ ಅಧಿಕಾರಕ್ಕೆ ಬರುತ್ತಿತ್ತು?
***
?ಹಿಜಾಬ್ ಎಂದರೆ ಬೇರೇನೋ ಅಲ್ಲ. ಸೆರಗು ಎನ್ನುವ ಅರ್ಥವಷ್ಟೆ. ಸೆರಗನ್ನು ಉಟ್ಟ ನಮ್ಮ ತಾಯಂದಿರು ಲಕ್ಷ್ಮೀಯರಂತೆ ಕಾಣುತ್ತಿದ್ದರು. ಇಂದಿರಾ ಗಾಂಧಿ, ಪ್ರತಿಭಾ
ಪಾಟೀಲ್ ಅವರೆಲ್ಲ ಸೆರಗನ್ನು ತಲೆಯ ಮೇಲೆ ಹಾಕುತ್ತಿರಲಿಲ್ಲವೇ? ಮೈಸೂರು ರಾಜರ ಕಾಲದಲ್ಲಿ ಮುಸ್ಲಿಂ ಮಹಿಳೆಯರಿಗೆ ಪರದೆ ಹೊಂದಿದ್ದ ರಿಕ್ಷಾಗಳಿದ್ದವು.
?ಕರ್ನಾಟಕದಲ್ಲಿ ಧರ್ಮದ ಆಧಾರದಲ್ಲಿ ಜನ ಮತ ಹಾಕುವುದಿಲ್ಲ. ಬಸವಣ್ಣ, ಸರ್ವಜ್ಞರ ನಾಡು ಕರ್ನಾಟಕ. ಶೇ. ೯೯ರಷ್ಟು ಜನರು ಜಾತ್ಯತೀತ ಯೋಚನೆಯಲ್ಲಿದ್ದಾರೆ.
ಇನ್ನುಳಿದವರು ಬಿಜೆಪಿಯವರ ರೀತಿ ಧರ್ಮದ ಆಧಾರದಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಾರೆ.
?ಹುಬ್ಬಳ್ಳಿಯ ಗಲಾಟೆಯಲ್ಲಿ ಎರಡೂ ಕಡೆಯವರಿದ್ದಾರೆ. ಹಾಗೆ ನೋಡಿದರೆ, ಬಜರಂಗದಳ ಹಾಗೂ ಪಿಎ-ಐ ದಯಾದಿಗಳ ಮಕ್ಕಳು ಇದ್ದಂತೆ. ಒಬ್ಬರನ್ನು ಬಿಟ್ಟು ಒಬ್ಬರು ಇಲ್ಲ.