Saturday, 23rd November 2024

ಮುಳ್ಳು ಹಂದಿಯ ಮುಳ್ಳು ಎಷ್ಟು ಉದ್ದವಿರುತ್ತದೆ ?

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ಚಿಪ್ಪು ಹಂದಿಯನ್ನು ನಮ್ಮ ದೇಶದಲ್ಲಿ ನಶಿಸುತ್ತಿರುವ ಜೀವಿ ಎಂದು ಗುರುತಿಸಲಾಗಿರುವುದರಿಂದ, ಅಷ್ಟರ ಮಟ್ಟಿಗೆ ಅವುಗಳಿಗೆ
ಕಾನೂನಿನ ರಕ್ಷಣೆ ಇದೆ. ಆದರೇನು ಮಾಡುವುದು, ಅವುಗಳ ವಾಸಸ್ಥಳ ಇಂದು ವಿಪರೀತ ವೇಗವಾಗಿ ನಾಶವಾಗುತ್ತಿದೆ.

ಮನುಷ್ಯನ ದೀರ್ಘಕಾಲೀನ ಒಡನಾಡಿಗಳಾಗಿರುವ ವನ್ಯಜೀವಿಗಳು ಅದೆಷ್ಟು ವೇಗವಾಗಿ ತಮ್ಮ ವಾಸಸ್ಥಳವನ್ನು, ಆ ಮೂಲಕ ಅಸ್ತಿತ್ವ ವನ್ನೇ ಕಳೆದುಕೊಳ್ಳುತ್ತಿವೆ ಎಂಬುದನ್ನು, ನಗರದಲ್ಲಿರುವ ನಮ್ಮ ನಿಮ್ಮಂತಹ ಬಹುಪಾಲು ಮಂದಿ ಊಹಿಸಲೂ ಸಾಧ್ಯವಿಲ್ಲ.
ವನ್ಯಜೀವಿ ರಕ್ಷಣೆಯ ಕಾನೂನು ಸಾಕಷ್ಟು ಬಿಗಿಯಾಗಿದ್ದರೂ, ಈಚಿನ ಒಂದೆರಡು ದಶಕಗಳಲ್ಲಿ ಹುಲಿ, ಚಿರತೆಯಂತಹ ದೊಡ್ಡ ಗಾತ್ರದ ವನ್ಯಜೀವಿಗಳು ಮೇಲ್ನೋಟಕ್ಕೆ ಸಂಖ್ಯೆಯನ್ನು ವೃದ್ಧಿಸಿಕೊಳ್ಳುತ್ತಿರುವಂತೆ ಕಂಡರೂ, ಸಣ್ಣ ಪುಟ್ಟ ಜೀವಿಗಳ ಸ್ಥಿತಿ ನಿಜಕ್ಕೂ ಹೆಚ್ಚು ಹೆಚ್ಚು ಶೋಚನೀಯವಾಗುತ್ತಿದೆ.

ಅಂಕಿ-ಸಂಕಿಗಳು ಸಾಕಷ್ಟು ಪ್ರಮುಖ ಅಂಶಗಳನ್ನು ಬಿಂಬಿಸಿದರೂ, ಅವು ತೋರುವ ಸ್ಥಿತಿಗಿಂತ ವಿಭಿನ್ನ ಎನಿಸುವ ಸನ್ನಿವೇಶ ನಮ್ಮಲ್ಲಿದೆ. ಕೆಲವು ತಿಂಗಳುಗಳ ಹಿಂದಿನ ಘಟನೆ. ನಮ್ಮೂರು ಹಾಲಾಡಿಯ ಸುತ್ತ ಮುತ್ತ ಸಾಕಷ್ಟು ಕಾಡು ಪ್ರದೇಶ, ಕುರುಚಲು ಪ್ರದೇಶ ಮೇಲ್ನೋಟಕ್ಕೆ ಕಾಣಿಸುತ್ತದೆ. ಭಯಾನಕ ಬೃಹತ್ ಕಳೆ ಎನಿಸಿರುವ ಅಕೇಶಿ ಯಾವು ಈಚಿನ ದಶಕಗಳಲ್ಲಿ ಅತಿವೇಗದಿಂದ ಅಲ್ಲಿನ ಕಾಡುಪ್ರದೇಶವನ್ನು ಆಕ್ರಮಿಸು ತ್ತಿದ್ದರೂ, ಅಲ್ಲಲ್ಲಿ ಹಾಡಿ, ಹಕ್ಕಲು, ಕುರುಚಲು ಗಿಡಗಳು, ಬ್ಯಾಣಗಳು ಇನ್ನೂ ಇವೆ.

ಹಾಲಾಡಿ ಬಸ್‌ಸ್ಟ್ಯಾಂಡ್‌ಗೆ ಪ್ರತಿದಿನ ಬೆಳಗ್ಗೆ ಹಾಲು ತರಲು ಹೋಗುವ ಪರಿಪಾಠ ನನ್ನದು. ಬಸ್, ಕಾರು ಚಲಿಸುವ ಟಾರು ರಸ್ತೆಯೇ ನನ್ನ ದಾರಿ. ಹೊಸ ಹೊಸ ಕಾರು ಗಳು, ಬೃಹತ್ ಲಾರಿಗಳು ವೇಗವಾಗಿ ಚಲಿಸಲು ಅನುಕೂಲವಾಗುವಂತೆ, ನಯವಾದ ರಸ್ತೆಯನ್ನು ಈಚಿನ ವರ್ಷಗಳಲ್ಲಿ ನಿರ್ಮಿಸಿದ್ದಾರೆ. ರಸ್ತೆ ಅಗಲೀಕರಣವೂ ನಡೆಯುತ್ತಿದೆ. ಒಂದು ದಿನ ಬೆಳಗ್ಗೆ ಬೇಗನೆ ಹಾಲು ತರಲು ಹೋಗುತ್ತಿದ್ದಾಗ, ರಸ್ತೆಯ ಪಕ್ಕದಲ್ಲೇ ಒಂದಷ್ಟು ಮುಳ್ಳುಗಳು ಬಿದ್ದಿದ್ದವು ಕಾಣಿಸಿತು.

ಎರಡರಿಂದ ಮೂರು ಇಂಚು ಉದ್ದ, ನಸುಕೆಂಪು ಮತ್ತು ಬಿಳಿ ಬಣ್ಣದ ಪಟ್ಟಿಗಳಿದ್ದ ಹರಿತವಾದ ಮುಳ್ಳುಗಳು. ನೋಡದ ಕೂಡಲೆ ಗೊತ್ತಾ ಯಿತು – ಅವು ಮುಳ್ಳುಹಂದಿಯ ಮುಳ್ಳುಗಳು ಎಂದು. ಆದರೆ ರಸ್ತೆಯ ಪಕ್ಕದಲ್ಲೇ ಆರೆಂಟು ಮುಳ್ಳುಗಳೇಕೆ ಬಿದ್ದಿವೆ ಎಂಬ ಕುತೂಹಲಕ್ಕೆ ತಕ್ಷಣ ಉತ್ತರ ದೊರಕಲಿಲ್ಲ. ಅಲ್ಲೇ ಆಚೀಚೆ ತುಸು ಪರಿಶೀಲನೆ ಮಾಡಿದೆ. ಎರಡು ಅಡಿ ದೂರದ ಪೊದೆಯೊಂದರ ಬಳಿ ಇನ್ನೂ ನಾಲ್ಕಾರು ಮುಳ್ಳುಗಳು ಬಿದ್ದದ್ದವು.

ಸೂಕ್ಷ್ಮವಾಗಿ ಗಮನಿಸಿದಾಗ, ರಸ್ತೆಯ ಮೇಲೆ ಅಲ್ಲಲ್ಲಿ ರಕ್ತದ ಕಲೆಗಳೂ ಕಂಡವು. ವಿಷಯ ಸ್ಪಷ್ಟವಾಯಿತು. ರಾತ್ರಿಯ ಹೊತ್ತಿನಲ್ಲಿ ಯಾವುದೋ ವಾಹನವು ಪ್ರಖರ ಬೆಳಕನ್ನು ಹಾಕಿಕೊಂಡು ಚಲಿಸುವಾಗ, ರಸ್ತೆಯ ಮೇಲೆ ಬಂದ ಮುಳ್ಳುಹಂದಿಯೊಂದು ಅದಕ್ಕೆ ಸಿಲುಕಿ ಗಾಯಗೊಂಡಿದೆ. ಆಗ ಹತ್ತಾರು ಮುಳ್ಳುಗಳು ಉದುರಿಬಿದ್ದಿವೆ. ಬಹುಷಃ ರಸ್ತೆಯ ಒಂದು ಭಾಗದಲ್ಲಿದ್ದ ಕುರುಚಲು ಗಿಡಗಳಿರುವ
ಪ್ರದೇಶಕ್ಕೆ ಆ ಗಾಯಗೊಂಡ ಮುಳ್ಳುಹಂದಿ ಕುಂಟಿಕೊಂಡು ಹೋಗಿರಬೇಕು. ಹೆಚ್ಚು ಗಾಯಗಳಾಗಿದ್ದರೆ, ಸ್ವಲ್ಪ ದೂರ ಚಲಿಸಿದ ನಂತರ, ಅದು ಅಲ್ಲೇ ಗಿಡದ ಮರೆಯಲ್ಲಿ ಎಲ್ಲೋ ಸತ್ತು ಬಿದ್ದಿರಲೂ ಬಹುದು.

ಹಾಗಾಗಿದ್ದರೆ, ಈ ಜಗತ್ತಿಗೆ ಮತ್ತೊಂದು ಅಪರೂಪದ ಜೀವಿಯ ನಷ್ಟವಾಯಿತು ಎಂದರ್ಥ. ಅಂಕಿ ಅಂಶಗಳ ಪ್ರಾಮುಖ್ಯತೆಗಿಂದ, ವಾಸ್ತವ ಚಿತ್ರಣ ವಿಭಿನ್ನವಾಗಿದೆ ಎಂದು ಮೇಲಿನ ಪ್ಯಾರಾದಲ್ಲಿ ನಾನು ಇದಕ್ಕೇ ಹೇಳಿದ್ದು. ಏಕೆಂದರೆ, ನಮ್ಮ ದೇಶದಲ್ಲಿ ಈಗ ಇರುವ ವರ್ಗೀ ಕರಣದ ಪ್ರಕಾರ, ಮುಳ್ಳು ಹಂದಿಯು ಅಪಾಯದ ಅಂಚಿನಲ್ಲಿರುವ ಪ್ರಾಣಿ ಅಲ್ಲ! ಐಯುಸಿಎನ್ ಸಿದ್ಧಪಡಿಸಿರುವ ಪಟ್ಟಿಯ ಪ್ರಕಾರ, ‘ಲೀಸ್ಟ್ ಕನ್ಸರ್ನ್’ ಅಂದರೆ, ‘ಕನಿಷ್ಠ ಕಾಳಜಿ’ ಯ ಪಟ್ಟಿಯಲ್ಲಿ ಮುಳ್ಳು ಹಂದಿಯನ್ನು ಸೇರಿಸಲಾಗಿದೆ.

ಆದರೆ, ಮುಳ್ಳುಹಂದಿಗಳಂತಹ ಸಣ್ಣ ಗಾತ್ರದ ಜೀವಿಗಳು ಬಹು ಬೇಗನೆ ತಮ್ಮ ಅಸ್ತಿತ್ವವನ್ನು, ತಮ್ಮ ವಾಸಸ್ಥಳವನ್ನು ನಿರಂತರವಾಗಿ ಕಳೆದುಕೊಳ್ಳುತ್ತಿವೆ. ಹಾಲಾಡಿಯಲ್ಲಿ ನಾನು ಕಂಡ ಘಟನೆಯನ್ನು ನೋಡಿ – ಆ ರಸ್ತೆಯು ಕೆಲವೇ ವರ್ಷಗಳ ಹಿಂದೆ ಅಗಲ ಕಿರಿದಾಗಿ, ಸಾಧಾರಣ ರಸ್ತೆ ಎನಿಸಿತ್ತು, ವಾಹನಗಳು ಅನಿವಾರ್ಯವಾಗಿ ನಿಧಾನವಾಗಿಯೇ ಚಲಿಸಬೇಕಿತ್ತು. ಈಗ ಅದು ಅಗಲೀಕರಣಗೊಂಡಿದೆ, ನಯವಾಗಿದೆ – ಆದ್ದರಿಂದ ವೇಗವಾಗಿ ಚಲಿಸುತ್ತವೆ. ಮಿಗಿಲಾಗಿ, ಅಲ್ಲಿ ಚಲಿಸುವ ವಾಹನಗಳ ಸಂಖ್ಯೆಯೂ ಈಚಿನ ವರ್ಷಗಳಲ್ಲಿ ಸಾಕಷ್ಟು ಹೆಚ್ಚಳಗೊಂಡಿದೆ. ಮುಳ್ಳು ಹಂದಿ ನಿಶಾಚರಿ. ರಾತ್ರಿಹೊತ್ತು ರಸ್ತೆಯನ್ನು ದಾಟುವಾಗಲೋ, ರಸ್ತೆಯ ಪಕ್ಕದಲ್ಲಿ ಚಲಿಸುವಾಗಲೋ,
ಸಹಜವಾಗಿ ಅದಕ್ಕೆ ಹಿಂದಿಗಿಂತ ಅಪಾಯ ಹೆಚ್ಚು.

ಮುಳ್ಳು ಹಂದಿಗಳು ಬಹಳ ಧೈರ್ಯಶಾಲಿ ಪ್ರಾಣಿಗಳು. ಅವುಗಳ ಸಹಜ ವಾಸಸ್ಥಳದಲ್ಲಿ, ಬೇರೆ ದೊಡ್ಡ ಪ್ರಾಣಿಗಳಿಂದ ಅಪಾಯ ಎದುರಾ ದರೆ, ಮೊದಲಿಗೆ ತಮ್ಮ ಮೈಯಲ್ಲಿರುವ ನೂರಾರು ಮುಳ್ಳುಗಳನ್ನು ನಿಮಿರಿಸಿಕೊಂಡು, ವೇಗವಾಗಿ ಅಲ್ಲಾಡಿಸುತ್ತವೆ. ಆಗ ಬರಬರ ಎಂಬ ಸದ್ದಾಗುತ್ತದೆ; ಇದು ಮೊದಲ ರಕ್ಷಣಾ ವಿಧಾನ. ಇದನ್ನು ಕೇಳಿಸಿಕೊಂಡ ಬೇಟೆಗಾರ ಪ್ರಾಣಿಗಳು ದೂರ ಹೋದರೆ ಕ್ಷೇಮ. ಇನ್ನೂ ಅಲ್ಲೇ ಇದ್ದು ಹೊಂಚು ಹಾಕುತ್ತಿದ್ದರೆ, ಮುಳ್ಳು ಹಂದಿ ತನ್ನ ಚೂಪಾದ ನೂರಾರು ಮುಳ್ಳುಗಳನ್ನು ನಿಮಿರಿಸಿಕೊಂಡು, ವೇಗವಾಗಿ ಹಿಮ್ಮುಖ ಚಲನೆ ನಡೆಸಿ, ಆ ಪ್ರಾಣಿಯತ್ತ ಧಾವಿಸುತ್ತದೆ. ಬೇಟೆಗಾರನು ಎಚ್ಚೆತ್ತುಕೊಂಡು, ದೂರ ನೆಗೆದರೆ ಬಚಾವ್! ಇಲ್ಲವಾದರೆ, ಮುಳ್ಳುಗಳು ಅದರ ಮುಖ, ಕುತ್ತಿಗೆ, ಹೊಟ್ಟೆಗಳಿಗೆ ಬಲವಾಗಿ ನಾಟಬಹುದು.

ಮೂರರಿಂದ ನಾಲ್ಕು ಇಂಚು ಉದ್ದದ ಹರಿತವಾದ, ದಪ್ಪನೆಯ ಮುಳ್ಳುಗಳು ಕುತ್ತಿಗೆ, ಮುಖ, ಹೊಟ್ಟೆಗೆ ಚುಚ್ಚಿದರೆ, ಆ ಪ್ರಾಣಿಯ ಕಥೆ ಮುಗಿದಂತೆಯೇ. ಮುಳ್ಳು ಹಂದಿಯಿಂದ ಚುಚ್ಚಿಸಿಕೊಂಡ ಚಿರತೆ ಮತ್ತು ಹುಲಿ ಸತ್ತದ್ದನ್ನು ತಜ್ಞರು ದಾಖಲಿಸಿದ್ದಾರೆ. ನಾಯಿಗಳ ಮುಖಕ್ಕೆ
ಮುಳ್ಳುಹಂದಿಯ ಮುಳ್ಳುಗಳು ಚುಚ್ಚಿಕೊಂಡರೆ, ನಾಯಿ ಅಸಹಾಯಕ. ಮುಳ್ಳುಹಂದಿಯ ಈ ರೀತಿಯ ಭಂಡ ಧೈರ್ಯವು ಕಾಡು ಪ್ರಾಣಿ ಗಳನ್ನು ಎದುರಿಸಲು ಸೂಕ್ತ ನಿಜ. ಆದರೆ, ಅದೇ ಧೈರ್ಯದಿಂದ ಅದು ರಸ್ತೆಯನ್ನು ದಾಟುವುದರಿಂದ, ರಸ್ತೆಯ ಮೇಲೆ ಚಲಿಸುವು ದರಿಂದಾಗಿ, ಬಹು ಬೇಗನೆ ವಾಹನಗಳ ಅಡಿಗೆ ಸಿಲುಕುವ ಸಾಧ್ಯತೆ ಜಾಸ್ತಿಯಾಗಿದೆ.

ಧೈರ್ಯವೇ ಅದರ ಸಂತತಿಗೆ ಮುಳುವಾಗುತ್ತಿರುವ ಉದಾಹರಣೆ ಇದು. ನಮ್ಮೂರಿನಲ್ಲಿ, ಸಹ್ಯಾದ್ರಿಯ ಕಾಡುಗಳಲ್ಲಿ ಎರಡು ಪ್ರಭೇದದ ಮುಲ್ಳು ಹಂದಿಗಳಿವೆ. ಕಪ್ಪು ಬಿಳಿ ಬಣ್ಣದ ಮುಳ್ಳು ಇರುವ ಪ್ರಭೇದ ಒಂದಾದರೆ, ಕೆಂಪು ಮತ್ತು ಬಿಳಿ ಪಟ್ಟಿ ಇರುವ ಮುಳ್ಳು ಹಂದಿಯ ಇನ್ನೊಂದು ಪ್ರಭೇದವೂ ಇದೆ. ಕೆಂಪು ಮತ್ತು ಬಿಳಿ ಪಟ್ಟಿಯ ಮುಳ್ಳುಗಳಿರುವ ಪ್ರಭೇದವು ದಕ್ಷಿಣ ಭಾರತದಲ್ಲಿ ಮಾತ್ರ ಕಾಣಿಸುತ್ತದೆ. ನಮ್ಮೂರಿನ ಹಾಡಿ, ಗುಡ್ಡೆಗಳಲ್ಲಿ ಅಲ್ಲಲ್ಲಿ ಮುಳ್ಳು ಹಂದಿಯ ಉದ್ದನೆಯ ಮುಳ್ಳು ಬಿದ್ದಿರುವುದು ಸಾಮಾನ್ಯ ದೃಶ್ಯ. ಕೆಂಪು ಪಟ್ಟಿ ಮತ್ತು ಕಪ್ಪು ಪಟ್ಟಿಯ ಎರಡೂ ರೀತಿಯ ಮುಳ್ಳುಗಳನ್ನು ನಾನು ಕಂಡದ್ದುಂಟು.

ಮೂರು- ನಾಲ್ಕು ಇಂಚು ಉದ್ದನೆಯ ಬಲವಾದ ಮುಳ್ಳುಗಳನ್ನು ಬೆಳೆಸಿಕೊಳ್ಳುವ ಮುಳ್ಳುಹಂದಿಯು, ಕ್ರಮೇಣ ಅಂತಹ ಮುಳ್ಳುಗಳನ್ನು ಉದುರಿಸಿಕೊಳ್ಳುತ್ತದೆ. ಆ ಜಾಗದಲ್ಲಿ ಪುನಃ ಹೊಸ ಮುಳ್ಳು ಬೆಳೆಯುತ್ತದೆ. ಆ ರೀತಿ ಕಾಡು, ಗುಡ್ಡಗಳನ್ನು ಬಿದ್ದಿದ್ದ ಮುಳ್ಳುಗಳನ್ನು ನಮ್ಮ ಹಳ್ಳಿಯವರು ಆಯ್ದು ಸಂಗ್ರಹಿ ಸುತ್ತಾರೆ. ಅದೇಕೆ ಎಂದು ಕೇಳಿದರೆ, ‘ಬಾಣಂತಿಯರಿಗೆ ಬೇಕಾಗುತ್ತದೆ’ ಎನ್ನುತ್ತಿದ್ದರು ನಮ್ಮ ಹಿರಿಯರು.

ಮುಳ್ಳುಹಂದಿಯ ರೀತಿಯೇ ಮತ್ತೊಂದು ಅಮಾಯಕ ಜೀವಿಯು, ನಮ್ಮ ರಾಜ್ಯದಿಂದ ಬಹು ಬೇಗನೆ ನಶಿಸುತ್ತಿದೆ. ಇಡೀ ಜಗತ್ತಿನಲ್ಲಿ ಅತಿ ಹೆಚ್ಚು ಕಳ್ಳಸಾಗಣೆಯಾಗುವ ವನ್ಯಜೀವಿ ಎಂಬ ‘ಖ್ಯಾತಿ’ ಹೊಂದಿರುವ ಚಿಪ್ಪುಹಂದಿಯೇ ಆ ನತದೃಷ್ಟ ಜೀವಿ. ಇದನ್ನು ಖ್ಯಾತಿ ಎನ್ನಬೇಕೋ, ದುರಂತ ಎನ್ನ ಬೇಕೋ ತಿಳಿಯದು. ಚೀನಾದಲ್ಲಿ ಚಿಪ್ಪುಹಂದಿಯ ಚಿಪ್ಪುಗಳಿಗೆ, ಇತರ ದೇಹಭಾಗಗಳಿಗೆ ಬಹು ಬೇಡಿಕೆ
ಯಂತೆ. ಔಷಽಯ ಗುಣಗಳು ಎಂಬುದು ನೆಪ. ನಮ್ಮ ದೇಶ ಮತ್ತು ಆಫ್ರಿಕಾದಲ್ಲಿ ಕಂಡು ಬರುವ ಚಿಪ್ಪುಹಂದಿಯನ್ನು ಹಿಡಿದು, ಅನಧಿ ಕೃತವಾಗಿ ಸಾಗಿಸುವ ದಂಧೆ ಬಹಳ ವರ್ಷಗಳಿಂದಲೇ ನಡೆದುಬಂದಿರಬೇಕು.

ಈಗಲೂ ನಡೆಯುತ್ತಿದೆ, ಆದ್ದರಿಂದಲೇ ಜಗತ್ತಿನ ಅತಿ ಹೆಚ್ಚು ಕಳ್ಳಸಾಗಣೆಯಾಗುವ ಜೀವಿ ಅದು! ಕೆಲವು ವರ್ಷಗಳ ಹಿಂದೆ, ಅರಸಿಕೆರೆಯ ಸಣ್ಣ ಹಳ್ಳಿಯೊಂದರಲ್ಲಿ, ಒಬ್ಬ ವ್ಯಕ್ತಿಯ ಒಂದು ಚಿಪ್ಪುಹಂದಿಯನ್ನು ದಾರದಲ್ಲಿ ಕಟ್ಟಿ ಹಿಡಿದುಕೊಂಡಿದ್ದನ್ನು ಕಂಡಿದ್ದೆ. ಸಹಜವಾಗಿ, ಅವನು
ಅದನ್ನು ಎಲ್ಲಿಗೋ ಕಳ್ಳಸಾಗಣೆ ಮಾಡಿರಲೇಬೇಕು. ಈಗಲೂ, ಚಿಪ್ಪುಹಂದಿಯನ್ನು ಅರಣ್ಯ ಇಲಾಖೆ ಯವರು ಬೇಟೆಗಾರರಿಂದ ರಕ್ಷಿಸಿದ ವರದಿಗಳು ಆಗಾಗ ಪ್ರಕಟಗೊಳ್ಳುತ್ತಿರುತ್ತವೆ.

ಚಿಪ್ಪುಹಂದಿ ಒಂದು ಅಮಾಯಕ ಜೀವಿ ಎಂದು ತನ್ನ ಹಾವಭಾವಗಳಿಂದಲೇ ತೋರಿಸುತ್ತದೆ. ಮೂರರಿಂದ ನಾಲ್ಕು ಅಡಿ ಉದ್ದ ಇರಬಹು ದಾದ ಚಿಪ್ಪು ಹಂದಿಯು, ಮನುಷ್ಯನ ಮೇಲೆ ಆಕ್ರಮಣ ಮಾಡುವುದಿಲ್ಲ, ಯಾವ ಪ್ರಾಣಿಗಳ ಮೇಲೂ ಆಕ್ರಮಣ ಮಾಡುವು ದಿಲ್ಲ. ಅಪಾಯಕ್ಕೆ ಸಿಲುಕಿದಾಗ, ಜೋರಾಗಿ ಕೂಗುವುದೂ ಇಲ್ಲ. ಆದ್ದರಿಂದ, ಅದನ್ನು ಹಿಡಿದು ಸಾಗಿಸುವುದು ಸುಲಭ! ಅದರ ರಕ್ಷಣಾ ತಂತ್ರ ವಿಭಿನ್ನ. ದೊಡ್ಡ ಪ್ರಾಣಿಗಳು ಆಕ್ರಮಣ ಮಾಡುವ ಸಂದರ್ಭ ಬಂದರೆ, -ಟ್‌ಬಾಲ್‌ನಂತೆ ಸುರುಳಿ ಸುತ್ತಿಕೊಂಡು ಮಲಗಿಬಿಡುತ್ತದೆ! ಆಗ ಅದರ ಚಿಪ್ಪುಗಳು ಅದಕ್ಕೆ ಅದೆಂತಹ ರಕ್ಷಣೆ ನೀಡುತ್ತವೆ ಎಂದರೆ, ಹುಲಿ, ಸಿಂಹ, ಚಿರತೆಗಳು ಸಹ ಅದರ ಚಿಪ್ಪನ್ನು ಹಲ್ಲಿನಿಂದ ಕಚ್ಚಿ ಹಾನಿಗೊಳಿಸಲಾರವು. ಚಿಪ್ಪು ಹಂದಿ ಸಹ ನಿಜ್ಞಚರಿ.

ನೆಲ ದೊಳಗೆ ಬಹು ಉದ್ದನೆಯ ಬಿಲ ತೋಡುತ್ತವೆ. ಮರಿಗಳನ್ನು ತನ್ನ ಬಾಲದ ಮೇಲೆ ಕೂರಿಸಿಕೊಂಡು, ಸವಾರಿ ಮಾಡುವ ಮೂಲಕ ಅಪೂರ್ವ ಮಾತೃ ಪ್ರೇಮವನ್ನು ತೋರುವ ಚಿಪ್ಪುಹಂದಿಗಳಿಂದ ನಾವು ಕಲಿಯುವುದು ಬೇಕಾದಷ್ಟಿದೆ. ಬಹು ಹಿಂದೆ ಚಿಪ್ಪು ಹಂದಿಗಳ ಚಿಪ್ಪನ್ನು ಬಳಸಿ, ಕೋಟುಗಳನ್ನು ಮಾಡುವ ಸಂಪ್ರದಾಯವಿತ್ತು. ಅದನ್ನು ಧರಿಸಿ ದವರಿಗೆ, ಸಣ್ಣ ಪುಟ್ಟ ಆಯುಧಗಳ ಆಕ್ರಮಣಗಳ
ಭಯವಿಲ್ಲ!

ಚಿಪ್ಪು ಹಂದಿಯನ್ನು ನಮ್ಮ ದೇಶದಲ್ಲಿ ನಶಿಸುತ್ತಿರುವ ಜೀವಿ ಎಂದು ಗುರುತಿಸಲಾಗಿರುವುದರಿಂದ, ಅಷ್ಟರ ಮಟ್ಟಿಗೆ ಅವುಗಳಿಗೆ ಕಾನೂನಿನ ರಕ್ಷಣೆ ಇದೆ. ಆದರೇನು ಮಾಡುವುದು, ಅವುಗಳ ವಾಸಸ್ಥಳ ಇಂದು ವಿಪರೀತ ವೇಗವಾಗಿ ನಾಶವಾಗುತ್ತಿದೆ. ನಮ್ಮ ರಾಜ್ಯದ ಬಯಲು ಸೀಮೆಯಲ್ಲಿ ಅವು ಎಲ್ಲಾ ಕಡೆ ವ್ಯಾಪಕವಾಗಿ ವಾಸಿಸುತ್ತಿದ್ದ ಕಾಲವೊಂದಿತ್ತು. ಆದರೆ, ಹುಲ್ಲುಗಾವಲುಗಳನ್ನು, ಕುರುಚಲು ಕಾಡನ್ನು, ಕಾಡುಪ್ರದೇಶವನ್ನು ನಾನಾ ಉದ್ದೇಶಗಳಿಗೆ ಈಚಿನ ದಶಕಗಳಲ್ಲಿ ಬಳಸಲಾಗಿದೆ, ಬಳಸಲಾಗುತ್ತಿದೆ. ಚಿಪ್ಪುಹಂದಿಯಂತಹ ಪ್ರಾಣಿಗಳು ವಾಸಿಸುತ್ತಿದ್ದ ಬಯಲು ಪ್ರದೇಶಗಳೆಂದರೆ, ನಾಗರಿಕ ಮಾನವನಿಗೆ ಬಹಳ ಇಷ್ಟ, ಪ್ರೀತಿ. ಮನೆ ಕಟ್ಟಲು, ಸೈಟ್ ಮಾಡಲು, ರೆಸಾರ್ಟ್‌ ಮಾಡಲು, ತೋಟ ಮಾಡಲು, ಬೇರೆ ಬೇರೆ ಕೃಷಿ ಮಾಡಲು, ಏನೂ ಇಲ್ಲವೆಂದರೆ, ಬೇಲಿ ಹಾಕಿಟ್ಟುಕೊಂಡು ಮುಂದೊಂದು ದಿನ ತಮ್ಮ ಹೆಸರಿಗೆ ಮಾಡಿಸಿಕೊಂಡು, ಹೆಚ್ಚಿನ ಬೆಲೆಗೆ ಮಾರಲು ಅಂತಹ ಜಮೀನುಗಳೇ ಬೇಕು, ಬೇಡಿಕೆಯಲ್ಲೂ ಇವೆ.

ಆದ್ದರಿಂದ, ಚಿಪ್ಪು ಹಂದಿಯಂತಹ ಹಲವು ಜೀವಿಗಳು ಕ್ರಮೇಣ ನಶಿಸುತ್ತಿವೆ. ಇಲ್ಲಿ ಚಿಪ್ಪು ಹಂದಿಯು ಒಂದು ಪ್ರತೀಕ – ಇಂತಹ ಅವೆಷ್ಟೋ ಜೀವಿಗಳ ಪೂರ್ಣ ಪರಿಚಯ ನಮ್ಮ ಜನಸಾಮಾನ್ಯರಿಗೆ ಇಲ್ಲ, ಮಕ್ಕಳಿಗೂ ಇಲ್ಲ. ಹುಲಿ, ಆನೆ, ಚಿರತೆಗಳು ಸಹ ಇಂತಹದೇ ಸಂಕಷ್ಟ ವನ್ನು ಎದುರಿಸುತ್ತಿದ್ದರೂ, ಅವು ದೊಡ್ಡ ಜೀವಿಗಳಾಗಿದ್ದರಿಂದ, ಸಾಕಷ್ಟು ಜನರಿಗೆ ಪರಿಚಿತ. ಜತೆಗೆ, ಅಂvಹ ದೊಡ್ಡ ಜೀವಿಗಳ ಜೀವನಕ್ರಮವು ಸಾಕಷ್ಟು ಅಧ್ಯಯನಕ್ಕೆ ಒಳಪಟ್ಟಿದ್ದು, ಅಂತಹ ಜೀವಿಗಳು ಎದ್ದು ಕಾಣುವುದರಿಂದ, ಅಂತಹ ಅಧ್ಯಯನದ ಹಲವು ವಿವರಗಳು ಜನಸಾಮಾನ್ಯನ ತನಕ ತಲುಪಿವೆ.

ಪಠ್ಯಪುಸ್ತಕಗಳಲ್ಲೂ, ಹುಲಿ, ಚಿರತೆ, ಆನೆಗಳಂತಹ ದೊಡ್ಡ ಜೀವಿಗಳ ವಿವರಗಳು ಸೇರಿರುವು ದರಿಂದ, ಒಂದು ಹಂತದ ಅರಿವು ಮಕ್ಕಳಲ್ಲೂ ಇದೆ. ಆದರೆ, ಮುಳ್ಳು ಹಂದಿ, ಚಿಪ್ಪುಹಂದಿಗಳಂತಹ ಸಣ್ಣ ಜೀವಿಗಳು ನತದೃಷ್ಟ ಜೀವಿಗಳು. ಅವುಗಳ ಕುರಿತು ಹೆಚ್ಚು ಜನರಿಗೆ ತಿಳಿದಿಲ್ಲ, ಪಠ್ಯಗಳಲ್ಲೂ ಅವುಗಳ ವಿವರ ಸೇರಿಲ್ಲ. ಹಾಗೆ ನೋಡಿದರೆ, ನಮ್ಮ ದೇಶ ದಲ್ಲಿ ಇಂತಹ ಅವೆಷ್ಟೋ ಸಣ್ಣ ಗಾತ್ರದ ಜೀವಿಗಳಿವೆ ಮತ್ತು ಬಹು ವೇಗವಾಗಿ ವಿನಾಶದ ಹಾದಿ ಹಿಡಿದಿವೆ.

ವಿಚಿತ್ರವೆಂದರೆ, ಈ ಇಪ್ಪತ್ತೊಂದನೆಯ ಶತಮಾನ ದಲ್ಲೂ, ಮುಳ್ಳು ಹಂದಿ, ಚಿಪ್ಪು ಹಂದಿ, ಪುನುಗು ಬೆಕ್ಕು, ಉಡ ಮುಂತಾದ ಜೀವಿಗಳ ಕುರಿತು ಸಮಗ್ರ ಅಧ್ಯಯನ ನಡೆದಿಲ್ಲ. ನಡೆದಿರಬಹುದಾದ ಕೆಲವು ಅಧ್ಯಯನದ ವಿವರಗಳು ಸಹ ಸಂಶೋಧನಾ ಕಪಾಟುಗಳಲ್ಲಿ ಭದ್ರವಾಗಿವೆಯೇ ಹೊರತು, ಜನಸಾಮಾನ್ಯರಿಗೆ, ಮಕ್ಕಳಿಗೆ ತಲುಪಿಲ್ಲ. ಆದ್ದರಿಂದಲೇ, ಮುಳ್ಳು ಹಂದಿ, ಚಿಪ್ಪುಹಂದಿಗಳಂತಹ ಪ್ರಾಣಿ ಗಳನ್ನು ರಕ್ಷಿಸುವುದು ಸಹ ಹುಲಿಗಳನ್ನು ರಕ್ಷಿಸಿದಷ್ಟೇ ಮುಖ್ಯ ಎನಿಸುತ್ತದೆ. ಗಾತ್ರದಲ್ಲಿ ಸಣ್ಣವಾದರೇನು, ಇಕಾಲಜಿಯ ಸರಪಳಿ ಯಲ್ಲಿ ಅಂತಹ ಎಲ್ಲಾ ಪ್ರಾಣಿಗಳ ಕೊಡುಗೆ, ಅಸ್ತಿತ್ವ ಬಹುಮುಖ್ಯ.