Sunday, 15th December 2024

ಗೃಹ ಇಲಾಖೆ ತಾಂಬೂಲವಲ್ಲ, ರಣವೀಳ್ಯ !

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

1336hampiexpress1509@gmail.com

ಒಂದು ಕೋಮಿಗೆ ನೋವಾಗಿರಬಹುದು ಹಾಗಂತ ಪೊಲೀಸರಿಗೇ ಸವಾಲಾಗಿ ಮೆರೆದು ಠಾಣೆಗೆ, ಪೊಲೀಸ್ ವಾಹನ  ಳಿಗೆ ಬೆಂಕಿ ಹಚ್ಚುವುದಿದೆಯ ಇದನ್ನೆ ನಮ್ಮ ಕಾನೂನು, ನ್ಯಾಯಾಲಯಗಳು ಸಹಿಸಿಕೊಂಡಿರಬೇಕೆ? ವಿರೋಧ ಪಕ್ಷಗಳು ಇದನ್ನೆ ಅರಗಿಸಿಕೊಳ್ಳಬಹುದು ಆದರೆ ಸಮಾಜವಲ 

ಕೆಜಿಎಫ್ ಸಿನೆಮಾದಲ್ಲಿ ಒಂದು ಸಂಭಾಷಣೆ ಇದೆ. ‘ನಿನ್ನ ಹಿಂದೆ ಸಾವಿರ ಜನರಿದ್ದಾರೆ ಎಂಬ ಧೈರ್ಯ ನಿನಗಿದ್ದರೆ ನೀನು ಒಂದು ಯುದ್ಧ ಗೆಲ್ಲಬಹುದು. ಆದರೆ ಸಾವಿರಾರು ಜನಕ್ಕೆ ನೀನಿದ್ದೀಯ ಎಂಬ ಧೈರ್ಯವಿದ್ದರೆ ನೀನು ಸಾವಿರ ಯುದ್ಧ ಗೆಲ್ಲಬಹುದು’
ಎಂಬ ಮಾತು. ಇದೇ ಮಾತು ನಮ್ಮ ಗೃಹ ಇಲಾಖೆಗೂ ಅನ್ವಯಿಸುತ್ತದೆ. ನಾಡಿನ ಲಕ್ಷಾಂತರ ಪೊಲೀಸರನ್ನು ಮುನ್ನಡೆಸಬೇಕಾದ ಹೊಣೆಗಾರಿಕೆ ಗೃಹಮಂತ್ರಿಗಿದೆ.

ಪೊಲೀಸ್ ಇಲಾಖೆಯ ಒಬ್ಬ ಪೇದೆಯಿಂದ ಪ್ರಧಾನ ಕಾರ್ಯದರ್ಶಿಯವರೆಗೆ ಎಲ್ಲರಿಗೂ ದಿಟ್ಟತನದಿಂದ ಕರ್ತವ್ಯ ನಿರ್ವಹಿಸು ವಂತೆ ವಿಶ್ವಾಸ ಹುರುಪು ಉತ್ಸಾಹ ತುಂಬಿ ಸರಿ ಯಾದ ಸಮಯದಲ್ಲಿ ಸರಿಯಾದ ಕೆಲಸ ಮಾಡಿಸಿ ಸಮಾಜವನ್ನು ದುಷ್ಟರು,
ಪಾತಕಿಗಳು, ರೌಡಿಗಳು, ದಂಗೆಕೋರರು, ಗಲಭೆಕೋರರನ್ನು ನಡುಗಿಸಿ ಹುಟ್ಟಡಗಿಸಿ ಇಲಾಖೆಯನ್ನು ಸದಾ ಆಂಬ್ಯುಲೆನ್ಸ್‌ನಂತೆ ಇಟ್ಟುಕೊಳ್ಳಬೇಕಾದದ್ದು ಗೃಹ ಮಂತ್ರಿಯ ಪರಮ ಕರ್ತವ್ಯ.

ಜತೆಗೆ ಒಬ್ಬ ಪೇದಯೂ ಸಹ ಎದೆಗಾರಿಕೆಯಿಂದ ಕರ್ತವ್ಯ ನಿರ್ವಹಿಸಲು ಗೃಹಮಂತ್ರಿಗಳ ಬೆಂಬಲ ನಮಗಿದೆ ಎಂದೆನಿಸುವಂತೆ ಇಲಾಖೆಯನ್ನು ಪೋಷಿಸಬೇಕಾದ್ದು ಕ್ಷತ್ರೀಯ ಹೊಣೆಗಾರಿಕೆ. ಇಡೀ ಪೊಲೀಸ್ ಇಲಾಖೆ ನನ್ನ ಕೈಕೆಳಗಿದೆ ಎಂಬ ಉಡಾಫೆ ಗೃಹ ಮಂತ್ರಿಗಿ ದ್ದರೆ ಯಾವುದೋ ಒಂದು ಯುದ್ಧ ಗೆಲ್ಲಬಹುದು. ಆದರೆ ಪ್ರತಿಯೊಬ್ಬ ಪೇದೆಗೂ ಖಡಕ್ ಗೃಹಮಂತ್ರಿಗಳಿದ್ದಾರೆ ಎಂಬ ವಿಶ್ವಾಸ, ಧೈರ್ಯವಿದ್ದರೆ ಸಾವಿರಾರು ಯುದ್ಧ ಗೆಲ್ಲಬಹುದು.

ಗೃಹ ಇಲಾಖೆ ಇನ್ನಿತರ ಖಾತೆಗಳಂತಲ್ಲ. ಎಲ್ಲಾ ಇಲಾಖೆಗಳೂ ಇಡೀ ರಾಜ್ಯವನ್ನು ಸಲಹುತ್ತಿದ್ದರೆ ಗೃಹ ಇಲಾಖೆ ಇಡೀ ಸರಕಾರವನ್ನೇ ಕಾಯ ಬೇಕಾದ ಸೂಕ್ಷ್ಮತೆಯಿಂದ ಕಾರ್ಯ ನಿರ್ವಹಿಸಬೇಕಾಗುತ್ತದೆ. ಗಣ್ಯ ವ್ಯಕ್ತಿಯ ಹಿಂದೆ ಸಫಾರಿ ತೊಟ್ಟು ಕಪ್ಪು ಕನ್ನಡಕ ಹಾಕಿಕೊಂಡು ಹದ್ದಿನ ಕಣ್ಣಿನಲ್ಲಿ ಕರ್ತವ್ಯ ನಿರ್ವಹಿಸುವ ರಕ್ಷಕನಂತೆ ಸರಕಾರವನ್ನು ಸಮಾಜವನ್ನು ಕಾಯಬೇಕು.

ಮುಖ್ಯಮಂತ್ರಿ ಒಂದು ರೀತಿ ಸರಕಾರಕ್ಕೆ ಹೆಂಡತಿಯಂತಿದ್ದರೆ ಗೃಹಇಲಾಖೆ ಎಂಬುದು ಸರಕಾರಕ್ಕೆ ಗಂಡನಂತಿರಬೇಕು. ಆಗ ಮಾತ್ರ ಆಡಳಿತದೊಂದಿಗೆ ಸರಕಾರ ಮತ್ತು ಸಮಾಜವೂ ಆರೋಗ್ಯಕರವಾಗಿರುತ್ತದೆ. ಮುಖ್ಯಮಂತ್ರಿಯಾದವರು ಹೆಂಗರಳಿನಿಂದ
ಇಡೀ ರಾಜ್ಯವನ್ನು ಮಮಕಾರದಿಂದ ಕಂಡು ಆಡಳಿತ ನಡೆಸಿದರೆ, ಗೃಹ ಮಂತ್ರಿ ಮಾತ್ರ ಎಂದಿಗೂ ಹೆಣ್ಣಿಗನಾಗಿರಕೂಡದು. ಆತ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕೆ ಗಂಡಸುತನದಿಂದ ಕೆಲಸ ಮಾಡಬೇಕು.

ಸರಕಾರದಲ್ಲಿ ಮುಖ್ಯಮಂತ್ರಿಯಷ್ಟೇ ಪ್ರಾಮುಖ್ಯತೆ ಗೃಹ ಇಲಾಖೆಗಿದೆ. ಮುಖ್ಯಮಂತ್ರಿ ನಂತರ ಎರಡನೇ ಸೂಪರ್ ಮ್ಯಾನ್ ಆಗಿರಬೇಕಾದವರೇ ಗೃಹಮಂತ್ರಿ. ಹೀಗಾ ಗಿ ಗಂಡನಂತಿರಬೇಕಾದ ಗೃಹ ಇಲಾಖೆಯ ಸೂತ್ರದಾರ ಗೃಹಮಂತ್ರಿಯೇ ಅಯೋಗ್ಯ ನಾದರೆ ಪೊಲೀಸ್ ಇಲಾಖೆಯೇ ನಪುಂಸಕವಾಗುವ ಅಪಾಯವಿದೆ. ಈಗ ಏನಾಗಿದೆಯೆಂದರೆ ಅನೈತಿಕ ಚುನಾವಣೆಗಳಲ್ಲಿ ಅನೈತಿಕ ಒಪ್ಪಂದ, ಒಳ ಒಪ್ಪಂದಗಳಲ್ಲದೇ, ಹಿರಿತನ, ಜಾತಿ, ಪ್ರಾದೇಶಿಕತೆ, ಋಣ ಸಂದಾಯ ಹೀಗೆ ಕೆಲಸಕ್ಕೆ ಬಾರದ ಕಾರಣ
ಕರಾರು ಹೊಂದಾಣಿಕೆಗಳಿಂದ ಇಲಾಖೆಗೆ ತಕ್ಕ ಯೋಗ್ಯತೆ ಇರುವ ಶಾಸಕರು ಮಂತ್ರಿಗಳಾಗುತ್ತಿಲ್ಲ.

ಮಠ, ಜಾತಿಸ್ವಾಮೀಜಿಗಳಿಂದ ಇನ್ನಾವುದೋ ಕುಲಗೆಟ್ಟ ಕಾರಣಗಳಿಂದ ಮಂತ್ರಿಗಳಾಗಿ ಮುಂಡಾಮೋಚಿಕೊಂಡು ಕೂತು ಜವಾಬ್ದಾರಿಗಳಿಲ್ಲದ ಸುಖ ಪದವಿ ಪಟ್ಟ ಅನುಭವಿಸಿ ಮಿಂಚುವುದೇ ಇಂದಿನ ರಾಜಕೀಯದ ಬಯಕೆಗಳಾಗಿ ಬಿಟ್ಟಿದೆ. ಹೀಗಾಗಿ ಎಲ್ಲಾ ಇಲಾಖೆಗಳೂ ತೂತುಬಿದ್ದ ಮಡಿಕೆಗಳಾಗಿಹೋಗಿವೆ. ರಾಜಕೀಯದಲ್ಲಿ ಎಂಥ ದರಿದ್ರ ಮುಲಾಜುಗಳಿವೆಯೆಂದರೆ ಪಕ್ಷವೊಂದರ ಹೈಕಮಾಂಡ್ ಅಧಿದೇವತೆಯ ಸಂತುಷ್ಟಿಗಾಗಿ ಮತ್ತು ಸ್ವಧರ್ಮಿಯೆಂಬ ಸಲುಗೆಯಲ್ಲಿ ಸುಲಭ ಶೌಚಾಲಯ
ದಲ್ಲೂ ಕೆಲಸಮಾಡಲು ಯೋಗ್ಯತೆಯಿಲ್ಲದವರಿಗೆ ಗೃಹ ಇಲಾಖೆಯನ್ನು ಕೊಟ್ಟು ಅದರ ಪರಿಣಾಮ ಸಾಕ್ಷಾತ್ ಪೊಲೀಸ್ ಅಧಿಕಾರಿಗಳೇ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿದೆ.

ನಮ್ಮ ರಾಜ್ಯದ ಪ್ರಸ್ತುತ ಗೃಹ ಮಂತ್ರಿಯಾದ ಆರಗ ಜ್ಞಾನೇಂದ್ರ ಅವರು ನಿಜಕ್ಕೂ ಯೋಗ್ಯ ಶಾಸಕರಿರಬಹುದು. ಸಂಘ ಪರಿವಾರದ ಹಿನ್ನೆಲೆಯವರಾಗಿ ಬಿಜೆಪಿ ಪಕ್ಷದ ಹಿರಿಯ ಶಾಸಕರಾಗಿರಬಹುದು. ಶ್ವೇತಧಾರಿಯಾಗಿ ಶ್ವೇತ ವರ್ಣದ ಕಾರಿನಲ್ಲಿ ಓಡಾಡುವುದನ್ನು ನೋಡುತ್ತಿದ್ದರೆ ಬಹಳ ಖುಷಿಯಾಗುತ್ತದೆ. ಇದೇ ಮಾನದಂಡವಾಗಿ ಪಕ್ಷ ಅವರಿಗೆ ಗೃಹ ಇಲಾಖೆಯಂಥ
ಗಂಡು ಇಲಾಖೆಯನ್ನೇ ನೀಡಿ ಪಕ್ಷದ ವತಿಯಿಂದ ಅವರ ನಿಷ್ಠೆಗೆ ಋಣ ಸಂದಾಯ ಮಾಡಿದೆ.

ಇದಕ್ಕೆ ಯಾವ ಅಭ್ಯಂತರವಿಲ್ಲ. ಆದರೆ ಅಂಥ ಇಲಾಖೆಯನ್ನು ನಡೆಸಬೇಕಾದ ಅರ್ಜುನತ್ವ, ಭೀಮತ್ವವನ್ನು ತೋರಿಸಲಾಗದೆ
ದ್ರೋಣಾಚಾರ್ಯರಂತೆ ವರ್ತಿಸಿದರೆ ಹೇಗೆ? ಚಾಮುಂಡಿ ಬೆಟ್ಟದಲ್ಲಿ ಅತ್ಯಾಚಾರವಾದ ಸಂದರ್ಭದ ಕಾಂಗ್ರೆಸ್‌ನವರು ‘ನನ್ನ ಮೇಲೆ ಅತ್ಯಾಚಾರ ಮಾಡುತ್ತಿದ್ದಾರೆ’ ಎಂಬ ಅಸಂಬದ್ಧ ಹೇಳಿಕೆ ಕೊಟ್ಟಾಗಲೇ ಗೃಹ ಇಲಾಖೆಯ ಗಂಡಸುತನ ನೆಗೆದು ಬಿದ್ದಿತ್ತು. ನಂತರ ಉಚ್ಚ ನ್ಯಾಯಾಲಯದ ತೀರ್ಪಿನ ವಿರುದ್ಧವೇ ದಂಗೆಯೆದ್ದು ಪ್ರತಿಭಟನೆಗಿಳಿದು ಕರ್ನಾಟಕ ಬಂದ್‌ಗೆ ಕರೆ ನೀಡುವಷ್ಟು ನಿರ್ಭೀತಿ, ಮೊಂಡುತನವನ್ನು ತೋರದಂತೆ ಕಾನೂನಿನ ಭಯವಿರಿಸಿ ಬೌದ್ಧಿಕ ಎಚ್ಚರಿಕೆಯನ್ನು ಸದಾ ಜಾಗೃತಿಯಲ್ಲಿಡಬೇಕಾದ ಜಾಣ್ಮೆ ಗೃಹ ಇಲಾಖೆಗಿರಬೇಕಿತ್ತು.

ಕಾನೂನು ನ್ಯಾಯಾಲಯದ ವಿರುದ್ಧದ ಮನಸ್ಥಿತಿಯನ್ನು ಪ್ರದರ್ಶಿಸುವುದು ಈ ದೇಶದ ಪ್ರಜಾಪ್ರಭುತ್ವದಲ್ಲಿನ ಹಕ್ಕಲ್ಲ. ಅನ್ಯಾಯ ದೌರ್ಜನ್ಯದ ವಿರುದ್ಧ ಹೋರಾಡುವುದು ನೈಜಹಕ್ಕು. ದೂರದಲ್ಲಿ ಪೊಲೀಸ್ ಸಮವಸ ನೋಡಿದ ಕೂಡಲೇ ಹೆಲ್ಮೆಟ್
ಇಲ್ಲದ ವಾಹನಸವಾರ ಗಾಡಿ ತಿರುಗಿಸಿಕೊಂಡು ಕಣ್ಮರೆಯಾಗುವುದು ಪೊಲೀಸರ ಹವಾ. ಆದರೆ ಅದೇ ಸವಾರ ಯಾವ ಭಯ ವಿಲ್ಲದೆ ಪೊಲೀಸರ ಮುಂದೆಯೇ ಸಾಗಿದರೆ ಅದು ಗೃಹ ಇಲಾಖೆಯ ನಪುಂಸಕತನ. ಆದರೆ ಅಂಥ ಸವಾರ ಕಾನೂನು ಮೀರಿ ಗಾಡಿಯೇ ಹತ್ತದಂಥ ಎಚ್ಚರಿಕೆ ಸೃಷ್ಟಿಸುವುದು ಇಲಾಖೆಯ ಗಂಡಸುತನ.

ಉತ್ತರಪ್ರದೇಶ ದಲ್ಲಿ ನೋಡಿ ಅಲ್ಲಿನ ಕಿಡಿಗೇಡಿಗಳು ಅಪರಾಧಿಗಳು ಪೊಲೀಸರ ರಿಯಾಕ್ಷನ್‌ಗೆ ಹೆದರಿ ತಾವಾಗೇ ಬಂದು ಶರಣಾಗುತ್ತಿದ್ದಾರೆ. ಈ ಪೊಲೀಸಿನವರು ಸರಿಯಿಲ್ಲ ನಾವುಗಳು ಕಾನೂನು ಮೀರಿದರೆ ಉಳಿಗಾಲವಿಲ್ಲವೆಂಬ ಭಯ ಅಲ್ಲಿ
ಸ್ಥಾಪಿತವಾಗಿದೆ. ಅಲ್ಲಿ ಮುಖ್ಯಮಂತ್ರಿ ಅಪ್ಪಟ ಸಂನ್ಯಾಸಿಯಾದರೂ ಆ ಸರಕಾರಕ್ಕೆ ಅವರೇ ಹೆಂಡತಿ ಮತ್ತು ಎಂಟೆದೆಯ ಗಂಡನೂ ಆಗಿದ್ದಾರೆ.

ಹೀಗಾಗಿ ಅಲ್ಲಿ ಬುಲ್ಡೋಜರ್‌ಗಳು, ಜೆಸಿಬಿಗಳು ರಿಯಾಕ್ಷನ್‌ಗೆ ಇಳಿಯುತ್ತಿವೆ. ಮೊನ್ನೆಯ ಹುಬ್ಬಳ್ಳಿ ಗಲಭೆ ವ್ಯವಸ್ಥಿತ ಮತ್ತು
ಪೂರ್ವ ನಿಯೋಜಿತವೆಂಬುದು ಒಂದೊಂದಾಗಿ ಬಹಿರಂಗಗೊಳ್ಳುತ್ತಿದೆ. ಉನ್ಮಾದರು, ಮತಾಂ ಧರು, ಕಿಡಿಗೇಡಿಗಳು ಪೊಲೀಸ್ ಕಮಿಷನರ್ ಕಾರಿನ ಮೇಲೆಯೇ ಹತ್ತಿ ದಾಂಧಲೆ ಮಾಡಿದ್ದಾರೆ.

ಪೊಲೀಸರನ್ನೇ ಬೆನ್ನಟ್ಟಿ ಕೊಲ್ಲಲು ಯತ್ನಿಸಿದ್ದಾರೆ. ಬಂಧಿತ ಆರೋಪಿಯನ್ನು ನಮಗೊಪ್ಪಿಸಿ ಅವನ ರುಂಡ ತೆಗೆಯುತ್ತೇವೆ ಎಂದು ಪೊಲೀಸರಿಗೆ ಆಗ್ರಹಿಸುತ್ತಿzರೆಂದರೆ ಏನರ್ಥ? ಕಾನೂನು ಸುವ್ಯವಸ್ಥೆ ಸಂವಿಧಾನ ಇವುಗಳ ಗತಿಯೇನು? ಏನಾಗಿದೆ ಗೃಹ ಇಲಾಖೆಗೆ ಮತ್ತು ಗೃಹಮಂತ್ರಿಗಳಿಗೆ. ಹೀಗಾದರೆ ಪೊಲೀಸರ ಮಾನಸಿಕತೆ ನೈತಿಕತೆ ಏನಾಗಬೇಕು? ನಮ್ಮನ್ನು ಕಾಯಲು
ಮೇಲಾಧಿಕಾರಿಗಳಿದ್ದಾರೆ. ಅವರಿಗೆ ಅವರ ಮೇಲಾಧಿಕಾರಿಗಳಿದ್ದಾರೆ, ಅವರಿಗೆ ಟೆರರ್ ಗೃಹಮಂತ್ರಿಗಳಿzರೆ ಎಂಬ ಧೈರ್ಯ ಮತ್ತು
ನೈತಿಕ ಸ್ಥೈರ್ಯ ಇಲ್ಲದೇ ಹೋದರೆ ಅದು ಇಲಾಖೆಯ ಪರಮ ದೌರ್ಬಲ್ಯ. ಒಂದು ಕೋಮಿಗೆ ನೋವಾಗಿರಬಹುದು ಹಾಗಂತ ಪೊಲೀಸರಿಗೇ ಸವಾಲಾಗಿ ಮೆರೆದು ಠಾಣೆಗೆ, ಪೊಲೀಸ್ ವಾಹನಗಳಿಗೆ ಬೆಂಕಿ ಹಚ್ಚುವುದಿದೆಯ ಇದನ್ನೆ ನಮ್ಮ ಕಾನೂನು, ನ್ಯಾಯಾಲಯಗಳು ಸಹಿಸಿಕೊಂಡಿರಬೇಕೆ? ಆರಗ ಜ್ಞಾನೇಂದ್ರ ಅವರು ಮತ್ತು ವಿರೋಧ ಪಕ್ಷಗಳು ಇದನ್ನೆ ಅರಗಿಸಿಕೊಳ್ಳ ಬಹುದು ಆದರೆ ಸಮಾಜವಲ್ಲ.

ಪೊಲೀಸರು ಒಮ್ಮೊಮ್ಮೆ ಸಂದರ್ಭದ ಒತ್ತಡಕ್ಕೆ ಸಿಲುಕಿ ಅಮಾಯಕರ ಮೇಲೆ ನಿರಪರಾಧಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಲಾಟಿ ಬೀಸುವಾಗ ಅವರ ಮೇಲೆ ಎಲ್ಲಿಲ್ಲದ ಸಿಟ್ಟು ಬರುತ್ತದೆ. ಆದರೆ ಒಬ್ಬ ಅಮಾಯಕ ಪೇದೆ ಸಮವಸದಲ್ಲಿರುವಾಗ ಅಸಹಾಯಕನಾಗಿ ಪುಂಡರಿಂದ ರೌಡಿಗಳಿಂದ ಹಗೊಳಗಾಗುತ್ತಿದ್ದರೆ ಅಂಥ ದೃಶ್ಯ ಪ್ರಜ್ಞಾವಂತ ನಾಗರಿಕರಿಗೆ ಘೋರವಾಗಿ ಕಂಡು ಗಾಬರಿ ಪಡುತ್ತಾನೆ. ನಮ್ಮ ಪೊಲೀಸರೇ ಇಂಥ ದಾಳಿಗೆ ಒಳಗಾದರ ಎಂಬ ಸಹಾನುಭೂತಿ ಹುಟ್ಟಿ ಅಯ್ಯೋ ಎನ್ನುತ್ತಾರೆ. ಸಾವಿರ ಜನ ಅಮಾಯಕರು ಲಾಠಿ ಏಟು ತಿಂದರೂ ಸಹಿಸಬಹುದು.

ಆದರೆ ಸಮವಸದಲ್ಲಿರುವ ಪೊಲೀಸ್ ಅಸಹಾಯಕರಾಗುವುದನ್ನು ಸಮಾಜ ಸಹಿಸುವುದಿಲ್ಲ. ಹೀಗಿರುವಾಗ ಅಂಥ ಇಲಾಖೆ ಯನ್ನು ಹೇಗಿಟ್ಟಿರಬೇಕು ಹೇಳಿ. ಇಂಥ ಸೂಕ್ಷ್ಮತೆಯನ್ನು ರಾಜ್ಯದ ಪೊಲೀಸ್ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು. ಇಲ್ಲದಿದ್ದರೆ ಠಾಣೆಯೇ ಹತ್ತಿ ಉರಿದೊಡೆ ಇನ್ನಾರಿಗೆ ದೂರುವೆ ಎಂಬ ಆಧುನಿಕ ವಚನವನ್ನು ಜನ ಪಠಿಸಬೇಕಾಗುತ್ತದೆ.

ಗೃಹ ಇಲಾಖೆ ಎಂಬುದು ಮುತ್ತೈದೆಯರಿಗೆ ನೀಡುವ ತಾಂಬೂಲ ಅರಿಷಿಣ ಕುಂಕುಮವಲ್ಲ.ಅದು ಸಮಾಜದ ಸ್ವಾಸ್ಥ್ಯವನ್ನು ಹಾಳುಮಾಡುವ ದುಷ್ಟರನ್ನು ಮಟ್ಟಹಾಕಲು ನೀಡುವ ರಣವೀಳ್ಯೆ. ಆಗಲೇ ದೇಶದ ಕಾನೂನು ಸಂವಿಧಾನದ ಪಾವಿತ್ರ್ಯತೆ ಯನ್ನು ಕಾಪಾಡಲು ಸಾಧ್ಯ. ಹೀಗಾಗಿ ಬಹಳ ಸ್ಮಾರ್ಟ್ ಆಗಿ ಕಾಣುವ ಆರಗ ಜ್ಞಾನೇಂದ್ರ ಅವರಿಗೆ ಮುಜರಾಯಿ ಇಲಾಖೆಯೋ ತೋಟಗಾರಿಕೆ ಇಲಾಖೆಯೋ ಕೊಟ್ಟು ಅವರನ್ನು ಮೆರೆಸಲಿ. ಸಮಾಜದಲ್ಲಿ ಸಂವಿಧಾನಾತ್ಮಕ ಹಕ್ಕು ಸ್ವಾತಂತ್ರ್ಯವನ್ನು ಮೀರಿ ಗೂಂಡಾಗಿರಿ ದಾಂಧಲೆ ಗಲಭೆ ಎಬ್ಬಿಸುವ ಸಮಾಜಗೇಡಿಗಳ ಮತಾಂಧ ಭಯೋತ್ಪಾದಕರ ಗ್ರಹಚಾರ ಬಿಡಿಸುವ ಗಂಡೆದೆಯುಳ್ಳ ಶಾಸಕರೊಬ್ಬರಿಗೆ ಗೃಹ ಇಲಾಖೆಯನ್ನು ವರ್ಗಾಯಿಸಬೇಕಾದ ಕೆಲಸವನ್ನು ಮುಖ್ಯಮಂತ್ರಿಗಳು ಕೂಡಲೇ ಮಾಡ ಬೇಕಿದೆ.

ಸದ್ಯಕ್ಕೆ ಬಿಜೆಪಿಯಲ್ಲಿ ಬಸವನಗೌಡ ಯತ್ನಾಳ ಪಾಟೀಲರು ಅಥವಾ ಸಿ.ಟಿ. ರವಿಯಂಥವರು ರಾಜ್ಯದ ಗೃಹಮಂತ್ರಿ ಯಾಗಬೇಕೆಂಬ ಕೂಗು ನಾಗರಿಕರಲ್ಲಿದೆ. ಅವರಿಗೆ ಕೊಟ್ಟು ನೋಡುವುದರಲ್ಲಿ ತಪ್ಪಿಲ್ಲ. ಹಾಗೆಯೇ ಅವರೂ ಸಹ ತಪ್ಪಿಲ್ಲದಂತೆ ತಪ್ಪು ಮಾಡುವವರನ್ನು ಮಟ್ಟಹಾಕುವ ಕಾನೂನಿನ ಕಹಳೆ ಊದಬೇಕಷ್ಟೆ. ಇದೂ ಸಾಧ್ಯವಾಗಲಿಲ್ಲವೆಂದರೆ ಒಂದು ಅತ್ಯುತ್ತಮ  ರಿಯಿದೆ. ಪೊಲೀಸ್ ಇಲಾಖೆಯಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ ದಕ್ಷತೆ ದಿಟ್ಟತನದಿಂದ ಸೇವೆ ಸಲ್ಲಿಸಿದ, ಸಮಾಜದಲ್ಲಿನ ಕ್ರೈಂ ಮತ್ತು ರಾಜಕೀಯಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವ ಜತೆಗೆ ಇಲಾಖೆಯ ಕುರಿತು ಒಳ್ಳೆಯ ದೃಷ್ಟಿಕೋನವಿರುವ ಒಳಸುಳಿಗಳನ್ನು ಅರಿತಿರುವ ದೂರಾಲೋಚನೆಯುಳ್ಳ ಕ್ರಿಯಾಶೀಲ ಒಬ್ಬ ನಿವೃತ್ತ ಐಪಿಎಸ್ ಅಧಿಕಾರಿ ಯಾಗಲಿ ಒಬ್ಬ ಪೇದೆಯಾದರೂ ಸರಿ ಅಂಥವರನ್ನು ನೇರವಾಗಿ ವಿಧಾನ ಪರಿಷತ್ತಿಗೆ ನಾಮನಿರ್ದೇಶನ ಮಾಡಿ ಗೃಹ ಇಲಾಖೆಯನ್ನು ಅವರಿಗೆ ಕೊಟ್ಟು ನೋಡಲೀ.

ಕೆಲಸಕ್ಕೆ ಬಾರದ ಗೊಡ್ಡು ಮುಖಗಳ ಅಯೋಗ್ಯರನ್ನೆ ತಂದು ಎಮ್.ಎಲ್.ಸಿ. ಮಾಡಿ ಪರಿಷತ್ತನ್ನು ನಿರಾಶ್ರಿತರ ಕೇಂದ್ರ ವಾಗಿಸಿರುವಾಗ ಇಂಥ ವ್ಯಕ್ತಿಯನ್ನು ಆರಿಸಿ ಅವರಿಗೆ ಇಲಾಖೆಯನ್ನು ಕೊಟ್ಟರೆ ಅಂಥವರು ತಮ್ಮ ಸೇವೆಯಲ್ಲಿಮಾಡಲಾಗದ ಮತ್ತು ಮಾಡಲೇಬೇಕಾದ ಕೆಲಸಗಳನ್ನು ಮಾಡಿತೋರಿಸುತ್ತಾರೆ. ಹೀಗೆ ಮಾಡಿದರೆ ಗೃಹ ಇಲಾಖೆ ನೈಜ ಗಂಡಸುತನ ಪಡೆಯುತ್ತದೆ. ಅದು ಮೋದಿಜಿ ಶೈಲಿಯ ಸರಕಾರವೂ ಆಗುತ್ತದೆ.

ನಮ್ಮ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೂ ಹೊಳಪು ಬರುತ್ತದೆ. ಅದನ್ನು ಬಿಟ್ಟು ಈತ ಹಿರಿಯ, ಈತ ಈ ಜಾತಿ, ಈತ ಈ ಸ್ವಾಮೀಜಿ ಕಡೆಯವನು, ಈತ ಇಷ್ಟು ಸಲ ಗೆದ್ದು ಬಂದಿದ್ದಾನೆಂಬ ಮುಲಾಜುಗಳಿಗೆ ಒಳಗಾಗಿ ಗೃಹ ಇಲಾಖೆಯಂಥ ಖಾತೆ ಯನ್ನು ಅರಗಿಸಿಕೊಳ್ಳಲಾಗದವರಿಗೆ ನೀಡಿದರೆ ಹುಬ್ಬಳ್ಳಿಯಂಥ ಗಲಭೆ ನಾಳೆ ರಾಷ್ಟ್ರೀಯ ಸಮಸ್ಯೆಯಾಗಿ ರಾಜ್ಯದ
ಮಾನ, ದೇಶದ ಮರ್ಯಾದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹಾಳಾದರೂ ಅಚ್ಚರಿಯಿಲ್ಲ. ಅದಕ್ಕಾಗಿಯೇ ಇಲ್ಲಿನ ಹುಚ್ಚು ಶುನಕಗಳು ನಾಲಿಗೆ ಚಾಚಿ ಕುಳಿತಿವೆ.