Sunday, 15th December 2024

ಬೊಮ್ಮಾಯಿ ಡೇಂಜರ್‌ ಜೋನಿನಲ್ಲಿ ಇದ್ದಾರೆ

ಮೂರ್ತಿಪೂಜೆ

ಆರ್‌.ಟಿ.ವಿಠ್ಠಲಮೂರ್ತಿ

ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ರಾಜಕಾರಣದ ವಿಷಯ ಬಂದರೆ ದತ್ತಾತ್ರೇಯ ಹೊಸಬಾಳೆ ಅವರ ಮಾತನ್ನು ಬಿಜೆಪಿ ವರಿಷ್ಠರು
ಕಡ್ಡಾಯವಾಗಿ ಆಲಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ದತ್ತಾತ್ರೇಯ ಹೊಸಬಾಳೆ ಅವರಿಗೆ ಯಾವ ವೈಯಕ್ತಿಕ ಅಜೆಂಡಾ ಇಲ್ಲದಿರುವುದು.

ಕೆಲ ದಿನಗಳ ಹಿಂದೆ ಹೊಸಪೇಟೆಯಲ್ಲಿ ನಡೆದ ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಭಾಗವಹಿಸಿದ್ದರು. ಈ ಸಭೆಯಲ್ಲಿ ಮಾತನಾಡಿದ ನಡ್ಡಾ, ಕೋರ್ ಕಮಿಟಿ ಸಭೆಗಳು ಹೇಗೆ ಏಕಪಕ್ಷೀಯವಾಗಿ ನಡೆಯುತ್ತಿವೆ ಎಂಬ ಬಗ್ಗೆ ಪ್ರಸ್ತಾಪಿಸಿದರು. ಪಕ್ಷ ಮತ್ತು ಸರಕಾರದಲ್ಲಿ ಯಾರ ಶಕ್ತಿ ಹೆಚ್ಚೋ?ಅವರು ಹೇಳಿದ್ದೇ ಕೋರ್ ಕಮಿಟಿಯ ಅಂತಿಮ ನಿರ್ಧಾರವಾಗುತ್ತದೆ. ಇದು ಸರಿಯಲ್ಲ ಎಂದು ನೇರವಾಗಿ ಹೇಳಿದರು.

ಅಷ್ಟೇ ಅಲ್ಲ, ಇನ್ನು ಮುಂದೆ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮುಕ್ತ ಚರ್ಚೆ ನಡೆಸುವುದು ಪಕ್ಷದ ಹಿತದೃಷ್ಟಿಯಿಂದ ಒಳ್ಳೆಯದು ಎಂದು ಕಿವಿ ಮಾತು ಹೇಳಿದರು. ಹಾಗೆಯೇ ನೇರವಾಗಿ ವಿಷಯಕ್ಕೆ ಬಂದು ರಾಜ್ಯದಲ್ಲಿ ಪಕ್ಷ ಮತ್ತು ಸರಕಾರದ ವರ್ಚಸ್ಸು ಕುಸಿದಿದೆ. ಇದು ಆತಂಕಕಾರಿ ಎನ್ನದೆ ದಾರಿಯಿಲ್ಲ ಎಂದು ಹೇಳಿದ್ದಾರೆ. ಹೀಗೆ ಇಡೀ ಕೋರ್ ಕಮಿಟಿ ಸಭೆ ನಡ್ಡಾ ಅವರ ಅಡ್ಡೆಯಂತಾಗಿರುವುದು ಅಲ್ಲಿದ್ದ ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಯಾಕೆಂದರೆ ಕೋರ್ ಕಮಿಟಿ ಸಭೆ ಕೆಲವರ ಹಿತಕ್ಕೆ ಪೂರಕವಾಗಿ ನಡೆಯುತ್ತಾ ಬಂದಿದೆ ಯಾದರೂ ಕೆಲವರಾದರೂ ಮಾತನಾಡುವುದು ಸಂಪ್ರದಾಯವಾಗಿತ್ತು. ಆದರೆ ನಡ್ಡಾ ಫುಲ್ ಫಾರ್ಮಿನಲ್ಲಿರುವಂತೆ ಬ್ಯಾಟ್ ಬೀಸಿ ಆಟ ಮುಗಿಸಿದ್ದಾರೆ. ಸರಕಾರಕ್ಕೆ ವರ್ಚಸ್ಸಿಲ್ಲ ಎಂಬುದನ್ನೂ ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ಇದಾದ ನಂತರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಮಾತನಾ ಡಿದ ನಡ್ಡಾ ಬಹುಮುಖ್ಯ ವಿಷಯವನ್ನು ಹೇಳಿದ್ದಾರೆ. ಕರ್ನಾಟಕದ ಬಗ್ಗೆ ಸದ್ಯದ ದೆಹಲಿಯಲ್ಲಿ ಉನ್ನತ ಮಟ್ಟದ ಸಭೆ ನಡೆಸುತ್ತೇವೆ. ಅನಂತರ ನಿಮ್ಮನ್ನು ದೆಹಲಿಗೆ ಕರೆಸುತ್ತೇವೆ ಎಂಬುದು ನಡ್ಡಾ ಅವರ ಮಾತು.

ವಸ್ತುಸ್ಥಿತಿ ಎಂದರೆ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆಯುವ ಆಸೆಯಿಂದ ವರಿಷ್ಠರನ್ನು ಭೇಟಿ ಮಾಡಲು ಬೊಮ್ಮಾಯಿ ಪದೇ ಪದೇ ದೆಹಲಿಗೆ ಹೋಗಿದ್ದಾರೆ. ಅಷ್ಟೇ ಬೇಗ ನಿರಾಶರಾಗಿ ಬಂದಿದ್ದಾರೆ. ಸಂಪುಟ ವಿಸ್ತರಣೆಗೆ ಅನುಮತಿ ಪಡೆಯಬೇಕು, ಆ ಮೂಲಕ ಕರ್ನಾಟಕ ದಲ್ಲಿ ನಾಯಕತ್ವ ಬದಲಾವಣೆಯಿಲ್ಲ ಎಂಬ ಸಂದೇಶ ರವಾನೆಯಾಗುವಂತೆ ಮಾಡಬೇಕು ಎಂಬುದು ಬೊಮ್ಮಾಯಿ ಆಸೆ. ಈ ಅಸೆಯಿಂದ ಇತ್ತೀಚೆಗೆ ನಾಲ್ಕು ಬಾರಿ ಅವರು ದೆಹಲಿಗೆ ಹೋದರೂ ವರಿಷ್ಠರು ಈ ಕುರಿತು ಆಸಕ್ತಿಯನ್ನೇ ತೋರಿರಲಿಲ್ಲ. ಹೀಗಿರುವಾಗ ನಡ್ಡಾ ಅವರು ದೆಹಲಿಗೆ ಕರೆಸುವುದಾಗಿ ಹೇಳಿದರೆ ಬೊಮ್ಮಾಯಿ ಅವರಿಗೆ ಖುಷಿಯಾಗದೆ ಇರಲು ಸಾಧ್ಯವೇ? ಹಾಗಂತಲೇ ಅವರು ಮಾಧ್ಯಮಗಳ ಮುಂದೆ ಅತಿ ಉತ್ಸಾಹದಿಂದ ನಡ್ಡಾ ಹೇಳಿದ್ದನ್ನು ವಿವರಿಸಿದ್ದಾರೆ.

ಅಷ್ಟೇ ಅಲ್ಲ. ಹೀಗೆ ತಾವು ದೆಹಲಿಗೆ ಹೋದಾಗ ಸಂಪುಟ ವಿಸ್ತರಣೆಯೋ? ಪುನರ್ ರಚನೆಯೋ? ಎಂಬುದು ನಿರ್ಧಾರವಾಗುತ್ತದೆ ಎಂದಿದ್ದಾರೆ. ಆದರೆ ಒಂದೆರಡು ದಿನ ಕಳೆಯುವಷ್ಟರಲ್ಲಿ ಜೆ.ಪಿ.ನಡ್ಡಾ ಅವರ ಮಾತುಗಳು ಹೊಸ ಅರ್ಥಗಳನ್ನು ಪಡೆದುಕೊಳ್ಳುತ್ತಾ
ರಾಜಕೀಯ ವಲಯಗಳ ಕುತೂಹಲಕ್ಕೆ ಕಾರಣವಾಗಿದೆ. ಅದರ ಪ್ರಕಾರ ಕರ್ನಾಟಕದ ಬಗ್ಗೆ ವರಿಷ್ಠರು ವಿಶೇಷ ಸಭೆ ನಡೆಸುವುದೇನೋ ಸರಿ, ಆದರೆ ಮುಖ್ಯಮಂತ್ರಿ ಬೊಮ್ಮಾಯಿ ಅವರೇ ಈ ಸಭೆಯಲ್ಲಿರುವುದಿಲ್ಲ ಎಂಬುದರ ಅರ್ಥವೇನು? ಸಂಪುಟ ವಿಸ್ತರಣೆ ಅಥವಾ ಪುನರ್
ರಚನೆಯೇ ಸಭೆಯ ಮುಖ್ಯ ಉದ್ದೇಶವಾಗಿದ್ದರೆ ಬೊಮ್ಮಾಯಿ ಅವರನ್ನು ಸಭೆಯಿಂದ ದೂರವಿಡುವ ಔಚಿತ್ಯವೇನು? ಹೀಗೆ ಅವರನ್ನು ದೂರವಿಡಲು ವರಿಷ್ಠರು ಬಯಸಿದ್ದಾರೆ ಎಂದರೆ ಈ ಸಭೆ ಬೊಮ್ಮಾಯಿ ಅವರನ್ನು ನಾಯಕತ್ವದಿಂದ ಕೆಳಗಿಳಿಸಬೇಕೋ? ಬೇಡವೋ? ಎಂಬ ಬಗ್ಗೆ ಚರ್ಚೆ ನಡೆಸುತ್ತದೆ.

ಅನಂತರ ಬೊಮ್ಮಾಯಿ ಅವರನ್ನು ಕರೆಸಿ ಈ ಸಭೆಯ ತೀರ್ಮಾನ ಏನು? ಅಂತ ಹೇಳುತ್ತದೆ. ನಾಯಕತ್ವದಿಂದ ಬೊಮ್ಮಾಯಿ ಅವರನ್ನು ಕೆಳಗಿಳಿಸುವುದು ಬೇಡ ಎಂದು ಈ ಸಭೆ ತೀರ್ಮಾನಿಸಿದರೆ ಸಹಜವಾಗಿಯೇ ಬೊಮ್ಮಾಯಿ ಸಂಪುಟಕ್ಕೆ ಮೈನರ್ ಸರ್ಜರಿಯೋ? ಮೇಜರ್ ಸರ್ಜರಿಯೋ? ಎಂಬುದು ತೀರ್ಮಾನವಾಗುತ್ತದೆ. ಇಲ್ಲದಿದ್ದರೆ ಖುದ್ದು ಬಸವರಾಜ ಬೊಮ್ಮಾಯಿ ಸೇರಿದಂತೆ ಸರಕಾರಕ್ಕೇ ಹೋಲ್ ಸೇಲ್ ಸರ್ಜರಿಯಾಗುತ್ತದೆ ಎಂಬುದು ಈಗ ಚಾಲ್ತಿಯಲ್ಲಿರುವ ಮಾತು. ಅರ್ಥಾತ್, ಬಸವರಾಜ ಬೊಮ್ಮಾಯಿ ಈಗಲೂ ಡೇಂಜರ್ ಜೋನಿನಲ್ಲಿದ್ದಾರೆ.

****
ಅಂದ ಹಾಗೆ ಮುಖ್ಯಮಂತ್ರಿಯಾಗಿ ಎಂಟು ತಿಂಗಳು ಕಳೆದರೂ ಬಸವರಾಜ ಬೊಮ್ಮಾಯಿ ಅವರಿಗೆ ತಾವು ಯಾರಿಗೆ ಉತ್ತರದಾಯಿ ಎಂಬುದು ಅರ್ಥವಾಗುತ್ತಿಲ್ಲ. ಅಧಿಕಾರಶಾಹಿ ವರ್ತುಲದಲ್ಲಿ ಅವರಿಗೆ ಐ ನೋ ಸಿಎಂ ಎಂಬ ಹೆಸರೇನೋ ಇದೆ. ಯಾಕೆಂದರೆ ಅಧಿಕಾರಿ ಗಳು ಯಾವ ವಿಷಯದ ಬಗ್ಗೆಯಾದರೂ ಪ್ರಸ್ತಾಪಿಸಲಿ, ಬೊಮ್ಮಾಯಿ ಅವರು ತಕ್ಷಣವೇ ಐ ನೋ ಎನ್ನುತ್ತಾರೆ. ಅತಳ, ವಿತಳ, ಸುತಳ, ರಸಾತಳ, ಪಾತಾಳ, ಛಪ್ಪನ್ನಾದಿ ವಿಷಯಗಳೆಲ್ಲ ಮುಖ್ಯಮಂತ್ರಿಗಳಿಗೆ ಗೊತ್ತಿರುವುದರಿಂದ ಐ ನೋ ಸಿಎಂ ಅಂತ ಅಧಿಕಾರಿ ಗಳು ಸರ್ಟಿಫಿಕೇಟು ಕೊಡುವುದೇನೋ ಸಹಜ.

ಆದರೆ ಎಲ್ಲವನ್ನೂ ಬಲ್ಲ ಮುಖ್ಯಮಂತ್ರಿಗಳಿಗೆ ತಾವು ಯಾರಿಗೆ ಉತ್ತರದಾಯಿ ಎಂಬುದು ಮಾತ್ರ ಅರ್ಥವಾಗಿಲ್ಲ. ಸಹಜವಾಗಿ ಅವರು ನಾಡಿನ ಜನರಿಗೆ ಉತ್ತರದಾಯಿ. ಆದರೆ ತಾವು ಕಾಂಗ್ರೆಸ್ ಪಕ್ಷಕ್ಕೆ ಉತ್ತರದಾಯಿ ಎಂದು ಬಸವರಾಜ ಬೊಮ್ಮಾಯಿ ತೀರ್ಮಾನಿಸಿ ದಂತಿದೆ. ಏಕೆಂದರೆ ಸರಕಾರದ ವಿರುದ್ಧ ಗುತ್ತಿಗೆದಾರರ ಸಂಘ ನಲವತ್ತು ಪರ್ಸೆಂಟ್ ಕಮಿಷನ್ನಿನ ಆರೋಪ ಹೊರಿಸಿತಲ್ಲ? ಇದನ್ನು ಎತ್ತಿ ಹಿಡಿದು ಪ್ರತಿಪಕ್ಷ ಕಾಂಗ್ರೆಸ್ ಸರಕಾರದ ವಿರುದ್ಧ ಮುಗಿಬಿತ್ತು. ಆದರೆ ಬಸವರಾಜ ಬೊಮ್ಮಾಯಿ ಗುತ್ತಿಗೆದಾರರ ಸಂಘದ ಆರೋಪಕ್ಕೆ ಉತ್ತರಿಸುವ ಬದಲು, ಕಮಿಷನ್ ಬಗ್ಗೆ ನಮ್ಮನ್ನು ಟೀಕಿಸುವ ನೈತಿಕ ಹಕ್ಕು ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂದರು.

ಇದೇ ರೀತಿ ಸಚಿವ ಈಶ್ವರಪ್ಪ ಪ್ರಕರಣದ ಬೆಂಕಿ ಹೊತ್ತಿಕೊಂಡಾಗ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. ಆಗಲೂ ಬಸವರಾಜ ಬೊಮ್ಮಾಯಿ, ಇಂತಹ ಪ್ರತಿಭಟನೆ ನಡೆಸುವ ನೈತಿಕ ಹಕ್ಕು ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂದರು. ಬೆಲೆ ಏರಿಕೆಯ ವಿರುದ್ಧ ಆಕ್ರೋಶ ವ್ಯಕ್ತ ವಾದರೆ, ಈ ಬಗ್ಗೆ ಟೀಕಿಸುವ ನೈತಿಕ ಹಕ್ಕು ಕಾಂಗ್ರೆಸ್ ಪಕ್ಷಕ್ಕಿಲ್ಲ ಎಂದರು. ಇದರರ್ಥ ಏನು? ಕಮಿಷನ್, ಬೆಲೆ ಏರಿಕೆಯಂತಹ ವಿಷಯ ಗಳ ಬಗ್ಗೆ ಜನಾಕ್ರೋಶ ಇರುವಾಗ ಜನರಿಗೆ ಉತ್ತರಿಸುವುದು ಸರಕಾರದ ಮುಖ್ಯಸ್ಥರಾಗಿ ಅವರ ಕರ್ತವ್ಯ. ಈ ಕರ್ತವ್ಯವನ್ನು ಮರೆತು ಕಾಂಗ್ರೆಸ್ ಪಕ್ಷದ ನೈತಿಕ ಹಕ್ಕಿನ ಮಾತನಾಡುವುದು ಎಂದರೆ ಅವರು ನಾಡಿನ ಜನರನ್ನು ನಿರ್ಲಕ್ಷಿಸಿದ್ದಾರೆ ಎಂದೇ ಅರ್ಥ.

ಪ್ರತಿಪಕ್ಷವಾಗಿ ಜನರ ಆಕ್ರೋಶಕ್ಕೆ ವೇದಿಕೆ ಆಗುವುದು ಕಾಂಗ್ರೆಸ್ ಕೆಲಸ. ಇದನ್ನೇ ಅದು ಮಾಡುತ್ತಿದೆ. ಆದರೆ ಬೊಮ್ಮಾಯಿ ಇದನ್ನು ಮರೆತು ಕಾಂಗ್ರೆಸ್ ಕಪಾಟಿನಲ್ಲಿರುವ ಭ್ರಷ್ಟಾಚಾರದ ಅಸ್ಥಿಪಂಜರದ ಬಗ್ಗೆ ಮಾತನಾಡುತ್ತಾ ಅದರ ಬಾಯಿ ಮುಚ್ಚಿಸಲು ಹೊರಟಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅವರನ್ನು, ಅವರು ಪ್ರತಿನಿಧಿಸುತ್ತಿರುವ ಪಕ್ಷವನ್ನು ಅಽಕಾರಕ್ಕೆ ತಂದವರು ನಾಡಿನ ಜನ. ಕಾಂಗ್ರೆಸ್ ಪಕ್ಷವಲ್ಲ. ಹೀಗಿzಗ ಏನೇ ಆರೋಪಗಳು ಕೇಳಿ ಬಂದರೂ ಅವರು ಜನರಿಗೆ ಉತ್ತರಿಸಬೇಕು. ಹೀಗೆ ಒಂದು ವಿಷಯ ಅಂತಲ್ಲ, ಹಲವು ವಿಷಯಗಳಲ್ಲಿ
ಬೊಮ್ಮಾಯಿ ಅವರ ನಿಲುವುಗಳು ತರ್ಕಕ್ಕೇ ಸಿಗುವುದಿಲ್ಲ.

ಅರ್ಥಾತ್, ಯಡಿಯೂರಪ್ಪ ಅವರ ಉತ್ತರಾಧಿಕಾರಿಯಾಗಿ ಬಂದ ನಂತರ ಅವರು ಪರಿಸ್ಥಿತಿಯನ್ನು ಮ್ಯಾನೇಜ್ ಮಾಡಲು ಯತ್ನಿಸು ತ್ತಿದ್ದಾರೆಯೇ ವಿನಃ ಬುಲ್ಡೋಜ್ ಮಾಡಲು ಅವರಿಂದ ಸಾಧ್ಯವಾಗುತ್ತಿಲ್ಲ. ಅದು ಪ್ರತಿಪಕ್ಷ ಕಾಂಗ್ರೆಸ್ ವಿಷಯದ ಇರಲಿ, ಸರಕಾರದ ಮೇಲೆ ನಿಯಂತ್ರಣ ಸಾಧಿಸಲು ಸ್ವಪಕ್ಷದ ಕೆಲ ನಾಯಕರೇ ನಡೆಸುತ್ತಿರುವ ಪ್ರಯತ್ನವಿರಲಿ, ಅದ್ಯಾವುದಕ್ಕೂ ಬ್ರೇಕ್ ಹಾಕುವ ವಿಷಯದಲ್ಲಿ ಬೊಮ್ಮಾಯಿ ಯಶಸ್ವಿಯಾಗುತ್ತಿಲ್ಲ.

ಪರಿಣಾಮ? ಇಂತಹ ಅಂಶಗಳೆಲ್ಲ ಸೇರಿ ಅಧಿಕಾರಶಾಹಿ ವಲಯದಲ್ಲಿ ಬೊಮ್ಮಾಯಿಯವರ ಮಾತು ಪರಿಣಾಮಕಾರಿಯಾಗಿ ಜಾರಿ ಯಾಗುತ್ತಿಲ್ಲ. ಇದೇ ಕಾರಣಕ್ಕಾಗಿ ಬೊಮ್ಮಾಯಿ ಕೆಳಗೆ ಇಳಿಯಲಿ, ಜಗದೀಶ್ ಶೆಟ್ಟರ್ ಮೇಲೇರಲಿ ಅಂತ ಯಡಿಯೂರಪ್ಪ ಅವರ
ಬಹುತೇಕ ನಿಷ್ಟರು ಹೇಳುತ್ತಿರುವುದು. ಹಾಗೆಯೇ, ಅನೂಹ್ಯ ಮುಖವೊಂದು ನೂತನ ಸಿಎಂ ಹುದ್ದೆಗೆ ಬಂದು ಕೂರಬಹುದು ಅನ್ನುವ ಮಾತು ಕೇಳಿ ಬರುತ್ತಿರುವುದು. ಅಂದ ಹಾಗೆ ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲವಲ್ಲ?
****

ಇನ್ನು ಕರ್ನಾಟಕದ ಬಗ್ಗೆ ದೆಹಲಿಯಲ್ಲಿ ವಿಶೇಷ ಸಭೆ ನಡೆಸಿ ಅನಂತರ ನಿಮ್ಮನ್ನು ಕರೆಸುತ್ತೇವೆ ಅಂತ ಜೆ.ಪಿ.ನಡ್ಡಾ ಅವರು ಸಿಎಂ ಬೊಮ್ಮಾಯಿಯವರಿಗೆ ಹೇಳಿ ಹೋದರಲ್ಲ? ಇದಾದ ಕೆಲವೇ ದಿನಗಳಲ್ಲಿ ಬಿಜೆಪಿ ಮತ್ತು ಸಂಘ ಪರಿವಾರದ ನಾಯಕರು ದೆಹಲಿಯಲ್ಲಿ ಪ್ರಾಥಮಿಕ ಸುತ್ತಿನ ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ ಬಿಜೆಪಿ ನಾಯಕರಾದ ಜೆ.ಪಿ.ನಡ್ಡಾ, ಅಮಿತ್ ಶಾ ಮತ್ತು ಸಂಘ ಪರಿವಾರದ ಅಖಿಲ ಭಾರತ ಸರ ಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಹಾಗೂ ಮಹಾರಾಷ್ಟ್ರದ ಆರ್.ಎಸ್.ಎಸ್. ನಾಯಕರಾದ ಅರುಣ್ ಕುರ್ಮಾ ಭಾಗವಹಿಸಿದ್ದರು.

ಇತ್ತೀಚಿನ ದಿನಗಳಲ್ಲಿ ಕರ್ನಾಟಕದ ರಾಜಕಾರಣದ ವಿಷಯ ಬಂದರೆ ದತ್ತಾತ್ರೇಯ ಹೊಸಬಾಳೆ ಅವರ ಮಾತನ್ನು ಬಿಜೆಪಿ ವರಿಷ್ಠರು
ಕಡ್ಡಾಯವಾಗಿ ಆಲಿಸುತ್ತಾರೆ. ಇದಕ್ಕೆ ಮುಖ್ಯ ಕಾರಣ ದತ್ತಾತ್ರೇಯ ಹೊಸಬಾಳೆ ಅವರಿಗೆ ಯಾವ ವೈಯಕ್ತಿಕ ಅಜೆಂಡಾ ಇಲ್ಲದಿರುವುದು. ಹೀಗಾಗಿ ಕರ್ನಾಟಕದ ವಿಷಯದಲ್ಲಿ ಅವರ ಮಾತುಗಳನ್ನು ನಡ್ಡಾ ಹಾಗೂ ಅಮಿತ್ ಶಾ ವಿಶೇಷ ಆಸ್ಥೆಯಿಂದ ಕೇಳಿದ್ದಾರೆ.

ಬಸವರಾಜ ಬೊಮ್ಮಾಯಿ ಸಿಎಂ ಹುದ್ದೆಯಲ್ಲಿ ಏಕೆ ಮುಂದುವರಿಯಬೇಕು? ಏಕೆ ಮುಂದುವರಿಯಬಾರದು ಎಂಬ ಬಗ್ಗೆ ಈ ಸಭೆ ಸುದೀರ್ಘವಾಗಿ ಚರ್ಚಿಸಿದೆ. ಬಸವರಾಜ ಬೊಮ್ಮಾಯಿ ಅವರನ್ನು ಮುಂದುವರಿಸಿ ಸಂಪುಟ ವಿಸ್ತರಣೆ ಮಾಡುವುದು ಸೂಕ್ತವೋ? ಹಾಲಿ
ಸಂಪುಟದಲ್ಲಿರುವ ಕೆಲವರನ್ನು ತೆಗೆದು ಇನ್ನೂ ಕೆಲವರನ್ನು ಸೇರಿಸಿ ಎಲೆಕ್ಷನ್ ಟೀಮು ರೆಡಿ ಮಾಡುವುದೋ? ಅಥವಾ ಬೊಮ್ಮಾಯಿ ಅವರ ಜಾಗಕ್ಕೆ ಬೇರೊಬ್ಬರನ್ನು ತಂದು ಹೋಲ್ ಸೇಲ್ ಮಾಡುವುದೋ? ಅನ್ನುವ ಬಗ್ಗೆ ಈ ಸಭೆ ಕೂಲಂಕಶವಾಗಿ ಚರ್ಚಿಸಿದೆ.

ಹಾಗೆಯೇ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವಂತೆ ಅದು ಪ್ರಧಾನಿ ನರೇಂದ್ರ ಮೋದಿಯವರಿಗೆ ಮನವಿ ಮಾಡಿಕೊಂಡಿದೆ.
ಹೀಗೆ ತಮ್ಮ ಅಂಗಳಕ್ಕೆ ಬಂದು ಬಿದ್ದ ಚೆಂಡನ್ನು ಏನು ಮಾಡಬೇಕು ಅಂತ ಮೋದಿಯವರು ತೀರ್ಮಾನಿಸುವುದಕ್ಕೆ ಇನ್ನೂ ಮೂರ್ನಾಲ್ಕು ದಿನಗಳಾಗಬಹುದು. ಹೀಗಾಗಿ ಬೊಮ್ಮಾಯಿ ಅವರ ಭವಿಷ್ಯ ಈಗ ಮೋದಿಯವರ ಕೈಲಿದೆ. ಅವರೇನು ತೀರ್ಮಾನ ಕೈಗೊಳ್ಳುತ್ತಾರೋ ಕಾದು ನೋಡಬೇಕು.