Friday, 22nd November 2024

ಕರೋನಾ ಸೋಂಕಿತ ವೃದ್ಧೆ ಸಾವು

ಗದಗ:

ಜಿಲ್ಲೆಯಲ್ಲಿ ದೃಢೀಕರಣವಾಗಿದ್ದ ಮೊದಲ ಕೊರೋನಾ ಪಾಸಿಟಿವ್ ಕೇಸ್ ಮೃತಪಟ್ಟಿದೆ. ಗದಗ ನಗರದ ರಂಗನವಾಡಿ ನಿವಾಸಿ ೮೦ ವರ್ಷ ವಯಸ್ಸಿನ ವೃದ್ಧೆ ಬುಧವಾರ ಮಧ್ಯರಾತ್ರಿ ಕೊರೋನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ. ಕಳೆದ ಏ.೪ ರಂದು ತೀವ್ರ ಉಸಿರಾಟದ ತೊಂದರೆಯಿಂದ ಬಳುಲುತ್ತಿದ್ದ ವೃದ್ದೆ ಜಿಮ್ಸ್ ಗೆ ದಾಖಲಾಗಿದ್ದಳು. ಸಂಶಯಾಸ್ಪದ ಎಂದು ನಿರ್ಧರಸಿ ಗಂಟಲಿನ ದ್ರವ ಹಾಗೂ ರಕ್ತದ ಮಾದರಿಯನ್ನು ಬೆಂಗಳೂರಿನ ಲ್ಯಾಬ್ ಗೆ ಕಳುಹಿಸಲಾಗಿತ್ತು. ಸೋಮವಾರ ಬಂದ ವರದಿಯಲ್ಲಿ ಸೋಂಕು ದೃಡಪಟ್ಟಿತ್ತು. ಆದರೆ ಜಿಲ್ಲಾಡಳಿತ ಕೊರೋನಾ ಪಾಸಿಟಿವ್ ಎಂದು ಘೋಷಣಿಗೂ ಗೊಂದಲ ಮೂಡಿಸಿ ಮತ್ತು. ಮಂಗಳವಾರ ಪಾಸಿಟವ್ ಎಂದು ಗಣಿ ಸಚಿವ ಸಿ ಸಿ ಪಾಟೀಲ್ ಘೋಷಿಸಿದರು.

ಜಿಮ್ಸ್ ನಿರ್ದೇಶಕ ಡಾ.ಪಿ ಎಸ್ ಭೂಸರಡ್ಡಿ ಕೊರೋನಾ ಸೋಂಕಿತ ವೃದ್ದೆ ಮೃತಪಟ್ಟಿದ್ದನ್ನು ಖಚಿತ ಪಡಿಸಿದ್ದಾರೆ.
ಸೋಂಕು ದೃಡ ಪಟ್ಟ ನಂತರ ರಂಗನವಾಡಿ ಹಾಗೂ ವೃದ್ದೆ ಓಡಾಡಿದ್ದ ಎಸ್ ಎಮ್ ಕೃಷ್ಣ ನಗರವನ್ನು ನಿರ್ಬಂಧಿತ ಪ್ರದೇಶ (ಕಂಟೋನ್ಮೆಂಟ್) ಎಂದು ಜಿಲ್ಲಾಡಳಿತ ಘೋಷಿಸಿತು.

ವೃದ್ಧೆಯ ಸೋಂಕಿನ ಮೂಲ ಇನ್ನೂ ನಿಗೂಢ:

ಜಿಲ್ಲೆಯಲ್ಲಿ ದೃಢೀಕರಣವಾಗಿದ್ದ ಮೊದಲ ಕೊರೋನಾ ಪಾಸಿಟಿವ್ ಕೇಸ್ ಜನರಲ್ಲಿ ತೀವ್ರ ಕುತೂಹಲ ಮೂಡಿಸಿದೆ. ೮೦ ವರ್ಷ ವಯಸ್ಸಿನ ಈ ವೃದ್ಧೆಗೆ ಯಾವ ಮೂಲದಿಂದ ಸೋಂಕು ತಗುಲಿದೆ ಎಂಬ ಪ್ರಶ್ನೆಗೆ ಇನ್ನೂ ಉತ್ತರ ಸಿಕ್ಕಿಲ್ಲ. ಜಿಲ್ಲಾಡಳಿತ ಮತ್ತು ಆರೋಗ್ಯ ಇಲಾಖೆ ಊಹಿಸಿದ್ದ ಸೋಂಕಿನ ಮೂಲಗಳಿಂದ ಈ ಸೋಂಕು ತಗುಲಿಲ್ಲ ಎಂಬುದು ಬುಧವಾರ ಖಾತ್ರಿಯಾಗಿದೆ. ವೃದ್ಧೆಯ ಸಂಪರ್ಕಕ್ಕೆ ಬಂದಿದ್ದ ಎಲ್ಲ ೪೨ ಜನರ ಗಂಟಲು ಮತ್ತು ರಕ್ತದ ಮಾದರಿಗಳು ನೆಗೆಟಿವ್ ಎಂದು ವರದಿ ಬಂದಿವೆ.

ಮಂಡಿನೋವಿನ ಕಾರಣ ಮನೆಯಿಂದ ಹೊರ ಬರದಿದ್ದ, ಬಂದರೆ ಅಲ್ಲಿಯೇ ಕಟ್ಟೆ ಮೇಲೆ ಕೂಡುತ್ತಿದ್ದ ವೃದ್ಧೆಗೆ ಕೊರೋನಾ ಸೋಂಕು ತಗುಲಿದ್ದಾದರೂ ಹೇಗೆ? ಎಂಬ ಪ್ರಶ್ನೆ ಮೂಡಿದೆ. ಮೊದಲಿಗೆ, ಆಕೆಯ ಜೊತೆ ಮನೆಯಲ್ಲಿ ವಾಸಿಸುತ್ತಿದ್ದ ಸೊಸೆ ಮತ್ತು ಇಬ್ಬರು ಮೊಮ್ಮಕ್ಕಳಿಂದ ಬಂದಿರಬಹುದು ಎಂಬ ಒಂದು ಊಹೆಯಿತ್ತು. ಒಬ್ಬ ಮೊಮ್ಮಗ ಆಟೋ ಓಡಿಸುತ್ತಾನೆ ಮತ್ತು ಇನ್ನೊಬ್ಬಾತ ತರಕಾರಿ ಮಾರುತ್ತಾನೆ. ಇವರು ಹೊರಗೆ ಸುತ್ತಾಡುವುದರಿಂದ ಇವರಿಂದ ಬಂದಿರಬಹುದೇ ಎಂಬ ಸಂಶಯವೂ ಈಗ ನಿವಾರಣೆಯಾಗಿದೆ. ಜೊತೆ ವಾಸಿಸುತ್ತಿದ್ದ ಮೂವರಿಗೂ ಸೋಂಕು ಬರಲಿಲ್ಲ ಎಂದು ಬುಧವಾರ ಬಂದ ವರದಿಗಳು ದೃಢೀಕರಿಸಿವೆ. ಅಂದರೆ ಮೊದಲನೇ ಗೆಸ್ ಫೇಲಾಗಿದೆ.
ಗೋವಾದಿಂದ ಬಂದವರ ಕತೆ?:
ವೃದ್ಧೆಯು ಎಸ್.ಎಂ ಕೃಷ್ಣ ನಗರದಲ್ಲಿರುವ ಸಂಬಂಧಿಯೊಬ್ಬರ ಮನೆಯ ಕಾರ್ಯಕ್ರಮಕ್ಕೆ ಹೋಗಿದ್ದರು. ಆ ಕಾರ್ಯಕ್ರಮಕ್ಕೆ ಗೋವಾದಿಂದ ಬಂದಿದ್ದವರಿಂದ ಈ ಸೋಂಕು ತಗುಲಿರಬಹುದು ಎಂದು ಮಂಗಳವಾರ ಸಚಿವ ಸಿ.ಸಿ. ಪಾಟೀಲ್ ಮತ್ತು ಜಿಲ್ಲಾಧಿಕಾರಿ ಸಂಶಯಿಸಿದ್ದರು. ಆದರೆ ಗೋವಾದಿಂದ ಬಂದವರ ಗಂಟಲು ಮತ್ತು ರಕ್ತದ ಮಾದರಿಗಳು ಕೂಡ ನೆಗೆಟಿವ್ ಬಂದಿವೆ. ವೃದ್ಧೆ ಹೋಗಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು, ಓಣಿಯವರು ಸೇರಿ ೩೫ ಜನರ ವರದಿ ನೆಗೆಟಿವ್ ಬಂದಿವೆ. ವೃದ್ಧೆಯ ತಪಾಸಿಸಿದ ಏಳು ವೈದ್ಯ ಸಿಬ್ಬಂದಿ ವರದಿಗಳೂ ನೆಗೆಟಿವ್.
ಯಾವುದೇ ಟ್ರಾವೆಲ್ ಹಿಸ್ಟರಿ ಇರದ, ವಿದೇಶದಿಂದ ಬಂದವರ ಸಂಪರ್ಕಕ್ಕೆ ಬರದ ಈ ಅಜ್ಜಿಗೆ ಸೋಂಕು ಹೇಗೆ ತಗುಲಿದೆ? ಜಿಲ್ಲೆಯಿಂದ ತಬ್ಲಿಗ್ ಜಮಾತ್ ಸಮಾವೇಶಕ್ಕೆ ಹೋಗಿ ಬಂದ ೧೩ ಜನರ ವರದಿಗಳೂ ನೆಗೆಟಿವ್ ಬಂದಿವೆ. ಕೊರೋನಾ ಸೋಂಕಿತ ಅಮ್ಮನ ಸಂಪರ್ಕಕ್ಕೆ ಅವರಂತೂ ಬಂದಿಲ್ಲ.
ಈಗ ಸೋಂಕಿನ ಮೂಲ ಪತ್ತೆ ಹಚ್ಚಲು ಜಿಲ್ಲಾಡಳಿತ ಒಂದು ಟಾಸ್ಕ್ ಫೋರ್ಸ್ ರಚಿಸಿದೆ.