Sunday, 15th December 2024

ಇಂಟರ್ನೆಟ್ ತುಂಬೆಲ್ಲಾ 10 ರೂ. ನೋಟಿನಲ್ಲಿನ ಪ್ರೇಮಸಂದೇಶ ವೈರಲ್‌…!

ಮುಂಬೈ: ಬಾಲಿವುಡ್ ಜೋಡಿಗಳ ವಿವಾಹಕ್ಕಿಂತ ಈ 10 ರೂ. ನೋಟಿನಲ್ಲಿ ಬರೆಯ ಲಾಗಿರುವ ಪ್ರೇಮಕಥೆಯೇ ಈಗ ಇಂಟ್ರೆಸ್ಟಿಂಗ್ ಆಗಿದೆ. ಇಂಟರ್ನೆಟ್ ತುಂಬೆಲ್ಲಾ ವಿಶಾಲ್, ಕುಸುಮ್ ಅವರ ಪ್ರೀತಿಯದ್ದೇ ಸುದ್ದಿ.

ಯುವತಿ ಕುಸುಮ್ ತನ್ನ ಪ್ರೇಮಿ ವಿಶಾಲ್‌ಗೆ 10 ರೂಪಾಯಿ ನೋಟಿನಲ್ಲಿ ಬರೆದಿದ್ದ ಸಂದೇಶ ವೈರಲ್ ಆಗಿತ್ತು.

ವಿಶಾಲ್, ಮದುವೆ ಏ.26ರಂದು ನಿಶ್ಚಯವಾಗಿದೆ. ದಯವಿಟ್ಟು ಓಡಿ ಹೋಗೋಣ. ನಾನು ನಿನ್ನನ್ನು ಪ್ರೀತಿಸುತ್ತೇನೆ. ನಿಮ್ಮ ಕುಸುಮ್ ಎಂದು ಬರೆಯಲಾಗಿತ್ತು. ವಿಶಾಲ್ ಗೆ ಸಂದೇಶ ತಲುಪಿಸಲು ನೆಟ್ಟಿಗರು ಕೂಡ ಪ್ರಯತ್ನ ಪಟ್ಟಿದ್ದರು. ನೋಟಿನಲ್ಲಿ ಬರೆಯ ಲಾಗಿದ್ದ ಸಂದೇಶದ ಚಿತ್ರವನ್ನು ವ್ಯಾಪಕವಾಗಿ ಹಂಚಿಕೊಳ್ಳುವ ಮೂಲಕ, ತಮಗೆ ತಿಳಿದಿರುವ ಪ್ರತಿಯೊಬ್ಬ ವಿಶಾಲ್‌ನನ್ನು ಟ್ಯಾಗ್ ಮಾಡಿದ್ದರು.

ಏಪ್ರಿಲ್ 26 ಕ್ಕೆ ಕೇವಲ ಒಂದೇ ದಿನ ಬಾಕಿ ಇರುವಂತೆ ಪ್ರೇಮಿ ವಿಶಾಲ್, ಕುಸುಮ್ ಅವರ ಸಂದೇಶವನ್ನು ಕಂಡುಕೊಂಡಿದ್ದಾರೆ. ಇನ್ನೊಂದು 10 ರೂಪಾಯಿ ನೋಟಿನಲ್ಲಿ ವಿಶಾಲ್ ಸಂದೇಶ ಬರೆದಿದ್ದಾರೆ. ಏಪ್ರಿಲ್ 26ಕ್ಕೆ ಬರುವುದಾಗಿ ಪ್ರೇಮಿ ವಿಶಾಲ್ ಉತ್ತರಿಸಿದ್ದಾರೆ. ವಿಶಾಲ್ ತನ್ನ ಪ್ರಿಯತಮೆಗೆ ಬರೆದಿರೋ ಸಂದೇಶ ಹೀಗಿದೆ.. ಕುಸುಮ್, ನಾನು ನಿಮ್ಮ ಸಂದೇಶವನ್ನು ಸ್ವೀಕರಿಸಿದ್ದೇನೆ. ತಾನು ಬಂದು ನಿನ್ನನ್ನು ಕರೆದುಕೊಂಡು ಹೋಗುತ್ತೇನೆ. ನಾನು ನಿನ್ನನ್ನು ಪ್ರೀತಿಸುತ್ತೇನೆ. ನಿನ್ನ, ವಿಶಾಲ್ ಎಂದು ಬರೆಯಲಾಗಿದೆ.

ಇದೀಗ ವಿಶಾಲ್ ಸಂದೇಶ ಕೂಡ ಇಂಟರ್ನೆಟ್ ನಲ್ಲಿ ಹುಚ್ಚುಚ್ಚಾಗಿ ವೈರಲ್ ಆಗಿದೆ.