Sunday, 15th December 2024

ಭಾರತ ಈಗ ಜಗತ್ತಿನ ಸೂಪರ್‌ಪವರ್‌ ದೇಶ

ವಿಶ್ಲೇಷಣೆ

ರಾಮಚಂದ್ರ ಹೆಗಡೆ

ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಮ್ಮ ಶೇರು ಮಾರುಕಟ್ಟೆಯಿಂದ ಹಣವನ್ನು ಹಿಂದೆ ಪಡೆದು ಹೋದರೂ ಆರ್ಥಿಕತೆ ಕುಸಿದಿಲ್ಲ. ದೇಶದೊಳಗಿನ ಹೂಡಿಕೆದಾರರು ಹಣ ತುಂಬಿಸಿ ಬಿಟ್ಟಿದ್ದಾರೆ. ಎರಡನೆಯದು, ದೇಶ ಸುಮಾರು ಎರಡು ವರ್ಷ ಗಳಷ್ಟು ದೀರ್ಘಕಾಲ 80 ಕೋಟಿ ಜನರಿಗೆ ಉಚಿತ ಧಾನ್ಯ ಒದಗಿಸಿದ್ದು. ಇದೊಂದು ಕಲ್ಪನಾತೀತ ವಿಷಯ.

ದೊಡ್ಡ ಸಂಭ್ರಮದ ವಿಷಯ. ಬಲಿಷ್ಟ ಭಾರತವನ್ನು ಕಟ್ಟುವ ಪ್ರಧಾನಿ ಮೋದಿ ಕನಸು ಸಾಕಾರವಾಗಿ ಹೋಗಿದೆ. ಭಾರತ ಈಗ ಸೂಪರ್ ಪವರ್. ನಮ್ಮ ಹಿರಿತನವನ್ನು ಜಗತ್ತು ಒಪ್ಪಿಕೊಂಡೇ ಬಿಟ್ಟಿದೆ. ಪ್ರಧಾನಿ ಮೋದಿ ಈಗ ಜಗತ್ತಿನ ಅಗ್ರೇಸರ ನಾಯಕರಲ್ಲಿ ಒಬ್ಬರು.

ಪುಟಿನ್, ಬೈಡನ್, ಷಿ ಜಿನ್‌ಪಿಂಗ್ ಹಾಗೆ. ಐತಿಹಾಸಿಕ ಘಟನೆ ಇದು. ಸಾಧನೆ ಬಹಳ ದಿನದಿಂದಲೇ ಇತ್ತು. ಎದ್ದು ಕಂಡಿರುವುದು ಈಗ ರಷ್ಯಾ ಉಕ್ರೇನ್ ಯುದ್ಧದ ಸಂದರ್ಭ ದಲ್ಲಿ. ಘಟನೆಯ ಸರಣಿಗಳನ್ನು ಗಮನಿಸಿ. ರಷ್ಯಾ ಭಾರತದ ನೆರವನ್ನು ಕೋರಿತು. ರಷ್ಯಾ ಭಾರತದ ನೆರವನ್ನು ಕೇಳುವುದು ಭಾರೀ ದೊಡ್ಡ ಮಾತು. ಏಕೆಂದರೆ ರಷ್ಯಾ ಕೂಡ ಒಂದು ಸೂಪರ್ ಪವರ್ ದೇಶವೇ! ದೊಡ್ಡ ಮಿಲಿಟರಿ ಶಕ್ತಿ ಅದು. ಒಪ್ಪಿಕೊಂಡ ಮೋದಿ ಸರಕಾರ ‘ತಟಸ್ಥ’ ವಾಗಿ ದೀರ್ಘಕಾಲದ ಗೆಳೆಯ ರಷ್ಯಾದ ಜತೆ ನಿಂತು ಬಿಟ್ಟಿತು.

ಗಮನಿಸಬೇಕಾದ್ದು ಭಾರತದ ಅನುಮಾನವಿಲ್ಲದ, ಆತ್ಮವಿಶ್ವಾಸ ತುಂಬಿದ ನಿರ್ಣಯ. ಮೋದಿ ಸರಕಾರದ ಬದಲು ಬೇರೆ ಸರಕಾರ ಇದ್ದಿದ್ದರೆ ಇದು ದೇಶಕ್ಕೆ ಸಂಕಟಮಯ ಸಂದರ್ಭವಾಗಿ ಹೋಗುತ್ತಿತ್ತೇನೋ! ಏಕೆಂದರೆ ರಷ್ಯಾದ ಪರ ನಿಲ್ಲುವು ದೆಂದರೆ ಅಮೆರಿಕದ, ಯುರೋಪ್ ನ, ನ್ಯಾಟೊ ದೇಶಗಳ ಅಸಂತೋಷವನ್ನು ಆಹ್ವಾನಿಸುವುದು.

ಅದು ಸುಲಭದ ನಿರ್ಧಾರವಲ್ಲ. ಅಮೆರಿಕ ಇದನ್ನು ನಿರೀಕ್ಷಿಸಿರಲಿಲ್ಲ ಎಂದೇ ಕಾಣುತ್ತದೆ. ಮೋದಿಯವರ ನಿರ್ಧಾರ ಪ್ರಕಟ ವಾದಂತೆ ಅದು ದಂಗು ಬಡಿದು ಹೋಯಿತು. ಅಧ್ಯಕ್ಷ ಬೈಡನ್ ಕಂಗಾಲಾಗಿ ಹೋದರು. ಮೋದಿಯವರ ಜತೆ ಮಾತನಾಡಿದರು. ಪ್ರತಿನಿಧಿಗಳನ್ನು ಕಳುಹಿಸಿ ಮನವೊಲಿಸಲು ಪ್ರಯತ್ನಿಸಿದರು. ರಷ್ಯಾದ ಗೆಳೆತನ ಭಾರತಕ್ಕೆ ಲಾಭವಲ್ಲ ಎಂದು ಹೇಳಿದರು.
ಆರ್ಥಿಕ ದಿಗ್ಬಂಧನ ಹಾಕುವುದಾಗಿ ಹೆದರಿಸಿದರು. ಆದರೆ ಒತ್ತಡಗಳಿಗೆ, ಬ್ಲಾಕ್‌ಮೇಲ್ ತಂತ್ರಗಳಿಗೆ ಭಾರತ ಜಗ್ಗಲೇ ಇಲ್ಲ.

ದಿಗ್ಬಂಧನದ ಧಮಕಿ ಕಿವಿಯ ಮೇಲೆ ಹಾಕಿಕೊಳ್ಳಲೇ ಇಲ್ಲ. ಕುತೂಹಲವೆಂದರೆ ಈಗ ಅಮೆರಿಕವೇ ಗೊಂದಲಕ್ಕೆ ಬಿದ್ದುಬಿಟ್ಟಿತು. ಅದಕ್ಕೆ ಬಿದ್ದ ಇನ್ನೊಂದು ಹೊಡೆತವೆಂದರೆ ಕ್ವಾಡ್ ಗುಂಪಿನ ದೇಶಗಳಾದ(ಭಾರತದ ಶಕ್ತಿ ಅರಿತಿರುವ) ಜಪಾನ್ ಮತ್ತು ಆಸ್ಟ್ರೇಲಿ ಯಾ ಭಾರತದ ನಿಲುವಿಗೆ ತಕರಾರು ಎತ್ತಲೇ ಇಲ್ಲ. ತಲೆಕೆಡಿಸಿಕೊಳ್ಳಲೂ ಇಲ್ಲ. ಬಲಾಢ್ಯ ರಾಷ್ಟ್ರಗಳು ಈ ವಿಷಯದಲ್ಲಿ ಬೆಂಬಲಿಸಿ ನಿಲ್ಲದೆ, ನಮ್ಮ ಸುದ್ದಿಗೆ ಬರದೆ ಮೌನವಾಗಿದ್ದು ಅಮೆರಿಕಕ್ಕೆ ತೀವ್ರ ಮುಜುಗರವಾಯಿತು. ಇಂಗ್ಲೆಂಡ್ ಪ್ರಧಾನಿ ಕೂಡ ಭಾರತದ ನಿಲುವನ್ನು ದುರದೃಷ್ಟಕರ ಎಂದು ಮೃದುವಾಗಿ ಹೇಳಿದರೇ ಹೊರತು ಮತ್ತೇನೂ ಮಾತನಾಡಲಿಲ್ಲ. ಮುಂದೆ ಗಮನಿಸಿ.

ಅಮೆರಿಕ ರಷ್ಯಾಕ್ಕೆ ಆರ್ಥಿಕ ದಿಗ್ಬಂಧನಗಳನ್ನು ಹಾಕಿತು. ಅದರ ವಸ್ತುಗಳನ್ನು ಯಾರೂ ಖರೀದಿ ಮಾಡಬಾರದು ಎಂದು -ರ್ಮಾನು ಹೊರಡಿಸಿತು. ಭಾರತ ಅದಕ್ಕೂ ಕೇರ್ ಮಾಡಲಿಲ್ಲ. ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಂಡಿತು. ಹಾಗೆ ಮಾಡಬಾರದಿತ್ತು ಎಂದು ಹೇಳಿದ ಅಮೆರಿಕಕ್ಕೆ ಕಟುವಾಗಿ ಉತ್ತರಿಸಿದ ವಿದೇಶಾಂಗ ಸಚಿವ ಜೈಶಂಕರ್ ಇವೆಲ್ಲ ನಮ್ಮ ನಿರ್ಣಯ ಗಳು. ಬೇರೆಯವರು ಮೂಗು ತೂರಿಸುವಂತಿಲ್ಲ ಎಂದುಬಿಟ್ಟರು. ಅಮೆರಿಕಕ್ಕೆ ಗೊಣಗಾಡುವುದನ್ನು ಬಿಟ್ಟು ಬೇರೇನೂ ಮಾಡ ಲಾಗಲೇ ಇಲ್ಲ.

ಭಾರತ ರಷ್ಯಾದಿಂದ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳಬಾರದು ಎಂದು ಅಮೆರಿಕ ಹೇಳಿತು. ರಷ್ಯಾದ ಶಸ್ತ್ರಾಸ್ತ್ರಗಳು
ಅಮೆರಿಕದವುಗಳಿಗಿಂತ ಕಡಿಮೆ ಬೆಲೆಯಲ್ಲಿ ಲಭ್ಯ ಇವೆ. ಹೀಗಾಗಿ ನಾವು ಖರೀದಿಸುತ್ತಿದ್ದೇವೆ ಎಂದು ಜೈಶಂಕರ್ ಹೇಳಿ ಬಿಟ್ಟರು. ಕೊನೆಯ ಅಸವಾಗಿ ಅಮೆರಿಕ ಭಾರತದಲ್ಲಿ ಮಾನವಾಧಿಕಾರಗಳ ಹರಣವಾಗುತ್ತಿದೆ ಎಂದು ಹೇಳಿತು. ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ವಿದೇಶಾಂಗ ಮಂತ್ರಿ ಅಮೆರಿಕದಲ್ಲಿಯೂ ಕಪ್ಪು ಜನರ ಮೇಲೆ ಹಲ್ಲೆ ನಡೆದಿದೆ. ಅದೂ ಮಾನವ ಹಕ್ಕುಗಳ ಉಲ್ಲಂಘನೆ ಎಂದು ಬಿಟ್ಟರು. ಅಮೆರಿಕ ಸುಮ್ಮನಾಗಬೇಕಾಯಿತು. ಟ್ರಂಪ್ ಭಾರತದ ಸ್ನೇಹ ಯಾಕೆ ಬೆಳೆಸಿದ್ದರು ಎನ್ನುವುದು ಬೈಡನ್‌ಗೆ ಅರಿವಾಗಿರ ಬೇಕು.

ತಣ್ಣಗಾದ ಅಮೆರಿಕ ಈಗ ಭಾರತಕ್ಕೆ ಪೂಸಿ ಹೊಡೆಯುತ್ತ ಕುಳಿತಿದೆ. ಸಂಬಂಧಗಳನ್ನು ಬಲಪಡಿಸುವ ಇಚ್ಛೆ ತನಗಿದೆ ಎಂದು ಹೇಳುತ್ತಿದೆ. ಈಗ ಅಂತಹ ಪ್ರಯತ್ನದಲ್ಲಿಯೂ ತೊಡಗಿದೆ. ದೇಶದ ರಕ್ಷಣೆ ಹಾಗೂ ವಿದೇಶಾಂಗ ಸಚಿವರನ್ನು ಆಹ್ವಾನಿಸಿ ಮಾತು ಕತೆ ನಡೆಸಿದೆ. ರೋಪು ಹಾಕುವುದನ್ನು ಬಿಟ್ಟು ವಿನಂತಿ ಮಾಡಲು ಆರಂಭಿಸಿದೆ. ಇಡೀ ಅಮೆರಿಕನ್ ಗುಂಪಿನ ಮೇಲೆ ಭಾರತ ರಾಜತಾಂತ್ರಿಕ ವಿಜಯ ಸಾಧಿಸಿದೆ. ಭಾರತ ಈಗ ಸೂಪರ್ ಪವರ್.

ಬೇರೆ ದೇಶಗಳ ಜತೆಗಿನ ಸಂಬಂಧಗಳನ್ನೂ ಗಮನಿಸಬೇಕು. ಕುತೂಹಲವೆಂದರೆ ಭಾರತ ರಷ್ಯಾಕ್ಕೆ ಹತ್ತಿರವಾಗಿದ್ದರೂ ಉಕ್ರೇನ್ ನಮ್ಮನ್ನು ದೂರಮಾಡಲಿಲ್ಲ. ಅಧ್ಯಕ್ಷ ಜೆಲೆನ್ಸ್ಕಿ ಭಾರತಕ್ಕೆ ಮಧ್ಯಸ್ಥಿಕೆ ವಹಿಸಲು ಕೋರಿಕೊಂಡರು. ಸಿಕ್ಕಿಬಿದ್ದಿದ್ದ ಸಾವಿರಾರು ವಿದ್ಯಾರ್ಥಿಗಳಿಗೆ ಸುರಕ್ಷಿತವಾಗಿ ಮರಳುವ ಅನುಕೂಲ ಮಾಡಿದರು. ಮೋದಿಯವರ ಮಾತುಗಳಿಗೆ ಇರುವ ಜಾಗತಿಕ ಮನ್ನಣೆ ಯನ್ನು ಗಮನಿಸಬೇಕು.

ನಮ್ಮ ವಿದ್ಯಾರ್ಥಿಗಳು ಸುರಕ್ಷಿತವಾಗಿ ಹೊರಬರಲು ಅನುಕೂಲ ಕಲ್ಪಿಸುದಕ್ಕಾಗಿ ರಷ್ಯಾ ಎರಡು ಮೂರು ದಿನಗಳ ಕಾಲ ಯುಧ್ದ ವಿರಾಮವನ್ನೇ ಘೋಷಿಸಿತು. ಅಕಸ್ಮಾತ್ ಗುಂಡುತಾಗಿ ಅಸುನೀಗಿದ್ದ ವಿದ್ಯಾರ್ಥಿಯೊಬ್ಬನ ಶವವನ್ನು ಭಾರತ ಯುದ್ಧ ರಂಗ ದಿಂದ ತರಿಸಿತು ಎಂದರೆ ಪ್ರಧಾನಿಯವರಿಗಿರುವ ಅಂತಾರಾಷ್ಟ್ರೀಯ ಶಕ್ತಿಯನ್ನು ಊಹಿಸಬೇಕು. ಇವೆಲ್ಲ ಕೇವಲ ಸೂಪರ್ ಪವರ್ ದೇಶಕ್ಕೆ ಮಾತ್ರ ಸಾಧ್ಯವಿದೆ. ರಷ್ಯಾಕ್ಕೂ ಕೂಡ ಭಾರತ ಹೆದರಿ ಬೆಂಬಲ ನೀಡಿಲ್ಲ. ತನ್ನ ತತ್ವಗಳಿಗೆ ಅಂಟಿಕೊಂಡೇ ನಿಂತಿದೆ.

ಉದಾಹರಣೆಗೆ ಉಕ್ರೇನ್‌ನ ನಗರವೊಂದರಲ್ಲಿ ರಷ್ಯಾ ನಡೆಸಿದ ಹತ್ಯಾಕಾಂಡವನ್ನು ಭಾರತ ಖಂಡಿಸಿಬಿಟ್ಟಿದೆ. ರಷ್ಯಾಕ್ಕೂ ಒಂದು ಸಂದೇಶ ರವಾನಿಸಿಯೇ ಬಿಟ್ಟಿದೆ. ಚೀನಾ ಜತೆಗಿನ ಸಂಬಂಧಗಳನ್ನೂ ಗಮನಿಸಬೇಕು. ಡೋಕ್ಲಾಮ್ ಗಡಿಯಲ್ಲಿ ಚೀನಾ ಸೈನ್ಯದ ಜಮಾವಣೆಗೆ ವಿರುದ್ಧವಾಗಿ ಭಾರತವೂ ಸೈನ್ಯವನ್ನು ಜಮಾಯಿಸಿತು. ಇಡೀ ಗಡಿಭಾಗದಲ್ಲಿಯೂ ಭಾರತ ಚೀನಾದ ಕಣ್ಣಿಗೆ ಕಣ್ಣು
ಕೊಟ್ಟು ನಿಂತುಬಿಟ್ಟಿತು. ದೇಶ ೧೯೬೨ರ ಭಾರತವಲ್ಲ ಎಂದು ರಾಜನಾಥ್ ಸಿಂಗ್ ಗಡುಸಾಗಿ ಹೇಳಿಬಿಟ್ಟರು. ಚೀನಾ ಕೂಡ ಈಗ ತುಸು ಮೆತ್ತಗಾಗಿದೆ ಎಂದೇ ಹೇಳಬೇಕು.

ಹುಡುಗಾಟವನ್ನು ಮಿತಿಯಲ್ಲಿಯೇ ಇಟ್ಟಿದೆ. ಭಾರತದ ಬೆಂಬಲವಿಲ್ಲದೆ ತನ್ನ ತೈವಾನ್ ನೀತಿ ಯಶಸ್ವಿಯಾಗಲಿಕ್ಕಿಲ್ಲ ಎನ್ನುವ ಭಾವನೆ ಅದಕ್ಕೆ ಮೂಡಿರಬೇಕು. ಇನ್ನೂ ತುಸು ಹಿಂದೆ ಹೋಗಿ ಗಮನಿಸಬೇಕು. ಸುದೀರ್ಘ ಕಾಲ ಭಾರತ ಆರ್ಟಿಕಲ್ 370ನ್ನು ಹಾಗೆಯೇ ಉಳಿಸಿಕೊಂಡಿದ್ದ ಕಾರಣ ಅಂತಾರಾಷ್ಟ್ರೀಯ ಒತ್ತಡದ ಭಯ. ಆದರೆ ದಿಟ್ಟ ನಿಲುವು ತಳೆದ ಮೋದಿ ಭಾರತ
ಕಾಶ್ಮೀರವನ್ನು ಅದರಿಂದ ಮುಕ್ತಗೊಳಿಸಿಬಿಟ್ಟಿತು. ಕುತೂಹಲವೆಂದರೆ ಮುಸ್ಲಿಮ್ ದೇಶಗಳು ಕೂಡ ತಲೆಕೆಡಿಸಿಕೊಳ್ಳಲೇ ಇಲ್ಲ. ಪಾಕಿಸ್ತಾನ ಕೇವಲ ಮಾತನಾಡಿ ಗಂಟಲು ಒಣಗಿಸಿಕೊಂಡು ತಣ್ಣಗಾಗಿ ಹೋಯಿತು. ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪಾಕಿಸ್ತಾನಕ್ಕೆ ಬೆಂಬಲ ಸಿಗಲೇ ಇಲ್ಲ.

ಕಾಶ್ಮೀರದ ಉಗ್ರಗಾಮಿಗಳು ತುಸು ಸುಮ್ಮನೆ ಕುಳಿತಿರುವ ಕಾರಣ ಇದೇ ಇರಬೇಕು. ಅವರಿಗೆ ಗೊತ್ತಾಗಿದೆ ಪಾಕಿಸ್ತಾನಕ್ಕೆ ಭಾರತದ ವಿರುದ್ಧ ನಿಲ್ಲುವ ಶಕ್ತಿ ಇಲ್ಲ. ಅಷ್ಟೇ ಅಲ್ಲ. ಮುಂದೆ ನಿಂತು ಆತಂಕವಾದಿಗಳಿಗೆ ಬೆಂಬಲ ನೀಡುವ ಶಕ್ತಿಯೂ ಇಲ್ಲ. ಈಗ ಭಾರತ ಪಾಕ್ ಸಂಬಂಧಗಳು ತಲೆಕೆಳಗಾಗಿ ಹೋಗಿವೆ. ಆತಂಕವಾದದ ಕುರಿತಂತೆ ಮೊದಲು ಪಾಕಿಸ್ತಾನ ಅಗ್ರೆಸಿವ್ ಮೂಡ್‌ನಲ್ಲಿ ಇರುತ್ತಿತ್ತು. ಭಾರತ ರಕ್ಷಣಾತ್ಮಕವಾಗಿರುತ್ತಿತ್ತು. ಆತಂಕದಲ್ಲಿರುತ್ತಿತ್ತು.

ಈಗ, ಮೋದಿ ಭಾರತದ ಎದುರು ಪಾಕಿಸ್ತಾನ ಭಯದಲ್ಲಿ ಇದೆ. ಉದಾ: ಭಾರತ ಸರ್ಜಿಕಲ್ ಸ್ಟ್ರೈಕ್ ನಡೆಸಿದರೂ ಪಾಕಿಸ್ತಾನ ದಾಳಿಗಿಳಿಯಲಿಲ್ಲ. ಅಲ್ಲದೆ ಪಾಕಿಸ್ತಾನದ ಮೇಲೆಯೇ ಎಂತಹ ಅಂತಾರಾಷ್ಟ್ರೀಯ ಒತ್ತಡ ಬಂತೆಂದರೆ ಸಿಕ್ಕಿಬಿದ್ದಿದ್ದ ಭಾರತೀಯ ಸೈನಿಕನನ್ನು ನಲವತ್ತೆಂಟು ಗಂಟೆಯಲ್ಲಿ ಭಾರತಕ್ಕೆ ಕಳುಹಿಸಿತು. ಈಗ ಏನಾಗಿದೆಯೆಂದರೆ ಭಾರತದ ಕ್ಷಿಪಣಿಯೊಂದು ಹಾರಿ ಹೋಗಿ ಪಾಕಿಸ್ತಾನದಲ್ಲಿ ಬಿದ್ದರೂ ಕೂಡ ಅದು ಅಕ್ಷರಶಃ ಜಾಗತಿಕ ಸಮುದಾಯದ ಮುಂದೆ ಅತ್ತು ಸುಮ್ಮನಾಗಿದೆ. ಮತ್ತೆ ತಾಲಿಬಾನ್‌ಅನ್ನು ಗಮನಿಸಿ. ಅದಕ್ಕೆ ಭಾರತವನ್ನು ಕಂಡರಾಗುತ್ತಿರಲಿಲ್ಲ.

ಆದರೆ ಈಗ ಬಂದಿರುವ ತಾಲಿಬಾನ್ ಸರಕಾರಕ್ಕೆ ಜ್ಞಾನೋದಯವಾದಂತಿದೆ. ಅದು ಭಾರತದ ಸಹಕಾರ ಕೋರುತ್ತಿದೆ. ಕಲ್ಪನೆ ಕೂಡ ಮಾಡಲಾಗದ ವಿಷಯಗಳು. ಕೆಲವೇ ವರ್ಷಗಳ ಮೊದಲು ಭಾರತದ ಸ್ಥಿತಿ ಹೇಗಿತ್ತು ಎನ್ನುವುದು ಗೊತ್ತಿದೆ. ಪಾಕಿಸ್ತಾನ ಆತಂಕವಾದ ಸೃಷ್ಟಿಸಿದರೂ ಭಾರತವೇ ಸಹನೆಯಿಂದ ಕಾಯಬೇಕಿತ್ತು. ಅಮೆರಿಕ ನಮಗೆ ಆದೇಶಗಳನ್ನು ನೀಡುತ್ತಿತ್ತು. ಚಿಕ್ಕ ಪುಟ್ಟ ದೇಶಗಳು ಧಮಕಿ ನೀಡುತ್ತಿದ್ದೆವು. ‘ಪಶ್ಚಿಮ’ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿತ್ತು. ಅದು ಅವನ್ನು ಭಾರತದ ವಿರುದ್ಧ ಬಳಸುತ್ತಿತ್ತು.

ತಾಲಿಬಾನ್ ಉಗ್ರರು, ಬಾಡಿಗೆ ಯೋಧರು ನಿರಂತರ ಭಾರತದ ವಿರುದ್ಧ ಸೆಣಸಾಡುತ್ತಲೇ ಇರುತ್ತಿದ್ದರು. ನೆಹರುವಿನಿಂದ ಹಿಡಿದು ನಂತರದವರೆಗಿನ ಭಾರತ (ವಾಜಪೇಯಿ ಅವಧಿ ಬಿಟ್ಟು) ಜಾಗತಿಕವಾಗಿ ಕೀಳರಿಮೆಯಿಂದ ಬದುಕುತ್ತಿತ್ತು. ಈಗ ಅದೆಲ್ಲವೂ ಇತಿಹಾಸ ಮಾತ್ರ. ವಿದೇಶಾಂಗ ನೀತಿಯ ಯಶಸ್ಸು ಹಲವು ಅಂಶಗಳ ಮೇಲೆ ಅವಲಂಬಿಸಿರುತ್ತದೆ. ಒಂದನೆಯದು ದೇಶದ
ಆರ್ಥಿಕತೆಯ ಸ್ಥಿತಿಗತಿ. ಅದು ಬಲಗೊಂಡಂತೆ ದೇಶ ಬಲಗೊಳ್ಳುತ್ತದೆ. ಅನುಮಾನವಿಲ್ಲ. ನಮ್ಮದು ಇಂದು ಶಕ್ತಿವಂತ ಆರ್ಥಿಕತೆ. ದೇಶದಲ್ಲಿ ಹಣದ ಹೊಳೆಯೇ ಹರಿಯುತ್ತಿದೆ.

ಉದಾಹರಣೆಗೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ನಮ್ಮ ಶೇರು ಮಾರುಕಟ್ಟೆಯಿಂದ ಹಣವನ್ನು ಹಿಂದೆ ಪಡೆದು ಹೋದರೂ ಆರ್ಥಿಕತೆ ಕುಸಿದಿಲ್ಲ. ದೇಶದೊಳಗಿನ ಹೂಡಿಕೆದಾರರು ಹಣ ತುಂಬಿಸಿ ಬಿಟ್ಟಿದ್ದಾರೆ. ಎರಡನೆಯದು, ದೇಶ ಸುಮಾರು ಎರಡು ವರ್ಷಗಳಷ್ಟು ದೀರ್ಘಕಾಲ 80 ಕೋಟಿ ಜನರಿಗೆ ಉಚಿತ ಧಾನ್ಯ ಒದಗಿಸಿದ್ದು. ಇದೊಂದು ಕಲ್ಪನಾತೀತ ವಿಷಯ. ದೇಶಗಳು ಇದನ್ನು ನೋಡಿ ದಿಗ್ಭ್ರಮೆಗೊಂಡಿವೆ.

ಇನ್ನೊಂದು ಅಂಶ ಗಮನಿಸಿ, ವಿಶ್ವಕ್ಕೇ ಆಹಾರ ನಾಳೆಯಿಂದ ಬೇಕಾದರೆ ನಾಳೆಯೇ ಸರಬರಾಜು ಮಾಡುವುದಾಗಿ ಪ್ರಧಾನಿ ಮೋದಿ ಹೇಳಿದ್ದಾರೆ. ಜಗತ್ತು ಅಚ್ಚರಿಯಿಂದ ನೋಡುತ್ತಿದೆ. ದೇಶ ಇಲ್ಲಿಯವರೆಗೆ ಸುಮಾರು ನೂರು ಕೋಟಿ ಎಪ್ಪತ್ತೈದು ಲಕ್ಷ ಜನರಿಗೆ ಉಚಿತವಾಗಿ ಕರೋನಾ ವ್ಯಾಕ್ಸಿನ್ ನೀಡಿದೆ. ಇದೊಂದು ಜಾಗತಿಕ ಅಚ್ಚರಿ. ಚೀನಾವನ್ನು ಬಿಟ್ಟು ಅತಿದೊಡ್ಡ ಮಾರು ಕಟ್ಟೆ ಇಂದು ಭಾರತದಲ್ಲಿದೆ. ಎಲ್ಲ ರಂಗಗಳಲ್ಲಿಯೂ ತಾಂತ್ರಿಕತೆ ಇದೆ. ಪಶ್ಚಿಮ ದೇಶಗಳಲ್ಲಿಯೂ ಇಲ್ಲದ ಡಿಜಿಟಲ್ ವ್ಯವಸ್ಥೆಗಳು ಭಾರತದಲ್ಲಿದೆ.

ರಕ್ಷಣಾ ಉಪಕರಣಗಳು ದೇಶಿಯವಾಗಿ ತಯಾರಾಗುತ್ತಿವೆ. ಮೋದಿ ಸರಕಾರದ ವಿಶೇಷತೆಯೆಂದರೆ ಸಾಧನೆಗಳನ್ನು ನೀಟ್ ಆಗಿ
ಪ್ಯಾಕ್ ಮಾಡಿ ಜಗತ್ತಿನ ಮುಂದಿಡುವುದು ಅದಕ್ಕೆ ಚೆನ್ನಾಗಿಯೇ ಗೊತ್ತಿದೆ. ಪ್ರಧಾನಿ ಮೋದಿ ಇದೆಲ್ಲವನ್ನೂ ಅತಿ ಚಿಕ್ಕ
ಸಮಯದಲ್ಲಿ ಸಾಧಿಸಿ ತೋರಿಸಿ ಜಗತ್ತಿನ ಮುಂದೆ ಇಟ್ಟಿದ್ದಾರೆ. ಇದರಲ್ಲಿ ಮೊದಲ ಪ್ರಧಾನಿಗಳ, ಸರಕಾರಗಳ ಕೊಡುಗೆ ಇಲ್ಲವೇ ಇಲ್ಲವೆಂದು ಅಲ್ಲ. ಆದರೆ ಖಂಡಿತಕ್ಕೂ ಭಾರತದ ಮನಸ್ಥಿತಿಯನ್ನೇ ಬದಲಾಯಿಸಿದವರು ಮೋದಿ.

ಭಾರತದ ಕುರಿತು ಜಗತ್ತಿನ ಮನಸ್ಥಿತಿಯನ್ನೂ ಬದಲಾಯಿಸಿದವರು ಅವರು. ಹೀಗಾಗಿ ದೇಶ ಜಾಗತಿಕ ಶಕ್ತಿ ಆಗಿಯೇ ಹೋಗಿದೆ. ಕೇಂದ್ರ ಸರಕಾರಕ್ಕೆ ಅಭಿನಂದನೆ ಮತ್ತು ಕೃತಜ್ಞತೆ. ರಾಷ್ಟ್ರಾದ್ಯಂತ ಸಂಭ್ರಮಾಚರಣೆಗಳು ನಡೆಯಬೇಕಾದ ವಿಷಯ ಇದು.