Thursday, 12th December 2024

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಚೆನ್ನ ಭೈರಾದೇವಿಯ ಹೆಸರಿಡಿ

ನಿರಂಜನ್ ಜೈನ್ ಕುದ್ಯಾಡಿ

ಅಮೋಘ ಅಚಲ ರಾಣಿಯ ಹೆಸರು ಚಿರಸ್ಥಾಯಿಯಾಗಬೇಕಾದರೆ ಆಕೆಯ ಹೆಸರು ವಿಮಾನ ನಿಲ್ದಾಣಕ್ಕೆ ಇಡಲೇಬೇಕು. ಈಕೆಯ ದೇಶ ಪ್ರೇಮ, ಪ್ರಜಾ ಪ್ರೇಮ, ರೈತ ಪ್ರೇಮ ಬಹುಶಃ ಈಗಿನ ರಾಜಕಾರಣಿಗಳಿಗೆ ಮಾರ್ಗಸೂಚಿಯಾಗಬೇಕು.

ಇತ್ತೀಚೆಗೆ ಶಿವಮೊಗ್ಗ ವಿಮಾನ ನಿಲ್ದಾಣದ ಹೆಸರಿನ ಬಗ್ಗೆ ಭಾರಿ ಚರ್ಚೆ ಆಗುತ್ತಿದೆ. ವಿವಿಧ ಮಜಲುಗಳ ವ್ಯಕ್ತಿಗಳ ಹೆಸರು ಕೇಳಿ ಬರುತ್ತಿವೆ. ಅಂತಿಮವಾಗಿ ಸರಕಾರ ಹೆಸರನ್ನು ಫೈನಲ್ ಮಾಡಲಿದೆ. ಕೇಳಿ ಬರುತ್ತಿರುವ ಹೆಸರು ಗಳಲ್ಲಿ ನನ್ನದೇನೂ ಆಕ್ಷೇಪವಿಲ್ಲ. ಆದರೆ ಈ ಎಲ್ಲ ಹೆಸರುಗಳಿಗಿಂತಲೂ ಅತ್ಯಂತ ಹೆಚ್ಚು ಸೂಕ್ತವಾದ ಹೆಸರು ಗೇರುಸೊಪ್ಪೆಯನ್ನು ಆಳಿದ ಮಹಾರಾಣಿ ಕಾಳು ಮೆಣಸಿನ ರಾಣಿ ಚೆನ್ನ ಭೈರಾದೇವಿ ಹೆಸರಾಗಿದೆ.

ಶಿವಮೊಗ್ಗ ಜಿಲ್ಲೆಗೇರುಸೊಪ್ಪೆಗಾಗಿ ದಿಟ್ಟತನದಿಂದ ಹೋರಾಡಿ ತನ್ನ ಪ್ರಾಣವನ್ನು ಅರ್ಪಿಸಿದ ಧೀರ ವನಿತೆ ಚೆನ್ನ ಭೈರಾದೇವಿ. ಕ್ರಿ.ಶ. ೧೫೫೨ ರಿಂದ ೧೬೦೬ರ ನಡುವೆ ಪೋರ್ಚುಗೀಸರೊಡನೆ ಜೀವದ ಹಂಗು ತೊರೆದು ಹೋರಾಡಿ ತನ್ನ ಪ್ರಜೆಗಳ ಹಿತವನ್ನು ಕಾಯ್ದವಳು ಚೆನ್ನ ಭೈರಾದೇವಿ. ಅಲ್ಲಿ ನಾಡವರು ಮತ್ತು ಖಾರ್ವಿಗಳು ಅವ್ವರಸಿ ಎಂದು ಪೂಜಿಸುವ ರಾಣಿಯ ದೇವಸ್ಥಾನವಿದೆ. ಈಕೆಯನ್ನು ಪೋರ್ಚು ಗೀಸರು ರೈನಾದೆಪಿ ಮೆಂಟ್ ಎಂಬ ಬಿರುದಿನಿಂದ ಕರೆಯುತ್ತಿದ್ದರು. ಈಕೆಗೆ ನಗಿರೆಯರಾಣಿ ಎಂದಲೂ ಕರೆಯುತ್ತಿದ್ದರು.

ಈಕೆಯ ರಾಜ್ಯಾಡಳಿತ ಕರಾವಳಿಯಿಂದ ಹಿಡಿದು ಶಿವಮೊಗ್ಗ ಜಿಲ್ಲೆ ಹಲವು ಪ್ರದೇಶಗ ಳವರೆಗೆ ಹಬ್ಬಿತ್ತು. ಈಕೆ ಸರ್ವಧರ್ಮ ಸಮನ್ವಯತೆಯ ಹರಿಕಾರಳಾಗಿದ್ದಳು. ಪೋರ್ಚುಗೀಸರ ಮತಾಂತರಕ್ಕೆ ಹೆದರಿ ಇವಳ ರಾಜ್ಯಕ್ಕೆ ಆಶ್ರಯ ಕೋರಿ ಬಂದ ಬ್ರಾಹ್ಮಣರು ಮತ್ತು ಕೊಂಕಣಿಗಳಿಗೆ ಆಶ್ರಯ ಕಲ್ಪಿಸಿ ಅವರಿಗೆ ಅಭಯದ ರಕ್ಷಣೆ ನೀಡಿದಳು. ಈಕೆ ಮೂಲತಃ ಜೈನಳಾದರೂ ಹಿಂದೂ ಧರ್ಮದ ಉನ್ನತಿಗೆ ತನ್ನದೇ ಆದ ಅಪೂರ್ವ ಕೊಡುಗೆ ನೀಡಿದ್ದಾಳೆ.

ಶೈವ, ವೈಷ್ಣವ , ಶಕ್ತಿ ದೇಗುಲಗಳನ್ನು ನಿರ್ಮಾಣ ಹಾಗೂ ಜೀರ್ಣೋದ್ಧಾರಕ್ಕೂ ಕಾರಣೀಭೂತಳಾದಳು. ದಕ್ಷ , ಸ್ವಚ್ಛ ಆಡಳಿತವನ್ನು
ನಡೆಸಿ ಜನಾನುರಾಗಿಯಾಗಿದ್ದಳು. ಸರ್ವಧರ್ಮಗಳನ್ನು ಏಕ ಪ್ರಕಾರವಾಗಿ ಪ್ರೀತಿಸಿ ರಾಜನಿಷ್ಠೆಯಿಂದ ಕಂಡವಳು. ಈಗಿನ ರಾಜಕಾರಣಿ ಗಳು ಭೈರಾದೇವಿಯ ನಡೆಯನ್ನು ಅನುಕರಣೆ ಮಾಡಲು ಯೋಗ್ಯವಾಗಿರುವ ಅಂಶಗಳು ಹೇರಳವಾಗಿವೆ. ಅಮೆರಿಕದ ಟೆಕ್ಸಾಸ್ ಯೂನಿವರ್ಸಿಟಿಯಲ್ಲಿ ಆಂಗ್ಲ ಭಾಷಾ ಪ್ರಾಧ್ಯಾಪಕಿ ಮತ್ತು ದಕ್ಷಿಣ ಏಷ್ಯಾ ಇನ್ಸ್ಟಿಟ್ಯೂಟಿನಲ್ಲಿ ತೌಲನಿಕ ಸಾಹಿತ್ಯ ಮುಖ್ಯಸ್ಥೆ ಯಾಗಿರುವ ಡಾ. ಹನ್ನಾಚಾಪೆ ವೋಜಿಹೋಸ್ಕ ಅವರು ತಮ್ಮ ಪ್ರಬಂಧದಲ್ಲಿ- ‘ಚೆನ್ನ ಭೈರಾದೇವಿಯು ಇಂಗ್ಲೆಂಡಿನ ರಾಣಿ ಎಲಿಜಬೆತ್ತಳ ಸಮಕಾಲೀನಳು ಮತ್ತು ಅನೇಕ ವಿಷಯಗಳಲ್ಲಿ ಅವಳಿಗೆ ಮಿಗಿಲಾಗಿದ್ದವಳು. ಚೆನ್ನ ಭೈರಾದೇವಿಯು ತನಗೆ ಎದುರಾದ ಅನೇಕ ಬಗೆಯ ವೈರುಧ್ಯಗಳನ್ನು ಚಾಣಾಕ್ಷ ಮೈತ್ರಿಗಳ ಮೂಲಕ ದಿಟ್ಟತನದಿಂದ ನಿಭಾಯಿಸುತ್ತ ತನ್ನ ರಾಜಕೀಯ, ಸಾಂಸ್ಕೃತಿಕ ಮತ್ತು ಆರ್ಥಿಕ ಮೇಲುಗೈಯನ್ನು ಬಿಟ್ಟುಕೊಡದೆ ಐವತ್ತು ವರ್ಷಗಳಿಗೂ ಹೆಚ್ಚು ಕಾಲ ತನ್ನ ರಾಜ್ಯವನ್ನು ಗಟ್ಟಿಯಾಗಿ ಹಿಡಿದಿಟ್ಟುಕೊಂಡು ಸಮರ್ಥವಾಗಿ ಆಳುವಲ್ಲಿ ಯಶಸ್ವಿ ಯಾಗಿದ್ದಳು’ ಎಂದು ಬರೆದಿದ್ದಾರೆ.

ಇಂತಹ ಅಮೋಘ ಅಚಲ ರಾಣಿಯ ಹೆಸರು ಚಿರಸ್ಥಾಯಿಯಾಗಬೇಕಾದರೆ ಆಕೆಯ ಹೆಸರು ವಿಮಾನ ನಿಲ್ದಾಣಕ್ಕೆ ಇಡಲೇಬೇಕು. ಈಕೆಯ ದೇಶ ಪ್ರೇಮ, ಪ್ರಜಾ ಪ್ರೇಮ, ರೈತ ಪ್ರೇಮ ಬಹುಶಃ ಈಗಿನ ರಾಜಕಾರಣಿಗಳಿಗೆ ಮಾರ್ಗಸೂಚಿಯಾಗಬೇಕು. ರಾಣಿ ಅಬ್ಬಕ್ಕಳಂತೆ ಈಕೆಯೂ ತನ್ನ ರಾಜ್ಯವನ್ನು ರಕ್ಷಿಸಲು ಪೋರ್ಚುಗೀಸರೊಡನೆ ಹೋರಾಡಿ ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿದ್ದಾಳೆ.

ತನ್ನವರದೇ ಮೋಸದಿಂದ ಪೋರ್ಚುಗೀಸರ ಸೆರೆಯಾದಳು. ಕಾಳುಮೆಣಸಿನ ರಾಣಿ ಎಂಬ ಬಿರುದಾಂಕಿತೆಯಾದ ರಾಣಿ ಚೆನ್ನ ಭೈರಾದೇವಿ ವಿಮಾನ ನಿಲ್ದಾಣ ಎಂಬ ಹೆಸರು ಅತ್ಯಂತ ಸೂಕ್ತವಾದದ್ದು ಎಂದು ನನ್ನ ಅನಿಸಿಕೆಯಾಗಿದೆ. ಹಾಗೆಯೇ ಶಿವಮೊಗ್ಗದ ಬಹುತೇಕ ಜನರ ಅಭಿಪ್ರಾಯವೂ ಆಗಿದೆ. ಬಹುಶಃ ಈ ಹೆಸರು ಯಾರದೇ ವಿರೋಧವಿರದ ಸರ್ವತ್ರ ಒಪ್ಪಿಗೆಯ ಹೆಸರಾಗಿದೆ.

ಕರ್ನಾಟಕ ಸರಕಾರ ಈ ಕೂಡಲೇ ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ರಾಣಿ ಚೆನ್ನ ಭೈರಾದೇವಿಯ ಹೆಸರನ್ನು ಅಂತಿಮಗೊಳಿಸಿ ಕೇಂದ್ರಕ್ಕೆ ಶಿಫಾರಸು ಮಾಡುವ ಮೂಲಕ ತನ್ನ ಪ್ರೌಢಿಮೆಯನ್ನು ಪ್ರದರ್ಶಿಸಬೇಕು. ಅತ್ಯಂತ ಸೂಕ್ತವಾದ ಕ್ರಮವನ್ನು ಕೈಗೊಂಡು ಭಾರತದ ಚರಿತ್ರೆಯ ರಾಣಿಯ ಹೆಸರು ಚಿರಸ್ಥಾಯಿಯಾಗಿಸಿ ಸರಕಾರವು ರಾಣಿ ಚೆನ್ನ ಭೈರಾದೇವಿಗೆ ಸೂಕ್ತ ಗೌರವ ಸಲ್ಲಿಸಿ ತನ್ನ ಜನಪರ ಕಾಳಜಿಯನ್ನು ವ್ಯಕ್ತಪಡಿಸಬೇಕಾಗಿ ಮನವಿ ಮಾಡುತ್ತೇನೆ.