Saturday, 26th October 2024

ಲಾಕ್ ಡೌನ್ನಿಂದ ಬೇಸತ್ತಿದ್ದ‌ ಪೊಲೀಸರಿಗೆ ಕೊಂಚ ಬಿಡುವು

ಬೆಂಗಳೂರು :

ಕರೋನ ಲಾಕ್ ಡೌನ್ ನಿಂದಾಗಿ ಹಗಲಿರುಳು ಕೆಲಸ ಮಾಡುತ್ತಿದ್ದ ಬೆಂಗಳೂರು ನಗರ ಪೊಲೀಸ್ ಸಿಬ್ಬಂದಿಗಳಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಬಿಗ್ ರಿಲೀಫ್ ನೀಡಿದ್ದಾರೆ.

ಹಲವು ದಿನಗಳಿಂದ ಹಗಲಿರುಳೆನ್ನದೆ ಜನರ ಹಿತಕ್ಕಾಗಿ ನಿರಂತರ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗಳ ಆರೋಗ್ಯದ ದೃಷ್ಠಿಯಿಂದ ಪ್ರತಿ ನಗರ ಠಾಣೆಯ ಮೂರನೇ ಒಂದು ಭಾಗ ಸಿಬ್ಬಂದಿಗಳಿಗೆ ಒಂದು ವಾರದ ರಜೆ ನೀಡಲು ನಗರ ಪೊಲೀಸ್ ಆಯುಕ್ತರು ಸೂಚಿಸಿದ್ದಾರೆ. ರಜೆ ಇಂದಿನಿಂದ ಅನ್ವಯವಾಗುವಂತೆ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಪ್ರತಿ ಠಾಣೆಯ ಶೇ.33 ಸಿಬ್ಬಂದಿಗಳಿಗೆ ಒಂದು ವಾರ ರಜೆಗೆ ಅನುಮತಿಸಿದ್ದು, ಸಬ್ ಇನ್ಸ್ ಪೆಕ್ಟರ್ ರ್ಯಾಂಕ್ ವರೆಗೂ ರಜೆ ನೀಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ.

ಸೋಂಕಿತರು, ಶಂಕಿತರು ಸೇರಿದಂತೆ ಸೂಕ್ಷ್ಮ ಪ್ರದೇಶಗಳಲ್ಲಿ ನಿಯೋಜನೆ ಗೊಳ್ಳುವ ಸಿಬ್ಬಂದಿಗಳ ಆರೋಗ್ಯದ ಹಿತ ದೃಷ್ಠಿಯಿಂದ ಸಿಬ್ಬಂದಿಗಳ ರಜೆಯೂ ಕೂಡ ರೊಟೇಶನ್ ಆಗಲಿದ್ದು, ಒಂದು ವಾರದ ಬಳಿಕ ರಜೆ ಇದ್ದ ಸಿಬ್ಬಂದಿಗಳು ಪುನಃ ಕರ್ತವ್ಯಕ್ಕೆ ಹಾಜರಾಗಬೇಕಾಗಿದೆ. ಜೊತೆಗೆ ವಾರದ ರಜೆಯಲ್ಲಿದ್ದವರು ಯಾವುದೇ ಕಾರಣಕ್ಕೂ ನಗರ ಬಿಟ್ಟು ಹೊರ ಹೋಗಬಾರದು ಎಂಬ ಕಟ್ಟುನಿಟ್ಟಿನ ಸೂಚನೆಯನ್ನೂ ಸಹ ನೀಡಲಾಗಿದೆ.