ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
1336hampiexpress1509@gmail.com
ಅದು ಅಕ್ಷರಶಃ ಅಭೂತವೂರ್ವ ಯಶಸ್ಸು . ಭಾರತೀಯ ಚಿತ್ರರಂಗದ ಒಂದು ದಾಖಲೆ. ಇಂಥ ಸಾಧನೆಯನ್ನು ಇಡೀ ಚಿತ್ರರಂಗ ಸಂಭ್ರಮಿಸಬೇಕಾದ ಸಮಯವಿದು. ಖುದ್ದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸಾರಥ್ಯ ವಹಿಸಿ ಒಂದು ವೇದಿಕೆ ಸಿದ್ಧಪಡಿಸಿ ಚಿತ್ರರಂಗದ ಎಲ್ಲಾ ಗಣ್ಯರನ್ನು ಆಹ್ವಾನಿಸಿ ಕೆಜಿಎಫ್ ತಂಡಕ್ಕೆ ಸನ್ಮಾನಿಸಿ ಸಂಭ್ರಮಿಸ ಬೇಕಾದ ಕಾಲವೀಗ ಕೂಡಿಬಂದಿದೆ.
ಅಧೀರನನ್ನು ರಾಕಿ ಕೊಲ್ಲುತ್ತಾನೆ. ಪತ್ರಕರ್ತೆ ದೀಪಾ ಹೆಗಡೆ ವಿಜಯೇಂದ್ರ ಇಂಗಳಗಿಯನ್ನು ಪ್ರಶ್ನಿಸುತ್ತಾಳೆ ‘ನಿಮ್ಮ ಹೀರೋ ಮುಂದೇನು ಮಾಡುತ್ತಾನೆ’. ರಾಕಿಯ ತಾಯಿ ತನ್ನ ಮಗನಿಗೆ ‘ನೀನು ಅಷ್ಟೊಂದು ಚಿನ್ನ ತುಂಬಿಕೊಂಡು ಬಂದರೆ ಶ್ರೀಮಂತ ನಾಗೋದಿಲ್ಲ.
ಆದರೆ ಎಷ್ಟು ಜನರನ್ನು ನೀನು ಸಂಪಾದಿಸುತ್ತಿಯೋ ಅಷ್ಟು ಶ್ರೀಮಂತನಾಗುತ್ತೀಯ’ ಎನ್ನುತ್ತಾಳೆ. ರಾಕಿ ತನ್ನ ಹೆಂಡತಿಯನ್ನು ಸಮಾಧಿ ಮಾಡಿದ ನಂತರ ಕೆಜಿಎಫ್ ನಾಗರಿಕರು ‘ರಾಕಿ, ನಾವೆಲ್ಲರೂ ನಿನ್ನೊಂದಿಗೆ ಚಿನ್ನ ತೆಗೆಯುತ್ತೇವೆ. ಆದರೆ ನಾವು ಅದರಿಂದ ಶ್ರೀಮಂತರಾಗುವುದಿಲ್ಲ. ಆದರೆ ನಮ್ಮ ಮಧ್ಯೆಯಲ್ಲಿ ನೀನೊಬ್ಬನಿದ್ದರೆ ನಮ್ಮಂಥ ಶ್ರೀಮಂತರಾರೂ ಇಲ್ಲ, ನೀನು ಹುಟ್ಟಿ ನಿನ್ನ ಅಮ್ಮನಿಗೆ ಅಮ್ಮನ ಸ್ಥಾನ ಕೊಟ್ಟೆ. ಆದರೆ ನಿನ್ನ ಚಿನ್ನದ ಹೋರಾಟದಿಂದ ನಿನ್ನ ಹೆಂಡತಿ ಅಮ್ಮನೂ ಆಗಲಿಲ್ಲ ಆಕೆಗೆ ಮಗನೂ ಹುಟ್ಟಲಿಲ್ಲ. ಆದ್ದರಿಂದ ಇಲ್ಲಿಗೆ ಈ ಹೋರಾಟ ನಿಲ್ಲಿಸಿಬಿಡು’ ಎಂದು ತಿಳಿಹೇಳುತ್ತಾರೆ.
ಅಲ್ಲಿಂದ ಹೊರಟ ರಾಕಿ ನೇರವಾಗಿ ಪಾರ್ಲಿಮೆಂಟಿನೊಳಗೆ ಬರುತ್ತಾನೆ. ಪ್ರಧಾನ ಮಂತ್ರಿಯ ಮುಂದೆ ಕುಳಿತು, ‘ಇನ್ನು ಈ ಕೆಜಿಎಫ್ ದುನಿಯಾಗೆ ಯಾವನೂ ಅಧಿಪತಿಯಲ್ಲ , ದುಷ್ಮನಿಯೂ ಇಲ್ಲ. ಕೆಜಿಎಫ್ ಚಿನ್ನದ ಗಣಿ ಯಾರಪ್ಪನ ಸ್ವತ್ತಲ್ಲ. ಇದು ನಮ್ಮ ದೇಶದ ಸ್ವತ್ತು. ಕೆಜಿಎಫ್ ಮೇಲೆ ಘೋಷಿಸಿರುವ ಸೈನಿಕರ ಕಾರ್ಯಾಚರಣೆಯನ್ನ ನಿಲ್ಲಿಸಿ, ಇನ್ನು ಮುಂದೆ ಸರಕಾರ ಸರಿಯಾದ ದಾರಿಯಲ್ಲಿ ಈ ಗಣಿಯನ್ನು ನಿರ್ವಹಿಸಿ ನಮ್ಮ ಕನ್ನಡನಾಡು ಚಿನ್ನದಬೀಡೆಂಬ ಮಾತಿಗೆ ಶಾಶ್ವತ ಅರ್ಥ ಕಲ್ಪಿಸು ವಂತೆ ಕೆಲಸ ಮಾಡಿ.
ನನ್ನ ಜನರನ್ನು ನಾನು ನೋಡ್ಕೋತೀನಿ’ ಎಂದು ಹೊರಡುತ್ತಾನೆ. ಪ್ರಧಾನ ಮಂತ್ರಿ ರಮಿಕಾಸೇನ್ ‘ಸ್ಯೂರ್, ಕೆಜಿಎಫ್ ಮತ್ತು ಆ ಊರಿನ ಜನ ನಮ್ಮ ದೇಶದ ಸಂಪತ್ತು. ಅದನ್ನೆ ಸುಧಾರಿಸುವುದು ನಮ್ಮ ಆದ್ಯ ಕರ್ತವ್ಯ’ ಎಂದು ಭರವಸೆ ಕೊಡುತ್ತಾಳೆ. ರಾಕಿ ತನ್ನ ತಾಯಿಯ ಸಮಾಧಿ ಬಳಿ ಬಂದು ನಿಲ್ಲುತ್ತಾನೆ. ಆತನ ತಂದೆ ಸಮಾಧಿ ಕಾಯುತ್ತಿರುತ್ತಾನೆ. ಜನರು ಸುತ್ತಲೂ ಸುತ್ತುವರೆ ದಿರುತ್ತಾರೆ. ಪೊಲೀಸ್ ಜೀಪ್ ಬಂದು ನಿಲ್ಲುತ್ತದೆ. ರಾಕಿ ಅವರತ್ತ ನಡೆದು ಹೋಗುತ್ತಾನೆ.
ಇಂಥದೊಂದು ಕ್ಲೈಮ್ಯಾಕ್ಸನ್ನು ಸೃಷ್ಟಿಸಿದ್ದರೆ ಚಿತ್ರದ ನಾಯಕ ನೈತಿಕವಾಗಿ ಗೆಲ್ಲುತ್ತಿದ್ದ ಜತೆಗೆ ಸಮಾಜಕ್ಕೂ ಒಂದು ಸಂದೇಶ ರವಾನೆಯಾಗುತಿತ್ತು. ಚಿತ್ರಕ್ಕೆ ತಾರ್ಕಿಕವಾಗಿ ತೂಕ ಹೆಚ್ಚುತಿತ್ತು. ಆಗ ನೋಡುಗರಿಗೆ ಖುಷಿಯೊಂದಿಗೆ ಹೆಮ್ಮೆ ಯೆನಿಸುತಿತ್ತು. ಮೊದಲ ಭಾಗದ ಹಂತ್ಯದಲ್ಲಿ ನನಗೆ ಜನರೇ ಮುಖ್ಯ ಎಂಬ ಸಂದೇಶ ನೀಡುವ ನಾಯಕ ಎರಡನೇ ಭಾಗದ ಅಂತ್ಯದಲ್ಲಿ ಜನರನ್ನೆಲ್ಲ ತೊರೆದು ಸ್ವಾರ್ಥಿಯಂತೆ ಅಷ್ಟೊಂದು ಬಂಗಾರವನ್ನು ಒಬ್ಬನೇ ತುಂಬಿಕೊಂಡು ಕಂಠಪೂರ್ತಿ ಕುಡಿದು ಸಾಯು ವಂತೆ ಚಿತ್ರಿಸಲಾಗಿದೆ(ಭಾಗ ೩ಕ್ಕೆ ಚಿತ್ರಕಥೆ ಯೋಜನೆ ಇದ್ದರೆ ಅಪ್ರಸ್ತುತ).
ಜತೆಗೆ ಸ್ವಾಭಿಮಾನದ ಪರಿಧಿಯಲ್ಲಿರಬೇಕಾದ ಅಹಂ, ಪೊಗರು ಮಿತಿಮೀರಿದಂತೆ ವರ್ತಿಸುವ ರಾಕಿಯ ಪಾತ್ರವು ತಾರ್ಕಿಕ ಅಂತ್ಯ ಕಾಣದಂತ್ತಾಗಿರುವುದು ನಿರಾಸೆ ಮೂಡಿಸುತ್ತದೆ. ಆದರೆ ಚಿತ್ರದ ಮೇಕಿಂಗ್, ಕಲಾ ನಿರ್ದೇಶನ, ಛಾಯಾಗ್ರಹಣ, ಸಂಕಲನ,
ಹಿನ್ನೆಲೆ ಸಂಗೀತ ಇವೆಲ್ಲವೂ ಚಿತ್ರದ ಕಥೆಯನ್ನು ಅವಲೋಕನ ಮಾಡುವುದನ್ನು ಮರೆಸಿಬಿಡುತ್ತದೆ. ಇರಲಿ, ಎಷ್ಟೇ ಆದರೂ ಕೆಜಿಎಫ್ ನಮ್ಮ ಕನ್ನಡ ಚಿತ್ರ. ಅದು ಮಾಡುತ್ತಿರುವ ಮೋಡಿಗೆ ಕನ್ನಡಿಗರು ಹೆಮ್ಮ ಪಡಲೇಬೇಕು.
ಹೆತ್ತ ತಾಯಿಗೆ ಮಗನ ಗೆಲುವು ಎಷ್ಟು ಮಖ್ಯವೋ ಕನ್ನಡ ಪ್ರೇಕ್ಷಕರಿಗೆ ಹೆತ್ತ ಮಗುವಿನಂತೆ ಲೋಪದೋಷಗಳಿದ್ದರೂ ಬಿಟ್ಟು ಕೊಡಬಾರದು ಆದರೆ ತಿದ್ದಬೇಕು! ವರನಟ ರಾಜಣ್ಣನವರ ತಲೆಮಾರಿನ ಚಿತ್ರಗಳಲ್ಲಿ ಸಾಮಾಜಿಕ ಕಳಕಳಿ ಬದ್ಧತೆ, ಸ್ವಚ್ಛಂದತೆ, ಸಾಂಸ್ಕೃತಿಕತೆ, ನಾಗರಿಕತೆ ಪರಿಶುದ್ಧ ಮನರಂಜನೆಯ ಚಿತ್ರಗಳು ಅನೇಕ ಸಾಮಾಜಿಕ ಬದಲಾವಣೆಗಳಿಗೆ ಕಾರಣ ಮತ್ತು ಪ್ರೇರಣೆ ಯಾಗಿದ್ದವು.
ಕಳೆದ ಒಂದು ದಶಕದಿಂದಾಚೆ ಕನ್ನಡ ಚಲನಚಿತ್ರಗಳು ಬಿಡುಗಡೆಗೊಂಡರೆ ನಿರ್ಮಾಪಕ, ನಿರ್ದೇಶಕ, ವಿತರಕರ ಮತ್ತು ನಟನಟಿಯರಿಗೆ ಒಂದು ಅಗ್ನಿಪರೀಕ್ಷೆ ಎದುರಾಗುತಿತ್ತು. ಅದೆಂದರೆ ಶನಿವಾರ ಮತ್ತು ಭಾನುವಾರ ಪತ್ರಿಕೆಗಳಲ್ಲಿ ಆ ಚಿತ್ರದ ವಿಮರ್ಶೆಗಳಾಗುತ್ತಿದ್ದವು. ಆ ವಿಮರ್ಶೆಗಳು ಎಷ್ಟು ವಸ್ತುನಿಷ್ಠವಾಗಿರುತ್ತಿತ್ತೆಂದರೆ ಅದೆಂಥಾ ಮಹಾನಿರ್ದೇಶಕ ದೊಡ್ಡನಟ ರಾದರೂ ಆ ಚಿತ್ರಗಳಲ್ಲಿನ ದೋಷ ಸರಿತಪ್ಪುಗಳನ್ನು ಮುಲಾಜಿಲ್ಲದೆ ಮಥನ ಮಾಡಿಬಿಡುವಂಥ ಪ್ರಚಂಡ ಸಿನೆಮಾ ಪತ್ರಕರ್ತ ರಿರುತ್ತಿದ್ದರು. ಸಿನೆಮಾಗಳೇ ನಾದರೂ ಸಾಮಾಜಿಕತೆಯ ವಿರುದ್ಧವಾಗಿದ್ದರೆ ಕೂಡಲೇ ಅದನ್ನು ಸರಿ ದಾರಿಗೆ ತರುವಂತೆ ಕಿವಿ ಹಿಂಡುತ್ತಿದ್ದರು.
ಹೀಗಾಗಿ ವೈ.ವಿ.ರಾವ್ ಅವರಿಂದ ಹಿಡಿದು ದೊರೈಭಗವಾನ್‌ರವರೆಗೂ ಪ್ರತಿಯೊಂದು ಚಿತ್ರವನ್ನೂ ಸಾಮಾಜಿಕ ಬದ್ಧತೆ ಗಳಿಂದಲೇ ನಿರ್ದೇಶಿಸಿ ಅಪ್ಪಟ ಸಸ್ಯಾಹಾರದಂಥ ಬಾಳೆ ಎಲೆ ಊಟದಂಥ ಚಿತ್ರಗಳನ್ನು ಬಡಿಸುತ್ತಿದ್ದರು. ಈಗಿನಂತೆ ಆಗೆ ರಕ್ಕಸ ನಾನ್‌ವೆಜ್ ಚಿತ್ರಗಳು ನಿರ್ಮಾಣವಾಗುತ್ತಿರಲಿಲ್ಲ. ಜತೆಗೆ ಕನ್ನಡ ಪ್ರೇಕ್ಷಕ ತಮಿಳರಂತೆ ಅಂಧಾಭಿಮಾನಿ, ಮೂಢನಲ್ಲ. ಆತ ಪ್ರಬುದ್ಧ ಪ್ರೇಕ್ಷಕ.
ಒಂದು ಚಿತ್ರವನ್ನು ನೋಡಬೇಕೆಂದರೆ ಪತ್ರಿಕೆಗಳ ವಿಮರ್ಶೆಗಳನ್ನು ಓದುತ್ತಿದ್ದ. ಆದರೀಗ ಕಾಲ ಬದಲಾಗಿದೆ. ಕನ್ನಡ ಚಿತ್ರರಂಗ
ಪರಭಾಷಾ ಚಿತ್ರಗಳ ಹೊಡೆತದಿಂದಾಗಿ ಬಡವಾಗಿದೆ. ಇಂದಿನ ಇಂಟರ್ನೆಟ್ ಯುಗದಲ್ಲಿ ಮೊಬೈಲ್, ಪೈರಸಿ ದಂಧೆಗಳಿಂದ ಮತ್ತು ಅಡ್ಡಕಸುಬಿಗಳು, ರಾಜಕೀಯ ದುರುದ್ದೇಶಗಳಿಗಾಗಿ ಬರುವ ರೆಡಿಮೇಡ್ ದಿಢೀರ್ ಸ್ಟಾರ್‌ಗಳು, ಶ್ರೀಮಂತ ಉದ್ಯಮಿಗಳ ಪ್ರಚಾರದ ತಿಕ್ಕಲುತನ, ಅಯೋಗ್ಯರ, ಹುಚ್ಚರುಗಳ ವಿಕೃತ ತೆವಲುಗಳಿಂದ ಮತ್ತು ಕರೋನಾ ಹೊಡೆತದಿಂದಾಗಿ ಕನ್ನಡ
ಚಿತ್ರ ರಂಗ ಬಹುಪಾಲು ಪ್ರೇಕ್ಷಕರನ್ನು ಕಳೆದುಕೊಂಡಿತು.
ಹೀಗಾಗಿ ಕನ್ನಡ ಚಿತ್ರೋದ್ಯಮದ ಮೇಲೆ ಪತ್ರಿಕೋದ್ಯಮಕ್ಕೆ ಸಹಾನುಭೂತಿ ಹುಟ್ಟಿ ಕನ್ನಡ ಚಿತ್ರಗಳ ಗುಣಮಟ್ಟವನ್ನು ಪ್ರಶ್ನಿಸು ವುದನ್ನೇ ಕೈಬಿಡಲಾಯಿತು. ಹೀಗಾಗಿ ವಿಮರ್ಶೆಗಳು ನಿಂತುಹೋದವು. ಪ್ರಾಮಾಣಿಕ ಪತ್ರಿಕೆಗಳಿಗೆ ಚಿತ್ರರಂಗದ ಜಾಹೀರಾತುಗಳು ಅಗತ್ಯವಾಗಿರಬಹುದು. ಆದರೆ ಸಾಮಾಜಿಕ ಬದ್ಧತೆಗಳನ್ನು ಮೀರಿ ಪ್ರೇಕ್ಷಕರ ಅಭಿರುಚಿಯನ್ನು ಹಾಳು ಮಾಡು ವಂಥ ಚಿತ್ರಗಳು ಹೆಚ್ಚಾದಾಗ ಚಾಟಿ ಬೀಸಲೇ ಬೇಕಲ್ಲವೇ? ಒಂದು ಕಾಲದಲ್ಲಿ ಪರಭಾಷೆ ಚಿತ್ರಗಳಿಂದಾಗಿ ನಮ್ಮ ಕನ್ನಡ ಚಿತ್ರಕ್ಕೇ ಚಿತ್ರಮಂದಿರ ಗಳು ಸಿಗದೆ ಹೋರಾಟ ಮಾಡಬೇಕಾಗಿತ್ತು. ಆದರೆ ಇಂದು ಕೆಜಿಎಫ್ ಚಿತ್ರ ಬೇರೆ ಭಾಷೆಗಳ ಚಿತ್ರಕ್ಕೆ ಆಯಾ ರಾಜ್ಯಗಳ ಥಿಯೇಟರ್ ಸಿಗದಂತೆ ಡೈನಾಸರಸ್ ನಂತೆ ಮನ್ನುಗ್ಗುತ್ತಿರುವುದನ್ನು ನೋಡುತ್ತಿದ್ದರೆ ಕನ್ನಡ ಪ್ರೇಕ್ಷಕ ಹೆಮ್ಮೆ ಪಡುವಂಥ ಚಿತ್ರ ಮಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಅವರ ತಂಡವನ್ನು ಅಭಿನಂದಿಸಲೇ ಬೇಕು.
ಯೋಗ್ಯ ನಿರ್ದೇಶಕ ಚಿತ್ರದ ಪ್ರತಿಯೊಂದು ಪಾತ್ರವನ್ನು ಸೃಷ್ಟಿಸಿ ಆ ಎಲ್ಲಾ ಪಾತ್ರಗಳಿಗೂ ವ್ಯಕ್ತಿತ್ವವನ್ನು ರೂಪಿಸುತ್ತಾನೆ.
ಹಾಗೆಯೇ ಕೆಜಿಎಫ್ ೨ರಲ್ಲಿ ಪ್ರಶಾಂತ್ ನೀಲ್ ಹೇಳಿಕೊಂಡಂತೆ ತಮ್ಮದೇ ಆದ ಮೂಡು ಹ್ಯಾಂಗೋವರ್‌ನಲ್ಲಿ ಚಿತ್ರಕಥೆ ಮಾಡಿ ದ್ದಾರೆ. ಇದರ ಪ್ರತಿಫಲವಾಗಿ ನಾಯಕ ರಾಕಿಯ ಪಾತ್ರಕ್ಕೆ ಅಗತ್ಯಕ್ಕಿಂತ ಹೆಚ್ಚಾದ ಪೊಗರು, ಶೋಕಿ, ಸ್ವವೈಭವೀಕರಣ, ದರ್ಪ ಅತಿಯಾಗಿ ಖಳನಾಯಕರೊಂದಿಗೆ ಪ್ರಧಾನಿಯನ್ನೂ ಒಂದೇ ರೀತಿಯಲ್ಲಿ ದ್ವೇಷಿಸುವಷ್ಟು ಉತ್ಪ್ರೇಕ್ಷಿತ ಅತಿಶಯ ಗುಣವನ್ನು ತುಂಬಿಸಿದ್ದಾರೆ.
ಆದರೆ ರಾಕಿ ಕೊನೆಯಲ್ಲಿ ಪ್ರಬುದ್ಧನಾಗಿದ್ದರೆ ಚಿತ್ರದ ಕಥೆಗೆ ಸರಿಯಾದ ತಾರ್ಕಿಕತೆ ಸಿಗುತಿತ್ತು. ಇರಲಿ, ಪ್ರಶಾಂತ್ ನೀಲ್ ಅವರು ಮುಂದೆ ತಮ್ಮ ಹ್ಯಾಗೋವರ್‌ನಿಂದ ಹೊರಬಂದು ಇನ್ನಷ್ಟು ಕನ್ನಡ ಚಿತ್ರಗಳನ್ನು ಮಾಡಿ ಕನ್ನಡ ಚಿತ್ರರಂಗದ ಘನತೆಯನ್ನು ಹೆಚ್ಚಿಸಲಿ. ಇನ್ನು ಯಶ್ ಅವರ ಬಗ್ಗೆ ಹೇಳಬೇಕೆಂದರೆ ಆತ ನಿಜಕ್ಕೂ ಸಹೃದಯಿ. ಇಂಥ ಯಶಸ್ಸುಗಳಿಸುವ ಮೊದಲೇ ಕೆರೆಗ ಳನ್ನು ತುಂಬಿಸುವಂಥ ಸಾಮಾಜಿಕ ಕಳಕಳಿಯ ಕೆಲಸವನ್ನು ಮಾಡಿzರೆ. ಈಗ ಇಂಥ ನೂರು ಯಶಸ್ಸು ಗಳಿಸಿದರೂ ಯಶ್ ಮಾತ್ರ ಅಂಥ ಬದ್ಧತೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆಂಬ ವಿಶ್ವಾಸ ಕನ್ನಡಿಗರಿಗಿದೆ.
ಒಟ್ಟಿನಲ್ಲಿ ಯಶ್ ಹವಾ ಬರೀ ಕನ್ನಡದಲ್ಲಿ ಮಾತ್ರವಲ್ಲ ಇಡೀ ದೇಶದಡೆ ಹಬ್ಬುವಂಥ ಅಮೋಘ ಸಾಧನೆ ಮಾಡಿರುವುದು
ಕನ್ನಡಿಗರ ಹೆಮ್ಮೆ. ಆದರೆ ಚಿತ್ರರಂಗಕ್ಕೇನಾಗಿದೆ? ಕನ್ನಡ ನಾಡಿನಲ್ಲಿ ನಡೆಯುವ ಅನೇಕ ವಿದ್ಯಮಾನಗಳು ಆಗುಹೋಗುಗಳಿಗೆ ಸ್ಪಂದಿಸದೆ ತಟಸ್ಥರಾಗಿರುತ್ತಾರೆ. ನಾಡಿನ ಸಂಸ್ಕೃತಿ, ಭಾಷೆ, ನೆಲಜಲಕ್ಕೆ ಸಂಬಂಽಸಿದಂತೆ ಏನೆ ನಡೆದು ಹೋದರೂ ಕಲಾವಿದರಿಗೆ ಧರ್ಮ, ಜಾತಿ, ಭಾಷೆಗಳ ಭೇದವಿಲ್ಲ ಎಂಬ ಪುರಾತನ ಗುರಾಣಿಯನ್ನು ಬಳಸಿ (ರಾಜಣ್ಣನವರು ಕಾಲವಾದ ನಂತರ) ಮೌನ ವಾಗಿರುವುದೇ ಹೆಚ್ಚು.
ಅಂಬರೀಷ್ ಅವರ ಹಿರಿತನಕ್ಕೆ ಗೌರವಾರ್ಥವಾಗಿ ದರ್ಶನ್ ಮತ್ತು ಯಶ್ ಚುನಾವಣೆಯಲ್ಲಿ ಸುಮಲತಾ ಅವರ ಗೆಲುವಿಗೆ ಶ್ರಮಿಸಿದರು. ರಾಜಕೀಯ ಪಾದಯಾತ್ರೆಯಲ್ಲಿ ಕೆಲ ನಟನಟಿಯರು ಪಾಲ್ಗಗೊಂಡಿದ್ದರು. ಇವೆ ಹೋಗಲಿ, ಕೆಜಿಎಫ್ ಯಶಸ್ಸು
ಸಾಮಾನ್ಯವಲ್ಲ. ಅದು ಅಕ್ಷರಶಃ ಅಭೂತವೂರ್ವ ಯಶಸ್ಸು ಮತ್ತು ಭಾರತೀಯ ಚಿತ್ರರಂಗದ ಒಂದು ದಾಖಲೆ. ಇಂಥ ಸಾಧನೆಯನ್ನು ಇಡೀ ಚಿತ್ರರಂಗ ಸಂಭ್ರಮಿಸಬೇಕಾದ ಸಮಯವಿದು.
ಖುದ್ದು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸಾರಥ್ಯ ವಹಿಸಿ ಒಂದು ವೇದಿಕೆ ಸಿದ್ಧಪಡಿಸಿ ಚಿತ್ರರಂಗದ ಎಲ್ಲಾ ಗಣ್ಯರನ್ನು ಆಹ್ವಾನಿಸಿ ಕೆಜಿಎಫ್ ತಂಡಕ್ಕೆ ಸನ್ಮಾನಿಸಿ ಸಂಭ್ರಮಿಸಬೇಕಾದ ಕಾಲವೀಗ ಕೂಡಿಬಂದಿದೆ. ಆ ಮೂಲಕ ಇಡೀ ಕನ್ನಡ ಚಿತ್ರರಂಗದ ಒಗ್ಗಟ್ಟನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆ ಇದೆ. ಇಂಥ ಕಾರ್ಯ ನೆರವೇರಿಸುವುದರಿಂದ ಕನ್ನಡ ಪ್ರೇಕ್ಷಕರಿಗೆ ಒಂದೊಳ್ಳೆ ಸಂದೇಶವನ್ನು ನೀಡಿದಂತಾಗುತ್ತದೆ. ಕನ್ನಡ ಚಿತ್ರೋದ್ಯಮಕ್ಕೆ ಒಂದು ಹುರುಪು ಉತ್ಸಾಹ ತುಂಬಿ ದಂತಾಗುತ್ತದೆ.
ಕೆಜಿಎಫ್ ೨ ಚಿತ್ರವನ್ನು ಕನ್ನಡದ ನೋಡಿದ ರಜನಿಕಾಂತ್, ಚಿರಂಜೀವಿ, ಅಲ್ಲು ಅರ್ಜುನ್ ಮುಂತಾದ ಪರಭಾಷಾ ಕಲಾವಿದರೇ ಚಿತ್ರವನ್ನು ಪ್ರಶಂಸಿಸಿದ್ದಾರೆ. ಬಾಲಿವುಡ್‌ನ ದೇಶಗೇಡಿತನ, ದುರಹಂಕಾರಕ್ಕೆ ಸರಿಯಾದ ಪೆಟ್ಟುಕೊಟ್ಟ ದಕ್ಷಿಣದ ಕನ್ನಡ ಚಿತ್ರ ವೆಂದು ಸಂಭ್ರಮಿಸಿದ್ದಾರೆ. ನಾವುಗಳೂ ಅದಕ್ಕಿಂತ ದೊಡ್ಡ ಸಂಭ್ರಮವನ್ನು ಆಚರಿಸ ಬೇಕಲ್ಲವೇ? ರವಿಚಂದ್ರನ್, ಶಿವಣ್ಣ , ಸುದೀಪ್, ದರ್ಶನ್, ಉಪೇಂದ್ರ ಎಲ್ಲರನ್ನೂ ಆಹ್ವಾನಿಸಿ ಕನ್ನಡ ಚಿತ್ರರಂಗದ ಸೋದರತ್ವವನ್ನು ಪ್ರದರ್ಶಿಸಲಿ. ಇಂಥದನ್ನು ನೋಡುವ ಭಾಗ್ಯ ಕನ್ನಡ ಪ್ರೇಕ್ಷಕನಿಗಿಲ್ಲವೇ? ಅಂಥ ವೇದಿಕೆಯನ್ನು ವಾಣಿಜ್ಯ ಮಂಡಳಿಯಾಗಲಿ ಅಥವಾ ಖುದ್ದು ಶಿವಣ್ಣ ಅವರೇ ವಹಿಸಿಕೊಳ್ಳಲಿ.
ಏಕೆಂದರೆ ಕೆಜಿಎಫ್ ಎಂದರೆ ‘ಕರ್ನಾಟಕ ಗೋಲ್ಡನ್ ಫಿಲ್ಮ್’ ಅಲ್ಲವೇ?.