ವಿಶ್ವವಾಣೆ ಸುದ್ದಿಮನೆ
ಬೆಂಗಳೂರು:
ನಗರದ ಪಾದರಾಯನಪುರ ಮತ್ತು ಬಾಪೂಜಿ ನಗರ ವಾರ್ಡ್‌ನಲ್ಲಿ ಹೇರಲಾಗಿದ್ದ ಸೀಲ್ ಡೌನ್‌ನನ್ನು ಭಾನುವಾರ ಮತ್ತಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗಿದೆ.
ಈ ವಾರ್ಡ್‌ಗಳಲ್ಲಿ ವಿಧಿಸಿದ್ದ ಸೀಲ್ ಡೌನ್‌ನನ್ನು ಉಲ್ಲಂಘಿಸಿ, ಸಾರ್ವಜನಿಕರು ಎಲ್ಲೆಂದರಲ್ಲಿ ಓಡಾಡುತ್ತಿದ್ದಾರೆಂಬ ದೂರು ಬಂದ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆಯಿಂದಲೇ ಈ ವಾರ್ಡ್‌ಗಳಲ್ಲಿ ಜನರು ಓಡಾಡದಂತೆ ಪೊಲೀಸರು ಹಾಗೂ ಬಿಬಿಎಂಪಿ ಅಧಿಕಾರಿಗಳು ಕಠಿಣ ಕ್ರಮ ಕೈಗೊಂಡಿದ್ದಾರೆ.
ವಾರ್ಡ್‌ಗಳ ಎರಡು ಪ್ರವೇಶ ದ್ವಾರಗಳಲ್ಲಿ ಥರ್ಮಲ್ ಸ್ಯ್ಕಾನರ್ ಅನ್ನು ಇಡಲಾಗಿದ್ದು, ಅಲ್ಲಿಂದಲೇ ಪ್ರವೇಶ ಕಲ್ಪಿಸಲಾಗಿದ್ದರೂ ಜನರ ಅನಗತ್ಯ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಅಗತ್ಯ ವಸ್ತುಗಳ ಖರೀದಿಗಾಗಿ 12 ಅಂಗಡಿಗಳನ್ನು ತೆರೆಯಲಾಗಿದೆ. ತರಕಾರಿಗಳ ಮಾರಾಟಕ್ಕಾಗಿ 6 ರಿಂದ 8 ಕೈ ಗಾಡಿಗಳ ಸೇವೆ ಆರಂಭಿಸಲಾಗಿದೆ. ಹಾಲು, ಔಷಧ ಮತ್ತಿತರ ಅಗತ್ಯ ವಸ್ತುಗಳನ್ನು ಮನೆ, ಮನೆಗೆ ತಲುಪಿಸುವ ವ್ಯವಸ್ಥೆ ಕೂಡ ಕಲ್ಪಿಸುವ ಮೂಲಕ ಜನರ ಓಡಾಟ ನಿಯಂತ್ರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂಗಡಿ ಮತ್ತು ತರಕಾರಿ ಗಾಡಿಗಳಿಗೆ ಬೆಳಿಗ್ಗೆ 8 ರಿಂದ 10 ಮತ್ತು ಸಂಜೆ 6 ರಿಂದ 8 ಗಂಟೆಯವರೆಗೆ ಮಾತ್ರವೇ ಅವಕಾಶ ಕಲ್ಪಿಸಲಾಗಿದೆ. ಆ ಸಮಯದಲ್ಲಿ ಜನರು ತಮಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಬಹುದಾಗಿದೆ. ಉಳಿದ ಸಮಯದಲ್ಲಿ ಅವರು ಮನೆಯಿಂದ ಹೊರಬಾರದು ಎಂದು ಪೊಲೀಸರು ಮತ್ತು ಬಿಬಿಎಂಪಿ ಅಧಿಕಾರಿಗಳು ಮೈಕ್ ಮೂಲಕ ಜನರಿಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಶನಿವಾರ ಅನಗತ್ಯವಾಗಿ ಸೀಲ್ ಡೌನ್‌ನನ್ನು ಉಲ್ಲಂಘಿಸಿ ಓಡಾಡಿದ 300 ವಾಹನಗಳನ್ನು ಜೆಜೆ ನಗರ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಇದರಿಂದ ಬೆಚ್ಚಿ ಬಿದ್ದಿರುವ ಎರಡು ವಾರ್ಡ್‌ಗಳ ಜನರು ತಮ್ಮ ವಾಹನಗಳನ್ನು ಹೊರತೆಗೆಯುವ ಸಾಹಸಕ್ಕೆ ಕೈಹಾಕಿಲ್ಲ. ಈ ಮಧ್ಯೆ ವಾರ್ಡ್‌ಗಳ ಜನರು ನಮಗೆ ಹಾಲು, ತರಕಾರಿ ಏನು ಒದಗಿಸುತ್ತಿಲ್ಲ. ಜನರು ರಸ್ತೆಗಿಳಿದರೆ ಪೊಲೀಸರು ಬಂಧಿಸುತ್ತೇವೆ ಎಂದು ಹೆದರಿಸುತ್ತಿದ್ದಾರೆ ಎಂದು ನಾಗರಿಕರು ಆರೋಪಿಸಿದ್ದಾರೆ.