Saturday, 14th December 2024

ಫೇಸ್ ಬುಕ್ ನಲ್ಲಿ ಪ್ರೀತಿಸಿ ವಂಚನೆ

ವಿಶ್ವವಾಣಿ ಸುದ್ದಿಮನೆ

ಬೆಂಗಳೂರು:

ಫೇಸ್‌ಬುಕ್‌ ಖಾತೆ ತೆರೆದಿದ್ದ ಅಪ್ರಾಪ್ತೆಯನ್ನು ಪರಿಚಯಿಸಿಕೊಂಡ ಯುವಕನೊಬ್ಬ ಪ್ರೀತಿಸುವ ಸೋಗಿನಲ್ಲಿ ಹಂತಹಂತವಾಗಿ 500 ಗ್ರಾಂ ಚಿನ್ನಾಭರಣ, 57 ಸಾವಿರ ರು. ನಗದು ಪಡೆದುಕೊಂಡಿದ್ದಲ್ಲದೇ ಅತ್ಯಾಚಾರ ಎಸಗಿ ಬೆದರಿಕೆ ಹಾಕಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ.

ಈ ಕುರಿತು ಅಪ್ರಾಪ್ತೆಯ ಪಾಲಕರು ಕೊಟ್ಟ ದೂರಿನ ಅನ್ವಯ ಅಭಿಷೇಕ್ ಗೌಡ ಎಂಬಾತನ ವಿರುದ್ಧ ಪೋಕ್ಸೋ ಕಾಯಿದೆಯಡಿ ನಂದಿನಿಲೇಔಟ್ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಏನಿದು ಪ್ರಕರಣ? ರಾಜಾಜಿನಗರದ 2ನೇ ಹಂತದ ನಿವಾಸಿ ದಂಪತಿಯ 17 ವರ್ಷದ ಪುತ್ರಿ, ಖಾಸಗಿ ಶಾಲೆಯೊಂದರಲ್ಲಿ 10ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾಳೆ. ಪ್ರಾಜೆಕ್ಟ್ ವರ್ಕ್ ಮಾಡಲು ಅನುಕೂಲವಾಗಲೆಂದು 2019ರಲ್ಲಿ ಸ್ಮಾರ್ಟ್ ಫೋನ್ ಕೊಡಿಸಿದ್ದರು. ಆಕೆ ಫೇಸ್‌ಬುಕ್‌ನಲ್ಲಿ ಖಾತೆ ತೆರೆದಿದ್ದು, ಈ ವೇಳೆ ಅಭಿಷೇಕ್ ಗೌಡ ಎಂಬಾತ ಸ್ನೇಹ ಬೆಳೆಸಿದ್ದ. ಬಳಿಕ ಫೋನ್ ನಂಬರ್ ಪಡೆದು ಪ್ರೀತಿಸುವುದಾಗಿ ನಂಬಿಸಿ ತನ್ನ ಬಲೆಗೆ ಬೀಳಿಸಿಕೊಂಡಿದ್ದಾನೆ. ಬಳಿಕ ಪುಸಲಾಯಿಸಿ ಹಂತಹಂತವಾಗಿ 500 ಗ್ರಾಂ ಚಿನ್ನಾಭರಣ, 57 ಸಾವಿರ ರು. ಪಡೆದಿದ್ದಾನೆ.

ಪುತ್ರಿಯ ಕೊರಳಿನಲ್ಲಿದ್ದ10 ಗ್ರಾಂ ಚಿನ್ನದ ಸರ ಇಲ್ಲದಿರುವುದು ಪಾಲಕರ ಗಮನಕ್ಕೆ ಬಂದಿದೆ. ಈ ಬಗ್ಗೆ ವಿಚಾರಿಸಿದಾಗ ಸ್ನೇಹಿತನಿಗೆ ಕೊಟ್ಟಿದ್ದೇನೆ. ವಾಪಸ್ ಪಡೆಯುವುದಾಗಿ ಪಾಲಕರ ಮುಂದೆ ಹೇಳಿದ್ದಾಳೆ. ಏ. 5 ರಂದು ಮನೆಯ ಲಾಕರ್‌ನಲ್ಲಿಟ್ಟಿದ್ದ 500 ಗ್ರಾಂ ಚಿನ್ನಾಭರಣ ಹಾಗೂ 57 ಸಾವಿರ ನಗದು ಇಲ್ಲದಿರುವುದು ಗೊತ್ತಾಗಿದೆ. ಈ ಕುರಿತು ಮತ್ತೇ ವಿಚಾರಿಸಿದಾಗ, ಅಭಿಷೇಕ್ ಗೌಡ ಒತ್ತಾಯಿಸುತ್ತಿದ್ದ. ನವೆಂಬರ್‌ನಲ್ಲಿ ಪಾರ್ಕ್‌ಗೆ ಕರೆದು ಒಡವೆಗಳನ್ನು ತಂದುಕೊಂಡುವಂತೆ ಪೀಡಿಸಿದ್ದ. ಹೀಗಾಗಿ ಆತ ಕೇಳಿದಾಗಲೆಲ್ಲ ಮನೆಯಲ್ಲಿದ್ದ ಚಿನ್ನಾಭರಣ ತೆಗೆದುಕೊಂಡು ಹೋಗಿ ಕೊಟ್ಟಿದ್ದೇನೆ. ಇದಾದ ಬಳಿಕ ಚಿನ್ನಾಭರಣ ವಾಪಸ್ ಕೊಡುವುದಾಗಿ ನಂಬಿಸಿದ್ದ ಅಭಿಷೇಕ್, ಲಾಡ್ಜ್‌ಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಅಲ್ಲದೆ, ಒಮ್ಮೆ ಮನೆಗೆ ಬಂದಿದ್ದಾಗ ಚಿನ್ನಾಭರಣ ಮತ್ತು ಹಣ ಕಿತ್ತುಕೊಂಡು ಹೋಗಿರುವ ವಿಚಾರವನ್ನು ಪಾಲಕರ ಮುಂದೆ ಬಿಚ್ಚಿಟ್ಟಾಗ ವಿಷಯ ಬಯಲಾಗಿದೆ.

ಚಿನ್ನಾಭರಣ ಹಾಗೂ ನಗದು ವಾಪಸ್ ಕೊಡುವಂತೆ ಅಭಿಷೇಕ್‌ನನ್ನು ಕೇಳಿದ್ದಾಳೆ. ಆಗ ಅಭಿಷೇಕ್‌ಗೌಡ, ಈ ವಿಚಾರವನ್ನು ತಂದೆ-ತಾಯಿ ಮುಂದೆ ಬಾಯ್ಬಿಟ್ಟರೆ, ನನ್ನ ಬಳಿಯಿರುವ ಖಾಸಗಿ ಪೋಟೋ ಹಾಗೂ ವಿಡಿಯೊಗಳನ್ನು ಫೇಸ್‌ಬುಕ್‌ನಲ್ಲಿ ಹರಿಯಬಿಟ್ಟು, ಮಾನ ಕಳೆಯುವುದಾಗಿ ಬೆದರಿಸಿದ್ದಾನೆ. ಅಲ್ಲದೆ, ತಂದೆ-ತಾಯಿಯನ್ನು ಜೀವಂತ ಬಿಡುವುದಿಲ್ಲ ಎಂದು ಪುತ್ರಿಗೆ ಬೆದರಿಕೆ ಹಾಕಿರುವುದು ಗೊತ್ತಾಗಿ ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.