Saturday, 26th October 2024

ಆಂದ್ರದಿಂದ ನುಸುಳದಂತೆ ಕಟ್ಟುನಿಟ್ಟಿನ ಕ್ರಮ

ವಿಶ್ಚವಾಣಿ ಸುದ್ದಿಮನೆ, ಬಳ್ಳಾರಿ

ಆಂಧ್ರಪ್ರದೇಶದ ಅನಂತಪುರ ಮತ್ತು ಕರ್ನೂಲ್ ಜಿಲ್ಲೆಗಳಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿದ್ದು, ಆ ಕಡೆಯಿಂದ ಬಳ್ಳಾರಿ ಕಡೆ ಜನ ಅಡ್ಡದಾರಿಗಳಿಂದ ನುಸುಳುತ್ತಿದ್ದಾರೆ ಎಂಬ ಮಾಹಿತಿ ಇದ್ದು,ಕೂಡಲೇ ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಸೂಚನೆ ನೀಡಿದರು.
ಕೋವಿಡ್-19ಗೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಳ್ಳಾರಿ ಸುರಕ್ಷಿತವೆಂಬ ಕಾರಣದಿಂದ ಅನಂತುಪರ,ಕರ್ನೂಲ್,ಆಲೂರು, ಗುಂತಕಲ್,ರಾಯದುರ್ಗ ಕಡೆಯಿಂದ ಬಹಳಷ್ಟು ಜನರು ಕ್ಯಾನಲ್ ಮಾರ್ಗಗಳು ಹಾಗೂ ಅಡ್ಡದಾರಿಗಳ ಮೂಲಕ ಈ ಕಡೆ ಬರುತ್ತಿದ್ದಾರೆ ಎಂಬ ಮಾಹಿತಿ ಇದ್ದು, ತಾವು ಪ್ರಮುಖ ರಸ್ತೆಗಳಿಗೆ ಚೆಕ್ಪೋಸ್ಟ್ ಹಾಕಿದರೇ ಸಾಲದು; ಈ ಮಾರ್ಗಗಳಲ್ಲಿಯೂ ಹದ್ದಿನಗಣ್ಣಿಟ್ಟು ಯಾರು ಆ ಕಡೆಯಿಂದ ಒಳನುಸುಳದಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರು ತಮ್ಮ ಸೂಚನೆ ಅನುಸಾರ ಇಂದಿನಿಂದಲೇ ಕ್ರಮವಹಿಸಲಾಗುವುದು ಎಂದು ಹೇಳಿದರು.
ಜನಪ್ರತಿನಿಧಿಗಳ ಸಲಹೆ ಗಂಭೀರವಾಗಿ ಪರಿಗಣಿಸಿ: ಕೋವಿಡ್-19 ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದ್ದು,ಇದು ಇದೇ ರೀತಿ ಮುಂದುವರಿಯಲಿ ಎಂದು ಸಲಹೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಅಧಿಕಾರಿಗಳು ಜನಪ್ರತಿನಿಧಿಗಳು ನೀಡುವ ಸಲಹೆಗಳನ್ನು ಆಲಿಸಿ ಅವುಗಳನ್ನು ಗಂಭೀರವಾಗಿ ಅನುಷ್ಠಾನಕ್ಕೆ ಮುಂದಾಗಬೇಕು. ಜನಪ್ರತಿನಿಧಿಗಳಿಗೆ ಸ್ಥಳೀಯ ಸ್ಥಿತಿಗತಿಗಳ ಅರಿವು ಇರುವುದರಿಂದ ಅವರು ಸಲಹೆಗಳನ್ನು ನೀಡುತ್ತಿರುತ್ತಾರೆ. ಆದ ಕಾರಣ ಅವುಗಳನ್ನು ಪರಿಗಣಿಸಬೇಕು; ಯಾವುದೇ ರೀತಿಯ ಪ್ರತಿಷ್ಠೆಯನ್ನಾಗಿ ತೆಗೆದುಕೊಳ್ಳಬಾರದು ಎಂದು ಅವರು ಸೂಚಿಸಿದರು.

ಕಾರ್ಮಿಕರ ಮೇಲೆ ವಿಶೇಷ ಗಮನಹರಿಸಿ:
ಹೊಟ್ಟೆಪಾಡಿಗಾಗಿ ಹಾಸನ್,ಮಂಡ್ಯ, ಮೈಸೂರು,ಚಿಕ್ಕಮಗಳೂರು, ಮಂಗಳೂರು ಸೇರಿದಂತೆ ವಿವಿಧೆಡೆ ತೆರಳಿ ಲಾಕ್ಡೌನ್ ಕಾರಣದಿಂದ ಸ್ವಗ್ರಾಮಕ್ಕೆ ಮರಳಿರುವ ಕಾರ್ಮಿಕರ ಮೇಲೆ ವಿಶೇಷ ನಿಗಾ ವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಅವರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.
ಹೊಟ್ಟೆಪಾಡಿಗಾಗಿ ವಿವಿಧೆಡೆ ಕೆಲಸಕ್ಕೆ ತೆರಳಿದ್ದ ಅನೇಕರು ಲಾಕ್ಡೌನ್ ಸಂದರ್ಭದಲ್ಲಿ ಊರಿಗೆ ಬಂದವರು ಬಂದಿದ್ದಾರೆ;ಇನ್ನೂ ಅನೇಕರು ಅಲ್ಲಲ್ಲಿಯೇ ಉಳಿದುಕೊಂಡಿದ್ದು, ಅವರನ್ನು ಕರೆತರುವುದಕ್ಕೆ ವಿಶೇಷ ವ್ಯವಸ್ಥೆ ಮಾಡಬೇಕು. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವಂತೆ ಹಡಗಲಿ ಶಾಸಕ ಪಿ.ಟಿ.ಪರಮೇಶ್ವರ ನಾಯಕ್ ಅವರು ಒತ್ತಾಯಿಸಿದರು.

356 ರೈತರ 2602 ಹೆಕ್ಟೇರ್ ಜಮೀನಿಗೆ ಬೆಳೆಹಾನಿ:
ಇತ್ತೀಚೆಗೆ ಸುರಿದ ಮಳೆಯಿಂದ ಅಪಾರ ಪ್ರಮಾಣದಲ್ಲಿ ಬೆಳೆಹಾನಿಯಾಗಿದ್ದು,ಇದಕ್ಕೆ ರಾಜ್ಯ ಸರಕಾರ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ಆನಂದಸಿಂಗ್ ಶಾಸಕರ ಸಲಹೆಗಳನ್ನು ಆಲಿಸಿ ಹೇಳಿದರು.
ಇತ್ತೀಚೆಗೆ ಸುರಿದ ಮಳೆಯಿಂದಾಗಿ ಸಿರಗುಪ್ಪ,ಕಂಪ್ಲಿ,ಹಡಗಲಿ ಮತ್ತು ಹರಪನಳ್ಳಿ ತಾಲೂಕುಗಳಲ್ಲಿ 2602.40 ಹೆಕ್ಟೇರ್ ಬೆಳೆಹಾನಿಯಾಗಿದ್ದು, ಎನ್ಡಿಆರ್ಎಫ್ ನಿಯಮದ ಅನ್ವಯ 224.90 ಹೆಕ್ಟೇರ್ ನಾಶವಾಗಿದೆ. ಈ ಕುರಿತು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. 356 ರೈತರ ಜಮೀನುಗಳಲ್ಲಿ 30.02ಲಕ್ಷ ರೂ. ಹಾನಿಯಾಗಿರುವುದನ್ನು ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಸಭೆಗೆ ವಿವರಿಸಿದರು.
ಈ ಲಾಕ್ಡೌನ್ನಿಂದಾಗಿ ಇಡೀ ನಾಡಿನ ರೈತರು ತೀವ್ರ ಸಂಕಷ್ಟಕ್ಕೊಳಗಾಗಿದ್ದು, ಇಂತಹ ಸಂದರ್ಭದಲ್ಲಿ ಅವರ ನೆರವಿಗೆ ಧಾವಿಸುವುದು ನಮ್ಮೆಲ್ಲರ ಕರ್ತವ್ಯ. ರೈತರ ಕೃಷಿ ಚಟುವಟಿಕೆಗಳಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ನೋಡಿಕೊಳ್ಳಿ ಎಂದು ಅವರು ಸೂಚಿಸಿದರು.
ತೋಟಗಾರಿಕೆ ಬೆಳೆಗಳ 41 ಸಾವಿರ ಮೆಟ್ರಿಕ್ ಟನ್ ಇಳುವರಿ ಇಂದು ಮಾರುಕಟ್ಟೆ ಸಮಸ್ಯೆ ಜಿಲ್ಲೆಯಲ್ಲಿ ಎದುರಿಸುತ್ತಿರುವುದನ್ನು ತೋಟಗಾರಿಕೆ ಇಲಾಖೆ ಅಧಿಕಾರಿ ಸಭೆಯಲ್ಲಿ ಬಿಚ್ಚಿಟ್ಟರು.

ಡಿಎಂಎಫ್ ಹಣ ಬಳಕೆ ವಿಶೇಷ ಪ್ರಸ್ತಾವನೆ ಕೇಂದ್ರಕ್ಕೆ:

ಈ ಲಾಕ್ಡೌನ್ ಸಂದರ್ಭದಲ್ಲಿ ಜಿಲ್ಲೆಯ ಬಡಜನರು ಅತ್ಯಂತ ಸಂಕಷ್ಟಕ್ಕೊಳಗಾಗಿದ್ದು,ದಿನದೂಡುವುದು ಕಷ್ಟವಾಗಿದೆ. ಇಂತಹ ಸಂದರ್ಭದಲ್ಲಿ ಅವರಿಗೆ ನೆರವಾಗುವ ದೃಷ್ಟಿಯಿಂದ ಜಿಲ್ಲಾ ಖನಿಜ ನಿಧಿಯಲ್ಲಿ ಉಳಿದಿರುವ ಹಣದಲ್ಲಿ ವಿಶೇಷ ಪ್ರಸ್ತಾವನೆ ಸಿದ್ದಪಡಿಸಲಾಗಿದ್ದು, ಶಾಸಕರೊಂದಿಗೆ ಚರ್ಚಿಸಿ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗುವುದು;ಒಪ್ಪಿಗೆ ದೊರೆತಲ್ಲಿ ಅನುಷ್ಠಾನಕ್ಕೆ ಕ್ರಮವಹಿಸಲಾಗುವುದು ಎಂದು ಸಚಿವ ಆನಂದಸಿಂಗ್ ತಿಳಿಸಿದರು.
ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ 50 ದಿನಗಳಿಗಿಂತ ಹೆಚ್ಚು ಕೆಲಸ ನಿರ್ವಹಿಸಿದ ನೇರ ಗಣಿ ಬಾಧಿತ ತಾಲೂಕುಗಳ ಕೂಲಿಕಾರ್ಮಿಕರಿಗೆ 5 ಸಾವಿರ ರೂ. ಹಾಗೂ ಪರೋಕ್ಷ ಗಣಿಬಾಧಿತ ತಾಲೂಕುಗಳ ಕೂಲಿಕಾರ್ಮಿಕರಿಗೆ 3 ಸಾವಿರ ರೂ. ನೀಡುವ ಪ್ರಸ್ತಾವನೆಯಿಂದ 74998 ಕೂಲಿಕಾರ್ಮಿಕರಿಗೆ ಅನುಕೂಲವಾಗಲಿದ್ದು 24 ಕೋಟಿ ರೂ.ಖರ್ಚಾಗಲಿದೆ.
ಇನ್ನೊಂದು ನರೇಗಾ ಅಡಿ 14 ದಿನಗಳಿಗಿಂತ ಹೆಚ್ಚು ಕೆಲಸ ನಿರ್ವಹಿಸಿದ ನೇರ ಗಣಿ ಬಾಧಿತ ತಾಲೂಕುಗಳ ಕೂಲಿಕಾರ್ಮಿಕರಿಗೆ 5 ಸಾವಿರ ರೂ. ಹಾಗೂ ಪರೋಕ್ಷ ಗಣಿಬಾಧಿತ ತಾಲೂಕುಗಳ ಕೂಲಿಕಾರ್ಮಿಕರಿಗೆ 3 ಸಾವಿರ ರೂ. ನೀಡುವ ಪ್ರಸ್ತಾವನೆಯಿಂದ 1.31ಲಕ್ಷ ಕೂಲಿಕಾರ್ಮಿಕರಿಗೆ ಅನುಕೂಲವಾಗಲಿದ್ದು 42 ಕೋಟಿ ರೂ.ಖರ್ಚಾಗಲಿದೆ.
ಈ ಎರಡರ ಕುರಿತು ಸುದೀರ್ಘವಾಗಿ ಶಾಸಕರೊಂದಿಗೆ ಚರ್ಚಿಸಿ ಒಂದು ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಲಾಗುವುದು ಎಂದರು.

ಉಳಿದ ಪಡಿತರ ರೇಶನ್ಕಾರ್ಡ್ ಇಲ್ಲದವರಿಗೆ ನೀಡಿ:
ಪ್ರತಿ ನ್ಯಾಯಬೆಲೆ ಅಂಗಡಿಗಳಲ್ಲಿ ಈಗಾಗಲೇ ಪಡಿತರ ವಿತರಿಸಿದ ನಂತರ ಉಳಿದ ಪಡಿತರದ ಮಾಹಿತಿಯನ್ನು ತಹಸೀಲ್ದಾರರ ಮುಖಾಂತರ ತರಿಸಿಕೊಂಡು ರೇಶನ್ ಕಾರ್ಡ್ ಇಲ್ಲದ ನಿರ್ಗತಿಕರಿಗೆ,ಅಸಹಾಯಕರಿಗೆ ಆ ಪಡಿತರವನ್ನು ವಿತರಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
ರೇಶನ್ ಕಾರ್ಡ್ ಅರ್ಜಿ ಹಾಕಿ ವೇಯ್ಟಿಂಗ್ಲಿಸ್ಟ್ನಲ್ಲಿರುವವರಿಗೆ ಪಡಿತರ ವಿತರಿಸುವ ಆದೇಶ ಬಂದಿದ್ದು,ವಿತರಿಸಲಾಗುವುದು ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ರಾಮೇಶ್ವರಪ್ಪ ತಿಳಿಸಿದರು. ಈಗಾಗಲೇ ಜಿಲ್ಲೆಯಲ್ಲಿ ಶೇ.89ರಷ್ಟು ಪಡಿತರ ವಿತರಿಸಲಾಗಿದ್ದು,ಇಡೀ ರಾಜ್ಯದಲ್ಲಿಯೇ ಬಳ್ಳಾರಿ ಪ್ರಥಮ ಸ್ಥಾನದಲ್ಲಿದೆ ಎಂದರು. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆ ಪಡಿತರ ಬಿಡುಗಡೆ ಮಾಡಲಾಗಿದ್ದು, ಏಪ್ರಿಲ್ ಮತ್ತು ಮೇ ತಿಂಗಳ ಪಡಿತರವನ್ನು ಮೇ 1ರಿಂದ ವಿತರಿಸಲು ಕ್ರಮವಹಿಸಲಾಗುತ್ತಿದೆ.ಜೂನ್ ತಿಂಗಳ ಪಡಿತರವನ್ನು ಜೂನ್ ಮೊದಲ ವಾರದಲ್ಲಿ ವಿತರಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಸಂಸದ ವೈ. ದೇವೇಂದ್ರಪ್ಪ, ಶಾಸಕ ಸೋಮಲಿಂಗಪ್ಪ, ಸೋಮಶೇಖರ ರೆಡ್ಡಿ, ಕೆ.ಸಿ. ಕೊಂಡಯ್ಯ, ಅಲ್ಲಂವೀರಭದ್ರಪ್ಪ, ಪಿ.ಟಿ. ಪರಮೇಶ್ವರನಾಯಕ್, ಈ. ತುಕಾರಾಂ, ನಾಗೇಂದ್ರ, ಜಿಲ್ಲಾಧಿಕಾರಿ ಎಸ್.ಎಸ್. ನಕುಲ್, ಎಸ್ಪಿ ಸಿ.ಕೆ. ಬಾಬಾ, ಜಿಪಂ ಸಿಇಒ ಕೆ. ನಿತೀಶ್ ಮತ್ತಿತರರು ಇದ್ದರು.