Saturday, 14th December 2024

ದುಬೈನಲ್ಲಿ ಹಾಲು ಮಾರೋನು – ಮಿಲ್ಕ್ ’ಶೇಖ್’

ತುಂಟರಗಾಳಿ

ಹರಿ ಪರಾಕ್

ಸಿನಿಗನ್ನಡ

ಕೆಜಿಎಫ್ ಚಿತ್ರದ ಹವಾ ಕಡಿಮೆ ಆಗ್ತಾ ಇದೆ. ಜನ ಕ್ರಮೇಣ ಅದರ ಗುಂಗಿನಿಂದ ಹೊರಬರುತ್ತಿದ್ದಾರೆ. ಆದರೆ ಸಿನಿಪ್ರಿಯರಲ್ಲಿ ಮತ್ತು ಗಾಂಧಿನಗರದಲ್ಲಿ ಈ ಚಿತ್ರ ಸೃಷ್ಠಿಸಿರುವ ಹವಾ ಕಡಿಮೆ ಏನಲ್ಲ. ಹವಾ ಜತೆಗೆ ಈ ಚಿತ್ರ ಭಯವನ್ನೂ ಹುಟ್ಟಿಸಿದೆ ಎಂದರೆ ತಪ್ಪಿಲ್ಲ. ಭಯ
ಯಾವ ಕಾರಣಕ್ಕೆ ಅಂತೀರಾ.. ಅದು ಚಿತ್ರಗಳ ಬಜೆಟ್ ಬಗೆಗಿನ ವಿಷಯ.

ಜನ ಕೆಜಿಎಫ್, ಆರ್‌ಆರ್‌ಆರ್ ಹೀಗೆ ದೊಡ್ಡ ಬಜೆಟ್‌ನ ಚಿತ್ರಗಳಿಗೆ ಕೊಡುತ್ತಿರುವ ಮರ್ಯಾದೆ ನೋಡಿ, ಇನ್ನುಮುಂದೆ ಬರೀ ದೊಡ್ಡ ಬಜೆಟ್ ಚಿತ್ರಗಳನ್ನು ಮಾಡಿ ದ್ರೇನೇ ಜನ ಸಿನಿಮಾ ನೋಡೋದು ಅನ್ನೋದು ಅನೇಕರ ತಲೆಗೆ ಹೊಕ್ಕಿದೆ. ಸಣ್ಣಪುಟ್ಟ ಸ್ಟಾರ್‌ಗಳಿಗೆ ಪರವಾಗಿಲ್ಲ, ಆದರೆ ಫ್ರಂಟ್ ಲೈನ್ ಸ್ಟಾರ್ಸ್ ಅನ್ನಿಸಿಕೊಂಡವರು ನಾವು ಎಷ್ಟೇ ಖರ್ಚು ಮಾಡಿದ್ರೂ ಕೆಜಿಎಫ್ ಮುಂದೆ ಅದು ಲೋ ಬಜೆಟ್ ಸಿನಿಮಾನೇ ಅನ್ನಿಸಿಕೊಳ್ಳುತ್ತೆ ಅನ್ನೋ ಆತಂಕದಲ್ಲಿದ್ದಾರೆ.

ಇದು ಕೆಜಿಎಫ್ ಸೃಷ್ಠಿಸಿರುವ ಟ್ರೆಂಡ್. ಇದು ಸಹಜ. ಒಂದು ಪೊಲೀಸ್ ಸ್ಟೋರಿ ಹಿಟ್ ಆದ ತಕ್ಷಣ, ಜನ ಪೊಲೀಸ್ ಸಿನಿಮಾಗಳನ್ನೇ ನೋಡೋದು ಅಂತ, ಕರುಳಿನ ಸಿನಿಮಾ ಕ್ಲಿಕ್ ಆದಾಗ ಜನ ಸೆಂಟಿಮೆಂಟ್ ಸಿನಿಮಾಗಳನ್ನೇ ನೋಡೋದು ಅಂತ, ಲವ್ ಸ್ಟೋರಿ ಹಿಟ್ ಆದಾಗ ಜನ ಬರೀ ಅವನ್ನೇ ನೋಡೋದು ಅಂತ ಹೆಂಗೆ ಯೋಚನೆ ಬರುತ್ತೋ ಇದೂ ಕೂಡಾ ಹಂಗೇ. ಮತ್ತು ಇದು ಕ್ಷಣಿಕ ಅಷ್ಟೇ. ಯಾಕಂದ್ರೆ ಕನ್ನಡ ಸಿನಿಮಾಗಳೂ ದೊಡ್ಡ ಬಜೆಟ್ ಚಿತ್ರಗಳಲ್ಲ.

ಬಂಗಾರದ ಮನುಷ್ಯದಿಂದ ಹಿಡಿದು, ನಂಜುಂಡಿ ಕಲ್ಯಾಣ, ಚೈತ್ರದ ಪ್ರೇಮಾಂಜಲಿ, ಜನುಮದ ಜೋಡಿ, ತವರಿಗೆ ಬಾ ತಂಗಿ, ಯಜಮಾನ, ಮುಂಗಾರು ಮಳೆ, ಚೆಲುವಿನ ಚಿತ್ತಾರ ಎಲ್ಲವೂ ಲೋ ಬಜೆಟ್ ಚಿತ್ರಗಳೇ. ಹಾಗೆ ನೋಡಿದರೆ ಜೋಗಿ, ಓಂ ಕೂಡಾ ಬಜೆಟ್ ಅನ್ನು ನಂಬಿಕೊಂಡು ಮಾಡಿದ ಮತ್ತು ಕ್ಲಿಕ್ ಆದ ಚಿತ್ರಗಳಲ್ಲ. ಹಾಗಾಗಿ ಒಂದು ಚಿತ್ರಕ್ಕೆ ಬಜೆಟ್ ಅಲ್ಲ, ಕಂಟೆಂಟ್ ಮುಖ್ಯ ಅನ್ನೋದು ಚಿತ್ರರಂಗದಲ್ಲಿ ಎಷ್ಟೋ ಬಾರಿ ಪ್ರೂವ್ ಆಗಿದೆ. ಇನ್ನು ಮುಂದೆಯೂ ಅದೇ ಸತ್ಯ.

ಲೂಸ್ ಟಾಕ್
ನರೇಂದ್ರ ಮೋದಿ (ಕಾಲ್ಪನಿಕ ಸಂದರ್ಶನ)
ಮೊನ್ನೆ ಪತ್ರಕರ್ತರು ಮೈಕ್ ಹಿಡ್ಕೊಂಡ್ ಬಂದಾಗ ನೀವು ‘ಓ ಮೈ ಗಾಡ್’ ಅಂದಿದ್ದು ಯಾಕೆ?
-ಏನಿಲ್ಲ, ಅಕ್ಷಯ್ ಕುಮಾರ್‌ದು ಓ ಮೈ ಗಾಡ್ ಸಿನಿಮಾ ನೆನಪಾಯ್ತು ಅಷ್ಟೇ.

ನಿಮ್ ಸುತ್ತ ಟೆರರಿಗಳು ಬಂದ್ರೂ 56 ಇಂಚಿನ ಎದೆ ಅಡಲ್ಲ ಅಂತಾರೆ, ಆದ್ರೆ ಜರ್ನಲಿಗಳು ಬಂದ್ರೆ ಯಾಕೆ ಹಿಂಗೆ ?

-ಹಂಗೇನಿಲ್ಲ, ಮೊನ್ನೆ ಪಂಜಾಬ್‌ನಲ್ಲಿ ರೈತರಿಗೂ ಹೆದರ್ಕೊಂಡು ವಾಪಸ್ ಬಂದಿದ್ನಲ್ಲ.

ಓ ಹೌದಲ್ವಾ, ಅದ್ಸರಿ, ನೀವ್ ಯಾಕೆ ಜರ್ನಲಿಸ್ಟುಗಳು ಬಂದ್ರೆ ಭಯ ಪಡೋದು?
-ಹಂಗೇನಿಲ್ಲ, ಫೋಟೋ ಜರ್ನಲಿಗಳು ಬಂದ್ರೆ ನೀಟಾಗಿ ಪೋಸ್ ಕೊಡ್ತೀನಲ್ಲ ರಾಹುಲ್ ಗಾಂಧಿ ಯಾವ್ದೋ ಕ್ಲಬ್ಬಿಗೆ ಹೋಗಿದ್ರಂತಲ್ಲ, ಅದರ ಬಗ್ಗೆ ನಿಮ್ಮ ಅಭಿಪ್ರಾಯ?

-ನನ್ನ ವಿಷ್ಯ ಮಾತಾಡ್ತಾ ಇದ್ರಿ, ಈಗ ಇದ್ದಕ್ಕಿದ್ದಂಗೆ ಎರಡೂ ವಿಷ್ಯ ಯಾಕ್ರೀ ಕ್ಲಬ್ ಮಾಡ್ತೀರಾ?

ಸರಿ,. ಹೋಗ್ಲಿ ಬಿಡಿ, ನಿಮ್ಮ ಬಗ್ಗೆನೇ ಕೇಳ್ತೀನಿ, ಅಚ್ಚೇ ದಿನ್ ಯಾವಾಗ್ ಬರುತ್ತೆ.
-ಹ್ಹೆ, ಹ್ಹೆ, , ರಾಹುಲ್ ಗಾಂಧಿ ವಿಷ್ಯನೇ ಮಾತಾಡೋಣ್ವಾ?

ನೆಟ್ ಪಿಕ್ಸ್
ಇಡೀ ನೇಷನ್ ಕರೋನಾಗೆ ಬೂಸ್ಟರ್ ಡೋಸ್ ವ್ಯಾಕ್ಸಿನೇಶನ್ ಹಾಕಿಸಿಕೊಳ್ಳೋ ಯೋಚನೆಯಲ್ಲಿ ಇರುವಾಗ ಯಾವನೋ ಒಬ್ಬ ಹುಚ್ಚ ಎಲ್ಲರೂ ಈಗ ಕರೋನಾ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ತಾ ಇದ್ದಾರೆ, ಇದೇ ಸಮಯ ನೋಡಿ, ಎಲ್ಲರಿಗೂ ಏಯ್ ಖಾಯಿಲೆ ಹರಡಿಸಿ ಬಿಡ್ತೀನಿ ಎನ್ನುವ ಕೆಟ್ಟಬುದ್ಧಿಗೆ ಇಳಿದಿದ್ದ. ಏಯ್ಡ್ಸ್ ರಕ್ತ ಇರೋ ಬ್ಲಡ್ ಅನ್ನು ಸಿರಿಂಜ್‌ನಲ್ಲಿ ಹಾಕಿಕೊಂಡು ರಸೆಯಲ್ಲಿ ಹೋಗೋ ಬರೋವ್ರಿಗೆ,
ಇದು ಎಚ್‌ಐವಿ ಪಾಸಿಟಿವ್ ಇರೋ ಬ್ಲಡ್ಡು, ಚುಚ್ಚಿ ಬಿಡ್ತೀನಿ, ಚುಚ್ಚಿಬಿಡ್ತೀನಿ ಅಂತ ಹೆದರಿಸ್ತಾ ಇದ್ದ.

ಅವನನ್ನು ನೋಡಿ ಎಲ್ಲರೂ ದೂರ ಓಡಿ ಹೋಗುತ್ತಿದ್ದರು. ಅಷ್ಟರಲ್ಲಿ ಸೋಮು ಬಂದು, ಅಲ್ಲಿ ಯಾವನೋ ಹುಚ್ಚ ತಿರುಗಾಡ್ತಾ ಇದ್ದಾನೆ.
ಏಯ್ಡ್ಸ್ ಇರೋ ಬ್ಲಡ್ ನ ಇಂಜೆಕ್ಷನ್ ಸಿರಿಂಜ್ ಗೆ ಹಾಕ್ಕೊಂಡು, ಎಲ್ಲರಿಗೂ ಚುಚ್ಚಿ ಬಿಡ್ತೀನಿ, ಚುಚ್ಚಿಬಿಡ್ತೀನಿ ಅಂತ ಹೆದರಿಸ್ತಾ ಇದ್ದಾನೆ. ನೀನು ಮಾತ್ರ ಆ ಕಡೆ ಹೋಗ್ಬೇಡ ಅಂತ ಖೇಮುಗೆ ಹೇಳಿದ. ಅದಕ್ಕೆ ಖೇಮು, ಅಯ್ಯೋ ಅಂಥವರಿಗೆ ನಾನು ತಲೆಕೆಡಿಸಿಕೊಳ್ಳಲ್ಲ, ನಾನ್ ನೋಡ್ಕೊತೀನಿ ಬಿಡು ಅಂತ ಆ ಹುಚ್ಚ ಓಡಾಡ್ತಾ ಇದ್ದ ರೋಡಿಗೇ ಹೋದ.

ಹುಚ್ಚ ಖೇಮು ಹತ್ರ ಬಂದು ಚುಚ್ಚಿ ಬಿಡ್ತೀನಿ, ಚುಚ್ಚಿಬಿಡ್ತೀನಿ ಅಂತ ಹೆದರಿಸಿದ. ಅದಕ್ಕೆ ಖೇಮು ಕೂಲಾಗಿ, ಆಯ್ತು ಚುಚ್ಕೋ ಅಂದ. ಹುಚ್ಚ ನಿಗೆ ಕೊಂಚ ಗಾಬರಿ ಆಯ್ತು. ಲೋ, ಇದು ಏಯ್ಡ್ಸ್ ಇರೋ ರಕ್ತ ಕಣೋ ಪೆದ್ದು ಮುಂಡೇದೇ, ಚುಚ್ಚಿದ್ರೆ ನಿಂಗೂ ಏಯ್ಡ್ಸ್ ಬರುತ್ತೆ, ಸತ್ತೋಗ್ತೀಯ ಅಂದ. ಅದಕ್ಕೆ  ಮು ಇನ್ನೂ ಕೂಲಾಗಿ ಹೇಳಿದ ಅಯ್ಯೋ, ಚುಚ್ಕೊಳ್ಳೊಲೇ, ನಾನ್ ಕಾಂಡೋಮ್ ಹಾಕ್ಕೊಂಡಿದೀನಿ.

ಲೈನ್ ಮ್ಯಾನ್
ಮತ್ತೆ ಮತ್ತೆ ದೇಶದ್ರೋಹಿ ಕೆಲಸ ಮಾಡಲು ‘ಪ್ರಯತ್ನ’ ಮಾಡುವವನು
-‘ಟ್ರೈ’ಟರ್
ಕರಾಟೆ ಕಲಿತ ಹುಡುಗಿ
-ಹೊಡೆದಾಡುವಾ ಕಾಮನಬಿಲ್ಲು
ಎಣ್ಣೆ ಹೊಡೆಯುವ ಪಂಜಾಬಿ ಹುಡುಗಿ
-ಪಂಜಾಬಿ ‘ಕುಡಿ’
ದುಬೈನಲ್ಲಿ ಹಾಲು ಮಾರೋನು
-ಮಿಲ್ಕ್ ‘ಶೇಕ್’
ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್‌ಗಳನ್ನು ಹೆಚ್ಚಾಗಿ ಉಪಯೋಗಿಸುವ ದೇಶ
-‘ಉಜ್ಬೇ’ಕಿಸ್ತಾನ್
ನವೆಂಬರ್ 13ಕ್ಕೆ ರಾಹುಲ್ ಗಾಂಧಿ ಏನಂತ ಟ್ವೀಟ್ ಮಾಡ್ತಾರೆ ?
-ಬಚ್ಚೇ ದಿನ್ ಆನೇವಾಲೀ ಹೈ
ಟ್ರಾಫಿಕ್ ಅತಿರೇಕ
ಹಂ ಅಡ್ಡ ಬಂದ್ರೂ ಹಾರ್ನ್ ಮಾಡೋದು

ಸಣ್ಣ ಪುಟ್ಟ ಸಾಲ ಕೊಡುವ ಕೆಲಸ ಮಾಡುವವನ ಮಾತು
-ಕಾಯಕವೇ ಕೈಸಾಲ
ಕೆಜಿಎಫ್ ಗೂ, ಪುಷ್ಪಾಗೂ ಇರೋ ವ್ಯತ್ಯಾಸ
-ರಾಕಿ ಭಾಯ್‌ದು ಚಂದನವನ, ಪುಷ್ಪನದ್ದು ರಕ್ತಚಂದನವನ

ರಕ್ಷಾಬಂಧನದ ದಿನ ಕೈ ತುಂಬಾ ರಾಖಿ ಕಟ್ಟಿಸಿಕೊಂಡ ಹುಡುಗನ ಮಾತು
Sisters, sisters, sisters
I hate making new sisters, I avoid
But sisters like me,
I can’t avoid

-‘ರಾಖಿ’ ಭಾಯ್