Saturday, 23rd November 2024

ದಾವೂದ್ ಬಂಟರಿಗೆ ಸೇರಿದ ಸ್ಥಳಗಳ ಮೇಲೆ ಎನ್‌ಐಎ ದಾಳಿ

ಮುಂಬೈ: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಬಂಟರಿಗೆ ಸೇರಿದ 20ಕ್ಕೂ ಹೆಚ್ಚು ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ತಂಡವು ಸೋಮವಾರ ದಾಳಿ ಮಾಡಿದೆ.

ನಾಗಪಾದ, ಪಾರೆಲ್, ಗೋರೆಗಾಂವ್, ಬೊರಿವಿಲಿ, ಸಾಂಟಾಕ್ರುಜ್, ಮುಂಬ್ರಾ, ಭೇಂಡಿ ಬಜಾರ್ ಮತ್ತಿತರ ಪ್ರದೇಶಗಳಲ್ಲಿರುವ  ಸ್ಥಳಗಳ ಮೇಲೆ ದಾಳಿ ನಡೆದಿದೆ. ದಾಳಿಗೆ ಮುನ್ನವೇ ಕಳೆದ ಫೆಬ್ರವರಿಯಲ್ಲಿ ದಾವೂದ್ ಗ್ಯಾಂಗ್ ಜೊತೆ ಶಾಮೀ ಲಾಗಿರುವ ಹವಾಲಾ ಆಪರೇಟರ್‌ಗಳು ಮತ್ತು ಡ್ರಗ್ ಮಾರಾಟಗಾರರ ವಿರುದ್ಧ ಎನ್‌ಐಎ ಪ್ರಕರಣ ದಾಖಲಿಸಿತ್ತು.

ಭಾರತದಲ್ಲಿ ಭಯೋತ್ಪಾದನೆ ಚಟುವಟಿಕೆ, ವ್ಯವಸ್ಥಿತ ಅಪರಾಧ ಕೃತ್ಯ ಇತ್ಯಾದಿ ಮೂಲಕ ಭಾರತದಲ್ಲಿ ಅಶಾಂತಿ ವಾತಾವರಣ ನಿರ್ಮಿಸಲು ಡಿ ಕಂಪನಿಯ ಉನ್ನತ ಹಂತದ ನಾಯಕತ್ವ ಶಾಮೀಲಾಗಿದೆ ಎಂದು ಆರೋಪಿಸಲಾಗಿತ್ತು.

ದಾವೂದ್ ಬಂಟರಿಗೆ ಸೇರಿದ ಡಿ ಕಂಪನಿಯ ವಿಶೇಷ ತಂಡವು ಶಿವಸೇನಾ ಮುಖಂಡರನ್ನು ವಿಶೇಷವಾಗಿ ಗುರಿ ಮಾಡಿರುವುದು ತಿಳಿದುಬಂದಿದೆ. ಈ ನಾಯಕರನ್ನು ಹತ್ಯೆಗೈಯಲು ಛೋಟಾ ಶಕೀಲ್ ಇಬ್ಬರು ಶಾರ್ಪ್‌ಶೂಟರ್‌ ಗಳನ್ನು ಕಳುಹಿಸಿದ್ದ ವಿಚಾರ ವೂ ಬೆಳಕಿಗೆ ಬಂದಿದೆ.

ದಾವೂದ್ ಇಬ್ರಾಹಿಂ, ಹಾಜಿ ಅನೀಸ್ ಇಬ್ರಾಹಿಂ ಶೇಖ್, ಶಕೀಲ್ ಶೇಖ್ ಅಲಿಯಾಸ್ ಛೋಟಾ ಶಕೀಲ್, ಜಾವೇದ್ ಚಿಕ್ನಾ, ಇಬ್ರಾಹಿಮ್ ಮುಷ್ತಾಕ್ ಅಬ್ದುಲ್ ರಜಾಕ್ ಮೆಮೋನ್ ಅಲಿಯಾಸ್ ಟೈಗರ್ ಮೊಮೋನ್ ಮೊದಲಾ ದವರು ಪ್ರಮುಖ ಆರೋಪಿ ಗಳಾಗಿದ್ದಾರೆ.