Saturday, 23rd November 2024

ಆಜಾನ್ ವಿರುದ್ಧ ದೇವಾಲಯಗಳಲ್ಲಿ ಮೊಳಗಿತು ಸುಪ್ರಭಾತ

ಬೆಂಗಳೂರು: ಮಸೀದಿಗಳಲ್ಲಿನ ಮೈಕ್ ಬಳಕೆ, ಆಜಾನ್ ವಿರುದ್ಧ ಶ್ರೀರಾಮ ಸೇನೆ ಮತ್ತು ಹಿಂದೂಪರ ಸಂಘಟನೆಗಳು ಕರ್ನಾಟಕ ದಲ್ಲಿ ಅಭಿಯಾನ ಆರಂಭಿಸಿವೆ. ಸೋಮವಾರ ಕರ್ನಾಟಕದ ವಿವಿಧ ಜಿಲ್ಲೆಗಳ ದೇವಾಲಯಗಳಲ್ಲಿ ಸುಪ್ರಭಾತ ಮೊಳಗಿದೆ.

ವಿವಿಧ ಜಿಲ್ಲೆಗಳಲ್ಲಿ ಹಿಂದೂಪರ ಸಂಘಟನೆಗಳ ಸದಸ್ಯರು ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಹನುಮಾನ್ ಚಾಲೀಸಾ ಪಠಿಸಿ ದರು. ಮೈಕ್ ಮೂಲಕ ಅದನ್ನು ಬಿತ್ತರಿಸಲಾಯಿತು. ಮೈಸೂರಿನಲ್ಲಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅಭಿಯಾನಕ್ಕೆ ಚಾಲನೆ ನೀಡಿದರು.

ಆಂಜನೇಯಸ್ವಾಮಿ ದೇಗುಲದಲ್ಲಿ 300 ಮಂದಿ ಒಟ್ಟಾಗಿ ಸಹಸ್ರನಾಮ, ಹಿಂದೂಗೀತೆ, ಭಜನೆ ಮಾಡುವುದರ ಅಭಿಯಾನ ಆರಂಭವಾಯಿತು. ಒಂದು ಗಂಟೆಗಳ ಕಾಲ ರಾಜ್ಯದ ಸಾವಿರಕ್ಕೂ ಅಧಿಕ ದೇವಾಲಯಗಳಲ್ಲಿ ಸುಪ್ರಭಾತ ಕೇಳಿ ಬಂದಿತು. ಈ ಅಭಿಯಾನದ ಹಿನ್ನಲೆಯಲ್ಲಿ ರಾಜ್ಯದ್ಯಂತ ಪೊಲೀಸರು ಸಹ ಹೈ ಅಲರ್ಟ್ ಘೋಷಣೆ ಮಾಡಿದ್ದಾರೆ.

ಮಂಡ್ಯ ಜಿಲ್ಲೆಯ ದೇವಾಲಯಗಳಲ್ಲಿ ಬೆಳಗ್ಗೆ 5 ಗಂಟೆಗೆ ಹಿಂದೂಪರ ಕಾರ್ಯಕರ್ತರು ಹನುಮಾನ್ ಚಾಲೀಸಾ ಪಠಿಸಿದರು. ಚಾಮರಾಜನಗರದ ಚಾಮರಾಜೇಶ್ವರ ದೇವಾಲಯದಲ್ಲಿ ಕೂಡ ಸಂಘಟನೆಗಳಿಂದ ಭಜನೆ ಆರಂಭಗೊಂಡಿತು.

ಯಾದಗಿರಿ ನಗರದ ಮಂದಿರಗಳಿಗೆ ತೆರಳಿ ಜಾಗೃತಿ ಅಭಿಯಾನ ನಡೆಸಿದರು. ದೇವಾಲಯಗಳಲ್ಲಿ ಹನುಮಾನ್ ಚಾಲೀಸಾ, ಭಕ್ತಿ ಗೀತೆ ಮೊಳಗಿದವು.

ಮಸೀದಿಗಳ ಮೇಲಿನ ಮೈಕ್‌ ತೆರವುಗೊಳಿಸುವಂತೆ ಶ್ರೀರಾಮಸೇನೆ ಗಡುವು ನೀಡಿತ್ತು. ಗಡುವು ಪೂರ್ಣಗೊಂಡ ಹಿನ್ನಲೆಯಲ್ಲಿ ಹನುಮಾನ್ ಚಾಲೀಸಾ ಪಠಿಸಲಾಯಿತು. ಹಾಸನದಲ್ಲಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ಹೇಮಂತ್ ಕುಮಾರ್ ನೇತೃತ್ವದಲ್ಲಿ ಹನು ಮಾನ್ ಚಾಲೀಸಾ ಪಠಣ ಮಾಡಲಾಯಿತು. ಹಾಸನದ ಸಂಗಮೇಶ್ವರ ಬಡಾವಣೆಯಲ್ಲಿರುವ ಶ್ರೀಸಂಗಮೇಶ್ವರ ದೇವಾಲಯದಲ್ಲಿ ಧ್ವನಿ ವರ್ಧಕದ ಮೂಲಕ ಹನುಮಾನ್ ಚಾಲೀಸಾ ಜೋರಾಗಿ ಹಾಕಲಾಯಿತು.

ಬ್ರಾಹ್ಮಿ ಮುಹೂರ್ತದಲ್ಲಿ ಗದಗ ನಗರದ ಬಹುತೇಕ ಮಂದಿರಗಳಲ್ಲಿ ಭಜನೆಗಳ ಸುದ್ದು ಕೇಳಿತು. ಇದರಿಂದ ನಗರದ ವಿವಿಧೆಡೆ ಬ್ರಾಹ್ಮೀ ಮುಹೂರ್ತದಲ್ಲಿ ಭಜನೆ v/s ಆಜಾನ್ ಶುರುವಾಯಿತು. ಐತಿಹಾಸಿಕ ಜುಮ್ಮಾ ಮಸೀದಿ ಕೂಗಳತೆ ದೂರದಲ್ಲಿ ಆಜಾನ್‌ಗೆ ವಿರುದ್ಧವಾಗಿ ಭಜನೆಯನ್ನು ಆರಂಭಿಸಲಾಯಿತು.

ಜುಮ್ಮಾ ಮಸೀದಿ ಆವರಣದಲ್ಲಿ ಮುಂಜಾಗ್ರತೆ ಕ್ರಮವಾಗಿ ಪೊಲೀಸ್ ಬಿಗಿಭದ್ರತೆ ಒದಗಿಸಲಾಗಿತ್ತು. ಒಂದು ಕೆಎಸ್‌ಆರ್‌ಪಿ ತುಕುಡಿ ಸೇರಿದಂತೆ ಸ್ಥಳೀಯ ಪೊಲೀಸರಿಂದ ಭದ್ರತೆ ನೀಡಲಾಗಿತ್ತು.

ತುಮಕೂರು ತಾಲೂಕಿನ ಪಾವಗಡದ ಕೋಟೆ ಆಂಜನೇಯ ದೇವಾಲಯದಲ್ಲಿ ಶ್ರೀರಾಮಸೇನೆ ಕಾರ್ಯಕರ್ತರು ಲೌಡ್ ಸ್ಪೀಕರ್ ಮೂಲಕ ಆಜಾನ್ ಕೂಗುವ ವೇಳೆ ಹನುಮಾನ್ ಚಾಲಿಸಾ ಸುಪ್ರಭಾತ ಹಾಕಿದರು.