Thursday, 12th December 2024

ಹೈನುಗಾರಿಕೆ ತರಬೇತಿಯಲ್ಲಿ ತಂದ ಬದಲಾವಣೆ

ಅಭಿವ್ಯಕ್ತಿ

ಪ್ರೀತಿ ಟಿ.ಎಸ್

ನಮ್ಮ ರಾಜ್ಯದಲ್ಲಿ ಅಂದಾಜಿನ ಪ್ರಕಾರ ಸುಮಾರು ೩ ಕೋಟಿ ೭ ಲಕ್ಷದ ೫೦೦ ಹಸುಗಳಿದ್ದು, ಪ್ರತಿ ವರ್ಷ ೪೫೦ ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಭಾರತ ಸ್ವತಂತ್ರ್ಯವಾದಾಗ ಸುಮಾರು ೭೦ ಕೋಟಿ ಗೋವುಗಳಿದ್ದವು. ದೇಶದ ಒಟ್ಟಾರೆ ಹೈನು ಉತ್ಪಾದನೆ ಯ ಮೌಲ್ಯ ವರ್ಷಕ್ಕೆ ಸುಮಾರು ೨ ಲಕ್ಷ ಕೋಟಿ ರುಪಾಯಿಗಳು.

ಕೃಷಿ ಪ್ರಧಾನವಾದ ನಮ್ಮ ದೇಶದಲ್ಲಿ ಕೃಷಿ ಜತೆಗೆ ಜಾನುವಾರು ಸಾಕುವುದು ವಾಡಿಕೆ. ಕೃಷಿಯೊಂದಿಗೆ ಪಶುಪಾಲನೆ ಒಂದು ಪರಂಪರಾ ಗತ ಉಪಕಸುಬು. ಇವು ಒಂದನ್ನೊಂದು ಬಿಟ್ಟು ಇರಲಾರವು. ಹೈನು ಉತ್ಪನ್ನಗಳಿಗೆ ಹಸು-ಎಮ್ಮೆಗಳು, ಮಾಂಸಕ್ಕಾಗಿ ಕುರಿ-ಆಡುಗಳು, ಉಳುಮೆ-ಸಾಗಾಟಗಳಿಗೆ ಎತ್ತುಗಳು ಬೇಕು. ಕೃಷಿಯಿಂದ ದೊರಕುವ ಮೇವು ಪಶುಗಳಿಗೆ ಸಮೃದ್ಧ ಆಹಾರ. ಆದರೆ ಈ ಉದ್ಯೋಗಕ್ಕೆ ಒಂದು ವಾಣಿಜ್ಯಕ ಸ್ವರೂಪ ಸಿಗುತ್ತಿರುವುದು ತೀರ ಇತ್ತೀಚೆಗೆ ಎನ್ನಬಹುದು.

ನಮ್ಮ ರಾಜ್ಯದಲ್ಲಿ ಅಪಾರ ಸಂಖ್ಯೆಯ ರೈತರು ಹೈನುಗಾರಿಕೆ ಅವಲಂಬಿಸಿದ್ದಾರೆ. ಕೃಷಿ ಇಲ್ಲದೇ ಹೈನುಗಾರಿಕೆಯನ್ನೇ ಪ್ರಧಾನ ವಾಗಿಟ್ಟು ಕೊಂಡು ಜೀವನ ನಿರ್ವಹಿಸುತ್ತಿದ್ದಾರೆ. ಇನ್ನು ಹೈನುಗಾರಿಕೆಯನ್ನು ಮೇಲ್ನೋಟಕ್ಕೆ ಸರಳ, ಆಕರ್ಷಣೀಯ ಎಂದು ಭಾವಿಸಿ ಈ ಕ್ಷೇತ್ರಕ್ಕೆ ಬಂದು ನಷ್ಟಕ್ಕೀಡಾದವರು ಅನೇಕ. ಇದಕ್ಕೆ ಪ್ರಮುಖ ಕಾರಣ ಹೈನುಗಾರಿಕೆ ಬಗ್ಗೆ ಅವರಿಗೆ ಸೂಕ್ತವಾದ ಮಾಹಿತಿ, ತರಬೇತಿ ಇಲ್ಲದಿರುವುದು ಹಾಗೂ ಹಸು ಸಾಕಲು ತರಬೇತಿ ಬೇಕೇ ಎಂದು ಭಾವಿಸುವುದಾಗಿದೆ.

ಈ ನಿಟ್ಟಿನಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮವು ಹಲವು ಸಂಸ್ಥೆಗಳ ಸಹಕಾರದೊಂದಿಗೆ ಹೈನುಗಾರಿಕೆಯನ್ನು ವ್ಯವಸ್ಥಿತವಾಗಿ
ಸಾರ್ವಜನಿಕರಿಗೆ ಮುಟ್ಟಿಸುವಲ್ಲಿ ಸಾಕಷ್ಟು ತರಬೇತಿಗಳನ್ನು ನೀಡುತ್ತ ಬಂದಿದೆ. ಕೃಷಿ ನಂಬಿ ಕೈ ಸುಟ್ಟುಕೊಂಡು ಜೀವನ ಸಾಗಿಸಲು ಹೆಣಗಾಡುತ್ತಿದ್ದ ಅದೆಷ್ಟೋ ರೈತಾಪಿ ವರ್ಗದವರು, ಮನೆಗೆಲಸವನ್ನಷ್ಟೇ ನಿಭಾಯಿಸಿಕೊಂಡು ಹೋಗುತ್ತಿದ್ದ ಹೆಣ್ಣುಮಕ್ಕಳು, ವಿದ್ಯಾಭ್ಯಾಸ ಮುಗಿಸಿಕೊಂಡು ಬಂದ ಯುವಜನರು ಈ ತರಬೇತಿ ಪಡೆದುಕೊಳ್ಳುವ ಮೂಲಕ ಇತರರಿಗೆ ಮಾದರಿಯಾಗಿ ಜೀವನ ನಡೆಸುತ್ತಿರು ವುದು ಶ್ಲಾಘನೀಯ.

ಇದಕ್ಕೆ ಒಂದು ನಿದರ್ಶನವೆಂದರೆ, ಹಾಸನ ಜಿಲ್ಲೆಯ ಪ್ರಿಯದರ್ಶಿನಿ ಸಂಸ್ಥೆ ಅಭಿವೃದ್ಧಿ ಮತ್ತು ಗ್ರಾಮೀಣ ಸೊಸೈಟಿ (PSಆಖS)ಯು ಕೃಷಿಕರಿಗೆ ಹೈನುಗಾರಿಕೆಯಲ್ಲಿ ತರಬೇತಿ ನೀಡುವ ನಿಟ್ಟಿನಲ್ಲಿ ೨೦೨೦ರಲ್ಲಿ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದಿಂದ (ಕೆ.ಎಸ್.ಡಿ.ಸಿ)
ಮಾನ್ಯತೆ ಪಡೆಯಿತು. ಸಾಮಾಜಿಕ ಕ್ಷೇತ್ರದಲ್ಲಿ ಸುಮಾರು ಎರಡು ದಶಕಗಳ ಅನುಭವ ಹೊಂದಿದ್ದು, ಗ್ರಾಮೀಣಾಭಿವೃದ್ಧಿ, ಮಹಿಳಾ ಸಬಲೀಕರಣ ಮತ್ತು ಕೌಶಲ್ಯಾಭಿವೃದ್ಧಿಯಲ್ಲಿ ವಿವಿಧ ಸರಕಾರಿ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಬೆಂಬಲಿಸುತ್ತಾ ಬಂದಿದೆ.
ಕೃಷಿಯನ್ನೇ ನಂಬಿ ಬದುಕು ಸಾಗಿಸುತ್ತಿರುವ ರೈತರಿಗೆ ಹೈನುಗಾರಿಕೆ ತರಬೇತಿ ನೀಡಿ ಹೊಸ ದಿಕ್ಕನ್ನು ತೋರುವ ಪ್ರಯತ್ನವನ್ನು ಈ ಸಂಸ್ಥೆಯು ಮಾಡುತ್ತ ಬಂದಿದೆ.

ಅತಿ ಹೆಚ್ಚು ಜಮೀನು ಹೊಂದಿರುವ ರೈತರು ತಮ್ಮ ಜೀವನದಲ್ಲಿ ಹೇಗೋ ಮುಂದುವರಿದು ಬಿಡುತ್ತಾರೆ. ಆದರೆ ಕಡಿಮೆ ಜಮೀನು ಹೊಂದಿರುವ ರೈತರು ಅಥವಾ ಕೃಷಿ ಬಿಟ್ಟ ರೈತರಿಗೆ ಹಾಲಿನಿಂದ ಬರುವ ಆದಾಯವೇ ವರಮಾನವಿದ್ದಂತೆ. ಕೃಷಿಯನ್ನೇ ನಂಬಿ ಬದುಕು
ಸಾಗಿಸುತ್ತಿದ್ದ ರೈತರಿಗೆ ಹೈನುಗಾರಿಕೆ ತರಬೇತಿ ನೀಡಿ ಅದರ ಮೂಲಕ ತಮ್ಮ ಬದುಕನ್ನು ಕಟ್ಟಿಕೊಳ್ಳುವ ಮಾರ್ಗವನ್ನು ಪ್ರಿಯದರ್ಶಿನಿ ಸಂಸ್ಥೆಯು ಪ್ರಯತ್ನಿಸಿತು. ಹೈನು ಕೃಷಿಕ ತರಬೇತಿ ಪಡೆಯಲು ಮೊದಮೊದಲು ೩೦ ರೈತರು ಮುಂದಾಗಿದ್ದು, ಅದರಡಿ ೨೯ ರೈತರು ತರಬೇತಿಯಲ್ಲಿ ಉತ್ತೀರ್ಣರಾಗಿದ್ದಾರೆ.

ತರಬೇತಿ ಪಡೆದುಕೊಂಡ ರೈತರು ಹಸು ಖರೀದಿಸಲು ಇಚ್ಛಿಸಿ, ಸಹಾಯದ ನಿರೀಕ್ಷೆಯನ್ನು ಸಂಸ್ಥೆಗೆ ವ್ಯಕ್ತಪಡಿಸಿದರು. ಹೀಗಾಗಿ ಸೊಸೈಟಿಯು ಬ್ಯಾಂಕ್, ಸಂಬಂಧಪಟ್ಟ ಇಲಾಖೆಗಳು, ಇತರೆ ಹಣಕಾಸು ಸಂಸ್ಥೆಗಳಲ್ಲಿ ತರಬೇತಿ ಪಡೆದವರಿಗೆ ಆರ್ಥಿಕ ನೆರವು ಕೊಡಿಸಲು ಮುಂದಾಯಿತು. ಆದರೆ ಪ್ರಯತ್ನ ಫಲಿಸಲಿಲ್ಲ. ತದನಂತರ ಸಂಸ್ಥೆಯ ಸಿಬ್ಬಂದಿಗಳು ಹಸು ಖರೀದಿಸಲು ಮುಂದಾದ ರೈತರ ಮನೆಗೆ ನೇರವಾಗಿ ಭೇಟಿ ನೀಡಿ, ಸ್ವಂತ ಹಣವನ್ನೇ ಹೂಡಿಕೆ ಮಾಡಲು ಪ್ರೋತ್ಸಾಹಿಸಿದರು.

ಮೊದಲು ೫ ರೈತರು ಹಸುವನ್ನು ಖರೀದಿಸಿ ಹೈನುಗಾರಿಕೆಯಲ್ಲಿ ಯಶಸ್ಸನ್ನು ಕಂಡರು. ಈ ಐವರಿಂದ ಇದೀಗ ಗ್ರಾಮದಲ್ಲಿ ೨೧ ರೈತರು ಹಸು ಕೊಂಡುಕೊಳ್ಳಲು ಮುಂದಾಗಿರುವುದು ಶ್ಲಾಘನೀಯ. ಹೈನುಗಾರಿಕೆ ಕಷ್ಟ ಎಂದು ಹೇಳುತ್ತಿದ್ದವರಿಗೆ, ಅದರಲ್ಲಿ ಲಾಭವಿದೆ ಎಂದು
ಶ್ರೀ ಜಬ್ಬಾರ್ ಶರೀಫ್ ಅವರ ನೇತೃತ್ವದಲ್ಲಿ ಪ್ರಿಯದರ್ಶಿನಿ ಸಂಸ್ಥೆಯು ತಾಲೂಕಿನ ರೈತರಿಗೆ ತಿಳಿಸಿಕೊಟ್ಟಿದೆ. ಹೈನುಗಾರಿಕೆಯ ಉಗಮ ಹೇಗಾಯಿತು?

ಭಾರತದಲ್ಲಿ ಹೈನುಗಾರಿಕೆ: ಅನಾದಿಕಾಲದಲ್ಲಿ ಹಾಲು ಮಾರುವುದು ಅಥವಾ ಕೊಂಡು ತರುವುದು ಮುಜುಗರದ ಸಂಗತಿಯಾಗಿತ್ತು. ಕ್ರಮೇಣ ಕೃಷಿ ವ್ಯಾಪಾರದ ದೃಷ್ಟಿಕೋನ ಪಡೆದಂತೆಲ್ಲ ಮನೆ ಬಳಕೆಯ ನಂತರ ಮಿಕ್ಕಿದ್ದ ಹಾಲನ್ನು ಮಾರಾಟ ಮಾಡುವುದು ರೂಢಿಗೆ
ಬಂತು. ೮೦ರ ದಶಕದಲ್ಲಿ ಆರಂಭವಾದ ಕ್ಷೀರ ಕ್ರಾಂತಿ ಹೈನುಗಾರಿಕೆಗೆ ಒಂದು ವ್ಯವಸ್ಥಿತ ರೂಪ ನೀಡಲು ಶಕ್ತವಾಯಿತು.

ರಾಜ್ಯದ ಮೂಲೆಮೂಲೆಗಳಲ್ಲಿ ಆರಂಭವಾದ ಹಾಲು ಉತ್ಪಾದಕರ ಸಹಕಾರಿ ಸಂಘಗಳು, ಹೈನೋದ್ಯಮ ಮತ್ತು ಸಹಕಾರಿ ಆಂದೋಲನ ಗಳ ಯಶಸ್ಸಿಗೆ ಹೊಸ ಭಾಷ್ಯ ಬರೆದವು. ತತ್ಪರಿಣಾಮವಾಗಿ ಹೈನುಗಾರಿಕೆ ಕೃಷಿ ಮತ್ತು ಗ್ರಾಮೀಣ ಬದುಕಿಗೆ ಆಸರೆಯಾಗಿ ಬೆಳೆಯುತ್ತಿದೆ. ಗ್ರಾಮೀಣ ಅರ್ಥವ್ಯವಸ್ಥೆಯ ಆಧಾರ ಸ್ತಂಭವಾಗಿದೆ. ಜಾಗತಿಕ ಕ್ಷೀರ ಉತ್ಪಾದನೆಯಲ್ಲಿ ೨೦೦೦ನೇ ಇಸವಿಯಿಂದ ಸತತವಾಗಿ ಭಾರತ ಮೊದಲ ಸ್ಥಾನದಲ್ಲಿದೆ.

ಸದ್ಯದ ಉತ್ಪಾದನೆ ವರ್ಷಕ್ಕೆ ೧೨,೫೦೦ ಕೋಟಿ ಲೀಟರ್‌ಗಳು. ದೇಶದಲ್ಲಿ ಸುಮಾರು ೧ ಕೋಟಿ ೩೦ ಲಕ್ಷ ಕುಟುಂಬಗಳು ಹೈನುಗಾರಿಕೆ ಯಲ್ಲಿ ತೊಡಗಿವೆ. ಮುಂದಿನ ೧೦ ವರ್ಷಗಳಲ್ಲಿ ದೇಶದ ಹಾಲಿನ ಬೇಡಿಕೆ ದ್ವಿಗುಣವಾಗಲಿದೆ. ದೇಶದ ಜಿ.ಡಿ.ಪಿ.ಯಲ್ಲಿ ಒಟ್ಟಾರೆ ಕೃಷಿಯ ಪಾಲು ಶೇ. ೧೨.೩೬ರಷ್ಟು. ಪಶುಪಾಲನೆ ಪಾಲು ಜಿ.ಡಿ.ಪಿ.ಯ ಶೇ. ೪.೯ರಷ್ಟು. ಕೃಷಿಯ ವಾರ್ಷಿಕ ಬೆಳವಣಿಗೆಯ ದರ ಶೇ. ೩ರಷ್ಟಿದ್ದರೆ, ಪಶುಪಾಲನೆಯದು ಶೇ. ೬ರಷ್ಟು.

ಇನ್ನೂ ಹಾಲು ಉತ್ಪಾದನೆ ಶೇ. ೫ರಷ್ಟರ ದರದಲ್ಲಿ ಬೆಳವಣಿಗೆ ಕಾಣುತ್ತಿದೆ. ಅಲ್ಲದೇ ದೇಶದಲ್ಲಿ ಸುಮಾರು ೧.೫೦ ಕೋಟಿ ಚಕ್ಕಡಿಗಳಿವೆ. ವರ್ಷಕ್ಕೆ ಸುಮಾರು ೭೩ ಟನ್ ಸಗಣಿ ಉತ್ಪಾದನೆಯಾಗುತ್ತಿದ್ದು, ಜೈವಿಕ ಅನಿಲ, ಉರುವಲು ಮತ್ತು ಗೊಬ್ಬರಗಳಿಗೆ ಬಳಕೆಯಾಗುತ್ತಿದೆ. ಇದಲ್ಲದೆ ಗೋಮೂತ್ರದ ಅರ್ಕ ಹಲವಾರು ರೋಗಗಳಿಗೆ ಔಷಧಗಳಾಗಿ ಬಳಕೆಯಾಗಬಲ್ಲದು.

ಕರ್ನಾಟಕದಲ್ಲಿ ಹೈನುಗಾರಿಕೆ: ನಮ್ಮ ರಾಜ್ಯದಲ್ಲಿ ಒಂದು ಅಂದಾಜಿನ ಪ್ರಕಾರ ಸುಮಾರು ೩ ಕೋಟಿ ೭ ಲಕ್ಷದ ೫೦೦ ಹಸುಗಳಿದ್ದು, ಪ್ರತಿ ವರ್ಷ ೪೫೦ ಕೋಟಿ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಭಾರತ ಸ್ವತಂತ್ರ್ಯವಾದಾಗ ಸುಮಾರು ೭೦ ಕೋಟಿ ಗೋವುಗಳಿದ್ದವು. ಅಂದರೆ ಪ್ರಪಂಚದ ಮೂರನೇ ಒಂದು ಭಾಗ ನಮ್ಮಲ್ಲಿತ್ತು. ಈಗ ಸುಮಾರು ೨೫ ಕೋಟಿ ಜಾನುವಾರುಗಳಿವೆ. ದೇಶದ ಒಟ್ಟಾರೆ ಹೈನು ಉತ್ಪಾದನೆಯ ಮೌಲ್ಯ ವರ್ಷಕ್ಕೆ ಸುಮಾರು ೨ ಲಕ್ಷ ಕೋಟಿ ರುಪಾಯಿಗಳು.

ಒಟ್ಟಾರೆ ಉತ್ಪಾದನೆಯಾಗುವ ಹಾಲಿನಲ್ಲಿ ಶೇ. ೫೫ ಎಮ್ಮೆ, ಶೇ.೪೩ರಷ್ಟು ವಿದೇಶಿ ಮಿಶ್ರ ಮತ್ತು ದೇಸಿ ತಳಿಯ ಹಸುಗಳಿಂದ, ಶೇ. ೨ರಷ್ಟು ಭಾಗ ಆಡು, ಕುರಿ, ಒಂಟೆಗಳಿಂದ ಬರುತ್ತದೆ. ಒಟ್ಟು ಉತ್ಪಾದನೆಯ ಶೇ.೭೦ರಷ್ಟು ಭಾಗ ಹಾಲಿನ ರೂಪದಲ್ಲಿ ಮತ್ತು ಉಳಿದ ಶೇ.
೩೦ರಷ್ಟು ಭಾಗ ಹಾಲು ಪುಡಿ, ಮೊಸರು, ಮಜ್ಜಿಗೆ, ಬೆಣ್ಣೆ, ಕೋವ, ತುಪ್ಪ, ಶ್ರೀಖಂಡ, ಲಸ್ಸಿ, ತುಪ್ಪ ಮುಂತಾದ ರೂಪಗಳಲ್ಲಿ ಖರ್ಚಾಗುತ್ತದೆ. ಅದಲ್ಲದೇ ಪಶುಪಾಲನೆಯ ಇನ್ನೊಂದು ಮಹತ್ವದ ಅಂಶ ಕೃಷಿಗಾಗಿ ಎತ್ತುಗಳ ಬಳಕೆ. ಟ್ರ್ಯಾಕ್ಟರ್‌ಗಳು, ಟಿಲ್ಲರುಗಳು, ಬಂದರು, ಎತ್ತು ಗಳ ಬಳಕೆ ಸರ್ವೇಸಾಮಾನ್ಯ.

ರಾಜ್ಯದ ಹೈನೋದ್ಯಮಕ್ಕೆ ಕೆ.ಎಂ.ಎಫ್. ಬೆನ್ನೆಲುಬು: ಹೈನುಗಾರಿಕೆಯ ಶೀಘ್ರ ಮತ್ತು ನಿರಂತರ ಆದಾಯ ಒಂದು ಪ್ರಮುಖ ಆಕರ್ಷಣೆ. ಸ್ಥಿರ ದರವಿರುವ ಏಕೈಕ ಕೃಷಿ ಉತ್ಪನ್ನ ಹಾಲು ಎನ್ನಬಹುದು. ನಮ್ಮ ರಾಜ್ಯದ ಹೈನೋದ್ಯಮಕ್ಕೆ ‘ಕೆ.ಎಂ.ಎಫ್ ವ್ಯವಸ್ಥೆ’ ಬೆನ್ನೆಲುಬು
ಎನ್ನುವುದರಲ್ಲಿ ಸಂಶಯವೇ ಇಲ್ಲ. ಅದಾಗ್ಯೂ ನಿರಂತರವಾಗಿ ಏರುತ್ತಿರುವ ಪಶು ಆಹಾರದ ಬೆಲೆ ಹಾಗೂ ನಿರ್ವಹಣಾ ವೆಚ್ಚಗಳಿಂದ ಡೈರಿಗೆ ಹಾಲು ಹಾಕುವುದು ಪಶುಪಾಲಕರಿಗೆ ಲಾಭ ತರುತ್ತಿಲ್ಲ.

ಹಾಲು ಉತ್ಪಾದನೆ ಯಲ್ಲಿ ಜಗತ್ತಿನಲ್ಲಿ ಪ್ರಥಮ ಸ್ಥಾನದಲ್ಲಿದ್ದರೂ ನಮ್ಮ ಉತ್ಪಾದಕತೆ ತೀರ ಕಡಿಮೆ. ಪ್ರತಿ ಹಸುವಿಗೆ ದಿನಕ್ಕೆ ಕೇವಲ ೧.೧/೨ ಲೀಟರ್‌ಗಳು. ಒಟ್ಟು ಉತ್ಪಾದನೆಯ ಶೇ. ೭೦ ಭಾಗ ಚಿಕ್ಕ ರೈತರಿಂದಲೇ ಬರುತ್ತಿದೆ. ಉತ್ಪಾದಕ ಮತ್ತು ಗ್ರಾಹಕ ಬೆಲೆಗಳಲ್ಲಿ ಭಾರಿ ಅಂತರವಿದೆ. ಇದನ್ನು ಮನಗಂಡ ದೊಡ್ಡ ಹೈನುಗಾರರು ತಮ್ಮದೇ ಲೀಟರ್ ನೇರ ಮಾರಟ ಜಾಲ ರೂಪಿಸಿಕೊಂಡು ಯಶಸ್ವಿಯಾಗುತ್ತಿದ್ದಾರೆ.

ಇಷ್ಟು ಕಾಲ ನಿರ್ಲಕ್ಷ್ಯವಾಗುತ್ತಿದ್ದ ಸಗಣಿ, ಗಂಜಲುಗಳು, ಸಾವಯವ ಕೃಷಿಯಿಂದಾಗಿ ಹೆಚ್ಚಿನ ಬೆಲೆ ಪಡೆಯುತ್ತಿವೆ. ಜೈವಿಕ ಅನಿಲದ ಬಳಕೆ ಕೂಡ ಹೆಚ್ಚುತ್ತಿದೆ. ಈ ರೈತರು ವಿದ್ಯುತ್ ಕೈ ಕೊಟ್ಟಾಗ ನೀರಾವರಿ ಉದ್ದೇಶಕ್ಕೆ ವಿದ್ಯುತ್ ಉತ್ಪಾದಿಸುತ್ತಾರೆ. ಈ ಡೀಸೆಲ್ ಜನರೇಟರ್‌ಗೆ
ಶೇ. ೭೦ರಷ್ಟು ಬಯೋ ಗ್ಯಾಸ್ ಮತ್ತು ಶೇ. ೩೦ರಷ್ಟು ಡಿಸೇಲ್ ಉಳಿಸುತ್ತಾರೆ. ಇನ್ನೂ ಈ ರೈತರು ಹಾಲು ಕರೆಯುವ ಯಂತ್ರ ನಡೆಸಲು ಕೆರೋಸಿನ್ ಇಂಜಿನ್ ಬಳಸುತ್ತಾರೆ. ಇಂಜಿನ್ ಚಾಲು ಆದ ನಂತರ ಪೂರ್ತಿ ಬಯೋಗ್ಯಾಸ್ ಬಳಸುತ್ತಾರೆ. ಸಾವಯವ ಕೃಷಿಯಲ್ಲಿ ರೈತರು ಗೊಬ್ಬರಕ್ಕೆ ಸಗಣಿಯನ್ನು ಬಹುವಾಗಿ ನೆಚ್ಚಿಕೊಂಡಿದ್ದಾರೆ.

೧. ನಮ್ಮ ಮನೆಯಲ್ಲಿ ಈಗಾಗಲೇ ಒಂದು ಹಸು ಇದೆ. ಅದನ್ನ ಸಾಕೋಕೆ ನಮಗೆ ಬಹಳ ಕಷ್ಟ ಅಂತ ಅನಿಸ್ತಿತ್ತು. ತರಬೇತಿ ನಂತರ ನಮಗೆ ಈಗ ಹಸು ಸಾಕೋದು ಕಷ್ಟ ಅಲ್ಲ ಅಂತ ಮನವರಿಕೆ ಆಗಿದೆ. ಇನ್ನೂ ಎರಡು ಹಸು ಇದ್ರೂ ಸಾಕಬಹುದು ಅಂತ ಅನಿಸ್ತಿದೆ.
– ರತ್ನಮ್ಮ, ಸಿಂಗಟಗೆರೆ ಗ್ರಾಮ ಅರಸೀಕೆರೆ ತಾಲೂಕು

೨. ಪ್ರಿಯದರ್ಶಿನಿ ಸಂಸ್ಥೆಯ ಶರೀಫ್ ಅವರು ನಮ್ಮ ಗ್ರಾಮಕ್ಕೆ ಭೇಟಿ ನೀಡಿ ಕೃಷಿಯೊಂದನ್ನೇ ನಂಬಿ ಬದುಕು ಸಾಗಿಸುವುದ್ದಕ್ಕಿಂತ ಅದರೊಂದಿಗೆ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡರೆ ಆದಾಯ ಹೆಚ್ಚಿಸಬಹುದು ಎಂದು ತಿಳಿಸಿ ತರಬೇತಿ ಪಡೆಯಲು ನಮ್ಮನ್ನು ಪ್ರೋತ್ಸಾಹಿಸಿದರು. ತರಬೇತಿ ಪಡೆದ ನಂತರ ಹೈನುಗಾರಿಕೆಯ ಮಹತ್ವ ಅರಿವಾಗಿದೆ. ಇದೀಗ ಮೂರು ಹಸು ಖರೀದಿಸಬೇಕೆಂದು ತೀರ್ಮಾನಿಸಿದ್ದೇನೆ. ಪ್ರತಿಯೊಬ್ಬ ರೈತ ಈ ತರಬೇತಿಯ ಸದುಪಯೋಗ ಪಡೆಯಬೇಕು ಎಂದು ನಾನು ಇಚ್ಛಿಸುತ್ತೇನೆ.
– ಸತೀಶ, ಹೊಸೂರು ಗ್ರಾಮ, ಹಾಸನ ಜಿಲ್ಲೆ