Saturday, 23rd November 2024

ಜಮೈಕಾ, ಸೇಂಟ್ ವಿನ್ಸೆಂಟ್, ಗ್ರೆನಡೈನ್ಸ್‌ ಪ್ರವಾಸ ಕೈಗೊಂಡ ರಾಷ್ಟ್ರಪತಿ ಕೋವಿಂದ್

ನವದೆಹಲಿ: ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರ ಪತ್ನಿ ಸವಿತಾ ಕೋವಿಂದ್ ಅವರೊಂದಿಗೆ ಶನಿವಾರ ಜಮೈಕಾ ಮತ್ತು ಸೇಂಟ್ ವಿನ್ಸೆಂಟ್ ಹಾಗೂ ಗ್ರೆನಡೈನ್ಸ್‌ಗೆ ಪ್ರವಾಸ ಕೈಗೊಂಡಿದ್ದಾರೆ.

ರಾಷ್ಟ್ರಪತಿಗಳು ಮೇ.15 ರಿಂದ 21ರವರೆಗೆ ಏಳು ದಿನ ಜಮೈಕಾ ಮತ್ತು ಸೇಂಟ್ ವಿನ್ಸೆಂಟ್ ಹಾಗೂ ಗ್ರೆನಡೈನ್ಸ್‌ಗೆ ಭೇಟಿ ನೀಡಲಿದ್ದು, ಜಮೈಕಾದ ಗವರ್ನರ್ ಜನರಲ್ ಸರ್ ಪ್ಯಾಟ್ರಿಕ್ ಅಲೆನ್ ಅವರೊಂದಿಗೆ ನಿಯೋಗ ಮಟ್ಟದ ಮಾತುಕತೆ ನಡೆಸಲಿದ್ದಾರೆ.

ನಂತರ ಪ್ರಧಾನಿ ಆಂಡ್ರ್ಯೂ ಹೋಲ್ನೆಸ್ ಮತ್ತು ಇತರ ಗಣ್ಯರನ್ನು ಭೇಟಿಯಾಗಲಿದ್ದಾರೆ. ಜಮೈಕಾದಲ್ಲಿ ಸಂಸತ್ತಿನ ಜಂಟಿ ಅಧಿವೇಶನದಲ್ಲಿ ಭಾಷಣ ಮಾಡಲಿದ್ದಾರೆ. ಕೆರಬಿ ಯಾನ್​ ರಾಷ್ಟ್ರಗಳಿಗೆ ರಾಷ್ಟ್ರಪತಿಗಳು ಮೊದಲ ಬಾರಿಗೆ ಭೇಟಿ ನೀಡುತ್ತಿದ್ದಾರೆ.

ಭಾರತ ಮತ್ತು ಜಮೈಕಾ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 60 ನೇ ವಾರ್ಷಿಕೋತ್ಸವ 2022 ಆಗಿರುವುದರಿಂದ ಈ ಭೇಟಿಯು ಮಹತ್ವದ ಮೈಲಿ ಗಲ್ಲಾಗಿದೆ. ಕೋವಿಂದ್ ಅವರು ಇದೇ ತಿಂಗಳ 18 ರಿಂದ 21 ರವರೆಗೆ ಸೇಂಟ್ ವಿನ್ಸೆಂಟ್ & ಗ್ರೆನಡೈನ್ಸ್ (SVG) ಗೆ ಭೇಟಿ ನೀಡಲಿದ್ದಾರೆ ಮತ್ತು ಅಲ್ಲಿನ ಗವರ್ನರ್ ಜನರಲ್ ಸುಸಾನ್ ಡೌಗನ್ ಅವರೊಂದಿಗೆ ಚರ್ಚೆ ನಡೆಸಲಿದ್ದಾರೆ.

ರಾಷ್ಟ್ರಪತಿ ಕೋವಿಂದ್ ಅವರು ದ್ವೀಪ ರಾಷ್ಟ್ರದಲ್ಲಿರುವ ಮಹತ್ವದ ಭಾರತೀಯ ಸಮುದಾಯದೊಂದಿಗೆ ಸಂವಾದ ನಡೆಸಲಿದ್ದಾರೆ.