Saturday, 26th October 2024

ಮನೆಯಲ್ಲಿಯೇ ರಂಜಾನ್ ಆಚರಿಸಿ

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಇದೇ ತಿಂಗಳ 25ರಿಂದ ಪವಿತ್ರ ರಂಜಾನ್ ಆರಂಭವಾಗಲಿದೆ. ಆದರೆ ಕೋವಿಡ್-19 ಸೋಂಕು ಭೀತಿ ಇರುವ ಕಾರಣ ಈ ಬಾರಿ ರಂಜಾನ್ ತಿಂಗಳಲ್ಲಿ ಯಾರೂ ಮಸೀದಿಗೆ ಹೋಗಬಾರದು. ಅದಲ್ಲದೆ ಯಾರೂ ಇಫ್ತಿಯಾರ್ ಕೂಟ ಆಯೋಜನೆ ಮಾಡಬಾರದು ಎಂದು ರಾಜ್ಯ ವಕ್ಫ್ ಬೋರ್ಡ್ ಸೂಚನೆ ನೀಡಿದೆ.
ವಕ್ಫ್ ಬೋರ್ಡ್ ಅಧ್ಯಕ್ಷ ಮೊಹಮ್ಮದ್ ಯೂಸುಫ್ ಮತ್ತು ಕಾರ್ಯದರ್ಶಿ ಇಬ್ರಾಹಿಂ ಅವರು ಸುದ್ದಿಗೋಷ್ಠಿಯನ್ನು ನಡೆಸಿ ಮಾಹಿತಿ ನೀಡಿದರು. ಈ ಬಾರಿ ನಿಮ್ಮ ನಿಮ್ಮ ಮನೆಗಳಲ್ಲಿ ರಂಜಾನ್ ಆಚರಣೆ ಮಾಡಿ. ಸಾಮೂಹಿಕವಾಗಿ ಸೇರಿ ಅನಾಹುತ ಮಾಡುವುದು ಬೇಡ. ರಂಜಾನ್ ಸಮಯದಲ್ಲಿ ಬಡವರಿಗೆ ಸಹಾಯ ಮಾಡುವಾಗ ಜನ ಸೇರುವುದು ಬೇಡ. ಬರೀ ಮುಸ್ಲಿಮರಿಗೆ ಅಷ್ಟೇ ಅಲ್ಲ ಇತರ ಸಮುದಾಯಗಳಿಗೂ ಸಹಾಯ ಮಾಡಿ. ಇದು ಅಲ್ಲಾಗೆ ಇಷ್ಟವಾಗುತ್ತದೆ ಎಂದು ಅಧ್ಯಕ್ಷ  ಮೊಹಮ್ಮದ್ ಯೂಸುಫ್ ಹೇಳಿದರು.
ಕೇಂದ್ರ ಮತ್ತು ರಾಜ್ಯ ಸರಕಾರದ ಸೂಚನೆಗಳನ್ನ ಕಟ್ಟುನಿಟ್ಟಾಗಿ ಪಾಲಿಸಬೇಕು. ಎಲ್ಲ ವಿಚಾರಕ್ಕಿಂತಲೂ ಜೀವ ಮುಖ್ಯ. ದರ್ಗಾ ಮತ್ತು ಮಸೀದಿ ಹೋಗುವುದು ಮುಖ್ಯ ಅಲ್ಲ. ನಿಮ್ಮ ಜೀವ ಉಳಿಸಿಕೊಳ್ಳುವುದು ಬಹಳ ಮುಖ್ಯ. ಸಮಾಜ ಇದನ್ನ ಮುಖ್ಯವಾಗಿ ಪರಿಗಣಿಸಬೇಕು. ಸರ್ಕಾರದ ಆದೇಶಗಳನ್ನ ಯಥಾವತ್ತಾಗಿ ಪಾಲಿಸಬೇಕು ಅಂತ ವಾಕ್ಫ ಬೋರ್ಡ್ ಸೂಚನೆ ನೀಡಿದೆ ಎಂದರು.
ಪ್ರಾರ್ಥನೆ ಮಾಡುವಾಗ ನಾಲ್ಕರಿಂದ ಐದು  ಜನ ಮಾತ್ರ ಮಸೀದಿಯಲ್ಲಿ ಇರಿ ಮಸೀದಿಯಲ್ಲಿದ್ದು ಖುರಾನ್ ಓದುವವರು ಪ್ರಾರ್ಥನೆ ಮಾಡಲಿ. ಲಾಕ್ ಡೌನ್ ಮುಗಿಯುವವರೆಗೂ ಅಂದರೆ ಮೇ 3 ವರೆಗೂ ಇದು ಅನ್ವಯವಾಗುತ್ತದೆ. ಸರ್ಕಾರ ಮುಂದಿನ ಕ್ರಮ ನೋಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಯೂಸುಫ್ ಹೇಳಿದರು.
ತಬ್ಲಿಘ್ ಜಮಾತ್ ಬಗ್ಗೆ ತಪ್ಪು ಸಂದೇಶ ರವಾನೆ ಮಾಡಬೇಡಿ. 2015ರಲ್ಲಿ ನಿಜಾಮುದ್ದಿನ್ ನಿಂದ ಅದು ವಿಭಾಗವಾಗಿದೆ. ಅವರು ಮುಸ್ಲಿಂರಿಂದ ದೂರವಾಗಿದ್ದಾರೆ. ಜಮಾತ್ ಗೂ ವಾಕ್ಫ ಬೋರ್ಡ್ ಗೂ ಸಂಬಂಧವಿಲ್ಲ. ಯಾರು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸಮಾವೇಶ ಮಾಡಿದ್ದರೋ ಅವರ ವಿರುದ್ಧ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿ ಎಂದರು.
ಸೋಂಕಿನ ಕುರಿತಾದ ಬಗ್ಗೆ ಜಾಗೃತಿ ಮೂಡಿಸಲು ಮಸೀದಿಯಲ್ಲಿ ಮೈಕ್ ಬಳಸಬಹುದು. ನಾಲ್ಕು ಬಾರಿ ಮಾತ್ರ ಅನೌನ್ಸ್ ಮಾಡಬೇಕು. ತಬ್ಲಿಘ್ ಗಳು ರಾಜ್ಯದಿಂದ ಹೋಗಿದ್ದು 698 ಮಂದಿ ಅವರೆಲ್ಲರೂ ತಪಾಸಣೆ ಗೆ ಹೋಗಿದ್ದಾರೆ. 28 ಮಂದಿಗೆ ಮಾತ್ರ ಪಾಸಿಟಿವ್ ಬಂದಿದೆ. ಉಳಿದ ಎಲ್ಲರಿಗೂ ನೆಗಟಿವ್ ಬಂದಿದೆ. ತಪ್ಪು ಸಂದೇಶ ರವಾನೆ ಮಾಡಬೇಡಿ. ಈ ಸಂದರ್ಭದಲ್ಲಿ ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತರು ಅಂತ ಭೇದಭಾವ ಬೇಡ ಎಂದು ಕಾರ್ಯದರ್ಶಿ ಇಬ್ರಾಹಿಂ ಹೇಳಿದರು.