Thursday, 12th December 2024

ಸುಯೋಗ್ ಡಯಾಬಿಟಿಕ್‌ ಹೆಲ್ತ್ ಕ್ಲಬ್‌

ಸ್ವಾಸ್ಥ್ಯ ಸಂಪದ

ಡಾ.ಎಸ್.ಪಿ.ಯೋಗಣ್ಣ

Yoganna55@gmail.com

ಈಗಾಗಲೇ ಸಕ್ಕರೆ ಕಾಯಿಲೆ ಇದ್ದು ಚಿಕಿತ್ಸೆ ಪಡೆಯುತ್ತಿರುವ ಶೇ.27ರಷ್ಟು ಮಂದಿಯಲ್ಲಿ ಮಾತ್ರ ಸಕ್ಕರೆ ಕಾಯಿಲೆ ಸದಾಕಾಲ ನಿಯಂತ್ರಣವಿರುವುದಾಗಿ,
ಇನ್ನುಳಿದ ಶೇ.73ರಷ್ಟು ರೋಗಿಗಳಲ್ಲಿ ಸಕ್ಕರೆ ಕಾಯಿಲೆ ನಿಯಂತ್ರಣವಿಲ್ಲದಿರುವ ಆತಂಕಕಾರಿ ಅಂಶ ಸಂಶೋಧನೆಗಳಿಂದ ದೃಢಪಟ್ಟಿರುತ್ತದೆ.

ಸಕ್ಕರೆ ಕಾಯಿಲೆ ಪ್ರಪಂಚಾದ್ಯಂತ ವ್ಯಾಪಕವಾಗಿ ಲಿಂಗಭೇದ, ಭೌಗೋಳಿಕ ಭೇದ, ಬಡವ ಶ್ರೀಮಂತ ಎನ್ನದೆ ಎಲ್ಲ ವರ್ಗದವರಲ್ಲೂ ಕಾಣಿಸಿಕೊಳ್ಳುತ್ತಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಚೀನಾದಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳು ತ್ತಿದ್ದು, ಚೀನಾ ಸಕ್ಕರೆ ಕಾಯಿಲೆಯ ಅಂತಾರಾಷ್ಟ್ರೀಯ ಮಟ್ಟದ  ರಾಜಧಾನಿ ಯಾಗಿದೆ.

ಭಾರತ ಎರಡನೇ ಸ್ಥಾನದಲ್ಲಿದ್ದು, 62 ಮಿಲಿಯನ್‌ಗಿಂತಲೂ ಹೆಚ್ಚು ಜನ ಅಂದರೆ ವಯಸ್ಕ ಜನಸಂಖ್ಯೆಯ ಶೇ.7.2ರಷ್ಟು ಜನರು ಪ್ರಸ್ತುತ ಸಕ್ಕರೆ ಕಾಯಿಲೆ ಗೀಡಾಗಿದ್ದಾರೆ. ಯುವಕ ಮತ್ತು ಮಧ್ಯಮ ವಯಸ್ಕರಲ್ಲಿ ಶೇ. 6.7ರಷ್ಟು ಈ ಕಾಯಿಲೆಯಿಂದ ನರಳುತ್ತಿದ್ದಾರೆ. ಸಕ್ಕರೆ ಕಾಯಿಲೆ ಇನ್ನೂ ವ್ಯಕ್ತವಾಗದೆ ಮುಂದಿನ ದಿನಗಳಲ್ಲಿ ವ್ಯಕ್ತವಾಗುವ ಸಕ್ಕರೆ ಕಾಯಿಲೆಯ ಪೂರ್ವಸ್ಥಿತಿ ಶೇ. 6.7ರಷ್ಟು ಜನರಲ್ಲಿದೆ. ಈ ಅಂಕಿಅಂಶಗಳಿಂದ ಮುಂದಿನ ದಿನಗಳಲ್ಲಿ ಸಕ್ಕರೆ ಕಾಯಿಲೆ ಸರ್ವವ್ಯಾಪಿಯಾಗುವ ಎಲ್ಲ ಸಾಧ್ಯತೆಗಳು ಗೋಚರವಾಗುತ್ತಿವೆ.

ಸಕ್ಕರೆ ಕಾಯಿಲೆ ವಂಶವಾಹಿಗಳ ನ್ಯೂನತೆಯಿಂದುಂಟಾಗುವ, ಶಕ್ತಿದಾಯಕ ಗ್ಲುಕೋಸ್ ಚಯಾಪಚಯ ಕ್ರಿಯೆ ಯ(ಮೆಟಬಾಲಿಸಂ)ಅವ್ಯವಸ್ಥೆ. ಈ ನ್ಯೂನತೆಯಿಂದಾಗಿ ದೇಹದ ಪ್ಯಾಂಕ್ರಿಯಾಸ್ ಗ್ರಂಥಿಯಲ್ಲಿ ಇನ್ಸ್ಯುಲಿನ್ ಉತ್ಪತ್ತಿಯಾಗದೆ ಅಥವಾ ಉತ್ಪತ್ತಿಯಾದರೂ ಅದರ ಕಾರ್ಯದ ಕ್ಷಮತೆ ಕುಗ್ಗುವು ದರಿಂದ ಗ್ಲುಕೋಸ್ ರಕ್ತದಿಂದ ಜೀವಕೋಶಗಳಿಗೆ ವರ್ಗಾವಣೆಯಾಗದೆ ರಕ್ತ ಗ್ಲುಕೋಸ್ ಏರಿಕೆಯುಂಟಾಗುತ್ತದೆ. ಈ ಸ್ಥಿತಿ ಮೌನವಾಗಿದ್ದು, ಹೃದಯ, ಮೆದುಳು, ಮೂತ್ರಜನಕಾಂಗ, ಕಣ್ಣು ಇತ್ಯಾದಿ ಎಲ್ಲಾ ಅಂಗಗಳು ಕಾಯಿಲೆಗೀಡಾಗುವವರೆವಿಗೂ ಸಕ್ಕರೆ ಕಾಯಿಲೆಯ ಯಾವ ಲಕ್ಷಣಗಳೂ ಕಂಡು ಬಾರದ ಸಾಧ್ಯತೆ ಇರುವುದರಿಂದ ಇದನ್ನು ‘ಮೌನ ಕೊಲೆಗಡುಕ’ ಎನ್ನಲಾಗುತ್ತದೆ.

ಕೆಲವರಲ್ಲಿ ದಿಢೀರ್ ಸಾವೇ ಪ್ರಥಮ ರೋಗಲಕ್ಷಣವಾಗಬಹುದು. ಈ ಕಾರಣ ದಿಂದಾಗಿ ಸಕ್ಕರೆ ಕಾಯಿಲೆಯನ್ನು ಪ್ರಾರಂಭಿಕ ಹಂತದಲ್ಲಿ ಗುರುತಿಸಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದು ಅತ್ಯವಶ್ಯಕ. ಸಕ್ಕರೆ ಕಾಯಿಲೆ ರಕ್ತ ಗ್ಲುಕೋಸ್ ಏರಿಕೆ ಸ್ಥಿತಿ ವ್ಯಕ್ತವಾಗುವ ಸುಮಾರು ಹತ್ತು ವರ್ಷಗಳ ಹಿಂದೆಯೇ ರಕ್ತದಲ್ಲಿ ಅತ್ಯಲ್ಪ ಪ್ರಮಾಣ ದಲ್ಲಿ ಗ್ಲುಕೋಸ್ ಸಹಿಷ್ಣತೆಯ ಅವ್ಯವಸ್ಥೆ ಕಂಡುಬರುತ್ತದೆ. ತದ ನಂತರ ದೀರ್ಘಾವಽಯಲ್ಲಿ ಹಂತಹಂತವಾಗಿ ಕಾಯಿಲೆ ಮೇಲೇರಿ ರೋಗಲಕ್ಷಣಗಳು ವ್ಯಕ್ತವಾಗುತ್ತವೆ. ಈ ಸ್ಥಿತಿಯನ್ನು ‘ಸಕ್ಕರೆ ಕಾಯಿಲೆಯ ಪೂರ್ವಭಾವಿ ಸ್ಥಿತಿ’ ಎನ್ನಲಾಗುತ್ತದೆ.

ಈ ಹಂತದಲ್ಲಿಯೇ ಎಚ್ಚರಿಕೆ ವಹಿಸಿ ಜೀವನ ಶೈಲಿಯನ್ನು ಮಾರ್ಪಾಡು ಮಾಡಿಕೊಳ್ಳುವುದರಿಂದಲೇ ಯಾವ ಔಷಧಗಳೂ ಇಲ್ಲದೆ, ವಂಶವಾಹಿ ಅವ್ಯವಸ್ಥೆ
ಇದ್ದರೂ ಕಾಯಿಲೆ ವ್ಯಕ್ತವಾಗದಂತೆ ತಡೆಗಟ್ಟಬಹುದು. ಈ ಹಂತದ ಸಾಧ್ಯತೆ ಇರುವವರಲ್ಲಿ ಅಂದರೆ ಸಕ್ಕರೆ ಕಾಯಿಲೆಯ ವಂಶಪಾರಂಪರ್ಯದ ಮಾಹಿತಿ ಇರುವವರಲ್ಲಿ ಗ್ಲುಕೋಸ್ ಸಹಿಷ್ಣತೆ ಪರೀಕ್ಷೆ (ಜಿಟಿಟಿ) ಮಾಡುವುದರಿಂದ ಇದನ್ನು ಪತ್ತೆಮಾಡಿಕೊಳ್ಳಬಹುದು.

ಈಗಾಗಲೇ ಸಕ್ಕರೆ ಕಾಯಿಲೆ ಇದ್ದು ಚಿಕಿತ್ಸೆ ಪಡೆಯುತ್ತಿರುವ ಶೇ.27ರಷ್ಟು ಮಂದಿಯಲ್ಲಿ ಮಾತ್ರ ಸಕ್ಕರೆ ಕಾಯಿಲೆ ಸದಾಕಾಲ ನಿಯಂತ್ರಣವಿರುವುದಾಗಿ, ಇನ್ನುಳಿದ ಶೇ. 73ರಷ್ಟು ರೋಗಿಗಳಲ್ಲಿ ಸಕ್ಕರೆ ಕಾಯಿಲೆ ನಿಯಂತ್ರಣವಿಲ್ಲದಿರುವ ಆತಂಕಕಾರಿ ಅಂಶ ಸಂಶೋಧನೆಗಳಿಂದ ದೃಢಪಟ್ಟಿರುತ್ತದೆ. ವೈದ್ಯರು ಸಲಹೆ ಮಾಡಲಾದ ಔಷಧಗಳನ್ನು ಸೇವಿಸುತ್ತಿದ್ದೇನೆ, ಕಾಯಿಲೆ ನಿಯಂತ್ರಣದಲ್ಲಿದೆ ಎಂದು ಬಹುಪಾಲು ರೋಗಿಗಳು ಭಾವಿಸಿ ಉದಾಸೀನ ಮಾಡುವುದು ಇದಕ್ಕೆ ಪ್ರಮುಖ ಕಾರಣ. ಸಕ್ಕರೆ ಕಾಯಿಲೆಯ ನಿರಂತರ ನಿಯಂತ್ರಣ ಕ್ಷಣಕ್ಷಣವೂ ರಕ್ತ ಗ್ಲುಕೋಸ್ ಪ್ರಮಾಣ ಸಹಜವಾಗಿದ್ದಲ್ಲಿ ಮಾತ್ರ ಸಾಧ್ಯ. 3 ತಿಂಗಳಿಗೊಮ್ಮೆ ಪರೀಕ್ಷಿಸುವ ಹೆಚ್‌ಬಿಎ೧ಸಿ ಶೇ. 7ರಷ್ಟಿರುವುದು ಸಕ್ಕರೆ ಕಾಯಿಲೆಯ ನಿರಂತರ ನಿಯಂತ್ರಣವನ್ನು ದೃಢೀಕರಿಸುತ್ತದೆ.

ಸಕ್ಕರೆ ಕಾಯಿಲೆಯ ನಿರಂತರ ನಿಯಂತ್ರಣ ಔಷಧಗಳೊಂದರಿಂದಲೇ ಖಂಡಿತ ಸಾಧ್ಯವಿಲ್ಲ. ಕಾಯಿಲೆಗೆ ಕಾರಣ ಮತ್ತು ಅವುಗಳ ನಿಯಂತ್ರಣದ ಬಗ್ಗೆ ರೋಗಿಗೆ ಅರಿವು ಮಾಡಿಕೊಡುವುದು ಅತ್ಯವಶ್ಯಕ. ಸಮತೋಲನ ಆಹಾರ, ವ್ಯಾಯಾಮ, ಸಂತೃಪ್ತಿಯ ಬದುಕು, ಧೂಮಪಾನ ಮತ್ತು ಮದ್ಯಪಾನ ರಹಿತ ಬದುಕು, ದೇಹದ ತೂಕ ನಿಯಂತ್ರಣ, ದೈನಂದಿನ ಕ್ರಿಯಾಶೀಲತೆ ಇವೆಲ್ಲವುಗಳನ್ನೊಳಗೊಂಡ ದೈನಂದಿನ ಜೀವನ ಶೈಲಿಯಿಂದ, ವಂಶವಾಹಿ ಅವ್ಯವಸ್ಥೆಯ ನ್ಯೂನತೆ ಯಿದ್ದರೂ ಕಾಯಿಲೆಯನ್ನು ಪ್ರಾರಂಭದಲ್ಲಿಯೇ ತಡೆಗಟ್ಟಬಹುದು ಮತ್ತು ವ್ಯಕ್ತವಾಗಿರುವ ಕಾಯಿಲೆಯನ್ನು ನಿರಂತರವಾಗಿ ನಿಯಂತ್ರಿಸಬಹುದು. ಜೀವನ ಶೈಲಿಯ ವಿಧಾನಗಳಿಂದ ನಿಯಂತ್ರಣಕ್ಕೆ ಬಾರದಿದ್ದಲ್ಲಿ ಮತ್ತು ತುರ್ತು ಸಂದರ್ಭಗಳಲ್ಲಿ ಮಾತ್ರ ಔಷಧಗಳನ್ನು ಜೀವನ ಶೈಲಿಯ ಜತೆಗೆ ಜತೆಗೂಡಿ ಸುವುದು ಅತ್ಯವಶ್ಯಕ.

ವೈದ್ಯ ಮತ್ತು ರೋಗಿಯ ಸಂಬಂಧ ಇಂದು ದಿನೇ ದಿನೇ ಕ್ಷೀಣಿಸುತ್ತಿದೆ. ಅತೀವ ರೋಗಿಗಳ ಸಂಖ್ಯೆ ಒತ್ತಡದಿಂದಾಗಿ ವೈದ್ಯರುಗಳಿಗೆ ರೋಗಿಗಳೊಡನೆ ಹೆಚ್ಚು
ಸಮಯ ಕಳೆದು ಕಾಯಿಲೆಯ ಬಗ್ಗೆ ಅರಿವು ಮೂಡಿಸುವ ಕೆಲಸ ಆಗುತ್ತಿಲ್ಲ. ನಿರಂತರವಾಗಿ ರೋಗಿಗೆ ತರಬೇತಿ ನೀಡಿ ಮನವರಿಕೆ ಮಾಡಿಕೊಡಬೇಕು. ಒಮ್ಮೆಲೆ
ಇವೆಲ್ಲವುಗಳನ್ನು ರೋಗಿಗೆ ಮನವರಿಕೆ ಮಾಡಿಕೊಡುವುದೂ ಸಹ ಸುಲಭದ ಮಾತಲ್ಲ. ನನ್ನ 40ವರ್ಷಗಳ ವೃತ್ತಿ ಅನುಭವದ ಆಧಾರದ ಮೇಲೆ ಮನಗಂಡಿರುವ
ಪ್ರಮುಖ ವಿಷಯವೆಂದರೆ ಸಕ್ಕರೆ ಕಾಯಿಲೆಯ ರೋಗಿಯನ್ನು ಕಾಯಿಲೆ ಬಗ್ಗೆ ವಿಚಾರಶೀಲರನ್ನಾಗಿ ಮಾಡಿ, ಜೀವನಶೈಲಿಯನ್ನು ಬದಲಿಸದ ಹೊರತು ಕಾಯಿಲೆಯ ನಿಯಂತ್ರಣ ಅಸಾಧ್ಯ.

ಆಧುನಿಕ ಜೀವನಶೈಲಿ ಸಕ್ಕರೆ ಕಾಯಿಲೆಯ ಉಗಮಕ್ಕೆ ಪ್ರಮುಖ ಕಾರಣವಾಗಿದೆ. ಆದುದರಿಂದ ಸಕ್ಕರೆ ಕಾಯಿಲೆ ರೋಗಿಗಳನ್ನು ಒಂದೆಡೆ ಸೇರಿಸಿ ನಿರಂತರ ವಾಗಿ ಅವರುಗಳಿಗೆ ಕಾಯಿಲೆ ಬಗ್ಗೆ, ರಕ್ತ ಪರೀಕ್ಷೆ, ಸಂಭವಿಸಬಹುದಾದ ಅವಘಡಗಳ ಬಗ್ಗೆ ಮಾಹಿತಿ ನೀಡುವುದು ಅತ್ಯವಶ್ಯಕ.

ಸುಯೋಗ್ ಡಯಾಬಿಟಿಕ್ಸ್ ಹೆಲ್ತ್ ಕ್ಲಬ್: ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ಸುಯೋಗ್ ಆಸ್ಪತ್ರೆಯಲ್ಲಿ ಸಕ್ಕರೆ ಕಾಯಿಲೆ ಬಗ್ಗೆ ಅರಿವು ಮೂಡಿಸಲು ‘ಸುಯೋಗ್ ಡಯಾಬಿಟಿಕ್ಸ್ ಹೆಲ್ತ್ ಕ್ಲಬ್’ ಎಂಬ ಸಕ್ಕರೆ ಕಾಯಿಲೆ ರೋಗಿಗಳ ನೋಂದಾಯಿತ ಸಂಘವನ್ನು 2019ರಲ್ಲಿ ಪ್ರಾರಂಭಿಸಲಾಗಿದೆ. ಹಾಲಿ ೫೦೦ಕ್ಕೂ ಹೆಚ್ಚುಮಂದಿ ಸಕ್ಕರೆ ಕಾಯಿಲೆ ರೋಗಿಗಳು ಇದರ ಸದಸ್ಯರಾಗಿದ್ದು, ಅವರುಗಳೇ ಆಯ್ಕೆ ಮಾಡಿಕೊಂಡ ಚುನಾಯಿತ ಮಂಡಳಿಯೊಂದು ಸಂಘದ ಧ್ಯೇಯೋ ದ್ದೇಶಗಳನ್ನು ನಿರ್ವಹಿಸುತ್ತಿದೆ.

ತಿಂಗಳಿಗೊಮ್ಮೆ ವೈದ್ಯರ ನೇತೃತ್ವದಲ್ಲಿ ರೋಗಿಗಳು ಸಭೆ ಸೇರಿ ಅವರವರ ಸಮಸ್ಯೆಗಳನ್ನು ವೈದ್ಯರುಗಳೊಂದಿಗೆ ಚರ್ಚಿಸುತ್ತಾರೆ. ಸಕ್ಕರೆ ಕಾಯಿಲೆಯ ತಜ್ಞರಲ್ಲದೆ ಹೃದ್ರೋಗ, ಮೂತ್ರಜನಕಾಂಗ, ನರರೋಗ ತಜ್ಞರುಗಳೂ ಸಹ ಈ ಸಭೆಯಲ್ಲಿ ಭಾಗವಹಿಸಿ ರೋಗಿಗಳ ಅನುಮಾನಗಳನ್ನು ಪರಿಹರಿಸುತ್ತಾರೆ. ಜೀವನ ಶೈಲಿಯ ಬಗ್ಗೆ, ಔಷಧಗಳ ಬಗ್ಗೆ, ಆಹಾರದ ಬಗ್ಗೆ, ಸಂಬಂಧಿಸಿದ ತಜ್ಞರಿಂದ ಉಪನ್ಯಾಸ, ವಿಚಾರ ಸಂಕಿರಣ, ಸಂವಾದಗಳನ್ನು ಏರ್ಪಡಿಸಲಾಗುತ್ತದೆ. ಸಕ್ಕರೆ ಕಾಯಿಲೆ ರೋಗಿಗಳು ಸೇವಿಸಬೇಕಾದ ಮಾದರಿ ಆಹಾರವನ್ನು ತಯಾರಿಸಿ ಆಸ್ಪತ್ರೆಯಲ್ಲಿಯೇ ಆಗಿಂದಾಗೆ ನೀಡಿ ಸಕ್ಕರೆ ಕಾಯಿಲೆಯವರು ಸೇವಿಸ
ಬೇಕಾದ ಆಹಾರದ ಮಾದರಿ ಬಗ್ಗೆ ಮನವರಿಕೆ ಮಾಡಿಕೊಡಲಾಗುತ್ತದೆ.

ಆಹಾರ ತಯಾರಿಕೆಯಲ್ಲಿ ಕುಟುಂಬಸ್ಥರ ಪಾತ್ರವೂ ಬಹುಮುಖ್ಯವಾದುದರಿಂದ ಇಂತಹ ಸಭೆಗಳಿಗೆ ಕುಟುಂಬಸ್ಥರನ್ನೂ ಕೂಡ ಆಹ್ವಾನಿಸಿ ಅಡಿಗೆ ಮಾಡುವ ವಿಧಿ ವಿಧಾನಗಳನ್ನು ಅವರಿಗೆ ಮನವರಿಕೆ ಮಾಡಿಕೊಡಲಾಗುತ್ತದೆ. ಆಗಿಂದಾಗ್ಗೆ ರಕ್ತ ಗ್ಲುಕೋಸ್ ಅಳೆದುಕೊಳ್ಳುವುದು ಅತಿಮುಖ್ಯ. ಸಂಘದಿಂದ ರಿಯಾಯಿತಿ
ಬೆಲೆಯಲ್ಲಿ ಗ್ಲುಕೊಮೀಟರ್ ಮತ್ತು ಸ್ಟ್ರಿಪ್‌ಗಳನ್ನು ಪ್ರತಿ ಸದಸ್ಯರಿಗೂ ನೀಡಿ ಅವರವರೇ ರಕ್ತ ಗ್ಲುಕೋಸ್ ಅನ್ನು ಅಳತೆ ಮಾಡಿಕೊಳ್ಳುವ ಬಗ್ಗೆ ತರಬೇತಿ ನೀಡಲಾ ಗುತ್ತದೆ. ಸದಸ್ಯರುಗಳ ವಾಟ್ಸಾಪ್ ಗ್ರುಪ್ ಒಂದನ್ನು ರಚಿಸಿದ್ದು, ಅವರವರ ರಕ್ತ ಗ್ಲುಕೋಸ್ ಪ್ರಮಾಣವನ್ನು ವಾಟ್ಸಾಪ್‌ನಲ್ಲಿ ತಿಳಿಸಿದಲ್ಲಿ ತಜ್ಞ ವೈದ್ಯರು ಅದಕ್ಕನು ಗುಣವಾಗಿ ಅವರುಗಳಿಗೆ ಸಲಹೆ ನೀಡುತ್ತಾರೆ. ಇದು ರೋಗಿಗಳು ಅನಾವಶ್ಯಕವಾಗಿ ಸಣ್ಣ ಪುಟ್ಟ ಸಮಸ್ಯೆಗಳಿಗೆ ಆಸ್ಪತ್ರೆಗೆ ಬರುವುದನ್ನು ತಪ್ಪಿಸುತ್ತದೆ ಹಾಗೂ ತಕ್ಷಣ ಸಲಹೆ ಲಭಿಸುತ್ತದೆ. ನಿಯಂತ್ರಣಕ್ಕೆ ಬಾರದಿದದ್ದಲ್ಲಿ ಮಾತ್ರ ವೈದ್ಯರು ಮುಖಾಮುಖಿ ಪರೀಕ್ಷೆಗೆ ಸಲಹೆ ಮಾಡುತ್ತಾರೆ.

ರೋಗಿಗಳಿಗೆ ತರಬೇತಿ ಶಿಬಿರಗಳನ್ನು ಆಯೋಜಿಸಿ ಕಾರಣಗಳು, ಗಮನಿಸಬೇಕಾದ ಬದಲಾವಣೆಗಳು, ಸಕ್ಕರೆ ಕಾಯಿಲೆಯಿಂದಾಗುವ  ನರರೋಗ ಗಳು, ಹೃದ್ರೋಗಗಳು, ಮೂತ್ರಜನಕಾಂಗದ ಕಾಯಿಲೆಗಳು, ಕಣ್ಣಿನ ತೊಂದರೆಗಳು ಇತ್ಯಾದಿ ಗಳಲ್ಲಿ ಪ್ರಾರಂಭಿಕ ಹಂತದಲ್ಲಿಯೇ ಅವರವರೇ ಗುರುತಿಸಿಕೊಳ್ಳುವ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಚಿಕಿತ್ಸಾ ವೆಚ್ಚವನ್ನು ತಗ್ಗಿಸಲು ಸುಯೋಗ್ ಆಸ್ಪತ್ರೆಯಲ್ಲಿಯೇ ಜೆನರಿಕ್ ಔಷಧಗಳನ್ನು ವೈದ್ಯರೇ ಸಲಹೆಮಾಡಿ ವಿತರಿಸಲಾಗುತ್ತಿದೆ. ಗರ್ಭಿಣಿಯರಲ್ಲಿ ಕಂಡುಬರುವ ಸಕ್ಕರೆ ಕಾಯಿಲೆಗೆ ವಿಶೇಷ ಗಮನಕೊಟ್ಟು ಅರಿವು ಮೂಡಿಸಲಾಗುತ್ತಿದೆ.

ರೋಗಿಗಳು ತಮ್ಮ ತಮ್ಮ ಸಮಸ್ಯೆಗಳನ್ನು ಮಾಸಿಕ ಸಭೆಗಳಲ್ಲಿ ಅಥವಾ ವಾಟ್ಸಾಪ್ ಮೂಲಕ ವಿಚಾರ ವಿನಿಮಯ ಮಾಡಿಕೊಂಡು ಆತ್ಮವಿಶ್ವಾಸವನ್ನು ಹೆಚ್ಚಿಸಿ ಕೊಳ್ಳುತ್ತಾರೆ. ಸಂಘದ ಸದಸ್ಯರಾಗುವವರಿಗೆ ಆಸ್ಪತ್ರೆಯ ಎಲ್ಲ ಸೌಲಭ್ಯಗಳನ್ನು ಶೇ. 10 ರಿಯಾಯಿತಿಯನ್ನು ನೀಡಲಾಗುತ್ತಿದೆ. ಪ್ರತಿಯೊಬ್ಬ ಸದಸ್ಯರಿಗೂ ಅವಶ್ಯಕ ಮಾಹಿತಿಗಳನ್ನು ಮುದ್ರಿತ ರೂಪದಲ್ಲಿ ನೀಡಲಾಗುತ್ತದೆ. ಸದಸ್ಯ ರೋಗಿಗಳ ಸಭೆಗಳಲ್ಲಿ ಕಾಯಿಲೆ ಬಗ್ಗೆ ಉಪನ್ಯಾಸ ನೀಡುತ್ತಾರೆ. ಸಕ್ಕರೆ ಕಾಯಿಲೆ ಬಗ್ಗೆ 500ಕ್ಕೂ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿ ನಾನು ಬರೆದಿರುವ ‘ಸಕ್ಕರೆ ಕಾಯಿಲೆ ಪ್ರಶ್ನೋತ್ತರ’ ಎಂಬ ಕೃತಿಯನ್ನು ನೀಡಿ, ಅರಿವು ಮೂಡಿಸಲಾಗುತ್ತದೆ.

ಕ್ಲಬ್‌ನಿಂದ ಶಾಲೆ ಕಾಲೇಜುಗಳಲ್ಲಿ, ಪಾರ್ಕುಗಳಲ್ಲಿ, ಸಾರ್ವಜನಿಕ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸಕ್ಕರೆ ಕಾಯಿಲೆ ಬಗ್ಗೆ ಅರಿವು ಮೂಡಿಸಲು ರೋಗಿಗಳಿಂದ ಮತ್ತು ವೈದ್ಯರುಗಳಿಂದ ಉಪನ್ಯಾಸ, ಶಿಬಿರಗಳು ಇತ್ಯಾದಿ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಶ್ರೀಯುತ ನಂಜಪ್ಪ ಈ ಕ್ಲಬ್‌ನ ಅಧ್ಯಕ್ಷರಾಗಿ, ಹೆಚ್.ಎಸ್. ರಮೇಶ್‌ಚಂದ್ರ ಕಾರ್ಯಾಧ್ಯಕ್ಷರಾಗಿ, ಕೃಷ್ಣ ಕಾರ್ಯದರ್ಶಿಯಾಗಿ ಇವರುಗಳ ನೇತೃತ್ವದಲ್ಲಿ 25 ಮಂದಿ ಕಾರ್ಯಕಾರಿ ಮಂಡಳಿ ಇದೆ. ಸಂಘದ ಸದಸ್ಯತ್ವವನ್ನು ಪ್ರಾರಂಭದಲ್ಲಿ ಮೈಸೂರಿನಾದ್ಯಂತ ವಿಸ್ತರಿಸಿ, ತದನಂತರ ರಾಜ್ಯಾದ್ಯಂತ ಈ ಬಗೆಯ ಸಕ್ಕರೆ ಕಾಯಿಲೆ ರೋಗಿಗಳ ಕ್ಲಬ್ ಅನ್ನು ಸ್ಥಾಪಿಸಲು ಪ್ರೇರೇಪಿಸಲಾಗುವುದು. ನನಗೆ ತಿಳಿದಿರುವಂತೆ ಈ ಬಗೆಯ ಸಂಘ ಪ್ರಪಂಚದಲ್ಲಿಯೇ ಎಲ್ಲೂ ಇಲ್ಲ, ಇದೊಂದು ವಿನೂತನವಾದ ಪ್ರಥಮ ಪ್ರಯತ್ನವಾಗಿದೆ.
ಸಕ್ಕರೆ ಕಾಯಿಲೆಯ ವಂಶಪಾರಂಪರ್ಯ ಮಾಹಿತಿ ಇರುವ ಯುವಕರುಗಳ ಪ್ರತ್ಯೇಕ ಗುಂಪು ರಚಿಸಿ ಅವರುಗಳಿಗೆ ಮುಂದಿನ ದಿನಗಳಲ್ಲಿ ಕಾಯಿಲೆ ಬಾರ ದಂತೆಯೇ ಜೀವನಕ್ರಮಗಳನ್ನು ಅನುಸರಿಸುವ ಬಗ್ಗೆ ತರಬೇತಿಗಳನ್ನು ನೀಡುವ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಇದು ಸಕ್ಕರೆ ಕಾಯಿಲೆ ಬರುವ ಸಾಧ್ಯತೆ ಇರುವವರಲ್ಲಿ ಮುಂದೆ ಬಾರದಂತೆ ತಡೆಗಟ್ಟುವಲ್ಲಿ ಯಶಸ್ವಿಯಾಗಲಿದೆ. ‘ಸಾವಿಲ್ಲದ ವರ ಮನೆಯಿಂದ ಸಾಸುವೆ ತೆಗೆದು ಕೊಂಡು ಬಾ’ ಎಂಬ ನಾಣ್ಣುಡಿ ಇಂದು ‘ಸಕ್ಕರೆ ಕಾಯಿಲೆಯಿರದ ಮನೆಯಿಂದ ಸಾಸುವೆ ತೆಗೆದುಕೊಂಡು ಬಾ’ ಎಂಬಂತಾಗಿರುವುದು ಸಕ್ಕರೆ ಕಾಯಿಲೆಯ ತೀವ್ರತೆಯನ್ನು ಪ್ರತಿಬಿಂಬಿಸುತ್ತದೆ. ಸಕ್ಕರೆ ಕಾಯಿಲೆಯನ್ನು ನಿರಂತರವಾಗಿ ನಿಯಂತ್ರಿಸಲು ಈ ಬಗೆಯ ರೋಗಿಗಳ ಸಂಘಗಳು ಅತ್ಯವಶ್ಯಕವಿದ್ದು, ಸರಕಾರ, ಆಸ್ಪತ್ರೆಗಳು ಇವುಗಳನ್ನು ಸ್ಥಾಪಿಸುವ ಆಂದೋಲನವನ್ನು ಹಮ್ಮಿಕೊಳ್ಳಬೇಕು. ಸುಯೋಗ್ ಡಯಾಬಿಟಿಕ್ ಹೆಲ್ತ್ ಕ್ಲಬ್‌ಗೆ ಸದಸ್ಯರಾಗುವ ಆಸಕ್ತಿ ಇರುವವರು ೯೬೬೩೧೧೩೭೨೨, ೦೮೨೧ ೨೫೬೬೯೬೬ ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು.