Thursday, 21st November 2024

ಕಾಂಗ್ರೆಸ್ ಮುಕ್ತ ಕಲಬುರಗಿಗೆ ಶ್ರಮಿಸೋಣ: ಕಟೀಲ್

ನೂತನ ಜಿಲ್ಲಾ ಕಾರ್ಯಾಲಯ ಕಟ್ಟಡ ಶಿಲನ್ಯಾಸ, ಭೂಮಿ ಪೂಜೆ ಕಾರ್ಯಕ್ರಮ

ಕಲಬುರಗಿ: ಮುಂಬರುವ 2023ರ ವಿಧಾನ ಸಭೆ ಚುನಾವಣೆಯಲ್ಲಿ ಕಲಬುರಗಿ ಜಿಲ್ಲೆಯಲ್ಲಿ ಒಂಬತ್ತಕ್ಕೆ ಒಂಬತ್ತು ಸ್ಥಾನ ಗೆಲ್ಲುವ ಮೂಲಕ ಕಾಂಗ್ರೆಸ್ ಮುಕ್ತ ಕಲಬುರಗಿ ಮಾಡಿ ಪ್ರಿಯಾಂಕ್ ಖರ್ಗೆ ಅವರನ್ನು ಮನೆಗೆ ಕಳುಹಿಸಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ವಿಶ್ವಾಸ ವ್ಯಕ್ತಿಪಡಿಸಿದರು.

ನಗರದ ಹೊರವಲಯದ ಕೋಟನೂರ (ಡಿ) ಬಳಿ ಇರುವ ಸಿದ್ದಶ್ರೀ ಡಿವೈನ್ ಪ್ಯಾಲೇಸ್ ನಲ್ಲಿ ಹಮ್ಮಿಕೊಂಡಿದ್ದ ಬಿಜೆಪಿ ನೂತನ ಜಿಲ್ಲಾ ಕಾರ್ಯಾಲಯ ಕಟ್ಟಡ ಶಿಲಾನ್ಯಾಸ ಮತ್ತು ಭೂಮಿ ಪೂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಸ್ವಾತಂತ್ರ್ಯ ನಂತರದಲ್ಲಿ ಕಾಂಗ್ರೆಸ್ ಪಕ್ಷ ಸತತ 70 ವರ್ಷಗಳ ಕಾಲ ಅಧಿಕಾರ ನಡೆಸಿದೆ. ಆದರೆ, ಪ್ರಸ್ತುತ ಕಾಲಘಟ್ಟದಲ್ಲಿ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನ ದಲ್ಲಿರುವುದಕ್ಕೂ ನಾಲಾಯಕ್ ಆಗಿದೆ. ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವಾಗಿದ್ದು, ಅದರಂತೆ ಕಲಬುರಗಿ ಜಿಲ್ಲೆಯೂ ಸಹ ಕಾಂಗ್ರೆಸ್ ಮುಕ್ತ ಕಲಬುರಗಿ ಆಗಬೇಕೆಂದರೆ ಎಲ್ಲರೂ ಒಗ್ಗಟ್ಟಾಗಿ ಶ್ರಮಿಸಬೇಕು ಎಂದು ಕರೆ ನೀಡಿದರು.

ಪಂಚರಾಜ್ಯಗಳ ಚುನಾವಣೆ ಸೇರಿದಂತೆ ಉತ್ತರ ಪ್ರದೇಶದಲ್ಲಿ 2 ಅಂಕಿ ದಾಟಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯ ವಾಗಿಲ್ಲ. 70 ವರ್ಷಗಳಿಂದ ದೇಶವನ್ನಾಳಿದ ಕಾಂಗ್ರೆಸ್ ಪೋಷಿಸಿದ್ದು ಮಾತ್ರ ಭ್ರಷ್ಟಚಾರ, ಭಯೋತ್ಪಾದನೆ ಹಾಗೂ ಕುಟುಂಬ ರಾಜಕಾರಣ. ಕಾಂಗ್ರೆಸ್ ಪಕ್ಷದ ಇನ್ನೊಂದು ಹೆಸರು ಭ್ರಷ್ಟಚಾರವಾಗಿದೆ. ಭ್ರಷ್ಟಾಚಾರದ ಗಂಗೋತ್ರಿ ಕಾಂಗ್ರೆಸ್ ಎಂದು ಕಟೀಲ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದರು.

ಸದ್ಯ ಕಲಬುರಗಿ ಜಿಲ್ಲೆಯಲ್ಲಿ ನಿರ್ಮಾಣವಾಗುತ್ತಿರುವ ನೂತನ ಜಿಲ್ಲಾ ಕಾರ್ಯಲಯ ನಮ್ಮ ಕಾರ್ಯಕರ್ತರ ದೇವಸ್ಥಾನವಿದಂತೆ. ಕಾರ್ಯಲಯದಲ್ಲಿ ವಿಚಾರ ಹಾಗೂ ಸಿದ್ದಂತಾಗಳನ್ನು ಪೂಜಿಸುವ ಕೆಲಸವಾಗಬೇಕು. ಹೀಗಾಗಿ ಕಲಬುರಗಿ ಜಿಲ್ಲೆಯ ಪ್ರತಿಯೊಬ್ಬ ಕಾರ್ಯಕರ್ತರು ದೇಣಿಗೆ ನೀಡುತ್ತಾರೆ ಎಂಬ ನಂಬಿಕೆ ಇದೆ. ದುಡ್ಡು ಒಂದೇ ಅಲ್ಲದೇ, ಒಂದು ಕಲ್ಲು ಕೊಟ್ಟರು ಸಹ ಅದು ಕಾರ್ಯಲಯಕ್ಕೆ ಸಲ್ಲುತ್ತದೆ ಎಂದರು.

ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್ ಮಾತನಾಡಿ, ನಗರದಲ್ಲಿ ನಿರ್ಮಾಣವಾಗುವ ಪಕ್ಷದ ಕಾರ್ಯಾಲಯ ದೇವಸ್ಥಾನದ ಕೇಂದ್ರದಂತೆ ಕಾಣಬೇಕು. ಕಾರ್ಯಲಯ ಕೇವಲ ಕಲಬುರಗಿಗೆ ಸೀಮಿತವಾಗದೆ, ಇಡೀ ಕಲ್ಯಾಣ ಕರ್ನಾಟಕದ ಭಾಗದ ಕೇಂದ್ರ ಸ್ಥಾನವಾಗಿ ಮಾಡಲಾ ಗುವುದು ಎಂದರು.

ಇದಕ್ಕಿಂತ ಮೊದಲು ಕೆಲ ಪಕ್ಷಗಳು ತಮ್ಮ ಜಿಲ್ಲಾಕಚೇರಿಯನ್ನು ಸರಕಾರದಿಂದ ಸ್ಥಳ ಕಬಳಿಸಿ ಕಟ್ಟಿಸಿವೆ. ಆದರೆ ಬಿಜೆಪಿ ನಿವೇಶನ ಖರೀದಿಸಿ, ಕಾರ್ಯಕರ್ತರ ಹಣದಿಂದ ಕಚೇರಿ ಕಟ್ಟಡ ನಿರ್ಮಾಣ ಕಾರ್ಯ ಮಾಡುತ್ತಿದೆ. ಇದು ಕಾರ್ಯಕರ್ತರ ದೇವಸ್ಥಾನವಾಗಿದೆ. ಇದಕ್ಕೆ ಬೇಕಾದ ಎಲ್ಲಸಹಕಾರ ನೀಡುವೆ ಎಂದರು.

ಜಿಲ್ಲಾ ಕಾರ್ಯಾಲಯ ಕಟ್ಟಡದ ರಾಜ್ಯ ಸಂಚಾಲಕ ಅಮರನಾಥ ಪಾಟೀಲ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ನಗರ ಘಟಕ ಅಧ್ಯಕ್ಷ ಸಿದ್ದಾಜಿ ಪಾಟೀಲ್ ಸ್ವಾಗತಿಸಿದರು.

ಈ ವೇಳೆ ಕೆ.ಕೆ.ಆರ್.ಟಿ.ಸಿ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೇಲ್ಕೂರ್, ರಾಜ್ಯ ಉಪಾಧ್ಯಕ್ಷ ಮಾಲಿಕಯ್ಯ ಗುತ್ತೇದಾರ್, ಗ್ರಾಮಾಂತರ ಘಟಕ ಜಿಲ್ಲಾ ಅಧ್ಯಕ್ಷ ಶಿವರಾಜ್ ಪಾಟೀಲ್ ರದ್ದೇವಾಡಗಿ, ವಿಧಾನ ಪರಿಷತ್ ಸದಸ್ಯರಾದ ಡಾ. ಬಿ. ಜಿ ಪಾಟೀಲ್, ಶಶೀಲ್ ಜಿ. ನಮೋಶಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ಬಸವರಾಜ ಮತ್ತಿಮಡು, ಡಾ. ಅವಿನಾಶ್ ಜಾಧವ್, ವಿಧಾನ ಪರಿಷತ್ ಸದಸ್ಯರಾದ ಡಾ. ಬಿ.ಜಿ.ಪಾಟೀಲ್, ಶಶಿಲ್ ನಮೋಶಿ, ಸಾಬಣ್ಣ ತಳವಾರ್, ಕ್ರೆಡಲ್ ಅಧ್ಯಕ್ಷ ಚಂದು ಪಾಟೀಲ್, ಮಾಜಿ ಶಾಸಕ ದೊಡ್ಡಪ್ಪಗೌಡಪಾಟೀಲ್, ಹರ್ಷಾನಂದ ಗುತ್ತೇದಾರ ಸೇರಿದಂತೆ ವಿವಿಧ ಮಂಡಲ, ಪ್ರಕೋಷ್ಠಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

***

ಭಾರತ ಜಗತ್ತಿನಲ್ಲೇ ಅತಿದೊಡ್ಡ ಪ್ರಜಾಪ್ರಭುತ್ವ ಹೊಂದಿರುವ ದೇಶವಾಗಿದ್ದು, ಅಂತಹ ದೊಡ್ಡ ದೇಶದ ಜನರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಅಪಾರ ವಿಶ್ವಾಸ ಇಟ್ಟಿದ್ದು, ದೇಶದ ಅಭಿವೃದ್ಧಿಗೆ ಇದು ಪೂರಕವಾಗಲಿದೆ. ಮುಂಬರುವ ಯಾವುದೇ ಚುನಾವಣೆ ಇದ್ದರು ಸಹ ಎಲ್ಲರೂ ಒಗ್ಗಟ್ಟಿನಿಂದ ಎದುರಿಸೋಣ. ಬಿಜೆಪಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ಎಲ್ಲರೂ ಶ್ರಮಿಸಬೇಕು.
ಡಾ. ಉಮೇಶ್ ಜಾಧವ
ಕಲಬುರಗಿ ಸಂಸದ

***

ಜಿಲ್ಲಾ ಕಾರ್ಯಾಲಯ ಕಟ್ಟಡಕ್ಕೆ ಶಾಸಕರಿಂದ ತಲಾ 25 ಲಕ್ಷ ದೇಣಿಗೆ:

ಶಿಲಾನ್ಯಾಸ ಸಮಾರಂಭದಲ್ಲಿವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ್‌ 25 ಲಕ್ಷ ರೂ. ಅವರು ಚೆಕ್‌ನ್ನು ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ್‌ ಸಮ್ಮುಖದಲ್ಲಿ ಜಿಲ್ಲಾಮುಖಂಡರಿಗೆ ಹಸ್ತಾಂತರಿಸಿದರು. ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ್‌ ತಾವು ಜಿಲ್ಲಾಕಟ್ಟಡ ನಿರ್ಮಾಣಕ್ಕೆ 5 ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಣೆ ಮಾಡಿದರು.

ನಂತರ ಕೆಕೆಆರ್‌ಟಿಸಿ ಅಧ್ಯಕ್ಷ ರಾಜಕುಮಾರ ಪಾಟೀಲ ತೆಲ್ಕೂರು 25 ಲಕ್ಷ ರೂ. ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್‌ ಅವರು ಸ್ವಂತ 25 ಲಕ್ಷ ಹಾಗೂ ಕಾರ್ಯಕರ್ತ 20 ಲಕ್ಷ ರೂ. ಸಂಗ್ರ ಮಾಡಿ ಕೊಡುವುದಾಗಿ ಹೇಳಿದರು. ಶಾಸಕರಾದ ಬಸವರಾಜ ಮತ್ತಿಮೂಡ, ಅವಿನಾಶ ಜಾಧವ್‌, ಎಂಎಲ್‌ಸಿ ಶಶೀಲ್‌ ನಮೋಶಿ 25 ಲಕ್ಷ ರೂ. ದೇಣಿಗೆ ನೀಡುವುದಾಗಿ ಕಾರ್ಯಕರ್ತರ ಸಮಾವೇಶದಲ್ಲಿವಾಗ್ದಾನ ನೀಡಿದರು. ಸುಭಾಷ ಗುತ್ತೇದಾರ್‌ ಗೈರು ಹಾಜರಿದ್ದ ಕಾರಣ ಅವರ ಮಗನಾದ ಜಿ.ಪಂ.ಮಾಜಿ ಸದಸ್ಯ ಹರ್ಷಾನಂದ ಗುತ್ತೇದಾರ್‌ ಅವರು 25 ಲಕ್ಷ ರೂ. ನೀಡುವುದಾಗಿ ಹೇಳಿದರು.