Friday, 22nd November 2024

ಬುದ್ಧನ ಚಿಂತನೆಗಳಿಂದ ಜಾಗತಿಕ ಸಮಸ್ಯೆ ಪರಿಹಾರ

ತುಮಕೂರು: ಮನುಷ್ಯ ಮಾನವೀಯತೆಯ ನೆಲೆಯಲ್ಲಿ ಮತ್ತು ನೈತಿಕ ಮೌಲ್ಯಗಳ ಅಡಿಯಲ್ಲಿ ಬದುಕನ್ನು ನಡೆಸದೆ ಸ್ವಾರ್ಥ, ಅಸೂಯೆ, ಅನ್ಯಾಯ, ಅಸಮಾನತೆಯ ಆಗರದ ನೆಲೆಯಾಗಿ ಜೀವನ ಸಾಗಿಸುತ್ತಿರುವುದರಿಂದ ಇವತ್ತು ಇಡೀ ಜಗತ್ತು ಅನೇಕ ಸಮಸ್ಯೆಗಳಿಂದ ಬಳಲುತ್ತಿದೆ. ಹಾಗೆಯೇ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಮುಂತಾದ ಕ್ಷೇತ್ರಗಳು ಸಂಪೂರ್ಣವಾಗಿ ಕಲುಷಿತಗೊಂಡು ಸಮಾಜದ ಪ್ರಗತಿಗೆ ಮಾರಕವೆನಿಸಿವೆ.ಹಾಗಾಗಿ ಬುದ್ಧನ ಚಿಂತನೆಗಳಿಂದ ಮಾತ್ರ ಜಗತ್ತಿನಲ್ಲಿ ಶಾಂತಿ ನೆಲೆಸಲು ಹಾಗೂ ಜಾಗತಿಕ ಸಮಸ್ಯೆಗಳು ಪರಿಹಾರವಾಗಲು ಸಾಧ್ಯ ಎಂದು ಆರ್ ಎನ್ ಎಸ್ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಡಿ.ಸಿ.ಚಿತ್ರಲಿಂಗಯ್ಯ ತಿಳಿಸಿದರು.

ನಗರದ ಬಿದುರು ಟ್ರಸ್ಟ್ ಮತ್ತು ಈಳ್ಳೇವು ಪ್ರಕಾಶನದ ಸಹಯೋಗದಲ್ಲಿ ಬುದ್ಧ ಜಯಂತಿ ಪ್ರಯುಕ್ತ ಹಮ್ಮಿ ಕೊಂಡಿದ್ದ ರಾಜ್ಯ ಮಟ್ಟದ ಕವಿಗೋಷ್ಠಿ ಆನ್ಲೈನ್ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕ ನುಡಿಗಳನ್ನಾಡುತ್ತ ನಾವು ಗಳಿಸುವ ವಿದ್ಯೆ ನಮ್ಮ ದೃಷ್ಟಿ ಮತ್ತು ಸೃಷ್ಟಿಯನ್ನು ವಿಸ್ತಾರ ಗೊಳಿಸದಿದ್ದರೆ ಆದರಿಂದ ಯಾವುದೇ ಪ್ರಯೋಜನ ವಾಗುವುದಿಲ್ಲ.ಯುವ ತಲೆಮಾರು ವರ್ತಮಾನದ ತಲ್ಲಣಗಳ ಪರಿಹಾರಕ್ಕೆ ವಿಶಾಲವಾದ ಮನೋಭಾವವನ್ನು ರೂಢಿಸಿಕೊಳ್ಳಬೇಕು ಎಂದರು.

ಕಾರ್ಯಕ್ರಮವನ್ನು ತಮ್ಮ ‌’ದಿಗಂಬರ ಧ್ಯಾನ’ ಎಂಬ ಸ್ವರಚಿತ ಕವನ ವಾಚನ ಮಾಡುವ ‌ಮೂಲಕ ಬಹಳ ಅರ್ಥಪೂರ್ಣವಾಗಿ ಉದ್ಘಾಟನೆ ಮಾಡಿದ ಹಿರಿಯ ಕವಿಗಳು ಮತ್ತು ಮಂಗಳೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಡಾ‌.ಧನಂಜಯ ಕಂಬ್ಳೆಯವರು ಮಾತನಾಡಿ ಸರಳತೆಯಿಂದಲೇ ಸಾಧನೆಯತ್ತ ಸಾಗಿದ ಬುದ್ಧನ ಜೀವನ ಅನುಕರಣೀಯವಾದದ್ದು.ನಾವು ಜೀವನದಲ್ಲಿ ಬುದ್ಧನ ತತ್ವಗಳನ್ನು ಅಳವಡಿಸಿಕೊಂಡರೆ ದ್ವೇಷವನ್ನು ಪ್ರೀತಿಯಿಂದ ಕೊನೆಗೊಳಿಸ ಬಹುದು. ಅಲ್ಲದೆ ‌ಸಾಮರಸ್ಯದಿಂದ ನಮ್ಮ ಬದುಕಿಗೆ ವಿಶಿಷ್ಟ ಅರ್ಥ ಬರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ನೋಟಕಾರ್ ಸತೀಶ್ ಅವರು ಬುದ್ಧನ ತತ್ವಗಳಾದ ಸಹಬಾಳ್ವೆ, ಸಂಯಮ ಮತ್ತು ಶಾಂತಿಯನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆತ್ಮಾವಲೋಕನದ ಮೂಲಕ ಮನುಷ್ಯ ಶ್ರೇಷ್ಠ ‌ಗುರಿಯ ಕಡೆಗೆ ಸಾಗಬಹುದು. ತಾಳ್ಮೆ, ತೃಪ್ತಿ, ಮೌನ ಸುಂದರ ಜೀವನದ ಅತಿ ಮುಖ್ಯ ಅಂಶವಾಗಬೇಕು ಎಂದರು.

ಕವಿಗೋಷ್ಠಿಯ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ.ಮಹದೇವ ಶಂಕನಪುರ ಮಾತನಾಡಿ ಸಮಾಜದಲ್ಲಿ ವರ್ಗ, ಜಾತಿ,ಧರ್ಮದ ಮಧ್ಯೆ ಕಂದಕವನ್ನುಂಟು ಮಾಡುವ ಪ್ರಯತ್ನಗಳು ನಿರಂತರವಾಗಿ ಸಾಗಿ ಬರುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ. ಬುದ್ಧ ಜಗದ‌ ಜಲಗಾರನಾಗಿದ್ದು,ಜಗತ್ತಿನ ಕಲ್ಮಶವನ್ನು ಹೋಗಲಾಡಿಸುವಲ್ಲಿ ಅವನ ತತ್ವಗಳು ಮಹತ್ವದ ಪಾತ್ರ ವಹಿಸಿವೆ.ಕವಿಗಳು ವರ್ತಮಾನದ ಸಂಗತಿಗಳಿಗೆ ಕಿವಿಯಾಗುವ ಮೂಲಕ ಪರಂಪರೆಯ ವಿಚಾರಗಳನ್ನು ಸಮರ್ಥವಾಗಿ ಕಟ್ಟಿಕೊಡಬೇಕು ಎಂದರು.

ಕಾರ್ಯಕ್ರಮದಲ್ಲಿ ಬಿ.ಎಸ್. ಪಾಟೀಲ,ಕೃಷ್ಣ ದೇವಾಂಗಮಠ,ಪಲ್ಲವಿ, ದೋ ಚಿ.ಗೌಡ, ಮಂಜುನಾಥ ಗುಳಿಗೇನಹಳ್ಳಿ, ಡಾ.ಅರುಂಧತಿ ಡಿ,ಡಾ.ಕುಪ್ನಳ್ಳಿ ಬೈರಪ್ಪ,ದೊಡ್ಡಕಲ್ಲಹಳ್ಳಿ ನಾರಾಯಣಪ್ಪ, ಶ್ವೇತ ಎಮ್ ಯು, ಅನುಪಮ, ಹೇಮಾವತಿ ಹಂಚೀಪುರ,ಚಿತ್ತಣ್ಣ ದ್ವಾರನಕುಂಟೆ, ರಶ್ಮೀ ಶಮಂತ್, ಸತೀಶ್ ಗರಣಿ, ಶಿವಪ್ರಸಾದ್ ಪಟ್ಟಣಗೆರೆ, ಮಾಂತೇಶ್ ಆಧುನಿಕ್ ಮುಂತಾದ ಕವಿಗಳು ಬುದ್ಧನ ಕುರಿತಾದ ಕವಿತೆಗಳನ್ನು ವಾಚನ ಮಾಡಿದರು.

ಕಾರ್ಯಕ್ರಮವನ್ನು ಖ್ಯಾತ ಕವಿಗಳಾದ ಡಾ.ಸತ್ಯಮಂಗಲ ಮಹಾದೇವ ನಿರೂಪಿಸಿದರು. ಶ್ರೇಷ್ಠ ಅಂಕಣಕಾರರಾದ ಡಾ. ಪ್ರಿಯಾಂಕ ಎಮ್.ಜಿ ವಂದಿಸಿದರು.