Sunday, 24th November 2024

ಸೂಕ್ಷ್ಮ ದಾಖಲೆಗಳ ಬಹಿರಂಗ: ಕೆಆರ್‌ಎಸ್ ಪಕ್ಷದ ಕಾರ್ಯಕರ್ತರ ಆರೋಪ

ಚಿಕ್ಕನಾಯಕನಹಳ್ಳಿ : ತಾಲ್ಲೂಕು ಕಚೇರಿಗಳಲ್ಲಿ ಅತ್ಯಂತ ರಹಸ್ಯ ಮಾತ್ರವಲ್ಲಿ ಅತ್ಯಂತ ಸೂಕ್ಷ್ಮವಾಗಿರುವ ದಾಖಲೆಗಳನ್ನು ಅನಧಿಕೃತ ವ್ಯಕ್ತಿಗಳು, ಸರಕಾರಿ ನೌಕರರೇ ಅಲ್ಲದವರು ಯಾವುದೇ ವಿವರಣೆ ಬರೆಯದೆ ಅನಾಯಸವಾಗಿ ಹೊರಗೆ ತೆಗೆದುಕೊಂಡು ಹೋಗಿ ಒಳತರುತ್ತಿದ್ದಾರೆಂದು ಕೆಆರ್‌ಎಸ್ ಪಕ್ಷದ ಕಾರ್ಯಕರ್ತರು ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಚೈತನ್ಯ ಯಾತ್ರೆಯ ಅಂಗವಾಗಿ ತಾಲ್ಲೂಕು ಕಚೇರಿಗೆ ಆಗಮಿಸಿ ಅಲ್ಲಿರುವ ಸಮಸ್ಯೆಗಳ ಪಟ್ಟಿಯನ್ನು ತಹಸೀಲ್ದಾರ್‌ಗೆ ಸಲ್ಲಿಸಿ ಮುಂದಿನ ಹದಿನೈದು ದಿನದ ಒಳಗಡೆ ಪರಿಹರಿಸುವಂತೆ ಒತ್ತಾಯಿಸಲಾಯಿತು.

ತಾಲ್ಲೂಕು ಕಚೇರಿಯಲ್ಲಿರುವ ರೆಕಾರ್ಡ್ ರೂಂನಿAದ ಕೈ ಬರಹದ ಪಹಣಿ ಸೇರಿದಂತೆ ಅನೇಕ ದಾಖಲೆಗಳನ್ನು ಹೊರಗೆ ತೆಗೆದುಕೊಂಡು ಹೋಗು ತ್ತಿದ್ದಾರೆ. ಆ ವೇಳೆ ದಾಖಲೆಗಳು ಕಳೆದರೆ, ತಿದ್ದಿದರೆ ಯಾರು ಹೊಣೆ, ಸಿಸಿಟಿವಿ ಅಳವಡಿಸಿದ್ದರೂ ರೆಕಾರ್ಡ್ರೂಂನಲ್ಲಿ ಅನಧಿಕೃತ ವ್ಯಕ್ತಿಗಳು ಸಂಚರಿಸಿ ತಮಗೆ ಬೇಕದಂತಹ ದಾಖಲೆಗಳನ್ನು ವಿಲೇವಾರಿ ಮಾಡುತ್ತಿದ್ದರೂ ತಹಸೀಲ್ದಾರ್ ಗಮನಕ್ಕೆ ಬಾರದಿರುವುದು ಅಚ್ಚರಿ ಮೂಡಿಸಿದೆ. ಸಕಾಲದಲ್ಲಿ ದೊರೆಯುವ ಯೋಜನೆಗಳ ಪಟ್ಟಿಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಿಲ್ಲ ಹಾಗು ಮಾನಿಟರ್ ಮಾಡುವವರು ಇಲ್ಲದ ಕಾರಣ ಸಕಾಲ ಅಕಾಲ ದಂತಾಗಿದೆ. ಪಹಣಿ ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣಪತ್ರ, ನೀಡಲು ಕೌಂಟರ್‌ನಲ್ಲಿ ಹೆಚ್ಚು ಹಣದ ಬೇಡಿಕೆ ಇಡುತ್ತಿದ್ದಾರೆ ಎಂದು ದೂರಿದರು.

ಕಚೇರಿಯ ಒಳ ಆವರಣದಲ್ಲಿ ಪೊದೆ ಬೆಳೆದು ಸ್ವಚ್ಚತೆ ಮರೀಚಿಕೆಯಾಗಿ ಸೊಳ್ಳೆಕಾಟ ಹೆಚ್ಚಾಗಿದೆ. ಆವರಣದಲ್ಲಿ ಸಾರ್ವಜನಿಕ ಶೌಚಗೃಹವಿದ್ದರೂ ನಿರ್ವಹಣೆ ಇಲ್ಲದೆ ಗಬ್ಬು ನಾರುತ್ತಿದೆ. ಕಟ್ಟಡದ ಒಳಗಡೆ ಕುಳಿತುಕೊಳ್ಳಲು ಕುರ್ಚಿಗಳ ವ್ಯವಸ್ಥೆ, ಕುಡಿಯಲು ನೀರಿನ ವ್ಯವಸ್ಥೆಯೂ ಇಲ್ಲ. ವಿವಿಧ ವಿಭಾಗಗಳ ತ್ಯಾಜ್ಯಗಳು ಹಾಗು ಕಸ ಮತ್ತಿತರ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆಯಲಾಗಿದೆ. ಅಧಿಕಾರಿಗಳು ಲಂಚದ ಬೇಡಿಕೆ ಅಥವಾ ಕರ್ತವ್ಯ ಲೋಪ ಎಸಗಿದಾಗ ದೂರು ನೀಡಲು ಭ್ರಷ್ಟಚಾರ ನಿಗ್ರಹದಳದ ಹಾಗು ಲೋಕಾಯುಕ್ತದ ಸಂಪರ್ಕ ಸಂಖ್ಯೆಯನ್ನು ಮಾಹಿತಿ ಫಲಕದಲ್ಲಿ ಪ್ರದರ್ಶಿಸಿಲ್ಲ.

ಪ್ರಭಾವಿಗಳು, ಸಿರಿವಂತರಿಗೆ ಶೀಘ್ರವಾಗಿ ಕೆಲಸಗಳು ಆಗುತ್ತಿದ್ದು ಬಡವರನ್ನು ಸತಾಯಿಸಲಾಗುತ್ತಿದೆ. ಎಂದು ತಹಸೀಲ್ದಾರ್‌ಗೆ ನೀಡಿದ ಮನವಿ ಪತ್ರದಲ್ಲಿ ಬರೆಯಲಾಗಿತ್ತು. ಈ ಲೋಪದೋಷಗಳನ್ನು ಸರಿಪಡಿಸಿ ಸಾರ್ವಜನಿಕರಿಗೆ ಉತ್ತಮ ಹಾಗು ದಕ್ಷ ಸೇವೆಯನ್ನು ನೀಡುವಂತೆ ವಿನಂತಿಸಿಕೊಳ್ಳಲಾಯಿತು.