Sunday, 24th November 2024

ಮೀಟಿಂಗ್‌ ನಡೆಯುವ ಪರಿ, ಅದು ಹುಟ್ಟಿಸುವ ಕಿರಿಕಿರಿ !

ನೂರೆಂಟು ವಿಶ್ವ

ವಿಶ್ವೇಶ್ವರ ಭಟ್

vbhat@me.com

ನಾನು ಸುವರ್ಣ ನ್ಯೂಸ್ ಟಿವಿ ಚಾನೆಲ್ ಪ್ರಧಾನ ಸಂಪಾದಕನಾಗಿದ್ದಾಗ, ಅದರ ಮಾತೃಸಂಸ್ಥೆಯಾದ ಜ್ಯೂಪಿಟರ್ ಕ್ಯಾಪಿಟಲ್ (ಜೆಸಿ) ನಲ್ಲಿ, ವಾರದಲ್ಲಿ ಕನಿಷ್ಠ ಎರಡು ದಿನ ಮೀಟಿಂಗ್ ಅಟೆಂಡ್ ಆಗಲು, ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಜೆಸಿ ಆಫೀಸಿಗೆ ಹೋಗಬೇಕಾಗುತ್ತಿತ್ತು.

ಅಲ್ಲಿ ಸಂಸ್ಥೆಯ ಮುಖ್ಯಸ್ಥರಾದ ರಾಜೀವ ಚಂದ್ರಶೇಖರ್, ಕಾರ್ಯನಿರ್ವಾಹಕ ನಿರ್ದೇಶಕ ಸುಧಾಕರ ಗಾಂಡೇ, ಸಿಇಒ, ಫೈನಾನ್ಸ್ ಮುಖ್ಯಸ್ಥರು, ಎಚ್ ಆರ್ ಮುಖ್ಯಸ್ಥರು, ಬಂಡವಾಳ ಸಲಹೆಗಾರರು… ಹೀಗೆ ಏಳೆಂಟು ಜನ ಆ ಮೀಟಿಂಗಿನಲ್ಲಿ ಪಾಲ್ಗೊಳ್ಳುತ್ತಿದ್ದರು. ರಾಜೀವ ಚಂದ್ರಶೇಖರ್ ಎಲ್ಲ ಮೀಟಿಂಗುಗಳಲ್ಲಿ ಇರುತ್ತಿರಲಿಲ್ಲ. ಆರು ತಿಂಗಳಿಗೊಮ್ಮೆ ಮಾತ್ರ ಅವರು ‘ದರ್ಶನ’ ನೀಡುತ್ತಿದ್ದರು.

ಸಾಮಾನ್ಯವಾಗಿ ಗಾಂಡೇ ಅವರೇ ಮೀಟಿಂಗ್ ನಡೆಸುತ್ತಿದ್ದರು. ಇಂಥ ಮೀಟಿಂಗುಗಳಿಗೆ ನನ್ನನ್ನು ಕರೆದರೆ ‘ಸುವರ್ಣ ನ್ಯೂಸ್’ ಮತ್ತು ‘ಕನ್ನಡ ಪ್ರಭ’ಕ್ಕೆ ಸಂಬಂಧಿ ಸಿದ ವಿಷಯಗಳು ಅಜೆಂಡಾದಲ್ಲಿ ಇರುತ್ತಿದ್ದವು. ಈ ಮೀಟಿಂಗ್ ಸುಧಾಕರ ಅವರ ನೇತೃತ್ವದಲ್ಲಿ ನಡೆಯುತ್ತಿದ್ದುದರಿಂದ, ನಾವೆಲ್ಲರೂ ಅವರ ಬರುವಿಕೆಗಾಗಿ ಕಾಯುವುದು ಅನಿವಾರ್ಯವಾಗಿತ್ತು. ಅವರು ಕೆಲವೊಮ್ಮೆ ನಮ್ಮೆಲ್ಲರನ್ನೂ ಕನಿಷ್ಠ ಎರಡು ಗಂಟೆ ಕಾಯಿಸು ತ್ತಿದ್ದರು. ನಾವು ಯಾರಿಗೆ ರಿಪೋರ್ಟ್ ಮಾಡಿ ಕೊಳ್ಳುತ್ತೇವೋ, ಅವರೇ ನಮ್ಮನ್ನು ಕಾಯಿಸಿದರೆ, ಅವರನ್ನು ಪ್ರಶ್ನಿಸುವುದು ಸಾಧ್ಯವಿಲ್ಲ. ಹೀಗಾಗಿ ನಾನು ಸುಮ್ಮನೆ ಇರುತ್ತಿದ್ದೆ. ಮುಖ್ಯಮಂತ್ರಿಗಳೇನಾದರೂ ಊಟಕ್ಕೋ, ಉಪಾಹಾರಕ್ಕೋ ಕರೆದು, ಅರ್ಧ ಗಂಟೆ ಕಾಯಿಸಿದರೆ, ಸಿಡಿಮಿಡಿಗೊಳ್ಳುತ್ತಿದ್ದ ನಾನು, ಸುಧಾಕರ ಅವರು ತಾಸುಗಟ್ಟಲೆ ಕಾಯಿಸಿದರೂ, ಸುಮ್ಮ ನಿರುತ್ತಿದ್ದೆ. ಕಾರಣ ಬಾಸ್ ಯಾವತ್ತೂ ಸರಿ ಮತ್ತು ಆತ ಯಾವತ್ತೂ ಪ್ರಶ್ನಾತೀತ!

ಈ ಮೀಟಿಂಗುಗಳಲ್ಲಿ ಸಂಸ್ಥೆಗೆ ಉಪಯೋಗವಾಗುವ ವಿಷಯಗಳಿಗಿಂತ ಬೇಡವಾದವುಗಳೇ ಚರ್ಚಿತವಾಗುತ್ತಿದ್ದವು. ಯಾರಾದರೂ ಸರಿಯಾಗಿ ಸಿದ್ಧರಾಗಿರ ದಿದ್ದರೆ, ‘ಸುಧಾಕರ್, ನಿಮ್ಮ ಟೈ ಚೆನ್ನಾಗಿದೆ, ನಿಮ್ಮ ಕೋಟ್ ಚೆನ್ನಾಗಿದೆ’ ಅಂದರೆ, ಅವರು ಮುಂದಿನ ಮುಕ್ಕಾಲು ಗಂಟೆ, ತಮ್ಮ ಡ್ರೆಸ್ ಸೆನ್ಸ್ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರು. ಆಗ ಆ ದಿನದ ಮೀಟಿಂಗ್ ಹಳ್ಳ ಹಿಡಿಯಿತು ಎಂದೇ ಅರ್ಥ! ಈ ಟ್ರಿಕ್ಕನ್ನು ನಮ್ಮಲ್ಲಿ ಮೀಟಿಂಗಿಗೆ ಸಿದ್ಧರಾಗಿರದ ಯಾರಾದರೊಬ್ಬರು ಪ್ರಯೋಗಿಸುತ್ತಿದ್ದರು. ಮೀಟಿಂಗ್ ಎಂಬ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದು ಹೇಗೆ ಎಂದು ಎಲ್ಲರಿಗೂ ಗೊತ್ತಾಗಿಬಿಟ್ಟಿತ್ತು.

‘ಸುಧಾಕರ್, ನೀವು ಹಿಂದಿನ ಸಂಸ್ಥೆಯಲ್ಲಿದ್ದಾಗ, ನಿಮಗಾಗಿ ಅಂಬಾನಿ ಕೂಡ ತಾಸುಗಟ್ಟಲೆ ಕಾಯುತ್ತಿದ್ದರಂತೆ’ ಎಂದರೆ ಆ ದಿನದ ಮೀಟಿಂಗ್ ಮುಗೀತ್. ಅವರು ಮುಂದಿನ ಒಂದು ಗಂಟೆ ಅಂಬಾನಿ ಮುಂದೆ ತಮ್ಮ ‘ಪ್ರದರ್ಶನ’ ಹೇಗಿರುತ್ತಿತ್ತು ಎಂಬುದನ್ನು ರಸವತ್ತಾಗಿ ಬಣ್ಣಿಸುತ್ತಿದ್ದರು. ಆ ಪ್ರಹಸನ ಮುಗಿದು ಮೀಟಿಂಗಿನ ವಿಷಯಗಳಿಗೆ ಬರುವ ಹೊತ್ತಿಗೆ ಸಮಯವಾಗಿ, ಮುಂದಿನ ಮೀಟಿಂಗಿನಲ್ಲಿ ಚರ್ಚಿಸೋಣ ಎಂದು ಬರಖಾಸ್ತಾಗುತ್ತಿತ್ತು. ಇನ್ನು ಸಮಯಕ್ಕೆ ಸರಿಯಾಗಿ, ಗಂಭೀರ ಚರ್ಚೆ ನಡೆದ ಮೀಟಿಂಗುಗಳಲ್ಲೂ, ಅಂತಿಮವಾಗಿ ಒಂದು ಸ್ಪಷ್ಟ ನಿರ್ಧಾರಕ್ಕೆ ಬರಲಾಗದೇ, ಮುಂದಿನ ಸಭೆಯಲ್ಲಿ ಚರ್ಚಿಸೋಣ, ಆಗ ಒಂದು ನಿರ್ಧಾರಕ್ಕೆ ಬರೋಣ ಎಂಬ ನಿರ್ಣಯದೊಂದಿಗೆ ಪರ್ಯವಸಾನವಾಗುತ್ತಿತ್ತು.

People who enjoy meetings should not be in charge of anything ಎಂಬುದು ಮನವರಿಕೆಯಾಗಿ ಹೋಗಿತ್ತು. ನನಗಂತೂ ಇಂಥ ಮೀಟಿಂಗು ಗಳೆಂದರೆ ಅಲರ್ಜಿ. ಈ ಮೀಟಿಂಗುಗಳ ಹೆಸರಿನಲ್ಲಿ ಎಷ್ಟೊಂದು ಮಾನವ ಸಮಯ, ಹಣ, ಹೊಣೆಗಾರಿಕೆಗಳೆಲ್ಲ ನಿರರ್ಥಕವಾಗಿ ಹಾಳಾಗುತ್ತದಲ್ಲ ಎಂದು ವ್ಯಥೆಯಾಗುತ್ತಿತ್ತು. ಆದರೆ ನಾನು ಅಸಹಾಯಕನಾಗಿದ್ದೆ. ಇದನ್ನು ಸಂಸ್ಥೆಯಲ್ಲಿ ನನ್ನ ಮೇಲಿರುವವರು ಯೋಚಿಸಬೇಕು. ಆದರೂ ಒಂದು ದಿನ ನನ್ನ ಅಸಹನೆ ಯನ್ನು ನೇರವಾಗಿ ಹೇಳಿದೆ. ಅದರಿಂದ ಹೆಚ್ಚಿಗೆ ಪ್ರಯೋಜನ ಆಗಲಿಲ್ಲ. ಅಷ್ಟಕ್ಕೂ ಈ ಮೀಟಿಂಗು ಅನ್ನೋದು ಬುರ್ನಾಸು. ಒಂದಿಬ್ಬರು ಚರ್ಚಿಸಿ ತೆಗೆದುಕೊಳ್ಳ ಬೇಕಾದ ನಿರ್ಧಾರವನ್ನು ಹತ್ತಾರು ಜನರ ಮುಂದಿಟ್ಟು ಗಂಟೆಗಟ್ಟಲೆ ಚರ್ಚಿಸಿ, ಕೊನೆಗೆ ಯಾವುದೇ ನಿರ್ಧಾರ ತೆಗದುಕೊಳ್ಳಲು ಸಾಧ್ಯವಾಗ ದಿರುವುದೇ ಮೀಟಿಂಗು ಅನ್ನೋದು ವಕ್ರತುಂಡೋಕ್ತಿಯಷ್ಟೇ ಅಲ್ಲ, ಅದು ಕಟು ವಾಸ್ತವ.

ಮೀಟಿಂಗುಗಳಲ್ಲಿ ಚರ್ಚಿಸಿದ್ದೆಲ್ಲ ಜಾರಿಯಾಗುವಂತಿದ್ದರೆ, ಎಲ್ಲ ಸಂಸ್ಥೆಗಳೂ ಈಗಿರುವುದಕ್ಕಿಂತ ಹತ್ತು ಪಟ್ಟು ಲಾಭ ಮಾಡಿರುತ್ತಿದ್ದವು, ಉತ್ತಮ ಸ್ಥಿತಿಯಲ್ಲಿರು ತ್ತಿದ್ದವು. ಆದರೆ ಎಲ್ಲ ಕಡೆ ಮೀಟಿಂಗುಗಳು ನಡೆಯೋದೇ ಹಾಗೆ. After all is said and done, a lot more is said than done ಎಂಬ ಮಾತಂತೂ ಮೀಟಿಂಗ್ ವಿಷಯದಲ್ಲಿ ಅಪ್ಪಟ ಸತ್ಯ. ಕೆಲವರಿಗಂತೂ ಮೀಟಿಂಗ್ ಮಾಡುವುದೆಂದರೆ ಒಂಥರಾ ಕಾಯಿಲೆ. ಅದರಲ್ಲೂ ತಮ್ಮ ಸಹೋದ್ಯೋಗಿಗಳ ಮುಂದೆ ಷೋ ಆಫ್ ಮಾಡುವ ಚಪಲವಿದ್ದವರಿಗೆ ಮೀಟಿಂಗ್ ಒಂದು ವಾಸಿಯಾಗದ ವ್ಯಸನ. ನಾನು ವಿಜಯ ಸಂಕೇಶ್ವರ ಅವರ ಜತೆ ಐದು ವರ್ಷ ಕೆಲಸ ಮಾಡಿದ್ದೇನೆ. ಆದರೆ ಒಮ್ಮೆಯೂ ಅವರ ಜತೆ ಮೀಟಿಂಗಿಗೆ ಕುಳಿತು ಚರ್ಚಿಸಿದ್ದಿಲ್ಲ. ಅನೇಕ ಪ್ರಮುಖ ನಿರ್ಣಯಗಳನ್ನು ಫೋನಿನ ತೆಗೆದುಕೊಳ್ಳುತ್ತಿದ್ದೆವು.

ನಮ್ಮ ಫೋನ್ ಸಂಭಾಷಣೆಯೂ ಹತ್ತು ನಿಮಿಷಕ್ಕಿಂತ ಜಾಸ್ತಿ ಇರುತ್ತಿರಲಿಲ್ಲ. ಒಮ್ಮೆ ನಾನು ಸಂಕೇಶ್ವರ ಜತೆ ಮಂಗಳೂರಿನಿಂದ ಬೆಂಗಳೂರಿಗೆ ಅವರ ಕಾರಿನಲ್ಲಿ ಬರುತ್ತಿದ್ದೆ. ಹಾಸನದ ಅಶೋಕ ಹೋಟೆಲಿನಲ್ಲಿ ಕಾಫಿಗೆ ಕುಳಿತೆವು. ಸಂಕೇಶ್ವರರು ಏಕಾಏಕಿ, ‘ವಿಜಯ ಕರ್ನಾಟಕದ ಹಾಸನ ಆವೃತ್ತಿ (ಎಡಿಷನ್) ಆರಂಭಿಸಿದರೆ ಹೇಗೆ?’ ಎಂದು ಕೇಳಿದರು. ‘ಸರ್, ವಂಡಫುಲ್ ಐಡಿಯಾ’ ಎಂದು ಉದ್ಗರಿಸಿದೆ. ಸಂಕೇಶ್ವರರು, ‘ಹೇಗೆ ವಂಡರ್ ಫುಲ್?’ ಎಂದು ಕೇಳಿದರು. ‘ಸರ್, ರಾಜಕೀಯ,
ಶಿಕ್ಷಣ, ಸಾಹಿತ್ಯ, ಸಂಸ್ಕೃತಿ, ಕೃಷಿ ಮುಂತಾದ ದೃಷ್ಟಿಯಿಂದ ಹಾಸನ ಚಟುವಟಿಕೆಯ ಕೇಂದ್ರ. ಸುದ್ದಿಗೆ ಬರವಿಲ್ಲ.

ವ್ಯವಹಾರವೂ ಜೋರಾಗಿ ನಡೆಯುವ ಕೇಂದ್ರ. ಅಷ್ಟೇ ಅಲ್ಲ, ಹಾಸನದಿಂದ ಆವೃತ್ತಿ ಆರಂಭಿಸಿದರೆ, ಹಾಸನವನ್ನು ಕೇಂದ್ರವಾಗಿಸಿ, ಪತ್ರಿಕೆಯನ್ನು ಚಿಕ್ಕಮಗ ಳೂರು, ತುಮಕೂರು, ಮೈಸೂರು, ಮಡಿಕೇರಿ ಜಿಗಳ ಹಲವು ತಾಲೂಕು ಕೇಂದ್ರಗಳಿಗೆ, ಊರುಗಳಿಗೆ ಬೇಗನೆ ತಲುಪಿಸಬಹುದು. ಬೆಂಗಳೂರಿನಿಂದ ಈ ಊರು ಗಳಿಗೆ ಪತ್ರಿಕೆ ತಲುಪಿಸುವುದನ್ನು ತಪ್ಪಿಸಬಹುದು’ ಎಂದು ವಿವರಿಸಿದೆ. ಸಂಕೇಶ್ವರರು ತಡ ಮಾಡಲಿಲ್ಲ. ತಕ್ಷಣ ತಮ್ಮ ಒಬ್ಬ ನಿರ್ದೇಶಕರಿಗೆ ಅಲ್ಲಿಂದಲೇ ಫೋನ್ ಮಾಡಿ, ‘ನಾನು ಹಾಸನ ಆವೃತ್ತಿ ಆರಂಭಿಸಲು ನಿರ್ಧರಿಸಿದ್ದೇನೆ. ಆದಷ್ಟು ಬೇಗ ಆಫೀಸನ್ನು ಹುಡುಕಿ’ ಎಂದು ಹೇಳಿದರು.

ಇನ್ನೊಬ್ಬ ನಿರ್ದೇಶಕರಿಗೆ ಫೋನ್ ಮಾಡಿ, ‘ಪ್ರಿಂಟಿಂಗ್ ಮಷಿನ್ ಸ್ಥಾಪಿಸಲು ಬೇಕಾದ ಕ್ರಮಕೈಗೊಳ್ಳಿ’ ಎಂದು ಸೂಚಿಸಿದರು. ‘ಸಂಪಾದಕೀಯ ತಂಡವನ್ನು ನೇಮಿಸಿಕೊಳ್ಳಲು ಬೇಕಾದ ಕ್ರಮಗಳನ್ನು ಕೈಗೊಳ್ಳಿ’ ಎಂದು ನನಗೆ ಹೇಳಿದರು. ಬೆಂಗಳೂರು ತಲುಪುವ ಹೊತ್ತಿಗೆ ಅವರು ತಮ್ಮ ಬೇರೆ ಕೆಲಸದಲ್ಲಿ ನಿರತರಾಗಿ ದ್ದರು. ಅದಾಗಿ ಸರಿಯಾಗಿ ಎರಡು ತಿಂಗಳಿಗೆ ಹಾಸನ ಆವೃತ್ತಿ ಆರಂಭವಾಯಿತು! ಮಾಜಿ ಪ್ರಧಾನಿ ದೇವೇಗೌಡರು ಮೊದಲ ಪ್ರತಿಯನ್ನು ಬಿಡುಗಡೆ ಮಾಡಿದರು! ಬಹುಶಃ ಸುಧಾಕರ ಗಾಂಡೇ ಅವರಾಗಿದ್ದರೆ, ಹಾಸನ ಆವೃತ್ತಿ ಆರಂಭಿಸಲು ಕನಿಷ್ಠ ಒಂದು ವರ್ಷ ಕಾಲ ಮೀಟಿಂಗ್ ಮಾಡಿ, ಒಂದೂವರೆ ವರ್ಷದ ನಂತರ ವಿಷಯಕ್ಕೆ ಬಂದು, ಎರಡು ವರ್ಷಗಳ ಬಳಿಕ ಹಾಸನ ಆವೃತ್ತಿಯನ್ನು ಆರಂಭಿಸಲು ನಿರ್ಧರಿಸಿ, ಎರಡೂವರೆ ವರ್ಷದ ನಂತರ ಆವೃತ್ತಿ ಹೊರಬರುತ್ತಿತ್ತೇನೋ?
ನನಗೆ ಆತ್ಮೀಯರಾದ ಪ್ರಕಾಶ ಅಯ್ಯರ್ ಅವರು ತಮ್ಮ ಕೃತಿಯೊಂದರಲ್ಲಿ ಮೀಟಿಂಗುಗಳ ಬಗ್ಗೆ ಸ್ವಾರಸ್ಯಕರವಾಗಿ ಹೇಳಿದ್ದಾರೆ.

ಬಹುತೇಕ ಮೀಟಿಂಗುಗಳು ನಡೆಯುವುದೇ ಹೀಗೆ. ಒಂದು ಪ್ರಮುಖ ಸಂಸ್ಥೆಯೊಂದರ ಮುಖ್ಯಸ್ಥರೆಲ್ಲ ಸೇರಿ, ಮೂರು ವಿಷಯಗಳ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು
ಮೀಟಿಂಗ್ ಸೇರಿzರೆನ್ನಿ. ಮೊದಲ ವಿಷಯ, ಎರಡು ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ನೂತನ ಘಟಕ ಸ್ಥಾಪಿಸಲು ಅನುಮತಿ ಪಡೆಯುವುದು, ಎರಡನೆಯ ವಿಷಯ, ಐವತ್ತು ಲಕ್ಷ ರುಪಾಯಿ ವೆಚ್ಚದಲ್ಲಿ ಸಂಸ್ಥೆಯ ಪ್ರಧಾನ ಕಚೇರಿ ಪಕ್ಕದಲ್ಲಿ ಒಂದು ಹೊಸ ಸೈಕಲ್ ಸ್ಟ್ಯಾಂಡ್ ನಿರ್ಮಿಸುವುದಕ್ಕೆ ಅನುಮತಿ ಪಡೆಯುವುದು ಮತ್ತು ಮೂರನೇ ವಿಷಯ, ಸಂಸ್ಥೆಯ ಕ್ಷೇಮಾಭಿವೃದ್ಧಿ ಸಮಿತಿ ಸದಸ್ಯರನ್ನು ಉತ್ತಮ ಕೆಲಸ ಮಾಡಿದ್ದಕ್ಕೆ ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರವಾಸಕ್ಕೆ ಕಳಿಸುವ ಕುರಿತು ಒಪ್ಪಿಗೆ ಪಡೆಯುವುದು.

ಮೀಟಿಂಗ್ ಆರಂಭವಾಗುತ್ತಿದ್ದಂತೆ, ಈ ಮೂರು ವಿಷಯಗಳನ್ನು ಮೀಟಿಂಗ್ ಮುಂದೆ ಇಡುತ್ತಿದ್ದಂತೆ, ಎರಡು ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ನೂತನ ಘಟಕ ಸ್ಥಾಪಿಸಲು ಅನುಮತಿ ಪಡೆಯುವ ಮೊದಲ ವಿಷಯವಿದೆಯಲ್ಲ, ಅದರ ಬಗ್ಗೆ ಕೇವಲ ಮೂರು ನಿಮಿಷಗಳ ಚರ್ಚೆ ನಡೆದು, ಅನುಮತಿ ನೀಡಲಾಯಿತು. ಮೀಟಿಂಗಿ ನಲ್ಲಿದ್ದ ಬಹುತೇಕರಿಗೆ ಎರಡು ಸಾವಿರ ಕೋಟಿ ರುಪಾಯಿ ವೆಚ್ಚದ ಆ ಘಟಕದ ಬಗ್ಗೆ ಚರ್ಚಿಸಲು ವಿಷಯಗಳೇ ಇರಲಿಲ್ಲ. ಕಾರಣ ಪರಿಣತ ಸಮಿತಿ ಎಲ್ಲ ಕೆಲಸ ವನ್ನೂ ಮಾಡಿ ಮುಗಿಸಿತ್ತು. ಎರಡು ಸಾವಿರ ಕೋಟಿ ರುಪಾಯಿ ವೆಚ್ಚದ ಯೋಜನೆ ಎಂದ ಕೂಡಲೇ ಬಹುತೇಕರು ಅದು ತಮ್ಮ ಕಲ್ಪನೆಗೆ ಮೀರಿದ್ದು ಎಂಬ ತೀರ್ಮಾನಕ್ಕೆ ಬಂದಿದ್ದರು. ಅಷ್ಟೇ ಅಲ್ಲ, ಅದು ತೀರಾ ತಾಂತ್ರಿಕ ವಿಷಯವಾಗಿತ್ತು.

ಸಂಬಂಧಪಟ್ಟವರು ಮತ್ತು ಪರಿಣತ ಸಮಿತಿ ಸದಸ್ಯರು ಸರಿಯಾದ ನಿರ್ಧಾರವನ್ನು ತೆಗೆದುಕೊಂಡಿರುತ್ತಾರೆ ಎಂದೇ ಮೀಟಿಂಗಿನಲ್ಲಿದ್ದ ಎಲ್ಲರೂ ಭಾವಿಸಿದರು. ಪರಿಣತ ಸಮಿತಿ ಸದಸ್ಯನೊಬ್ಬ ಈ ಘಟಕದ ಬಗ್ಗೆ ಮೀಟಿಂಗಿನಲ್ಲಿ ವಿವರಿಸುತ್ತಿದ್ದಂತೆ, ತಕ್ಷಣ ಎಲ್ಲರೂ ಸಮ್ಮತಿ ಸೂಚಿಸಿಬಿಟ್ಟರು. ಕಾರಣ ಅನೇಕರಿಗೆ ಆತ ವಿವರಿಸಿದ್ದು ಅರ್ಥವೇ ಆಗಿರಲಿಲ್ಲ. ‘ಆಯ್ತು.. ಆಯ್ತು.. ನಿಮ್ಮ ಪ್ರಸ್ತಾವನೆಗೆ ಅನುಮತಿ ಸೂಚಿಸುತ್ತಿದ್ದೇವೆ’ ಎಂದು ಅಲ್ಲಿದ್ದವರೆಲ್ಲ ಹೇಳಿದರು. ನೆಕ್ಸ್ಟ್ ವಿಷಯ ಹೇಳಿ… ಮೀಟಿಂಗ್ ಕಂಡಕ್ಟ್ ಮಾಡುತ್ತಿದ್ದವ ಹೇಳಿದ.

ಎರಡನೇ ವಿಷಯ… ಐವತ್ತು ಲಕ್ಷ ರುಪಾಯಿ ವೆಚ್ಚದಲ್ಲಿ ಸಂಸ್ಥೆಯ ಪ್ರಧಾನ ಕಚೇರಿ ಪಕ್ಕದಲ್ಲಿ ಒಂದು ಹೊಸ ಸೈಕಲ್ ಸ್ಟ್ಯಾಂಡ್ ನಿರ್ಮಿಸುವುದಕ್ಕೆ ಅನುಮತಿ ಪಡೆಯುವುದು. ಹಾಗೆಂದ ಕೂಡಲೇ ಎಲ್ಲರ ಕಿವಿಗಳೂ ನೆಟ್ಟಗಾದವು. ಸಂಸ್ಥೆಯಲ್ಲಿ ಸೈಕಲ್ ಪಥವನ್ನು ನಿರ್ಮಿಸುವ ಬಗ್ಗೆ ಒಬ್ಬ ಹೇಳಿದ. ಸೈಕಲ್ ತುಳಿಯುವು ದರಿಂದ ಸಿಬ್ಬಂದಿ ಫಿಟ್ನೆಸ್ ಹೆಚ್ಚುವ ಬಗ್ಗೆ ಒಬ್ಬ ವಿವರಿಸಿದ. ವಿದೇಶಗಳಲ್ಲಿ ಸೈಕಲ್ ಸಂಸ್ಕೃತಿ ಹೆಚ್ಚುತ್ತಿರುವ ಬಗ್ಗೆ ಇನ್ನೊಬ್ಬ ವಿವರಿಸಿದ. ತಮ್ಮ ಸಂಸ್ಥೆ ಸಿಬ್ಬಂದಿ ಆರೋಗ್ಯ ಸುಧಾರಣೆಗಾಗಿ ಕೈಗೊಳ್ಳುತ್ತಿರುವ ಕ್ರಮದ ಬಗ್ಗೆ ಎಚ್.ಆರ್.ಮುಖ್ಯಸ್ಥ ಉದ್ದನೆಯ ಪಟ್ಟಿ ಇತ್ತು. ಅದರ ಮುಂದಿನ ಭಾಗವಾಗಿ ಸೈಕಲ್ ತುಳಿಯುವು ದನ್ನು ಪ್ರೋತ್ಸಾಹಿಸುವುದು ಎಂದು ವಿವರಿಸಿದ.

ಕಾರಿನ ಬದಲು ಸೈಕಲ್ ತುಳಿಯುವುದನ್ನು ಪ್ರೋತ್ಸಾಹಿಸುವ ಅಗತ್ಯವಿದೆ, ಹೀಗಾಗಿ ಈಗಿನ ಕಾರಿನ ಸ್ಟ್ಯಾಂಡ್ ಜಾಗದಲ್ಲಿ ಸೈಕಲ್ ಸ್ಟ್ಯಾಂಡ್ ವಿಸ್ತರಿಸುವ ಅಗತ್ಯವಿದೆ ಎಂದು ಮತ್ಯಾರೋ ವಿವರಿಸಿದರು. ಸೈಕಲ್ ಸ್ಟ್ಯಾಂಡ್‌ಗೆ ಅಲ್ಯೂಮಿನಿಯಂ ಪ- ಶೀಟ್ ಹಾಕಿಸಿ, ಹೀಟ್ ಆಗುವುದಿಲ್ಲ ಎಂದು ಇನ್ಯಾರೋ ಹೇಳಿದರು.
ಅಲ್ಯೂಮಿನಿಯಂ ಶೀಟ್ ಬೇಡ, ಅದು ದುಬಾರಿ ಎಂದು ಮಧ್ಯೆ ಯಾರೋ ಬಾಯಿ ಹಾಕಿದರು. ಶೀಟಿನ ಮೇಲೆ ನಮ್ಮ ಸಂಸ್ಥೆಯ ಲೋಗೋ ಹಾಕಿಸಬೇಕು, ಹಳದಿ ಬಣ್ಣದ ಚಾವಣಿ ಇದ್ದರೆ ಒಳ್ಳೆಯದು ಎಂಬ ಸಲಹೆಯೂ ತೂರಿ ಬಂತು.

ಸೈಕಲ್ ಸ್ಟ್ಯಾಂಡ್ ನಿರ್ಮಾಣದ ಬಗ್ಗೆ ಸುಮಾರು ಒಂದೂವರೆ ಗಂಟೆ ಕಾಲ ಚರ್ಚೆ ನಡೆದು, ೪೮ ಲಕ್ಷ ರುಪಾಯಿ ವೆಚ್ಚದಲ್ಲಿ ಹಳದಿ ಬಣ್ಣದ ಪ- ಶೀಟ್ ಹೊಂದಿರುವ ಸೈಕಲ್ ಸ್ಟ್ಯಾಂಡ್ ನಿರ್ಮಿಸಲು ನಿರ್ಧರಿಸಲಾಯಿತು. ಈ ನಿರ್ಧಾರದಿಂದ ಸಂಸ್ಥೆಯು ಎರಡು ಲಕ್ಷ ರುಪಾಯಿ ಉಳಿಸಿದೆ ಎಂದು ಫೈನಾನ್ಸ್ ಮುಖ್ಯಸ್ಥ ಹೇಳಿದ. ಎಲ್ಲರೂ ಟೇಬಲ್ ಕುಟ್ಟಿ ಸಂತಸ ವ್ಯಕ್ತಪಡಿಸಿದರು. ನೆಕ್ಸ್ಟ್ ವಿಷಯ ಹೇಳಿ… ಸಂಸ್ಥೆಯ ಕ್ಷೇಮಾಭಿವೃದ್ಧಿ ಸಮಿತಿ ಸದಸ್ಯರನ್ನು ಉತ್ತಮ ಕೆಲಸ ಮಾಡಿದ್ದಕ್ಕೆ ಐದು ಲಕ್ಷ ರೂಪಾಯಿ ವೆಚ್ಚದಲ್ಲಿ ಪ್ರವಾಸಕ್ಕೆ ಕಳಿಸುವ ಕುರಿತು ಒಪ್ಪಿಗೆ ಪಡೆಯುವುದು.

ಇದು ಮೀಟಿಂಗಿನಲ್ಲಿದ್ದ ಎಲ್ಲರ ಇಷ್ಟದ ವಿಷಯ. ಒಬ್ಬಾತ ಮಡಿಕೇರಿಗೆ ಕಳಿಸಿ ಎಂದ. ಈಗ ಚಳಿಗಾಲ, ಮಡಿಕೇರಿಗಿಂತ ಮುರ್ಡೇಶ್ವರಕ್ಕೆ ಕಳಿಸಿ ಎಂದ ಇನ್ನೊಬ್ಬ. ಮತ್ತೊಬ್ಬ ‘ಹಂಪಿ ನೋಡಿ ಬರಲಿ’ ಎಂದ. ‘ಈಗ ಕಾಶ್ಮೀರಕ್ಕೆ ಹೋಗುವುದು ಸುಲಭ. ಹೋಗಿ ಬರಲಿ’ ಎಂದೂ ಯಾರೋ ಹೇಳಿದರು. ‘ದುಬೈಗೆ ಕಳಿಸಿ, ಹೋಗಿ ಬರಲಿ’ ಎಂಬ ಸಲಹೆಯೂ ಬಂತು. ‘ಇತ್ತೀಚೆಗಷ್ಟೇ ನಾನು ಕುಟುಂಬ ಸಹಿತ ಚೆನ್ನೈ, ಮಹಾಬಲಿಪುರಂ ಹೋಗಿದ್ದೆ. ನೋಡಲೇಬೇಕಾದ ಸ್ಥಳ. ಅಲ್ಲಿಗೇಕೆ ಕಳಿಸ ಬಾರದು?’ ಎಂಬ ಸಲಹೆಯೂ ಕೇಳಿ ಬಂತು. ಕೊನೆಗೂ ಯಾವ ಊರಿಗೆ ಕಳಿಸಬೇಕು ಎಂಬ ಬಗ್ಗೆ ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಈ ಮಧ್ಯೆ ಕೆಲವರು, ‘ಫೈವ್ ಸ್ಟಾರ್ ಹೋಟೆಲಿನಲ್ಲಿ ಉಳಿಯುವ ವ್ಯವಸ್ಥೆ ಮಾಡಬೇಕು’ ಎಂದರು.

‘ಅದು ಬಹಳ ದುಬಾರಿಯಾಗುತ್ತದೆ, ಥ್ರೀ ಸ್ಟಾರ್ ಸಾಕು’ ಎಂದರು. ‘ವಿಮಾನದಲ್ಲಿ ಹೋಗುವ ಬದಲು ಟ್ರೇನಿನಲ್ಲಿ ಹೋಗಬಹುದಲ್ಲ?’ ಎಂಬ ಮಾತೂ ಕೇಳಿ ಬಂತು. ಮತ್ಯಾರೋ ‘ಇಲ್ಲ..ಇಲ್ಲ.. ಟ್ರೇನಿಗೂ, ವಿಮಾನಕ್ಕೂ ಹೆಚ್ಚು ವ್ಯತ್ಯಾಸವಾಗುವುದಿಲ್ಲ’ ಎಂದರು. ಈ ವಿಷಯ ಕುರಿತು ಸುಮಾರು ಒಂದೂವರೆ ಗಂಟೆ ಚರ್ಚೆಯಾದರೂ ಒಂದು ನಿರ್ಧಾರಕ್ಕೆ ಬರಲು ಸಾಧ್ಯವಾಗಲಿಲ್ಲ. ಅಷ್ಟೊತ್ತಿಗೆ ಮೀಟಿಂಗ್ ಶುರುವಾಗಿ ಸುಮಾರು ಮೂರುಕಾಲು ಗಂಟೆಯಾಗಿತ್ತು. ಎರಡು ಸಲ ಕಾಫಿ, ಸ್ನ್ಯಾಕ್ ಬಂದಿದ್ದರೂ, ಎಲ್ಲರೂ ಬಸವಳಿದಿದ್ದರು. ಮೂರನೇ ವಿಷಯದ ಬಗ್ಗೆ ಮುಂದಿನ ಮೀಟಿಂಗಿನಲ್ಲಿ ನಿರ್ಧರಿಸೋಣ ಎಂದು ಮೀಟಿಂಗನ್ನು
ಬರಖಾಸ್ತುಗೊಳಿಸಲಾಯಿತು.

ಎರಡು ಸಾವಿರ ಕೋಟಿ ರುಪಾಯಿ ವೆಚ್ಚದ ಹೊಸ ಘಟಕ ಸ್ಥಾಪನೆ ನಿರ್ಧಾರವನ್ನು ತೆಗೆದುಕೊಳ್ಳಲು ಹಿಡಿದ ಸಮಯ ಮೂರು ನಿಮಿಷ ಮಾತ್ರ. ಆದರೆ ಐದು ಲಕ್ಷ ರುಪಾಯಿ ವೆಚ್ಚದಲ್ಲಿ ಆಯ್ದ ಸಿಬ್ಬಂದಿಯನ್ನು ಪ್ರವಾಸಕ್ಕೆ ಕಳಿಸುವ ಬಗ್ಗೆ ಒಂದೂವರೆ ಗಂಟೆ ಚರ್ಚಿಸಿದರೂ ಅಂತಿಮ ನಿರ್ಧಾರಕ್ಕೆ ಬರಲಾಗಲಿಲ್ಲ. ಆ ವಿಷಯ ಮುಂದಿನ ಮೀಟಿಂಗಿಗೆ ಹೋಯಿತು. ಗೊತ್ತಿರಲಿ, ಎಷ್ಟೋ ಮೀಟಿಂಗುಗಳು ಹೀಗೇ ನಡೆಯುತ್ತವೆ.