Saturday, 23rd November 2024

ಸಿಹಿ ನೀರು ತುಂಬಿಕೊಂಡ ಹಣೆ ಕಣ್ಣು !

ಶಶಾಂಕಣ

ಶಶಿಧರ ಹಾಲಾಡಿ

shashidhara.halady@gmail.com

ಈ ಮರಗಳು ಬೆಳೆಯುವುದು ಬಹಳ ಎಂದರೆ ಬಹಳ ನಿಧಾನ. ಈಗಿನ ದಿನಗಳಲ್ಲಿ ಕೃಷಿಕರ ಅಭಿರುಚಿ, ಸಂಪ್ರದಾಯ, ಪದ್ಧತಿಗಳು ಬದಲಾಗಿವೆ. ಬಹುಬೇಗನೆ ಬೆಳೆಯುವ ಗಿಡ, ಮರ, ಬಳ್ಳಿ, ಬೆಳೆಗಳನ್ನು ಇಂದಿನ ಕೃಷಿಕರು ಇಷ್ಟಪಡುತ್ತಾರೆ. ಆದ್ದರಿಂದಲೇ ಇರಬೇಕು, ಹಣೆ ಮರದಂತಹ, ಬಹು ನಿಧಾನವಾಗಿ ಬೆಳೆಯುವ ಮರಗಳಿಗೆ ಇಂದಿನ ಕೃಷಿ ದಿನಚರಿಯಲ್ಲಿ ಪ್ರಾಮುಖ್ಯತೆ ಇಲ್ಲ.

ಈಗಿನ ದಿನಗಳಲ್ಲಿ ‘ತಾಳೆ ಮರ’ ಎಂದ ಕೂಡಲೆ ನೆನಪಾಗುವುದು ‘ತಾಳೆ ಎಣ್ಣೆ’ ಅಥವಾ ಪಾಮ್ ಆಯಿಲ್ ತಯಾರಿಸಲು ಬೆಳೆಸುವ ಗಿಡಗಳು. ಆದರೆ, ನಮ್ಮ ನಾಡಿನಲ್ಲಿ ಮುಂಚಿನಿಂದಲೂ ಪ್ರಸಿದ್ಧವಾದುದು ‘ತಾಳೆಗರಿ’ ನೀಡುವ ತಾಳೆಮರ. ಹಿಂದೆ ಕಾವ್ಯಗಳನ್ನು ಬರೆದಿಡಲು ಬಳಸುತ್ತಿದ್ದ ಗರಿಗಳನ್ನು ನೀಡುತ್ತಿದ್ದ ತಾಳೆ ಮರಗಳು ಅವು.

ಬೃಹದಾಕಾರ, ನೇರವಾಗಿ ಅರವತ್ತರಿಂದ ಎಂಬತ್ತು ಅಡಿ ಎತ್ತರ ಬೆಳೆಯುವ ಕಪ್ಪನೆಯ ಕಾಂಡ, ತುದಿಯಲ್ಲಿ ಭಾರೀ ಗಾತ್ರದ ಹಸಿರು ಎಲೆ. ನಮ್ಮ ಸಂಸ್ಕೃತಿಯ ಸಾಮಾಜಿಕ ಸ್ಥಿತ್ಯಂತರಗಳಿಂದಾಗಿ, ‘ತಾಳೆಮರ’ದ ಪರಿಕಲ್ಪನೆಯೇ ಬದಲಾಗಿ ಹೋಗಿರುವುದು ಒಂದು ಪುಟ್ಟ ವಿಸ್ಮಯವೇ ಸರಿ. ತಾಳೆ ಎಣ್ಣೆ ಅಥವಾ ಪಾಮ್
ಆಯಿಲ್‌ಗೆ ಸಂಬಂಧಿಸಿದ ತಾಳೆಗಿಡಗಳ ವಿಚಾರವನ್ನು ಬದಿಗಿಟ್ಟು, ನಮ್ಮೂರಿನಲ್ಲಿ ಪುರಾತನ ಕಾಲದಿಂದಲೂ ಇದ್ದ ತಾಳೆಮರದ ಕುರಿತು ಸ್ವಲ್ಪ ನೋಡೋಣ.

ನಮ್ಮ ಹಳ್ಳಿಯಲ್ಲಿ ಮತ್ತು ಕರಾವಳಿಯಲ್ಲಿ ತಾಳೆಮರಕ್ಕೆ ‘ಹಣೆ ಮರ’ (ಪಣೆ) ಎಂದು ಕರೆಯುವ ರೂಢಿ. ಬಾಲ್ಯದಲ್ಲಿ ಈ ಹಣೆ ಮರವು ಹಲವು ಕಾರಣಗಳಿಗಾಗಿ ನಮಗೆಲ್ಲಾ ಹೆಚ್ಚು ಪರಿಚಿತ. ‘ಹಣೆ ಕಣ್ಣು’ ಎಂಬ ರುಚಿಕರ ಹಣ್ಣುಗಳನ್ನು ನೀಡುವ ಹಣೆ ಮರಗಳು ಬಹುದೂರದಿಂದಲೇ ಕಾಣಿಸುವಂತಹ ನಿಲುವಿನವುಗಳು. ನಮ್ಮೂರಿ ನಲ್ಲಿ ಮಾತ್ರವಲ್ಲ, ನಮ್ಮ ರಾಜ್ಯದಾದ್ಯಂತ ಹಲವು ಪ್ರದೇಶಗಳಲ್ಲಿ ಹಣೆ ಮರಗಳ ಸಾಲುಗಳೇ ಬೆಳೆದಿರುತ್ತಿದ್ದವು. ಬಾರೀ ಎತ್ತರ ಬೆಳೆಯುವ ಆ ಮರದ ದೊಡ್ಡ ಗಾತ್ರದ ಗರಿಗಳು ಬೇಸಗೆಯಲ್ಲಿ ಗಾಳಿ ಬೀಸಿದಾಗ ಮಾಡುವ ‘ಬರಬರ’ಸದ್ದು ಮಕ್ಕಳಿಗೆ ಭಯ ಹುಟ್ಟಿಸುವಂತಹದ್ದು.

ತಾಳೆ ಎಂದಾಗ ಗುರುತಿಸುವ ಗಿಡವೂ ಬದಲಾದಂತೆ, ‘ಹಣೆ ಕಣ್ಣಿ’ನ ಕಥೆಯೂ, ಅದನ್ನು ಗುರುತಿಸುವ ಪರಿಯೂ ಬದಲಾಗಿದೆ ಎಂದೇ ಹೇಳಬಹುದು.
ಬೆಂಗಳೂರು ಸೀಮೆಯವರಿಗೆ ಇಂದು ‘ತಾಳೆ ಮರದ ಹಣ್ಣು’ ಅಥವಾ ‘ಹಣೆ ಕಣ್ಣು’ ಎಂದರೆ ಸುಲಭವಾಗಿ ಅರ್ಥವಾಗುವುದಿಲ್ಲ; ಬದಲಿಗೆ ‘ಅದೇ ಕಣ್ರಿ, ತಾಟಿ ನಿಂಗು’ ಎಂದರೆ ಕಣ್ಣಲ್ಲಿ ಹೊಳಪು ಮೂಡಿಸಿಕೊಂಡು, ‘ಹೌದು, ಅದರ ಹಣ್ಣು ಬಹಳ ರುಚಿ’ ಎಂದಾರು! ಬೆಂಗಳೂರು, ಮೈಸೂರು ಮೊದಲಾದ ಕಡೆ ತಮಿಳುನಾಡಿ ನಿಂದ ತರಿಸಿದ ‘ಹಣೆ ಕಣ್ಣು’ಗಳನ್ನು ಮಾರುತ್ತಾರೆ. ತಮಿಳುನಾಡಿನಲ್ಲಿ ಈ ಮರಕ್ಕೆ ಸಾಕಷ್ಟು ಪ್ರಮುಖ ಸ್ಥಾನ, ಅಲ್ಲಿನ ಸಂಸ್ಕೃತಿಯಲ್ಲೂ ಇದು ವಿಶೇಷ ಸ್ಥಾನ ಪಡೆದಿದೆ.

ನಮ್ಮ ಹಳ್ಳಿಮನೆಯ ಹಿಂಭಾಗದಲ್ಲೇ ಎರಡು ಬೃಹದಾಕಾರದ ಹಣೆಮರಗಳಿದ್ದವು. ಅವುಗಳ ಎತ್ತರ, ದಪ್ಪನೆಯ ಕಪ್ಪನೆಯ ಆ ಕಾಂಡ, ತುದಿಯಲ್ಲಿ ಚೂಪಾಗಿ ಅರಳಿಕೊಂಡಿರುವ ದೊಡ್ಡ ದೊಡ್ಡ ಎಲೆಗಳು – ಎಲ್ಲವೂ ಮಕ್ಕಳಲ್ಲಿ ದಿಗಿಲು ಹುಟ್ಟಿಸುವಂತಹವುಗಳೇ ಸರಿ. ಜತೆಗೆ ‘ರಾತ್ರಿ ಹೊತ್ತು ಬೆಳದಿಂಗಳಿದ್ದರೆ, ಹಣೆ ಮರದ ತುದಿಯಲ್ಲಿ ಒಂದು ಭೂತ ಹಕ್ಕಿ ಬಂದು ಕುಳಿತುಕೊಂಡು, ಕೂಗುತ್ತಿರುತ್ತೆ’ ಎಂದು ನಮ್ಮ ಅಮ್ಮಮ್ಮ ಆಗಾಗ ಹೇಳುತ್ತಿದ್ದು, ಹಣೆಮರಗಳ ಕುರಿತು ಒಂದು ನಿಗೂಢ ಪ್ರಭಾವಳಿಯೇ ನಿರ್ಮಾಣವಾಗಿತ್ತು.

ನಮ್ಮ ಮನೆ ಸುತ್ತಲೂ ಹರಡಿದ್ದ ಆರೆಂಟು ತೆಂಗಿನ ಮರ, ಎರಡು ತೇಗದ ಮರ, ದಟ್ಟವಾಗಿ ಎಲೆ ಬಿಟ್ಟುಕೊಂಡಿದ್ದ ಹಲಸಿನ ಮರ, ಅಲ್ಲಲ್ಲಿ ಬೆಳೆದಿದ್ದ ಕೆಲವು ಅಡಕೆ ಮರಗಳು – ಇವೆಲ್ಲಕ್ಕಿಂತಲೂ ಇಪ್ಪತ್ತರಿಂದ ಮೂವತ್ತು ಅಡಿ ಎತ್ತರವಿದ್ದ, ಭವ್ಯ ನಿಲುವಿನ ಆ ಎರಡು ಹಣೆಮರಗಳು, ಮಕ್ಕಳಲ್ಲಿ ಭಯ-ಭಕ್ತಿ-ಗೌರವ ಮೂಡಿಸಿ ದ್ದರೆ, ಅದರಲ್ಲಿ ಅಚ್ಚರಿಯೇನಿದೆ!

ಆ ಎರಡು ಬಹತ್ ಹಣೆಮರಗಳು ಪ್ರತಿವರ್ಷ ಶಿಸ್ತಾಗಿ ನೂರಾರು ತಾಳೆ ಹಣ್ಣುಗಳನ್ನು ಬಿಡುತ್ತಿದ್ದರೂ, ಆ ಮರಗಳ ಎತ್ತರಕ್ಕೆ ಹೆದರಿ, ಯಾರೂ ಅವುಗಳನ್ನೇರುವ ಸಾಹಸಕ್ಕೆ ಕೈ ಹಾಕುತ್ತಿರಲಿಲ್ಲ. ನಾನು ಮೊದಲ ಬಾರಿ ‘ಹಣೆ ಕಣ್ಣ’ನ್ನು ತಿಂದದ್ದು ನಾಲ್ಕನೆಯ ತರಗತಿಯಲ್ಲಿದ್ದಾಗ. ನಮ್ಮೂರಲ್ಲೇ ಅಲ್ಲಲ್ಲಿ ಬೆಳೆದ, ಕಡಿಮೆ ಎತ್ತರದ ಬೇರೆ ಹಣೆ ಮರಗಳಿಂದ ಕಿತ್ತು ತಂದ ಹಣ್ಣುಗಳನ್ನು ಕೆತ್ತಿ ಕೊಡುತ್ತಿದ್ದರು. ದಟ್ಟ ಕಪ್ಪುಮಿಶ್ರಿತ, ತೆಂಗಿನ ಕಾಯಿ ಗಾತ್ರದ ಆ ಕಾಯಿಗಳ ಕವಚವನ್ನು ಕೆತ್ತಿದರೆ, ಒಳಗೆ ಮೂರು ‘ಕಣ್ಣು’ಗಳು.

ನಸು ಬೆಳ್ಳಿಯ ಬಣ್ಣ, ಅರೆ ಪಾರದರ್ಶಕ, ಮಿದುವಾದ ದುಂಡಗಿನ ಹಣ್ಣು ಗಳು, ಒಳಗೆ ಸಿಹಿ ಸಿಹಿ ನೀರು ಜಿನುಗುವ ಪರಿವಿಶಿಷ್ಟ. ಬೇಸಗೆಯಲ್ಲಿ ಹೆಚ್ಚಾಗಿ ಸಿಗುವ ಈ
ಹಣ್ಣುಗಳನ್ನು ತಿಂದರೆ, ಬಾಯಾರಿಕೆ ಮಾಯ; ಜತೆಗೆ ಸಾಕಷ್ಟು ಲವಣಾಂಶಗಳು ದಕ್ಕಿ, ದೇಹಕ್ಕೆ ಶಕ್ತಿ. ಎಳೆಯ ಹಣೆ ಕಣ್ಣುಗಳನ್ನು ತಿನ್ನುವುದೆಂದರೆ, ಮಕ್ಕಳಿಗೆ ತುಂಬಾ ಇಷ್ಟ. ಜಾತ್ರೆಗಳಲ್ಲಿ ಅವುಗಳನ್ನು ಮಾರುತ್ತಿದ್ದರು. ಹಣ್ಣುಗಳು ತುಸು ಬಲಿತರೆ, ಗಟ್ಟಿಯಾಗುತ್ತಾ ಹೋಗುತ್ತದೆ, ರುಚಿಯೂ ಕಡಿಮೆ. ಅಂದಿನ ದಿನಗಳಲ್ಲಿ ನಮಗೆಲ್ಲಾ ಅಷ್ಟೊಂದು ಇಷ್ಟವಾಗಿದ್ದ ಹಣೆ ಕಣ್ಣುಗಳು, ಇಂದಿನ ಮಕ್ಕಳಿಗೂ ಅಷ್ಟೇ ಇಷ್ಟವೇ – ಎಂಬ ಪ್ರಶ್ನೆಗೆ ಉತ್ತರ ಖಚಿತವಿಲ್ಲ.

ಕೆಲವು ವರ್ಷಗಳ ಹಿಂದೆ, ಕೊಯಮತ್ತೂರಿನಿಂದ ಬಸ್‌ನಲ್ಲಿ ಬರುವಾಗ, ಮಾರ್ಗಮಧ್ಯದಲ್ಲಿ ರಾಶಿ ರಾಶಿಯಾಗಿ ಮಾರುತ್ತಿದ್ದ ಹಣೆಕಣ್ಣುಗಳನ್ನು ನಾನು ಸವಿದು,
ಒಂದಷ್ಟನ್ನು ತಂದು ಬಸ್‌ನಲ್ಲಿ ಕುಳಿತಿದ್ದ ನನ್ನ ಮಗಳಿಗೆ ನೀಡಿದರೆ, ಅವಳು ಅದನ್ನು ಕಣ್ಣಂಚಿನಿಂದಲೇ ಕಂಡು, ಬೇಡ ಅಂದು ತಲೆಯಾಡಿಸಿದಳೇ ಹೊರತು, ಅದರ ರುಚಿಯನ್ನು ನೋಡುವ ಕುತೂಹಲವನ್ನೂ ತೋರಲಿಲ್ಲ! ಹೊಸ ತಲೆಮಾರಿನ ನಾಲಗೆ ರುಚಿಗಳು ಬದಲಾಗಿಬಿಟ್ಟಿವೆ!ಇರಲಿ, ನಮ್ಮ ಹಳ್ಳಿ ಮನೆಯ ಹಿಂದೆ ಇದ್ದ ಆ ಎರಡು ಭಾರೀ ಎತ್ತರದ ಹಣೆ ಮರದ ಕಾಂಡದುದ್ದಕ್ಕೂ ಅರ್ಧ ಅಡಿ ಅಗಲದ ಮೆಟ್ಟಿಲುಗಳನ್ನು ಕೆತ್ತಿದ ಗುರುತುಗಳಿದ್ದವು.

ಎಂಬತ್ತು ಅಡಿ ಎತ್ತರವಿದ್ದ ಆ ಕಾಂಡದ ಮೇಲೆ, ಸುಮಾರು ನಲವತ್ತು ಅಡಿ ಎತ್ತರದ ತನಕ, ಯಾರೋ ಕತ್ತಿಯಿಂದ ಮೆಟ್ಟಿಲುಗಳನ್ನು ಕೆತ್ತಿದ್ದು ದೂರ ದಿಂದಲೂ ಸ್ಪಷ್ಟವಾಗಿ ಕಾಣಿಸುತ್ತಿತ್ತು. ಹಲವು ವರ್ಷ ಹಳೆಯದಾದ ಆ ಗುರುತುಗಳು ತುಸು ಮಾಸಿದ್ದರೂ, ನುರಿತ ಮರ ಹತ್ತುವವರು ಅದನ್ನು ಆಧರಿಸಿ ಮರವನ್ನು ಏರಬಹುದಿತ್ತು. ಆದರೆ ಆ ಗುರುತುಗಳು ನಲವತ್ತು ಅಡಿಗಳಿಗಿಂತ ಮೇಲ್ಭಾಗದಲ್ಲಿ ಇರಲಿಲ್ಲ. ಆ ನಂತರ, ಯಾವುದೇ ಗಚ್ಚಿನ ಗುರುತಿಲ್ಲದೇ ಆ ಕಪ್ಪನೆಯ, ದಪ್ಪನೆಯ ಕಾಂಡಗಳು ಮೇಲಕ್ಕೇರಿ ಹೋಗಿದ್ದವು. ಮರ ಹತ್ತಲು ಅನುಕೂಲವಾಗುವಂತೆ ಆ ಗುರುತುಗಳನ್ನು ಯಾರು, ಏಕೆ ಮತ್ತು ಯಾವಾಗ
ಮಾಡಿದ್ದರು? ಇಂತಹ ಪ್ರಶ್ನೆಗಳಿಗೆ ನಮ್ಮ ಅಮ್ಮ ಮ್ಮನ ಬಳಿ ಉತ್ತರ ಸಿದ್ಧವಿತ್ತು.

‘ಅಷ್ಟೂ ಗೊತ್ತಾಗುವುದಿಲ್ಲವೆ? ಹಣೆ ಮರದಿಂದ ಕಳ್ಳು (ಶೇಂದಿ) ತೆಗೆಯುವವರು ಮಾಡಿದ ಗುರುತು ಅದು. ಪ್ರತಿದಿನ ಬೆಳಗ್ಗೆ ಮರ ಏರಿ, ಪ್ರತಿ ಮರದಿಂದ ಎರಡು ಲೋಟ ಕಳ್ಳನ್ನು ಸಂಗ್ರಹಿಸುತ್ತಿದ್ದರು’.

‘ಯಾರು?’
‘ಕಳ್ಳು ಸಂಗ್ರಹಿಸುವ ಮನೆಗಳೇ ನಮ್ಮೂರಿನಲ್ಲಿದ್ದವು. ಈಗ ಇಲ್ಲ ಅಷ್ಟೆ. ಆ ಕಳ್ಳನ್ನು ಊರಿನವರು ಕುಡಿಯುತ್ತಿದ್ದರು’. ‘ಈಗ ಯಾಕೆ ಅದನ್ನು ಸಂಗ್ರಹಿಸುವುದಿಲ್ಲ?
ನಲವತ್ತು ಅಡಿಗಳಿಗಿಂತ ಮೇಲ್ಭಾಗದ ಮರದ ಕಾಂಡದ ಮೇಲೆ ಯಾವುದೇ ಗುರುತುಗಳಿಲ್ಲವಲ್ಲ?’ ‘ಹೌದು, ಆ ಮೇಲೆ ಕಳ್ಳು ತೆಗೆಯುವುದನ್ನು ನಿಲ್ಲಿಸಿದರು’
‘ಯಾಕೆ?’ ‘ಮರ ಎತ್ತರವಾದ ನಂತರ, ಮರ ಹತ್ತಲು ಹೆದರಿಕೆ ಆಗಿರಬೇಕು’.

ಇದು ಅಮ್ಮಮ್ಮನ ಉತ್ತರ. ಆದರೆ ಆ ಕೊನೆಯ ಉತ್ತರ ಭಾಗಶಃ ನಿಜ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರೆತ ನಂತರ, ನಮ್ಮ ಹಳ್ಳಿಗೂ ಸಾರಾಯಿ ಅಂಗಡಿ ಬಂದ ನಂತರ, ಶೇಂದಿಯ ಮೇಲಿನ ಬೇಡಿಕೆ ಕಡಿಮೆಯಾಯಿತು. ಜತೆಗೆ, ಶೇಂದಿ ಸಂಗ್ರಹಿಸಲು ಸಹ ನಿಯಂತ್ರಣ ಹೇರಲಾಯಿತು. ಆದ್ದರಿಂದಲೇ, ಈ ಎರಡು ಮರಗಳಿಂದ ಶೇಂದಿ ಸಂಗ್ರಹ ನಿಂತುಹೋಗಿರಬೇಕು.

ಇವುಗಳ ಜತೆಗೇ, ನಮ್ಮೂರಿನಲ್ಲಿ ಕಡಿಮೆ ಎತ್ತರದ, ಕಡಿಮೆ ವಯಸ್ಸಿನ ಇನ್ನೂ ಕೆಲವು ಹಣೆ ಮರಗಳು ಇದ್ದು, ಅವುಗಳಿಂದಲೂ ಶೇಂದಿ ಸಂಗ್ರಹ ನಡೆ
ಯುತ್ತಿರಲಿಲ್ಲ. ನಮ್ಮ ದೇಶದಲ್ಲಿ ಪ್ರಾದೇಶಿಕವಾಗಿ ಕಳ್ಳು ಅಥವಾ ಶೇಂದಿ ಸಂಗ್ರಹ, ಸೇವನೆಯ ಕಥನವೇ ಕುತೂಹಲಕಾರಿ, ಅಧ್ಯಯನಯೋಗ್ಯ. ಸಮುದ್ರಕ್ಕೆ ತಾಗಿಕೊಂಡಿರುವ ಕೆಲವು ಹಳ್ಳಿಗಳಲ್ಲಿ ಇಂದಿಗೂ ತೆಂಗಿನ ಮರಗಳಿಂದ ಶೇಂದಿ ಸಂಗ್ರಹ ನಡೆಯುತ್ತಿದೆ. ಹಳೆಯ ಮೈಸೂರಿನ ಭಾಗದಲ್ಲಿ ತೆಂಗಿನ ಮರದಿಂದ ಸಂಗ್ರಹಿಸುವ ‘ನೀರಾ’ವನ್ನು ಆರೋಗ್ಯವರ್ಧಕ ಪಾನೀಯವಾಗಿ ಪರಿಚಯಿಸುವ ಪ್ರಯತ್ನ ನಿರಂತರ ಸಾಗಿದೆ.

ನಮ್ಮೂರಿನ ಕಳ್ಳಿನ ವಿಚಾರಕ್ಕೆ ಬಂದರೆ, ಬೆಳಗ್ಗೆ ಏಳು ಗಂಟೆಗೂ ಮುಂಚೆ ಅದನ್ನು ಕುಡಿದರೆ, ಶಕ್ತಿವರ್ಧಕ, ನಂತರ ಹುಳಿ ಬರುವುದರಿಂದ ಅಮಲು ಪದಾರ್ಥ ಎನ್ನುತ್ತಾರೆ. ನಮ್ಮೂರಿನಲ್ಲಿ ತೆಂಗು, ತಾಳೆ ಮತ್ತು ಬಗನೆ ಮರದಿಂದ ಕಳ್ಳು ಸಂಗ್ರಹಿಸುವ ಪರಿಪಾಠ ಇತ್ತು; ಈಚಿನ ವರ್ಷಗಳಲ್ಲಿ ಇದು ಬಹುಮಟ್ಟಿಗೆ ನಿಂತು
ಹೋಗಿದೆ. ಮರದ ತುದಿಯಲ್ಲಿ ಹೊರಬರುವ ಹೂವಿನ ಕೊನೆಯನ್ನು ಕತ್ತರಿಸಿ, ಅಲ್ಲೊಂದು ಮಡಕೆಯನ್ನು ಕಟ್ಟಿ, ಪ್ರತಿ ದಿನ ಬೆಳಗ್ಗೆ ಒಂದೊಂದು ಮರದಿಂದಲೂ ಒಂದೆರಡು ಲೋಟ ದ್ರವವನ್ನು ಸಂಗ್ರಹಿಸಿ, ಅದನ್ನು ಮಾರುವ ವೃತ್ತಿಯೇ ಕುತೂಹಲಕಾರಿ.

ನಮ್ಮ ಹಳ್ಳಿ ಮನೆಯ ಹಿಂಭಾಗದಲ್ಲಿ ಬೆಳೆದಿದ್ದ ರಡು ಬೃಹತ್ ತಾಳೆ ಮರಗಳು ಬಹೂಪಯೋಗಿ. ಆ ಎತ್ತರವಾದ ಮರಗಳನ್ನು ಯಾರೂ ಏರುತ್ತಿರಲಿಲ್ಲ ವಾದರೂ, ಕಡಿಮೆ ಎತ್ತರದ ಇನ್ನೂ ಕೆಲವು ತಾಳೆ ಮರಗಳು ನಮ್ಮ ಹಳ್ಳಿಯಲ್ಲಿ ಅಲ್ಲಲ್ಲಿ ಅವುಗಳ ಪಾಲಿಗೆ ಬೆಳೆದಿದ್ದವು. ಆ ಮರಗಳ ಗರಿಗಳ ಮೇಲೆ ಹಿಂದಿನ ಕಾಲದಲ್ಲಿ ಕಾವ್ಯಗಳನ್ನು ಬರೆದಿಟ್ಟಿರುವುದು ಸರಿಯಷ್ಟೆ. ಅದೇ ಗರಿಗಳಿಂದ ಬೀಸಣಿಗೆ ಮಾಡುವ ಕಲೆಯೂ ನಮ್ಮೂರನಲ್ಲಿತ್ತು. ಒಪ್ಪವಾಗಿ ಕತ್ತರಿಸಿ, ದಾರದಿಂದ ಪೋಣಿಸಿ, ಎರಡೂ ಕೊನೆಯಲ್ಲಿ ಬಿದಿರಿನ ಕಡ್ಡಿಗಳನ್ನು ಸಿಕ್ಕಿಸಿ, ಮಡಚುವ ಬೀಸಣಿಗೆ ಮಾಡುವ ಪರಿ ನಿಜಕ್ಕೂ ಕಲಾತ್ಮಕ.

ತಾಳೆ ಗರಿಗಳ ಇನ್ನೊಂದು ಉಪಯೋಗವೆಂದರೆ ಕೊಡೆ ಅಥವಾ ಛತ್ರಿ ತಯಾರಿಸಲು! ಮೂರನೆಯ ತರಗತಿಗೆ ನಾನು ನಮ್ಮೂರಿನ ಶಾಲೆಗೆ ಸೇರಿಕೊಂಡಾಗ, ನಮ್ಮ ಅಮ್ಮಮ್ಮ ನನಗೆ ಕೊಡಿಸಿದ್ದು ‘ಓಲಿಕೊಡೆ’ – ತಾಳೆಗರಿಗಳನ್ನು ಬೇಯಿಸಿ, ಒಣಗಿಸಿ, ಬಿದಿರಿನಿಂದ ಮಾಡಿದ ವೃತ್ತಾಕಾರದ ರೂಪಕ್ಕೆ ಸಿಕ್ಕಿಸಿ ಆ ಕೊಡೆ  ಯನ್ನು ತಯಾರಿಸಲಾಗಿತ್ತು. ಬಟ್ಟೆಯ ಕೊಡೆಗಿಂತ ಇದು ಬಲಶಾಲಿ ಮತ್ತು ಎಂತಹದ್ದೇ ಮಳೆ ಬಂದರೂ, ಅದರೊಳಗೆ ನೀರು ಸಿಡಿಯುತ್ತಿರಲಿಲ್ಲ ಎಂದು ಆ ಕೊಡೆಯನ್ನು ಶಿಫಾರಸ್ಸು ಮಾಡುತ್ತಿದ್ದರು ನಮ್ಮ ಅಮ್ಮಮ್ಮ! ಎರಡು ವರ್ಷ ‘ಓಲಿ ಕೊಡೆ’ಯನ್ನೇ ಹಿಡಿದು, ಕಾಡಿನ ನಡುವೆ ಸಾಗುವ ದಾರಿಯಲ್ಲಿ ನಡೆದು, ಶಾಲೆಗೆ
ಹೋದ ಸಾಹಸ ನನ್ನದು. ಅಂತಹ ತಾಳೆಗರಿಗಳ ಕೊಡೆಯನ್ನು ಈಗ ಮಠದ ಸ್ವಾಮಿಗಳು ಉಪಯೋಗಿಸುತ್ತಾರೆ!

ಈಚೆಗೆ ನಮ್ಮೂರಿಗೆ ಹೋಗಿ, ಆ ತಾಳೆ ಮರಗಳಿದ್ದ ಜಾಗದತ್ತ ಕಣ್ಣು ಹಾಯಿಸಿದರೆ, ಬೋಳು ಬೋಳಾಗಿ ಕಂಡಿತು. ಆ ಬೃಹತ್ ತಾಳೆಮರಗಳು ಎಂದೋ ಬಿದ್ದುಹೋಗಿದ್ದವು. ಮಾತ್ರವಲ್ಲ, ನಮ್ಮೂರಲ್ಲಿ ಅಲ್ಲಲ್ಲಿ ಬೆಳೆದುಕೊಂಡಿದ್ದ ತಾಳೆಮರಗಳ ಸಂಖ್ಯೆಯೂ ಕಡಿಮೆಯಾಗಿತ್ತು. ಈ ಮರಗಳು ಬೆಳೆಯುವುದು ಬಹಳ ಎಂದರೆ ಬಹಳ ನಿಧಾನ. ಈಗಿನ ದಿನಗಳಲ್ಲಿ ಕೃಷಿಕರ ಅಭಿರುಚಿ, ಸಂಪ್ರದಾಯ, ಪದ್ಧತಿಗಳು ಬದಲಾಗಿವೆ. ಬಹು ಬೇಗನೆ ಬೆಳೆಯುವ ಗಿಡ, ಮರ, ಬಳ್ಳಿ, ಬೆಳೆ ಗಳನ್ನು ಇಂದಿನ ಕೃಷಿಕರು ಇಷ್ಟಪಡುತ್ತಾರೆ. ಆದ್ದರಿಂದಲೇ ಇರಬೇಕು, ಹಣೆ ಮರ ಅಥವಾ ತಾಳೆ ಮರದಂತಹ, ಬಹು ನಿಧಾನವಾಗಿ ಬೆಳೆಯುವ ಮರಗಳಿಗೆ ಇಂದಿನ ಕೃಷಿ ದಿನಚರಿಯಲ್ಲಿ ಪ್ರಾಮುಖ್ಯತೆ ಇಲ್ಲ.