Saturday, 23rd November 2024

ರಾಷ್ಟ್ರೀಯ ಷೇರುಪೇಟೆ ವಂಚನೆ ಪ್ರಕರಣ: ಏಕಕಾಲದಲ್ಲಿ ಸಿಬಿಐ ದಾಳಿ

ಮುಂಬೈ: ರಾಷ್ಟ್ರೀಯ ಷೇರುಪೇಟೆ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಶನಿವಾರ ದೇಶದ 10ಕ್ಕೂ ಹೆಚ್ಚು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ.

ಮುಂಬೈ, ಗಾಂಧಿನಗರ, ದೆಹಲಿ, ನೊಯಿಡಾ, ಗುರುಗ್ರಾಮ ಮತ್ತು ಕೋಲ್ಕತ್ತಾ ಸೇರಿದಂತೆ ಹಲವು ನಗರಗಳಲ್ಲಿ ದಾಳಿ ನಡೆಸಿದ್ದು, ತೀವ್ರ ಶೋಧ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಎನ್‌ಎಸ್‌ಇ ಮಾಜಿ ಸಿಇಒ ಮತ್ತು ಎಂಡಿ ಚಿತ್ರಾ ರಾಮಕೃಷ್ಣ ಹಾಗೂ ಸಿಒಒ ಆನಂದ್ ಸುಬ್ರಮಣಿಯನ್ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆ ಈಗಾಗಲೇ ಚಾರ್ಜ್‌ಶೀಟ್ ಸಲ್ಲಿಸಿದೆ.

2010 ರಿಂದ 2015ರವರೆಗೆ ಚಿತ್ರಾ ರಾಮಕೃಷ್ಣ ಅವರು ಎನ್‌ಎಸ್‌ಇ ವ್ಯವಹಾರಗಳನ್ನು ನಿರ್ವಹಿಸು ತ್ತಿದ್ದ ಕಾಲಾವಧಿಯ ತನಿಖೆ ಪೂರ್ಣಗೊಂಡಿದೆ. ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿರುವ ಆರೋಪಿಗಳ ಪೈಕಿ ಒಂದಾದ ಒಪಿಜಿ ಸೆಕ್ಯುರಿಟೀಸ್ ಸಂಸ್ಥೆಯು, ಎನ್‌ಎಸ್‌ಇಯ ಫ್ಯೂಚರ್ಸ್ ಮತ್ತು ಆಪ್ಷನ್ಸ್‌ ವಿಭಾಗಕ್ಕೆ 670 ದಿನಗಳ ಕಾಲ ದ್ವಿತೀಯ ಪಿಒಪಿ ಸರ್ವರ್‌ ಮೂಲಕ ಸಂಪರ್ಕ ಹೊಂದಿತ್ತು ಎಂಬುದು ಈವರೆಗಿನ ತನಿಖೆಯಲ್ಲಿ ದೃಢಪಟ್ಟಿದೆ.

ಕಳೆದ ತಿಂಗಳು, ಸಂಸ್ಥೆಯು ಮಾಜಿ ಎನ್‌ಎಸ್‌ಇ ವ್ಯವಸ್ಥಾಪಕ ನಿರ್ದೇಶಕಿ ಚಿತ್ರಾ ರಾಮಕೃಷ್ಣ ಮತ್ತು ಅದರ ಮಾಜಿ ಗ್ರೂಪ್ ಆಪರೇಟಿಂಗ್ ಆಫೀಸರ್ ಆನಂದ್ ಸುಬ್ರಮಣಿಯನ್ ವಿರುದ್ಧ ಆರೋಪಪಟ್ಟಿ ಸಲ್ಲಿಸಿತ್ತು. ಸಿಬಿಐ ಫೆಬ್ರವರಿಯಲ್ಲಿ ಸುಬ್ರಮಣಿಯನ್ ಅವರನ್ನು ಮತ್ತು ಶೀಘ್ರದಲ್ಲೇ ಚಿತ್ರಾ ರಾಮಕೃಷ್ಣ ಅವರನ್ನು ಬಂಧಿಸಲಾಯಿತು.