Saturday, 23rd November 2024

ಸಿಇಟಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವೆಬ್ ಪೋರ್ಟಲ್

ಬೆಂಗಳೂರು:
ಪ್ರಸಕ್ತ ಸಾಲಿನಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಹಾಗೂ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ–ನೀಟ್) ಬರೆಯಲು ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ತಂತ್ರಜ್ಞಾನ ಆಧರಿತ ‘ಗೆಟ್‌ಸೆಟ್‌ಗೊ’ (GetCETGo) ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ  ಹಾಗೂ ಉಪಮುಖ್ಯಮಂತ್ರಿ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್‌,  ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಉಪಸ್ಥಿತರಿದ್ದರು.
“ಲಾಕ್‌ಡೌನ್‌ ಸಮಯದಲ್ಲಿ ದ್ವಿತೀಯ ಪಿಯುಸಿ ಅಥವಾ ತತ್ಸಮಾನ (12ನೇ ತರಗತಿಯ) ವಿದ್ಯಾರ್ಥಿಗಳು ವಿಶೇ‍‍‍‍ಷ ತರಗತಿ ಹಾಗೂ ಕೋಚಿಂಗ್‌ ಕ್ಲಾಸ್‌ಗಳಿಗೆ ಹೋಗಲಾಗದೆ ಸಂಕಷ್ಟಕ್ಕೆ ಸಿಲುಕಿದ್ದರು.   ಇಂಥ ಸಂದರ್ಭದಲ್ಲಿ ವಿದ್ಯಾರ್ಥಿ ಸಮೂಹಕ್ಕೆ ಸಹಕಾರ ನೀಡಲು ರಾಜ್ಯ ಸರ್ಕಾರ ಮುಂದಾಗಿದೆ. ಉನ್ನತ ಶಿಕ್ಷಣ ಇಲಾಖೆ ‘ಗೆಟ್‌ಸೆಟ್‌ಗೊ’ ಆನ್‌ಲೈನ್‌ ಉಚಿತ ಕೋರ್ಸ್‌ ಆರಂಭಿಸಿದೆ.  ಭಾರತದಲ್ಲಿ ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಅನುಕೂಲಕ್ಕೆ ಇಂಥ ಕಾರ್ಯಕ್ರಮ ರೂಪಿಸಲಾಗಿದ್ದು, ರಾಜ್ಯದ ಒಟ್ಟು 1. 94 ಲಕ್ಷ ವಿದ್ಯಾರ್ಥಿಗಳು ವಿಶೇಷವಾಗಿ ಬಡ ವಿದ್ಯಾರ್ಥಿಗಳು ಇದರ ಲಾಭ ಪಡೆಯಬಹುದು,”ಎಂದು ಉಪಮುಖ್ಯಮಂತ್ರಿ  ಅಶ್ವತ್ಥನಾರಾಯಣ ಹೇಳಿದರು.
“ರಾಷ್ಟ್ರಮಟ್ಟದಲ್ಲಿ ನೀಟ್‌ ಪರೀಕ್ಷೆ ಬರೆಯುವ ರಾಜ್ಯದ ವಿದ್ಯಾರ್ಥಿಗಳಿಗೆ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ  ಶೇ15 ಸೀಟ್‌ ಲಭ್ಯವಿದ್ದು, ಈ ಉತ್ತಮ ಅವಕಾಶ ಪಡೆದುಕೊಳ್ಳಲು ಅನುಕೂಲವಾಗುವಂತೆ  ನಮ್ಮ ವಿದ್ಯಾರ್ಥಿಗಳಿಗೆ ಸರ್ಕಾರ ಆನ್‌ಲೈನ್‌ ತರಬೇತಿಯ ಸೌಕರ್ಯ ಕಲ್ಪಿಸಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು ಒಟ್ಟು 80 ಲಕ್ಷ ಖರ್ಚಾಗಿದೆ. ಅಂದರೆ, ಪ್ರತಿ ವಿದ್ಯಾರ್ಥಿಯ ಕಲಿಕೆಗೆ ಕೇವಲ ₹40 ವೆಚ್ಚವಾಗುತ್ತದೆ.  ದುಬಾರಿ ಶುಲ್ಕದ ವಿಶೇಷ ಕೋಚಿಂಗ್‌ ಪಡೆಯಲಾಗದ ಬಡ ವಿದ್ಯಾರ್ಥಿಗಳು ಈ ಕೋರ್ಸ್‌ನ ಸಂಪೂರ್ಣ ಪ್ರಯೋಜನ ಪಡೆದುಕೊಳ್ಳಬಹುದು,”ಎಂದು ವಿವರಿಸಿದರು.
ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಈ ಯೋಜನೆ ರೂಪಿಸಲು ಪ್ರೋತ್ಸಾಹ ಕೊಟ್ಟು, ನೆರವಾದ ಮುಖ್ಯಮಂತ್ರಿ ಬಿ.ಎಸ್‌ ಯಡಿಯೂರಪ್ಪ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಕಳೆದ 5 ತಿಂಗಳಿಂದ ಇದರ ತಯಾರಿ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಅದು ವಿದ್ಯಾರ್ಥಿಗಳ ನೆರವಿಗೆ ಬಂದಿದೆ,”ಎಂದರು.
GetCETGo ಕಾರ್ಯಕ್ರಮದ ವೈಶಿಷ್ಟ್ಯಗಳು
ಕೆಸಿಇಟಿ – 2020 ಪರೀಕ್ಷೆಗೆ ಹೆಸರು ನೋಂದಾಯಿಸಿರುವ ಎಲ್ಲ ವಿದ್ಯಾರ್ಥಿಗಳಿಗೆ ಈ ಆನ್‌ಲೈನ್‌ ಕೋರ್ಸ್‌ ಉಚಿತವಾಗಿ ಲಭ್ಯವಾಗಲಿದೆ.
ಕಳೆದೆರಡು ದಶಕಗಳಿಂದೀಚೆಗೆ ಆನ್‌ಲೈನ್‌ ಶಿಕ್ಷಣ ವಲಯದಲ್ಲಿ ಮುಂಚೂಣಿಯಲ್ಲಿರುವ ಸಿಂಚು ಇನ್ಫೋಟೆಕ್ ಮತ್ತು ದೀಕ್ಷಾ ಆನ್‌ಲೈನ್, ಪರೀಕ್ಷೆಗೆ  ಪೂರಕವಾದ ಎಲ್ಲ ಕಲಿಕಾ ವಿಷಯವನ್ನೊಳಗೊಂಡಿರುವ ವೆಬ್ ಪೋರ್ಟಲ್ ಮತ್ತು ಆ್ಯಂಡ್ರಾಯ್ಡ್‌ ಆ್ಯಪ್‌ ಅಭಿವೃದ್ಧಿಪಡಿಸಿವೆ.
ಈ 2 ವೇದಿಕೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ಲಭ್ಯ
1) getcetgo.in ವೆಬ್ ಪೋರ್ಟಲ್
2)   ಗೂಗಲ್‌ ಪ್ಲೇಸ್ಟೋರ್‌ (Google Play Store)ನ ಆ್ಯಂಡ್ರಾಯ್ಡ್‌ ಆ್ಯಪ್‌  ‘GetCETGo’ (3-4 ದಿನಗಳಲ್ಲಿ ಆ್ಯಪ್‌  ಬಳಕೆಗೆ ಲಭ್ಯವಾಗುವ ನಿರೀಕ್ಷೆಯಿದೆ)
ಕ್ರ್ಯಾಶ್ ಕೋರ್ಸ್‌ನಲ್ಲಿ  ಪಠ್ಯ ಸಾರಾಂಶ, ಅಭ್ಯಾಸ ಪ್ರಶ್ನೆಗಳು, ಪ್ರತಿ ಅಧ್ಯಾಯದ ಪರೀಕ್ಷೆಗಳು, ಅಣಕು ಪರೀಕ್ಷೆಗಳು, ಪುನಾರ್ವತನೆಯ ವೀಡಿಯೋ ಸೇರಿದಂತೆ ಅಧ್ಯಯನಕ್ಕೆ ಪೂರಕವಾದ ಹಲವು ಅಂಶಗಳು ಇರಲಿವೆ. ಅಷ್ಟೇ ಅಲ್ಲದೇ,  ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ, ಪರೀಕ್ಷೆಗಳಲ್ಲಿ ಅವರ ಸಾಧನೆಯ ಮಾಹಿತಿ, ವಿಶ್ಲೇಷಣೆ ಹಾಗೂ  ವೇದಿಕೆಯ ಇತರ ಬಳಕೆದಾರರ ಶ್ರೇಯಾಂಕವನ್ನು ತಮ್ಮ ಸಾಧನೆ ಜತೆಗೆ ಹೋಲಿಕೆ ಮಾಡಿಕೊಳ್ಳುವ ಅವಕಾಶ ಸೇರಿದಂತೆ ಹಲವು ವೈಶಿಷ್ಟ್ಯಗಳನ್ನು ಹೊಂದಿದೆ.
ಪುನಾರರ್ವತನೆಯ ವೀಡಿಯೋಗಳು  GetCETGo ಯೂಟ್ಯೂಬ್‌   ಚಾನಲ್‌ನಲ್ಲಿ ಲಭ್ಯ.  ಯುಟ್ಯೂಬ್‌ ನಲ್ಲಿ ನೇರವಾಗಿ ಚಾನಲ್‌ಗೆ ಹೋಗಿಯೂ ವಿಡಿಯೋಗಳನ್ನು ಸಬ್‌ಸ್ಕ್ರೈಬ್‌ ಮಾಡಿ, ವೀಕ್ಷಿಸಬಹುದು.  ಆ್ಯಪ್‌ನಲ್ಲಿರುವ ಲಿಂಕ್‌ ಮೂಲಕವೂ ವಿಡಿಯೋಗಳನ್ನು ವೀಕ್ಷಿಸಬಹುದು.  ವೆಬ್‌ಪೋರ್ಟಲ್‌ ಬಳಕೆದಾರರಿಗೆ ಯೂಟ್ಯೂಬ್‌ ಚಾನಲ್‌ ಸ್ವಯಂಚಾಲಿತವಾಗಿ ತೆರೆದುಕೊಳ್ಳುತ್ತದೆ.  ಈ ಕುರಿತ ವೀಡಿಯೋಗಳು ಹಂತ ಹಂತವಾಗಿ ಬಿಡುಗಡೆ ಆಗಲಿವೆ