ನೂತನ ಜಿಲ್ಲಾಧ್ಯಕ್ಷ ಹೆಬ್ಬಾಕ ರವಿಶಂಕರ್ ಪದಗ್ರಹಣ
ತುಮಕೂರು: ತುಮಕೂರು ಜಿಲ್ಲಾ ಬಿಜೆಪಿ ನೂತನ ಅಧ್ಯಕ್ಷರಾಗಿ ಮಂಗಳವಾರ ಹೆಬ್ಬಾಕ ರವಿಶಂಕರ್, ಪಕ್ಷದ ಬಾವುಟ ಸ್ವೀಕರಿಸುವ ಮೂಲಕ ಅಧಿಕಾರ ವಹಿಸಿಕೊಂಡರು.
ನಗರದ ಬಾವಿಕಟ್ಟೆ ಕಲ್ಯಾಣ ಮಂಟದಲ್ಲಿ ನಡೆದ ಜಿಲ್ಲಾ ಕಾರ್ಯಕಾರಿಣಿ ಸಭೆ ಮತ್ತು ನೂತನ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಜಿಲ್ಲಾ ಪ್ರಭಾರಿ ನವೀನ್ ಅವರು ನೂತನ ಅಧ್ಯಕ್ಷರಿಗೆ ಪಕ್ಷದ ಬಾವುಟ ನೀಡಿ ಅಧಿಕಾರ ಹಸ್ತಾಂತರ ಮಾಡಿ ದರು.
ಬಿಜೆಪಿ ಜಿಲ್ಲಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಹಾಗೂ ಜಿಲ್ಲಾ ಕಾರ್ಯಕಾರಿಣಿ ಸಭೆ ಯನ್ನು ಉದ್ಘಾಟಿಸಿ ಮಾತನಾಡಿದ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ, ಸರಕಾರ ಮಾಡಿದ ಒಳ್ಳೆಯ ಕೆಲಸವನ್ನು ಜನರಿಗೆ ಮನವರಿಕೆ ಮಾಡುವ ಕಾಯಕವನ್ನು ಕಾರ್ಯಕರ್ತರು ಮಾಡಬೇಕು ಎಂದು ಕರೆ ನೀಡಿದರು.
ಇದು ಚುನಾವಣಾ ಸಮಯ, ನಮ್ಮ ಮುಂದೆ ಜಿ.ಪಂ, ತಾ.ಪಂ, ವಿಧಾನಸಭೆ, ಲೋಕ ಸಭಾ ಚುನಾವಣೆಗಳಿವೆ. ಇಂತಹ ವೇಳೆಯಲ್ಲಿ ನಾವುಗಳು ಸರ್ಕಾರ ಮಾಡಿರುವ ಒಳ್ಳೆಯ ಕೆಲಸಗಳನ್ನು ಜನರ ಮುಂದೆ ಪ್ರಚಾರ ಮಾಡಬೇಕು ಸರಕಾಎ ಬಗ್ಗೆ ನೆಗೆಟಿವ್ ಪ್ರಚಾರವೇ ಹೆಚ್ಚಾಗಿದೆ. ಹಾಗಾಗಿ ನಾವುಗಳು ಎಚ್ಚೆತ್ತುಕೊಳ್ಳಬೇಕಿದೆ ಎಂದು ಹೇಳಿದರು.
ಸಾವಿರಾರು ಕೋಟಿ ವೆಚ್ಚದ ನೀರಾವರಿ ಯೋಜನೆಗಳ ಫಲದಿಂದಾಗಿ ಇಂದು ಜಿಲ್ಲೆಯ ಬಹುತೇಕ ಕೆರೆಗಳು ಭರ್ತಿಯಾಗಿವೆ. ಈ ಬಗ್ಗೆ ಜನರಿಗೆ ಮನವರಿಕೆ ಮಾಡಿ ಕೊಡುವ ಕೆಲಸ ಆಗಬೇಕಿದೆ. ಸಂಘಟನೆ, ನಂತರ ಹೋರಾಟ ಮಾಡಬೇಕು. ಇದು ಪರೀಕ್ಷಾ ಸಮಯ ಈಗ ನಿರ್ಲಕ್ಷ÷್ಯ ಮಾಡಿದರೆ ಹೆಚ್ಚು ಬೆಲೆ ತೆರಬೇಕಾಗುತ್ತದೆ. ಪಕ್ಷದ ಕಾರ್ಯಕರ್ತರು ಮತ್ತು ಮುಖಂಡರು ಒಗ್ಗೂಡಿದರೆ ಚುನಾವಣೆ ಗೆಲ್ಲುವುದು ಕಷ್ಟವಲ್ಲ. ಈಗಾಗಲೇ ಸಿರಾ ಉಪಚುನಾವಣೆ, ವಿಧಾನ ಪರಿಷತ್ ಚುನಾವಣೆ ಗೆಲುವು ನಮ್ಮ ಮುಂದಿದೆ ಎಂದರು.
ಪಕ್ಷ ಒಂದು ಹಡಗು ಇದ್ದಂತೆ. ಎಲ್ಲರಿಗೂ ಅಧಿಕಾರ ನೀಡಲು ಸಾಧ್ಯವಾಗಿಲ್ಲ. ಹಾಗಾಗಿ ಕಾರ್ಯಕರ್ತರು ಭ್ರಮನಿರಸನ ವಾಗುವುದು ಬೇಡ. ಮುಂದಿನ ದಿನಗಳಲ್ಲಿ ಅಧಿಕಾರ ಸಿಗಲಿದೆ. ಪಕ್ಷಕ್ಕಾಗಿ ದುಡಿಯೋಣ ಎಂದರು.
ತುಮಕೂರು ಸಂಘಟನಾತ್ಮಕ ಜಿಲ್ಲೆ ಅಧ್ಯಕ್ಷರಾಗಿರುವ ರವಿ ಹೆಬ್ಬಾಕ ಅವರು ಅನುಭವಿಗಳು, ಅವರ ಅನುಭವ ಮತ್ತು ಶಕ್ತಿಯನ್ನು ಬಳಸಿಕೊಂಡು 7ಕ್ಕೆ 7 ಸ್ಥಾನಗಳನ್ನು ಗೆಲ್ಲೋಣ ಎಂದು ಹೇಳಿದರು.
ಸಂಸದ ಜಿ.ಎಸ್. ಬಸವರಾಜು ಮಾತನಾಡಿ, ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಸಾವಿರಾರು ಕೋಟಿ ರೂ.ಗಳ ಅನುದಾನ ತಂದು ನೀರಾವರಿ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗಿದೆ. ಜಿಲ್ಲೆಯಲ್ಲಿ ಹೇಮಾವತಿ ನಾಲೆಯ ಅಧುನಿಕತೆಗೆ 450 ಕೋಟಿ ರೂ.ಗಳನ್ನು ಖರ್ಚು ಮಾಡಲಾಗುತ್ತಿದೆ. ಹೆಚ್.ಎ.ಎಲ್., ಹಿಮಾಚಲ ಕಂಪೆನಿಗಳು ಕೆಲಸ ಮಾಡುತ್ತಿವೆ. ಈ ಎಲ್ಲಾ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಕಾರ್ಯ ಆಗಬೇಕಿದೆ ಎಂದರು.
ಜಿಲ್ಲಾ ಬಿಜೆಪಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಹೆಚ್.ಎಸ್. ರವಿಶಂಕರ್ ಮಾತನಾಡಿ, ಜಿಲ್ಲೆಯಲ್ಲಿ ಕಾ. ಬೋರಪ್ಪ, ಸೊಗಡು ಶಿವಣ್ಣ ಸೇರಿದಂತೆ ಹಲವು ಮುಖಂಡರ ಪರಿಶ್ರಮದಿಂದ ಕಟ್ಟಿದ ಪಕ್ಷದ ಜವಾಬ್ದಾರಿಯನ್ನು ಇಂದು ನನಗೆ ವಹಿಸಿ ದ್ದಾರೆ. ನಿಮ್ಮೆಲ್ಲರ ಸಹಕಾರದಿಂದ ನಿಭಾಯಿಸಲು ಸಿದ್ದನಿದ್ದೇನೆ. ಜಿಲ್ಲೆಯ 7 ಸ್ಥಾನಗಳಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸಲು ಶಕ್ತಿಮೀರಿ ಶ್ರಮಿಸುವುದಾಗಿ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಪ್ರಭಾರಿ ನವೀನ್ ವಹಿಸಿದ್ದರು. ಶಾಸಕರಾದ ಜೋತಿಗಣೇಶ್, ಡಾ. ರಾಜೇಶ್ ಗೌಡ, ಮಸಾಲೆ ಜಯರಾಮ್, ಮುಖಂಡರಾದ ಡಾ.ಎಂ.ಆರ್.ಹುಲಿನಾಯ್ಕರ್, ಮುಖಂಡರಾದ ಎಂ.ಬಿ.ನಂದೀಶ್, ವೈ.ಹೆಚ್. ಹುಚ್ಚಯ, ಡಿ.ಕೃಷ್ಣಕುಮಾರ್, ಶಿವಪ್ರಸಾದ್, ಮಾಜಿ ಶಾಸಕ ಗಂಗಹನುಮಯ್ಯ, ಹನುಮಂತರಾಜು, ಪ್ರೇಮಹೆಗ್ಗಡೆ, ವಿಕಾಸ್ ಪುತ್ತೂರು, ಬೆಟ್ಟಸ್ವಾಮಿ, ಚಂದನ್, ಬೈರಪ್ಪ, ಟಿ.ಆರ್ ಸದಾಶಿವಯ್ಯ, ಜೈ. ಜಗದೀಶ್, ಸನತ್, ಸಂಪಿಗೆ ಶ್ರೀಧರ್, ಮೇಯರ್ ಬಿ.ಜಿ. ಕೃಷ್ಣಪ್ಪ, ಟೂಡಾ ಅಧ್ಯಕ್ಷ ಬಿ.ಎಸ್. ನಾಗಣ್ಣ, ಕೊಪ್ಪಲ್ ನಾಗರಾಜು ಮತ್ತಿತರರು ಉಪಸ್ಥಿತರಿದ್ದರು.