Saturday, 23rd November 2024

ರಂಜಿಸಿದ ರಜತ್‌: ಎರಡನೇ ಕ್ವಾಲಿಫೈಯರ್‌ಗೆ ಆರ್‌ಸಿಬಿ ಎಂಟ್ರಿ

ಕೋಲ್ಕತ್ತಾ: ಐಪಿಎಲ್ 2022 ಎಲಿಮಿನೇಟರ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 14 ರನ್ ಗಳಿಂದ ಆರ್ ಸಿಬಿ ಸೋಲಿಸಿದೆ.

ಎರಡನೇ ಕ್ವಾಲಿಫೈಯರ್ ಗೆ ಲಗ್ಗೆ ಇಟ್ಟಿರುವ ಬೆಂಗಳೂರು ರಾಯಲ್ ಚಾಲೆಂಜರ್ಸ್ ಶುಕ್ರವಾರ ಅಹಮದಾಬಾದ್ ನಲ್ಲಿ ನಡೆಯಲಿರುವ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ಸೆಣಸಲಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ, ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 207 ರನ್ ಕಲೆ ಹಾಕಿತು. ನಾಯಕ ಫಾಪ್ ಡು ಪ್ಲೆಸಿಸ್ ಶೂನ್ಯಕ್ಕೆ ಔಟಾಗುವ ಮೂಲಕ ಆರಂಭಿಕ ಆಘಾತ ಎದುರಾದರೂ ನಂತರ ಜೊತೆಯಾದ ವಿರಾಟ್ ಕೊಹ್ಲಿ ಹಾಗೂ ರಜತ್ ಪಾಟಿದಾರ್ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು.

ವಿರಾಟ್ ಕೊಹ್ಲಿ 25 ರನ್ ಗಳಿಸಿ ಔಟಾದ ನಂತರ ಗ್ಲೆನ್ ಮ್ಯಾಕ್ಸ್ ವೆಲ್ 9, ಮಹಿಪಾಲ್ ಲೊಮ್ರೊರ್ 14 ರನ್ ಗಳಿಸಿ ಫೆವಿಲಿಯನ್ ಗೆ ನಿರ್ಗಮಿಸಿದರು. ನಂತರ ಜೊತೆಯಾದ ದಿನೇಶ್ ಕಾರ್ತಿಕ್, ರಜತ್ ಗೆ ಉತ್ತಮ ಸಾಥ್ ನೀಡಿದರು. 23 ಎಸೆತಗಳಲ್ಲಿ 37 ರನ್ ಗಳಿಸಿ, ನಾಟ್ ಔಟ್ ಆಗುವು ದರೊಂದಿಗೆ ತಂಡ 200ರ ಗಡಿ ದಾಟಲು ನೆರವಾದರು. ರಜತ್ ಪಾಟಿದಾರ್ 54 ಎಸೆತಗಳಲ್ಲಿ 112 ರನ್ ಬಾರಿಸಿದರು.

ಆರ್ ಸಿಬಿ ನೀಡಿದ 208 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ್ದ ಲಕ್ನೋ ಸೂಪರ್ ಜೈಂಟ್ಸ್ ಪರ ನಾಯಕ ಕೆ.ಎಲ್. ರಾಹುಲ್ 79, ದೀಪಕ್ ಹೂಡಾ 45, ಮನನ್ ವೂಹ್ರಾ 19 ರನ್ ಗಳಿಸುವು ದರೊಂದಿಗೆ ನಿಗದಿತ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 193 ರನ್ ಗಳಿಸಲಷ್ಟೇ ಶಕ್ತವಾಯಿತು.

ಆರ್ ಸಿಬಿ ಪರ ಜೋಶ್ ಹೇಜಲ್ ವುಡ್ ಮೂರು ವಿಕೆಟ್ ಪಡೆಯುವ ಮೂಲಕ ಗೆಲುವಿನಲ್ಲಿ ಪ್ರಮುಖ ಕೊಡುಗೆ ನೀಡಿದರು. ಉಳಿದಂತೆ ಹರ್ಷಲ್ ಪಟೇಲ್ ಹಾಗೂ ಮೊಹಮ್ಮದ್ ಸಿರಾಜ್ ತಲಾ ಒಂದೊಂದು ವಿಕೆಟ್ ಪಡೆದರು. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡ ಐಪಿಎಲ್-15ರ ಎಲಿಮಿನೇಟರ್ ಹಣಾಹಣಿಯಲ್ಲಿ 14 ರನ್‌ಗಳಿಂದ ಗೆಲುವು ದಾಖಲಿಸಿ ಎರಡನೇ ಕ್ವಾಲಿಫೈಯರ್‌ಗೆ ಅರ್ಹತೆ ಪಡೆಯಿತು. ಇದರೊಂದಿಗೆ 2016ರ ಬಳಿಕ ಫೈನಲ್ ಪ್ರವೇಶಿಸುವ ಆಸೆಯನ್ನು ಜೀವಂತ ವಾಗಿರಿಸಿಕೊಂಡಿತು.

ಕ್ವಿಂಟನ್ ಡಿಕಾಕ್ ಸಿಕ್ಸರ್ ಸಿಡಿಸಿ ಬಿರುಸಿನ ಆರಂಭ ಪಡೆಯಲು ಯತ್ನಿಸಿದರೂ ಮೊದಲ ಓವರ್‌ನಲ್ಲೇ ವಿಕೆಟ್ ವಿಕೆಟ್ ಒಪ್ಪಿಸಿದರು. ಮನನ್ ವೊಹ್ರಾ (19) ಕೆಲಕಾಲ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ನಿರ್ಗಮಿಸಿದರು. ಇದರಿಂದ 41 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡ ಲಖನೌ ಆರಂಭಿಕ ಆಘಾತ ಕಂಡಿತು. ಬಳಿಕ ನಾಯಕ ಕೆಎಲ್ ರಾಹುಲ್ ಹಾಗೂ ದೀಪಕ್ ಹೂಡಾ ಜೋಡಿ ಆರ್‌ಸಿಬಿ ಬೌಲರ್‌ಗಳಿಗೆ ತಿರುಗೇಟು ನೀಡಿತು. ಗೆಲುವಿಗಾಗಿ ಮೈಂಡ್‌ಗೇಮ್ ಆಟ ಆಡಿದ ಈ ಜೋಡಿ ಇನಿಂಗ್ಸ್ ಸಾಗುತ್ತಿದ್ದಂತೆ ರನ್ ಹಿಗ್ಗಿಸುತ್ತಾ ಸಾಗಿತು. ಆರ್‌ಸಿಬಿ ಬೌಲರ್‌ಗಳಿಗೆ ತಲೆನೋವಾಗಿದ್ದ ಈ ಜೋಡಿಗೆ ಹಸರಂಗ ಬ್ರೇಕ್ ಹಾಕಿದರು. ರಾಹುಲ್-ದೀಪಕ್ ಎದುರಿಸಿದ 61 ಎಸೆತಗಳಲ್ಲಿ 96 ರನ್ ಕಲೆ ಹಾಕಿತು. ಮಾರ್ಕಸ್ ಸ್ಟೋಯಿನಿಸ್ (9) ವಿಫಲರಾದರು. ಇದರ ಬೆನ್ನಲ್ಲೇ ರಾಹುಲ್ ಹಾಗೂ ಕೃನಾಲ್ ಪಾಂಡ್ಯ (0) ನಿರ್ಗಮಿಸಿದರು.