Friday, 22nd November 2024

ಆಸ್ಪತ್ರೆಯಲ್ಲಿ ಅಗ್ನಿ ಅವಘಡ: 11 ಹಸುಗೂಸುಗಳ ಸಜೀವ ದಹನ

ಟಿವೌನೆ: ಸೆನೆಗಲ್ ರಾಜಧಾನಿ ಟಿವೌನೆಯಿಂದ 120 ಕಿಲೋ ಮೀಟರ್ ದೂರದ ಆಸ್ಪತ್ರೆಯಲ್ಲಿ ಅಗ್ನಿ ಅವಘಡ ಸಂಭವಿಸಿ, 11 ಹಸುಗೂಸುಗಳು ಸಜೀವ ದಹನ ವಾಗಿ, ಮೂರು ಮಕ್ಕಳನ್ನು ರಕ್ಷಿಸಲಾಗಿದೆ.

ಅಬ್ಡೋಲ್ ಅಜಿಜ್ ಸೈ ಆಸ್ಪತ್ರೆಯಲ್ಲಿ ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಕಾಣಿಸಿಕೊಂಡು ಅನಾಹುತ ಸಂಭವಿಸಿದೆ.

ಬೆಂಕಿಯ ಕೆನ್ನಾಲಿಗೆಯಿಂದ ಉಂಟಾದ ಬಿಸಿ ಮತ್ತು ಹೊಗೆಯಿಂದ ಹನ್ನೊಂದು ಮಕ್ಕಳು ಮೃತಪಟ್ಟಿದ್ದಾರೆ. ಈ ಘಟನೆಯಿಂದ ರಾಷ್ಟ್ರಾದ್ಯಂತ ಮೂರು ದಿನಗಳ ಶೋಕಾಚರಣೆಯನ್ನು ಅಧ್ಯಕ್ಷ ಮ್ಯಾಕ್ಸಿ ಸಾಲ್ ಘೋಷಣೆ ಮಾಡಿದ್ದಾರೆ.

ಅದೃಷ್ಟವಶಾತ್ ಬೆಂಕಿ ಕಾಣಿಸಿಕೊಂಡ ಸಮಯಕ್ಕೆ ವಿದ್ಯುತ್ ಕಡಿತವಾಗಿದೆ. ಇದರಿಂದ ಆಸ್ಪತ್ರೆಯ ಉಳಿದ ಭಾಗ ಅನಾಹುತ ದಿಂದ ಪಾರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಶ್ಚಿಮ ಆಫ್ರಿಕಾದಲ್ಲಿರುವ ಸೆನೆಗಲ್‍ನಲ್ಲಿ ಇತ್ತೀಚೆಗೆ ತಾಯಿ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.