Saturday, 26th October 2024

50 ವಟುಗಳಿಗೆ ಉಚಿತ ಸಾಮೂಹಿಕ ಉಪನಯನ

ಮೂಹಿಕ ಉಪನಯನ ಮತ್ತು ಸಮಾಶ್ರಯಣ ಕಾರ್ಯಕ್ರಮ

ತುಮಕೂರು: ಜಿಲ್ಲಾ ಶ್ರೀವೈಷ್ಣವ ಸಮುದಾಯ ಧಾರ್ಮಿಕ ಸಂಸ್ಥೆ ವತಿಯಿಂದ ಜೂ.1 ಮತ್ತು 2 ರಂದು ಶ್ರೀ ಭಗವದ್ ರಾಮಾ ನುಜಾಚಾರ್ಯರ ತಿರುನಕ್ಷತ್ರ ಹಾಗೂ ನಮ್ಮಾಳ್ವಾರ್ ತಿರುನಕ್ಷತ್ರದ ಪ್ರಯುಕ್ತ 50 ವಟುಗಳಿಗೆ ಉಚಿತ ಸಾಮೂಹಿಕ ಉಪನಯನ ಮತ್ತು ಸಮಾಶ್ರಯಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತುಮಕೂರು ಜಿಲ್ಲಾ ಶ್ರೀವೈಷ್ಣವ ಸಮುದಾಯ ಧಾರ್ಮಿಕ ಸಂಸ್ಥೆ ಅಧ್ಯಕ್ಷ ಎಸ್.ಎನ್.ರಘು ತಿಳಿಸಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ,  ಜಿಲ್ಲಾ ಶ್ರೀವೈಷ್ಣವ ಸಮುದಾಯ ಧಾರ್ಮಿಕ ಸಂಸ್ಥೆಯಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಜೂ.1 ರಂದು ಸಂಜೆ ಗೋಧುಳಿ ಲಗ್ನದಲ್ಲಿ ಅನುಜ್ಞೆ, ವಿಶ್ವಕ್ಸೇನ ಆರಾಧನೆ, ಉಧಕಶಾಂತಿ, ಅಂಕುರಾರ್ಪಣ ಜರುಗಲಿದೆ ಎಂದರು.

ಜೂ.2ರಂದು ಬೆಳಿಗ್ಗೆ ಚೌಲೋಪನಯನ, ಬ್ರಹ್ಮೋಪದೇಶ ಹಾಗೂ ಯತಿಗಳಿಂದ ಸಮಾಶ್ರಯಣ ಮಂಗಳಾಶಾಸನ, ಶಾತ್ತು ಮೊರೈ, ತೀರ್ಥ ಪ್ರಸಾಧ ವಿನಿಯೋಗ ಏರ್ಪಡಿ ಸಲಾಗಿದೆ. ಬೆಳಿಗ್ಗೆ 9ಕ್ಕೆ ಬೆಂಗಳೂರು ಮೇಲುಕೋಟೆ (ಮಲ್ಲೇಶ್ವರಂ)ಯ ಯದುಗಿರಿ ಯತಿರಾಜ ಮಠದ ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಅವರು ಆಗಮಿಸಲಿದ್ದು, ಮಾರುತಿನಗರದ ದ್ವಾರ ಬಾಗಿಲಿನಿಂದ ಜಿಲ್ಲಾ ಶ್ರೀವೈಷ್ಣವ ಸಮುದಾಯ ಧಾರ್ಮಿಕ ಸಂಸ್ಥೆಯವರೆಗೆ ಯತಿಗಳನ್ನು ಪೂರ್ಣಕುಂಭ ಸ್ವಾಗತ ದೊಂದಿಗೆ ಪಾದಯಾತ್ರೆಯ ಮೂಲಕ ಕರೆತರಲಾಗುವುದು ಎಂದು ತಿಳಿಸಿದರು.

ಈ ಕಾರ್ಯಕ್ರಮಕ್ಕೆ ಆಗಮಿಕರಾಗಿ ಹಿರೇಮಗಳೂರು ಶ್ರೀ ಸವ್ಯಸಾಚಿ ಸ್ವಾಮೀಜಿಗಳ ಪ್ರಿಯ ಶಿಷ್ಯರಾದ ಹೊಳಕಲ್ಲು ಆಗಮ ಪ್ರವೀಣ ಶ್ರೀ ರವಿಶರ್ಮನ್ ಮತ್ತು ಶಿಷ್ಯ ವೃಂದ ಹಾಗೂ ಸಹ ಋತ್ವಿಕರಿಂದ ಸಾಮೂಹಿಕ ಉಪನಯನ ಕಾರ್ಯಕ್ರಮ ನೆರವೇರ ಲಿದೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ ವಿಶೇಷ ಆಹ್ವಾನಿತರಾಗಿ ತುಮಕೂರು ನಗರ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಗ್ರಾಮಾಂತರ ಶಾಸಕ ರಾದ ಡಿ.ಸಿ.ಗೌರಿಶಂಕರ್, ತುಮಕೂರು ಮಹಾನಗರಪಾಲಿಕೆ ಸದಸ್ಯರಾದ ಸಿ.ಎನ್.ರಮೇಶ್ ಸೇರಿದಂತೆ ವೈಷ್ಣವ ಸಮುದಾಯದ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಉಪನಯನ ಮಾಡಿಸುವ ವಟುಗಳಿಗೆ ಚೌಲೋಪನಯನ ಮಾಡಿಸುವುದು ಕಡ್ಡಾಯವಾಗಿದೆ. ವಟುಗಳ ತಂದೆ-ತಾಯಿಗಳು ಕಚ್ಚೆ ಸೀರೆ, ಕಚ್ಚೆ ಪಂಚೆಗಳನ್ನು ಧರಿಸಬೇಕು, ಮೊದಲು ನೊಂದಾಯಿಸಿಕೊಂಡಿರುವ 50 ವಟುಗಳಿಗೆ ಮಾತ್ರ ಉಪನಯನ ಮಾಡಿಸಿ ಕೊಳ್ಳಲು ಅವಕಾಶವಿರುತ್ತದೆ. ಉಪನಯನ ಮಾಡಿಸಿಕೊಳ್ಳುವ ವಟುವಿನೊಂದಿಗೆ ಪೋಷಕರು ಜೂ.1ರ ಸಂಜೆ 4ರೊಳಗೆ ಸಭಾಭವನಕ್ಕೆ ಹಾಜರಿರಬೇಕು, ಉಪನಯನ ಕಾರ್ಯಕ್ರಮದ ನಂತರ ವಟುಗಳಿಗೆ ಎರಡು ದಿನಗಳ ಕಾಲ ಸಂಧ್ಯಾ ವಂದನೆ ಅಭ್ಯಾಸವನ್ನು ಶಿಬಿರದಲ್ಲಿ ಹೇಳಿಕೊಡಲಾಗುತ್ತದೆ ಎಂದು ವಿವರಿಸಿದರು.

ಈ ಕಾರ್ಯಕ್ರಮಕ್ಕೆ ಸುಮಾರು 500ರಿಂದ 600 ಮಂದಿ ವೈಷ್ಣವ ಸಮುದಾಯದ ಬಂಧುಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಶ್ರೀವೈಷ್ಣವ ಸಮುದಾಯ ಧಾರ್ಮಿಕ ಸಂಸ್ಥೆಯ ಕಾರ್ಯದರ್ಶಿ ವೇದಾಂತಚಾರ್ಯ ಬಿ.ಕೆ., ಸಂಘಟನಾ ಕಾರ್ಯದರ್ಶಿ ಕೆ.ಎ.ಕೃಷ್ಣಮೂರ್ತಿ ಉಪಸ್ಥಿತರಿದ್ದರು.