Friday, 22nd November 2024

ಮೂರು ತಿಂಗಳಲ್ಲಿ ಪಹಣಿ ತಿದ್ದುಪಡಿ ಕಾರ್ಯ ಪೂರ್ಣ: ಯಶವಂತ ವಿ. ಗುರುಕರ್

ಸುಕ್ಷೇತ್ರ ಜಿಡಗಾದಲ್ಲಿ ಜಿಲ್ಲಾಧಿಕಾರಿಗಳಿಂದ ಗ್ರಾಮಸ್ಥರ ಅಹವಾಲು ಆಲಿಕೆ

ಕಲಬುರಗಿ: ಜಿಲ್ಲೆಯಲ್ಲಿ ವಿವಿಧ ಕಾರಣಗಳಿಂದ ಬಾಕಿ‌ ಇರುವ ಪಹಣಿ ತಿದ್ದುಪಡಿ ಕಾರ್ಯ ಬರುವ 3 ತಿಂಗಳಲ್ಲಿ ಸಂಪೂರ್ಣ ವಾಗಿ ಪೂರ್ಣಗೊಳಿಸ ಲಾಗುವುದು ಎಂದು ಡಿ.ಸಿ. ಯಶವಂತ ವಿ. ಗುರುಕರ್ ಹೇಳಿದರು.

ಶುಕ್ರವಾರ ಆಳಂದ ತಾಲೂಕಿನ ಸುಕ್ಷೇತ್ರ ಜಿಡಗಾ ಗ್ರಾಮದ ಮಠದ ಆವರಣ ದಲ್ಲಿ ಜಿಲ್ಲಾಧಿಕಾರಿಗಳ ನಡೆ-ಹಳ್ಳಿ ಕಡೆ ಗ್ರಾಮ‌ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ‌ ಬಾಕಿ‌ ಇರುವ 600 ಪಹಣಿ ತಿದ್ದುಪಡಿ ಅರ್ಜಿಗಳನ್ನು ವಿಲೇವಾರಿಗೆ ಮುಂದಾಗಿದ್ದೇವೆ. ಹೆಚ್ಚು ಬಾಕಿ ಇರುವ ಅರ್ಜಿಗಳ ಹಿನ್ನೆಲೆಯಲ್ಲಿ‌ ಮೊದಲ‌ ಗ್ರಾಮ ವಾಸ್ತವ್ಯ ಚಿತ್ತಾಪೂರ ತಾಲೂಕಿನ‌ ಕೊಂಚೂರನಲ್ಲಿ‌ ಮಾಡಿ ಸ್ಥಳದಲ್ಲಿಯೇ 60 ಅರ್ಜಿ ವಿಲೇವಾರಿ‌ ಮಾಡಿದ್ದೇನೆ ಎಂದರು.

ಸರ್ವರಿಗೂ ಆರೋಗ್ಯ ಪರಿಕಲ್ಪನೆಯಡಿ ದೇಶದಲ್ಲಿ ಆಯೂಷ್ಮಾನ್ ಭಾರತ-ಆರೋಗ್ಯ ಕರ್ನಾಟಕ ಯೋಜನೆ ಜಾರಿಯಲ್ಲಿದ್ದು, ಬಡವರು ಇದರ ಲಾಭ ಪಡೆಯಬೇಕು. 5 ಲಕ್ಷ‌ ರೂ. ವರೆಗೆ ಬಿ.ಪಿ.ಎಲ್ ಕುಟುಂಬಕ್ಕೆ ವಾರ್ಷಿಕವಾಗಿ ಆರೋಗ್ಯ ಸೇವೆ ಪಡೆಯ ಬಹುದಾಗಿದೆ. ಅಮೆರಿಕಾ, ಕೆನಡಾ ಹೀಗೆ ಮುಂದುವರಿದ ಕೆಲವೇ ದೇಶಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ ಎಂದರು.

ಸರ್ಕಾರಿ ಇಲಾಖೆಗಳಲ್ಲಿ ಅರ್ಜಿಗಳ ವಿಲೇವಾರಿಗೆ ವೇಗ ನೀಡಲಾಗಿದೆ. ಸಕಾಲ ದಲ್ಲಿ ಕಲಬುರಗಿ 5ನೇ ಸ್ಥಾನವಿದ್ದು, ಭೂಮಿಯಲ್ಲಿ ಟಾಪ್‌ 10ರಲ್ಲಿದೆ. ಕೋವಿಡ್ ಲಸಿಕೆ ನಿಡಿಕೆಯಲ್ಲಿ ಜಿಲ್ಲೆ ಶೇ. 100ರಷ್ಟು ಪ್ರಗತಿ ಸಾಧಿಸಿದೆ ಎಂದ ಜಿಲ್ಲಾಧಿಕಾರಿಗಳು, ಪೂಜ್ಯ ಶ್ರೀ ಷಡಕ್ಷರಿ ಶಿವಯೋಗಿ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳ ಸಮಾಜಮುಖಿ‌ ಕಾರ್ಯಕ್ರಮಗಳನ್ನು ಅವರು ಕೊಂಡಾಡಿ ದರು.

ಕಾರ್ಯಕ್ರಮದ‌ ದಿವ್ಯ ಸಾನಿಧ್ಯ ವಹಿಸಿದ ಪೂಜ್ಯ ಶ್ರೀ ಷಡಕ್ಷರಿ ಶಿವಯೋಗಿ ಡಾ.ಮುರುಘರಾಜೇಂದ್ರ ಮಹಾಸ್ವಾಮಿಗಳು ಮಾತನಾಡಿ ರಾಷ್ಟ್ರಪಿತ ಮಹಾತ್ಮನ ಕನಸಿನಂತೆ ಹಳ್ಳಿ ಬದುಕು ಹಸನಗೊಳಿಸಲು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಪ್ರೇರಕ ವಾಗಿದೆ. ಮಳೆಯಾಶ್ರಿತ ಪ್ರದೇಶ ಇದಾಗಿದ್ದು, ಬಹುತೇಕರು ಕೊಳವೆ ಬಾವಿ ಕೊರೆದು ಅದರ‌ ಮುಖೇನ ನೀರಾವರಿಯನ್ನಾಗಿಸಿ ಬೆಳೆ ಬೆಳೆಯುತ್ತಾ ಜೀವನ ಸಾಗಿಸುತ್ತಿದ್ದಾರೆ. ವಿದ್ಯುತ್ ಸಮಸ್ಯೆ ಇಲ್ಲಿ ದೊಡ್ಡ ತಲೆ ನೋವಾಗಿದೆ. ಟ್ರಾನ್ಸ ಫಾರ್ಮರ್ ಕೆಟ್ಟರೆ ಬದಲಾಯಿಸಲು ತಿಂಗಳು ಸಮಯ ತೊಗೊ ತ್ತಾರೆ. ಈ ಸಮಸ್ಯೆ ಬಗೆಹರಿಯಬೇಕು, ರೈತಾಪಿ ವರ್ಗಕ್ಕೆ ಪರಿಹಾರ ಕಲ್ಪಿಸಬೇಕು ಎಂದರು.

ಇದಕ್ಕೂ‌ ಮುನ್ನ ಅಪರ ಜಿಲ್ಲಾಧಿಕಾರಿ ಭೀಮಾಶಂಕರ ತೆಗ್ಗೆಳ್ಳಿ ಮಾತನಾಡಿ ಡಿ.ಸಿ. ಯಶವಂತ ವಿ. ಗುರುಕರ್ ಅವರು ಜಿಲ್ಲೆಯ ಜಿಲ್ಲಾಧಿಕಾರಿಗಳಾದ‌ ಮೇಲೆ ಜಿಲ್ಲಾಡಳಿತ ಜನರ ಮನೆ ಬಾಗಿಲೆಗೆ ಹೋಗಿ ಸರ್ಕಾರದ‌ ಜನಪರ‌ ಯೋಜನೆ ತಲುಪಿಸುವ ಕಾರ್ಯಕ್ಕೆ ಚುರುಕು ನೀಡಲಾಗಿದೆ. ಬರುವ ಜೂನ್ 1 ರಂದು ಜಿಲ್ಲಾ ಕೇಂದ್ರದಲ್ಲಿ ಸಾರ್ವಜನಿಕರ‌ ಕುಂದುಕೊರತೆಗಳನ್ನು ಖುದ್ದಾಗಿ ಆಲಿಸಲು “ಸ್ಪಂದನ‌ ಕಲಬುರಗಿ” ವಿನೂತನ ಕಾರ್ಯಕ್ರಮ ಆಯೋಜಿಸಿದ್ದು, ಅಂದು ಜಿಲ್ಲಾ ಇಲಾಖೆಗಳ‌ ಮುಖ್ಯಸ್ಥರೆಲ್ಲರು ಹಾಜರಿರಲಿದ್ದಾರೆ. ಇದಲ್ಲದೆ ಜೂನ್ 21 ರಂದು‌ ಜಿಡಗಾ ಸೇರಿದಂತೆ‌ ಜಿಲ್ಲೆಯ ಮೂರು ಕಡೆ ವಿಶ್ವ ಯೋಗ ದಿನಾಚರಣೆ ಹಮ್ಮಿಕೊಳ್ಳಲಾಗಿದೆ ಎಂದರು.

ಕುಟುಂಬದೊಂದಿಗೆ ಅಗಮಿಸಿದ ಡಿ.ಸಿ.ಗೆ ಸಾಂಪ್ರದಾಯಿಕ ಸ್ವಾಗತ; ಗ್ರಾಮಸ್ಥರ ಅಹವಾಲು ಆಲಿಸಲು ಗ್ರಾಮಕ್ಕೆ ಪತ್ನಿ ಇಂದುಶ್ರೀ ಗುರುಕರ್ ಮತ್ತು ನಾಲ್ಕು ವರ್ಷದ ಮಗಳು ನೀತಿ ಗುರುಕರ್ ಅವರೊಂದಿಗೆ ಆಗಮಿಸಿದ ಡಿ.ಸಿ. ಯಶವಂತ‌ ವಿ. ಗುರುಕರ್ ಅವರಿಗೆ ಗ್ರಾಮದ‌ ಮಹಿಳೆಯರು ಕುಂಭ ಕಳಸದೊಂದಿಗೆ ಸಾಂಪ್ರದಾಯಿಕವಾಗಿ ಸ್ವಾಗತ ಕೋರಿದರು. ಹಣೆಯ ಮೇಲೆ ತಿಲಕವಿಟ್ಟು ಆರತಿ ಬೆಳಗಿ ಬರಮಾಡಿಕೊಂಡರು.

ಡಿ.ಸಿ. ಯಶವಂತ ವಿ. ಗುರುಕರ್ ಮತ್ತು ಜಿಡಗಾ ಮಠದ ಪೂಜ್ಯ ಶ್ರೀ ಷಡಕ್ಷರಿ ಶಿವಯೋಗಿ ಡಾ. ಮುರುಗರಾಜೇಂದ್ರ ಸ್ವಾಮಿ ಗಳನ್ನು ಟ್ರ್ಯಾಕ್ಟರ್ ನಲ್ಲಿ ಕೂರಿಸಿ ಅವರನ್ನು ಮೆರವಣಿಗೆ ಮೂಲಕ ವೇದಿಕೆ ಸ್ಥಳಕ್ಕೆ ಕರೆತರಲಾಯಿತು. ಎತ್ತಿನ ಚಕಡಿಗಳು, ಡೊಳ್ಳು, ಲಂಬಾಣಿ ಮಹಿಳೆಯರ ನೃತ್ಯ ಮೆರವಣಿಗೆಗೆ ಕಳೆ ತಂದಿತು.

ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಿನ್ನೆಲೆಯಲ್ಲಿ ಕುಂದುಕೊರತೆ ಸಲ್ಲಿಕೆಗೆ ಸ್ವೀಕಾರ ಕೇಂದ್ರ, ಪಡಿತರ ಚೀಟಿ ವಿತರಣಾ ಕೇಂದ್ರ, ಪಹಣಿ ತಿದ್ದುಪಡಿ ಕೇಂದ್ರ, ಆಧಾರ್ ತಿದ್ದುಪಡಿ ಕೇಂದ್ರ ತೆರೆಯಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಬಂದ ಜನರು ಸರದಿಯಲ್ಲಿ‌ ನಿಂತು ತಮ್ಮ ಅರ್ಜಿ ಸಲ್ಲಿಸಿದರು.

ಅಹವಾಲು ಆಲಿಕೆ: ತಮ್ಮ ಸಮಸ್ಯೆಗಳನ್ನು ಹೇಳಲು ಬಂದ ಪ್ರತಿಯೊಬ್ಬ ಗ್ರಾಮಸ್ಥರ ಅಹವಾಲನ್ನು ಶಾಂತಚಿತ್ತದಿಂದ ಡಿ.ಸಿ. ಆಲಿಸಿದರು. ಕವಲಗಾ ಗ್ರಾಮದಲ್ಲಿ 3 ಎಕರೆ‌ ಜಮೀನಿದ್ದು, ಇದರಲ್ಲಿ‌ 10 ಗುಂಟೆ ಪಕ್ಕದ ಹೊಲದವರು ಒತ್ತುವರಿ ಮಾಡಿದ್ದು, ಇದನ್ನು ತೆರವುಗೊಳಿಸಬೇಕೆಂದು ಗ್ರಾಮದ ಮಹಿಳೆ ಲಲಿತಾಬಾಯಿ ಕಲ್ಯಾಣರಾವ ದೇಸಾಯಿ ಅವರು ಡಿ.ಸಿ. ಬಳಿ ಕೇಳಿ ಕೊಂಡರು. ಸರ್ವೆ ಆಗಿರುವ ಹಿನ್ನೆಲೆಯಲ್ಲಿ ಕೂಡಲೆ ಒತ್ತುವರಿ ತೆರವುಗೊಳಿಸುವಂತೆ ಸ್ಥಳದಲ್ಲಿದ್ದ ತಹಶೀಲ್ದಾರ ಯಲ್ಲಪ್ಪ ಸುಬೇದಾರ ಅವರಿಗೆ ಡಿ.ಸಿ. ಸೂಚಿಸಿದರು.

ಜಿಡಗಾ ಗ್ರಾಮದ‌ ಕನ್ನಡ‌ ಮತ್ತು ಉರ್ದು ಪ್ರಾಥಮಿಕ ಶಾಲೆಗೆ ಶಾಲಾ ಕಂಪೌಂಡ್ ಮತ್ತು ಕುಡಿಯುವ‌ ನೀರು ಪೂರೈಸುವಂತೆ ಜಿಡಗಾ ಗ್ರಾ.ಪಂ. ಸದಸ್ಯೆ ಶಿವಮ್ಮ‌ ಪಂಡಿತ್ ಅವರು ಡಿ.ಸಿ.ಗೆ ಮನವಿ ಸಲ್ಲಿಸಿದರು. ಬೆಳೆ ಸಾಲಕ್ಕೆ ಹಲವು ಬಾರಿ ಸರಸಂಬಾ ಕೆ.ಜಿ.ಬಿ. ಬ್ಯಾಂಕಿಗೆ ಅಲೆದಾಡಿದರು ಬ್ಯಾಂಕ್ ನವರು ಸಾಲ ಮಂಜೂರು ಮಾಡುತ್ತಿಲ್ಲ, ದಯವಿಟ್ಟು ಸಾಲ ಕೊಡಿಸಿ ಸ್ವಾಮಿ ಎಂದು ಗ್ರಾಮದ ವಯೋವೃದ್ಧೆ ಧೂಳಾಬಾಯಿ ಕಾಶಿನಾಥ ಕಡಗಂಚಿ ಅವರು ತಮ್ಮ‌ ಮಗನೊಂದಿಗೆ ಬಂದು ಡಿ.ಸಿ. ಬಳಿ ತಮ್ಮ ಅಳಲು ತೋಡಿಕೊಂಡರು. ಇನ್ನೂ‌ ಆಳಂದ ಪಟ್ಟಣದಲ್ಲಿ ರಸ್ತೆ ಅಗಲೀಕರಣ ನೆನೆಗುದ್ದಿಗೆ‌ ಬಿದ್ದಿದ್ದು, ಅದನ್ನು ಬೇಗ ಕೈಗೊಳ್ಳ ಬೇಕೆಂದು ಸಾರ್ವಜನಿಕರೊಬ್ಬರು ಮನವಿ ಮಾಡಿಕೊಂಡರು.

ಪಡಿತರ ಚೀಟಿ, ಆರೋಗ್ಯ ಕಾರ್ಡ್ ವಿತರಣೆ: ಗ್ರಾಮ ವಾಸ್ತವ್ಯ ಅಂಗವಾಗಿ ಸಾಂಕೇತಿಕವಾಗಿ ಕೆಲ‌ ಫಲಾನುಭವಿಗಳಿಗೆ ಪಡಿತರ ಚೀಟಿ, ಆರೋಗ್ಯ ಕಾರ್ಡ್, ಇ-ಶ್ರಮ್‌ ಕಾರ್ಡ್, ಕಾರ್ಮಿಕ ಕಾರ್ಡ್, ಸಮೃದ್ಧಿ ಸುಕನ್ಯಾ ಯೋಜನೆಯ ಪಾಸ್ ಬುಕ್ ವಿತರಿಸಲಾ ಯಿತು. ಮಕ್ಕಳಲ್ಲಿನ ಅಪೌಷ್ಟಿಕತೆ ಹೋಗಲಾಡಿಸಲು ಇನ್ಫೋಸಿಸ್ ಸಂಸ್ಥೆಯ ಪ್ರಾಯೋಜಿತ ಮಲ್ಟಿ ವಿಟಾಮಿನ್‌ ಪೌಡರ್ ಸಹ ಪಾಲಕರಿಗೆ ಇಲ್ಲಿ ನೀಡಲಾಯಿತು.

ಆರೋಗ್ಯ ಇಲಾಖೆಯಿಂದ ಅಧಿಕ ರಕ್ತದೊತ್ತಡ, ಮಧುಮೇಹ, ಕ್ಯಾನ್ಸರ್ ಹೀಗೆ ವಿವಿಧ ರೋಗಗಳ ಅರೋಗ್ಯ ತಪಾಸಣೆ ಶಿಬಿರ‌ ನಡೆಸಲಾಯಿತು. ಗ್ರಾಮದ ಬಹಳಷ್ಟು ಜನರು ಆರೋಗ್ಯ ತಪಾಸಣೆಗೆ ಒಳಗಾದರು. ಅಗತ್ಯವಿದ್ದವರಿಗೆ ಔಷಧಿ ಮಾತ್ರೆಗಳನ್ನು  ನೀಡಲಾಯಿತು.

ಇದೇ ಸಂದರ್ಭದಲ್ಲಿ‌ ಗರ್ಭಿಣಿ ‌ಮಹಿಳೆಯರಿಗೆ ಮಹಿಳಾ‌ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಸೀಮಂತ ಕಾರ್ಯಕ್ರಮ ನಡೆಯಿತು. ಡಿ.ಸಿ. ಪತ್ನಿ‌ ಇಂದುಶ್ರೀ ಗುರುಕರ್ ಅವರು ಮಹಿಳೆಯರಿಗೆ ಉಡಿ ತುಂಬಿದರು. ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ 10 ವಿದ್ಯಾರ್ಥಿಗಳಿಗೆ ಪೂಜ್ಯರು ಸನ್ಮಾನಿಸಿದರು.

ಜಿಡಗಾ ಗ್ರಾಮ‌ ಪಂಚಾಯತ್ ಅಧ್ಯಕ್ಷ ಸಿದ್ರಾಮ ಯಾದವ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಮಹಮ್ಮದ್ ಇಸ್ಮಾಯಿಲ್, ಡಿ.ಡಿ.ಎಲ್.ಆರ್. ಶಂಕರ, ಸಮಾಜ ಕಲ್ಯಾಣ ಇಲಾಖೆಯ ಜಂಟಿ‌ ನಿರ್ದೇಶಕ ಅಲ್ಲಾಭಕಷ್ ಎಂ., ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರಮೇಶ ಸಂಗಾ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ನವೀನ್ ಯು., ಡಿ.ಹೆಚ್.ಓ ಡಾ. ಶರಣಬಸಪ್ಪ ಗಣಜಲಖೇಡ್, ಜಿಲ್ಲಾ ಕಾರ್ಮಿಕ ಅಧಿಕಾರಿ‌ ರಮೇಶ ಸುಂಬಡ್, ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣಾಧಿಕಾರಿ ಮಹೆಮೂದ್, ಪದವಿ ಪೂರ್ವ ಶಿಕ್ಷಣ‌ ಇಲಾಖೆಯ ಉಪನಿರ್ದೇಶಕ ಶಿವಶರಣಪ್ಪ ಮೂಳೆಗಾಂವ, ಆಯುಷ್ ಅಧಿಕಾರಿ ಡಾ.ಗಿರೀಜಾ, ತಾಲೂಕ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂಜೀವ ರೆಡ್ಡಿ ಸೇರಿದಂತೆ ಮತ್ತಿತರರ ಅಧಿಕಾರಿಗಳು ಇದ್ದರು. ತಹಶೀಲ್ದಾರ ಯಲ್ಲಪ್ಪ ಸುಬೇದಾರ ಸ್ವಾಗತಿಸಿದರು.