Friday, 22nd November 2024

ಕಾಂಗ್ರೆಸ್ ಪಕ್ಷ ಕಳ್ಳರ ಸಂಘವಿದ್ದಂತೆ: ಕಟೀಲ್ ಕಟು ಟೀಕೆ

ಸಿದ್ದರಾಮಯ್ಯ ಡೋಂಗಿ ರಾಜಕಾರಣಿ
ಕಾಂಗ್ರೆಸ್ ನಿರ್ನಾಮ ಮಾಡಲು ಹೊರಟಿದ್ದಾರೆ
ತುಮಕೂರು: 60 ವರ್ಷಗಳ ಕಾಲ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ತನ್ನ ಆಡಳಿತದಲ್ಲಿ ಲೂಟಿ ಮಾಡಿ ದೇಶ ವನ್ನು ಮಾರಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿ ದರು.
ನಗರದ ರಿಂಗ್ ರಸ್ತೆಯಲ್ಲಿರುವ ಆರ್.ಎಸ್. ಕಲ್ಯಾಣ ಮಂಟಪದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ರೈತಮೋರ್ಚಾ ರಾಜ್ಯ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಸೋನಿಯಾ ಗಾಂಧಿ ಮತ್ತು ರಾಜ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್  ಬೇಲ್ ಮೇಲೆ ಹೊರಗಿದ್ದಾರೆ. ಕಾಂಗ್ರೆಸ್ ಕಳ್ಳರ ಸಂಘವಿದ್ದಂತೆ. ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ವೇಳೆ ಸುಮಾರು 4 ಲಕ್ಷ ಕೋಟಿ ರು.ಹಗರಣ ನಡೆದಿದೆ ಎಂದು ಆರೋಪಿಸಿದರು.
ಕಳೆದ 8 ವರ್ಷಗಳ ಹಿಂದೆ 20 ಸಾವಿರ ಕೋಟಿ ರು ಇರುವ ರೈತರ ಬಜೆಟನ್ನು ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿಯವರು 1.20 ಲಕ್ಷ ಕೋಟಿ ರು.ಗೆ ಏರಿಸಿ ರೈತರ ಪರವಾಗಿ ನಿಂತಿ ದ್ದಾರೆ. ಮೋದಿಯವರಿಗೆ ರೈತರ ಪರ ವಿಶೇಷ ಕಾಳಜಿಯನ್ನು ಹೊಂದಿರುವಂತಹ ವ್ಯಕ್ತಿ ಎನಿಸಿಕೊಂಡಿದ್ದಾರೆ ಎಂದು ಹೇಳಿದರು.
ಕುವೆಂಪು ರೈತರ ಬಗ್ಗೆ ವಿಶಿಷ್ಟ ವಿಭಿನ್ನವಾಗಿ ಹೇಳಿದ್ದಾರೆ. ಕುವೆಂಪು ಅವರ ಹಾಡನ್ನು ರೈತ ಗೀತೆ ಮಾಡಿದ್ದು ಬಿ.ಎಸ್. ಯಡಿಯೂರಪ್ಪ ಸರಕಾರ ಎಂದು ಹೇಳುವುದಕ್ಕೆ ನಮಗೆ ಹೆಮ್ಮೆ ಎನಿಸುತ್ತದೆ. ಯಡಿಯೂರಪ್ಪ ನವರು ರೈತರ ಪರ ಹೋರಾಟ ಮಾಡಿದವರು. ಯಡಿಯೂರಪ್ಪ ಅವರನ್ನು ರೈತರ ಮಗ ಎಂದು ಕರೆಯುತ್ತಾರೆ ಎಂದು ಬಣ್ಣಿಸಿದರು.
ರೈತರ ಶಾಪ ಕಾಂಗ್ರೆಸ್ ಗೆ ತಟ್ಟಿದೆ: ಇಂದು ಅನೇಕ ನಾಯಕರು ಕಾಂಗ್ರೆಸ್ ತೊರೆದಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ 3 ಸಾವಿರ ರೈತರು ಆತ್ಮಹತ್ಯೆ ಮಾಡಿಕೊಂಡರು. ಅತಿ ಹೆಚ್ವು ಗೋಹತ್ಯೆ ನಡೆದಿದ್ದು ಸಿದ್ದರಾಮಯ್ಯ ಅವರ ಕಾಲದಲ್ಲಿಯೇ. ವೋಟ್ ಬ್ಯಾಂಕ್‌ಗಾಗಿ ಸಿದ್ದರಾಮಯ್ಯ ಗೋ ರಕ್ಷಣೆ ಮಾಡುವ ಬದಲು ಗೋ ಹಂತಕರನ್ನು ರಕ್ಷಣೆ ಮಾಡಿದರು ಎಂದು ಕುಟುಕಿದರು.
ಸಿದ್ದರಾಮಯ್ಯ ನೀವು ಡೋಂಗಿ ರಾಜಕಾರಣಿ, ನಿಮ್ಮಿಂದ ಕಾಂಗ್ರೆಸ್ ಮುಕ್ತ ಕರ್ನಾಟಕ ಆಗುತ್ತಿದೆ. ಅದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ದಲಿತ ಎಂಬ ಕಾರಣಕ್ಕೆ ಡಾ.ಜಿ.ಪರಮೇಶ್ವರನ್ನು ಸಿಎಂ ಮಾಡಲು ಬಿಟ್ಟಿಲ್ಲ, ಡಿ.ಕೆ.ಶಿವಕುಮಾರ್‌ರನ್ನು ರಾಜಕೀಯವಾಗಿ ಮುಗಿಸಲು ಹೊರಟಿದ್ದೀರಿ ಈಗಾಗಲೆ ಮತ್ತೇ ಸಿಎಂ ಆಗಲು ಟವೆಲ್ ಹಾಕಿದ್ದೀರಿ. ಸಿದ್ದರಾಮಯ್ಯ ನೀವೆಂದು ಮತ್ತೇ ಸಿಎಂ ಆಗಲ್ಲ. ನಿಮ್ಮ ಹೆಸರು ರಾಮನದ್ದು, ಆದರೆ ನಿಮ್ಮ ಮುಖ, ಮನಸ್ಸು ಚಿಂತನೆಗಳೆಲ್ಲವೂ ರಾವಣದ್ದು ಎಂದು ಲೇವಡಿ ಮಾಡಿದರು.
ಮುಂದಿನ 15 ದಿನಗಳ ಕಾಲ 75 ಗಂಟೆಗಳ ಸಮಯವನ್ನು ಮೀಸಲಿಟ್ಟು, ಪ್ರಧಾನಿ ನರೇಂದ್ರ ಮೋದಿಯವರ ರೈತಪರ ಯೋಜನೆಗಳನ್ನು ಪ್ರತಿ ರೈತನ ಮನೆ ಮನೆಗೆ ತಲುಪಿಸುವ ಕೆಲಸವನ್ನು ರೈತಮೋರ್ಚಾದ ಪ್ರತಿಯೊಬ್ಬ ಕಾರ್ಯಕರ್ತನೂ ಮಾಡಬೇಕಿದೆ ಎಂದು ಕರೆ ನೀಡಿದರು.
ಕಾರ್ಯಕ್ರಮಕ್ಕೂ ಮುನ್ನ ಶೆಟ್ಟಿಹಳ್ಳಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಿಂದ ಆರ್.ಎಸ್.ಕಲ್ಯಾಣ ಮಂಟಪದವರೆಗೂ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರನ್ನು ಬೈಕ್ ರ‍್ಯಾಲಿ ಮೂಲಕ ಕಾರ್ಯಕರ್ತರು ಸ್ವಾಗತಿಸಿದರು. ಇದೇ ವೇಳೆ ಧವಸ, ಧಾನ್ಯಗಳ ರಾಶಿ ಪೂಜೆ, ಹಾಗೂ ಸಾವಯವ ಕೃಷಿಯಲ್ಲಿ ಸಾಧನೆ ಮಾಡಿರುವ ಪ್ರಗತಿಪರ ರೈತ ತುಮಕೂರು ತಾಲ್ಲೂಕಿನ ಮಸಣಾಪುರದ ಜಯಣ್ಣ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು. ಇದೇ ವೇಳೆ, ಪ್ರಧಾನಿ ನರೇಂದ್ರ ಮೋದಿಯವರ ಮನ್ ಕಿ ಬಾತ್ ಲೈವ್ ಕಾರ್ಯಕ್ರಮವನ್ನು ವೀಕ್ಷಿಸಿದರು.
ಕಾರ್ಯಕ್ರಮದ ನಂತರ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಪಕ್ಷಿನೋಟ, ಚಟುವಟಿಕೆಗಳ ಅವಲೋಕನ ಹಾಗೂ ಮುಂದಿನ ಕಾರ್ಯಯೋಜನೆ, ನಿರ್ಣಯ ಮಂಡನೆ-ಅನುಮೋದನೆ ಕುರಿತು ಚರ್ಚೆಗಳು ನಡೆದವು.
ಈ ಸಂದರ್ಭದಲ್ಲಿ ರಾಜ್ಯಸಭಾ ಸದಸ್ಯರು ಹಾಗೂ ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷರಾದ ಈರಣ್ಣ ಕಡಾಡಿ, ಸಂಸದ ಜಿ.ಎಸ್. ಬಸವರಾಜು, ಶಾಸಕ ಜಿ.ಬಿ.ಜ್ಯೋತಿಗಣೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಹೆಚ್.ಎಸ್.ರವಿಶಂಕರ್ ಹೆಬ್ಬಾಕ, ಬಿಜೆಪಿ ರೈತಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎಸ್.ಶಿವಪ್ರಸಾದ್, ಎಸ್.ಗುರುಲಿಂಗನಗೌಡ, ಪಾಲಿಕೆ ಮೇಯರ್ ಬಿ.ಜಿ.ಕೃಷ್ಣಪ್ಪ, ರೈತಮೋರ್ಚಾ ರಾಜ್ಯ ಕಾರ್ಯದರ್ಶಿ ಪ್ರಸನ್ನ ಕೆರೆಕೈ, ಜಿಲ್ಲಾಧ್ಯಕ್ಷ ಆರ್.ಎಸ್.ಶಿವಶಂಕರಬಾಬು, ರಾಜ್ಯ ಕಾರ್ಯಕಾರಿಣಿ ಸದಸ್ಯ ಸ್ನೇಕ್ ನಂದೀಶ್, ನಗರಾಧ್ಯಕ್ಷ ಜಗದೀಶ್, ಜಿಲ್ಲಾ ವಕ್ತಾರ ಕೆ.ಪಿ.ಮಹೇಶ್, ಸಹ ವಕ್ತಾರ ಜೆ.ಜಗದೀಶ್ ಮುಂತಾದವರು ಭಾಗ ವಹಿಸಿದ್ದರು.