ಅಹಮದಾಬಾದ್: ಭಾರತೀಯ ಅಂಚೆ ಇಲಾಖೆಯು ಡ್ರೋನ್ ಸಹಾಯ ದಿಂದ ದೇಶದಲ್ಲಿಯೇ ಮೊದಲ ಬಾರಿಗೆ ಯಶಸ್ವಿ ಪ್ರಾಯೋಗಿಕ ಪರೀಕ್ಷೆಯನ್ನು ನಡೆಸಿತು. 46 ಕಿ. ಮೀ. ದೂರದ ಸ್ಥಳವನ್ನು ತಲುಪಲು ಡ್ರೋನ್ 25 ನಿಮಿಷ ಗಳನ್ನು ತೆಗೆದು ಕೊಂಡಿತು.
ಗುಜರಾತ್‌ನ ಕಚ್ ಜಿಲ್ಲೆಯಲ್ಲಿ ಡ್ರೋನ್ ಮೂಲಕ ಅಂಚೆ ತಲುಪಿಸಲಾಗಿದ್ದು, ಕೇವಲ 25 ನಿಮಿಷಗಳಲ್ಲಿ 46 ಕಿ. ಮೀ. ಗಳನ್ನು ಕ್ರಮಿಸಲಾಯಿತು. ಪ್ರಾಯೋ ಗಿಕ ಯೋಜನೆಯಡಿ ಭಾರತೀಯ ಅಂಚೆ ಇಲಾಖೆ ಮೊಟ್ಟ ಮೊದಲ ಬಾರಿಗೆ ಡ್ರೋನ್ ಸಹಾಯದಿಂದ ಅಂಚೆಯನ್ನು ತಲುಪಿಸಿತು.
ಕೇಂದ್ರ ಸಂವಹನ ಸಚಿವಾಲಯದ ಮಾರ್ಗದರ್ಶನದಲ್ಲಿ ಕಚ್ ಜಿಲ್ಲೆಯ ಭುಜ್ ತಾಲೂಕಿನ ಹಬೇ ಗ್ರಾಮದಿಂದ ಭಚೌ ತಾಲೂಕಿನ ನೇರ್ ಗ್ರಾಮಕ್ಕೆ ಅಂಚೆ ತಲುಪಿಸಲಾಯಿತು. ಈ ಯಶಸ್ಸಿನೊಂದಿಗೆ ಭವಿಷ್ಯದಲ್ಲಿ ಡ್ರೋನ್‌ಗಳ ಮೂಲಕ ಅಂಚೆ ತಲುಪಿಸಲು ಸಾಧ್ಯವಾಗುತ್ತದೆ ಎಂಬುದು ಸಾಬೀತಾಗಿದೆ.
ಆಧುನಿಕ ತಂತ್ರಜ್ಞಾನದೊಂದಿಗೆ ಹೆಜ್ಜೆ ಹಾಕುತ್ತಾ, ಭಾರತೀಯ ಅಂಚೆ ಇಲಾಖೆಯು ಗುಜರಾತ್‌ನ ಕಚ್‌ನಲ್ಲಿ ಡ್ರೋನ್ ಮೂಲಕ ಅಂಚೆ ತಲುಪಿಸಲು ದೇಶದಲ್ಲಿಯೇ ಮೊದಲ ಬಾರಿಗೆ ಯಶಸ್ವಿ ಪ್ರಾಯೋಗಿಕ ಪರೀಕ್ಷೆ ನಡೆಸಿದೆ.
ಕೇಂದ್ರ ಸಂವಹನ ಖಾತೆ ರಾಜ್ಯ ಸಚಿವ ದೇವುಸಿನ್ಹಾ ಚೌಹಾಣ್, “ಪ್ರಾಯೋಗಿಕ ಯೋಜನೆಯಡಿಯಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವಿಶೇಷವಾಗಿ ಡ್ರೋನ್ ಗಳ ಮೂಲಕ ಆಗುವ ಅಂಚೆ ಸಾಗಣೆ ವೆಚ್ಚದ ಕುರಿತು ಅಧ್ಯಯನ ಮಾಡಲಾಗಿದೆ. ಮೊದಲ ಬಾರಿ ನಡೆಸಿದ ಪ್ರಯೋಗಾರ್ಥ ಪರೀಕ್ಷೆಯ ಪಾರ್ಸೆಲ್ ನಲ್ಲಿ ವೈದ್ಯಕೀಯ ಸಂಬಂಧಿತ ವಸ್ತುಗಳನ್ನು ಒಳಗೊಂಡಿತ್ತು,” ಎಂದು ಟ್ವೀಟ್ ಮಾಡಿದ್ದಾರೆ.
ಅಂಚೆ ಇಲಾಖೆಯ ಸಿಬ್ಬಂದಿಯ ನಡುವಿನ ಸಮನ್ವಯವನ್ನು ಈ ಪ್ರಯೋಗದ ಸಮಯ ದಲ್ಲಿ ಪರೀಕ್ಷಿಸಲಾಯಿತು. ಪ್ರಯೋಗವು ವಾಣಿಜ್ಯವಾಗಿ ಯಶಸ್ವಿಯಾದರೆ, ಅಂಚೆ ಪಾರ್ಸೆಲ್ ಸೇವೆಯು ವೇಗದಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ದೇಶವು ಡ್ರೋನ್ ಉತ್ಸವ 2022 ಅನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಅಂಚೆ ಇಲಾಖೆಯು ಡ್ರೋನ್ ಮೂಲಕ ಅಂಚೆ ತಲುಪಿಸುವ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿದೆ.
ನವದೆಹಲಿಯಲ್ಲಿ ಡ್ರೋನ್ ಉತ್ಸವ 2022 ಅನ್ನು ಉದ್ಘಾಟಿಸಿ ಪ್ರಧಾನಿ ನರೇಂದ್ರ ಮೋದಿ, “2030ರ ವೇಳೆಗೆ ಭಾರತವು ಡ್ರೋನ್ ಹಬ್ ಆಗಲಿದೆ,” ಎಂದು ಹೇಳಿದ್ದನ್ನು ಸ್ಮರಿಸಬಹುದು.