Wednesday, 11th December 2024

ಕೋವಿಡ್-19 ಸಾವಿನ ಸಂಖ್ಯೆ ಕಡಿಮೆ ಮಾಡಲು ಮುಂಜಾಗ್ರತೆಗೆ ಸೂಚನೆ

ಹಾಸನ:

ರಾಜ್ಯದಲ್ಲಿ ಕೋವಿಡ್-19 ಸಾವಿನ ಸಂಖ್ಯೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುವ ನಿಟ್ಟಿನಲ್ಲಿ ಅಗತ್ಯ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ರಾಜ್ಯ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ ಭಾಸ್ಕರ್ ಅವರು ಸೂಚಿಸಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ವಿಡೀಯೋ ಸಂವಾದ ನಡೆಸಿದ ಅವರು ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50 ಬೆಡ್, ಹೈಪ್ಲೋ ಆಕ್ಸಿಜನ್ ಇರುವ ವ್ಯವಸ್ಥೆ ಮಾಡಿ ಪ್ರಕರಣ ಸಂಖ್ಯೆ ಹೆಚ್ಚಾದರೆ ಅತ್ಯಂತ ಜವಾಬ್ದಾರಿಯುತ್ತವಾಗಿ ನಿಭಾಯಿಸಲು ಸಿದ್ದತೆ ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲೆಗಳಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಗರ್ಭಿಣಿಯರು, ಕ್ಷಯ, ಹೆಚ್.ಐ.ವಿ., ಸೊಂಕಿತರು ಡಯಾಲಿಸಿಸ್ ಮಾಡಿಸುತ್ತಿರುವವರ ಪಟ್ಟಿ ಮಾಡಬೇಕು. ಜೊತೆಗೆ ಶೀತ, ನೆಗಡಿ, ಕೆಮ್ಮು, ಜ್ವರ ಲಕ್ಷಣಗಳಿದ್ದವರನ್ನು ಸಮೀಕ್ಷೆ ಮಾಡುವಂತೆ ತಿಳಿಸಿದರಲ್ಲದೆ ಈ ಲಕ್ಷಣಗಳು ಕಂಡುಬಂದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕರೆತಂದು ಪರೀಕ್ಷೆ ಒಳಪಡಿಸುವಂತೆ ಅವರು ತಿಳಿಸಿದರು.

ಕೆಲವರು ಆರೋಗ್ಯ ಸಮಸ್ಯೆ ಗಂಭೀರವಾದ ಮೇಲೆ ಆಸ್ಪತ್ರೆಗೆ ಬರುತ್ತಿದ್ದಾರೆ ಆದ್ದರಿಂದ ಆಶಾ ಕಾರ್ಯಕರ್ತೆಯರು ನಿಗಾವಹಿಸಿ ಮನೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಇದ್ದರೆ ಅವರ ಮೊಬೈಲ್ ನಂಬರ್ ಪಡೆದು ಪ್ರತಿದಿನ ಪೋನ್ ಮಾಡಿ ಆರೋಗ್ಯ ವಿಚಾರಿಸಬೇಕು ಎಂದು ಟಿ.ಎಂ. ವಿಜಯ ಭಾಸ್ಕರ್ ಅವರು ತಿಳಿಸಿದರು.

ಎಲ್ಲಾ ಜಿಲ್ಲೆಯ ಬೂತ್ ಮಟ್ಟದ ಅಧಿಕಾರಿಗಳು ಮನೆ ಮನೆಗೆ ಭೇಟಿ ನೀಡಿ 60 ವರ್ಷ ಮೇಲ್ಪಟ್ಟ ಆಧಿಕ ರಕ್ತ ಒತ್ತಡ, ಮಧುಮೇಹ ಇರುವವರಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ ಲಕ್ಷಣಗಳಿರುವ ಬಗ್ಗೆ ಸರ್ವೆ ಮಾಡಿ ನಿಗಧಿತ ನಮೂನೆಯಲ್ಲಿ ಮಾಹಿತಿ ನೀಡುವಂತೆ ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಸೂಚಿಸಿದರು.

ಖಾಸಗಿ ಆಸ್ಪತ್ರೆ, ಕ್ಲಿನಿಕ್‍ಗಳಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ ಲಕ್ಷಣಗಳಿರುವವರು ಚಿಕಿತ್ಸೆ ಪಡೆದಿರುವವರ ಬಗ್ಗೆ ಮಾಹಿತಿ ಪಡೆಯುವಂತೆ ತಿಳಿಸಿದರಲ್ಲದೆ ಮೇಲ್ಕಂಡ ಆರೋಗ್ಯ ಸಮಸ್ಯೆಗಳಿಗೆ ಔಷóಧಿ ಅಂಗಡಿಗಳಲ್ಲಿ ಔಷಧಿ ಖರೀದಿಸಿರುವವರ ಬಗ್ಗೆಯೂ ಕೂಡ ಮಾಹಿತಿ ಪಡೆಯುವಂತೆ ತಿಳಿಸಿದರು.

ಕೊರೋನಾ ಸೊಂಕು ವೇಗವಾಗಿ ಹರಡದಂತೆ ತಡೆಗಟ್ಟಲು ಪ್ರಾಥಮಿಕ ಹಂತದಲ್ಲಿಯೇ ರೋಗ ಗುರುತಿಸುವುದರ ಜೊತೆಗೆ ಅವರೊಂದಿಗೆ ಸಂಪರ್ಕದಲ್ಲಿದವರನ್ನೂ ಪತ್ತೆಮಾಡಿ ಹೋಂ ಕ್ವಾರಟೈನ್‍ನಲ್ಲಿರಿಸಲು ಕ್ರಮವಹಿಸಬೇಕು ಎಂದು ಮುಖ್ಯ ಕಾರ್ಯದರ್ಶಿ ಅವರು ತಿಳಿಸಿದರು.

ರಾಜ್ಯದಲ್ಲಿ ವಲಸೆ ಕಾರ್ಮಿಕರಿಗೆ ಊಟ ಮತ್ತು ವಸತಿಗೆ ಯಾವುದೇ ತೊಂದರೆಯಾಗದಂತೆ ಕ್ರವಹಿಸಲು ಮುಖ್ಯ ಕಾರ್ಯದರ್ಶಿ ವಿಜಯ ಭಾಸ್ಕರ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.

ಆರೋಗ್ಯ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಜಾವೇದ್ ಅಖ್ತರ್, ಆಯುಕ್ತರಾದ ಪಂಕಜ್ ಕುಮಾರ್ ಪಾಂಡೆ ಹಾಗೂ ಮತ್ತಿತರ ಅಧಿಕಾರಿಗಳು ವಿಡೀಯೋ ಸಂವಾದದಲ್ಲಿ ಹಾಜರಿದ್ದು ಸಲಹೆ ಸೂಚನೆಗಳನ್ನು ನೀಡಿದರು.

ವೀಡಿಯೋ ಸಂವಾದದ ನಂತರ ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಮಾತನಾಡಿ ಜಿಲ್ಲೆಯಲ್ಲಿ ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ ಗರ್ಭಿಣಿಯರು, ಕ್ಷಯ, ಹೆಚ್.ಐ.ವಿ., ಡಯಾಲಿಸಿಸ್ ಮಾಡಿಸುತ್ತಿರುವವರಿಗೆ ಶೀತ, ನೆಗಡಿ, ಕೆಮ್ಮು, ಜ್ವರ ಲಕ್ಷಣಗಳಿವೆಯೇ ಎಂದು ಸರ್ವೆ ಮಾಡಿಸಿ ಮಾಹಿತಿ ನೀಡುವಂತೆ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಬಿ.ಎ. ಪರಮೇಶ್, ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ|| ಸತೀಶ್, ಉಪ ವಿಭಾಗಾಧಿಕಾರಿ ಡಾ|| ನವೀನ್ ಭಟ್, ಹಿಮ್ಸ್ ನಿರ್ದೇಶಕರಾದ ಡಾ|| ರವಿಕುಮಾರ್, ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ|| ಕೃಷ್ಣ ಮೂರ್ತಿ ಮತ್ತಿತರರು ಹಾಜರಿದ್ದರು.