Friday, 22nd November 2024

ಪ್ಲೇಗ್ ತಂದ ಕ್ವಾರಂಟೈನ್ ಕಥೆ

ಹಿಂದಿರುಗಿ ನೋಡಿದಾಗ

ಪ್ಲೇಗ್ ದೇವರ ಕೋಪದಿಂದ ಇಲ್ಲವೇ ಮನುಷ್ಯರ ಪಾಪಕಾರ್ಯದಿಂದ ಬರುತ್ತದೆ ಎನ್ನುವ ನಂಬಿಕೆಯೂ ಎಲ್ಲೆಡೆ ಇತ್ತು. ಯುರೋಪಿನಲ್ಲಿ ಶ್ರೀಸಾಮಾನ್ಯರು ಪ್ಲೇಗಿನಿಂದ ತಮ್ಮನ್ನು ಕಾಪಾಡುವಂತೆ ಸೈಂಟ್ ರೋಚ್, ಸೈಂಟ್ ಸೆಬಾಸ್ಟಿಯನ್, ವರ್ಜಿನ್ ಮೇರಿಯನ್ನು ಪ್ರಾರ್ಥಿಸಿದರು.

ಮನುಷ್ಯನ ಇತಿಹಾಸದಲ್ಲಿ ಕೊಲೆಗಡುಕ ರೋಗಗಳ ಪಟ್ಟಿ ಮಾಡಿದರೆ, ಅದರಲ್ಲಿ ಮೊದಲನೆಯ ಸ್ಥಾನ ಸಿಡುಬಿಗೆ (ಸ್ಮಾಲ್
ಪಾಕ್ಸ್)ಸಲ್ಲುತ್ತದೆ. ಈ ಸಿಡುಬನ್ನು ನಾವು ಸಂಪೂರ್ಣವಾಗಿ ನಿರ್ಣಾಮ ಮಾಡಿದ್ದೇವೆ. ಸಿಡುಬು ಮುಕ್ತ ಭೂಮಿ ನಮ್ಮದು. ಎರಡನೆ ಸ್ಥಾನ ಮಹಾನ್ ಕೊಲೆಗಡುಕ ಪ್ಲೇಗ್ ರೋಗಕ್ಕೆ ಸಲ್ಲುತ್ತದೆ. ನಾವು ಸಿಡುಬನ್ನು ನಿರ್ಣಾಮ ಮಾಡಿದ ಹಾಗೆ, ಪ್ಲೇಗನ್ನೂ ಏಕೆ ನಿರ್ಣಾಮ ಮಾಡಬಾರದು? ಭೂಮಿ ಯನ್ನು ಪ್ಲೇಗ್ ಮುಕ್ತವಾಗಿಸಬಾರದೇಕೆ? ಎಂದು ಪ್ರಶ್ನೆಯನ್ನು ಕೇಳುವುದು ಸುಲಭ.

ಆದರೆ ಉತ್ತರ ಮಾತ್ರ ಸಂಕೀರ್ಣ. ಸಿಡುಬಿನ ಆಕರ ಮನುಷ್ಯ ಮಾತ್ರ. ಹಾಗಾಗಿ ನಮ್ಮ ಭೂಮಿಯ ಮೇಲಿರುವ ಎಲ್ಲ ಮಕ್ಕಳಿಗೆ ಸಿಡುಬು ಲಸಿಕೆಯನ್ನು ನೀಡಿ, ಸಿಡುಬು ವೈರಸ್ಸನ್ನು ಸಂಪೂರ್ಣವಾಗಿ ನಾಶ ಮಾಡುವುದು ಸುಲಭವಾಯಿತು. ಪ್ಲೇಗ್
ಬ್ಯಾಕ್ಟೀರಿಯದ ಪ್ರಾಕೃತಿಕ ಆಕರ ಇಲಿ. ಎಲ್ಲ ದಂಶಕ ಪ್ರಾಣಿಗಳಲ್ಲಿ ಯೆರ್ಸೀನಿಯವು ಪ್ರಾಣಿ ಪ್ಲೇಗನ್ನು ಉಂಟು ಮಾಡಬಲ್ಲುದು. ಯೆರ್ಸೀನಿಯವು ಆಸ್ಟ್ರೇಲಿಯವನ್ನು ಬಿಟ್ಟು ಉಳಿದ ಎಲ್ಲ ಖಂಡಗಳ ದಂಶಕ ವರ್ಗದ ಪ್ರಾಣಿಗಳಲ್ಲಿ ಜೀವಿಸುತ್ತದೆ. ಹಾಗಾಗಿ ಈ ಎಲ್ಲ ಪ್ರಾಣಿಗಳನ್ನು ಕೊಲ್ಲುವುದು ಅಸಾಧ್ಯ ಮಾತು. ಹಾಗಾಗಿ ಪ್ಲೇಗಿಗೆ ಕಾರಣವಾದ ಯೆರ್ಸೀನಿಯವನ್ನು ನಾವು ನಿಗ್ರಹಿಸ ಬಹುದೇ ಹೊರತು, ಅದನ್ನು ಸಂಪೂರ್ಣವಾಗಿ ನಿರ್ಣಾಮ ಮಾಡಲು ಸಾಧ್ಯವಿಲ್ಲ.

ನಮಗೆ ಲಭ್ಯವಿರುವ ದಾಖಲೆಗಳನ್ವಯ, ಪ್ಲೇಗ್ ಮನುಕುಲವನ್ನು ಕಾಡಿದ ಮೊದಲ ಬರಹ ಕ್ರಿ.ಶ.100ರ ಕಾಲಕ್ಕೆ ಸೇರಿದೆ. ಗ್ರೀಸಿನ ಈಫಿಸಸ್ ಎಂಬ ನಗರದಲ್ಲಿದ್ದ ರೂಫಸ್ ಎಂಬ ವೈದ್ಯ ಮರಣಾಂತಿಕ ಗಡ್ಡೆ ಪ್ಲೇಗ್ ಲಿಬಿಯ, ಈಜಿಪ್ಟ್ ಮತ್ತು ಸಿರಿಯಾ ಗಳಲ್ಲಿ ಕಾಣಿಸಿಕೊಂಡಿತು ಎಂದು ದಾಖಲಿಸಿದ್ದಾನೆ. ಕ್ರಿ.ಪೂ. ೩ನೆಯ ಶತಮಾನದಷ್ಟು ಹಿಂದೆಯೂ ಪ್ಲೇಗ್ ಕಾಣಿಸಿಕೊಂಡಿತ್ತು.
ಬಹುಶಃ ಪ್ಲೇಗ್ ಮಾನವ ಜನಾಂಗದಷ್ಟೇ ಹಳೆಯದು.

ನಮಗೆ ದೊರೆಯುವ ದಾಖಲೆಗಳನ್ವಯ, ಇಡೀ ಜಗತ್ತನ್ನು ಕಾಡಿದ ಮೊದಲ ಪ್ಲೇಗ್ ಪಿಡುಗು ಕ್ರಿ.ಶ. 541ರ ಕಾಲದ್ದು. ಇದನ್ನು ಜಸ್ಟೀನಿಯನ್ ಪ್ಲೇಗ್ ಎಂದು ಕರೆಯುವರು. ಕಾರಣ ರೋಮನ್ ಚಕ್ರವರ್ತಿ ಜಸ್ಟೀನಿಯನ್, ದಿ ಗ್ರೇಟ್ ಬೈಜಂಟೈನ್ ಸಾಮ್ರಾಜ್ಯ ವನ್ನು ಆಳುತ್ತಿದ್ದ. ಪ್ಲೇಗ್ ಮೊದಲು ಆಫ್ರಿಕ ಖಂಡದ ಇಥಿಯೋಪಿಯದಲ್ಲಿ ಕಾಣಿಸಿಕೊಂಡಿತು. ಈಜಿಪ್ಟಿನ ಪೆಲೂಸಿಯಂ
ಪ್ರದೇಶಕ್ಕೆ ಹರಡಿತು. ಅಲ್ಲಿಂದ ಅಲೆಗ್ಸಾಂಡಿಯ, ಜೆರುಸಲೇಮ್, ಆಂಟಿಯೋಚ್ ಪ್ರದೇಶಗಳಿಗೆ ವ್ಯಾಪಿಸಿತು.

ಸಮುದ್ರ ಮಾರ್ಗದ ಮೂಲಕ ಮೆಡಿಟೆರೇನಿಯನ್ ಪ್ರದೇಶ ಹಾಗೂ ಕಾನ್‌ಸ್ಟಾಂಟಿನೋಪಲ್ ಪ್ರದೇಶಕ್ಕೆ 541, 542, 543 ವರ್ಷ ಗಳಲ್ಲಿ ಹರಡಿತು. ಬೈಜಂಟೈನ್ ಸಾಮ್ರಾಜ್ಯದ ಆಸ್ಥಾನ ಇತಿಹಾಸಕಾರನಾದ ಸಿಸೇರಿಯದ ಪ್ರೋಕೋಪಿಯಸ್ ತನ್ನ ಯುದ್ಧಗಳ ಇತಿಹಾಸ ಪುಸ್ತಕದಲ್ಲಿ ಅಂದು ತಾನು ಕಣ್ಣಾರೆ ಕಂಡ ಪ್ಲೇಗಿನ ಬಗ್ಗೆ ವಿವರಿಸಿದ್ದಾನೆ. ಜನಸಾಮಾನ್ಯರಿಗೆ ಜ್ವರವು ಬಂದು, ಸನ್ನಿಯು ತಲೆದೋರಿ, ತೊಡೆಸಂದುಗಳಲ್ಲಿ ಗಂಟುಗಳು ಉಂಟಾಗಿ ಜನರು ಹೇಗೆ ಸಾಯಲಾರಂಭಿಸಿದರು ಎಂದರೆ ಮನುಕುಲವೇ ಅಳಿದು ಹೋಗುತ್ತೇನೋ ಎಂಬ ಭೀತಿಯುಂಟಾಯಿತು ಎಂದು ಬರೆದಿದ್ದಾನೆ.

542ನೆ ವರ್ಷದ ಕಾನ್‌ಸ್ಟಾಂಟಿನೋಪಲ್ ನಗರವೊಂದರಲ್ಲಿ ದಿನಕ್ಕೆ 5000 ಜನರು ಸಾಯಲಾರಂಭಿಸಿದರು. ಕೆಲವು ದಾಖಲೆ ಗಳು ಈ ಸಂಖ್ಯೆಯನ್ನು ದಿನಕ್ಕೆ 10000 ಎನ್ನುತ್ತವೆ. ನಗರದ 1/3 ಭಾಗದ ಜನರು ನಾಮಾವಶೇಷವಾದರು. ಮುಂದಿನ ಮೂರು ವರ್ಷ ಗಳಲ್ಲಿ ಪ್ಲೇಗ್ ಮಹಾಮಾರಿಯು ಇಟಲಿ, ಫ್ರಾನ್ಸ್, ಐಬೀರಿಯಕ್ಕೆ ಹರಡಿ ಅಲ್ಲಿಂದ ಡೆನ್ಮಾರ್ಕ್ ಮತ್ತು ಅಯರ್‌ ಲ್ಯಾಂಡ್‌ವರೆಗೆ ವ್ಯಾಪಿಸಿತು.

ಆಫ್ರಿಕ, ಮಧ್ಯಪ್ರಾಚ್ಯ, ಏಷ್ಯಾ ಮೈನರ್ ಪ್ರದೇಶಗಳಿಗೆ ಹರಡಿತು. 542-543ರ ನಡುವಿನ ನಾಲ್ಕು ವರ್ಷಗಳ ಕಾಲದಲ್ಲಿ, ಏಷ್ಯಾ, ಯುರೋಪ್ ಮತ್ತು ಆಫ್ರಿಕ ಖಂಡಗಳಲ್ಲಿ ಪ್ಲೇಗ್ ಪಿಡುಗು ಒಟ್ಟು 100 ದಶಲಕ್ಷ ಜನರನ್ನು ಆಹುತಿ ತೆಗೆದುಕೊಂಡಿತು. ಪ್ಲೇಗ್ ಮಹಾಮಾರಿಯು ಈ ಮಹಾ ಅಲೆಯ ನಂತರ ಜಸ್ಟೀನಿಯನ್ ಸಾಮ್ರಾಜ್ಯವು ಹೇಳಹೆಸರಿಲ್ಲದಂತೆ ನಾಶವಾಯಿತು. ಕೃಷಿಯು ಬಹುಪಾಲು ಸ್ಥಗಿತವಾಗಿತ್ತು. ಹಾಗಾಗಿ 8 ವರ್ಷಗಳ ಕಾಲ ಭೀಕರ ಬರಗಾಲವು ಕಾಡಿತು.

ಇದರೊಂದಿಗೆ ರೋಮ್‌ನಂಥ ಬೃಹತ್ ಸಾಮ್ರಾಜ್ಯಗಳ ಕಾಲ ಮುಗಿದದ್ದರಿಂದ, ಯೂರೋಪಿನಲ್ಲಿ ಸ್ಥಳೀಯ ಸಂಸ್ಕೃತಿ ಗನುಗುಣವಾಗಿ ವಿವಿಧ ದೇಶಗಳು ಹುಟ್ಟಿಕೊಂಡವು. ಇವೇ ಮಧ್ಯಯುಗದ ಯೂರೋಪಿನ ದೇಶಗಳಾದವು. ಆದರೆ ಪ್ಲೇಗ್ ಮಾತ್ರ ಪೂರ್ಣವಾಗಿ ಮಾಯವಾಗಲಿಲ್ಲ. ಕಾಳಮೃತ್ಯು ಅಥವಾ ಬ್ಲಾಕ್‌ಡೆತ್ ಎಂದು ಹೆಸರಾದ ಎರಡನೆಯ ಪ್ಲೇಗ್ ಮಹಾಪಿಡುಗು, 1347-1352ರ ನಡುವೆ ಯುರೋಪಿನಲ್ಲಿ ಕಾಣಿಸಿಕೊಂಡಿತು. 1346ರಲ್ಲಿ ಪ್ಲೇಗ್ ಪ್ರಕರಣಗಳು ಪೂರ್ವ ದೇಶಗಳಲ್ಲಿ ಕಂಡು ಬಂದಿದೆ ಎನ್ನುವ ಸುದ್ದಿಯು ಹಬ್ಬಿತು.

ಜಾನಿಬೆಕ್ ಖಾನ್ ತನ್ನ ಸೈನ್ಯವನ್ನು ಏಷ್ಯಾ ಮೈನರ್ ಪ್ರದೇಶದಿಂದ ಕ್ರಿಮಿಯ ಪ್ರದೇಶಕ್ಕೆ ತಂದಾಗ, ಅವನ ಸೇನೆಯೊಡನೆ ಪ್ಲೇಗ್ ಕಾಯಿಲೆಯೂ ಬಂದಿತು. ಸೈನ್ಯವು ಕಫ್ಫಾ ನಗರವನ್ನು (ಇಂದಿನ ಉಕ್ರೇನಿನ ಫಿಯೋದೋಸ್ಯ) ಆಕ್ರಮಿಸಿತು. ಆದರೆ ಗೆಲ್ಲಲಾಗ ಲಿಲ್ಲ. ಆಗ ಸೋತ ಸೈನ್ಯವು ಹಿಂದಿರುಗುವಾಗ, ಪ್ಲೇಗಿನಿಂದ ಸತ್ತ ಸೈನಿಕರ ಶವಗಳನ್ನು ಕವಣೆಯಂತ್ರದಲ್ಲಿಟ್ಟು ಕಫ್ಫಾ  ನಗರ ದೊಳಗೆ ಚಿಮ್ಮಿತು.

ಹೀಗೆ ಕಫ್ಫಾ ನಗರವನ್ನು ಪ್ಲೇಗ್ ಪ್ರವೇಶಿಸಿತು. ಕಫ್ಫಾ ನಗರವಾಸಿಗಳು ಭೀತಿಯಿಂದ ಕಾನ್‌ಸ್ಟಾಂಟಿ ನೋಪಲ್‌ನತ್ತ ಧಾವಿಸಿದರು. ಅಲ್ಲಿಂದ ಮೆಡಿಟೆರೇನಿಯ ಸಮುದ್ರದ ಮೂಲಕ ಮೆಸ್ಸಿನ, ಸಿಸಿಲಿಗೆ ಹೊರಟರು. ಆದರೆ ಅಲ್ಲಿ ಆಗಲೇ ಪ್ಲೇಗ್ ಆರಂಭವಾಗಿತ್ತು. ಕೆಲವೇ ದಿನಗಳಲ್ಲಿ ಇಡೀ ಯುರೋಪ್ ಪ್ಲೇಗ್ ಪೀಡಿತವಾಯಿತು. ಆಗ ಪ್ಲೇಗನ್ನು ದಿ ಪೆಸ್ಟಿಲೆನ್ಸ್ ಎಂದಷ್ಟೇ ಕರೆಯುತ್ತಿದ್ದರು.
ಅನಂತರ ಬ್ಲಾಕ್‌ಡೆತ್ ಎನ್ನುವ ಹೆಸರು ಬಳಕೆಗೆ ಬಂತು. ಮನುಕುಲವನ್ನು ಪ್ಲೇಗ್ ಪಿಡುಗು ಎರಡು ಬಾರಿ ಕಾಡಿದರೂ, ಪ್ಲೇಗ್ ಹೇಗೆ ಬರುತ್ತದೆ ಎನ್ನುವುದು ಯಾರಿಗೂ ತಿಳಿದಿರಲಿಲ್ಲ.

ಇದು ಕೆಟ್ಟ ಗಾಳಿಯಿಂದ (ಮಿಯಾಸ್ಮ) ಹರಡುತ್ತದೆ ಎನ್ನುವ ನಂಬಿಕೆಯಿತ್ತು. ಮಿಯಾಸ್ಮ ಎಂದರೆ, ಕೊಳೆತು ನಾರುತ್ತಿರುವ ಪ್ಲೇಗ್ ಶವಗಳಲ್ಲಿ ಹುಟ್ಟುವ ಇಲ್ಲವೇ ಅದರ ಮೇಲಿನಿಂದ ಹಾದು ಬರುವ ದುರ್ವಾಸನಾ ಗಾಳಿ. ಪ್ಲೇಗ್ ದೇವರ ಕೋಪದಿಂದ ಇಲ್ಲವೇ ಮನುಷ್ಯರ ಪಾಪಕಾರ್ಯದಿಂದ ಬರುತ್ತದೆ ಎನ್ನುವ ನಂಬಿಕೆಯೂ ಎಲ್ಲೆಡೆ ಇತ್ತು. ಯುರೋಪಿನಲ್ಲಿ ಶ್ರೀಸಾಮಾನ್ಯರು ಪ್ಲೇಗಿನಿಂದ ತಮ್ಮನ್ನು ಕಾಪಾಡುವಂತೆ ಸೈಂಟ್ ರೋಚ್, ಸೈಂಟ್ ಸೆಬಾಸ್ಟಿಯನ್, ವರ್ಜಿನ್ ಮೇರಿಯನ್ನು ಪ್ರಾರ್ಥಿಸಿದರು.

ಜನರು ದಾರಿಯುದ್ದಕ್ಕೂ ಭಗವನ್ನಾಮ ಸಂಕೀರ್ತನೆಯನ್ನು ಮಾಡುತ್ತಾ, ತಮ್ಮನ್ನು ತಾವು ಚಾವಟಿಯಿಂದ ಹೊಡೆದು ಕೊಳ್ಳುತ್ತ, ತಮ್ಮನ್ನು ಕ್ಷಮಿಸಬೇಕೆಂದು ಹಲಬುತ್ತಾ ಮೆರವಣಿಗೆ ಹೊರಟರು. ಆದರೂ ಪ್ಲೇಗ್ ಕಡಿಮೆಯಾಗಲಿಲ್ಲ. ಪ್ಲೇಗ್ ಎರಡನೆಯ ಪಿಡುಗು ಯುರೋಪಿನ ಸಾಮಾಜಿಕ ಹಾಗೂ ಆರ್ಥಿಕ ವ್ಯವಸ್ಥೆಯ ಮೇಲೆ ತೀವ್ರಸ್ವರೂಪದ ಪರಿಣಾಮವನ್ನು ಬೀರಿತು. ಕುಟುಂಬಕ್ಕೆ ಕುಟುಂಬವೇ ನಾಶವಾಗುವುದು ಸಾಮಾನ್ಯ ವಿಷಯವಾಗಿತ್ತು. ಇಡೀ ಹಳ್ಳಿಯ ಜನರು ಸತ್ತು, ಹಳ್ಳಿಗಳು ಬರಿದಾದವು. ಕೃಷಿ ನಿಂತಿತು.

ಹೊಲಗಳಲ್ಲಿ ಕೆಲಸ ಮಾಡಲು ಜನ ಇಲ್ಲದಂತಾಯಿತು. ಅಳಿದುಳಿದವರನ್ನು ಕೆಲಸಕ್ಕೆ ಕರೆದರೆ ಯಾರೂ ಊಹಿಸಲಾಗದಂಥ ಮಜೂರಿಯನ್ನು ಕೇಳಲಾರಂಭಿಸಿದರು. ಈ ಖಳನಾಯಕರ ಕಾರಣ ಶ್ರೀಮಂತರೂ ಬೀದಿಗೆ ಬೀಳುವಂತಾಯಿತು. ಆರೋಗ್ಯವಂತ ರಾಗಿದ್ದ ಖಳನಾಯಕರು ಶ್ರೀಮಂತರನ್ನು ಅಟ್ಟಿ, ಅವರ ಹೊಲಗದ್ದೆ, ಮನೆಗಳನ್ನು ವಶಪಡಿಸಿಕೊಂಡು ಮೆರೆಯಲಾರಂಭಿಸಿ ದರು. ಬೆಳೆಯೇ ಇಲ್ಲದ ಕಾರಣ, ವ್ಯಾಪಾರ, ವಾಣಿಜ್ಯ ಚಟುವಟಿಕೆಗಳು ಕುಂಠಿತವಾದವು. ಎಲ್ಲೆಡೆ ಆಹಾರಕ್ಕೂ ಹಾಗೂ ದೈನಂದಿನ ಬಳಕೆಯ ಸಿದ್ಧಪಡಿಸಿದ ವಸ್ತುಗಳಿಗೆ ಬೇಡಿಕೆ ಹೆಚ್ಚಿತು.

ಈ ಹಾವಳಿ ಅವ್ಯಾಹತವಾಗಿ ಮುಂದುವರೆದ ಕಾರಣ, ಅಂದಿನ ಸಮಾಜದಲ್ಲಿದ್ದ ಆಳುವವರ ವರ್ಗ ಮತ್ತು ದುಡಿಯುವವರ ವರ್ಗಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡವು. ಅಲ್ಲಿಯವರೆಗೂ ಅಸ್ತಿತ್ವದಲ್ಲಿ ಇರದ ಮಧ್ಯಮ ವರ್ಗವು ಹುಟ್ಟಿಕೊಂಡಿತು. 1562ರಲ್ಲಿ ಪೈಟರ್ ಬ್ರುಘೇಲ್, ದಿ ಎಲ್ಡರ್ ಒಂದು ವರ್ಣ ಚಿತ್ರವನ್ನು ರಚಿಸಿದ. ಇದರಲ್ಲಿ ಅಸ್ಥಿಪಂಜರಗಳ ಸೈನ್ಯವು ನುಗ್ಗಿ, ಅಂದಿನ ಸಮಾಜದಲ್ಲಿದ್ದ ಎಲ್ಲರನ್ನು-ರಾಜ, ಮಹಾರಾಜ, ಪಾದ್ರಿ, ಬಿಷಪ್‌ಗಳನ್ನು, ಸಿರಿವಂತ, ಬಡವ, ಕಾರ್ಮಿಕರೆನ್ನದೇ-ಎಲ್ಲ ಮನುಷ್ಯರನ್ನು ಕೊಲ್ಲುತ್ತಿದ್ದವು.

1347-1350ರ ನಡುವೆ ಪ್ಲೇಗ್ ಮಹಾಮಾರಿಗೆ 25 ದಶಲಕ್ಷ ಜನರು ಯುರೋಪಿನಲ್ಲಿ ತುತ್ತಾದರೆ, ಮತ್ತೆ 25 ದಶಲಕ್ಷ ಜನರು ಏಷ್ಯಾ ಮತ್ತು ಆಫ್ರಿಕದಲ್ಲಿ ಸತ್ತರು. 1361ರಲ್ಲಿ ಪ್ಲೇಗ್ ಮತ್ತೆ ಕಾಣಿಸಿಕೊಂಡಿತು. ಶೇ. 10-20 ಯುರೋಪಿಯನ್ನರನ್ನು ಕೊಂದಿತು. 1374 ರಲ್ಲಿ ಪ್ಲೇಗ್ ಮತ್ತೆ ಕಾಣಿಸಿಕೊಂಡಿತು. ವೆನಿಸ್ ಅಧಿಕಾರಿಗಳು ಪ್ಲೇಗ್ ಪೀಡಿತರು ಜನಸಾಮಾನ್ಯರ ನಡುವೆ ಬೆರೆಯದಂತೆ ತಡೆ ಗಟ್ಟಲು ಕ್ವಾರಂಟೈನ್ ಎಂಬ ಪರಿಕಲ್ಪನೆಯನ್ನು ಮೊದಲ ಬಾರಿಗೆ ಜಾರಿಗೆ ತಂದರು.

ಹಡಗುಗಳು ಬಂದರಿಗೆ ಬಂದರೂ ಸಹ, ಅದರಲ್ಲಿ ರೋಗಪೀಡಿತರಿದ್ದಾರೆ ಎಂದು ಅನುಮಾನ ಬಂದರೆ ಸಾಕು, ಅವರನ್ನು ಅಲ್ಲಿಯೇ 30 ದಿನಗಳವರೆಗೆ ಬಂಧನದಲ್ಲಿರುವಂತೆ ಕಟ್ಟಪ್ಪಣೆಯನ್ನು ನೀಡಿದರು. ಇವರಲ್ಲಿ ರೋಗಲಕ್ಷಣಗಳು ಕಾಣಿಸಿ ಕೊಂಡರೆ, ಅವರಿಗೆ ನಗರ ಪ್ರವೇಶವನ್ನು ನಿರಾಕರಿಸುತ್ತಿದ್ದರು. ಆರೋಗ್ಯವಾಗಿದ್ದರೆ ಮಾತ್ರ ಅವರನ್ನು ನಗರದೊಳಗೆ ಸೇರಿಸಿ ಕೊಳ್ಳುತ್ತಿದ್ದರು. ಈ ಪದ್ಧತಿಯು ಟ್ರೆಂಟನ್ ಎಂಬ ಹೆಸರಿನಲ್ಲಿ ಪ್ರಸಿದ್ಧವಾಯಿತು. 1403ರ ವೇಳೆಗೆ ವೆನಿಸ್ ನಗರದವರು 30 ದಿನಗಳ ಟ್ರೆಂಟನ್ ಸಾಲದೆಂದು 40 ದಿನಗಳ ಕ್ವಾರಂಟೈನ್ ಜಾರಿಗೆ ತಂದರು. 14-15ನೆಯ ಶತಮಾನದ ಯುರೋಪಿಯನ್ ದೇಶಗಳಲ್ಲಿ ಕ್ವಾರಂಟೈನ್ ಪದ್ಧತಿಯು ಸಾಮಾನ್ಯವಾಯಿತು.