ನೂರೆಂಟು ವಿಶ್ವ
vbhat@me.com
ನಮ್ಮಂಥವರಿಗೆ ಸಾಲ ಕೊಟ್ಟೇ ಬ್ಯಾಂಕುಗಳು ವ್ಯವಹಾರ ಮಾಡುತ್ತವೆ. ದೇಶದ ಆರ್ಥಿಕತೆ ವೃದ್ಧಿಗೆ ನಮ್ಮಂಥ ಸಾಲಗಾರರೇ ಬೇಕು. ಎಲ್ಲರೂ ಬ್ಯಾಂಕುಗಳಲ್ಲಿ ಠೇವಣಿ ತಂದು ತಂದು ಇಟ್ಟು, ನಿಮ್ಮ ಹಾಗೆ ಯಾರೂ ಸಾಲವನ್ನೇ ಪಡೆಯದಿದ್ದರೆ ಬ್ಯಾಂಕುಗಳು ಮುಚ್ಚಿಕೊಂಡು ಹೋಗುತ್ತವೆ. ನಿಜವಾಗಿ ಸಾಲಗಾರರೇ ಬ್ಯಾಂಕಿನ ಆಸ್ತಿ.
ಆಗ ನಾನಿನ್ನೂ ‘ವಿಶ್ವವಾಣಿ’ ಪತ್ರಿಕೆಯನ್ನು ಆರಂಭಿಸಿರಲಿಲ್ಲ. ಪ್ರಾಯಶಃ ‘ಕನ್ನಡ ಪ್ರಭ’ ಪತ್ರಿಕೆಯನ್ನು ಬಿಟ್ಟಿದ್ದೆ. ಒಮ್ಮೆ ಆ ದಿನಗಳಲ್ಲಿ ಮುಂಬೈಗೆ ಹೋಗಿದ್ದೆ. ನನ್ನ ಸ್ನೇಹಿತರೊಬ್ಬರಿಗೆ ಫೋನ್ ಮಾಡಿದೆ. ತಮ್ಮ ಮನೆಗೆ ರಾತ್ರಿ ಊಟಕ್ಕೆ ಬರುವಂತೆ ಆಹ್ವಾನಿಸಿದರು. ಜುಹೂ ಬೀಚಿನಲ್ಲಿ ಸಮುದ್ರಕ್ಕೆ ಮುಖ ಮಾಡಿ ನಿರ್ಮಿಸಿದ ಆ ಮನೆ ಯನ್ನು ಅವರು ಕೆಲವು ತಿಂಗಳ ಹಿಂದಷ್ಟೇ ೧೨೧ ಕೋಟಿ ರುಪಾಯಿಗೆ ಖರೀದಿಸಿದ್ದರು. ಅದೊಂದು ಕನಸಿನ ಮನೆ. ಮುಂಬೈಯ ಪ್ರತಿಷ್ಠಿತರು, ಉದ್ಯಮಿ ಗಳು, ಸಿನಿಮಾ ನಟರು, ಕ್ರಿಕೆಟ್ ಆಟಗಾರರು, ರಾಜಕಾರಣಿಗಳು, ವಜ್ರ ವ್ಯಾಪಾರಿಗಳು ಅವರ ಮನೆಯ ಅಕ್ಕ-ಪಕ್ಕ, ಹಿಂದೆ-ಮುಂದೆ ಇದ್ದರು. ನನ್ನ ಸ್ನೇಹಿತರ ಬಗ್ಗೆ ಅತೀವ ಅಭಿಮಾನವೆನಿಸಿತು.
ಇಪ್ಪತ್ತು ವರ್ಷಗಳ ಹಿಂದೆ, ಅವರು ಬಾಡಿಗೆ ಮನೆಯಲ್ಲಿ ಇದ್ದುದನ್ನು ನಾನೇ ನೋಡಿz. ಲಟೂರಿ ಅಂಬಾಸಿಡರ್ ರನ್ನು ಇಟ್ಟುಕೊಂಡಿದ್ದರು. ತಾವೇ ಡ್ರೈವ್ ಮಾಡುತ್ತಿದ್ದರು. ಕುಳಿತಲ್ಲಿ ಕುಳಿತುಕೊಳ್ಳುತ್ತಿರಲಿಲ್ಲ. ‘ನಮ್ಮ ಮನೆಯ ವರನ್ನು ಕಂಬಕ್ಕೆ ಕಟ್ಟಿ ಹಾಕಿದರೂ, ಆ ಕಂಬಕ್ಕೇ ಸುತ್ತು ಹಾಕ್ತಾ ಇರ್ತಾರೆ’ ಎಂದು ಅವರ ಪತ್ನಿಯೂ ತಮಾಷೆ ಮಾಡುತ್ತಿದ್ದರು. ಈ ಮನುಷ್ಯ ಒಂದಲ್ಲ ಒಂದು ದಿನ ಏನೋ ದೊಡ್ಡ ಸಾಧನೆ ಮಾಡುತ್ತಾನೆ ಎಂದು ನನಗೆ ಅನಿಸಿತ್ತು. ಆದರೆ ಆ ಸಾಧನೆ ಅಷ್ಟು ಅಗಾಧವಾಗಿರಬಹುದು ಮತ್ತು ಅಷ್ಟು ಶೀಘ್ರವಾಗಿ ಆಗಬಹುದು ಎಂದು ಅನಿಸಿರಲಿಲ್ಲ. ಇಂದು ಅವರ ಬಳಿ ಸುಮಾರು ಎಂಟು ನೂರು ಜನ ಕೆಲಸಕ್ಕಿದ್ದಾರೆ. ಭಾರತದ ಹನ್ನೊಂದು ನಗರಗಳಲ್ಲಿ ಅವರ ಆಫೀಸುಗಳಿವೆ. ವರ್ಷಕ್ಕೆ ಏನಿಲ್ಲವೆಂದರೂ ಸಾವಿರ ಕೋಟಿ ರುಪಾಯಿಗೆ ಕಮ್ಮಿ ಇಲ್ಲದಷ್ಟು ವಹಿವಾಟು ನಡೆಸುತ್ತಾರೆ.
‘ನನಗೆ ನಿಮ್ಮ ಬಿಜಿನೆಸ್ ಒಳಗುಟ್ಟನ್ನು ಹೇಳಬೇಕಿಲ್ಲ, ಆದರೆ ನೀವು ಕಳೆದ ಇಪ್ಪತ್ತು ವರ್ಷಗಳಲ್ಲಿ ಈ ಸಾಧನೆ ಮಾಡಿದ್ದು ಹೇಗೆ?’ ಎಂದು ಕೇಳಿದೆ. ಅದಕ್ಕೆ ಅವರು ಒಂದೇ ಮಾತಿನಲ್ಲಿ, ‘ಸಾಲ ಮಾಡುವ ನನ್ನ ತಾಕತ್ತು’ ಎಂದರು. ನನಗೆ ಅರ್ಥವಾಗಲಿಲ್ಲ. ನನ್ನ ಮುಖದಲ್ಲಿ ಬೃಹದಾಕಾರವಾಗಿ ಮೂಡಿದ ಪ್ರಶ್ನಾರ್ಥಕ ಚಿಹ್ನೆ ಯನ್ನು ಗಮನಿಸಿದ ಅವರು, ‘ಭಟ್ರೇ, ನಿಮ್ಮ ಪ್ರಶ್ನೆಗೆ ನಂತರ ಉತ್ತರ ಕೊಡ್ತೇನೆ. ಅದಕ್ಕಿಂತ ಮೊದಲು ನನಗೆ ಒಂದು ಸಂಗತಿ ತಿಳಿಸಿ’ ಎಂದರು.
ನಾನು ‘ಏನು?’ ಎಂದು ಕೇಳಿದೆ. ಅದಕ್ಕೆ ಅವರು, ‘ಕಣ್ಣು ಮಿಟುಕಿಸದೇ ನೇರವಾಗಿ ಹೇಳಿ, ನಿಮಗೆ ಎಷ್ಟು ಸಾಲವಿದೆ?’ ಎಂದು ಕೇಳಿದರು. ನಾನು ತಕ್ಷಣ, ‘ನಾನು ಕಳೆದ ಇಪ್ಪತ್ತು ವರ್ಷಗಳಲ್ಲಿ ಒಂದು ಪೈಸೆ ಸಾಲ ಮಾಡಿಲ್ಲ. ನಾನೇ ಕೆಲವರಿಗೆ ಹತ್ತಿಪ್ಪತ್ತು ಲಕ್ಷ ಸಾಲ ಕೊಟ್ಟಿರಬಹುದು. ಆದರೆ ನಾನು ಯಾರ ಬಳಿಯೂ ಸಾಲ ಮಾಡಿಲ್ಲ’ ಎಂದೆ. ಆಗ ಅವರು ನನ್ನನ್ನು ನೋಡಿದ ರೀತಿ ವಿಚಿತ್ರವೆನಿಸಿತು. ನಾನೊಬ್ಬ ಕೆಲಸಕ್ಕೆ ಬಾರದ ನಿಷ್ಪ್ರಯೋಜಕ ವ್ಯಕ್ತಿ ಎಂಬಂತಿತ್ತು ಅವರ ನೋಟ.
‘ದಯವಿಟ್ಟು ಬೇಸರ ಮಾಡಿಕೊಳ್ಳಬೇಡಿ, ನೀವು ಕಳೆದ ಇಪ್ಪತ್ತು ವರ್ಷಗಳಲ್ಲಿ ಸಾಲವನ್ನೇ ಮಾಡಿಲ್ಲ ಅಂದ್ರೆ, ನನಗೆ ನೀವೊಬ್ಬ ಸಾಮಾನ್ಯ ವ್ಯಕ್ತಿ ಥರ ಕಾಣುತ್ತೀರಿ. ಸಾಲ ಮಾಡದ ವ್ಯಕ್ತಿ ಮುಂದೆ, ನಾನು ನನ್ನ ಸಾಧನೆ ಬಗ್ಗೆ ಹೇಳಿದರೆ ಅವರಿಗೆ ಹೇಗೆ ಅರ್ಥವಾಗುತ್ತದೆ? ಕ್ಷಮಿಸಿ, ನಾನು ನಿಮಗೆ ಹೇಳೋದು ಅರ್ಥವಾಗೊಲ್ಲ’ ಎಂದುಬಿಟ್ಟರು. ನಾನು ಕಕಮಕ. ಹೇಗೆ ಪ್ರತಿಕ್ರಿಯಿಸಬೇಕೋ ನನಗೆ ಅರ್ಥವಾಗಲಿಲ್ಲ. ಅಲ್ಲಿ ತನಕ ಸಾಲ ಮಾಡದಿರುವುದೇ ದೊಡ್ಡ ಸಾಧನೆ, ಅಗ್ಗಳಿಕೆ, ಘನಂದಾ ರಿಕೆ ಎಂದು ಭಾವಿಸಿದ್ದ ನನ್ನ ನಂಬಿಕೆಯನ್ನೇ ಅವರು ಕ್ಷಣಾರ್ಧದಲ್ಲಿ ಬುಡಮೇಲು ಮಾಡಿದ್ದರು. ನಾನು ಅವರ ಮುಖವನ್ನೇ ನೋಡುತ್ತಿದ್ದೆ. ‘ಅದಿರಲಿ ಸರ್, ನೀವು ಕಳೆದ ಇಪ್ಪತ್ತು ವರ್ಷಗಳಲ್ಲಿ ಈ ಸಾಧನೆ ಮಾಡಿದ್ದು ಹೇಗೆ?’ ಎಂದು ಕೇಳಿದೆ. ಅವರು ‘ಕ್ಷಮಿಸಿ, ನಾನು ಹೇಳೋದು ನಿಮಗೆ ಅರ್ಥವಾಗೊಲ್ಲ.
ಗಾಲ ಆಟದ ನಿಯಮಗಳು ಗೊತ್ತಿಲ್ಲದವನ ಮುಂದೆ, ಆ ಆಟದ ಶ್ರೇಷ್ಠತೆಯನ್ನು ಹೇಳಿದಂತೆ. ನೀವು ಸಾಲ ಮಾಡಿದ್ದರೆ, ನಾನು ಹೇಳೋದು ಅರ್ಥವಾಗುತ್ತಿತ್ತು. ನಿಮಗೆ ಅದು ಗೊತ್ತೇ ಇಲ್ಲ. ನಿಮ್ಮ ಮುಂದೆ ಗಾಲ ಆಡಲಾರೆ, ಬೇರೆ ವಿಷಯ ಮಾತಾಡೋಣ’ ಅಂದುಬಿಟ್ಟರು. ನಾನು ಸುಮ್ಮನಾಗಿಬಿಟ್ಟೆ. ಸಾಲ ಮಾಡಬೇಕ್ರಿ.. ಚೆನ್ನಾಗಿ ಸಾಲ ಮಾಡಬೇಕು.. ಜೀವನದಲ್ಲಿ ಮಜಾ ಬರುತ್ತೆ.. ಕಿಕ್ ಬರುತ್ತೆ.. ಗುಂಡು ಹಾಕಿದ್ರೆ ಒಂದೆರಡು ಗಂಟೆ ಮಾತ್ರ ಕಿಕ್ ಇರುತ್ತೆ.. ಸಾಲ ಮಾಡಿದ್ರೆ ದಿನವಿಡೀ ಕಿಕ್.. ಸಾಲವಿಲ್ಲದಿದ್ದರೆ ಮಜಾ ಇಲ್ಲ’ ಎಂದು ಹೇಳಿ ಜೋರಾಗಿ ನಕ್ಕರು.
‘ನೀವು ಹೇಳಿದ್ದನ್ನು ಅರ್ಥ ಮಾಡಿಕೊಳ್ಳಬ’ ಎಂದಷ್ಟೇ ಹೇಳಿದೆ. ‘ಕ್ಷಮಿಸಿ, ನಿಮಗೆ ಅರ್ಥವಾಗಲು ಸಾಧ್ಯವೇ ಇಲ್ಲ. ಸಾಲ ಮಾಡದವರಿಗೆ, ಸಾಲ ಮಾಡಿದವರು ಎಂಜಾಯ್ ಮಾಡುವ ಕಿಕ್ ಏನು ಅನ್ನೋದು ಅರ್ಥವಾಗಲು ಸಾಧ್ಯವೇ ಇಲ್ಲ’ ಎಂದರು. ಜೀವನದಲ್ಲಿ ಎಂದೂ ಸಾಲ ಮಾಡದ ನಾನು ಅವರ ಕಣ್ಣಲ್ಲಿ ಹುಳಾಪಾಟಿ ಥರ ಕಂಡಿರಲಿಕ್ಕೂ ಸಾಕು. ಅವರ ಮಾತು, ಖದರು ಹಾಗೆಯೇ ಇತ್ತು.
ಸಾಲ ಮಾಡುವ ಬಗ್ಗೆ, ಸಾಲ ಮಾಡದ ನಿಮ್ಮಂಥವರಿಗೆ ಒಂದು ವಿಚಿತ್ರ ನಂಬಿಕೆಯಿದೆ. ಅದು ನಿಮ್ಮ ತಪ್ಪಲ್ಲ, ಬಿಡಿ. ಚಿಕ್ಕಂದಿನಿಂದಲೂ ನಮ್ಮ ತಂದೆ-ತಾಯಂದಿರು ಸಾಲ ಮಾಡುವುದೆಂದರೆ ಪಾಪ ಎಂಬ ಭಾವನೆಯನ್ನು ಬಿತ್ತಿರುತ್ತಾರೆ. ಸಾಲ ಅಂದ್ರೆ ಶೂಲ ಎಂದು ಹೆದರಿಸಿರುತ್ತಾರೆ. ಸಾಲದ ಬಗ್ಗೆ ನಮ್ಮಲ್ಲಿ ನೂರಾರು ಗಾದೆ, ಸುಭಾಷಿತಗಳಿವೆ. ಸಾಲ ಮಾಡುವುದು ತಪ್ಪು, ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು. ಸಾಲ ಮಾಡಿ ತುಪ್ಪ ತಿನ್ನಬಾರದು ಎಂದು ನಮಗೆ
ಚಿಕ್ಕವರಿರುವಾಗಲೇ ಹೇಳುತ್ತಾರೆ. ಉದ್ರಿ ಪ್ರೇಮಕ್ಕೆ ಖತ್ರಿ ಎಂಬುದನ್ನು ತಲೆಯಲ್ಲಿ ತುಂಬಿರುತ್ತಾರೆ. ‘ಸಾಲವನು ಕೊಂಬಾಗ ಹಾಲೋಗರುಂಡಂತೆ, ಸಾಲಿಗರು ಕೊಂಡು ಎಳೆವಾಗ ಕಿಬ್ಬದಿಯ ಕೀಲು ಮುರಿದಂತೆ ಸರ್ವಜ್ಞ’ ಎಂಬ ವಚನವನ್ನು ನಾನು ಬಾಲ್ಯದ ಕೇಳಿದ್ದೆ. ನೀವೂ ಕೇಳಿರಬಹುದು. ಒಟ್ಟಾರೆ, ಸಾಲ ಮಾಡುವುದು ಮಹಾಪಾಪ ಎಂಬ ಭಾವನೆಯನ್ನು ಹೊತ್ತುಕೊಂಡೇ ನಾವೆ ಬೆಳೆಯುತ್ತೇವೆ.
ಆದರೆ ಒಬ್ಬರೇ ಒಬ್ಬರು ಸಹ ‘ಸಾಲ ಮಾಡು, ಒಳ್ಳೆಯದು. ಬೇರೆಯವರ ಹಣವನ್ನು ಬಳಸಿಕೊಂಡು, ದುಡಿಸಿಕೊಂಡು ನೀನು ಶ್ರೀಮಂತನಾಗಬಹುದು, ಸಾಲ
ಮಾಡಿ ನೀನು ಉದ್ಧಾರವಾಗಬಹುದು. ಸಾಲ ಮಾಡಲು ಸಹ ತಾಕತ್ತು ಬೇಕು, ಸಾಲ ಮಾಡುವ ಸಾಮರ್ಥ್ಯವನ್ನು ಬೆಳೆಸಿಕೋ, ಸಾಲ ಮಾಡು ತಪ್ಪೇನಿಲ್ಲ ಎಂದು ಹೇಳಿದ್ದನ್ನು ನಾನಂತೂ ಕೇಳಿಲ್ಲ. ಇದೇ ಕಾರಣಕ್ಕೆ ಎಲ್ಲರೂ ಸಾಲ ಮಾಡಲು ಹೆದರುತ್ತಾರೆ. ಸಾಲಗಾರರನ್ನೂ ಜನ ನಿಕೃಷ್ಟರಾಗಿ ಕಾಣುತ್ತಾರೆ, ಲೋಕ ನಿಂದಿತ ರಂತೆ, ಮಾಡಬಾರದ ಕೆಲಸ ಮಾಡಿದವರಂತೆ ನೋಡುತ್ತಾರೆ ಎಂದೆ ಯೋಚಿಸುತ್ತಾರೆ.
ಇದು ತಪ್ಪು. ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು. ಸಾಲ ಮಾಡುವುದು ಒಳ್ಳೆಯದು ಎಂದು ನಾನು ಹೇಳುತ್ತೇನೆ. ಪ್ರತಿ ಉದ್ಯಮಿಯೂ ಸಾಲಗಾರನೇ. ಸಾಲ ಮಾಡದೇ ಬಿಜಿನೆಸ್ ಮಾಡಲು ಸಾಧ್ಯವಿಲ್ಲ. ಸಾಲ ಮಾಡದೇ ಬಿಜಿನೆಸ್ ವಿಸ್ತರಿಸಲು ಸಾಧ್ಯವಿಲ್ಲ. ನನಗೆ ಇನ್ನೂರು ವರ್ಷ ಆಯುಷ್ಯವಿದ್ದಿದ್ದರೆ ನಾನು ಸಾಲ ಮಾಡುತ್ತಿರಲಿಲ್ಲ. ಆದರೆ ನಾನು ಹೆಚ್ಚೆಂದರೆ ಎಂಬತ್ತು ವರ್ಷ ಬದುಕಬಹುದು. ಹೀಗಾಗಿ ಸಾಲ ಮಾಡಿದರೆ ಇನ್ನೂರು ವರ್ಷಗಳಲ್ಲಿ ದುಡಿಯುವುದನ್ನು ಅರವತ್ತು-ಎಪ್ಪತ್ತು ವರ್ಷಗಳಲ್ಲಿ ದುಡಿಯಬಹುದು’ ಎಂದು ಹೇಳಿದರು. ನಾನು ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದೆ.
‘ಸಾಲ ಮಾಡಿ, ಮಜಾ ಮಾಡಿ, ಸಾಲ ಮಾಡು, ತಪ್ಪೇನಿಲ್ಲ’ ಎಂದು ನನಗೆ ಇಲ್ಲಿ ತನಕ ಯಾರೂ ಹೇಳಿರಲಿಲ್ಲ. ಸಾಲ ಮಾಡುವುದು ಒಂದು ಅರ್ಹತೆ ಎಂಬ ಮಾತನ್ನು ಸಹ ನಾನು ಕೇಳಿರಲಿಲ್ಲ. ಅಷ್ಟಕ್ಕೂ ನನ್ನ ಸ್ನೇಹಿತರು ತಮಾಷೆ ಮಾಡುತ್ತಿಲ್ಲ ಅಥವಾ ಲಘು ಧಾಟಿಯಲ್ಲಿ ಮಾತಾಡುತ್ತಿಲ್ಲವಷ್ಟೆ ಎಂಬುದನ್ನು ಖಾತ್ರಿ ಪಡಿಸಿಕೊಂಡೆ. ’ಅದೆಲ್ಲ ಸರಿ, ನೀವು ಎಷ್ಟು ಸಾಲ ಮಾಡಿದ್ದೀರಿ?’ ಎಂದು ಕೇಳಿದೆ. ಅದಕ್ಕೆ ಅವರು, ‘ನಾನು ಎಷ್ಟು ಸಾಲ ಮಾಡಿದ್ದೇನೆ ಎಂಬುದು ನಂತರ ಹೇಳ್ತೇನೆ. ಜಗತ್ತಿನ ಎ ಶ್ರೀಮಂತರೂ ಸಾಲಗಾರರೇ ಎಂಬುದನ್ನು ನೀವು ಮೊದಲು ನೆನಪಿನಲ್ಲಿಟ್ಟುಕೊಳ್ಳಬೇಕು. ಸಾಲವಿಲ್ಲದ ಒಬ್ಬ ಶ್ರೀಮಂತನನ್ನು ತೋರಿಸಿ …ಬೆಟ್ಸ. ಅಂಥವರು ನಿಮಗೆ ಯಾರೂ ಸಿಗುವುದಿಲ್ಲ. ಸಾಲ ಮಾಡಲೂ ಒಂದು ಸಾಮರ್ಥ್ಯ ಬೇಕು. ನಿಮಗೆ ತೀರಿಸುವ ಸಾಮರ್ಥ್ಯವಿದೆಯೆಂದರೆ ಯಾರು ಬೇಕಾದರೂ, ಎಷ್ಟು ಬೇಕಾದರೂ ಸಾಲ ಕೊಡುತ್ತಾರೆ.
ಶ್ರೀಮಂತರಾದವರು ಮಾಡೋದು ಇದನ್ನೇ. ಅವರು ಎಂದೂ ತಮ್ಮ ಆಸ್ತಿಗಿಂತ ಮಿಗಿಲಾಗಿ ಸಾಲ ಮಾಡುವುದಿಲ್ಲ. ಹತ್ತು ಸಾವಿರ ರುಪಾಯಿ ಇದ್ದವರು ಐನೂರು ರುಪಾಯಿ ಸಾಲ ಮಾಡಲು ಹಿಂದೆ ಮುಂದೆ ನೋಡುವುದಿಲ್ಲ. ಹತ್ತು ಸಾವಿರ ಇದ್ದವರು ಐನೂರು ರುಪಾಯಿ ಯಾಕೆ ಸಾಲ ಮಾಡಬೇಕು ಎಂದು ನಿಮಗೆ ಅನಿಸ ಬಹುದು. ಇಲ್ಲೇ ಇರೋದು ಟ್ರಿಕ್ಕು. ಇದೇ ಮೊತ್ತವನ್ನು ಹತ್ತು ಸಾವಿರ ಪಟ್ಟೋ, ಒಂದು ಲಕ್ಷ ಪಟ್ಟೋ ಜಾಸ್ತಿಯಾಗಿ ಯೋಚಿಸಿ.. ಅಂದ್ರೆ ಹತ್ತು ಸಾವಿರ ಕೋಟಿ ಯೋಜನೆಯೊಂದನ್ನು ನೀವು ಕೈಗೆತ್ತಿಕೊಂಡರೆ, ಐನೂರು ಕೋಟಿಯೋ, ಎಂಟು ನೂರು ಕೋಟಿ ರುಪಾಯಿಯೋ ಸಾಲ ಮಾಡುವುದು ದೊಡ್ಡ ಮೊತ್ತವಲ್ಲ.
ಇದನ್ನೇ ಎಲ್ಲ ಉದ್ಯಮಿಗಳೂ ಮಾಡೋದು. ಆದರೆ ಸಾಲ ಮಾಡದವರಿಗೆ ಎಂಟು ನೂರು ಕೋಟಿ ರುಪಾಯಿ ಸಾಲ ಅಂದ್ರೆ ತಲೆ ಚಕ್ಕರ್ ಬಂದಂತಾಗುತ್ತದೆ. ಆದರೆ ಅವನ ಬಿಜಿನೆಸ್ ಗಾತ್ರ ಹತ್ತು ಸಾವಿರ ಕೋಟಿ ರುಪಾಯಿ ಇರುತ್ತದೆ, ಅದಕ್ಕೆ ಹೋಲಿಸಿದರೆ ಐನೂರೋ-ಎಂಟು ನೂರೋ ಕೋಟಿ ರುಪಾಯಿ ದೊಡ್ಡ ಮೊತ್ತವಲ್ಲ, ಗಂಡಸರಿಗೆ ಕಿವಿ ಮೇಲಿನ ಕೂದಲು ಇದ್ದ ಹಾಗೆ. ಅದು ತೀರಿಸಬಹುದಾದ ಸಾಲ ಅನ್ನೋದನ್ನು ನಾವು ಗಮನಿಸುವುದೇ ಇಲ್ಲ.
ಆದರೆ ಅನೇಕರು ಎಂಟು ನೂರು ಕೋಟಿ ರುಪಾಯಿ ಅಂದ ಕೂಡಲೇ ಎಂಟರ ಮುಂದೆ ಎಷ್ಟು ಸೊನ್ನೆ ಇಡಬೇಕು, ಐನೂರು ರುಪಾಯಿ ಎಷ್ಟು ಕಟ್ಟುಗಳನ್ನು ಎಣಿಸಬೇಕು ಎಂಬ ಯೋಚನೆಗೆ ಜಾರುತ್ತಾರೆ. ಸಾವಿರಾರು ಕೋಟಿ ವ್ಯವಹಾರ ಮಾಡುವವರಿಗೆ ಹತ್ತೆಂಟು ಕೋಟಿಗಳೆಂದರೆ ಮುಂಬೈ ಲೋಕಲ್ ಟ್ರೇನಿನಲ್ಲಿ ಹತ್ತು ಜನ ಇಳಿದಂತೆ, ಇಪ್ಪತ್ತು ಜನ ಏರಿದಂತೆ.. ಯಾವ -ರಕ್ಕೂ ಆಗುವುದಿಲ್ಲ. ಸಾಲ ಮಾಡುವಾಗ, ನನಗೆ ಮರುಪಾವತಿ ಸಾಮರ್ಥ್ಯ ಇದೆಯಾ ಎಂಬುದಷ್ಟೇ ಮುಖ್ಯ. ಇದೆ ಎಂಬುದು ಖಾತ್ರಿಯಾದರೆ ಎಷ್ಟು ಸಾಲವನ್ನಾದರೂ ಮಾಡಬಹುದು.
ಕೆಲವರಿಗೆ ಐದು ಸಾವಿರ ರುಪಾಯಿ ಸಾಲವೇ ದೊಡ್ಡದು. ಅದನ್ನೇ ತೀರಿಸಲಾಗದೇ ಒದ್ದಾಡುತ್ತಾರೆ. ಕೆಲವರು ನೂರಾರು ಕೋಟಿ ರುಪಾಯಿ ಸಾಲ ಮಾಡುತ್ತಾರೆ. ಬ್ಯಾಂಕುಗಳು ಅವರ ಮನೆಗೆ ಹೋಗಿ ಸಾಲ ಕೊಟ್ಟು ಬರುತ್ತವೆ. ಕಾರಣ ಅವರಿಗೆ ಮರುಪಾವತಿ ಸಾಮರ್ಥ್ಯವಿದೆ ಎಂಬುದನ್ನು ಮನವರಿಕೆ ಮಾಡಿಕೊಂಡಿರು ತ್ತವೆ. ಮರುಪಾವತಿ ಸಾಮರ್ಥ್ಯ ಇಲ್ಲದಿದ್ದರೆ ಸಾಲ ಮಾಡಬಾರದು. ತೀರಿಸುತ್ತೇನೆ ಎಂಬ ವಿಶ್ವಾಸವಿದ್ದರೆ ಸಾಲ ಮಾಡಬೇಕು. ಹೀಗೆಂದು ಮಾತು ನಿಲ್ಲಿಸಿದರು. ನಾನು ಸುಮ್ಮನೆ ಕೇಳಿಸಿಕೊಳ್ಳುತ್ತಿದ್ದೆ. ಒಂದು ನಿಮಿಷ ಮೌನ. ಅವರೇ ಮುಂದುವರಿಸಿದರು.. ‘ಭಟ್ರೇ, ಅಂದ ಹಾಗೆ ನನಗೆ ಸುಮಾರು 450 ಕೋಟಿ ರುಪಾಯಿ ಸಾಲ ಇದೆ’ ನಾನು ಅವರನ್ನೇ ದಿಟ್ಟಿಸುತ್ತಿz. ಆ ವ್ಯಕ್ತಿಯ ಹಿನ್ನೆಲೆ ಬಲ್ಲ ನನಗೆ ಅದು ಕಲ್ಪನೆಗೆ ನಿಲುಕzಗಿತ್ತು.
‘ಭಟ್ರೇ, ನನಗೆ ಅಷ್ಟು ಸಾಲ ಇರುವುದರಿಂದಲೇ ನಾನು ಇಷ್ಟು ಆಕ್ಟಿವ್ ಆಗಿದ್ದೇನೆ. ಬೆಳಗ್ಗೆ ಬೇಗ ಏಳುತ್ತೇನೆ. ಈಗಲೂ ದಿನಕ್ಕೆ ಹದಿನಾರು ಗಂಟೆ ದುಡಿಯುತ್ತೇನೆ. ಒಂದು ಕ್ಷಣ ಕೂಡ ಮೈಮರೆಯುವುದಿಲ್ಲ. ಆರೋಗ್ಯವನ್ನು ಚೆನ್ನಾಗಿಟ್ಟುಕೊಂಡಿದ್ದೇನೆ. ಊರಲ್ಲಿರುವ ಎಲ್ಲಾ ಕಾರುಗಳಿವೆ. ಒಳ್ಳೆಯ ಜೀವನ ಸಾಗಿಸುತ್ತಿದ್ದೇನೆ. ಸಾಲ ಮಾಡದಿದ್ದರೆ ನಾನು ಇಷ್ಟು ಮೇಲಕ್ಕೆ ಬರುತ್ತಿರಲಿಲ್ಲ. ಇಷ್ಟು ಕ್ರಿಯಾಶೀಲನೂ ಆಗಿರುತ್ತಿ ರಲಿಲ್ಲ. ಪಿಂಚಣಿ ಹಣದಲ್ಲಿ ಜೀವನ ಸಾಗಿಸುವವರ ಮನಸ್ಥಿತಿ
ಯಲ್ಲಿರುತ್ತಿದ್ದೆ. ಸಾಲ ಮಾಡದವರು ಅಂದ್ರೆ ಸಾಹಸ ಮಾಡದವರು ಎಂದರ್ಥ. ನಿಮಗೆ ಸಾಲ ಕೊಡುತ್ತಾರೆ ಅಂದ್ರೆ ಜನ ನಿಮ್ಮನ್ನು ನಂಬಿದ್ದಾರೆ ಎಂದರ್ಥ. ನೀವು ಆ ನಂಬಿಕೆಯನ್ನು ಉಳಿಸಿಕೊಂಡಿದ್ದೀರಿ ಎಂದರ್ಥ. ಸಾಲಗಾರ ಎಂದು ಭಾವಿಸಬೇಡಿ. ಹಣದ ಸವಾರಿದಾರ ಎಂದು ಭಾವಿಸಿ.
ಆಗ ಹಣದ ಬಗ್ಗೆ, ಸಾಲದ ಬಗ್ಗೆ ನಿಮ್ಮ ಧೋರಣೆಯೇ ಬದಲಾಗುತ್ತದೆ. ಸಾಲ ಮಾಡುವುದು ತಪ್ಪಲ್ಲ, ಜೀವನದಲ್ಲಿ ಸಾಧನೆ ಮಾಡಬೇಕು ಅಂದ್ರೆ ಸಾಲ ಮಾಡಬೇಕು. ವಿದೇಶದಲ್ಲಿ ಶಿಕ್ಷಣ ಮಾಡಲು ನಿಮ್ಮ ಬಳಿ ಹಣವಿಲ್ಲ ಅಂದುಕೊಳ್ಳಿ. ವಿದೇಶಕ್ಕೆ ಹೋಗೋದನ್ನು ನಿಲ್ಲಿಸುತ್ತೀರಾ? ಅದರ ಬದಲು ಸಾಲ ಮಾಡಿ, ಒಳ್ಳೆಯ ನೌಕರಿ ಗಿಟ್ಟಿಸಿ ಸಾಲ ತೀರಿಸಿ. ಸಾಲ ನಿಮ್ಮನ್ನು ವಿರಮಿಸಲು ಬಿಡುವುದಿಲ್ಲ. ಸಾಲ ಮಾಡಿ ಜೂಜಾಡಬಾರದು, ಮೋಜು-ಮಸ್ತಿ ಮಾಡಬಾರದು.
ಹಣ ಯಾವತ್ತೂ ಹಣದ ಮೊಟ್ಟೆಯನ್ನೇ ಹಾಕುತ್ತದೆ, ಹಣವೇ ಮರಿಯಾಗಿ ಹೊರಬರುತ್ತದೆ. ಸಾಲ ಮಹಾಪಾಪ ಎಂದಿದ್ದರೆ ಬ್ಯಾಂಕುಗಳು ಇರುತ್ತಿದ್ದವಾ? ಅಷ್ಟಕ್ಕೂ ನಮ್ಮಂ ಥವರಿಗೆ ಸಾಲ ಕೊಟ್ಟೇ ಬ್ಯಾಂಕುಗಳು ವ್ಯವಹಾರ ಮಾಡುತ್ತವೆ. ದೇಶದ ಆರ್ಥಿಕತೆ ವೃದ್ಧಿಗೆ ನಮ್ಮಂಥ ಸಾಲಗಾರರೇ ಬೇಕು.
ಎಲ್ಲರೂ ಬ್ಯಾಂಕುಗಳಲ್ಲಿ ಠೇವಣಿ ತಂದು ತಂದು ಇಟ್ಟು, ನಿಮ್ಮ ಹಾಗೆ ಯಾರೂ ಸಾಲವನ್ನೇ ಪಡೆಯದಿದ್ದರೆ ಬ್ಯಾಂಕುಗಳು ಮುಚ್ಚಿಕೊಂಡು ಹೋಗುತ್ತವೆ. ನಿಜವಾಗಿ ಸಾಲಗಾರರೇ ಬ್ಯಾಂಕಿನ ಆಸ್ತಿ. ಸಾಲಗಾರ ಎಂಬುದು ನೆಗೆಟಿವ್ ಪದವಲ್ಲ. ಅದನ್ನು ತಲೆಯಿಂದ ತೆಗೆಯದಿದ್ದರೆ ನೀವು ಹಣ ಮಾಡುವುದಿಲ್ಲ. ಎಲ್ಲ ವನ್ನೂ ಮಾಡಲು ಬೇಕಾಗುವಷ್ಟು ಹಣ ನಮ್ಮಲ್ಲಿ ಯಾವತ್ತೂ ಇರುವುದಿಲ್ಲ. ಆಗ ಸಾಲ ಮಾಡಲೇಬೇಕು. ಅದನ್ನು ತೀರಿಸಬೇಕು. ಮತ್ತಷ್ಟು ಸಾಲ ಮಾಡಬೇಕು. ಅದನ್ನೂ ತೀರಿಸಬೇಕು. ಇದನ್ನು ಮುಂದುವರಿಸಿದ್ದೇ ಆದರೆ ನಿಮ್ಮಿಂದ ಅಸಾಧ್ಯವೆನಿಸಿದ್ದು ಸಾಧ್ಯವಾಗುತ್ತಾ ಹೋಗುತ್ತದೆ. ಪವಾಡಗಳು ಜರುಗುತ್ತವೆ’ ಎಂದರು.
ಮೊನ್ನೆ ಬೆಳಗ್ಗೆ ರಾಜ್ಯಸಭೆಗೆ ಕುಪೇಂದ್ರ ರೆಡ್ಡಿ ನಾಮಪತ್ರ ಸಲ್ಲಿಕೆ ಸುದ್ದಿಯ ಜತೆ ಅವರ ಆಸ್ತಿ ವಿವರ ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ‘ಕುಪೇಂದ್ರ ರೆಡ್ಡಿ 817 ಕೋಟಿ ರುಪಾಯಿ ಕುಬೇರ’ ಎಂದು ಹೆಡ್ ಲೈನ್ ಬರೆದ ವರದಿಯಲ್ಲಿ, ರೆಡ್ಡಿ ಅವರಿಗೆ 70 ಕೋಟಿ ರುಪಾಯಿ ಸಾಲವೂ ಇದೆ ಎಂದು ಪ್ರಕಟವಾಗಿತ್ತು. ಅದಕ್ಕೂ ಒಂದು ದಿನ ಮೊದಲು, ಶ್ರೀಮಂತಿ ಕೆಯಲ್ಲಿ ಅಂಬಾನಿ ಜತೆಗೆ ಪೈಪೋಟಿಗೆ ಬಿದ್ದಿರುವ ಅದಾನಿಯ ಸಾಲ ಲಕ್ಷ ಕೋಟಿ ರುಪಾಯಿ ದಾಟಿದೆ ಎಂದೂ ವರದಿಯಾಗಿದ್ದನ್ನು ಓದಿ, ನನ್ನ ಸ್ನೇಹಿತರು ಹೇಳಿದ್ದೇ ನೆನಪಾಯಿತು.
ಪ್ರೀತಿ ಮಾಡಿ ತಪ್ಪೇನಿಲ್ಲ ಎನ್ನುವಂತೆ, ಸಾಲ ಮಾಡಿ, ತಪ್ಪೇನಿಲ್ಲ.