ತುಮಕೂರು: ತುಮಕೂರು ವಿವಿಯ ಬಿ.ಎ., ಬಿಎಸ್ಸಿ, ಬಿ.ಕಾಮ್ನ 2ನೇ ಸೆಮಿಸ್ಟರ್ ಪಠ್ಯದಲ್ಲಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರು ಬರೆದಿರುವ ಜಾತಿ ವಿನಾಶ ಲೇಖನವನ್ನು ಪಠ್ಯದಿಂದ ಕೈಬಿಟ್ಟು,ಅಸ್ಪೃಷ್ಯತೆ ನಿವಾರಣೆ ಕುರಿತಂತೆ ಆರ್ಟಿಕಲ್ 17ರ ಮೇಲಿನ ಚರ್ಚೆಯಲ್ಲಿ ಸಂವಿಧಾನ ರಚನಾ ಸಮಿತಿಯ ಸದಸ್ಯರಾದ ಬ್ಯಾನರ್ಜಿ ಮತ್ತು ಠಾಕೂರ್ ಅವರುಗಳು ಮಾಡಿರುವ ಭಾಷಣವನ್ನು ಸೇರಿಸಿ, ಅಂಬೇಡ್ಕರ್ ಅವರನ್ನು ಪಠ್ಯದಿಂದ ಹೊರಗಿಡುವ ಕೆಲಸ ಮಾಡಲಾಗಿದೆ ಎಂದು ಆರೋಪಿಸಿ, ಅಂಬೇಡ್ಕರ್ ಅನುಯಾಯಿಗಳು ವಿವಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಪಾಲಿಕೆಯ ವಿರೋಧಪಕ್ಷದ ನಾಯಕ ಜೆ.ಕುಮಾರ್, ಅತಿಥಿ ಉಪನ್ಯಾಸಕ ಹೆತ್ತೇನಹಳ್ಳಿ ಮಂಜು,ಹಿಂದುಳಿದ ವರ್ಗಗಳ ಒಕ್ಕೂಟದ ಸಂಚಾಲಕ ಧನಿಯಕುಮಾರ್, ಬೆಳ್ಳಿ ಲೋಕೇಶ್ ಸೇರಿದಂತೆ ಹಲವಾರು ಯುವಜನರು ತುಮಕೂರು ವಿವಿಗೆ ಮುತ್ತಿಗೆ ಹಾಕಿ,ಪಠ್ಯದಿಂದ ತೆಗೆದಿರುವ ಜಾತಿವಿನಾಶ ಚಾಪ್ಟರ್ ಸೇರಿಸಬೇಕು ಹಾಗೂ ಪಠ್ಯ ಪರಿಷ್ಕರಣಾ ಸಮಿತಿಯಲ್ಲಿದ್ದ ಸದಸ್ಯರನ್ನು ವಜಾಗೊಳಿಸಬೇಕೆಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಪಾಲಿಕೆಯ ವಿರೋಧಪಕ್ಷದ ನಾಯಕ ಜೆ.ಕುಮಾರ್,ಇಂದು ಇಡೀ ವಿಶ್ವವೇ ಭಾರತದ ಸಂವಿಧಾನವನ್ನು ಶ್ರೇಷ್ಠ ಸಂವಿಧಾನ ಎಂದು ಹೆಸರಿಸಿದೆ. ಇಂತಹ ವೇಳೆಯಲ್ಲಿ ತುಮಕೂರು ವಿವಿ ಪಠ್ಯಪರಿಷ್ಕರಣಾ ಸಮಿತಿ ಜಾತಿ ವಿನಾಶ ಎಂಬ ಪಾಠವನ್ನು ಕೈಬಿಟ್ಟು, ಅದರ ಬದಲಿಗೆ ಅಸ್ಪೃಷ್ಯತೆ ಕುರಿತ ಪಠ್ಯದಲ್ಲಿಯೇ ಅಂಬೇಡ್ಕರ್ ಅವರ ಭಾಷಣವನ್ನು ಬಿಟ್ಟು, ಬ್ಯಾನರ್ಜಿ ಮತ್ತು ಠಾಕೂರ್ ಎಂಬುವವರ ಭಾಷಣವನ್ನು ಸೇರಿಸುವ ಮೂಲಕ ಸಂವಿಧಾನ ಶಿಲ್ಪಿಗೆ ಅವಮಾನ ಮಾಡಿದ್ದಾರೆ.
ಹಾಗಾಗಿ ತುಮಕೂರು ವಿವಿಯವರು ಪಠ್ಯದಿಂದ ಅಂಬೇಡ್ಕರ್ ಅವರ ಜಾತಿವಿನಾಶ ಚಾಪ್ಟರ್ ಕೈಬಿಡಲು ಕಾರಣ ಎನು ಎಂಬು ದನ್ನು ಸ್ಪಷ್ಟಪಡಿಸಬೇಕು ಹಾಗೂ ಪರಿಷ್ಕರಣೆ ವೇಳೆ ಇದ್ದ ಬಿಓಎಸ್ ಕಮಿಟಿಯ ಸದಸ್ಯರನ್ನು ವಜಾಗೊಳಿಸ ಬೇಕೆಂಬುದು ನಮ್ಮ ಆಗ್ರಹವಾಗಿದೆ. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳದಿದ್ದರೆ ಅಂಬೇಡ್ಕರ್ ಅನುಯಾಯಿಗಳು ಸೇರಿ ಉಗ್ರ ಹೋರಾಟ ಕೈಗೊಳ್ಳ ಲಿದ್ದೇವೆ ಎಂದು ಎಚ್ಚರಿಸಿದರು.
ಅತಿಥಿ ಉಪನ್ಯಾಸಕ ಹೆತ್ತೇನಹಳ್ಳಿ ಮಂಜುನಾಥ್ ಮಾತನಾಡಿ, ಅಂಬೇಡ್ಕರ್ ಅವರನ್ನು ಯುವಜನತೆಯಿಂದ ಮರೆ ಮಾಚುವ ಉದ್ದೇಶದಿಂದ ತುಮಕೂರು ವಿವಿಯ ಸಿಂಡಿಕೇಟ್ ಮತ್ತು ಆಕಾಡೆಮಿಕ್ ಕೌನ್ಸಿಲ್ ಇಂತಹ ದುಷ್ಕೃತ್ಯವನ್ನು ಎಸಗಿದೆ. ಇದನ್ನು ಕ್ಷಮಿಸಲು ಸಾಧ್ಯವಿಲ್ಲ. ಕೂಡಲೇ ಬಿಓಎಸ್ ಕಮಿಟಿಯ ಸದಸ್ಯರನ್ನು ವಜಾಗೊಳಿಸಬೇಕು ಹಾಗೂ ಪಠ್ಯದಲ್ಲಿ ಅಂಬೇಡ್ಕರ್ ಅವರ ಜಾತಿವಿನಾಶ ವಿಷಯ ಸೇರಿಸುವುದರ ಜೊತೆಗೆ,ಬದಲಿ ಪಠ್ಯದಲ್ಲಿರುವ ಅಸ್ಪೃಷ್ಯತೆ ವಿಷಯದಲ್ಲಿ ಅಂಬೇಡ್ಕರ್ ಮಂಡಿಸಿ ರುವ ವಾದವನ್ನು ಮಕ್ಕಳು ಓದಲು ಅವಕಾಶ ಕಲ್ಪಿಸಬೇಕೆಂದು ಆಗ್ರಹಿಸಿದರು.
ತುಮಕೂರು ಜಿಲ್ಲಾ ಹಿಂದುಳಿದ ಸಮುದಾಯಗಳ ಒಕ್ಕೂಟದ ಸಂಚಾಲಕ ಧನಿಯಕುಮಾರ್ ಮಾತನಾಡಿ,ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಈ ದೇಶ ಕಂಡ ಮಹಾಜ್ಞಾನಿ. ಜಾತಿ ಹೇಗೆ ತಳಸಮುದಾಯಗಳನ್ನು ಹಾಳು ಮಾಡುತ್ತಿದೆ. ಜಾತಿಯತೆ ತೊಲಗದೆ ಈ ದೇಶದಲ್ಲಿ ಸಮಾನತೆ ಸಾಧ್ಯವಿಲ್ಲ ಎಂಬುದನ್ನು ಯುವಜನತೆಗೆ ತಿಳಿಸುವ ಕೆಲಸವನ್ನು ಜಾತಿವಿನಾಶ ಪ್ರಬಂಧದ ಮೂಲಕ ಮಾಡಿದ್ದರು.ಇಂದಿನ ಯುವಜನತೆಗೆ ಅದು ಅತ್ಯಂತ ಅಗತ್ಯವಾದ ಪಠ್ಯವಾಗಿದೆ. ಆದರೆ ತುಮಕೂರು ವಿವಿಯವರು ಉದ್ದೇಶಪೂರ್ವಕವಾಗಿಯೇ ಪಠ್ಯವನ್ನು ಬಿಟ್ಟು, ಅಂಬೇಡ್ಕರ್ ಅವರನ್ನು ಯುವಜನರಿಂದ ದೂರ ಇಡುವ ಪ್ರಯತ್ನ ನಡೆಸಿ ರುವುದು ಅಕ್ಷಮ್ಯ ಅಪರಾದ. ಹಾಗಾಗಿ ಅಂಬೇಡ್ಕರ್ ಅನುಯಾಯಿಗಳ ಈ ಹೋರಾಟಕ್ಕೆ ಹಿಂದುಳಿದ ವರ್ಗಗಳ ಸಮಿತಿ ಸಂಪೂರ್ಣ ಬೆಂಬಲ ನೀಡಲಿದೆ ಎಂದು ತಿಳಿಸಿದರು.
ಯುವ ಮುಖಂಡ ಬೆಳ್ಳಿ ಲೋಕೇಶ್ ಮಾತನಾಡಿ,ಭಾರತ ಒಂದು ಜಾತ್ಯಾತೀತ ರಾಷ್ಟç. ನೂರಾರು ಜಾತಿ, ಭಾಷೆ, ಸಂಸ್ಕೃತಿ ಹೊಂದಿರುವ ಭಾರತಕ್ಕೆ ಸಂವಿಧಾನ ನೀಡುವ ಮೂಲಕ ಎಲ್ಲ ವರ್ಗಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಿದ್ದಾರೆ. ಅಂತಹ ಮಹಾನ್ ವ್ಯಕ್ತಿ ಬರೆದ ಪಠ್ಯವನ್ನು ತೆಗೆಯುವ ಮೂಲಕ ಅಪಮಾನ ವೆಸಗಿದೆ. ಇದನ್ನು ಕೂಡಲೇ ಸರಿಪಡಿಸಬೇಕು ಹಾಗೂ ಇದನ್ನು ಮಾಡಿದ ಬಿಓಎಸ್ ಕಮಿಟಿಯ ಸದಸ್ಯರನ್ನು ವಜಾಗೊಳಿಸಬೇಕೆಂಬುದು ನಮ್ಮ ಆಗ್ರಹವಾಗಿದೆ. ಸೂಕ್ತ ಕ್ರಮ ಕೈಗೊಳ್ಳ ದಿದ್ದರೆ ವಿವಿಯ ಎಲ್ಲಾ ಕಚೇರಿಗಳಿಗೆ ಬೀಗ ಹಾಕಿ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಪ್ರತಿಭಟನಾಕಾರರ ಪ್ರಶ್ನೆಗಳಿಗೆ ಉತ್ತರಿಸಿದ ತುಮಕೂರು ವಿವಿ ಪ್ರಭಾರ ಕುಲಪತಿ ಪ್ರೊ.ಕೇಶವ್,ಹೊಸ ಶಿಕ್ಷಣ ನೀತಿ-2020 ಅನ್ವಯ ರಾಜ್ಯಮಟ್ಟದಲ್ಲಿರುವ ವಿವಿ ಪಠ್ಯ ಪರೀಷ್ಕರಣಾ ಸಮಿತಿ ನೀಡಿದ ಶಿಫಾರಸ್ಸಿನ ಮೇರೆಗೆ ತುಮಕೂರು ವಿವಿಯ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ಸದಸ್ಯರು ಈ ಬದಲಾವಣೆ ಮಾಡಿದ್ದಾರೆ. ಮಕ್ಕಳಿಗೆ ಜಾತಿವಿನಾಶ ಪಠ್ಯ ತೆಗೆದಿದ್ದು ನಿಜಕ್ಕೂ ಅಕ್ಷಮ್ಯ.ನಮಗೆ ಒಂದು ತಿಂಗಳ ಕಾಲಾವಕಾಶ ನೀಡಿದರೆ ಆಗಿರುವ ಪ್ರಮಾದವನ್ನು ಸರಿಪಡಿಸಿ, ಈ ಹಿಂದಿನ ರೀತಿಯಲ್ಲಿಯೇ 2ನೇ ಸೆಮಿಸ್ಟರ್ ಮಕ್ಕಳಿಗೆ ಪಠ್ಯಗಳನ್ನು ಒದಗಿಸಲಾಗುವುದು ಎಂದು ಲಿಖಿತ ರೂಪದಲ್ಲಿ ಭರವಸೆ ನೀಡಿದರು.
ಕುಲಪತಿಗಳ ಭರವಸೆ ನೀಡಿದ ನಂತರ ಪ್ರತಿಭಟನೆ ವಾಪಸ್ ಪಡೆದ ಅಂಬೇಡ್ಕರ್ ಅನುಯಾಯಿಗಳು, ಮುಂದಿನ ಒಂದು ತಿಂಗಳಲ್ಲಿ ಕುಲಪತಿಗಳು ಒಪ್ಪಿರುವ ನಡೆದುಕೊಳ್ಳದಿದ್ದರೆ ವಿವಿಗೆ ಮುತ್ತಿಗೆ ಹಾಕಿ ಹೋರಾಟ ನಡೆಸುವುದು ಅನಿವಾರ್ಯ ಎಂದು ಪ್ರತಿಭಟನಾ ನಿರತರ ತಿಳಿಸಿದರು.
ಈ ವೇಳೆ ದಲಿತ ಮುಖಂಡರಾದ ಕೊಟ್ಟ ಶಂಕರ್, ಬ0ಡೆಕುಮಾರ್, ಮರಳೂರು ರಾಮಣ್ಣ, ಶ್ರೀನಿವಾಸ್, ರಮೇಶ್ ಇನ್ನಿತರರು ಭಾಗವಹಿಸಿದ್ದರು.