Sunday, 24th November 2024

ರೋಹಿತ್ ಚಕ್ರತೀರ್ಥ ನಿಜಕ್ಕೂ ಕುವೆಂಪು ಅವರನ್ನು ನಿಂದಿಸಿದರಾ ?

ಇದೇ ಅಂತರಂಗ ಸುದ್ದಿ

vbhat@me.com

ಪಠ್ಯ ಪುಸ್ತಕ ಪರಿಷ್ಕರಣೆ ಚರ್ಚೆ, ಸಂವಾದ, ವಿವಾದ ಹಳ್ಳ ಹಿಡಿದಿದ್ದನ್ನು ನೋಡುತ್ತಿದ್ದೇವೆ. ಯಾರಿಗೂ ಒಬ್ಬರ ಅಭಿಪ್ರಾಯವನ್ನು ಗೌರವಿಸುವ ಸಂಯಮ ಇಲ್ಲ.
ಎಲ್ಲರೂ ತಮ್ಮ ತಮ್ಮ ಮೂಗಿನ ನೇರಕ್ಕೇ ಮಾತಾಡುವವರು.

ಹಾಗೆ ನೋಡಿದರೆ ಪಠ್ಯ ಪುಸ್ತಕ ವಿವಾದಕ್ಕೂ- ನಾಡಗೀತೆಗೆ ಅವಮಾನ ಆಯಿತು ಎಂಬುದಕ್ಕೂ ಸಂಬಂಧವೇ ಇಲ್ಲ. ಅದು ಹೇಗೋ ಈ ವಿವಾದದಲ್ಲಿ ಥಳಕು ಹಾಕಿಕೊಂಡಿದ್ದನ್ನು ನೋಡಿದರೆ, ಉದ್ದೇಶ ಬೇರೆಯದೇ ಇದೆ ಎಂಬುದು ಎಂಥವರಿಗಾದರೂ ಅರ್ಥವಾಗುತ್ತದೆ. ಕುವೆಂಪು ಬರೆದ ನಾಡಗೀತೆಯ ಧಾಟಿಯನ್ನು ಬಳಸಿ, ಬರೆದ ಅಣಕವಾಡು ಅಥವಾ ರೀಮಿಕ್ಸ್ ಹಾಡನ್ನು ಐದು ರೋಹಿತ್ ಚಕ್ರತೀರ್ಥ ಫೇಸ್‌ಬುಕ್ ನಲ್ಲಿ ಶೇರ್ ಮಾಡಿದ್ದೇ ದೊಡ್ಡ ಅಪರಾಧವಾಗಿ ಹೋಯಿತು. ಇಂದು ನಾವು ಮಾತಾಡಿದ್ದು, ಇನ್ನು ಏಳೆಂಟು ವರ್ಷಗಳ ನಂತರ ವಿವಾದವಾಗಬಹುದೆಂದು ಇಂದು ಮಾತಾಡದೇ ಇರುವುದುಂಟಾ? ಹತ್ತು ವರ್ಷಗಳ ಹಿಂದೆ, ಮೈಸೂರು-ಕೊಡಗು ಸಂಸದ ಪ್ರತಾಪ ಸಿಂಹ, ಯಡಿಯೂರಪ್ಪ, ಅನಂತಕುಮಾರ ಮತ್ತು ಶೋಭಾ ಕರಾಂದ್ಲೆಜೆ ಅವರನ್ನು ಟೀಕಿಸಿ ಬರೆದಿದ್ದರು.

ಪೇಜಾವರ ಶ್ರೀಗಳನ್ನು ಟೀಕಿಸಿ ಬರೆದಿದ್ದರು. ಹಾಗೆಂದು ಆಗ ಬರೆದ ಅವರ ಲೇಖನಗಳನ್ನು ಈಗಿಟ್ಟುಕೊಂಡು ವಿವಾದ ಸೃಷ್ಟಿಸಿದರೆ? ಅದೇ ರೀತಿ, ಸಿದ್ದರಾಮಯ್ಯ ನವರು ಜೆಡಿಎಸ್‌ನಲ್ಲಿದ್ದಾಗ, ಸೋನಿಯಾ ಗಾಂಧಿ ಯವರನ್ನು ಟೀಕಿಸಿದ್ದರು. ಸ್ವತಃ ಯಡಿಯೂರಪ್ಪನವರು ತಾವು ಕೆಜೆಪಿ ಕಟ್ಟಿದಾಗ ಬಿಜೆಪಿಯ ವರನ್ನು ಟೀಕಿಸಿ ದ್ದರು. ಆ ಮಾತುಗಳಿಗೆ ಈಗ ಅರ್ಥವಿದೆಯಾ? ಜೆಡಿಎಸ್ ಅಧ್ಯಕ್ಷ ಸಿ.ಎಂ.ಇಬ್ರಾಹಿಂ ಅವರು ಈಗ ಕಾಂಗ್ರೆಸ್ ಅನ್ನು ಹಿಗ್ಗಾಮುಗ್ಗಾ ಲೇವಡಿ ಮಾಡುತ್ತಿದ್ದಾರೆ. ಅವರು ಕಾಂಗ್ರೆಸ್ಸಿನಲ್ಲಿದ್ದಾಗ ಜೆಡಿಎಸ್ ಅನ್ನು ಹೇಗೆ ಲೇವಡಿ ಮಾಡಿದ್ದರು ಎಂಬುದು ಗೊತ್ತಿದ್ದಿದ್ದೇ. ಈ ಹಿನ್ನೆಲೆಯಲ್ಲಿ ರೋಹಿತ್ ಚಕ್ರತೀರ್ಥ ಅವರ ಫೇಸ್ ಬುಕ್ ಫಾರ್ವರ್ಡ್ ರಾದ್ಧಾಂತವನ್ನು ನೋಡಿದರೆ, ಇಡೀ ವಿವಾದ ಬಾಲಿಶ ಎನಿಸುತ್ತದೆ.

ಇಲ್ಲಿ ಗಮನಿಸಬೇಕಾದ ಇನ್ನೂ ಒಂದು ಅಂಶವಿದೆ. ಅಣಕ ವಾಡು ಎಂಬುದು ಸಂಗೀತದ ಒಂದು ಪ್ರಕಾರ. ‘ಮೂಲ ಲೇಖಕರ ಕ್ಷಮೆ ಕೋರಿ’ ಎಂದು ಅಣಕವಾಡು ಗಳನ್ನು ಬರೆಯುವ, ಹಾಡುವ ಸಂಪ್ರದಾಯ ನಮ್ಮಲ್ಲಿ ಇದೆ. ಸಿನಿಮಾ ಸಂಗೀತದಲ್ಲಿ ಇದಕ್ಕೆ ರೀಮಿಕ್ಸ್ ಅಂತ ಕರೆಯುತ್ತಾರೆ. ಕುವೆಂಪು ಬರೆದ ನಾಡಗೀತೆಯನ್ನು ಅಣಕವಾಡಾಗಿ ಯಾರೋ (ಯಾರು ಎಂಬುದು ತನಿಖೆಯಾಗಬೇಕಷ್ಟೆ) ಬರೆದಿರಬಹುದು. ರೋಹಿತ್ ಅದನ್ನು ಫಾರ್ವರ್ಡ್ ಮಾಡಿರಬಹುದು. ಹಾಗಂತ ಆ ಅಣಕವಾಡಿನಲ್ಲಿ ಅದನ್ನು ಬರೆದವರು ಕುವೆಂಪು ಅವರನ್ನು ವ್ಯಂಗ್ಯಮಾಡಿರಲಿಲ್ಲ. ಅಣಕ ಮಾಡಿರಲಿಲ್ಲ.

ಆ ಅಣಕವಾಡನ್ನು ತಾವೇಕೆ ಫಾರ್ವರ್ಡ್ ಮಾಡಿದೆ ಎಂಬುದನ್ನು ರೋಹಿತ್ ಹೇಳಿದ್ದಾರೆ. ಆ ಸಂದರ್ಭದಲ್ಲಿ ಸಚಿವ ಖಾದರ್ ಶಾಲೆಗಳಲ್ಲಿ ಅರೇಬಿಕ್ ಕಲಿಸುತ್ತೇವೆ ಎಂದಿದ್ದರು. ಅಂದಿನ ಸರಕಾರ ಸಾರಾಯಿಯಿಂದ ತನ್ನ ಆದಾಯ ಹೆಚ್ಚಿಸಿಕೊಳ್ಳುವ ಮಾತಾಡಿತ್ತು. ಈ ಎಲ್ಲ ಅಂಶಗಳು ಆ ಅಣಕವಾಡಿನಲ್ಲಿದ್ದವು. ಅದನ್ನು ತಾವು ಫಾರ್ವರ್ಡ್ ಮಾಡಿದ್ದಾಗಿ ರೋಹಿತ್ ಹೇಳಿದ್ದಾರೆ. ಅವರಲ್ಲಿ ಕುವೆಂಪು ಅವರನ್ನು ವ್ಯಂಗ್ಯ ಮಾಡುವ ಉದ್ದೇಶ ಇರಲಿಲ್ಲ ಎಂಬುದು ಸುಸ್ಪಷ್ಟ. ಆದರೂ ಇದನ್ನು ದೊಡ್ಡ ರಾದ್ಧಾಂತ ಮಾಡಲಾಯಿತು.

ಈ ಎಲ್ಲ ವಿವಾದಗಳು ಮುನ್ನೆಲೆಗೆ ಬಂದು ಬಿಸಿಬಿಸಿ ಚರ್ಚೆಯಾಗುತ್ತಿರುವ ಸಂದರ್ಭದಲ್ಲಿ ಫೇಸ್ ಬುಕ್‌ನಲ್ಲಿ ಅಮೆರಿಕದಲ್ಲಿರುವ ರವಿ ಹಂಜಿ ಅವರು ಬರೆದ ಪೋಸ್ಟ್ ನನ್ನ ಗಮನ ಸೆಳೆಯಿತು. ಅವರು ಸಹ ಈ ವಿವಾದವನ್ನು ಭಿನ್ನ ನೆಲೆಯಲ್ಲಿ ಗಮನಿಸಿದ್ದಾರೆ ಎಂದೆನಿಸಿತು. ಅವರು ಬರೆದಿದ್ದನ್ನು ಇಲ್ಲಿ ಯಥಾವತ್ತು ನೀಡುತ್ತಿದ್ದೇನೆ – ‘ನಾನು ನರ್ಸರಿಯಲ್ಲಿದ್ದಾಗ ಜೇಡರಬಲೆ ಜಯಂತಿ, ರಾಜ್ ಕುಮಾರ್ ಕಲೆ, ನರಸಿಂಹರಾಜ ತಲೆ ಎಂಬ ಶಿಶುಗೀತೆ ಹಾಡುತ್ತಿದ್ದೆವು. ಮಾಸ್ಟರ್ ಡಿಗ್ರಿ ಸಮಯದಲ್ಲಿ ಯಾರಿವಳು ಯಾರಿವಳು ಸೂಜಿಮಲ್ಲಿಯಂಥವಳು, ರಾಮನಳ್ಳಿತೋಟದಲ್ಲಿ ಲಂಗ ಎತ್ತಿ ನಿಂತವಳು ಓ ಓ ಓ…ಎಂದು ಹಾಡುತ್ತಿದ್ದೆವು.

ಈ ಎರಡೂ ಆಶು ಅಣಕುಗಳ ನಡುವೆ ಆಗಿಹೋದ ಖ್ಯಾತ ಪದ್ಯ, ಗೀತೆಗಳ ಅಣಕಗಳು ಅಸಂಖ್ಯ! ಆ ಕಾಲದಲ್ಲಿ ಬಾಯಿಂದ ಬಾಯಿಗೆ ಹರಡಿದ್ದ ಈ ಪದ್ಯಗಳನ್ನು ಅಂದು ಫೇಸ್ಬುಕ್ ಇದ್ದಿದ್ದರೆ ಅವುಗಳನ್ನು ಅಲ್ಲಿ ಹಾಕಿಯೇ ಹಾಕುತ್ತಿದ್ದೆವು. ಹಾಂ, ಇಲ್ಲಿ ಆ ಗೀತೆಗಳ ಲೇವಡಿಯಾಗಲಿ, ವಿಡಂಬನೆಯನ್ನಾಗಲಿ ಮಾಡದೆ ಕೇವಲ ಜನಪ್ರಿಯ ಗೀತೆಯ ಧಾಟಿಯನ್ನು, ಶೈಲಿಯನ್ನು ನಕಲು ಮಾಡಲಾಗಿತ್ತು ಅಷ್ಟೇ ಎಂಬುದು ಒಂದು ಸಾಮಾನ್ಯ ತಿಳಿವಳಿಕೆ. ಅದಕ್ಕಿಂತ ಹೆಚ್ಚು ಎಂದು ನೀವು ಆಲೋಚಿಸಿದರೆ ನೀವು ಅತ್ಯಂತ ಸೃಜನಶೀಲರು! ಹಾಗೆ ಹಾಕಿದ್ದ ಮಾತ್ರಕ್ಕೆ ನಾನು ಚುನಾವಣೆಗೆ ನಿಲ್ಲಬಾರದು, ಸಾರ್ವಜನಿಕ ಹುದ್ದೆಗೆ ನೇಮಕ ಪಡೆಯ ಬಾರದು, ಅಮೆರಿಕೆಗೆ ಹೋಗುವ ಹಕ್ಕಿಲ್ಲ, ಹುಯೆನ್ ತ್ಸಾಂಗ್ ಬಗ್ಗೆ ಬರೆಯಬಾರದು, ಭಾರತ ಮರುಶೋಧನೆ ಮಾಡಬಾರದು, ಬಸವರಾಜಕಾರಣ ಕೆತ್ತಬಾರದು, ಇವನಿಗೆ ಪ್ರಶಸ್ತಿ ಕೊಡಬಾರದು ಎಂಬುದು ಎಷ್ಟು ಕ್ಷುಲ್ಲಕವೋ ಅಷ್ಟೇ ಕ್ಷುಲ್ಲಕ ನಾಡಗೀತೆಯ ಶೈಲಿಯನ್ನು ಜೋಕಾಗಿ ಬಳಸಬಾರದು, ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಪ್ರಶ್ನಾತೀತರು ಎಂದು ಷರಾ ಬರೆಯುವುದು ಸಹ. ಇವರೆಲ್ಲರೂ ಕೇವಲ ಮಾನವರು ಮತ್ತು ವಿಶ್ವಮಾನವರು. ಆದರೆ ಖಂಡಿತವಾಗಿ ದೇವ ಮಾನವರಲ್ಲ! ದೇವರೆನಿಸಿದ ರಾಮ, ಕೃಷ್ಣ, ಶಿವ, ಯೇಸು, ಅಬ್ರಹಾಂ ಹೇಗೆ ವಿಮರ್ಶೆಗೆ ದಕ್ಕುವರೋ ಅಷ್ಟೇ ದಕ್ಕಲರ್ಹರು ಬುದ್ಧ, ಬಸವ, ಅಂಬೇಡ್ಕರ್ ಮತ್ತು ಕುವೆಂಪು!

ಸ್ವಾತಂತ್ರ್ಯದ ವ್ಯಾಖ್ಯಾನವನ್ನೇ ತಿದ್ದಲು ಹೊರಟ ಇಂತಹ ಬೇಡಿಕೆಗಳು ಸ್ವಾತಂತ್ರ್ಯದ ಹಕ್ಕನ್ನೇ ಮುಕ್ಕಾಗಿಸುತ್ತಿವೆ! ಗಿಡ್ಡೆಗೌಡ, ಸಿಂಗಾರಿಗೌಡ ಎಂಬುವವರ ನೇಮಕದಲ್ಲಿ ಅವರ ಹೆಸರುಗಳನ್ನು ಬದಲಾಯಿಸಿ ಜಾತೀಯತೆ ತೋರಿದರು ಎಂಬ ಆರೋಪ ಕುವೆಂಪು ಅವರ ಮೇಲೆ ಆ ಕಾಲದಲ್ಲಿ ಬಂದಿತ್ತು. ಕ್ರಿಮಿನಲ್ ಶಿಕ್ಷೆಗೆ ಒಳಗಾಗಿರುವವರು ಚುನಾವಣೆಗೆ ನಿಲ್ಲಬಾರದೆಂಬ ಅಂಬೇಡ್ಕರರ ಸಂವಿಧಾನಕ್ಕೆ ವಿರುದ್ಧವಾಗಿ ಕ್ರಿಮಿನಲ್ಲುಗಳು ಸಾಲು ಸಾಲು ಗೆದ್ದು ಬರುತ್ತಿರುವಂತಹ, ಬಹು ಪತ್ನಿತ್ವದ ಶಾಸಕರು, ಅಧಿಕಾರಿಗಳು ಸಂವಿಧಾನದಡಿಯ ಆಸರೆ ಪಡೆದಿರುವಂತಹ ಸಂವಿಧಾನಿಕ ದ್ವಂದ್ವಗಳು ಭಾರತೀಯ ಶಾಸಕಾಂಗ, ನ್ಯಾಯಾಂಗ ದೆಡೆ ಢಾಳಾಗಿಕಾಣಿಸುತ್ತಿವೆ. ಬಸವಣ್ಣನವರ ದ್ವಂದ್ವಗಳು ಅವರ ವಚನಗಳ ಸಾಕಷ್ಟಿವೆ. ಹೀಗಿದ್ದಾಗ ಕೇವಲ Hegemony ಕಾರಣದಿಂದ ಈಗ ಇವರುಗಳನ್ನು ದೇವರಾಗಿಸಿರುವುದು ಯಾವ ವೈಚಾರಿಕ ಉನ್ನತಿ ಎಂದು ವಿಚಾರವಂತರು ಹೇಳಬಲ್ಲರು!

They came, they saw, they conquered, and they’re gone! Let’s move on. ಇನ್ನು ಇಂದಿನ ಪಠ್ಯ ಪರಿಷ್ಕರಣಾ ಸಮಿತಿಯ ಅಧ್ಯಕ್ಷ porn ಬಗ್ಗೆ ಜೋಕು ಮಾಡಿದ್ದರು ಎಂದು ಅವರನ್ನು ಹೀಯಾಳಿಸುವವರ ಪಡೆಯ ಅಧ್ಯಕ್ಷ ಗವ್ಡ ನಿಷೇಧಕ್ಕೊಳಪಟ್ಟ ರತಿವಿಜ್ಞಾನ, ಸುರತಿ ಗಳನ್ನು ಫೇಸ್‌ಬುಕ್ಕಿನ ಮಹರ್ಷಿ ವಾತ್ಸಾಯನ ಪೇಜಿನಲ್ಲಿ ಮರುಸೃಷ್ಟಿಸಿರುವ ಮಹಾತ್ಮನಲ್ಲದೆ ಚಂದ್ರಿಕಾ, ಭಾವನಾ ಎಂದು ಹೆಸರೆತ್ತಿ ಹಲುಬುತ್ತ ಜೊಲ್ಲು ಸುರಿಸುವುದೂ ಅಷ್ಟೇ ಸತ್ಯ. ಇದಕ್ಕೆ ಲಂಕೇಶ್, ಬೆಳಗೆರೆ ಅವರಂತಹ ಪೋಲಿ ಜೋಕ್ – ಜಾಲಿ ಲೈಫ್ ಪ್ರಭಾವ ಒಂದು ಪೀಳಿಗೆಯ ಮೇಲೆ ಪ್ರಭಾವಿಸಿರುವುದೂ ಅಷ್ಟೇ ಸತ್ಯ. ಇದಕ್ಕೆ ಪುಸ್ತಕ ಪರಿಷ್ಕರಣೆ ಅಧ್ಯಕ್ಷರು ಸಹ ಹೊರತಲ್ಲ,

ಹಾಗೆಯೇ ಅವರ ವಿರೋಧಿ ಬಣ ಸಹ. ಪರಿಷ್ಕರಣಾ ಸಮಿತಿಯ ಅಧ್ಯಕ್ಷಗಿರಿ ಯಾವುದೋ ಮಠದ ಬ್ರಹ್ಮಚಾರಿ ಪೀಠವಲ್ಲ, ಅದೊಂದು ಸರ್ವಶಕ್ತ ಸದಸ್ಯರುಗಳ ಕಮಿಟಿಯ ಅಲಂಕಾರಿಕ ಹುದ್ದೆ ಮಾತ್ರ. ಸ್ಪಷ್ಟವಾಗಿ ಹೇಳಬೇಕೆಂದರೆ ಯಾವುದೋ ಘನಂದಾರಿ ಕೆಲಸವನ್ನು ಇವರುಗಳು ಆಡಳಿತ ಪಕ್ಷಕ್ಕೆ ಮಾಡಿಕೊಟ್ಟಿದ್ದಕ್ಕೆ
ಕೊಟ್ಟ ಋಣ ಸಂದಾಯ! ವಿಪರ್ಯಾಸವೆಂದರೆ ಅಧ್ಯಕ್ಷನ ಹಳೆಯ ಪೋಸ್ಟ್‌ಗಳ ಕುರಿತು ಸಂಪ್ರದಾಯಬದ್ಧ ಮಡಿವಂತಿಕೆ ತೋರುತ್ತಿರುವವರು ಉದಾರ ವಾದದ ಮುಖವಾಡ ತೊಟ್ಟಿರುವುದು! ಇಂತಹ ಮುಖೇಡಿಗಳು ಸಹ ಸಮಾಜಕ್ಕೆ ಮೂಲಭೂತವಾದಿಗಳಷ್ಟೇ ಅಪಾಯಕಾರಿ. ಇಂತಹ ಪ್ರಚ್ಛನ್ನಮೂಲಭೂತವಾದಿಗಳ ಗುರಾಣಿ ಬುದ್ಧ, ಬಸವ, ಅಂಬೇಡ್ಕರ್, ಕುವೆಂಪು ಆಗಿದ್ದಾರೆ ಎಂಬುದು ಅತ್ಯಂತ ಕಳವಳಕಾರಿ ಸಂಗತಿ.

ಇರಲಿ, ಹೋರಾಟ ಸತ್ಯ, ತರ್ಕದ ಭದ್ರ ನೆಲೆಯಲ್ಲಿರಬೇಕು, ಪಂಥದ ಟ್ರೋಲಿನ ತೀಟೆಯಲ್ಲಂತೂ ಅಲ್ಲವೇ ಅಲ್ಲ! ‘ಮರುಳುಂಡ ಮನುಷ್ಯನ ಇರವಿನ ಪರಿ ಯಂತೆ, ವಿವರವನರಿಯಬಾರದು ನೋಡಾ, ಶಿವಜ್ಞಾನ. ಅದನರಿದೆಹೆನರಿದೆಹೆನೆಂದು ನೆನೆಯ ಹೋದರೆ, ಅದು ಮುಂದುದೋರದು. ಮರೆದೆಹೆನೆಂದು ಭಾವಿಸ ಹೋದಡೆ ತೆರಹುಗೊಡದು! ಗುಹೇಶ್ವರಾ, ನಿಮ್ಮ ನೆರೆ ಅರಿದ ಶರಣರು; ನಿಸ್ಸೀಮಸುಖಿಗಳು ನೋಡಾ’ ಈಗ ನೀವೇ ಹೇಳಿ, ಅಷ್ಟಕ್ಕೂ ರೋಹಿತ್ ಚಕ್ರತೀರ್ಥ ನಿಜಕ್ಕೂ ಕುವೆಂಪು ಅವರನ್ನು ನಿಂದಿಸಿದರಾ ? ಮೋದಿ-ನಿಲೇಕಣಿ ಮಾತುಕತೆ 2014ರ ಲೋಕಸಭಾ ಚುನಾವಣೆ ಮುಗಿದು ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿ ಅವರ ಮಂತ್ರಿಮಂಡಲದ ರಚನೆಯಾದ ನಂತರದಲ್ಲಿ ಆಧಾರ ಕಾರ್ಡ್ ಮತ್ತು ಇನ್ನಿತರ ಸ್ಮಾರ್ಟ್ ಕಾರ್ಡ್‌ಗಳ ಭವಿಷ್ಯ ಏನಾಗಲಿದೆ ಎಂಬುದರ ಕುರಿತಾಗಿ ಹಲವು ಊಹಾಪೋಹಗಳೆದಿದ್ದವು.

ಅದಕ್ಕೂ ಮುನ್ನ ಅಂದರೆ ನಂದನ ನಿಲೇಕಣಿ ಅವರು ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸಿ ಸೋಲುವ ಮುನ್ನ, ಅವರ ಬದುಕಿನ ಅಮೂಲ್ಯ ಐದು ವರುಷಗಳನ್ನು ಆಧಾರ್ ಕಾರ್ಡಿಗಾಗಿ ವ್ಯಯಿಸಿದ್ದು ಎಲ್ಲರಿಗೂ ಗೊತ್ತಿದೆ. ಭಾರತಕ್ಕೆ ಆಧಾರ್ ಅಗತ್ಯದ ಬಗ್ಗೆ ಅವರದ್ದೇ ಆದ ಭಾವನೆಗಳಿದ್ದವು. ಆ
ಕಾಲ ಘಟ್ಟದಲ್ಲಿ ನಿಲೇಕಣಿಯವರು ತಮ್ಮ ಪತ್ನಿ ಮತ್ತು ಕೆಲಸ್ನೇಹಿತರ ಸಲಹೆಯಂತೆ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸುವ ನಿರ್ಧಾರಕ್ಕೆ ಬಂದಿದ್ದರು. 2014ರ ಜೂನ್ ತಿಂಗಳಲ್ಲಿ ನವದೆಹಲಿಯಲ್ಲಿದ್ದ ನಿಲೇಕಣಿಯವರು ತಮ್ಮ ಮನೆಯನ್ನು ಖಾಲಿ ಮಾಡಿ ಬೆಂಗಳೂರಿಗೆ ವಾಪಸು
ಬಂದು ನೆಲೆಸುವ ತರಾತುರಿಯಲ್ಲಿದ್ದರು. ಹೊಸ ಪ್ರಧಾನಮಂತ್ರಿಗಳ ಜತೆ ಭೇಟಿಗೆ ಅವಕಾಶವನ್ನು ಕೇಳಿದ್ದರು. ಅಚ್ಚರಿಯೆಂದರೆ ಅವರು ಭೇಟಿಗೆ ಅವಕಾಶ ಕೇಳಿದ ಇಪ್ಪತ್ನಾಲ್ಕು ಗಂಟೆಗಳ ಒಳಗಾಗಿ ಕರೆಬಂತು. ಅವರು ಕೊಂಚ ಅಳುಕಿನಿಂದಲೇ ಪ್ರಧಾನಿ ಭೇಟಿಗೆ ಹೋದರು. ಏಕೆಂದರೆ ಆಗಷ್ಟೇ ಅವರು ಪ್ರತಿ
ಸ್ಪಽ ರಾಜಕೀಯ ಪಕ್ಷದ ಹುರಿಯಾಳಾಗಿ ಚುನಾವಣೆಗೆ ನಿಂತು ಸೋಲುಂಡಿದ್ದರು.

ಮೋದಿಯವರು ನಿಲೇಕಣಿಯವರನ್ನು ಆದರದಿಂದಲೇ ಬರಮಾಡಿಕೊಂಡರು ಮತ್ತು ಅವರ ಮಾತುಗಳನ್ನು ತುಂಬಾ ಆಸಕ್ತಿಯಿಂದ ಆಲಿಸಿದರು. ಆಗ ಅವರು ಕೊಟ್ಟ ಸಲಹೆಯೆಂದರೆ ಆಧಾರ್ ಕಾರ್ಡನ್ನು ಇಲ್ಲಿನ ನಿವಾಸಿಗಳಿಗೆ ಕೊಡಬೇಕು, ನಾಗರಿಕರಿಗಲ್ಲ ಎಂದಿದ್ದರು. ಹಾಗೆ ಮಾಡುವುದರಿಂದ ದೇಶದ ಹಣಕಾಸು ಪರಿಸ್ಥಿತಿಯಲ್ಲಿ ಮಹತ್ತರ ಬದಲಾವಣೆಯಾಗಲಿದೆ ಮತ್ತು ಫಲಾನುಭವಿಗಳಿಗೆ ನೇರ ಸವಲತ್ತುವರ್ಗಾವಣೆ ಸುಲಭವಾಗುತ್ತದೆ ಮತ್ತು ಭ್ರಷ್ಟಾಚಾರ ತಡೆಯುವು ದಕ್ಕೂ ಅದು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.

ಸುಪ್ರೀಂ ಕೋರ್ಟಿನಲ್ಲಿರುವ ಖಾಸಗಿತನದ ಕೇಸು ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆ ಅವರಿಗೆ ಸ್ಪಷ್ಟ ಅರಿವಿತ್ತು. ನಿಲೇಕಣಿಯವರಿಗೆ ಮೋದಿಯವರಲ್ಲಿ ಬಹಳ ಇಷ್ಟವಾಗಿದ್ದೇನೆಂದರೆ, ಅವರ ವ್ಯಕ್ತಿತ್ವದಲ್ಲಿದ್ದ ಮುಕ್ತತೆ, ಇನ್ನೊಬ್ಬನ ಮಾತನ್ನು ಆಲಿಸುವ ಸಹನಶೀಲತೆ ಮತ್ತು ದೇಶಕ್ಕೆ ಒಳಿತನ್ನು ಮಾಡಬೇಕೆಂಬ ತುಡಿತ.
ವರುಷಗಳು ಕಳೆದಂತೆ ಪ್ರಧಾನಿ ಮೋದಿಯವರು ಆಂತರಿಕವಾಗಿ ಆಧಾರ್ ಕಾರ್ಡಿನ ಅಗತ್ಯ ಅರ್ಥ ಮಾಡಿಸಿದರಲ್ಲದೇ ಅದರ ಬಳಕೆಯನ್ನುಇನ್ನಷ್ಟು ವ್ಯಾಪಕ ಗೊಳಿಸಿದರು. ಆಧಾರ್ ಕಾರ್ಡಿನೊಂದಿಗೆ ವ್ಯಕ್ತಿಗತ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ಖಾತೆಯನ್ನು ಲಿಂಕ್ ಮಾಡುವುದರಿಂದ ಹಲವು ಸರಕಾರಿ ಸವಲತ್ತುಗಳ ವಿತರಣೆ ಸುಲಭವಾಗಲಿದೆ ಎಂಬುದನ್ನು ಅವರು ಅರ್ಥ ಮಾಡಿಕೊಂಡಿದ್ದರು. 2015ರಲ್ಲಿ ನಡೆದ ಒಂದು ಸಮಾವೇಶದಲ್ಲಿ ಜನಧನ-ಆಧಾರ್-ಮೊಬೈಲ್ ಕುರಿತಾಗಿ ಜನರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸವನ್ನು ಮಾಡಲಾಯಿತು.

ಆಗ ಪ್ರಧಾನಮಂತ್ರಿಗಳು ಖರ್ಚು ಮಾಡಲಾಗುವ ಪ್ರತಿಯೊಂದು ರುಪಾಯಿಗೂ ಗರಿಷ್ಠ ಮೌಲ್ಯ ಸಿಗುವಂತೆ ಮಾಡುವುದು, ಬಡತನ ಹೋಗಲಾಡಿಸುವುದು ಮತ್ತು ಸಾಮೂಹಿಕವಾಗಿ ಗರಿಷ್ಠ ಪ್ರಮಾಣದಲ್ಲಿ ತಂತ್ರಜ್ಞಾನದ ಅಳವಡಿಕೆ ಇದರಿಂದ ಸಾಧ್ಯವಾಗಲಿದೆ ಎಂದರು. ಅಭಿವೃದ್ಧಿ ಉದ್ದೇಶಗಳಿಗೆ ಆಧಾರ ಬಳಕೆಯನ್ನು ಕೆಲವರು ಆಕ್ಷೇಪಿಸಿದರು. ಆದರೆ ಭಾರತದಲ್ಲಿ ಬೇರೂರಿರುವ ಆಡಳಿತಾತ್ಮಕ ತೊಡಕುಗಳನ್ನುಹೋಗಲಾಡಿಸಿ ಸರಳೀಕೃತ ವಿಧಾನಕ್ಕೆ ಮರಳಲು ಆಧಾರ್ ಸಹಾಯಕವಾಗಲಿದೆ ಎಂಬುದನ್ನು ಮೋದಿ ಕಂಡುಕೊಂಡಿದ್ದರು. ಈಗಾಗಲೇ320 ಸರಕಾರಿ ಯೋಜನೆಗಳ ಫಲಾನುಭವ ನೇರವಾಗಿ ಅರ್ಹ ಫಲಾನುಭವಿಗಳ ಖಾತೆಗೆ ನೇರ ವರ್ಗಾವಣೆಯಾಗುತ್ತಿದೆ. ಆ ಮೂಲಕ ಮಧ್ಯವರ್ತಿಗಳ ಪಾತ್ರ ಸಂಪೂರ್ಣವಾಗಿ ನಿವಾರಣೆಯಾದಂತಿದೆ. 2021 ರ ಡಿಸೆಂಬರ್ ಅಂತ್ಯದ ವೇಳೆಗೆ 20 ಲಕ್ಷ ಕೋಟಿ ರುಪಾಯಿ ಅಂದರೆ 20 ಟ್ರಿಲಿಯನ್ ಮೊತ್ತ, ಫಲಾನುಭವಿಗಳ ಬ್ಯಾಂಕ್ ಖಾತೆಗೆ ನೇರ ವರ್ಗಾವಣೆಯಾಗಿದೆ.

ಈ ಮೂಲಕವಾಗಿ ಸರಕಾರೀ ಯಂತ್ರಕ್ಕೆ ಕೆಲಸ ಕಡಿಮೆಯಾಗಿದೆ, ನಕಲಿ ಖಾತೆಗಳ ಹಾವಳಿ ತಪ್ಪಿದೆ, ಸೋರಿಕೆಯೂ ನಿಂತು ಹೋಗಿದೆ. ಆ ಮೂಲಕ ಸರಕಾರ ಸರಿಸುಮಾರು ಎರಡುಲಕ್ಷ ಕೋಟಿ ರುಪಾಯಿಗಳ ಉಳಿತಾಯವನ್ನು ಮಾಡಿದೆ. ಸರಕಾರ ಅಭಿವೃದ್ಧಿಯ ವಿಚಾರದಲ್ಲಿ ಮಧ್ಯಪ್ರವೇಶ ಮಾಡದೇ, ಡಿಜಿಟಲೀಕೃತ ಸಾರ್ವಜನಿಕ ಮೂಲಭೂತ ಸೌಕರ್ಯ ಒದಗಿಸುತ್ತಿದೆ. ಆಧಾರ್ ಕಾರ್ಡು ಒಬ್ಬ ವ್ಯಕ್ತಿಯ ಗುರುತಿನ ಚೀಟಿಯಾಗಿದೆ. ಆ ಮೂಲಕವಾಗಿ ಸರಕಾರ ತನ್ನ ಎಲ್ಲ
ನಾಗರಿಕರಿಗೆ ಅಭಿವೃದ್ಧಿ ಯೋಜನೆಗಳ ಫಲಾನುಭವ ಹಸ್ತಾಂತರ ಮಾಡುವುದು ಸುಲಭ ಸಾಧ್ಯವಾಗಿದೆ.

ಆಧಾರ್ ತಳಮಟ್ಟದ ಗುರುತಿನ ವ್ಯವಸ್ಥೆಯಾಗಿದ್ದು ಮುಂಬರುವ ದಶಕದಲ್ಲಿ ಅದು ಪೂರಕ ಡಿಜಿಟಲ್ ಮೂಲಸೌಕರ್ಯವಾಗಿ, ಪಾವತಿ ಮತ್ತು ದತ್ತಾಂಶ ವರ್ಗಾವಣೆಯ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಲಿದೆ. ಇವೆಲ್ಲವನ್ನೂ ಲೆಗೋಬುಕ್ ಮಾದರಿಯಲ್ಲಿ ವಿನ್ಯಾಸಗೊಳಿಸಲಾಗಿದ್ದು ಮಾಹಿತಿಗಳ ವಿಶ್ಲೇಷಣೆ ಸುಲಭ ಸಾಧ್ಯವಾಗಿದೆ. ಬ್ಯಾಂಕ್ ಫಾರ್ ಇಂಟರ್ ನ್ಯಾಶನಲ್ ಸೆಟಲ್‌ಮೆಂಟ್ಸ ೨೦೧೯ ರಲ್ಲಿ ಹೊರಡಿಸಿರುವ ಒಂದು ವರದಿಯಲ್ಲಿ ಹೇಳಿರುವಂತೆ, ಭಾರತ ತನ್ನ ಸಾರ್ವಜನಿಕ ಡಿಜಿಟಲ್ ವ್ಯವಸ್ಥೆಯನ್ನು ಸಜ್ಜುಗೊಳಿಸಿರುವ ಕಾರಣ ಅಭಿವೃದ್ಧಿ ಸುಲಭ ಸಾಧ್ಯವಾಗಿದೆ ಮತ್ತು 47ವರ್ಷಗಳಲ್ಲಿ ಮಾಡಲಾಗದ್ದನ್ನು 7 ವರ್ಷ ಗಳಲ್ಲಿ ಮಾಡಿ ತೋರಿಸಿದೆ ಎಂದು ಹೇಳಲಾಗಿದೆ. ಇತ್ತೀಚಿನ ಮಹಾಮಾರಿಯ ಕಾಲದಲ್ಲಿ ಕೂಡ ನಾಗರಿಕರಿಗೆ ಸವಲತ್ತುಗಳ ನೇರ ವಿತರಣೆ ಮಾಡುವಲ್ಲಿ ಈ ವ್ಯವಸ್ಥೆ ತುಂಬಾ ಸಹಾಯಕವಾಗಿದೆ.

ಈ ವಿಷಯವನ್ನು ಸ್ವತಃ ನಂದನ ನಿಲೇಕಣಿ ಅವರು Modi 20 ; Dreams meet Delivery ಎಂಬ ಕೃತಿಯಲ್ಲಿ ಬರೆದಿದ್ದಾರೆ. ಉದಾತ್ತ ವಿಚಾರಗಳು ಯಾವ ಪಕ್ಷದವರಿಂದ, ಯಾವ ದಿಕ್ಕಿನಿಂದ, ಯಾರಿಂದ ಬಂದರೂ ಸ್ವೀಕರಿಸಬೇಕು ಎಂಬ ಉತ್ತಮ ಭಾವವನ್ನು ಪ್ರಧಾನಿ ಮೋದಿ ಹೊಂದಿzರೆ ಎಂದು ನಿಲೇಕಣಿ ಹೇಳಿದ್ದಾರೆ. ಭಾರತವೆಂಬ ‘ಬಿಗ್ ಬ್ರದರ್’ ಕಳೆದ ವಾರ ‘ದಿ ವೀಕ್’ ಪತ್ರಿಕೆಯ ಆರ್.ಪ್ರಸನ್ನನ್ ಅವರು ಬರೆದ ಒಂದು ವಿಷಯವನ್ನು ನಿಮ್ಮ ಗಮನಕ್ಕೆ ತರಬ ಯಸುವೆ. ಶ್ರೀಲಂಕಾ ಮಾಜಿ ಪ್ರಧಾನಿ ಮಹೇಂದ್ರ ರಾಜಪಕ್ಸೆಯ ಮಗ ಸಚಿವ ನಾಮಲ್ ರಾಜಪಕ್ಸೆ ಕಳೆದ ವಾರ ಮಾಡಿದ್ದ ಟ್ವೀಟ್ ಒಂದರಲ್ಲಿ ಭಾರತವನ್ನು ‘ಬಿಗ್ ಬ್ರದರ್’ ಎಂದು ಕರೆದಿದ್ದರು. ಆದರೆ ಈ ಕುರಿತು ಯಾರೂ ಹುಬ್ಬೇರಿಸಲಿಲ್ಲ, ಸಾಮಾಜಿಕ ಜಾಲತಾಣಗಳಲ್ಲಿ ಅಸಹನೆ, ಪ್ರತಿಭಟನೆ ಕಂಡುಬರಲೇ ಇಲ್ಲ.

ನಾಮಲ್ ಹೇಳಿದ್ದು ಸರಿಯಾಗಿಯೇ ಇದೆ. ಅವರ ಟ್ವೀಟ್ ಹೀಗಿತ್ತು – ಪ್ರಧಾನಿ ನರೇಂದ್ರ ಮೋದಿಯವರಿಗೆ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರಿಗೆ ಮತ್ತು ಭಾರತದ ಜನತೆಗೆ ಆಭಾರಿಯಾಗಿದ್ದೇನೆ. ಶ್ರೀಲಂಕಾಗೆ ಅವರು ಕೊಟ್ಟ ಸಹಕಾರ ಮತ್ತು ಅಗತ್ಯವಸ್ತುಗಳಿಗೆ ನಾವು ಕೃತಜ್ಞ. ಹಲವಾರು ವರುಷಗಳಿಂದ ಭಾರತ ಶ್ರೀಲಂಕಾದ ಬಿಗ್ ಬ್ರದರ್ ಆಗಿದೆ, ಅದನ್ನು ನಾವೆಂದೂ ಮರೆಯಲಾರೆವು, ಥ್ಯಾಂಕ್ಸ್.’ ಆದರೆ ಇಲ್ಲಿ ‘ಬಿಗ್ ಬ್ರದರ್’ ಎಂದು ಸಂಬೋಧಿಸಿರುವುದಕ್ಕೆ
ಕೆಲವರು ವಿವಿಧ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

‘ಬಿಗ್ ಬ್ರದರ್’ ಅಂದರೆ ಹಿರಿಯಣ್ಣ ಎಂದರ್ಥ. ಭಾರತೀಯ ಸಂಜಾತ ಬ್ರಿಟಿಶ್ ಲೇಖಕ ಜಾರ್ಜ್ ಆರ್ವೆಲ್, ಅರ್ಥಶಾಸ್ತ್ರಕ್ಕೆ ಸಂಬಂಧಪಟ್ಟ ತನ್ನ ವಿಶ್ಲೇಷಣೆಯಲ್ಲಿ ‘ಬಿಗ್ ಬ್ರದರ್’ ಪದಕ್ಕೆ ವೈರುಧ್ಯದ ಅರ್ಥವನ್ನು ಬಣ್ಣಿಸಿದ್ದಾನೆ. ‘1984’ ಎನ್ನುವ ಕೃತಿಯಲ್ಲಿ ಆತ ‘ಬಿಗ್ ಬ್ರದರ್’ ಎಂಬ ಪದಕ್ಕೆ ನಿರಂಕುಶವಾದಿ ಎಂಬರ್ಥ ವನ್ನು ಕೊಟ್ಟಿದ್ದಾನೆ. ಆತನ ಪ್ರಕಾರ, ‘ಬಿಗ್ ಬ್ರದರ್’ ಎಂದರೆ ತನಗಿಂತ ಸಣ್ಣವನನ್ನು ಸದಾ ಗಮನಿಸುತ್ತಿರುವವನು, ನಿರಂತರ ಸರ್ವೇಕ್ಷಣೆಮಾಡುತ್ತಿರುವವನು, ಬೆದರಿಸುವವನು, ತನ್ನ ಪ್ರಾಬಲ್ಯ ತೋರುವವನು ಎಂದರ್ಥ.

ಭಾರತದ ಕುರಿತಾಗಿ ಶ್ರೀಲಂಕಾದ ಹಲವು ನಾಯಕರು ಇದೇ ರೀತಿಯ ಧೋರಣೆ ಹೊಂದಿzರೆಂಬುದು ಕೂಡ ಸುಳ್ಳೇನಲ್ಲ. ಇದೊಂದು ಬಾರಿ ಎಂದೇನಲ್ಲ. ಇದಕ್ಕೂ ಮೊದಲು ನಾಮಲ್ ಹಲವಾರು ಭಾರಿ ಭಾರತ, ತಮಗೆ ಪ್ರೀತಿ ಮತ್ತು ಕಾಳಜಿ ತೋರುವ ಹಿರಿಯಣ್ಣನಂತಹ ದೇಶ, ಅದು ಅಗತ್ಯ ಬಿದ್ದಾಗೆಲ್ಲ
ಸಹಾಯಕ್ಕೆ ಬಂದಿದೆ ಎಂದು ಹಿಂದೆ ಹೇಳಿದ್ದೂ ಇದೆ. 1971ರಲ್ಲಿ ಕಮ್ಯುನಿಸ್ಟ್ ಪ್ರೇರಿತ ಜನತಾ ವಿಮುಕ್ತಿ ಪೆರಮುನ ದಂಗೆಕೋರರು ಆಗಿನ ಪ್ರಧಾನಿ ಸಿರಿಮಾವೋ ಬಂಡಾರನಾಯಕೆಗೆ ಆಪತ್ತು ತಂದೊಡ್ಡಿದಾಗ ನಮ್ಮ ಪ್ರಧಾನಿ ಇಂದಿರಾಗಾಂಧಿ ಸೇನೆಯನ್ನುಅಲ್ಲಿಗೆ ಕಳುಹಿದ್ದರು.

ಆನಂತರ ರಾಜೀವಗಾಂಧಿ ಭಾರತೀಯ ವಾಯುಸೇನೆಯ ವಿಮಾನಗಳ ಮೂಲಕ ಆಹಾರ ಮತ್ತು ಔಷಧ ಪೊಟ್ಟಣಗಳನ್ನು 1987 ರಲ್ಲಿ ಜಾಫ್ನಾದಲ್ಲಿ ಮುತ್ತಿಗೆಗೆ ಒಳಗಾಗಿದ್ದ ಜನರಿಗೆ ಒದಗಿಸಿದ್ದರು. ನಂತರ ಅವರು ಭಾರತೀಯ ಸೇನೆಯನ್ನು ಕಳುಹಿಸಿ ಲಂಕಾದಲ್ಲಿ ಆತಂಕವೊಡ್ಡಿದ್ದ ಟೈಗರ್‌ಗಳ ವಿರುದ್ಧ ಶಾಂತಿಗೆ
ಪ್ರಯತ್ನಿಸಿದ್ದರು, ಆದರೆ ಅದು ಯುದ್ಧದಲ್ಲಿ ಪರ್ಯವಸಾನಗೊಂಡಿತ್ತು. 2004ರಲ್ಲಿ ಡಾ.ಮನಮೋಹನಸಿಂಗ್, ಸುನಾಮಿಯಿಂದ ಜರ್ಝರಿತವಾಗಿದ್ದ ಸಮುದ್ರ ತೀರದ ಊರುಗಳಿಗೆ ಆಹಾರ, ಔಷಧ, ಬಟ್ಟೆಬರೆ, ಟೆಂಟ್ ವಗೈರೆಗಳನ್ನು ಒದಗಿಸಿದ್ದರು.

ಈಗ ಮೋದಿ ಆಹಾರ, ತೈಲ ಸೇರಿದಂತೆ ನಾಲ್ಕು ಬಿಲಿಯನ್ ಡಾಲರ್ ಮೊತ್ತದ ಆರ್ಥಿಕ ನೆರವನ್ನುದಿವಾಳಿಯೆದ್ದು ಹೋಗಿರುವ ಶ್ರೀಲಂಕೆಗೆ ಒದಗಿಸಿದ್ದಾರೆ.
ಆದರೆ ಈ ಎಲ್ಲ ಸಹಾಯಗಳಲ್ಲಿ ವ್ಯತ್ಯಾಸವಿದೆ. ಇಂದಿರಾ- ರಾಜೀವ ಕಾಲದಲ್ಲಿ ಕೊಟ್ಟ ಸಹಾಯ ‘ಬಿಗ್ ಬ್ರದರ್’ ಸಹಾಯ ದಂತಿತ್ತು. ಆದರೆ ನಂತರದಲ್ಲಿ ಮನಮೋಹನಸಿಂಗ್-ನರೇಂದ್ರ ಮೋದಿ ಕಾಲಘಟ್ಟದಲ್ಲಿ ಕೊಟ್ಟ ನೆರವು ದೊಡ್ಡಣ್ಣನ ಜವಾಬ್ದಾರಿ ಎಂಬಂತಿತ್ತು.

ಈ ವ್ಯತ್ಯಾಸ ತುಂಬಾ ನಿಚ್ಚಳವಾದದ್ದು, ಏಕೆಂದರೆ ಅದನ್ನು ಸ್ವೀಕರಿಸುವವರ ಮನಃಸ್ಥಿತಿಯೂ ಅದಕ್ಕೆ ಪೂರಕವಾಗುತ್ತದೆ. ಇಂದಿರಾ ಮತ್ತು ರಾಜೀವ ಗಾಂಧಿ ಮಿಲಿಟರಿ ಸಹಾಯವನ್ನಿತ್ತರು. ಕೊಲಂಬೋದಲ್ಲಿ ನಮ್ಮ ಭಾರತೀಯ ಸೇನಾ ದಂಡು ಹೋಗಿ ಇಳಿದಿತ್ತು. ಆದರೆ ಈ ಸಹಾಯದ ಮೂಲಕ ತಾನು ಬಲಿಷ್ಠನಿದ್ದೇನೆ
ಎಂಬುದನ್ನು ಭಾರತ ತೋರಿದಂತಿತ್ತು. ನಾಗರಿಕ ಯುದ್ಧದಲ್ಲಿ ಬಂದಿಗಳಂತಿದ್ದ ಜನರಿಗೆ ರಾಜೀವಗಾಂಧಿ ನೀಡಿದ ಸಹಾಯ ಕೂಡ ಭಾರತದ ಬಲವನ್ನು ಬಿಂಬಿಸುವಂತಿತ್ತು. ಅವರು ಕೊಲಂಬೋದಲ್ಲಿ ನಡೆದ ಎದುರಾಳಿಗಳ ದಾಳಿಯನ್ನು ಧಿಕ್ಕರಿಸುವ ಕೆಲಸವನ್ನು ಮಾಡಿದ್ದರು.

ಇದೆಲ್ಲವೂ ‘ಬಿಗ್ ಬ್ರದರ್’ ಸಹಾಯ ಎಂಬುದಕ್ಕೆ ಅನ್ವರ್ಥಕವಾಗಿತ್ತು. ಆದರೆ 2004 ರಲ್ಲಿ ಮನಮೋಹನಸಿಂಗ್ ಪ್ರಧಾನಿಯಾಗಿದ್ದ ಕಾಲಘಟ್ಟದಲ್ಲಿ, ಸುನಾಮಿ ಯಿಂದ ಶ್ರೀಲಂಕಾ ಮತ್ತು ಹಿಂದೂ ಮಹಾಸಾಗರದ ಸಣ್ಣಪುಟ್ಟ ದೇಶಗಳು ತತ್ತರಿಸಿದ್ದಾಗ ಕೊಟ್ಟ ಸಹಾಯವಿದೆಯಲ್ಲ, ಅದು ದೊಡ್ಡಣ್ಣನ ಸಹಾಯ. ನಿಮಗೆ ನಾನಿದ್ದೇನಲ್ಲ, ಎಂಬ ಭಾವವನ್ನು ಮೂಡಿಸುವಂತಿತ್ತು. ಇದೀಗ ಶ್ರೀಲಂಕೆ ದಿವಾಳಿಯಾಗಿ ಜನರು ಆಹಾರ, ತೈಲ ಮತ್ತು ದೈನಂದಿನ ಅವಶ್ಯಕತೆಗಳಿಗೆ ತತ್ತರಿಸುತ್ತಿದ್ದಾಗ ಮೋದಿ ಕೊಟ್ಟ ನೆರವು ಕೂಡ ದೊಡ್ಡಣ್ಣನ ಸಹಾಯವೇ ಆಗಿದೆ. ಮೋದಿಯವರು ಕೊಟ್ಟ ಸಹಾಯದಿಂದ ದೊಡ್ಡಮಟ್ಟದ ನೆರವು ಸಂದಂತಾಗಿದೆ.
ಗಮನಿಸಬೇಕಾದ ಸಂಗತಿಯೆಂದರೆ, ಇಲ್ಲಿ ಫಲಾನುಭವಿಗಳು ಕೂಡ ಬೇರೆ ಬೇರೆ ಸ್ವರೂಪದವರು. ಇಪ್ಪತ್ತನೇ ಶತಮಾನದ ಸಹಾಯಗಳ ಫಲಾನುಭವಿಗಳು ಆಗಿನ ಶ್ರೀಲಂಕಾ ಆಡಳಿತಗಾರರು. ಇದೀಗ ಇಪ್ಪತ್ತೊಂದನೇ ಶತಮಾನದಲ್ಲಿ ಮಾಡಲಾದ ನೆರವಿನ ಫಲಾನುಭವಿಗಳು ಶ್ರೀಲಂಕಾದ ಜನತೆ ಎಂಬುದನ್ನು
ಗಮನಿಸಬೇಕು.