Monday, 25th November 2024

ಸರಕಾರಿ ಜಮೀನು ಒತ್ತುವರಿ ತೆರವಿಗೆ ನಿರಾಸಕ್ತಿ

ರಾಜ್ಯದಲ್ಲಿ ಒತ್ತುವರಿ ಸಂಬಂಧಿಸಿದಂತೆ ಮೂರು ವರದಿಗಳೂ ಅನುಷ್ಠಾನವಾಗುತ್ತಿಲ್ಲ

ಎಷ್ಟು ಸರಕಾರಿ ಭೂಮಿ ಇದೆ? ಒತ್ತುವರಿಯಾಗಿದ್ದೆಷ್ಟು ಎಂಬ ನಿರ್ದಿಷ್ಟ ಮಾಹಿತಿಯೂ ಇಲ್ಲ

ಬೆಂಗಳೂರು: ರಾಜ್ಯದಲ್ಲಿ ಸರಕಾರಿ ಜಮೀನು ಒತ್ತುವರಿ ತೆರವು ಕುರಿತಂತೆ ಅಧಿಕಾರಸ್ಥರ ಹೇಳಿಕೆ ಕೇವಲ ಘೋಷಣೆಗಷ್ಟೇ ಸೀಮಿತ ವಾಗಿದ್ದು, ಒತ್ತುವರಿ ತೆರವು ಕುರಿತು ಅಧಿಕಾರಿ ಗಳ ನಿರಾಸಕ್ತಿ ಎದ್ದು ಕಾಣುತ್ತಿದೆ.

ಮತ್ತೊಂದೆಡೆ, ರಾಜ್ಯದಲ್ಲಿ ಒಟ್ಟಾರೆ ಎಷ್ಟು ಸರಕಾರಿ ಭೂಮಿ ಇದೆ? ಅದರಲ್ಲಿ ಎಷ್ಟು ಒತ್ತುವರಿಯಾಗಿದೆ ಎಂಬ ಖಚಿತ ಮಾಹಿತಿ ಸರಕಾರದ ಬಳಿ ಇಲ್ಲ. ಒತ್ತುವರಿಗೆ ಸಂಬಂಧಿಸಿ ದಂತೆ ಸಮಿತಿಗಳು ನೀಡಿರುವ ವರದಿ ಆಧರಿಸಿಯೇ ಸರಕಾರಿ ಭೂಮಿಯ
ಲೆಕ್ಕಾಚಾರ ಹಾಕಲಾಗುತ್ತಿದೆ. ಸರಕಾರದ ಜಮೀನು ರಕ್ಷಿಸುವ ಉದ್ದೇಶದಿಂದ ರಾಜ್ಯ ಸರಕಾರ ಕರ್ನಾಟಕ ಸಾರ್ವಜನಿಕ ಭೂಮಿ ನಿಗಮ (ಕೆಪಿಎಲ್‌ಸಿ) ಸ್ಥಾಪಿಸಿದ್ದು, ಪ್ರತಿ ತಿಂಗಳೂ ಇಂತಿಷ್ಟು ಸರಕಾರಿ ಭೂಮಿ ಒತ್ತುವರಿ ತೆರವುಗೊಳಿಸಲು ಗಮನಹರಿಸಬೇಕು. ಕೆಡಿಪಿ ಸಭೆಗಳಲ್ಲೂ ಕುರಿತು ಚರ್ಚೆಯಾಗಬೇಕು ಎಂದು ಸರಕಾರ ಈ ಹಿಂದೆಯೇ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಆದರೆ, ಈ ಕುರಿತು ಅಧಿಕಾರಿಗಳು ನಿರಾಸಕ್ತಿ ತೋರುತ್ತಿದ್ದಾರೆ.

ಒತ್ತುವರಿಗೆ ಸಂಬಂಧಿಸಿದಂತೆ ಮೂರು ವರದಿಗಳು: ಸರಕಾರಿ ಭೂಮಿ ಒತ್ತುವರಿಗೆ ಸಂಬಂಧಿಸಿದಂತೆ ಸರಕಾರದ ಬಳಿ ಮೂರು ವರದಿಗಳಿವೆ. ಬೆಂಗಳೂರು ನಗರದ ಸುತ್ತಮುತ್ತ ಆಗಿರುವ ಭೂ ಒತ್ತುವರಿ ಕುರಿತು ಎ.ಟಿ. ರಾಮಸ್ವಾಮಿ ನೇತೃತ್ವದ ಸಮಿತಿ 2007ರಲ್ಲಿ ವರದಿ ಸಲ್ಲಿಸಿದ್ದು, ಸುಮಾರು 27336 ಎಕರೆ ಸರಕಾರಿ ಭೂಮಿ ಒತ್ತುವರಿಯಾಗಿದೆ ಹೇಳಿತ್ತು. ಅದೇ ರೀತಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಗಿರುವ ಸರಕಾರಿ ಭೂಮಿ ಒತ್ತುವರಿ ಕುರಿತು ನಿವೃತ್ತ ಐಎಎಸ್ ಅಧಿಕಾರಿ ವಿ.ಬಾಲಸುಬ್ರಮಣ್ಯನ್ ನೇತೃತ್ವದ ತಂಡ 12 ಲಕ್ಷ ಎಕರೆ ಸರಕಾರಿ ಜಮೀನು ಒತ್ತುವರಿಯಾಗಿದೆ ಎಂದು ವರದಿ ಸಲ್ಲಿಸಿತ್ತು. ಇದಾದ ಬಳಿಕ ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ ನೇತೃತ್ವದ ಸಮಿತಿ ಬೆಂಗಳೂರಿನ ಕೆರೆಗಳ ಒತ್ತುವರಿಗೆ ಸಂಬಂಧಿಸಿದ ವರದಿ ನೀಡಿದ್ದರು.

ಸರಕಾರದ ಬಳಿ ಖಚಿತ ಮಾಹಿತಿ ಇಲ್ಲ: ಕೆಪಿಎಲ್‌ಸಿ ನೀಡಿರುವ ಮಾಹಿತಿ ಪ್ರಕಾರ, ರಾಜ್ಯದಲ್ಲಿ 2017 ರಿಂದ 2019ರವರೆಗೂ 63.8 ಲಕ್ಷ ಎಕರೆ ಸರಕಾರಿ ಜಮೀನು ಇತ್ತು. ಈಗ ಅದು 61.88 ಲಕ್ಷ ಎಕರೆಗೆ ಇಳಿದಿದೆ. ಸರಕಾರಿ ಜಮೀನಿನ ಲೆಕ್ಕಾಚಾರದ ಮರು ಹೊಂದಾಣಿಕೆಯ ಪರಿಣಾಮವಾಗಿ 1.98 ಲಕ್ಷ ಎಕರೆ ಯಷ್ಟು ಕುಸಿತ ಕಂಡುಬಂದಿದೆ ಎಂಬ ವಾದವಿದೆ. ಆದರೆ, ಈಗಲೂ ಕರ್ನಾಟಕದಲ್ಲಿ ಎಷ್ಟು ಎಕರೆ ಸರಕಾರಿ ಜಮೀನು ಇದೆ ಎಂಬ ಖಚಿತವಾದ ಮಾಹಿತಿ ಸರಕಾರದ ಬಳಿಯೂ ಇಲ್ಲ.

ಬಗರ್ ಹುಕುಂ ಸಾಗುವಳಿ ಮೂಲಕ 9.9 ಲಕ್ಷ ಎಕರೆ ಒತ್ತುವರಿಯಾಗಿದೆ. 2019ರ ಏಪ್ರಿಲ್‌ವರೆಗೆ ರಾಜ್ಯದಲ್ಲಿ 11.77 ಲಕ್ಷ ಎಕರೆ ಸರಕಾರಿ ಜಮೀನು ಒತ್ತುವರಿಯಾಗಿತ್ತು. ಈಗ ಅದು 14.18 ಲಕ್ಷ ಎಕರೆಗೆ ತಲುಪಿದೆ. ಸುಮಾರು ಸಾರ್ವಜನಿಕ ಉದ್ದೇಶಕ್ಕೆ ಮೀಸ
ಲಿಟ್ಟಿದ್ದ ಭೂಮಿ ಪೈಕಿ 13253 ಎಕರೆ ಸೇರಿದಂತೆ ಇತರೆ ಉದ್ದೇಶಗಳಿಗೆ 4.04 ಲಕ್ಷ ಎಕರೆ ಸರಕಾರಿ ಭೂಮಿ ಒತ್ತುವರಿಯಾಗಿದೆ. ರಾಜ್ಯದಲ್ಲಿ ರೈತರ ಬಗರ್ ಹುಕುಂ ಸಾಗುವಳಿ ಬಿಟ್ಟು ಸುಮಾರು 4.04 ಲಕ್ಷ ಎಕರೆ ಭೂಮಿಯನ್ನು ಒತ್ತುವರಿಯಿಂದ ತೆರವು ಮಾಡಬೇಕಾಗಿದೆ.

9723 ಎಕರೆ ಭೂಮಿ ಒತ್ತುವರಿ ಕುರಿತಂತೆ ಪ್ರಕರಣಗಳು ನ್ಯಾಯಾಲಯದ ಮುಂದಿವೆ. ಬೆಂಗಳೂರು ನಗರ ಜಿಲ್ಲೆ ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಒತ್ತುವರಿ ತೆರವು ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಈಗಾಗಲೇ ಎಲ್ಲ ಜಿಲ್ಲಾಧಿಕಾರಿಗಳಿಗೆ ನಿರ್ದಿಷ್ಟ ಸೂಚನೆ ಇದ್ದಾಗ್ಯೂ ಪರಿಣಾಮಕಾರಿಯಾಗಿ ಕೆಲಸ ಆಗುತ್ತಿಲ್ಲ. ಹೀಗಾಗಿ ಸರಕಾರದ ಭೂಮಿ ಒತ್ತುವರಿ ತೆರವು ಗೊಳಿಸುವ ಕಾರ್ಯ ಆಮೆಗತಿಯಲ್ಲಿ ಸಾಗುತ್ತಿದೆ ಎನ್ನುತ್ತಾರೆ ಕಂದಾಯ ಇಲಾಖೆ ಹಿರಿಯ ಅಧಿಕಾರಿಗಳೊಬ್ಬರು.

ಒತ್ತುವರಿ ಮಾಡಿರುವ ಬಲಾಢ್ಯರಿಗೆ ಶಿಕ್ಷೆಯಾಗುತ್ತಿಲ್ಲ
ಸರಕಾರ ಭೂ ಕಬಳಿಕೆ ನಿಷೇಧ ಕಾಯಿದೆ ಜಾರಿಗೊಳಿಸಿದ ನಂತರ ಸಾಕಷ್ಟು ಪ್ರಕರಣಗಳು ನ್ಯಾಯಾಲಯದ ಮುಂದಿವೆ. ಬಗರ್ ಹುಕುಂ ಸಾಗುವಳಿ ಪ್ರಕರಣದಲ್ಲಿಯೂ ನ್ಯಾಯಾಲಯದ ಮುಂದೆ ಬಂದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ರೈತರಿಂದ ಬಿಟ್ಟು ಬಲಾಢ್ಯರಿಂದ ಒತ್ತುವರಿ ತೆರವು ಮಾಡಿಸಲು ಸರಕಾರ ನಿರ್ಧರಿಸಿದೆ. ಬೆಂಗಳೂರು ಸೇರಿದಂತೆ ಬಹುತೇಕ ಪ್ರಮುಖ ನಗರ ಗಳಲ್ಲಿ ಬಲಾಢ್ಯರು ಒತ್ತುವರಿ ಮಾಡಿದ್ದಾರೆ. ಆದರೆ ಯಾರೊಬ್ಬರಿಗೂ ಶಿಕ್ಷೆಯಾಗುತ್ತಿಲ್ಲ.

ಸಣ್ಣಪುಟ್ಟ ರೈತರು ಶಿಕ್ಷೆಗೆ ಒಳಗಾಗಿರುವ ಉದಾಹರಣೆಗಳಿವೆ. ಪ್ರತಿ ವರ್ಷ ಗ್ರಾಮ ಮಟ್ಟದಲ್ಲಿ ಜಮಾಬಂದಿ ನಡೆಸಬೇಕು. ಆದರೆ, ಈ ಪ್ರಕ್ರಿಯೆ ನಡೆಯುತ್ತಿಲ್ಲ. ಮೂಲಗಳ ಪ್ರಕಾರ, 6 ವರ್ಷಗಳಿಂದ ಈ ರೀತಿಯ ಮರು ಹೊಂದಾಣಿಕೆಯ ಪ್ರಕ್ರಿಯೆ ನಡೆಯುತ್ತಲೇ ಇದೆ. ಜಿಲ್ಲಾಧಿಕಾರಿ ಗಳು ಬೇರೆ ಬೇರೆ ಸಂದರ್ಭಗಳಲ್ಲಿ ಬೇರೆ ಬೇರೆ ಅಂಕಿ ಅಂಶಗಳನ್ನು ನೀಡಿರುವುದೇ ಈ ರೀತಿಯ ವ್ಯತ್ಯಾಸ ಬರಲು ಕಾರಣ. ಇನ್ನೊಂದೆಡೆ ರಾಜ್ಯದಲ್ಲಿ ಸರಕಾರಿ ಜಮೀನುಗಳ ಒತ್ತುವರಿ ನಿರಂತರವಾಗಿ ಮುಂದುವರಿಯುತ್ತಲೇ ಇದೆ ಎಂಬುದನ್ನು ಕೆಪಿಎಲ್‌ಸಿ ನೀಡಿರುವ ಅಂಕಿ-ಅಂಶಗಳು ಹೇಳುತ್ತಿವೆ.