Thursday, 12th December 2024

ನೂಪುರ್‌ ಶರ್ಮಾ ಶಿಕಾರಿಯಾದರೇ ?

ರಾವ್ ಭಾಜಿ

journocate@gmail.com

ಕಳೆದ ವಾರ ಎರಡು ದಿವಸ ಬೆಂಗಳೂರಿನಲ್ಲಿ ನಮ್ಮ ‘ಬ್ರಾಹ್ಮಣ ಶಿಕಾರಿ’ ಪುಸ್ತಕದ ಪ್ರಚಾರ ಕಾರ್ಯಕ್ರಮ ನಡೆಯಿತು. ತಮ್ಮ ಸಾರ್ವಜನಿಕ ಸಭೆಗಳಿಗೆ ಗುತ್ತಿಗೆಯ ಮೇಲೆ ಸಭಿಕರನ್ನು ಕರೆತರುವ ರಾಜಕಾರಣಿಗಳ ಸಂಪ್ರದಾಯವನ್ನು ನಾವು ಅನುಸರಿಸಲಿಲ್ಲ. ಮಾಧ್ಯಮ ಸಂಸ್ಥೆಗಳಿಗೆ ಮಾಹಿತಿ ಒದಗಿಸಲಾಗಿತ್ತು. ಆದರೆ ಒಬ್ಬನೇ ಒಬ್ಬ ಮಾಧ್ಯಮದ ಪ್ರತಿನಿಧಿಯೂ ನಮ್ಮ ಕಾರ್ಯಕ್ರಮದ ಬಳಿ ಸುಳಿದಾಡಲಿಲ್ಲ.

ಅವರನ್ನು ದೂರವಿಡುವುದಕ್ಕೆ ಪುಸ್ತಕದ ಶೀರ್ಷಿಕೆಯೇ ಸಾಕು. ನಿರೀಕ್ಷಿಸಿದ್ದೇ. ಹುಸಿ ಭರವಸೆಗಳನ್ನು ಘೋಷಿಸುವುದಕ್ಕೆ ಯೋಜಿಸಲಾದ ಕಾರ್ಯಕ್ರಮ ನಮ್ಮದಾಗಿರಲಿಲ್ಲ; ಪುಸ್ತಕದ ಆಶಯದಂತೆ ಅದರ ಉದ್ದೇಶ ಸಮಾಜವನ್ನು ಬೆಸೆಯುವುದು. ಮಾಧ್ಯಮ ಪ್ರತಿನಿಧಿಗಳನ್ನು ಸಂಪ್ರೀತಗೊಳಿಸಲು ಕಪ್ಪ-ಕಾಣಿಕೆಗಳನ್ನು ನೀಡುವ ಏರ್ಪಾಡಾಗಿರ ಲಿಲ್ಲ. ಹೀಗಿದ್ದ ಮೇಲೆ ಅವರೇಕೆ ನಮ್ಮ ಬಳಿ ಸುಳಿದಾರು? ಮೊದಲ ದಿನ ಮುಖ್ಯ ಅತಿಥಿಯಾಗಿ ಐಜಿಪಿ ಎಚ್.ಆರ್.ಕಸ್ತೂರಿರಂಗನ್ ಆಗಮಿಸಿದ್ದರು.

ಸೇವಾವಧಿಯಲ್ಲಿ, ಸಮಾಜಕಂಟಕರೆಲ್ಲರೂ ಹೆದರಿ ಅವರಿಂದ ದೂರವಿರುತ್ತಿದ್ದರು. ಮರುದಿನದ ಮುಖ್ಯ ಅತಿಥಿ ನಿವೃತ್ತ ಟೆಕ್ನೋಕ್ರಾಟ್ ಆಗಿ ಅದ್ವಿತೀಯ ಸಾಧನೆಗೈದ ಪ್ರೊ.ಎನ್. ವಿ. ಜಿ. ಕೆ. ಭಟ್. ಸಾಧಕರು. ಇಂತಹ ಪ್ರತಿಕೂಲ ವಾತಾವರಣದಲ್ಲಿ ಪುಸ್ತಕಕ್ಕೆ ಪ್ರಚಾರ ಪಡೆಯುವುದು ಸಾಹಸವೇ. ಸಾಹಸಕ್ಕೆ ಸಿದ್ಧರಾಗೇ ನಾವೀ ಪುಸ್ತಕ ಯೋಜನೆಗೆ ಕೈ ಹಾಕಿದ್ದು.  ನಿರಾಸೆಯಾಗಲಿಲ್ಲ.

ಒಮ್ಮೆ, ರಾಜಧಾನಿಯ ಮುಖ್ಯವಾಹಿನಿ ಮಾಧ್ಯಮದ ಪ್ರತಿನಿಧಿಗಳನ್ನು, ಪತ್ರಕರ್ತರನ್ನು ಅಧ್ಯಯನಕ್ಕಾಗಿ ಮೂರು ಜಿಲ್ಲೆಗಳ ಪ್ರವಾಸಕ್ಕೆ ಕರೆದೊಯ್ಯಲಾಗಿತ್ತು. ಅದರ ನೇತೃತ್ವ ಹೊತ್ತಿದ್ದವರು ವಾರ್ತಾ ಇಲಾಖೆಯ ಉಪನಿರ್ದೇಶಕರು. ಪ್ರವಾಸ ಆರಂಭ ವಾದ ಸ್ವಲ್ಪವೇ ಹೊತ್ತಿನಲ್ಲಿ ಸಿಗರೆಟ್‌ಗಾಗಿ ಹಾಹಾಕಾರವೆದ್ದಿತು. ಸಿಗರೆಟ್ ಸೇದುತ್ತಿದ್ದವರೆಲ್ಲರ ಬಳಿಯಲ್ಲೂ ಸಿಗರೆಟ್ ಇತ್ತು. ಪ್ಯಾಕ್ ತೆರೆದರೆ ಎಲ್ಲಿ ಮತ್ತೊಬ್ಬನೂ ಕೈ ಹಾಕುತ್ತಾನೋ ಎಂಬ ಆತಂಕ. ಹಾಗಾಗಿ ಉಪ ನಿರ್ದೇಶಕರಿಗೆ ಸಿಗರೆಟ್ ಕೊಡಿಸಲು ದುಂಬಾಲು ಬಿದ್ದರು.

ಸಾಮೂಹಿಕ ಕಾಟವನ್ನು ತಡೆಯಲಾಗದೆ ಡ್ರೈವರ್‌ಗೆ ಇಲಾಖೆಯ ವ್ಯಾನ್ ನಿಲ್ಲಿಸಲು ಉದ್ವೇಗದಿಂದ ಹೇಳಿದರು. ಉಪಟಳವನ್ನು ತಪ್ಪಿಸಿಕೊಳ್ಳಲು, ‘ಸಿಗರೆಟ್ ತಂದು ಬಡೀರ್ರೀ’ ಎಂದು ತಾರಕದಲ್ಲಿ ಕೂಗಿದರು. ಇದು ಐದು ದಿನಗಳ ಪ್ರವಾಸದ ಮೊದಲ ಎರಡು ಗಂಟೆಯೊಳಗಿನ ವಿದ್ಯಮಾನ. ಹಿಂದಿರುಗುವ ಹಿಂದಿನ ಸಂಜೆ, ಅಂಥದೇ ಹಿಂಸೆಯನ್ನು ಮದಿರೆಯ ಬೇಡಿಕೆಯನ್ನು ಪೂರೈಸುವ ಮುನ್ನ ಉಪನಿರ್ದೇಶಕರು ಅನುಭವಿಸಿದರು. ಇಂತಹ ಬಾಬ್ತಿಗೆ ಸಾರ್ವಜನಿಕ ಹಣವನ್ನು ಖರ್ಚು ಮಾಡಲು  ಅವಕಾಶವಿರುವು ದಿಲ್ಲ.

ತಮ್ಮ ಹಣವನ್ನು ಅದಕ್ಕೆ ವಿನಿಯೋಗಿಸಿದೆನೆಂದು ಅವರು ನನ್ನಲ್ಲಿ ಅಲವತ್ತುಕೊಂಡರು. ಪಠ್ಯ ಪರಿಷ್ಕರಣೆಯ ವಿರುದ್ಧ ಬೊಬ್ಬಿರಿದ ಮಹನೀಯರೆಲ್ಲರೂ ಇಂಥ ಮಾಧ್ಯಮ ವ್ಯವಸ್ಥೆಯ ಸಂಪೂರ್ಣ ಪ್ರಯೋಜನ ಪಡೆದುಕೊಂಡು ಚಿಂತಕ, ಸಾಹಿತಿ ಎಂದು ಹೆಸರು ಮಾಡಿದವರು. ಕ್ರಿಕೆಟ್ ನಿಯಮಾವಳಿಗೆ ಹೊಸ ರೂಪವನ್ನು ಒದಗಿಸುವ ಮೊದಲು ಸೋಲು ಖಚಿತವೆಂದು
ಮನಗಂಡ ಫೀಲ್ಡಿಂಗ್ ತಂಡ ಅಂಪೈರ್‌ನಿಂದ ಅನುಕೂಲಕರ ತೀರ್ಮಾನ ಪಡೆಯುವ ಯಾವುದೇ ದೂರದ ಸಾಧ್ಯತೆ ಇಲ್ಲ
ದಿರುವ ಸಂದರ್ಭದಲ್ಲೂ ಅವನ ಮೇಲೆ ಒತ್ತಡ ಬೀರುವ ಏಕೈಕ ಉದ್ದೇಶದಿಂದ ವಿನಾ ಕಾರಣ ಮಿತಿ ಮೀರಿ ಅಪೀಲ್ ಮಾಡುವ ಪದ್ಧತಿ ಪ್ರಚಲಿತದಲ್ಲಿತ್ತು.

ಪದೇಪದೇ ಅಸಮರ್ಪಕ ಕಾರಣಗಳಿಗೆ ಅಪೀಲ್ ಮಾಡುವ ಫೀಲ್ಡಿಂಗ್ ತಂಡದ ವಿರುದ್ಧ ಕ್ರಮ ತೆಗೆದುಕೊಳ್ಳಲು ಈಗ ಅವಕಾಶ ವಿದೆ. ಅಜೆಂಡಾ ಹೊತ್ತ ಮಾಧ್ಯಮದ ಪೂರ್ಣ ಬೆಂಬಲ ಪಡೆದ ಸದರಿ ಸರಸ್ವತೀ ವೈರಿಗಳು ಅಂತಹ ಯಾವುದೇ ಅಡೆತಡೆ ಯಿಲ್ಲದೆ, ವಿಕಾರವಾಗಿ ಕಿರುಚುತ್ತಲೇ ಪಠ್ಯಪುಸ್ತಕ ಸಮಿತಿಯ ಅಧ್ಯಕ್ಷರಾದ ರೋಹಿತ್ ಚಕ್ರತೀರ್ಥರನ್ನು ಬಲಿಪಡೆಯಲು
ಹವಣಿಸಿತು. ಎರಡನೇ ಹೆಂಡತಿ ಯನ್ನು ವಶೀಕರಿಸಿಕೊಳ್ಳಲು ಮೊದಲನೆಯ ಹೆಂಡತಿಯನ್ನು ಕಡೆಗಣಿಸುವ ದ್ವಿಪತ್ನಿತ್ವ ಪಾಲಕ ಗಂಡನಂತೆ ಹಿಂದೂಗಳನ್ನು ತಿರಸ್ಕರಿಸಿರುವ ರಾಜ್ಯ ಸರಕಾರ ಗದ್ದಲ ಮಾತ್ರದಿಂದಲೇ ವಿರೋಧಿಗಳನ್ನು  ಮಣಿಸಬಹುದೆಂದು ನಂಬಿರುವವರ ಗೆಣ್ಣಿಗೆ ಹೊಡೆದು ತೆಪ್ಪಗಾಗಿಸುವಲ್ಲಿ ವಿಫಲವಾಗಿದೆ.

ತಾರ್ಕಿಕವಾಗಿಯೂ, ಸಮರ್ಪಕವಾಗಿಯೂ, ಸ್ಪಷ್ಟವಾಗಿಯೂ ವಾದ ಮಂಡಿಸುತ್ತಿದ್ದ ರೋಹಿತ್ ಚಕ್ರತೀರ್ಥರ ಬೇಟೆಗೆ ನಿಂತ ತೋಳನರಿಗಳನ್ನು ಸರಕಾರ ಪರೋಕ್ಷ ಬೆಂಬಲಿಸಿದೆ. ಸಮಿತಿಯನ್ನು ಅವಧಿಗೆ ಮುನ್ನವೇ ವಿಸರ್ಜಿಸುವ ಅರೆಜಾಣತನವನ್ನು
ತೋರಿ, ಬೊಮ್ಮಾಯಿ ಬೆನ್ನೆಲುಬು ಅಷ್ಟೇನು ನೇರವಿಲ್ಲವೆಂದು ಸಾಬೀತುಗೊಳಿಸಿದೆ. ‘ಬ್ರಾಹ್ಮಣ ಶಿಕಾರಿ’ ಪುಸ್ತಕಕ್ಕೆ ಘನಸರಕಾರ ನಿದರ್ಶನ ಒದಗಿಸಿದ್ದು ದುರಂತ. ದುರಂತ ಸಂಭವಿಸಿದ್ದು ಪುಸ್ತಕ ಪ್ರಚಾರ ಕಾರ‍್ಯಕ್ರಮದ ದಿನದಂದೇ.

ಎರಡನೇ ದಿನದ ಕಾರ್ಯಕ್ರಮಕ್ಕೆ ಹೊಂದುವಂತೆ ಮತ್ತೊಂದು ಬೇಟೆಯಾಯಿತು. ಅದು ದೂರದ ದೆಹಲಿಯಲ್ಲಿ. ಬ್ರಾಹ್ಮಣರ ಶಿಕಾರಿಗೆ ಸಮಸ್ತ ಭಾರತವೇ ವಿಶಾಲವಾದ ಕಾನನ. ಪ್ರಾ-ಟ್ ಮೊಹಮದ್ ಕುರಿತು ಭಾರತೀಯ ಜನತಾ ಪಕ್ಷದ ವಕ್ತಾರೆ ನೂಪುರ್ ಶರ್ಮಾ ನೀಡಿದ ಹೇಳಿಕೆ ಬೃಹತ್ ವಿವಾದವನ್ನು ಸೃಷ್ಟಿಸಿದೆ. ಐವತ್ತು ಇಸ್ಲಾಮ್ ರಾಷ್ಟ್ರಗಳನ್ನು ಒಗ್ಗೂಡಿಸುವಷ್ಟು ಸಾಮರ್ಥ್ಯ ಪ್ರಾ-ಟ್ ವಿರುದ್ಧ ನೀಡುವ ಹೇಳಿಕೆಗಿದೆ ಎಂಬುದು ಸರ್ವವಿದಿತ.

ಸ್ಥಳೀಯವಾಗಿದ್ದ ಕ್ಯಾಲಿ-ಟ್ ನಿರ್ಮಾಣ ಕುರಿತ ಬೆಳವಣಿಗೆಗಳು ಟರ್ಕಿಯ ಸರಹದ್ದನ್ನು ಮೀರಿ ವಿಸ್ತಾರವಾಗಲು ಮೋಹನ ದಾಸ್ ಕರಮಚಂದ್ ಗಾಂಧಿ ನೀಡಿದ ಕೊಡುಗೆಯನ್ನು ಇಲ್ಲಿ ಮತ್ತೊಮ್ಮೆ ಸ್ಮರಿಸಲೇಬೇಕಾಗಿದೆ. ಅಧಿಕಾರದ ಲಾಲಸೆಗಾಗಿ ಪತ್ನಿಯನ್ನು ಬಿಟ್ಟು ಉಪಪತ್ನಿಯನ್ನು ಓಲೈಸುವ ಪರಂಪರೆ ಮುಂದುವರಿಸಿಕೊಂಡು ಬಂದ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಬುದ್ಧಿಯ ಸ್ವಾತಂತ್ರ್ಯೋತ್ತರ ಪಕ್ಷಗಳೆಲ್ಲವು ದರ ಕರ್ಮಫಲ ಹಿಂದೂಗಳನ್ನು ಈ ಹಂತಕ್ಕೆ ತಂದಿದೆ.

ವಾಣಿಜ್ಯ ನಿರ್ಬಂಧಗಳ ಬೆದರಿಕೆಗಳು ಸಾಲು ಸಾಲಾಗಿ ಬಂದ ಹಿನ್ನೆಲೆಯಲ್ಲಿ ನೂಪುರರ ಸದಸ್ಯತ್ವವನ್ನು ಪಕ್ಷ ರದ್ದುಗೊಳಿಸಿದೆ. ಆಕೆಗೆ ಜೀವ-ಮಾನಗಳ ಹಾನಿ ಮಾಡಲಾಗುವುದೆಂಬ ಬೆದರಿಕೆ ಬಂದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕಾಲು ಚದುರಿಂಚು ಜಾಗಕ್ಕೂ ಆಸ್ಪದವೇ ಇಲ್ಲದ ಇಂತಹ ಬೆದರಿಕೆಗಳನ್ನು ಖಂಡಿಸಿ ರೋಹಿತರ ಬೇಟೆಗಿಳಿದ ಕೂಗುಮಾರಿಗಳು ದನಿಯೆತ್ತುವರೆಂಬ ನಿರೀಕ್ಷೆಯೇ ಮೂರ್ಖತನ. ದೇಶದ ಪ್ರಜಾಸತ್ತೆಯನ್ನು ಬೀದಿರಂಪಾಟದ ಮೂಲಕ ಪದೇ ಪದೇ ಒತ್ತೆಗಿಡುವ ಈ ಬೌದ್ಧಿಕ ನಪುಂಸಕರು ವಿಶ್ವಾದ್ಯಂತ ಇಸ್ಲಾಮಿಗರಿಗೆ ಶರಣಾಗಿ ಯಾವುದೋ ಕಾಲವಾಯಿತು.

ಐವತ್ತು ದೇಶಗಳ ಪ್ರಾಬಲ್ಯ ಹೊಂದಿರುವ ಮುಸಲ್ಮಾನರಿಗೆ ಜಾಗತಿಕ ಎಡಚರ ಬೇಷರತ್ ಬೆಂಬಲವಿದೆ. ಹಿಂದೂ ಧರ್ಮಕ್ಕೆ ಅಪಚಾರ ಮಾಡಿದವರನ್ನು ತರಾಟೆಗೆ ತೆಗೆದುಕೊಳ್ಳುವ ಭರದಲ್ಲಿ ನೂಪುರ್, ಮೊಹಮದರನ್ನು ಟೀಕಿಸಿದ್ದು ನಿಜ. ಶಿವಲಿಂಗ ವನ್ನು ಬಹಿರಂಗವಾಗಿ ಅಪಹಾಸ್ಯ ಮಾಡಿದವರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಲ್ಲಿ ಅಥವಾ ಕ್ರಮ ಕೈಗೊಳ್ಳಲು ಹಿಂದೂಗಳು ಒಟ್ಟಾಗಿ ಒತ್ತಾಯ ತಂದಿದ್ದರೆ, ನೂಪುರ್ ಅಸ್ತಿತ್ವಕ್ಕೆ ಸಂಚಕಾರ ಬರುತ್ತಿರಲಿಲ್ಲ.

ನಮ್ಮೊಡನಿರುವ ಮುಸ್ಲಿಮರ ನಿಯತ್ತು ಅವರ ಧರ್ಮಕ್ಕೆ, ರಾಷ್ಟ್ರಕ್ಕಲ್ಲ ಎಂಬುದನ್ನು ನೂಪುರ್ ಪ್ರಕರಣದ ಮೂಲಕ
ಮತ್ತೊಮ್ಮೆ ಜಾಹೀರುಗೊಂಡಿರುವ ವಿಚಾರವೇ ಆತಂಕ ಹುಟ್ಟಿಸುವಂಥದ್ದು. ಈ ಸಮಸ್ಯೆಗೇ ನಾವಿನ್ನೂ ಪರಿಹಾರ ಕಂಡು ಕೊಂಡಿಲ್ಲದ ಸಂದರ್ಭದಲ್ಲಿ ಮುಸ್ಲಿಂ ಜಗತ್ತನ್ನೇ ಒಟ್ಟುಗೂಡಿಸುವುದಕ್ಕೆ ಕಾರಣವಾಗುವ ವಿವಾದ ಬೇಕಿತ್ತೇ ಎನ್ನುವ ಪ್ರಶ್ನೆ ಸಹಜ. ಆದರೆ, ಬಹುತೇಕ ಹಿಂದೂಗಳನ್ನು ಕೆರಳಿಸಿ ಒಟ್ಟುಗೂಡಿಸುವ (ಕಠಿಣ) ಸಾಧ್ಯತೆ ಇರುವಂಥ ಪ್ರಚೋದಕ ಹೇಳಿಕೆಗಳನ್ನು ನೀಡುವ ಕೇಡುಗ ಮುಸ್ಲಿಮರನ್ನು ನಿಯಂತ್ರಿಸಬೇಕಿದೆಯಲ್ಲವೇ? ನನ್ನ ವೈಯಕ್ತಿಕ ವ್ಯಾಖ್ಯಾನ ಇದು ಬ್ರಾಹ್ಮಣ ಶಿಕಾರಿ.

ಆಕೆಯ ಶಿಕಾರಿ ಇಲ್ಲಿಗೇ ನಿಲ್ಲಲಿ, ಆಕೆಗೆ ಒಡ್ಡಿರುವ ಬೆದರಿಕೆ ಕೃತಿಗೆ ಇಳಿದು ಆಕೆ ಬೇಟೆಗೆ ಒಳಗಾಗದಿರಲಿ. ಬ್ರಾಹ್ಮಣ ಶಿಕಾರಿ ಪ್ರಚಾರ ಕಾರ್ಯಕ್ರಮದಲ್ಲಿ ಪುಸ್ತಕದ ಗೌರವ ಸಂಪಾದರಾದ ಬಿ.ಎನ್. ಯಳಮಳ್ಳಿ ಅವರು ಪ್ರಧಾನಿ ಮೋದಿಯನ್ನು ಬ್ರಾಹ್ಮಣರೆಂದು ಮನೋಜ್ಞವಾಗಿ ವರ್ಣಿಸಿದರು. (ಹುಟ್ಟಿನಿಂದ ಯಾರೂ ಬ್ರಾಹ್ಮಣನಲ್ಲ ಎಂಬ ಶ್ರೀಕೃಷ್ಣನ ಉಕ್ತಿಗೆ ಅವರು ನೀಡಿದ ಜ್ವಲಂತ ನಿದರ್ಶನ ಅದಾಗಿತ್ತು) ನೂಪುರ್ ಪ್ರಕರಣದಿಂದ ಕೆರಳಿರುವ ಅನೇಕ ಹಿಂದೂಗಳು ಈಗ ಮೋದಿಯ ಬಗ್ಗೆ ಅಸಮಾಧಾನ
ವ್ಯಕ್ತಪಡಿಸುತ್ತಿರುವುದನ್ನು ನೋಡಿದಾಗ ಇದು ಮತ್ತೊಂದು ಬ್ರಾಹ್ಮಣ ಶಿಕಾರಿಯೇನೋ ಎಂದು ಸಹಜವಾಗಿ ಅನ್ನಿಸುತ್ತಿದೆ.

ಇದನ್ನು ಶಿಕಾರಿಯೇ ಎಂದು ಪರಿಗಣಿಸುವುದಾದರೆ, ಶಿಕಾರಿಯ ಪ್ರಯತ್ನಕ್ಕೆ ಅವರು ಒಳಪಡುತ್ತಿರುವುದು ಇದೇ ಮೊದಲಲ್ಲ. ಈ ಮೊದಲು ಅವರನ್ನು ಬೇಟೆಯಾಡಬಯಸಿದವರು ಹಾಗೂ ಬೇಟೆಗೆ ಯತ್ನಿಸಿ ಸೋತವರಿಗೆ ಅವರನ್ನು ಅವರ ಅನುಯಾಯಿಗಳೇ ಈಗ ಬೇಟೆಯಾಡುತ್ತಿರುವುದು ಹೃದಯಂಗಮ ದೃಶ್ಯವಾಗಿರಲಿಕ್ಕೆ ಸಾಕು. ಒಂದರ ನಂತರ ಮತ್ತೊಂದು ದೊಡ್ಡ ಸವಾಲುಗಳನ್ನು
ಎದುರಿಸುತ್ತಲೇ ಬಂದಿರುವ ಮೋದಿಯ ಇಂದಿನ ಸ್ಥಿತಿಯಲ್ಲಿ ನಾನಿದ್ದಿದ್ದರೆ ಏನು ಮಾಡುತ್ತಿದ್ದೆ ಎಂಬುದನ್ನು ವಿಚಾರ ವಂತರೆಲ್ಲರೂ ಪ್ರಶ್ನಿಸಿಕೊಳ್ಳಬೇಕು.

ರಷ್ಯಾದಿಂದ ಆಕ್ರಮಣಕ್ಕೊಳಗಾದ ಉಕ್ರೇನನ್ನು ಅಮೆರಿಕವೂ, ನೆರೆಹೊರೆಯ ನ್ಯಾಟೊ ರಾಷ್ಟ್ರಗಳೂ ಕೈಬಿಟ್ಟಿರುವುದಕ್ಕೆ
ನಾವೆಲ್ಲರೂ ಸಾಕ್ಷಿಯಾಗಿದ್ದೇವೆ. ಅವುಗಳ ಸ್ಥಿತಪ್ರಜ್ಞತೆಗೆ ಮುಖ್ಯ ಕಾರಣ ತಮ್ಮ ಇಂಧನ ಪೂರೈಕೆಗೆ ಧಕ್ಕೆಯಾಗದಂತೆ ನೋಡಿ ಕೊಳ್ಳುವುದು. ಅದಕ್ಕೆ ಭಾರತವೂ ಹೊರತಲ್ಲ. (ಆ ಒತ್ತಡದ ನಡುವೆಯೂ ರಷ್ಯಾಧ್ಯಕ್ಷ ಪುಟಿನ್‌ಗೆ ಸಮರವನ್ನು ಕೊನೆಗೊಳಿಸಲು ಮೋದಿ ಹೇಳದಿರಲಿಲ್ಲ). ಕೊಂಚ ಇಳಿಯುವ ಮುನ್ನ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳವಾಗಿದ್ದಕ್ಕೂ ಮೋದಿ ಟೀಕೆ ಗೊಳಗಾಗಬೇಕಾಯಿತು.

ಯಾವುದೇ ದೇಶದ ವಿದೇಶಿ ನೀತಿಯನ್ನು ನಿರ್ಧರಿಸುವಲ್ಲಿ ವಾಣಿಜ್ಯ ವಹಿವಾಟಿನದ್ದು ಬಲು ಮುಖ್ಯಪಾತ್ರ. ಪ್ರಧಾನಿಯಾಗಿ ಆಯ್ಕೆಯಾದ ಮೊದಲ ಕೊಲ್ಲಿ ರಾಷ್ಟ್ರ ಗಳೊಂದಿಗೆ ಭಾರತದ ಬಾಂಧವ್ಯ ಗಟ್ಟಿಗೊಳಿಸುವುದರಲ್ಲಿ ಅವರಿಟ್ಟ ಹೊಸಹೆಜ್ಜೆಗಳು ಪ್ರಶಂಸನೀಯ. ಆಮದು- ರಫ್ತಿನ ವಿಚಾರದಷ್ಟೇ ಮುಖ್ಯ ಅಲ್ಲಿ ನೆಲೆಸಿರುವ ಭಾರತೀಯರಿಂದ ಹರಿದುಬರುವ ಹಣ. ಆ ವಿಚಾರ ಬದಿಗಿಡೋಣ. ಅಲ್ಲಿರುವ ಅಸಂಖ್ಯಾತ ಭಾರತೀಯರ ಸುರಕ್ಷತೆ ಹೊಣೆ ಹೊತ್ತಿರುವುದು ಮೋದಿಯೇ. ಉಕ್ರೇನ್ ಜನರ ಮೌಲ್ಯ(!)
ವನ್ನು ನಿರ್ಧರಿಸಿದ್ದು ನ್ಯಾಟೊ ರಾಷ್ಟ್ರಗಳ ವಾಣಿಜ್ಯ ವಹಿವಾಟು ಮತ್ತು ಆರ್ಥಿಕತೆಯಷ್ಟೆ. ಹಾಗೆಯೇ, ನೂಪುರರ ಸದಸ್ಯತ್ವ ರದ್ದುಗೊಳಿಸುವುದರ ಹಿಂದೆಯೂ ಅದೇ ಅಂಶಗಳು ಪಾತ್ರವಹಿಸಿವೆ.

ಭಾರತದ ಎಲ್ಲ ರಾಜ್ಯಗಳಲ್ಲೂ ಬಿಜೆಪಿ ಆಳ್ವಿಕೆಯಿಲ್ಲ. ನೂಪುರ್ ಮೇಲೆ ಕ್ರಮ ತೆಗೆದುಕೊಳ್ಳದ ನೆಪವೊಡ್ಡಿ ಬಿಜೆಪಿ ಶತ್ರು ಪಕ್ಷಗಳು, ಮುಂದುವರಿದ ಮುಸ್ಲಿಮರ ಸಂತುಷ್ಟಿಯ ಯತ್ನದಲ್ಲಿ ಕೋಮು ದ್ವೇಷದ ಜ್ವಾಲೆಯನ್ನು ಎಬ್ಬಿಸಲು ಮುಂದಾದರೆ ದೇಶ ಮತ್ತಷ್ಟು ಕ್ಷೋಭೆಗೆ ಒಳಗಾಗುವುದು. ಆಗ ಸಂಕಷ್ಟಕ್ಕೊಳಗಾಗುವುದು ಬಹುತೇಕ ಹಿಂದೂಗಳೇ. ಅವರ ರಕ್ಷಣೆಗೆ ಮಮತಾ ಬ್ಯಾನರ್ಜಿ ಮುಂದಾದಾಳೆಯೇ? ಈ ವಿಷಯಕ್ಕೆ ಮತ್ತಷ್ಟು ಆಯಾಮ ಗಳಿವೆ, ಆದರೆ ಸ್ಥಳದ ಅಭಾವ. ಪ್ರಸಕ್ತ ಪ್ರಕರಣವನ್ನು ಯಾವ ಕೋನದಿಂದ ನೋಡಿದರೂ, ಆಯ್ಕೆಯ ಅಭಾವವಿ ರುವುದು ಕಾಣುತ್ತದೆ.

ಪಕ್ಷದಿಂದ ನೂಪುರರ ಮೇಲೆ ಕ್ರಮ ಕೈಗೊಂಡರೂ (ಅಥವಾ ಕೈಗೊಂಡಂತೆ ತೋರಿಸಿದ್ದರೂ – ಹಾಗಾಗಿರಲೆಂದು ಆಶಿಸೋಣ), ಕೈಗೊಳ್ಳದಿದ್ದರೂ ಹೆಚ್ಚಿನ ಪರಿಣಾಮವನ್ನೆದುರಿಸುವುದು ಹಿಂದೂಗಳೇ! ಸಾಂಪ್ರದಾಯಿಕವಾಗಿ ಮೋದಿ ವಿರೋಧಿಗಳಿಗೆ ಇದು
ಮನಸ್ಸಿನ ಮಂಡಿಗೆ ಬಾರಿಸುವ ಸಮಯ. ಅವರು ನನಸಿನಲ್ಲಿ ಮಂಡಿಗೆ ತಿನ್ನುವಂತಾಗದಿ ರಲಿ. ಏಕೆಂದರೆ, ಅವರಿಗೆ ಮಂಡಿಗೆ ತಿನ್ನುವ ಅವಕಾಶ ನೀಡಿ ಅಧಿಕಾರದಲ್ಲಿ ಕೂಡಿಸಿದರೆ ಮಂಡಿಗೆ ಜತೆಯಲ್ಲಿ ದೇಶವನ್ನೇ ಮುಕ್ಕಿತಿನ್ನಬಲ್ಲರು. ಆಗ ದೇಶ ಆರ್ಥಿಕ ವಾಗಿ ಕ್ಷೀಣಿಸುತ್ತದೆ.

ಚೀನಾದಂತೆ ಬೆಳೆಯಲಾಗದು. ಹಾಗೆ ಬೆಳೆಯದಿದ್ದರೆ, ಚೀನಾ ಆಡಳಿತ ತನ್ನ ದೇಶದ ಮುಸ್ಲಿಮರನ್ನು ಹದ್ದುಬಸ್ತಿನಲ್ಲಿಟ್ಟು ಕೊಂಡಂತೆ ಭಾರತ ಇಟ್ಟುಕೊಳ್ಳಲು ಸಾಧ್ಯವಿಲ್ಲ. ಕೂಗುಮಾರಿಗಳದ್ದೇ ಮೇಲುಗೈಯಾಗುತ್ತದೆ. ನಮ್ಮ ಶಿಕಾರಿ ಸಾಮೂಹಿಕ ವಾಗುತ್ತದೆ.