Sunday, 24th November 2024

ಆರ್ ಎಸ್ ಎಸ್ ಕಚೇರಿಗಳಿಗೆ ಹೆಚ್ಚಿನ ಭದ್ರತೆ: ಆರಗ ಜ್ಞಾನೇಂದ್ರ

ಶಿವಮೊಗ್ಗ : ರಾಜ್ಯದ ಆರ್ ಎಸ್ ಎಸ್ ಕಚೇರಿಗಳ ಮೇಲೆ ದಾಳಿ ಬೆದರಿಕೆ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ಎಲ್ಲ ಆರ್ ಎಸ್ ಎಸ್ ಕಚೇರಿಗಳಿಗೆ ಸೂಕ್ತ ಪೊಲೀಸ್ ರಕ್ಷಣೆ ಒದಗಿಸಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

ಉತ್ತರ ಪ್ರದೇಶದ ಎರಡು ಹಾಗೂ ಕರ್ನಾಟಕದ ನಾಲ್ಕು ಆರ್ ಎಸ್ ಎಸ್ ಕಚೇರಿಗಳನ್ನು ದ್ವಂಸ ಗೊಳಿಸುವುದಾಗಿ ವಾಟ್ಸಪ್ ಸಂದೇಶವೊಂದನ್ನು ತಮಿಳು ನಾಡಿನಿಂದ ವ್ಯಕ್ತಿ ಯೊಬ್ಬ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರಿಗೆ ಕಳಿಸಲಾಗಿದ್ದು, ಇದಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲು ಮಾಡಲಾಗಿದೆ.

ಈ ಸಂಬಂಧ, ವಾಟ್ಸಪ್ ಸಂದೇಶ ಕಳಿಸಿದ ವ್ಯಕ್ತಿಯನ್ನು ಗುರುತಿಸಲಾಗಿದ್ದು, ಆರೋಪಿತ ಸೆಂಥಿಲ್ ಎಂಬವನನ್ನು ತಮಿಳು ನಾಡಿನಲ್ಲಿ ಬಂಧಿಸಲಾಗಿದೆ. ಈ ರೀತಿಯಾಗಿ ಬೆದರಿಕೆ ಕರೆ ಅಥವಾ ಸಂದೇಶಗಳನ್ನು ಕಳಿಸುವ ದುಷ್ಕರ್ಮಿಗಳ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.

ಶಂಕಿತ ಉಗ್ರನ ಬಂಧನ: ಭಯೋತ್ಪದನೆ ಚಟುವಟಿಕೆಗಳಲ್ಲಿ ತೊಡಗಿದ್ದನೆನ್ನಲಾದ ಜಮ್ಮು ಕಾಶ್ಮೀರದ ನಿವಾಸಿ, ವ್ಯಕ್ತಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು, ರಾಜ್ಯದ ಪೊಲೀಸರೂ ಈ ಕುರಿತು ತನಿಖೆ ಆರಂಭಿಸಿದ್ದಾರೆ.

ನಗರದಲ್ಲಿ ನೆಲಸಿದ್ದ ಶಂಕಿತ ಉಗ್ರರಿಗೆ ಆಶ್ರಯ ನೀಡಿದ್ದ ವ್ಯಕ್ತಿಗಳು ಹಾಗೂ ಸಂಸ್ಥೆಗಳ ಬಗ್ಗೆ ತನಿಖೆ ನಡೆಯುತ್ತಿದ್ದು ಕರ್ನಾಟಕ ರಾಜ್ಯ ಪೊಲೀಸರು, ಜಮ್ಮು ಕಶ್ಮೀರ ರಾಜ್ಯದ ಪೋಲೀಸರ ಜತೆ ಸಮನ್ವಯ ಸಾಧಿಸಿ ತನಿಖೆಯನ್ನು ತೀವ್ರ ಗೊಳಿಸಿದ್ದಾರೆ.

ಬಂಧಿಸಲಾದ, ಶಂಕಿತ ಉಗ್ರನಿಗೆ ನೆಲಸಲು ಅವಕಾಶ ಮಾಡಿಕೊಟ್ಟಿದ್ದಲ್ಲದೆ ಮೊಬೈಲ್ ಫೋನ್ ಪಡೆಯಲು, ಹಾಗೂ ಇತರ ದಾಖಲೆಗಳನ್ನು ಪಡೆಯಲು ಸ್ಥಳೀಯರೂ, ಸಹಾಯ ಮಾಡಿದ್ದಾರೆ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದ್ದು, ತಪ್ಪಿತಸ್ಥರ ವಿರುದ್ಧ ಮೊಕದ್ದಮೆ ದಾಖಲಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು.

ಜಮ್ಮು ಕಾಶ್ಮೀರದ ಉಗ್ರನನ್ನು ಪತ್ತೆ ಹಚ್ಚಲು ರಾಜ್ಯದ ಪೊಲೀಸರೂ ಸಹಕರಿಸಿದ್ದು, ಹೆಚ್ಚಿನ ವಿಚಾರಣೆಗಾಗಿ, ರಾಜ್ಯದ ಪೊಲೀಸರು ಜಮ್ಮು ಕಾಶ್ಮೀರದ ಪೊಲೀಸರೊಂದಿಗೆ ಸಂಪರ್ಕ ಹೊಂದಿದ್ದು, ತನಿಖೆ ಮುಂದುವರೆದಿದೆ.