Monday, 25th November 2024

ವೈಚಾರಿಕ ದಾರಿದ್ರ‍್ಯದ ಕಾಂಗ್ರೆಸ್‌ಗೆ ದೇಶ ಕಟ್ಟುವುದು ಬೇಕಿಲ್ಲ

ಬಿ.ಸಿ.ನಾಗೇಶ್, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

ಸಂದರ್ಶನ: ರಂಜಿತ್ ಎಚ್.ಅಶ್ವತ್ಥ

ಬಿಜೆಪಿ ಎಂದಿಗೂ ಪಠ್ಯದ ವಿಷಯದಲ್ಲಿ ರಾಜಕೀಯ ಮಾಡಿಲ್ಲ, ಪ್ರತಿಷ್ಠೆ ಇಲ್ಲ: ಶಿಕ್ಷಣ ಸಚಿವ ಬಿ.ಸಿ. ನಾಗೇಶ್

ಕಾಂಗ್ರೆಸ್‌ನವರು ಪಠ್ಯ ಪರಿಷ್ಕರಣೆ ಮಾತ್ರವಲ್ಲ. ದೇಶ ಕಟ್ಟುವ ಪ್ರತೀ ಕೆಲಸಕ್ಕೂ ಅಡ್ಡಿ ಒಡ್ಡುತ್ತಾರೆ. ಅವರಿಗೆ ದೇಶ ಕಟ್ಟುವುದು ಬೇಡ ವಾಗಿದೆ. ತಮ್ಮ ಮತಬ್ಯಾಂಕ್‌ಗಾಗಿ ದೇಶ ಒಡೆದು ಹೋದರೂ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಪಠ್ಯ ಪರಿಷ್ಕರಣೆಯಲ್ಲಿ ಕೆಲವರು ಮೂಡಿಸಿರುವ ಗೊಂದಲವೂ ಇದರ ಭಾಗವೇ. ಈ ವಿಷಯದಲ್ಲಿ ನನ್ನನ್ನು ಒಬ್ಬಂಟಿ ಯನ್ನಾಗಿ ಪಕ್ಷ ಮಾಡಿಲ್ಲವೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದರು. ಪಠ್ಯ ಪರಿಷ್ಕರಣಾ ಸಮಿತಿ ಬರ್ಖಾಸ್ತು, ಗೊಂದಲ, ಕಾಂಗ್ರೆಸ್ ಟೀಕೆ, ತಮ್ಮ ಮೇಲಿನ ದಾಳಿ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ‘ವಿಶ್ವವಾಣಿ’ ಯೊಂದಿಗೆ ಮಾತನಾಡಿದ ಅವರು, ಹಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಸಂದರ್ಶನದ ಪೂರ್ಣ ಪಾಠ ಇಲ್ಲಿದೆ.

ಸಮಿತಿಯನ್ನು ಬರ್ಖಾಸ್ತು ಮಾಡಿದ್ದು ಸರಿ ಎನಿಸುವುದೇ?
– ಪಠ್ಯ ಪರಿಷ್ಕರಣಾ ಸಮಿತಿಯನ್ನು ಗೊಂದಲದ ಕಾರಣಕ್ಕಾಗಿ ಬರ್ಖಾಸ್ತು ಮಾಡಿರುವು ದಲ್ಲ. ಬದಲಿಗೆ ಅದರ ಕೆಲಸ ಮುಗಿದ ಕಾರಣಕ್ಕಾಗಿ ಅದನ್ನು ವಜಾಗೊಳಿಸಲಾಗಿದೆ. ಇನ್ನು ಪಿಯುಸಿಯಲ್ಲಿ ಕೇವಲ ಒಂದು ಪಠ್ಯವನ್ನು ಪರಿಷ್ಕರಣೆಗೆ ಹೇಳಲಾಗಿತ್ತು. ಆದರೆ ಆ ವಿಷಯ ವನ್ನು ಇದೀಗ ಕೈಬಿಡಲಾಗಿದೆಯಷ್ಟೇ.

ರಾಜಕೀಯ ಮೇಲಾಟದಿಂದ ಮಕ್ಕಳಿಗೆ ಗೊಂದಲವಾಗುವುದಿಲ್ಲವೇ? 
– ವಿದ್ಯಾರ್ಥಿಗಳಿಗೆ ಯಾವುದೇ ಗೊಂದಲವಿಲ್ಲ. ಮಕ್ಕಳೆಲ್ಲ ಕಲಿಕಾ ಚೇತರಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. 15 ದಿನ ಮೊದಲೇ ಶಾಲೆಯನ್ನು ಆರಂಭಿಸಿದ್ದರಿಂದ ಮಕ್ಕಳು ಖುಷಿಯಾಗಿ ಬರುತ್ತಿದ್ದಾರೆ. ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಆದರೆ ಕಾಂಗ್ರೆಸ್‌ನವರು ತಾವೇ ಗೊಂದಲ ಸೃಷ್ಟಿಸಿ, ಗೊಂದಲ ಸೃಷ್ಟಿಯಾಗುತ್ತಿದೆ ಎಂದು ಹೇಳಿಕೊಂಡು ಓಡಾಡುತ್ತಿದ್ದಾರೆ. ಕಾಂಗ್ರೆಸ್ ಮಾಡುತ್ತಿರುವ ಈ ಮೇಲಾಟ ರಾಜ್ಯದ ಜನರಿಗೆ ಗೊತ್ತಾಗುತ್ತಿದೆ.

ಪಠ್ಯದಲ್ಲಿ ಗೊಂದಲದ ಅಗತ್ಯವೇನಿತ್ತು?

ಪಠ್ಯದಲ್ಲಿ ಮಾತ್ರವಲ್ಲ, ಇಡೀ ದೇಶದಲ್ಲಿ ಗೊಂದಲ ಮೂಡಿಸುವ ಕೆಲಸವನ್ನು ಕಾಂಗ್ರೆಸ್ ಮಾಡುತ್ತಿದೆ. ಏಕೆಂದರೆ ಕಾಂಗ್ರೆಸ್‌ಗೆ ಪ್ರತಿಪಕ್ಷ ವಾಗಿ ಕೆಲಸ ಮಾಡಿ ಗೊತ್ತಿಲ್ಲ. ಆರೇಳು ದಶಕಗಳ ಕಾಲ ಆಡಳಿತ ಪಕ್ಷದಲ್ಲಿಯೇ ಕುಳಿತಿದ್ದ ಕಾಂಗ್ರೆಸ್‌ಗೆ ಪ್ರತಿಪಕ್ಷವಾಗಿ ಹೇಗಿರಬೇಕು ಎಂಬ ಕನಿಷ್ಠ ಜ್ಞಾನವೂ ಇಲ್ಲ. ಆರಂಭದಲ್ಲಿ ಅದಕ್ಕೊಂದು ವೈಚಾರಿಕತೆಯಿತ್ತು. ಆದರೀಗ ಅದು ಉಳಿದಿಲ್ಲ. ಸಿದ್ದರಾಮಯ್ಯ ಅವರು ಕಾಂಗ್ರೆಸ್‌ಗೆ ಬರುವ ತನಕ ಇದ್ದ ಪಕ್ಷಕ್ಕೂ, ಈಗಿರುವ ಪಕ್ಷಕ್ಕೂ ಅಜಗಜಾಂತರವಿದೆ. ಈಗ ವ್ಯಕ್ತಿಯ ವಿಷಯವನ್ನೇ ಕಾಂಗ್ರೆಸ್ ವಿಷಯವ
ನ್ನಾಗಿಸಿಕೊಂಡಿದ್ದಾರೆ. ಆದ್ದರಿಂದ ಕಾಂಗ್ರೆಸ್‌ಗೆ ಏನೂ ಸಿಗದಿದ್ದಾಗ, ಗೊಂದಲ ಸೃಷ್ಟಿಸುತ್ತಾರೆ. ವಿವಾದ ಸೃಷ್ಟಿಸಲು ವಿಷಯವಿಲ್ಲದಿರು ವಾಗ, ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಾರೆ. ಆರ್‌ಎಸ್‌ಎಸ್‌ಗೂ ರಾಜಕೀಯಕ್ಕೂ ಸಂಬಂಧವಿಲ್ಲ ಎನ್ನುವುದನ್ನು ಅರ್ಥ ಮಾಡಿ ಕೊಳ್ಳುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲವಾಗಿದೆ. ಏಕೆಂದರೆ ಇವರ ವೊಟು ಭದ್ರವಾಗಿಟ್ಟುಕೊಳ್ಳಲು ಏನಾದರೂ ಮಾಡುತ್ತಾರೆ. ದೇಶಕ್ಕಿಂತ ಹೆಚ್ಚಾಗಿ ಅಧಿಕಾರಕ್ಕಾಗಿ ಏನಾದರೂ ಮಾಡುತ್ತಾರೆ. ಈ ಹಿಂದೆ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪರಿಷ್ಕರಣೆ ಮಾಡಿ ದಾಗಲೂ ಹಲವು ಲೋಪಗಳಿದ್ದವು. ಆದರೆ ಬಿಜೆಪಿ ಅದನ್ನು ರಾಜಕೀಯ ದಾಳವನ್ನಾಗಿಸಿಕೊಳ್ಳಲಿಲ್ಲ. ಮಕ್ಕಳ ವಿಷಯದಲ್ಲಿ ರಾಜಕೀಯ
ಮಾಡುವುದು ಬೇಡ ಎನ್ನುವ ಕಾರಣಕ್ಕಾಗಿ ಸುಮ್ಮನಿದ್ದೆವು.

ಪಠ್ಯ ಪರಿಷ್ಕರಣಾ ಸಮಿತಿಯ ವಿರುದ್ಧ ಹಲವು ದೂರುಗಳಿವೆಲ್ಲ?
ಕಾಂಗ್ರೆಸ್‌ನವರು ರಾಜಕೀಯ ಲಾಭಕ್ಕಾಗಿ ಕೆಲ ಗೊಂದಲ ಸೃಷ್ಟಿಸುತ್ತಿದ್ದಾರೆ. ಆದರೆ, ಅವರು ಹೇಳಿರುವುದೆಲ್ಲ ಸುಳ್ಳು ಎಂಬುದು ಈಗಾಗಲೇ ಸಾಬೀತಾಗಿದೆ. ಮೊದಲಿಗೆ ಭಗತ್ ಸಿಂಗ್ ಪಠ್ಯವಿಲ್ಲ, ಬಸವಣ್ಣನವರ ಪಠ್ಯವಿಲ್ಲ, ನಾರಾಯಣ ಗುರು ಪಠ್ಯವಿಲ್ಲ ಎಂದು ಹೇಳಿದರು. ಅದು ಸುಳ್ಳು ಎಂದು ಸಾಬೀತಾಯಿತು. ಅದಾದ ಬಳಿಕ ಕುವೆಂಪು ಅವರಿಗೆ ಅಪಮಾನ ಮಾಡಿದ್ದಾರೆ ಎಂದು ಹೇಳಿದರು. ಆದರೆ, ಅದನ್ನು ನಿಜವಾಗಿಯೂ ಮಾಡಿರುವುದು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಎಂದು ತಿಳಿದ ಬಳಿಕ ಸುಮ್ಮನಾದರು. ಯಾವುದೇ
ಲೋಪವಾಗಿದ್ದರೂ, ಅದನ್ನು ಸರಿಪಡಿಸುವ ಮುಕ್ತ ಮನಸ್ಸಿನಲ್ಲಿದ್ದೇವೆ ಎಂದು ಹೇಳಿದ ಬಳಿಕವೂ, ಅದೇ ವಿಷಯವಾಗಿ ಮಾತನಾಡು ತ್ತಿದ್ದಾರೆ ಎಂದರೆ ಸಮಸ್ಯೆಯಿರುವುದು ಪರಿಷ್ಕರಣೆಯಲ್ಲಿ ಅಲ್ಲ. ಹಿಂದೂ ಸಮಾಜ ಎಲ್ಲಿ ಒಂದಾಗುತ್ತದೆಯೋ ಎನ್ನುವ ಆತಂಕದಿಂದ ಈ ರೀತಿ ಮಾಡುತ್ತಿದ್ದಾರೆ. ಈಗಾಗಲೇ ಪಂಚರಾಜ್ಯದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಆದ್ದರಿಂದ ಈ ರೀತಿ ಮಾಡುತ್ತಿದ್ದಾರೆ. ಇದರಿಂದ ಈ ಹಿಂದೆ ಹಿಜಾಬ್ ವಿಷಯದಲ್ಲಿ ಆದಂತೆಯೇ ಅವರಿಗೆ ತಿರುಗುಬಾಣವಾಗಲಿದೆ.

ಮಕ್ಕಳ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರಾ?
ಬಿಜೆಪಿ ಎಂದಿಗೂ ಪಠ್ಯದ ವಿಷಯದಲ್ಲಿ ರಾಜಕೀಯ ಮಾಡಿಲ್ಲ. ಈ ಹಿಂದಿನ ಪರಿಷ್ಕರಣೆಯಲ್ಲಿ ಆಗಿದ್ದ ಲೋಪಗಳು ಗಮನಕ್ಕೆ
ಬಂದರೂ, ನಾವು ಮಾತನಾಡಲಿಲ್ಲ. ಏಕೆಂದರೆ ಶಿಕ್ಷಣದಲ್ಲಿ ರಾಜಕೀಯ ಮಾಡಬಾರದು ಎನ್ನುವ ಕಾರಣಕ್ಕೆ ಸುಮ್ಮನಿದ್ದೆವು. ಆದ್ದರಿಂದ
ಮಕ್ಕಳಿಗೆ ಏನಾದರೂ ತೊಂದರೆಯಾಗಿದ್ದರೆ ಅದು ಕಾಂಗ್ರೆಸ್‌ನಿಂದ. ಬಿಜೆಪಿಯವರು ಸಾಧ್ಯವಾದಷ್ಟು ಸೂಕ್ಷ್ಮವಾಗಿ ಸಮಸ್ಯೆಯನ್ನು
ಇತ್ಯರ್ಥಪಡಿಸಲು ಪ್ರಯತ್ನಿಸಿದೆ. ಬರಗೂರು ಸಮಿತಿಯಲ್ಲಿ ಕುವೆಂಪು, ಅಂಬೇಡ್ಕರ್ ಅವರನ್ನು ಕೈಬಿಟ್ಟರೂ ಹೇಳಲಿಲ್ಲ. ಭಾರತ ಮಾತೆಯ ಪದ್ಯ, ಸಂದೀಪ್ ಉನ್ನಿಕೃಷ್ಣನ್ ಅವರ ಪಾಠವನ್ನು ಕೈಬಿಟ್ಟರೂ ನಾವು ಮಾತನಾಡಲಿಲ್ಲ. ಅವರು ಕೇವಲ ಇಸ್ಲಾಂ, ಕ್ರಿಶ್ಚಿ
ಯನ್ ಧರ್ಮದ ಪರಿಚಯ ಮಾಡಿಸಿ, ದೇಶದ 90ರಷ್ಟು ಜನರಿರುವ ಹಿಂದೂ ಧರ್ಮದ ಬಗ್ಗೆ ಮಾಹಿತಿ ನೀಡದಿದ್ದರೂ ಅದನ್ನು ನಾವು ಪ್ರಶ್ನಿಸಲಿಲ್ಲ.

ಹಾಗಾದರೆ ತಪ್ಪು ಇದ್ದರೂ ನೀವು ಸುಮ್ಮನಿದ್ದೀರಾ?
ಇಲ್ಲ. ನಾವು ತಪ್ಪುಗಳನ್ನು ಸರಿಪಡಿಸಿ ಪರಿಷ್ಕೃತ ಪಠ್ಯದಲ್ಲಿ ನೀಡಿದ್ದೇವೆ. ಆದರೆ ನಾವು ಸರಿಪಡಿಸಿದ್ದನ್ನು ಬಹಿರಂಗವಾಗಿ ಹೇಳಿಕೊಂಡು ರಾಜಕೀಯ ಲಾಭ ಪಡೆಯಲಿಲ್ಲ. ನಾವು ಲಾಭ ಪಡೆಯಬೇಕು ಎಂದಿದ್ದರೆ, ಕೆಂಪೇಗೌಡರ ಬಗ್ಗೆ ಹೇಳಿದ್ದು ನಾವು, ಟಿಪ್ಪುವಿನ ವೈಭವೀ ಕರಣದ ಬಗ್ಗೆ ಧ್ವನಿ ಎತ್ತಬಹುದಾಗಿತ್ತು. ಮೈಸೂರಿನ ಸಂಸ್ಥಾನದ ಬಗ್ಗೆ ಹೇಳದೇ ಅಗೌರವ ತೋರಿದ್ದಾರೆ ಎನ್ನಬಹುದಾಗಿತ್ತು. ಆದರೆ ನಾವು ಅದನ್ನು ಮಾಡಲಿಲ್ಲ. ತಪ್ಪು ಮಾಡಿದ್ದನ್ನು ಸರಿಪಡಿಸುವ ಕೆಲಸವನ್ನು ಮಾತ್ರ ನಾವು ಮಾಡಿದೆವು. ಕಾಂಗ್ರೆಸ್‌ನವರು
ಜಾತಿ- ಜಾತಿ ಗಳ ನಡುವೆ ವಿಷ ಬೀಜ ಬಿತ್ತುವ ಕೆಲಸ ಮಾಡಿದ್ದಾರೆ. ಹಿಂದಿನಿಂದಲೂ ಮಾಡಿಕೊಂಡು ಬಂದಿದ್ದನ್ನು ಮುಂದುವರಿಸಿ ಕೊಂಡು ಹೋಗುತ್ತಿದ್ದಾರೆ.

ಈ ಹಂತದಲ್ಲಿ ಪಠ್ಯ ಪರಿಷ್ಕರಣೆ ಮಾಡುತ್ತಾ ಕೂರಲು ಸಾಧ್ಯವೇ?

ನಾವು ಈಗಾಗಲೇ ಸ್ಪಷ್ಟಪಡಿಸಿದ್ದೇವೆ, ಬಸವಣ್ಣನವರ ಬಗ್ಗೆ ಬರಗೂರು ರಾಮಚಂದ್ರಪ್ಪ ಅವರ ಹೇಳಿದ್ದ ನಾಲ್ಕೈದು ಸಾಲುಗಳನ್ನು ಪುನಃ ಸೇರಿಸುತ್ತಿದ್ದೇವೆ. ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ‘ಸಂವಿಧಾನ ಶಿಲ್ಪಿ’ ಎನ್ನುವುದನ್ನು ಸೇರಿಸುತ್ತಿದ್ದೇವೆ. ಅದನ್ನು ಪರಿಷ್ಕರಣೆ ಯಾಗಿರುವ ವಿಷಯದಲ್ಲಿ ಲೋಪವಾಗಿದ್ದರೆ, ಅದನ್ನು ಸರಿಪಡಿಸಿಕೊಳ್ಳುತ್ತೇವೆ. ಮಕ್ಕಳ ಅಭ್ಯಾಸಕ್ಕೆ ಯಾವುದೇ ಸಮಸ್ಯೆಯಾಗದಂತೆ ಎಚ್ಚರ ವಹಿಸುತ್ತೇವೆ. ಪಠ್ಯಪುಸ್ತಕ ಪುನಾರಚನೆಯಿಲ್ಲ, ಬದಲಾವಣೆಯೂ ಇಲ್ಲ.

ಹಾಗಾದರೆ ಮಕ್ಕಳ ಕೈಗೆ ಪಠ್ಯ ಸೇರುವುದು ಯಾವಾಗ?

ಇದೇ ಮೊದಲ ಬಾರಿಗೆ ಶಾಲೆ ಆರಂಭವಾದ ದಿನವೇ ಕೊಡಲು ಸಿದ್ಧತೆ ನಡೆಸಿಕೊಂಡಿದ್ದೇವೆ. ನಮ್ಮ ಸರಕಾರ, ಕಲಿಕಾ ಚೇತರಿಕಾ
ಕಾರ್ಯಕ್ರಮ ಮುಗಿಯುವುದರೊಳಗಾಗಿ ಎಲ್ಲ ಮಕ್ಕಳಿಗೆ ಪಠ್ಯ ಪುಸ್ತಕವನ್ನು ನೀಡುತ್ತೇವೆ. ಈ ಹಿಂದೆ ಸಿದ್ದರಾಮಯ್ಯ ಅವರ ಸರಕಾರದ ಅವಽಯಲ್ಲಿ ಪಠ್ಯ ಪುಸ್ತಕನ್ನು ಯಾವಾಗ ನೀಡಿದ್ದರು ಎನ್ನುವುದನ್ನು ಅವರೇ ಹೇಳಬೇಕು.

ಹಾಗಾದರೆ ಬರಗೂರು ಸಮಿತಿಯ ತಪ್ಪಿರುವ ಪಠ್ಯವನ್ನೇ ಮುಂದುವರಿಸುತ್ತೀರಾ?
ನಾವು ತಪ್ಪಿದೆ ಎಂದು ಹೇಳಿಲ್ಲ. ಪಠ್ಯಪುಸ್ತಕದಲ್ಲಿ ಬರಗೂರು ರಾಮಚಂದ್ರಪ್ಪ ಅವರು ಮಾಡಿರುವ ಹಲವು ಬದಲಾವಣೆಗಳನ್ನು ಉಳಿಸಿ ಕೊಂಡಿದ್ದೇವೆ. ಉಳಿಸಿಕೊಂಡಿರುವ ಬಗ್ಗೆ ಅಥವಾ ತೆಗೆದಿರುವ ಬಗ್ಗೆ ಅವರು ಮಾತನಾಡುತ್ತಿಲ್ಲ. ಆದರೆ ಅವರು ರಾಜಕೀಯ ಹುನ್ನಾರ ಇಟ್ಟುಕೊಂಡು, ಪದಗಳನ್ನು ಪ್ರಸ್ತಾಪಿಸಿ ವಿವಾದ ಮಾಡುತ್ತಿದ್ದಾರೆಯೇ ಹೊರತು, ಸಾರಾಂಶದ ಬಗ್ಗೆಯಲ್ಲ. ಉದಾಹರಣೆಗೆ, ಬಸವಣ್ಣ ನವರ ಪಠ್ಯದಲ್ಲಿ ಹೊಸ ಸಮಿತಿಗೂ ಹಳೇ ಸಮಿತಿಗೂ ನಾಲ್ಕೈದು ಪದಗಳ ವ್ಯತ್ಯಾಸವಿದೆಯಷ್ಟೆ.

ಶೈಕ್ಷಣಿಕ ಸ್ಥಳದಲ್ಲಿ ಸದಾ ಒಂದಿಲ್ಲೊಂದು ವಿವಾದ ಸೃಷ್ಟಿಯಾಗುತ್ತಲೇ ಇದೆಯಲ್ಲ?

ರಾಜ್ಯದಲ್ಲಿ ಶುರುವಾದ ಹಿಜಾಬ್ ವಿಷಯವಾಗಲಿ, ಪಠ್ಯ ಗೊಂದಲವಾಗಲಿ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆಯಾಗಿಲ್ಲ. ಮಕ್ಕಳು ಈ ವಿಚಾರದಲ್ಲಿ ಮಾನಸಿಕವಾಗಿ ತಲೆಹಾಕಿಲ್ಲ. ಹಿಜಾಬ್ ವಿಷಯದಲ್ಲಿ ಮಕ್ಕಳಿಗಿಂತ ಕಾಂಗ್ರೆಸ್ ಹೇಗೆ ನಡೆದುಕೊಂಡಿದೆ ಎನ್ನುವುದನ್ನು
ಎಲ್ಲರೂ ನೋಡಿದ್ದಾರೆ. ಹೈಕೋರ್ಟ್ ತ್ರಿಸದಸ್ಯ ಪೀಠ ಆದೇಶ ನೀಡಿದ ಬಳಿಕವೂ, ಕಾಂಗ್ರೆಸ್ ಹಿಜಾಬ್‌ಗೆ ಅವಕಾಶ ನೀಡಬೇಕು ಎಂದು ಹೇಳಿತ್ತು. ಅದು ಬಿಜೆಪಿ ವಿರುದ್ಧ ಮಾತಾನಾಡಿದ್ದಲ್ಲ. ನ್ಯಾಯಾಲಯದ ವಿರುದ್ಧ ಮಾತನಾಡಿದ್ದು. ಇದನ್ನು ನೋಡಿದರೆ, ಅವರು ವೋಟಿ ಗಾಗಿ ಏನು ಬೇಕಾದರೂ ಮಾಡುತ್ತಾರೆ ಎನ್ನುವುದು ಸ್ಪಷ್ಟವಾಗುತ್ತದೆ.

ನಿಮ್ಮ ಮನೆಯ ಮೇಲೆ ದಾಳಿ ಮಾಡಿದ್ದನ್ನು ಕಾಂಗ್ರೆಸ್ ಸಮರ್ಥಿಸಿಕೊಳ್ಳುತ್ತಿದೆಯಲ್ಲ?
ತಿಪಟೂರಿನಲ್ಲಿ ನನ್ನ ಮನೆಯ ಮೇಲೆ ದಾಳಿ ನಡೆಸಿದ್ದವರಲ್ಲಿ ಒಬ್ಬರೂ ವಿದ್ಯಾರ್ಥಿಗಳಲ್ಲ. ದಾಳಿ ನಡೆಸಿದ ಸಮಯದಲ್ಲಿದ್ದವರಲ್ಲಿ ಒಬ್ಬ ಮಾತ್ರ ತಿಪಟೂರಿನವನು. ದಾಳಿ ಮಾಡಲು ಬಂದವರಲ್ಲಿ ಒಬ್ಬೊಬ್ಬರ ಮೇಲೆ ಎಷ್ಟು ಪ್ರಕರಣಗಳನ್ನು ಸಿದ್ದರಾಮಯ್ಯ ಅವರ ಕಾಲ ದಲ್ಲಿಯೇ ಹಾಕಲಾಗಿದೆ ಎನ್ನುವ ಮಾಹಿತಿ ಬಿಡುಗಡೆ ಮಾಡುತ್ತೇವೆ. ಅವರನ್ನು ವಿದ್ಯಾರ್ಥಿಗಳು ಎಂದು ಕರೆಯಬೇಕಾ ಎನ್ನುವ ಪ್ರಶ್ನೆ
ಮೂಡುತ್ತದೆ.

ಅದೆಲ್ಲ ಹೋಗಲಿ, ಅವರು ಬೆಂಕಿ ಇಡಲು ಏಕೆ ಬಂದರು?
ಬೆಂಕಿ ಇಡಲು ಬಂದಿರುವುದನ್ನು ಅವರೇ ಒಪ್ಪಿಕೊಂಡಿದ್ದಾರೆ. ಈ ಹಿಂದೆ ಅವರ ಶಾಸಕರ ಮನೆಯ ಮೇಲೆ ಬೆಂಕಿ ಇಟ್ಟಾಗ ಸಿದ್ದರಾಮಯ್ಯ ಅವರಿಗೆ ಹೇಳಿ ಹೋಗಿದ್ದರಾ? ಯಾರು ಮನೆಯೊಳಗೆ ನುಗ್ಗುವ ಸಂಸ್ಕೃತಿಯನ್ನು ಒಪ್ಪಿಕೊಳ್ಳುತ್ತಾರೆಯೋ ಅವರು ಅರಾಜಕತೆಯನ್ನು ಸ್ವಾಗತಿಸುತ್ತಿದ್ದಾರೆ ಎಂದರ್ಥ. ಈ ರೀತಿಯ ವರ್ತನೆಯನ್ನು ಸಮರ್ಥಿಸಿಕೊಳ್ಳುತ್ತಾರೆ ಎಂದರೆ ಅವರ ಮನಸ್ಥಿತಿ ಹೇಗಿದೆ ಎನ್ನುವುದು
ಅರ್ಥವಾಗುತ್ತದೆ.

ಕಾಂಗ್ರೆಸ್, ಬಿಜೆಪಿ ಮಕ್ಕಳ ವಿಷಯದಲ್ಲಿ ರಾಜಕೀಯ ಮಾಡುತ್ತಿವೆಯಾ?
– ಬಿಜೆಪಿ ಎಂದಿಗೂ ಪಠ್ಯದ ವಿಷಯದಲ್ಲಿ ರಾಜಕೀಯ ಮಾಡಿಲ್ಲ. ಈ ಹಿಂದಿನ ಪರಿಷ್ಕರಣೆಯಲ್ಲಿ ಆಗಿದ್ದ ಲೋಪಗಳು ಗಮನಕ್ಕೆ ಬಂದಿ ದ್ದರೂ ಆಗ ನಾವು ಮಾತನಾಡಿರಲಿಲ್ಲ. ಶಿಕ್ಷಣದಲ್ಲಿ ರಾಜಕೀಯ ಮಾಡಬಾರದು ಎನ್ನುವ ಒಂದೇ ಕಾರಣಕ್ಕೆ ಸುಮ್ಮನಿದ್ದೆವು. ಈಗಲೂ ಮಾತನಾಡಿರಲಿಲ್ಲ. ಹೀಗಾಗಿ ಮಕ್ಕಳಿಗೆ ಏನಾದರೂ ತೊಂದರೆಯಾಗಿದ್ದರೆ ಅದು ಗದ್ದಲ ಎಬ್ಬಿಸುತ್ತಿರುವ ಕಾಂಗ್ರೆಸ್‌ನಿಂದ. ಸಾಧ್ಯ ವಾದಷ್ಟು, ಸೂಕ್ಷ್ಮವಾಗಿ ಸಮಸ್ಯೆ ಇತ್ಯರ್ಥಪಡಿಸಲು ಬಿಜೆಪಿ ಸರಕಾರ ಪ್ರಯತ್ನಿಸಿದೆ. ಬರಗೂರು ಸಮಿತಿಯಲ್ಲಿ ಕುವೆಂಪು, ಅಂಬೇಡ್ಕರ್ ಅವರನ್ನು ಕೈಬಿಟ್ಟರೂ ಹೇಳಲಿಲ್ಲ.

ಭಾರತ ಮಾತೆಯ ಪದ್ಯ, ಸಂದೀಪ್ ಉನ್ನಿಕೃಷ್ಣನ್ ಅವರ ಪಾಠವನ್ನು ಕೈಬಿಟ್ಟರೂ ನಾವು ಮಾತನಾಡಲಿಲ್ಲ. ಅವರು ಕೇವಲ ಇಸ್ಲಾಂ, ಕ್ರಿಶ್ಚಿಯನ್ ಧರ್ಮದ ಪರಿಚಯ ಮಾಡಿಸಿ, ದೇಶದ 90ರಷ್ಟು ಜನರಿರುವ ಹಿಂದು ಧರ್ಮದ ಬಗ್ಗೆ ಮಾಹಿತಿ ನೀಡದಿದ್ದರೂ ಅದನ್ನು ನಾವು ಪ್ರಶ್ನಿಸಲಿಲ್ಲ.

ಶಾಲಾ ಹಂತದಲ್ಲಿ ಪಂಥಗಳ ಅಗತ್ಯ ನಿಜಕ್ಕೂ ಇದೆಯಾ?

– ಖಂಡಿತವಾಗಿಯೂ ಇಲ್ಲ. ಆದರೆ ಕಲಿಸುವಾಗ ಸತ್ಯವನ್ನು ಕಲಿಸಬೇಕು. ಸಮಾಜದಲ್ಲಿ ಯಾವ್ಯಾವ ತಪ್ಪುಗಳಿದ್ದವು, ಅದರ ವಿರುದ್ಧ ಹೋರಾಡಿದವರ ಬಗ್ಗೆ ಹಾಕಲೇಬೇಕು, ವಿದ್ಯಾರ್ಥಿಗಳಿಗೆ ತಿಳಿಸಲೇಬೇಕು. ಏಕೆಂದರೆ ವ್ಯವಸ್ಥೆಯನ್ನು ಸರಿಪಡಿಸಬೇಕು ಎಂದರೆ ಅದನ್ನು ಸರಿಪಡಿಸಬೇಕು. ದೇಶದಲ್ಲಿ ಯಾವುದರ ಮೇಲೆ ನಂಬಿದೆ ಎನ್ನುವುದನ್ನು ತಿಳಿಸಬೇಕು. ಪರಿವರ್ತನೆ ಜಗದ ನಿಯಮ. ಯಾವುದಿತ್ತೋ ಅದನ್ನು ಕಲಿಸಬೇಕು ಎನ್ನುವ ಹಠಕ್ಕಿಂತ, ಶ್ರೀ ಕೃಷ್ಣ ಹೇಳಿದಂತೆ ಅಧರ್ಮ ಹೆಚ್ಚಾದಾಗ, ಧರ್ಮವನ್ನು ಸ್ಥಾಪಿಸಲು ಸಜ್ಜಾಗಲೇಬೇಕು. ಅಂದಿನ ದಿನಕ್ಕೆ ಅನುಗುಣವಾಗಿ ಪರಿಷ್ಕರಣೆಯನ್ನು ಒಪ್ಪಿಕೊಳ್ಳಲೇಬೇಕು.

ನಿಮ್ಮನ್ನು ಒಬ್ಬಂಟಿಯನ್ನಾಗಿಸಿದರಾ?
– ಖಂಡಿತ ಇಲ್ಲ. ಈಗಲೂ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ಮಾತನಾಡಿದ್ದಾರೆ. ಆ ರೀತಿ ಏನು ಮಾಡಿಲ್ಲ. ನನಗೆ ಎಂದು ಒಂಟಿ ಎಂದು ಅನಿಸಿಲ್ಲ. ಏಕೆಂದರೆ ಒಮ್ಮೆ ನನಗೆ ಪೂರ್ಣ ಜವಾಬ್ದಾರಿ ನೀಡಿದಾಗ ಅದನ್ನು ನಿಭಾಯಿಸಬೇಕು. ಪಕ್ಷಕ್ಕೆ ಹಾಗೂ ಸಂಘ ಪರಿವಾರಕ್ಕೆ ನಾನು ನುಣುಚಿಕೊಳ್ಳುವ ವ್ಯಕ್ತಿಯಲ್ಲ ಎನ್ನುವುದು ಗೊತ್ತಿತ್ತು ಹಾಗೂ ಆತ್ಮಸಾಕ್ಷಿಗೆ ಕೆಲಸ ಮಾಡುವ ವ್ಯಕ್ತಿ ಎನ್ನುವುದು ತಿಳಿದಿತ್ತು.

೦೦೦

ಕಾಂಗ್ರೆಸ್ ನವರು ಮಾಡುತ್ತಿರುವ ಅರ್ಥವಿಲ್ಲದ ಹೋರಾಟವನ್ನು ನೋಡಿದಾಗ, ಜೆಎನ್‌ಯು ಮಾದರಿಯಲ್ಲಿ ದೇಶವನ್ನು ಒಡೆಯಬೇಕು
ಎನ್ನುವ ಹುನ್ನಾರ ಕಾಣುತ್ತಿದೆ. ರೋಹಿತ್ ಚಕ್ರತೀರ್ಥ ಅವರನ್ನು ಸಮಿತಿಗೆ ನೇಮಿಸಿ ಒಂದು ವರ್ಷ ಯಾರೂ ವಿರೋಧಿಸಲಿಲ್ಲ. ಆದರೆ
ಬಿಜೆಪಿಯನ್ನು ಟೀಕಿಸುವುದಕ್ಕೆ ಯಾವ ಅಸ್ತ್ರವೂ ಸಿಗದಿದ್ದಾಗ, ಈ ರೀತಿ ಗೊಂದಲ ಸೃಷ್ಟಿಸುತ್ತಿದ್ದಾರೆ.

***

ಕಾಂಗ್ರೆಸ್ ನವರು ಮಾಡುತ್ತಿರುವ ಅರ್ಥವಿಲ್ಲದ ಹೋರಾಟವನ್ನು ನೋಡಿದಾಗ, ಜೆಎನ್‌ಯು ಮಾದರಿಯಲ್ಲಿ ದೇಶವನ್ನು ಒಡೆಯಬೇಕು
ಎನ್ನುವ ಹುನ್ನಾರ ಕಾಣುತ್ತಿದೆ. ರೋಹಿತ್ ಚಕ್ರತೀರ್ಥ ಅವರನ್ನು ಸಮಿತಿಗೆ ನೇಮಿಸಿ ಒಂದು ವರ್ಷ ಯಾರೂ ವಿರೋಧಿಸಲಿಲ್ಲ. ಆದರೆ
ಬಿಜೆಪಿಯನ್ನು ಟೀಕಿಸುವುದಕ್ಕೆ ಯಾವ ಅಸ್ತ್ರವೂ ಸಿಗದಿದ್ದಾಗ, ಈ ರೀತಿ ಗೊಂದಲ ಸೃಷ್ಟಿಸುತ್ತಿದ್ದಾರೆ.

***

ಭಾರತೀಯ ಮಾದರಿ ಶುರುಮಾಡಿದ್ದು ಬಿಜೆಪಿ
ಕಾಂಗ್ರೆಸ್‌ನವರಿಗೆ ವಿಷಯ ಸಿಗದಿದ್ದಾರೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡುತ್ತಾರೆ. ಮಹಾತ್ಮ ಗಾಂಧಿ ಹತ್ಯೆಗೂ, ಆರ್‌ಎಸ್‌ಎಸ್
ಗೂ ಸಂಬಂಧವಿಲ್ಲವೆಂದು ಸುಪ್ರೀಂ ಕೋರ್ಟ್ ಈಗಾಗಲೇ ಸ್ಪಷ್ಟಪಡಿಸಿದ್ದರೂ, ಈಗಲೂ ಅದನ್ನೇ ಮಾತನಾಡುತ್ತಾರೆ. ಅವರಿಗೆ ದೇಶವನ್ನು ಯಾವ ರೀತಿ ಅಭಿವೃದ್ಧಿಪಡಿಸಬೇಕು ಎನ್ನುವ ಸ್ಪಷ್ಟ ಕಲ್ಪನೆಯಿಲ್ಲ. ಕೆಲ ದಿನ ರಷ್ಯಾ ಮಾದರಿ, ಕೆಲ ದಿನ ಅಮೆರಿಕ ಮಾದರಿ ಎಂದು ತಳ್ಳಿದರು. ಭಾರತೀಯ ಮಾದರಿಯಲ್ಲಿ ದೇಶ ಕಟ್ಟಬೇಕು ಎಂದು ಕಾಂಗ್ರೆಸ್ ಯೋಚಿಸಲೇ ಇಲ್ಲ. ಯಾವಾಗ ಭಾರತೀಯ ಮಾದರಿಯಲ್ಲಿ ದೇಶವನ್ನು ಅಭಿವೃದ್ಧಿಯತ್ತ ಬಿಜೆಪಿ ತಗೆದುಕೊಂಡು ಹೋಗುತ್ತಿರುವುದನ್ನು ಜನ ಒಪ್ಪುವುದಕ್ಕೆ ಶುರು ಮಾಡಿದರೋ,
ಅದು ಕಾಂಗ್ರೆಸ್‌ಗೆ ಶಾಕ್ ಆಗಿದೆ. ಆದ್ದರಿಂದ ಈ ರೀತಿ ಎಲ್ಲದಕ್ಕೂ ಆರ್‌ಎಸ್‌ಎಸ್ ಹೆಸರನ್ನು ಮುನ್ನಲೆಗೆ ತರುತ್ತಾರೆ.

***

ಕಾಂಗ್ರೆಸ್ ವೈಚಾರಿಕ ವಿಷಯಗಳ ದ್ರಾರಿದ್ಯಕ್ಕೆ ಕಾಂಗ್ರೆಸ್ ಹೋಗಿದೆ. ಕಾಂಗ್ರೆಸ್‌ನವರ ಫ್ಲಾಗ್ ಸಮಿತಿ ಕೇಸರಿ ಧ್ವಜವನ್ನು ಧ್ವನವನ್ನಾಗಿ
ಒಪ್ಪಿಕೊಳ್ಳಬೇಕು ಎಂದು ಹೇಳಿದ್ದು ಅವರಿಗೆ ಗೊತ್ತಿಲ್ಲ. ನೆಹರು, ಪಟೇಲ್ ಅವರು ಏನು ಹೇಳಿದ್ದರು ಎಂದು ಅವರಿಗೆ ತಿಳಿದಿಲ್ಲ.
– ಬಿ.ಸಿ. ನಾಗೇಶ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ

***
ವೋಟ್ ಬ್ಯಾಂಕ್‌ಗಾಗಿ ಏನು ಬೇಕಾದರೂ ಮಾಡುವ ಮನಃ ಸ್ಥಿತಿ ಕಾಂಗ್ರೆಸ್‌ನವರದ್ದು

ಪಠ್ಯಪುಸ್ತಕವನ್ನು ರಾಜಕೀಯಗೊಳಿಸಿದ್ದು ಕಾಂಗ್ರೆಸ್, ಗೊಂದಲಕ್ಕೆ ಕಾರಣವೂ ಅವರೇ

ಪಠ್ಯದ ವಿಷಯದಲ್ಲಿ ಪ್ರತಿಷ್ಠೆಯಿಲ್ಲ. ಮಕ್ಕಳಿಗೆ ಗೊಂದಲ ಮೂಡಿಸುವುದು ಬೇಕಿಲ್ಲ

ಕಾಂಗ್ರೆಸ್ ಮತಕ್ಕಾಗಿ ಸಂವಿಧಾನ ಹಾಗೂ ಕಾನೂನನ್ನು ಉಲ್ಲಂಘಿಸಲು ಸಿದ್ಧವಾಗಿದೆ