ದೇಶದಲ್ಲಿ ಪ್ರತಿ ವರ್ಷ 2500ಕ್ಕೂ ಹೆಚ್ಚು ಮಂದಿ ಬಲಿ
ರಾಜ್ಯದಲ್ಲಿ ವಾರ್ಷಿಕ ಸರಾಸರಿ ೮೦ಕ್ಕೂ ಹೆಚ್ಚು ಮಂದಿ ಸಾವು
ಬೆಂಗಳೂರು: ರಾಜ್ಯದಲ್ಲಿ ಮಳೆಗಾಲ ಆರಂಭವಾಗಿದ್ದು, ಗುಡುಗು-ಮಿಂಚು, ಗಾಳಿಯೊಂದಿಗೆ ಮಳೆ ಎದುರಿಸಲು ಜನ ಸಜ್ಜಾಗು ತ್ತಿದ್ದಾರೆ. ಮಳೆಯಿಂದ ಆಗುವ ಪ್ರವಾಹದಿಂದ ಕೋಟ್ಯಂತರ ರು. ಬೆಲೆ ಬಾಳುವ ಆಸ್ತಿ-ಪಾಸ್ತಿ ನಾಶವಾಗುತ್ತದೆ. ಆದರೆ, ಪ್ರತಿ ವರ್ಷ ರಾಜ್ಯದಲ್ಲಿ ಸಿಡಿಲಿನ ಆಘಾತಕ್ಕೆ ಸಿಲುಕಿ ಸರಾಸರಿ 80 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಹೌದು, ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಮಾಹಿತಿ ಲಭ್ಯ ವಾಗಿದೆ. ದೇಶಾದ್ಯಂತ ಸರಾಸರಿ ವರ್ಷಕ್ಕೆ 2500 ಮಂದಿ ಸಿಡಿಲಿಗೆ ಬಲಿಯಾಗುತ್ತಿದ್ದಾರೆ. 1967ರಿಂದ 2012ರವರೆಗೆ ದೇಶದಲ್ಲಿ ನೈಸರ್ಗಿಕ ವಿಕೋಪಗಳಿಂದ ಸಂಭವಿಸಿದ ಸಾವು ಗಳಲ್ಲಿ ಸಿಡಿಲಿನಿಂದಲೇ ಶೇ.39ರಷ್ಟು ಅನಾಹುತ ಸಂಭವಿಸಿದೆ. 2013ರಲ್ಲೇ ದೇಶದಲ್ಲಿ ಬರೋಬ್ಬರಿ 2850 ಮಂದಿ ಸಿಡಿಲು ಬಡಿದು ಹಾಗೂ 2014ರಲ್ಲಿ ಪ್ರಕೃತಿ ವಿಕೋಪದಿಂದ 2600 ಪ್ರಾಣ ಕಳೆದು ಕೊಂಡಿದ್ದಾರೆ.
2011-12ರಿಂದ 2021-22ವರೆಗೆ ಕರ್ನಾಟಕ ದಲ್ಲಿ ಸಿಡಿಲು ಬಡಿದು 812 ಮಂದಿ ಮೃತ ಪಟ್ಟಿದ್ದಾರೆ. ಸರಾಸರಿ ಲೆಕ್ಕ ಹಾಕಿದರೆ ಇದು ವಾರ್ಷಿಕ ೮೦ಕ್ಕಿಂತ ಹೆಚ್ಚು.ಇನ್ನು ಸಿಡಿಲಿಗೆ ಬಲಿಯಾಗಿರುವ ಜಾನುವಾರಿಗಳಿಗೆ ಲೆಕ್ಕವೇ ಇಲ್ಲ. ಸಾವಿರಾರು ಪ್ರಾಣಿಗಳು ಜೀವ ಕಳೆದುಕೊಂಡಿವೆ. ಅದರಲ್ಲೂ ದಕ್ಷಿಣ ಕರ್ನಾಟಕಗಿಂತ ಉತ್ತರ ಕರ್ನಾಟಕದ ಜಿಲ್ಲೆ ಗಳಲ್ಲೇ ಸಿಡಿಲಿನಿಂದ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ ಎಂದು ಈ ವರದಿ ಹೇಳಿದೆ.
ಇತ್ತೀಚಿನ ವರ್ಷಗಳಲ್ಲಿ ಮಳೆಗಿಂತ ಚಂಡಮಾರುತ ಮತ್ತು ಸಿಡಿಲಿನಿಂದಲೇ ಪ್ರಕೃತಿ ವಿಕೋಪ, ಅನಾಹುತ ಸಂಭವಿಸುತ್ತಿವೆ. ದೇಶದ ಈಶಾನ್ಯ ಹಾಗೂ ಪೂರ್ವ ಭಾಗದ ಪ್ರದೇಶಗಳಲ್ಲಿ ಸಿಡಿಲಿನಿಂದ ಹೆಚ್ಚು ಅನಾಹುತ ಸಂಭವಿಸುತ್ತಿವೆ. ಜಾಗತಿಕ ತಾಪಮಾನ ಹಾಗೂ ಹವಾಮಾನ ವೈಪರಿತ್ಯದಿಂದ ಗುಡುಗುಗಳ ತೀವ್ರತೆ ಮತ್ತು ಆವರ್ತನ ಹೆಚ್ಚಲಿದ್ದು, ಇದರಿಂದ ಇನ್ನಷ್ಟು ಸಾವು ನೋವು ಸಂಭವಿಸುವ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.
ಸಾರಿಗೆ, ವಿದ್ಯುತ್, ಸಂವಹನ ಸೇರಿ ನಾನಾ ಕಾರಣಗಳಿಂಗ ಕೃಷಿ ಹಾಗೂ ವಾಯುಯಾನ ಕ್ಷೇತ್ರಗಳ ಮೇಲೆ ಹೆಚ್ಚು ಪರಿಣಾಮ ಉಂಟಾಗುತ್ತಿದೆ. ಜಮೀನುಗಳಲ್ಲಿ ಕೃಷಿ ಮಾಡುತ್ತಿರುವವರೇ ಸಿಡಿಲಿಗೆ ಬಲಿಯಾಗುತ್ತಿರುವುದು ಹೆಚ್ಚು ಎಂಬದು ಅಧ್ಯಯನ ಗಳಿಂದ ಬಹಿರಂಗವಾಗಿದೆ. ದೇಶದಲ್ಲಿ ಸಿಡಿಲು ಬಡಿದು ಮೃತಪಟ್ಟವರಲ್ಲಿ ಶೇ. 96 ಮಂದಿ ಹೊಲಗಳಲ್ಲಿ ಕೆಲಸ ಮಾಡುತ್ತಿದ್ದ ವರು ಎಂದು ತಿಳಿದುಬಂದಿದೆ.
ಜಿಲ್ಲಾವಾರು ಸಾವಿನ ವಿವರ
ಕಳೆದ ೧೦ ವರ್ಷಗಳಲ್ಲಿ ಸಿಡಿಲು ಬಡಿದು ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಅಂದರೆ ೮೫ ಮಂದಿ ಸಾವನ್ನಪ್ಪಿದ್ದಾರೆ. ಉಳಿದಂತೆ
ವಿಜಯಪುರ- ೬೯, ಗದಗ- ೫೬, ಚಿತ್ರದುರ್ಗ – ೪೮, ತುಮಕೂರು- ೪೮, ಬೀದರ್- ೪೪, ಕೊಪ್ಪಳ- ೪೩, ಹಾವೇರಿ- ೪೩, ಯಾದಗಿರಿ-
೩೭, ಧಾರವಾಡ- ೩೭, ಬಳ್ಳಾರಿ- ೩೫, ಮೈಸೂರು- ೩೨, ಬಾಗಲಕೋಟೆ- ೩೧, ರಾಯಚೂರು- ೨೯, ಶಿವಮೊಗ್ಗ- ೨೭, ಚಾಮರಾಜ ನಗರ- ೨೭, ದಾವಣಗೆರೆ- ೨೪, ಚಿಕ್ಕಮಗಳೂರು- ೧೬, ಉಡುಪಿ- ೧೪, ಉತ್ತರ ಕನ್ನಡ- ೧೨, ದಕ್ಷಿಣ ಕನ್ನಡ- ೧೧, ಮಂಡ್ಯ- ೧೧, ವಿಜಯನಗರ- ೧೦, ಕಲಬುರಗಿ- ೭, ಚಿಕ್ಕಬಳ್ಳಾಪುರ- ೬, ಹಾಸನ- ೬, ಬೆಂಗಳೂರು- ೨, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರಗಳಲ್ಲಿ ತಲಾ ಒಬ್ಬರು ಪ್ರಾಣ ಕಳೆದು ಕೊಂಡಿದ್ದಾರೆ. ಕೊಡಗು ಹಾಗೂ ರಾಮನಗರದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ.
ಗುಡುಗು ಬರುವಾಗ ಮುನ್ನೆಚ್ಚರಿಕಾ ಕ್ರಮಗಳು
? ವಿದ್ಯುತ್ ಉಪಕರಣ, ಮೊಬೈಲ್ ಬಳಸಬಾರದು
? ಹಗ್ಗ, ಕೊಳಾಯಿ, ಪೈಪ್‌ಗಳಿಂದ ದೂರವಿರಬೇಕು
? ಕೈಗಳನ್ನು ತೊಳೆಯಬಾರದು, ಸ್ನಾನ
ಮಾಡಬಾರದು, ಪಾತ್ರೆ ತೊಳೆಯಬಾರದು
? ಗುಡುಗು- ಮಿಂಚು ಸಂದರ್ಭದಲ್ಲಿ ಹೊರಗೆ
ಹೋಗಬಾರದು, ಪ್ರವಾಸ ಮಾಡಬಾರದು
? ಲೋಹ ವಸ್ತುಗಳು, ಕಿಟಕಿ ಮತ್ತು
ಬಾಗಿಲುಗಳಿಂದ ದೂರವಿರಬೇಕು
? ಕಾಂಕ್ರಿಟ್ ಮಹಡಿಗಳ ಮೇಲೆ ಮಲಗಬಾರದು
? ಗಟ್ಟಿಮುಟ್ಟಾದ ಕಟ್ಟಡಗಳಲ್ಲಿ ಆಶ್ರಯ ಪಡೆಯಬೇಕು
? ತಕ್ಷಣ ಸುರಕ್ಷಿತ ಸ್ಥಳಗಳಿಗೆ ತೆರಳಿ ರಕ್ಷಣೆ ಪಡೆಯಬೇಕು
? ಯಾರಿಗಾದರೂ ಸಿಡಿಲು ಬಡಿದರೆ ತಕ್ಷಣ ವೈದ್ಯಕೀಯ ಸಹಾಯಕ್ಕೆ ಕರೆ ಮಾಡಬೇಕು
? ಮರದ ಕೆಳಗೆ ನಿಂತುಕೊಳ್ಳಬಾರದು
***
ದೇಶದಲ್ಲಿ ಪ್ರಕೃತಿ ವಿಕೋಪಗಳಿಂದ ಸಂಭವಿಸುವ ಸಾವಿನ ಸಂಖ್ಯೆ ನೋಡಿದಾಗ ಸಿಡಿಲಿನಿಂದ ಹೆಚ್ಚು ಜನ ಸಾವನ್ನಪ್ಪುತ್ತಿದ್ದಾರೆ. ಇದು ಯಾವಾಗ ಮತ್ತು ಹೇಗೆ ಸಂಭವಿಸುತ್ತದೆ ಎಂಬುದರ ಬಗ್ಗೆ ಜನರಿಗೆ ಅರಿವು ಮೂಡಿಸುವ ಕೆಲಸವನ್ನು ಸರಕಾರ ಮಾಡ ಬೇಕಿದೆ. ಮಾಹಿತಿ ತಂತ್ರಜ್ಞಾನದಲ್ಲಿ ಎಷ್ಟೇ ಅಭಿವೃದಿ ಹೊಂದಿದ್ದರೂ ಸಿಡಿಲು ಬಗ್ಗೆ ಕಟ್ಟೆಕಡೆಯ ವ್ಯಕ್ತಿಗೆ ಮಾಹಿತಿ ಒದಗಿಸಲು ಸರಕಾರಗಳು ವಿಫಲವಾಗಿವೆ.
-ಡಾ.ಶ್ರೀನಿವಾಸರೆಡ್ಡಿ ಹವಾಮಾನ ತಜ್ಞ