Thursday, 12th December 2024

ಪೊಲೀಸ್ ಸಿಬ್ಬಂದಿಯೂ ಕ್ವಾರಂಟೈನ್‌ನಲ್ಲಿ

ವಿಶ್ವವಾಣಿ ಸುದ್ದಿಮನೆ
ಬೆಂಗಳೂರು:
ಪಾದರಾಯನಪುರ‌ ಗಲಭೆ ಪ್ರಕರಣ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರಿಗೆ ಕರೋನಾ ಭೀತಿ ಎದುರಾಗಿದ್ದು, ಆರೋಪಿಗಳ ಪತ್ತೆ ಕಾರ್ಯದಲ್ಲಿ ತೊಡಗಿದ್ದ 186 ಪೊಲೀಸ್ ಸಿಬ್ಬಂದಿಯನ್ನು ಹೋಂ ಕ್ವಾರಂಟೈನ್​​ಗೆ ಒಳಪಡಿಸಲಾಗಿದೆ.
ಪಾದರಾಯನಪುರ‌ ಪುಂಡರನ್ನು ಬಂಧಿಸಿದ್ದ ಪೊಲೀಸ್ ಸಿಬ್ಬಂದಿ ಮೈಸೂರು ರಸ್ತೆಯ ಸಿಎಆರ್ ಮೈದಾನದಲ್ಲಿ ಪಶ್ಚಿಮ, ಕೇಂದ್ರ, ಉತ್ತರ ವಿಭಾಗ ಹಾಗೂ ಸಿಸಿಬಿ ಸಿಬ್ಬಂದಿ ಸೇರಿ ಒಟ್ಟು 186 ಮಂದಿ ಪೊಲೀಸರನ್ನು ಕೋವಿಡ್-19 ಪರೀಕ್ಷೆಗೆ ಒಳಪಡಿಸಲಾಗಿತ್ತು.
150ಕ್ಕೂ ಹೆಚ್ಚು ಸಿಬ್ಬಂದಿಯ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗಿದ್ದು, ಎಲ್ಲ 186 ಪೊಲೀಸರನ್ನು ಹೋಂ ಕ್ವಾರಂಟೈನ್​ಗೆ ವರ್ಗಾವಣೆ ಮಾಡಲಾಗಿದೆ. ಅವಶ್ಯಕತೆ ಇದ್ದಲ್ಲಿ ಕೆಲ ಪೊಲೀಸ್ ಸಿಬ್ಬಂದಿಯ ಕುಟುಂಬಸ್ಥರಿಗೂ ಕೋವಿಡ್-19 ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ.
ಇನ್ನು ಸರಕಾರ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಪೊಲೀಸ್ ಸಿಬ್ಬಂದಿ ಬೇಸರ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಪಾದರಾಯನಪುರ‌ ಕಿಡಿಗೇಡಿಗಳ ಪತ್ತೆ ಕಾರ್ಯದ ವೇಳೆ ನಿಯೋಜನೆಗೊಂಡಿದ್ದ ಸಿಬ್ಬಂದಿಗೆ ಕೋವಿಡ್-19 ವೈದ್ಯರಿಂದ ಯಾವುದೇ ಅರಿವು ಮೂಡಿಸಿಲ್ಲ. ಬರೀ ಸ್ಯಾನಿಟೈಸರ್, ಮಾಸ್ಕ್, ಗ್ಲೌಸ್ ಕೊಟ್ಟು ತಮ್ಮನ್ನು ಫೀಲ್ಡ್​ಗೆ ಇಳಿಸಿದ್ದರು ಎಂದು ತಮ್ಮ ಆಪ್ತರ ಬಳಿ ಬೇಸರ ತೋಡಿಕೊಂಡಿದ್ದಾರೆ.
ಅಲ್ಲದೇ, 83 ಆರೋಪಿಗಳನ್ನು ಚಾಮರಾಜಪೇಟೆಯ ಸಿಸಿಬಿ ಕಚೇರಿಯಲ್ಲಿ 2 ಗಂಟೆಗಳ ಕಾಲ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದರು. ಬಳಿಕ ಆಡುಗೋಡಿಯ ಮಂಗಳ ಕಲ್ಯಾಣ ಮಂಟಪದಲ್ಲಿ ಆರೋಪಿಗಳನ್ನು ಇರಿಸಲಾಗಿತ್ತು. ಹೀಗಾಗಿ ಹಗಲು-ರಾತ್ರಿ ದುಡಿದ ನಮ್ಮ ಹಾಗೂ ನಮ್ಮ ಕುಟುಂಬಸ್ಥರು ಪರಿಸ್ಥಿತಿ ಏನು ಎಂದು ಪೊಲೀಸ್ ಸಿಬ್ಬಂದಿ ಅಸಮಾಧಾನ ಹೊರ ಹಾಕಿದ್ದಾರೆ.