Thursday, 12th December 2024

ಸಾರ್ವಜನಿಕ ಆಸ್ಪತ್ರೆ ಅವ್ಯವಸ್ಥೆಗೆ ಶಾಸಕ ಕೆಂಡಾಮಂಡಲ

ಐಎಚ್‌ಒಗೆ ತೀವ್ರ ತರಾಟೆ, ಕ್ರಮಕ್ಕೆ ಸೂಚನೆ

ದೇವದುರ್ಗ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯ ಸಿಬ್ಬಂದಿ ಸಮರ್ಪಕ ಸಮಯಕ್ಕೆ ಹಾಜರಾಗದೆ ಇರುವುದು, ಉಚಿತ ನೀಡುವ ಔಷಧಿಗೂ ರೋಗಿಗಳಿಂದ ಹಣ ಕೀಳುವುದು ಮತ್ತು ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡದ ಕುರಿತು ದೂರು ಕೇಳಿ ಬಂದ ಹಿನ್ನೆಲೆಯಲ್ಲಿ ಶಾಸಕ ಶಿವನಗೌಡ ನಾಯಕ ಟಿಎಚ್‌ಒ ಡಾ.ಬನದೇಶ್ ಅವರಿಗೆ ತರಾಟೆಗೆ ತೆಗೆದುಕೊಂಡರು.

ಪಟ್ಟಣದ ಹೊರ ವಲಯದಲ್ಲಿರುವ ಬಾಬುಜಗಜೀವನ್‌ರಾಮ್‌ಭವನದಲ್ಲಿ ನಡೆದ ವಿಶೇಷ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಕುರಿತು ವೈದ್ಯಾಧಿಕಾರಿಗೆ ತರಾಟೆಗೆ ತೆಗೆದುಕೊಂಡು ಕೂಡಲೇ ವೈದ್ಯರು ಸರಿಯಾದ ಸಮಯದಲ್ಲಿ ಬಡರೋಗಿ ಗಳಿಗೆ ಚಿಕಿತ್ಸೆ ನೀಡಬೇಕು ಮುತುವರ್ಜಿಯಿಂದ ಬಡರೋಗಿಗಳನ್ನು ನೋಡಿ ಕೊಳ್ಳಬೇಕು.

ಮುಂದಿನ ದಿನಗಳಲ್ಲಿ ಅವ್ಯವಸ್ಥೆಯ ಕುರಿತು ಮಾಧ್ಯಮಗಳಲ್ಲಿ ವರದಿ ಬಂದರೆ ಕಠಿಣ ಕ್ರಮಕ್ಕೆ ಉನ್ನತ ಅಧಿಕಾರಿಗಳಿಗೆ ಪತ್ರ ಬರೆಯುವುದಾಗಿ ಎಚ್ಚರಿಸಿದರು. ಜಾಲಹಳ್ಳಿ, ಅರಕೆರಾ, ಗಬೂರು, ಮಸರಕಲ್, ಕೊಪ್ಪರ ಪ್ರಾಥಮಿಕ ಆಸ್ಪತ್ರೆಗಳಲ್ಲಿ ಹೆರಿಗೆ ರಾತ್ರಿ ಸಮಯದಲ್ಲಿ ಅವಘಡ ಸಂಭವಿಸಿ ಬಂದವರಿಗೆ ತಕ್ಷಣ ಚಿಕಿತ್ಸೆ ನೀಡಬೇಕು.

ಫಲಿತಾಂಶದಲ್ಲಿ ತಾಲೂಕು ಸುಧಾರಿಸಿದ್ದು, ಪ್ರಾಥಮಿಕ, ಪ್ರೌಡ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಶೀಘ್ರ ಸರ್ಕಾರಕ್ಕೆ ಪತ್ರ ಬರೆದು ಹುದ್ದೆಗಳನ್ನ ತುಂಬಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪ್ರಗತಿಯಲ್ಲಿ ಹೊಸ ಶಾಲಾ ಕಟ್ಟಡ ಕಾಮಗಾರಿ ಯಲ್ಲಿ ಗುಣಮಟ್ಟ ಕಾಪಾಡಿಕೊಂಡು, ಬೇಗ ಇಲಾಖೆ ಹಸ್ತಾಂತರ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಡಿ.ದೇವರಾಜ್ ಅರಸ್ ಹಿಂದುಳಿದ ವರ್ಗದ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮೂರು ವರ್ಷ ದಿಂದ ವಿದ್ಯಾರ್ಥಿ ವೇತನ ಬಂದಿಲ್ಲ. ಕೂಡಲೇ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲು ಕ್ರಮ ಕೈಗೊಳ್ಳಬೇಕು.

ನಿರ್ಲಕ್ಷ್ಯ ವಹಿಸಿದರೆ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದು ಎಚ್ಚರಿಸಿದರು.  ತೋಟ ಗಾರಿಕೆ ಇಲಾಖೆ ಕಳೆದ ಹಲವು ವರ್ಷಗಳಿಂದ ತೋಟಗಾರಿಕೆ ಬೆಳೆ ಬೆಳೆಯಲು ರೈತರಿಗೆ ಜಾಗೃತಿ ಮೂಡಸಬೇಕು.

ಇಲಾಖೆ ಹಲವು ಸಬ್ಸಿಡಿ ನೀಡುವ ಮೂಲಕ ರೈತರಿಗೆ ಉತ್ತೇಜನ ನೀಡಬೇಕು . ತಾಲೂಕಿನಾದ್ಯಂತ ಕೂಡಲೇ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ತೋಟಗಾರಿಕೆ ಬೆಳೆ ಬೆಳೆಯಲು ಅನ್ನದಾತರಿಗೆ ಪೋಸತಾಹಿಸಬೇಕು ಎಂದು ತೋಟಗಾರಿಕೆ ತಾಲೂಕು ಅಧಿಕಾರಿಗೆ ಸೂಚಿಸಿದರು. ಈರುಳ್ಳಿ ಶೆಡ್ ಹಾಕಿಕೊಂಡ ರೈತರಿಗೆ ಹಣ ನೀಡಿಲ್ಲ ಎಂಬ ದೂರಿದೆ.

ಶೀಘ್ರ ಶೆಡ್ ಹಾಕಿಕೊಂಡ ಫಲಾನುಭವಿಗಳಿಗೆ ಹಣ ಬಿಡಗಡೆ ಮಾಡಲು ಕ್ರಮ ವಹಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿ ದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಾಲೂಕಿನಾದ್ಯಂತ ಅಂಗನವಾಡಿ ಕೇಂದ್ರಗಳು ಬಾಡಿಗೆ ಮುಕ್ತವಾಗಿ ನಡೆಯಲು ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರಲ್ಲದೆ , ಎಸ್‌ಟಿ ವಸತಿ ನಿಲಯ ವಿದ್ಯಾರ್ಥಿಗಳು ರಾತ್ರಿ ಹೊತ್ತಲ್ಲಿ ಹೊರ ಹೋಗುತ್ತಾರೆ ಎಂಬ ದೂರು ಕೇಳಿ ಬಂದಿದ್ದು, ವಿದ್ಯಾರ್ಥಿಗಳು ಹೊರ ಹೋಗದಂತೆ ಹಾಗೂ ಅಭ್ಯಾಸಕ್ಕೆ ತೊಂದರೆ ಆಗದಂತೆ ಸಂಬಂಧಿದವರು ನೋಡಿಕೊಳ್ಳಬೇಕು ಎಂದು ತಿಳಿಸಿದರು .

ಈ ಸಂದರ್ಭ ಜಿಪಂ ಯೋಜನಾ ಅಧಿಕಾರಿ ಮಾಡೊಳಪ್ಪ, ಇಒ ಪಂಪಾಪತಿ ಹಿರೇಮಠ, ತಹಸೀಲ್ದಾ‌ರ ಶ್ರೀನಿವಾಸ್ ಚಾಪೆಲ್ , ಬಸಣ್ಣ ನಾಯಕ, ಮಸ್ತಾನ್ ನಾಯಕ, ಬಾಬು ದೊಂಡಂಬಳಿ, ಶಶಿಕಲಾ ಜಾಲಹಳ್ಳಿ, ಶರಣಬಸವ ಸೇರಿದಂತೆ ಇತತರಿದ್ದರು.